Avocado diet
Reading Time: 2 minutes

ಒಬ್ಬ ವ್ಯಕ್ತಿಗೆ ಟೈಪ್ 1, ಟೈಪ್ 2 ಇಲ್ಲವೇ ಜೆಸ್ಟೇಶನಲ್ ಡಯಾಬಿಟಿಸ್ ಯಾವುದೇ ಇರಲಿ, ಯಾವುದನ್ನು, ಎಷ್ಟು ಹಾಗೂ ಯಾವಾಗ ತಿನ್ನಬೇಕೆನ್ನುವ ಜಾಣ್ಮೆಯಿದ್ದರೆ, ಡಯಾಬಿಟಿಸ್ ಹಿಡಿತದಲ್ಲಿಡಲು ನೆರವಾಗಬಹುದಲ್ಲದೆ, ಪಾರ್ಶ್ವವಾಯು, ಹೃದಯ ರಕ್ತನಾಳದ ರೋಗಗಳು ಹಾಗೂ ಡಯಾಬಿಟಿಸ್‍ನಿಂದ ಬರುವ ಇತರ ಆರೋಗ್ಯ ತೊಂದರೆಗಳ ಸಾಧ್ಯತೆ ಕಡಿಮೆಯಾಗುವುದು. ಜೊತೆಗೆ, ಆರೋಗ್ಯಕರ ಆಹಾರಕ್ರಮವು ಒಬ್ಬ ವ್ಯಕ್ತಿಗೆ ಡಯಾಬಿಟಿಸ್ಅನ್ನು ಇನ್ನೂ ಚೆನ್ನಾಗಿ ಸಂಬಾಳಿಸಲು ನೆರವಾಗುತ್ತದೆ. ಡಯಾಬಿಟಿಸ್ ಇರುವವರು ಮಾಡಬಹುದಾದ ಆರೋಗ್ಯಕರ ಆಹಾರ ಆಯ್ಕೆಗಳಲ್ಲಿ, ಬೆಣ್ಣೆ ಹಣ್ಣು ‘ಪದೇ ಪದೇ ತಿನ್ನಿ’ ಎಂಬ ಗುಂಪಿಗೆ ಸೇರುತ್ತದೆ1

ಹಸಿರು ಹೊನ್ನು

ಬೆಣ್ಣೆ ಹಣ್ಣಿನಲ್ಲಿ ವಿಟಮಿನ್ ಎ, ಬಿ, ಸಿ, ಈ ಹಾಗೂ ಕೆ; ಖನಿಜಗಳು; ನಾರಿನಾಂಶ ಹಾಗೂ ಆ್ಯಂಟಿ ಆಕ್ಸಿಡಂಟ್‍ಗಳು ಹೇರಳವಾಗಿವೆ. ಈ ಹಣ್ಣು ಕೊಬ್ಬಿನಿಂದ ತುಂಬಿದ್ದರೂ, ಅದರಲ್ಲಿ ಅನ್‍ಸ್ಯಾಚುರೇಟಡ್ ಕೊಬ್ಬು ಹೆಚ್ಚಾಗಿದ್ದು, ಅದು ಆರೋಗ್ಯಕರ ಕೊಬ್ಬಾಗಿದೆ.2

ಡಯಾಬಿಟಿಸ್ ಇರುವ ರೋಗಿಗಳಿಗೆ, ವಿಶೇಷವಾಗಿ ಈ ಹಣ್ಣು ಹೇಗೆ ವರದಾನವಾಗಿದೆ ಎಂದು ನೋಡೋಣ:

  • ರಕ್ತದ ಸಕ್ಕರೆ ಮಟ್ಟ: ರಕ್ತದ ಸಕ್ಕರೆಯ ಮಟ್ಟದ ನಿರ್ವಹಣೆ, ಡಯಾಬಿಟಿಸ್ ಇರುವವರಲ್ಲಿ ಆರೋಗ್ಯ ತೊಂದರೆಗಳನ್ನು ತಡೆಗಟ್ಟಲು ನೆರವಾಗುತ್ತದೆ.1 ಬೆಣ್ಣೆ ಹಣ್ಣಿನಲ್ಲಿರುವ ಕಾರ್ಬೊಹೈಡ್ರೇಟ್‍ಗಳು 80% ನಾರಿನಾಂಶದಿಂದ ಮಾಡಲ್ಪಟ್ಟಿದ್ದು, ಬಹಳ ಕಡಿಮೆ ಸಕ್ಕರೆಯನ್ನು ಹೊಂದಿದೆ.3 ಅಲ್ಲದೆ, ಬೆಣ್ಣೆ ಹಣ್ಣಿನ ಗ್ಲೈಸೀಮಿಕ್ ಸೂಚ್ಯಂಕವು ಹೆಚ್ಚು ಕಡಿಮೆ ಸೊನ್ನೆಯಾಗಿರುವುದರಿಂದ, ಅದು ತೂಕ ಸಂಬಾಳಿಸುವುದರಲ್ಲಿ ಹಾಗೂ ರಕ್ತದ ಸಕ್ಕರೆ ಹಿಡಿತದಲ್ಲಿಡಲು ನೆರವಾಗಬಹುದು.3

  • ಹೊಟ್ಟೆ ತುಂಬಿದ ಸಂತೃಪ್ತಿ: ತೂಕವನ್ನು ಸಂಬಾಳಿಸುವಲ್ಲಿ ಹೊಟ್ಟೆ ತುಂಬಿದ ಸಂತೃಪ್ತಿಯ ಪಾತ್ರ ದೊಡ್ಡದು.1 ಹೊಟ್ಟೆ ತುಂಬಿದೆಯೆಂದು ಯಾರಿಗೆ ಅನಿಸುವುದೋ, ಅವರು ಎರಡು ಊಟಗಳ ನಡುವೆ ಕುರುಕಲು ತಿಂಡಿಯನ್ನು ತಿನ್ನುವ ಸಾಧ್ಯತೆ ಕಡಿಮೆ. ಒಂದು ಅಧ್ಯಯನದ ಪ್ರಕಾರ, ಅದರಲ್ಲಿ ಪಾಲ್ಗೊಂಡವರಲ್ಲಿ ಯಾರು ತಮ್ಮ ಮಧ್ಯಾಹ್ನದ ಊಟದ ಜೊತೆ ಅರ್ಧ ಬೆಣ್ಣೆ ಹಣ್ಣನ್ನು ತಿಂದರೋ, ಅವರು ನೆಮ್ಮದಿಯಾಗಿ ಊಟ ಮಾಡುವ ವಿಷಯದಲ್ಲಿ 26% ಸುಧಾರಣೆ ತೋರಿದರು, ಹಾಗೂ ಅವರಲ್ಲಿ ಹೆಚ್ಚು ತಿನ್ನಬೇಕೆನ್ನುವ ಆಸೆಯು 40% ನಷ್ಟು ಕಡಿಮೆಯಾಯಿತು. ಬೆಣ್ಣೆ ಹಣ್ಣು ತಿನ್ನುವುದರಿಂದ, ದೇಹಕ್ಕೆ ಸೇರುವ ಕ್ಯಾಲರಿ ಹಾಗೂ ಕಾರ್ಬೊಹೈಡ್ರೇಟ್‍ ಅಳತೆ ಏರಿದರೂ, ಎಂದಿನ ಊಟಕ್ಕೆ ಹೋಲಿಸಿ ನೋಡಿದಾಗ, ರಕ್ತದ ಸಕ್ಕರೆ ಮಟ್ಟದಲ್ಲಿ ಏರಿಕೆ ಕಂಡುಬರಲಿಲ್ಲ ಎಂದು ಆ ಅಧ್ಯಯನವು ತಿಳಿಸಿತು.4 ಹಾಗಾಗಿ, ರಕ್ತದ ಸಕ್ಕರೆ ಸಂಬಾಳಿಸುವುದರಲ್ಲಿ ಬೆಣ್ಣೆ ಹಣ್ಣಿನ ಪಾತ್ರ ಮಹತ್ತರವಾದದ್ದು.

  • ತೂಕ ನಿರ್ವಹಣೆ: ಬೆಣ್ಣೆ ಹಣ್ಣುಗಳಲ್ಲಿ ವಿಟಮಿನ್ ಹಾಗೂ ಖನಿಜಗಳು ಹೇರಳವಾಗಿದ್ದು, ಅವು ಒಡಲಿಗೆ ಹಿತವಾಗಿವೆ ಹಾಗೂ ಹೊಟ್ಟೆ ತುಂಬಿಸುತ್ತವೆ. ಅವುಗಳಲ್ಲಿ ಮೋನೊ ಅನ್‍ಸ್ಯಾಚುರೇಟಡ್ ಕೊಬ್ಬು ಹೆಚ್ಚಾಗಿದ್ದು, ಹೊಟ್ಟೆಯ ಸುತ್ತ ಬೊಜ್ಜು ಸೇರಿಕೊಳ್ಳದಂತೆ ಹಾಗೂ ಡಯಾಬಿಟಿಸ್‍ನ ತೊಂದರೆಗಳಿಂದ ಕಾಪಾಡಬಹುದು. ಇದು ಮೋನೊ ಅನ್‍ಸ್ಯಾಚುರೇಟಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಹಾರಗಳ ಪರಿಣಾಮವಾಗಿದೆ. ಬೆಣ್ಣೆ ಹಣ್ಣುಗಳು ಮೆಟಬಾಲಿಸಂನ ವೇಗವನ್ನು ಹೆಚ್ಚಿಸುವುದಲ್ಲದೆ, ಮಧ್ಯಮ ಶಕ್ತಿಯ ಸಾಂದ್ರತೆಯನ್ನು ಹೊಂದಿವೆ. ಇದರಿಂದ ಅವು ತೂಕ ಕಳೆದುಕೊಳ್ಳುವುದು ಹಾಗೂ ತೂಕ ಸಂಬಾಳಿಸುವಲ್ಲಿ ನೆರವಾಗಬಲ್ಲುವು.2

ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಬೆಣ್ಣೆ ಹಣ್ಣನ್ನು ಬಳಸುವುದು

ಒಮ್ಮೆ ತಿನ್ನಬಹುದಾದ ಬೆಣ್ಣೆ ಹಣ್ಣಿನ ಪಾಲು, ಹಣ್ಣಿನ ಐದನೇ ಒಂದರಷ್ಟು ಎಂದು ಸೂಚಿಸಲಾಗಿದೆ.3 ಅಧ್ಯಯನವೊಂದು ತೋರಿಸಿದಂತೆ, ಮಾರ್ಜರಿನ್ ಇಲ್ಲವೇ ಎಣ್ಣೆಯ ಬದಲು ಬೆಣ್ಣೆ ಹಣ್ಣುಗಳನ್ನು ಬಳಸಬಹುದು. ಇದು, ತೂಕ ಇಳಿಸುವ ಆಹಾರ ಕ್ರಮದಲ್ಲಿ ಬೆಣ್ಣೆ ಹಣ್ಣುಗಳು ಉತ್ತಮ  ಆಯ್ಕೆಯೆಂದು ತೋರಿಸುತ್ತದೆ.2

ಹೆಸರೇ ಹೇಳುವಂತೆ ಬೆಣ್ಣೆ ಹಣ್ಣುಗಳು ಸೊಗಸಾಗಿ, ಬೆಣ್ಣೆಯಂತೆ ಇದ್ದು, ನಿಮ್ಮ ಅಡುಗೆಗೆ ಕ್ರೀಮ್‍ನಂತಹ ರುಚಿ ನೀಡುತ್ತವೆ. ಹಾಗಾಗಿ, ಚೀಸ್, ಯೋಗರ್ಟ್, ಮೊಟ್ಟೆಗಳು, ಹಾಲು, ಕ್ರೀಮ್ ಇಲ್ಲವೇ ಬೆಣ್ಣೆಯ ಬದಲು ಬಳಸಲು ಅವು ಹೇಳಿ ಮಾಡಿಸಿದಂತಿವೆ.5

ನೀವು ಅಡುಗೆಯಲ್ಲಿ ಬೆಣ್ಣೆ ಹಣ್ಣುಗಳನ್ನು ಬೇರೆ, ಹೊಸ ಬಗೆಯಲ್ಲಿ ಬಳಸಬಹುದಾದ ವಿಧಾನಗಳೆಂದರೆ:5,6

  • ಸಲಾಡ್‍ನಲ್ಲಿ ಇಲ್ಲವೇ ಸ್ಯಾಂಡ್‍ವಿಚ್‍ ಮಾಡುವಾಗ ಬೆಣ್ಣೆ ಹಣ್ಣು ಬಳಸಿ6
  • ಬೆಣ್ಣೆ ಹಣ್ಣನ್ನು ಚೆನ್ನಾಗಿ ಕಲಸಿ, ಮಸಾಲೆ ಹಾಗೂ ನಿಂಬೆ ರಸ ಹಿಂಡಿ, ಮಯೋನೇಸ್ ಬದಲಿಗೆ ಇದನ್ನು ಹಚ್ಚಿಕೊಂಡು  ತಿನ್ನಲು ಬಳಸಿ6
  • ಬೇರೆ ತರಕಾರಿಗಳೊಂದಿಗೆ ಇದರ ಹೋಳುಗಳನ್ನೂ ಹಾಕಿ ಫ್ರೈ ಮಾಡಿ ಅದರ ರುಚಿಯನ್ನು ಸವಿಯಿರಿ6
  • ಸರಳವಾದರೂ ತುಂಬ ರುಚಿಯಾದ ಗ್ವಾಕಮೋಲೆ ಮಾಡಿ ತಿನ್ನಿ6
  • ಕ್ರೀಮ್‍ನಂತಹ ಗಟ್ಟಿ ಸ್ಮೂದಿ ಮಾಡಿರಿ5
  • ಸಿಹಿ ತಿನ್ನಬೇಕೆನಿಸಿದರೆ, ಬೆಣ್ಣೆ ಹಣ್ಣಿನ ಸೊಗಸಾದ ಮೂಸ್ ಮಾಡಿರಿ5
  • ಬೆಣ್ಣೆ ಇಲ್ಲವೇ ಎಣ್ಣೆಯ ಬದಲಿಗೆ, ಬೆಣ್ಣೆ ಹಣ್ಣನ್ನು ಹಾಕಿ ಚಂದದ ಬ್ರೌನಿ ಬೇಕ್ ಮಾಡಿ ತಿನ್ನಿರಿ5

ಬೆಣ್ಣೆ ಹಣ್ಣಿನ ಅಡುಗೆಗಳು ಕೆಲವರಿಗೆ ಹೊಸತೆನಿಸಬಹುದು. ಆದರೂ, ಅದರ ಆರೋಗ್ಯ ಲಾಭಗಳು, ಅದರಲ್ಲೂ ವಿಶೇಷವಾಗಿ ಡಯಾಬಿಟಿಸ್ ಇರುವವರಿಗೆ ಇದು ಸಿಹಿ ಮದ್ದಿನಂತಿರುವುದರಿಂದ, ಅದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಂಡು, ಆಗಾಗ ತಿನ್ನುವುದರಲ್ಲಿ ಜಾಣ್ಮೆಯಿದೆ.

ಉಲ್ಲೇಖ:

  1. Centers for Disease Control and Prevention. Tasty recipes for people with diabetes and their families [Internet]. [cited 2019 Dec 27]. Available from: https://www.cdc.gov/diabetes/pdfs/managing/Tasty_Recipes_for_People_with_Diabetes-508.pdf.
  2. Academia. Health benefits of avocado pear (Peasia Americana) [Internet]. [cited 2019 Dec 27]. Available from: https://www.academia.edu/26027273/HEALTH_BENEFITS_OF_AVOCADO_PEAR_PEASIA_AMERICANA.
  3. Dreher ML, Davenport AJ. Hass avocado composition and potential health effects. Crit Rev Food Sci Nutr. 2013;53(7):738-50. doi: 10.1080/10408398.2011.556759. Available from: https://www.tandfonline.com/doi/full/10.1080/10408398.2011.556759.
  4. EurekAlert. New research: Effects of eating half an avocado with lunch on satiety and desire to eat between meals [Internet]. [cited 2019 Dec 27]. Available from: https://www.eurekalert.org/pub_releases/2014-01/fl-nre010714.php.
  5. One Green Planet. How avocados can easily replace dairy in all your favorite creamy dishes [Internet]. [cited 2019 Dec 31]. Available from: https://www.onegreenplanet.org/vegan-food/how-avocados-can-easily-replace-dairy-in-all-your-favorite-creamy-dishes/.
  6. Produce for Better Health Foundation. Top 10 ways to enjoy avocados [Internet]. [cited 2019 Dec 31]. Available from: https://fruitsandveggies.org/stories/top-10-ways-to-enjoy-avocados/.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.