bariatric surgery guide
Reading Time: 2 minutes

ಬೊಜ್ಜಿನ ಸಮಸ್ಯೆ ಇಂದು ಹೆಚ್ಚು ಪ್ರಚಲಿತವಾಗುತ್ತಿದೆ ಹಾಗೂ ಸಾಂಪ್ರದಾಯಿಕ ತೂಕ-ಇಳಿಸುವ ನಿಯಮಗಳಿಗೆ ಸಮರ್ಪಕವಾಗಿ ಸ್ಪಂದಿಸದ ಜನರ ಸಂಖ್ಯೆಯೂ ಹೆಚ್ಚಾಗಿದೆ. [1] ಹಾಗಾಗಿಯೇ ಇಂದು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಎಲ್ಲರ ಮನೆಮಾತಾಗಿದೆ. ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ (ಸಾಮಾನ್ಯವಾಗಿ ಹೊಟ್ಟೆಯನ್ನು ಒಳಗೊಂಡಿರುತ್ತದೆ) ಎನ್ನುವುದು ತೂಕ ಇಳಿಸುವುದನ್ನು ಉತ್ತೇಜಿಸುವ ಒಂದು ಶಸ್ತ್ರಚಿಕಿತ್ಸೆ. ಒಂದು ದಶಕದ ಹಿಂದೆ ಅಪಾಯಕಾರಿ ಎಂದು ಪರಿಗಣಿಸಲಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಬೇರಿಯಾಟ್ರಿಕ್ ಕಾರ್ಯವಿಧಾನಗಳ ಸುರಕ್ಷತೆ ಗಣನೀಯವಾಗಿ ಸುಧಾರಿಸಿದೆ.

ಬೇರಿಯಾಟ್ರಿಕ್ ವಿಧಾನವನ್ನು ನೀವು ಯಾವಾಗ ಪರಿಗಣಿಸಬೇಕು?

 • ಟೈಪ್ 2 ಡಯಾಬಿಟಿಸ್ ಮೆಲಿಟಸ್ (ಟಿ2ಡಿಎಂ), ಅಬ್‌ಸ್ಟ್ರಕ್ಟಿವ್ ಸ್ಲೀಪ್ ಆಪ್ನಿಯಾ ಮತ್ತು ಹೃದಯರಕ್ತನಾಳದ ತೊಡಕುಗಳಂತಹ ಬೊಜ್ಜು-ಸಂಬಂಧಿತ ತೊಡಕುಗಳು ಇದ್ದು, ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) >35 kg/m2 ಇದ್ದಾಗ.
 • ಬಿಎಂಐ > 40 kg/m2 ಇದ್ದು, ಯಾವುದೇ ತೊಡಕುಗಳು ಇಲ್ಲದಿದ್ದಾಗಲೂ.
 • ವೈದ್ಯಕೀಯ ತಂಡದಿಂದ ಮೌಲ್ಯಮಾಪನ ಮಾಡಲಾಗಿದ್ದು, ಕಾರ್ಯವಿಧಾನಕ್ಕೆ ಒಳಗಾಗಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಯೋಗ್ಯವೆಂದು ಪರಿಗಣಿಸಿರುವಾಗ. [1]

ಕಾರ್ಯವಿಧಾನಗಳ ಪ್ರಕಾರಗಳು ಯಾವುವು?

ಸ್ಲೀವ್ ಗ್ಯಾಸ್ಟ್ರೆಕ್ಟಮಿ, ಗ್ಯಾಸ್ಟ್ರಿಕ್ ಬೈಪಾಸ್ ಮತ್ತು ಗ್ಯಾಸ್ಟ್ರಿಕ್ ಬ್ಯಾಂಡಿಂಗ್, ಸಾಮಾನ್ಯವಾಗಿ ನಡೆಯುವ ಬೇರಿಯಾಟ್ರಿಕ್ ಕಾರ್ಯವಿಧಾನಗಳು. [1] ಈ ಕಾರ್ಯವಿಧಾನಗಳ ಮೂಲ ತತ್ವವೆಂದರೆ ಪರಿಣಾಮಕಾರಿಯಾಗಿ ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡುವುದರಿಂದ ಆಹಾರ ಸೇವನೆಯು ಗಣನೀಯವಾಗಿ ಕಡಿಮೆಯಾಗುತ್ತದೆ, ಇದರಿಂದಾಗಿ ತೂಕವು ಸ್ವಾಭಾವಿಕವಾಗಿ ಇಳಿಯುತ್ತದೆ. ತೂಕ ಇಳಿಸುವ ವ್ಯಾಪ್ತಿಯು ಕಾರ್ಯವಿಧಾನದಿಂದ ಕಾರ್ಯವಿಧಾನಕ್ಕೆ ಭಿನ್ನವಾಗಿರುತ್ತದೆ ಹಾಗೂ ಆರಂಭಿಕ ತೂಕ ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ದೀರ್ಘಾವಧಿಯಲ್ಲಿ ತೂಕವು ಸರಾಸರಿ 15 ರಿಂದ 30% ಇಳಿಯಬಹುದು ಎಂದು ಸಂಶೋಧನೆ ತಿಳಿಸಿದೆ. ಆದರೆ, ಶಸ್ತ್ರಚಿಕಿತ್ಸೆಯ ಬಳಿಕ ತೂಕವು 20% ಕ್ಕಿಂತ ಕಡಿಮೆ ಇಳಿದರೆ, ಕೆಲವರಲ್ಲಿ ಅದನ್ನು ‘ಶಸ್ತ್ರಚಿಕಿತ್ಸೆಯ ವೈಫಲ್ಯ’ ಎಂದು ಪರಿಗಣಿಸಲಾಗುತ್ತದೆ.[1]

ಬೇರಿಯಾಟ್ರಿಕ್ ಕಾರ್ಯವಿಧಾನಗಳ ಪ್ರಯೋಜನಗಳು ಯಾವುವು?

ಬೇರಿಯಾಟ್ರಿಕ್ ಕಾರ್ಯವಿಧಾನಗಳು ತೂಕ ನಷ್ಟವನ್ನು ಹೊರತುಪಡಿಸಿ ಬೇರೆ ಅನೇಕ ಪ್ರಯೋಜನಗಳನ್ನು ಹೊಂದಿವೆ, ಇದು ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುವುದಲ್ಲದೆ ಮರಣದ ಪ್ರಮಾಣವನ್ನು ಕುಗ್ಗಿಸುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಕೆಲವರಲ್ಲಿ ಅವರ ಸಮಸ್ಯೆಗಳು ಸ್ವಲ್ಪ ಮಟ್ಟದಿಂದ ದೊಡ್ಡ ಮಟ್ಟದವರೆಗೂ ಸುಧಾರಣೆಯನ್ನು ಕಂಡಿದೆ ಹಾಗೂ ಇನ್ನೂ ಕೆಲವರಲ್ಲಿ ಆ ಸಮಸ್ಯೆಗಳು ಸಂಪೂರ್ಣವಾಗಿ ಸರಿ ಹೋಗಿವೆ. [1,2]

 • ತೂಕ ಇಳಿಕೆ: ಇದು ಶಸ್ತ್ರಚಿಕಿತ್ಸೆಯ ಯಾವ ವಿಧಾನದಲ್ಲಿ ಮಾಡಿದರು ಎಂಬುದರ ಅಧಾರದ ಮೇಲೆ ಬದಲಾಗುತ್ತದೆ ಮತ್ತು ಮೊದಲ ವರ್ಷದಲ್ಲಿ 60% (ಅಥವಾ 15 ಬಿಎಂಐ ಪಾಯಿಂಟ್‌ಗಳು) ವರೆಗೆ ತೂಕ ಇಳಿಯಬಹುದು, ಆದರೆ ತೂಕ ಪುನಃ ದೀರ್ಘಾವಧಿಯಲ್ಲಿ ಮರಳಿ ಬರುವ ಸಾಧ್ಯತೆ ಇರುವುದರಿಂದ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
 • ಶಸ್ತ್ರಚಿಕಿತ್ಸೆಯ ನಂತರ ಬೊಜ್ಜು-ಸಂಬಂಧಿತ ತೊಡಕುಗಳಾದಂತಹ ಡಯಾಬಿಟಿಸ್, ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಶನ್), ಮತ್ತು ಅಧಿಕ ಕೊಲೆಸ್ಟರಾಲ್ (ಡಿಸ್ಲಿಪಿಡೀಮಿಯಾ) ಸಮಸ್ಯೆಗಳು ಗಣನೀಯವಾಗಿ ಕುಗ್ಗಿದೆ.
 • ಹೆಚ್ಚಿನ ಹೆಂಗಸರು ಶಸ್ತ್ರಚಿಕಿತ್ಸೆಯ ಬಳಿಕ ಪಾಲಿಸಿಸ್ಟಿಕ್ ಒವೆರಿಯನ್ ಡಿಸೀಸ್ (ಪಿಸಿಒಡಿ) ಕಾಯಿಲೆ ದೊಡ್ಡ ಮಟ್ಟದಲ್ಲಿ ಕುಗ್ಗಿರುವುದನ್ನು ಹಾಗೂ ಸಂಪೂರ್ಣವಾಗಿ ನಿರ್ನಾಮವಾಗಿರುವುದನ್ನು ಗಮನಿಸಿದ್ದಾರೆ.
 • ಹೃದಯರಕ್ತನಾಳದ ತೊಂದರೆಗಳು ಮತ್ತು ಅದರ ಅಪಾಯದ ಇಳಿಕೆ.
 • ಡಯಾಬಿಟಿಸ್‌ಗೆ ಸಂಬಂಧಿಸಿದ ತೊಡಕುಗಳ ಅಪಾಯದ ಇಳಿಕೆ.
 • ಆ್ಯಂಜಿನಾ/ಹೃದಯಾಘಾತದ ಅಪಾಯಗಳು ಅರ್ಧದಷ್ಟು ಕುಗ್ಗುತ್ತವೆ.
 • ಡಯಾಬಿಟಿಸ್ ಔಷಧಿಗಳ ಸಂಭಾವ್ಯ ಇಳಿಕೆ.
 • ಬೊಜ್ಜಿನ ಇತರ ತೊಡಕುಗಳಾದ ಆಮ್ಲೀಯತೆ, ಅಬ್‌ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ, ಸಂಧಿವಾತ, ಆಸ್ತಮಾ, ದುರ್ಬಲಗೊಂಡ ಫಲವತ್ತತೆ, ಹೀಗೆ ಅನೇಕ ಸಮಸ್ಯೆಗಳ ಇಳಿಕೆ.
 • ಹಲವರು ಮಾನಸಿಕ ಆರೋಗ್ಯದ ಸುಧಾರಣೆಯನ್ನು ಸಹ ಕಂಡುಕೊಂಡಿದ್ದಾರೆ; ಉದಾಹರಣೆಗೆ, ಸಂಶೋಧನೆಯು 55% ಪ್ರಕರಣಗಳಲ್ಲಿ ಖಿನ್ನತೆಯನ್ನು ಪರಿಹರಿಸಿದೆ ಎಂದು ತೋರಿಸಿದೆ.

ಬೇರಿಯಾಟ್ರಿಕ್ ಕಾರ್ಯವಿಧಾನಗಳಿಂದ ಮುಂದೆ ಏನಾದರು ತೊಂದರೆಗಳು ಎದುರಾಗಬಹುದೆ?

ಕಳೆದ ಒಂದು ದಶಕದಲ್ಲಿ, ಬೇರಿಯಾಟ್ರಿಕ್ ಕಾರ್ಯವಿಧಾನಗಳು ಸಾಕಷ್ಟು ಸುರಕ್ಷಿತವಾಗಿವೆ. ಅದೇನೇ ಇದ್ದರೂ, ಯಾವುದೇ ಶಸ್ತ್ರಚಿಕಿತ್ಸೆಯಾಗಲಿ, ಕೆಲವು ತೊಡಕುಗಳ ಅಪಾಯ ಯಾವಾಗಲೂ ಇದ್ದೇ ಇರುತ್ತದೆ, ಇದಕ್ಕೆ ಬೇರಿಯಾಟ್ರಿಕ್ ಕಾರ್ಯವಿಧಾನ ಹೊರತಲ್ಲ. [1] ತೊಂದರೆಗಳು ಅಥವಾ ತೊಡಕುಗಳು ಈ ಕೆಳಗಿನಂತಿವೆ:

 • ವಾಕರಿಕೆ ಮತ್ತು ವಾಂತಿ
 • ಹುಣ್ಣು
 • ಹೊಟ್ಟೆಯಲ್ಲಿ ನೋವು
 • ಶಸ್ತ್ರಚಿಕಿತ್ಸೆಯ ಸ್ಥಳದಲ್ಲಿ ರಕ್ತಸ್ರಾವ, ಸೋಂಕು ಅಥವಾ ಸೋರಿಕೆ.

1. ಪೌಷ್ಠಿಕ ಆಹಾರದ ಕೊರತೆ:

ಪೌಷ್ಠಿಕ ಆಹಾರದ ಕೊರತೆ (ನಿರ್ದಿಷ್ಟವಾಗಿ ವಿಟಮಿನ್ ಮತ್ತು ಖನಿಜದ ಕೊರತೆಗಳು) ಒಂದು ಪ್ರಮುಖ ತೊಡಕು. ಹೊಟ್ಟೆಯ ಗಾತ್ರ ಕಡಿಮೆಯಾದ ಕಾರಣ, ಕೆಲವು ಜೀವಸತ್ವಗಳ ಮತ್ತು ಖನಿಜಗಳ ಹೀರಿಕೊಳ್ಳುವಿಕೆಯು ಏರುಪೇರಾಗಬಹುದು, ಇದು ಕೆಲವು ಜನರಲ್ಲಿ ತೀವ್ರವಾಗಿರುತ್ತದೆ ಹಾಗೂ ಇತರ ಸಮಸ್ಯೆಗಳಿಗೆ ಎಡೆಮಾಡಿ ಕೊಡುತ್ತದೆ. ವಿಟಮಿನ್ ಡಿ ಕೊರತೆ; ಉದಾಹರಣೆಗೆ, ಆಸ್ಟಿಯೊಪೊರೋಸಿಸ್‌ನ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ತಡೆಗಟ್ಟುವ ಸಲುವಾಗಿ, ಶಸ್ತ್ರಚಿಕಿತ್ಸೆಗೆ ಮುನ್ನ ಸಂಪೂರ್ಣ ಪೌಷ್ಠಿಕಾಂಶದ ಸಮಾಲೋಚನೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ನಿಯಮಿತ ಪೌಷ್ಠಿಕಾಂಶದ ಮೌಲ್ಯಮಾಪನ ಮೊದಲ ವರ್ಷದಲ್ಲಿ ಅಗತ್ಯವಾಗಬಹುದು. ಜೀವಮಾನ ಪೂರ್ತಿ ವಿಟಮಿನ್ ಮತ್ತು ಖನಿಜಯುಕ್ತ ಪೂರಕಗಳನ್ನು ಸಹ ತೆಗೆದುಕೊಳ್ಳಬೇಕಾಗಬಹುದು. [1,3]

2. ಡಂಪಿಂಗ್ ಸಿಂಡ್ರೋಮ್:

ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ನಂತರ ಕಾಣಿಸಿಕೊಳ್ಳುವ ಮತ್ತೊಂದು ತೊಡಕು ಇದು. ಈ ಸ್ಥಿತಿಯಲ್ಲಿ, ದೊಡ್ಡ ಪ್ರಮಾಣದ ಆಹಾರವನ್ನು ತ್ವರಿತವಾಗಿ ಸೇವಿಸಿದ ತಕ್ಷಣ ವಾಕರಿಕೆ, ವಾಂತಿ, ಬೆವರುವುದು, ನಡುಕ, ಭೇದಿ, ತಲೆತಿರುಗುವಿಕೆ ಅಥವಾ ಅಧಿಕ ಹೃದಯ ಬಡಿತದಂತಹ ಲಕ್ಷಣಗಳು ಕಂಡುಬರುತ್ತವೆ, ವಿಶೇಷವಾಗಿ ಸಿಹಿತಿಂಡಿಗಳು ಮತ್ತು ಸಂಸ್ಕರಿಸಿದ ಸಕ್ಕರೆಯ ಇತರ ರೂಪಗಳನ್ನು ಸೇವಿಸಿದಾಗ ಈ ಸಮಸ್ಯೆ ಕಂಡುಬಂದಿದೆ. [1]

3. ಸೌಂದರ್ಯದ ತೊಂದರೆಗಳು:

ಶಸ್ತ್ರಚಿಕಿತ್ಸೆಯ ನಂತರ ಕಾಸ್ಮೆಟಿಕ್ ಅಥವಾ ಸೌಂದರ್ಯದ ಸಮಸ್ಯೆಗಳು ಉದ್ಭವಿಸಬಹುದು; ಉದಾಹರಣೆಗೆ, ಹೋಲಿಕೆಯ ದೃಷ್ಟಿಯಿಂದ, ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ತೂಕ ಇಳಿಕೆಯಾದರೆ ಹೆಚ್ಚುವರಿ ಚರ್ಮಕ್ಕೆ ಕಾರಣವಾಗಬಹುದು, ಹಾಗಾಗಿ, ಇದು ಚರ್ಮದ ಫ್ಲಾಪ್‌ಗಳನ್ನು ತೆಗೆದುಹಾಕಲು ಸೌಂದರ್ಯವರ್ಧಕ ಅಥವಾ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುವಂತೆ ಮಾಡುತ್ತದೆ. ಕೆಲವು ಸಂದರ್ಭದಲ್ಲಿ ಕೂದಲು ತೆಳುವಾಗುವುದನ್ನು ನಾವು ಕಂಡಿದ್ದೇವೆ. [1,2]

ಒಟ್ಟಾರೆಯಾಗಿ, ಇಂದಿನ ದಿನಗಳಲ್ಲಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವುದು ಸಾಕಷ್ಟು ಸುರಕ್ಷಿತವಾಗಿದೆ, ವಿಶೇಷವಾಗಿ ಶಸ್ತ್ರಚಿಕಿತ್ಸೆಯ ಮೊದಲು ಮತ್ತು ನಂತರ ಎಚ್ಚರಿಕೆಯಿಂದ ಮೌಲ್ಯಮಾಪನ ಹಾಗೂ ಮೇಲ್ವಿಚಾರಣೆಯನ್ನು ಮಾಡಿದ್ದರೆ ಈ ಕಾರ್ಯವಿಧಾನ ಇನ್ನೂ ಸುರಕ್ಷಿತ. ಶಸ್ತ್ರಚಿಕಿತ್ಸೆಯ ಪ್ರಯೋಜನ ಪಡೆದುಕೊಳ್ಳುವುದನ್ನು ಮುಂದುವರಿಸಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. [3] ಆರೋಗ್ಯಕರ ಆಹಾರಕ್ರಮ ಹಾಗೂ ವ್ಯಾಯಾಮ ದಿನಚರಿಯು ತೂಕದ ಇಳಿಕೆಯನ್ನು ಹಾಗೆಯೇ ಕಾಪಾಡಿಕೊಳ್ಳಲು ಮತ್ತು ಶಸ್ತ್ರಚಿಕಿತ್ಸೆಯ ನಂತರದ ಡಯಾಬಿಟಿಸ್ ಮತ್ತು ಹೈಪರ್ಲಿಪಿಡೆಮಿಯಾದಂತಹ ಕೊಮೊರ್ಬಿಡ್ ಪರಿಸ್ಥಿತಿಗಳನ್ನು ನಿಯಂತ್ರಿಸಲು ಅತ್ಯಂತ ಮುಖ್ಯವಾಗಿದೆ. ಯಾವುದೇ ಕಾರ್ಯವಿಧಾನವು ತೊಡಕುಗಳಿಲ್ಲದೆ ಇರುವುದಿಲ್ಲ ಎಂಬುದನ್ನು ನಾವು ನೆನಪಿಟ್ಟುಕೊಳ್ಳುವುದು ತುಂಬಾ ಮುಖ್ಯ. ಅಂತಹ ಶಸ್ತ್ರಚಿಕಿತ್ಸೆಗಳ ನಂತರ ಆಗುವ ಬದಲಾವಣೆಗಳನ್ನು ಮಾನಸಿಕವಾಗಿ ನಿಭಾಯಿಸುವುದು ಕೆಲವು ಜನರಿಗೆ ವಿಶೇಷವಾಗಿ ಕಷ್ಟಕರವಾಗಿರುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಅಗತ್ಯವಿರುವ ಕೆಲಸಗಳನ್ನು ಮಾಡುತ್ತೀರಾ ಎಂದು ತಿಳಿದುಕೊಳ್ಳಲು, ನಿಮ್ಮ ವೈದ್ಯರು ಮತ್ತು ಶಸ್ತ್ರಚಿಕಿತ್ಸೆಯ ತಂಡದೊಂದಿಗೆ ಮಾತನಾಡುವುದು ಬಹಳ ಮುಖ್ಯ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.