ಪರಿಸರದಲ್ಲಿರುವ ಸೋಂಕು ಹರಡುವ ಏಜೆಂಟ್‌ಗಳಿಂದ (ಬ್ಯಾಕ್ಟೀರಿಯಾ, ವೈರಸ್‌ಗಳು, ಫಂಗೈ, ಪ್ಯಾರಾಸೈಟ್‌ಗಳು) ನಿಮ್ಮನ್ನು ಕಾಪಾಡುವುದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ. ಈ ರೋಗ ನಿರೋಧಕ ಶಕ್ತಿ ಪ್ರತಿಯೊಬ್ಬರಲ್ಲೂ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುವುದು. ಜೆನೆಟಿಕ್ಸ್, ವಯಸ್ಸು, ಲಿಂಗ, ಧೂಮಪಾನದ ಅಭ್ಯಾಸ, ವ್ಯಾಯಾಮ ಅಭ್ಯಾಸದ ಮಟ್ಟ, ಮದ್ಯಪಾನ, ಒತ್ತಡ, ಸೋಂಕಿನ ಇತಿಹಾಸ ಹಾಗೂ ಲಸಿಕೆ (ವ್ಯಾಕ್ಸಿನೇಶನ್) ಹಾಗೂ ಎಳೆಯ ಬದುಕಿನ ಅನುಭವಗಳು ಈ ಎಲ್ಲಾ ಸಂಗತಿಗಳು ರೋಗ ನಿರೋಧಕ ಶಕ್ತಿಯ ವ್ಯತ್ಯಾಸಗಳಿಗೆ ಕಾರಣವಾಗಿರುತ್ತವೆ. ಈ ಎಲ್ಲಾ ಸಂಗತಿಗಳಲ್ಲಿ, ಅತಿ ಮುಖ್ಯವಾದ ಹಾಗೂ ಮಾರ್ಪಡಿಸಬಹುದಾದ ಸಂಗತಿ ಎಂದರೆ ಆಹಾರ ಕ್ರಮ.
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ತೂಕ, ರಕ್ತದ ಸಕ್ಕರೆ ಮಟ್ಟ ಹಾಗೂ ಇತರೆ ಮೆಟಬಾಲಿಕ್ ಸಂಗತಿಗಳಷ್ಟೇ ನಮ್ಮ ಆಹಾರ ಕ್ರಮದ ಮೇಲೆ ಅವಲಂಬಿತವಾಗಿಲ್ಲ, ನಮ್ಮ ರೋಗ ನಿರೋಧಕ ಶಕ್ತಿ ಕೂಡ ಇದರ ಮೇಲೆ ಅವಲಂಬಿತವಾಗಿದೆ. ದೇಹದ ಸೈನಿಕರು ಎಂದು ಕರೆಯಲ್ಪಡುವ ಬಿಳಿ ರಕ್ತ ಕಣಗಳು ದೇಹಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ಆದರೆ ಈ ಸೈನಿಕರು ಖಾಲಿ ಹೊಟ್ಟೆಯಲ್ಲಿ ಹೋರಾಡಲು ಸಾಧ್ಯವೇ? ಹಾಗಾಗಿ, ನಮ್ಮ ರೋಗ ನಿರೋಧಕ ಏರ್ಪಾಡಿಗೆ ಬೇಕಿರುವ ಆಹಾರವನ್ನು ಸರಿಯಾದ ಆಹಾರ ಕ್ರಮದ ಮೂಲಕ ಒದಗಿಸುವುದು ಅತಿಮುಖ್ಯವಾಗಿದೆ.
ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಬೇಕಿರುವ ತುಂಬಾ ಮುಖ್ಯವಾದ ಅಡಕ ಎಂದರೆ ಪ್ರೋಟೀನ್. ಜೊತೆಗೆ, ಗ್ಲುಟಮೈನ್ ಹಾಗೂ ಆರ್ಗಿನೈನ್‌ನಂತಹ ಕೆಲವು ಅಮೈನೋ ಆ್ಯಸಿಡ್‌ಗಳು ಕೂಡ ರೋಗ ನಿರೋಧಕ ಶಕ್ತಿಯನ್ನು ಒದಗಿಸಬಲ್ಲವು, ಅವು ಕೂಡ ಪ್ರೋಟೀನ್ ಇರುವ ಆಹಾರಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ನಿಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್ ಇದೆಯೇ ನೋಡಿಕೊಳ್ಳಿ?
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇಕಿರುವ ಇನ್ನೊಂದು ಪೋಷಕಾಂಶ ಎಂದರೆ ವಿಟಮಿನ್ ಸಿ, ಅದರಲ್ಲೂ ಉಸಿರಾಟದ ಸೋಂಕು ಇರುವವರಿಗೆ ಇದು ಹೆಚ್ಚಿನ ನೆರವು ನೀಡುವುದು. ನೆಲ್ಲಿಕಾಯಿ, ಕಿತ್ತಳೆ, ಮೂಸಂಬಿ, ಸೀಬೆಹಣ್ಣು, ಕಿವಿ, ನಿಂಬೆಯಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಇರುತ್ತದೆ. ನಮ್ಮ ರೋಗ ನಿರೋಧಕ ಏರ್ಪಾಟು ಸಮರ್ಥವಾಗಿ ಕೆಲಸ ಮಾಡಲು ಬೇಕಿರುವ ಇತರೆ ಪೋಷಕಾಂಶಗಳೆಂದರೆ, ವಿಟಮಿನ್ ಎ, ಫಾಲಿಕ್ ಆ್ಯಸಿಡ್, ವಿಟಮಿನ್ ಬಿ6, ವಿಟಮಿನ್ ಬಿ12, ವಿಟಮಿನ್ ಇ, ಜಿಂಕ್, ತಾಮ್ರ, ಕಬ್ಬಿಣ ಹಾಗೂ ಸೆಲೆನಿಯಮ್. ಈಗ ಹೇಳಿರುವ ಒಂದಲ್ಲ ಒಂದು ಪೋಷಕಾಂಶದ ಕೊರತೆಯಿಂದ ನಮ್ಮ ರೋಗ ನಿರೋಧಕ ಶಕ್ತಿಯ ಎಲ್ಲಾ ಬಗೆಗಳ ಮೇಲೆ ಪರಿಣಾಮವಾಗುವುದು.
ಚಿಕ್ಕದಾಗಿ ಹೇಳಬೇಕೆಂದರೆ, ಬೇಳೆ, ಮೊಳಕೆಕಾಳು, ತರಕಾರಿ ಹಾಗು ಹಣ್ಣುಗಳಿರುವ ಸಮತೋಲಿತ ಆಹಾರ ಕ್ರಮವನ್ನು ಪಾಲಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಂಸ್ಕರಿಸಿದ ಆಹಾರದಿಂದ ಆದಷ್ಟು ದೂರವಿರಲು ಪ್ರಯತ್ನಿಸಿ, ಅವು ಹೆಚ್ಚು ಸಂಸ್ಕರಣೆಗೊಂಡು ವಿಟಮಿನ್ ಹಾಗೂ ಮಿನರಲ್ ಅಂಶಗಳನ್ನು ಕಡಿಮೆ ಮಾಡಿಕೊಂಡಿರುತ್ತವೆ.