Reading Time: 2 minutes

ಇದನ್ನು 17 ವರ್ಷ ಅನುಭವ ಇರುವ ನುರಿತ ತಜ್ಞರಾದ ಅಶ್ವಿನಿ. ಎಸ್. ಕಾನಡೆಯವರು ವಿಮರ್ಶಿಸಿದ್ದಾರೆ. ಇವರು ರಿಜಿಸ್ಟರ್ಡ್ ಡಯಟೀಶಿಯನ್ ಮತ್ತು ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿದ್ದಾರೆ.

ನೀವು ಯೋಚಿಸುವಂತೆ ಡಯಾಬಿಟಿಸಿಗೆ ಸಂಬಂಧಿಸಿದ ತೊಂದರೆಗಳನ್ನು ತಡೆಯುವುದು ಕಷ್ಟವೇನಲ್ಲ, ಅದರಲ್ಲೂ ನೀವು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಂಡು ನಿಮ್ಮ ದೇಹದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಇದು ಇನ್ನೂ ಸುಲಭ. ಈ ಪರೀಕ್ಷೆಗಳು ಡಯಾಬಿಟಿಸ್‌‌ ಜೊತೆಗಿನ ತೊಂದರೆಗಳನ್ನು ತಡೆಯುವುದಷ್ಟೇ ಅಲ್ಲ, ಡಯಾಬಿಟಿಸ್‌ ಇದ್ದರೂ ಸಹ ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಂಡು ಹೋಗಲು ಅವು ಸಹಾಯ ಮಾಡುತ್ತವೆ.

BLK ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ಸಲಹೆಗಾರ ಡಾ. ಜೀವನ್‌ಜ್ಯೋತ್ ಬಹಿಯಾರವರು ಕೆಲವು ಪ್ರಮುಖ ವೈದ್ಯಕೀಯ ತಪಾಸಣೆಗಳ ಕುರಿತ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಡಯಾಬಿಟಿಸ್ ಇರುವ ಪ್ರತಿಯೊಬ್ಬರೂ ಈ ತಪಾಸಣೆಗಳನ್ನು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳುವುದು ಒಳಿತು.

  1. ಪಾದಗಳ ಪರೀಕ್ಷೆ

ಪಾದದ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಡಯಾಬಿಟಿಸ್‌ಗೆ ಸಂಬಂಧಿಸಿದ ಕೆಲವು ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಅಂತಹ ಸಾಮಾನ್ಯ ತೊಂದರೆಗಳೆಂದರೆ ಕಾಲಿನ ಒಂದು ಭಾಗವನ್ನೇ ಕತ್ತರಿಸಿ ತೆಗೆಯುವುದು, ಪಾದದ ಹುಣ್ಣು ಇತ್ಯಾದಿ. ಪಾದದ ಚರ್ಮ ಕಿತ್ತು ಬಂದಿದೆಯೇ, ಹುಣ್ಣಾಗಿದೆಯೇ, ಚರ್ಮ ಬಿಸಿಯಾಗುವುದು ಅಥವಾ ತಣ್ಣಗಾಗುವುದು ಮುಂತಾದವುಗಳ ಬಗ್ಗೆ ತಿಳಿದುಕೊಳ್ಳಲು ಪ್ರತಿ ಸಲ ಡಾಕ್ಟರನ್ನು ಭೇಟಿಯಾದಾಗ ಪಾದದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಜೊತೆಗೆ ಡಯಾಬಿಟಿಸ್ ಇರುವವರು ಪಾದಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಬಗ್ಗೆ ಮತ್ತು ಗಾಯಗಳಾಗದಂತೆ ನೋಡಿಕೊಳ್ಳುವುದರ ಬಗ್ಗೆ ತಿಳಿದುಕೊಂಡಿರಬೇಕು.

  1. ಹಿಮೋಗ್ಲೋಬಿನ್ A1C ಪರೀಕ್ಷೆಗಳು:

HbA1c ಪರೀಕ್ಷೆ ಅಥವಾ ಗ್ಲೈಕೋಸೈಲೇಟೆಡ್ ಹಿಮೋಗ್ಲೋಬಿನ್ ಪರೀಕ್ಷೆಯನ್ನು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಪತ್ತೆ ಹಚ್ಚಲು ಮತ್ತು ಅದನ್ನು ಸರಿಯಾಗಿ ನಿಭಾಯಿಸಲು ಮಾಡಲಾಗುತ್ತದೆ. ಇದು 12 ವಾರಗಳಲ್ಲಿ ಪರೀಕ್ಷಿಸಿದ  ಸರಾಸರಿ ರಕ್ತದ ಸಕ್ಕರೆಯನ್ನು ತೋರಿಸುತ್ತದೆ. ಇದನ್ನು ಡಯಾಬಿಟಿಸ್ ಇರುವವರು ಪ್ರತಿ ಮೂರು ತಿಂಗಳಿಗೊಮ್ಮೆ ಇಲ್ಲದವರು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳಬೇಕು.

  1. ಲಿಪಿಡ್ ಪ್ರೊಫೈಲ್ ಪರೀಕ್ಷೆ:

ಲಿಪಿಡ್ ಪ್ರೊಫೈಲನ್ನು ಡಯಾಬಿಟಿಸ್ ಇರುವವರು 6 ತಿಂಗಳಿಗೊಮ್ಮೆ ಮತ್ತು ಆರೋಗ್ಯದಿಂದ ಇರುವವರು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳಬೇಕು. ಹೆಚ್ಚಿನ ಕೊಲೆಸ್ಟರಾಲ್ ಇರುವವರಿಗೆ ಹೃದಯದ ಕಾಯಿಲೆ ಮತ್ತು ಸ್ಟ್ರೋಕ್ ಬರುವ ಸಾಧ್ಯತೆ ಇರುವುದರಿಂದ ಕೊಲೆಸ್ಟರಾಲ್ ಪ್ರೊಫೈಲ್ ಅತ್ಯವಶ್ಯ. ಮತ್ತು ಡಯಾಬಿಟಿಸಿನಿಂದ ಇದರ ಅಪಾಯ ಇನ್ನೂ ಹೆಚ್ಚಾಗುತ್ತದೆ. ನಿಮ್ಮ ಕೊಲೆಸ್ಟರಾಲ್ ಮಟ್ಟಗಳು ಮತ್ತು ಟ್ರೈಗ್ಲಿಸರೈಡ್‌ಗಳನ್ನು(ಒಂದು ರೀತಿಯ ರಕ್ತದಲ್ಲಿನ ಕೊಬ್ಬು) ವರ್ಷಕ್ಕೆ ಒಂದು ಬಾರಿಯಾದರೂ ಪರೀಕ್ಷೆ ಮಾಡಿಸಿಕೊಳ್ಳಿ.

  1. ಕಿಡ್ನಿ ಪರೀಕ್ಷೆಗಳು:

ಕಿಡ್ನಿಗಳು ನಿಮ್ಮ ದೇಹದಿಂದ ಬೇಡವಾದ ಮತ್ತು ಹೆಚ್ಚುವರಿಯಾಗಿರುವ ನೀರನ್ನು ಹೊರಹಾಕುವ ಕೆಲಸವನ್ನು ಮಾಡುತ್ತವೆ. ರಕ್ತದ ಪರೀಕ್ಷೆಗಳ ಸಹಾಯದಿಂದ, ನಿಮ್ಮ ಕಿಡ್ನಿಗಳು ಬೇಡವಾದ ನೀರನ್ನು ಹೊರಹಾಕುವ ಕೆಲಸವನ್ನು ಸರಿಯಾಗಿ ಮಾಡುತ್ತಿವೆಯೋ ಇಲ್ಲವೋ ಎಂಬುದನ್ನು ನಿಮ್ಮ ಡಾಕ್ಟರ್ ತಿಳಿದುಕೊಳ್ಳುತ್ತಾರೆ. ಮೂತ್ರದ ಪರೀಕ್ಷೆಗಳಿಂದ ದೇಹದಲ್ಲಿ ಬೇಡವಾದ ವಸ್ತುಗಳು ಎಷ್ಟು ಬೇಗ ಹೊರಹೋಗುತ್ತಿವೆ ಮತ್ತು ಕಿಡ್ನಿಗಳಿಂದ ಅಸಹಜವಾಗಿ ಪ್ರೊಟೀನ್‌ಗಳು ಸೋರಿಹೋಗುತ್ತಿವೆಯೇ ಎಂಬುದು ತಿಳಿದು ಬರುತ್ತದೆ. ಆದ್ದರಿಂದ, ವರ್ಷಕ್ಕೊಮ್ಮೆ ಕಿಡ್ನಿ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

  1. ರಕ್ತದೊತ್ತಡದ ಮಟ್ಟಗಳು:

ಹೆಚ್ಚಿನ BP ಯಿಂದ ಹೃದಯದ ಕಾಯಿಲೆ ಮತ್ತು ಸ್ಟ್ರೋಕ್ ಬರುವ ಹೆಚ್ಚಿನ ಸಾಧ್ಯತೆ ಇದೆ. ಆರೋಗ್ಯಕರ ಜೀವನಶೈಲಿಯೊಂದಿಗೆ ಸಮತೋಲನ ಆಹಾರವನ್ನು ಸೇವಿಸುವುದರಿಂದ ನಿಮ್ಮ ರಕ್ತದೊತ್ತಡವನ್ನು ಸರಿಯಾದ ಪ್ರಮಾಣದಲ್ಲಿ ಇಟ್ಟುಕೊಳ್ಳಬಹುದು. ರಕ್ತದೊತ್ತಡದ ಪರೀಕ್ಷೆಗಳನ್ನು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಮಾಡಿಸಿಕೊಳ್ಳಲೇಬೇಕು. ಮತ್ತು ಹೃದಯ ರಕ್ತನಾಳಗಳ ಸಮಸ್ಯೆ ಇರುವವರು ಎರಡು ತಿಂಗಳಿಗೊಮ್ಮೆ ಮಾಡಿಸಿಕೊಳ್ಳಬೇಕು.

  1. ಹಿಗ್ಗಿದ ಕಣ್ಣುಗಳ ಪರೀಕ್ಷೆಗಳು:

ಹಿಗ್ಗಿದ ಕಣ್ಣುಗಳ ಪರೀಕ್ಷೆ ಅಥವಾ ಫಂಡಸ್ ಪರೀಕ್ಷೆಯನ್ನು ರೆಟಿನೋಪತಿಯ ಅಪಾಯವಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮಾಡಲಾಗುತ್ತದೆ. ವಯಸ್ಕರಲ್ಲಿ ಕುರುಡುತನ ಬರಲು ಡಯಾಬೆಟಿಕ್ ರೆಟಿನೋಪತಿ ಮೂಲ ಕಾರಣವಾಗಿದೆ. ಹಿಗ್ಗಿದ ಕಣ್ಣುಗಳ ಪರೀಕ್ಷೆ ಮಾಡಿಸಲು, ವರ್ಷಕ್ಕೊಮ್ಮೆ ಕಣ್ಣಿನ ತಜ್ಞರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು.

  1. ಹಲ್ಲಿನ ಪರೀಕ್ಷೆ:

ನಿಮ್ಮ ಹಲ್ಲುಗಳ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಡಯಾಬಿಟಿಸ್ ಇರುವವರು ಇನ್ನೂ ಹೆಚ್ಚು ಕಾಳಜಿ ವಹಿಸಬೇಕು. ನಿಮಗೆ ಗಂಭೀರವಾದ ಹಲ್ಲಿನ ಸಮಸ್ಯೆ ಏನಾದರೂ ಇದ್ದರೆ ಡಾಕ್ಟರನ್ನು ಭೇಟಿಯಾಗಿರಿ. ಉದಾಹರಣೆಗೆ ಜೆರೋಸ್ಟೊಮಿಯಾ – ಬಾಯಿಯಲ್ಲಿ ಉರಿಯುವಂತೆ ಆಗುವ ಸ್ಥಿತಿಗೆ ಬಳಸುವ ವೈದ್ಯಕೀಯ ಪದ; ಒಂದು ವೇಳೆ ಬೇಗನೆ ಗಾಯ ಮಾಯದಿದ್ದರೆ, ನಿಮಗೆ ಸೋಂಕು ತಗಲುವ ಹೆಚ್ಚಿನ ಸಾಧ್ಯತೆ ಇದೆ; ನಿಮ್ಮ ಪರೋಟಿಡ್ ಸಲೈವರಿ ಗ್ರಂಥಿಯು ಹಿಗ್ಗಿದ್ದರೆ; ನಿಮಗೆ ಪಿರಿಯಡೋಂಟೈಟಿಸ್ ಇದ್ದರೆ ವರ್ಷದಲ್ಲಿ ಎರಡು ಬಾರಿ ಹಲ್ಲಿನ ಪರೀಕ್ಷೆಗಳನ್ನು ಮಾಡಿಸಬೇಕು.

  1. ಎಲೆಕ್ಟ್ರೋಕಾರ್ಡಿಯೋಗ್ರಾಮ್ ಪರೀಕ್ಷೆ:

ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG or EKG) ನಿಮ್ಮ ಹೃದಯದ ಎಲೆಕ್ಟ್ರಿಕಲ್ ಮತ್ತು ಸ್ನಾಯುವಿನ ಕೆಲಸಗಳನ್ನು ಅಳೆಯುವ ಸಾಧನವಾಗಿದೆ. ನಿಮಗೆ ರಕ್ತದೊತ್ತಡ ಮತ್ತು ಡಯಾಬಿಟಿಸ್ ಇದ್ದರೆ ವರ್ಷಕ್ಕೊಮ್ಮೆ ECG ಪರೀಕ್ಷೆ ಮಾಡಿಸಿಕೊಳ್ಳಿ.

ಮೇಲೆ ತಿಳಿಸಿದ ಪರೀಕ್ಷೆಗಳಲ್ಲದೇ, ಡಯಾಬಿಟಿಸ್ ಇರುವವರು ಯೂರಿನ್ ಅಲ್ಬುಮಿನ್ ಕ್ರಿಯಾಟಿನಿನ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಇದನ್ನು ಮೂರು ತಿಂಗಳಿಗೊಮ್ಮೆ ಮಾಡಿಸಬೇಕು. ಇದು ಡಯಾಬಿಟಿಸ್ ಮೂತ್ರಪಿಂಡದ ಕಾಯಿಲೆಯನ್ನು ಪತ್ತೆ ಹಚ್ಚಲು ಬಳಸುವ ಮೊದಲ ಪರೀಕ್ಷೆಯಾಗಿದೆ. ಕೊನೆಯದಾಗಿ ಡಯಾಬಿಟಿಸ್ ಇರುವ ಹೆಂಗಸರು ವಾರ್ಷಿಕ ಪ್ಯಾಪ್ ಸ್ಮೀಯರ್, ಮ್ಯಾಮೊಗ್ರಫಿ ಮತ್ತು ಥೈರಾಯ್ಡ್ ಪ್ರೊಫೈಲ್ ಪರೀಕ್ಷೆಗಳನ್ನೂ ಸಹ ಮಾಡಿಸಿಕೊಳ್ಳಬೇಕು.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.