Reading Time: 3 minutes

ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿ 17 ವರ್ಷಗಳ ಅನುಭವ ಇರುವ ರಿಜಿಸ್ಟರ್ಡ್ ಡಯಟೀಶಿಯನ್ ಅಶ್ವಿನಿ ಎಸ್.ಕಾನಡೆ ಅವರು ನುರಿತ-ವಿಮರ್ಶೆ ಮಾಡಿದ್ದಾರೆ.

ನಿಜಾಂಶದ ಪರಿಶೀಲನೆ ಆದಿತ್ಯ ನಾರ್, ಬಿ.ಫಾರ್ಮ್, ಎಂ.ಎಸ್ಸಿ. ಸಾರ್ವಜನಿಕ ಆರೋಗ್ಯ ಮತ್ತು ಆರೋಗ್ಯ ಅರ್ಥಶಾಸ್ತ್ರ

ಡಯಾಬಿಟಿಸ್ ಕಾಯಿಲೆಯನ್ನು ಹೊಂದಿರುವವರಿಗೆ, ಬಿಟ್ಟುಬಿಡಲು ಹೇಳುವ ಮೊದಲನೆಯ ಆಹಾರ ಪದಾರ್ಥ ಅಂದರೆ ಅಕ್ಕಿ (ಮತ್ತು ಸಕ್ಕರೆ, ಖಂಡಿತವಾಗಿ!).ನಮ್ಮಲ್ಲಿ ಹೆಚ್ಚಿನವರಿಗೆ ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಸುಲಭವಲ್ಲ.

ಆದರೆ ನಿಮ್ಮ ಜೀವನದಲ್ಲಿ ಇಲ್ಲಿಯವರೆಗೆ ಪ್ರಧಾನವಾಗಿದ್ದ ಆಹಾರ ಕ್ರಮವನ್ನು ನೀವೇಕೆ ಬದಲಾಯಿಸಬೇಕು? ನೀವು ಅದನ್ನು ಸಂಪೂರ್ಣವಾಗಿ ಬದಲಾಯಿಸಬೇಕೇ? ನಿಮ್ಮ ನಾಲಿಗೆಯ ರುಚಿ ಮೊಗ್ಗುಗಳನ್ನು ತಣಿಸುವಂತಹ ಬೇರೆ ಯಾವುದಾದರೂ ಆರೋಗ್ಯಕರ ಆಹಾರ ಪದಾರ್ಥಗಳಿವೆಯೇ? ಎಲ್ಲಾ ತರಹದ ಅಕ್ಕಿಗಳು ನಿಮಗೆ ಆರೋಗ್ಯಕರವಾಗಿಲ್ಲವೇ?

ಇವೆಲ್ಲದರ ಬಗ್ಗೆ ನಾವು ತಿಳಿಯೋಣ.

ಡಯಾಬಿಟಿಸ್ ಅಪಾಯಕಾರಿ ಹಂತ ತಲುಪಲು ಅಕ್ಕಿ ಹೇಗೆ ಕಾರಣವಾಗುತ್ತದೆ?

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಳಿತಗಳಿಗೆ ಅಕ್ಕಿ ಹೇಗೆ ಕಾರಣವಾಗಿದೆ ಎಂಬುದನ್ನು ತಿಳಿಯಲು, ಮೊದಲು ನೀವು ಗ್ಲೈಸೆಮಿಕ್ ಇಂಡೆಕ್ಸ್ ಅಥವಾ ಜಿಐ ಸ್ಕೋರ್ ಬಗ್ಗೆ ತಿಳಿಯುವ ಅವಶ್ಯಕತೆ ಇದೆ.

ಜಿಐ ಎನ್ನುವುದು ವಿವಿಧ ಆಹಾರ ಪದಾರ್ಥಗಳ (0-100 ರ ನಡುವೆ) ಗುಣಮಟ್ಟಕ್ಕೆ ನೀಡುವ ಸ್ಕೋರ್ ಆಗಿದೆ, ಮತ್ತು ಈ ಆಹಾರ ಪದಾರ್ಥಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಸೂಚಿಸುತ್ತದೆ. ಉದಾಹಾರಣೆಗೆ, 100 ಕ್ಕಿಂತ ಹೆಚ್ಚು ಜಿಐ ಸ್ಕೋರನ್ನು ಹೊಂದಿರುವ ಸಂಸ್ಕರಿಸಿದ ಸಕ್ಕರೆಯಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣವೇ ಹೆಚ್ಚಾಗುತ್ತದೆ. ಆದರೆ ನೈಸರ್ಗಿಕವಾಗಿ ಮಧ್ಯಮ ಜಿಐ ಸ್ಕೋರನ್ನು ಹೊಂದಿರುವ ಹಣ್ಣುಗಳಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಧಾನವಾಗಿ ಹೆಚ್ಚಾಗುತ್ತದೆ.[1]

ನಿಮ್ಮ ಆಹಾರ ಕ್ರಮದಲ್ಲಿ ಕಡಿಮೆ ಅಥವಾ ಮಧ್ಯಮ ಜಿಐ ಸ್ಕೋರನ್ನು ಹೊಂದಿರುವ ಆಹಾರವನ್ನು ಸೇರಿಸಿಕೊಳ್ಳುವ ಅಗತ್ಯವಿದೆ ಎಂದು ಈಗ ನಿಮಗೆ ತಿಳಿಯುತ್ತದೆ. ಹಾಗೆಯೇ ಹೆಚ್ಚಿನ ಜಿಐ ಸ್ಕೋರನ್ನು ಹೊಂದಿರುವ ಆಹಾರ ಸೇವಿಸದಿರಲು ಇನ್ನು ಮುಂದೆ ಪ್ರಯತ್ನಿಸಿ. ಹೆಚ್ಚಿನ ಜಿಐ ಸ್ಕೋರನ್ನು ಹೊಂದಿರುವ ಆಹಾರ ಪದಾರ್ಥಗಳು 70 ಮತ್ತು ಅದಕ್ಕಿಂತ ಹೆಚ್ಚಿನ ವ್ಯಾಪ್ತಿಯಲ್ಲಿರುತ್ತವೆ, ಮಧ್ಯಮ ಜಿಐ ಸ್ಕೋರನ್ನು ಹೊಂದಿರುವ ಆಹಾರ ಪದಾರ್ಥಗಳು 56 ರಿಂದ 69 ರ ವ್ಯಾಪ್ತಿಯಲ್ಲಿರುತ್ತವೆ ಮತ್ತು 55 ಅಥವಾ ಅದಕ್ಕಿಂತ ಕಡಿಮೆ ವ್ಯಾಪ್ತಿಯಲ್ಲಿ ಇರುವ ಆಹಾರ ಪದಾರ್ಥಗಳು ಕಡಿಮೆ ಜಿಐ ಸ್ಕೋರನ್ನು ಹೊಂದಿರುವ ಆಹಾರ ಪದಾರ್ಥಗಳಾಗಿವೆ. ನಮ್ಮಲ್ಲಿ ಹೆಚ್ಚಿನವರು ಸೇವಿಸುವ ಅಕ್ಕಿಯ ವಿಧಾನವು ದುರದೃಷ್ಟವಶಾತ್ ಮೊದಲನೆಯ ವರ್ಗಕ್ಕೆ ಸೇರುತ್ತದೆ. ಆದಾಗ್ಯೂ, ನೀವು ಈ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗಿಲ್ಲ (ಆದರೆ ಹೆಚ್ಚು ಸೇವಿಸಬೇಡಿ).

ಅಕ್ಕಿಯ ಆಹಾರ ಸೇವನೆಯನ್ನು ಸುರಕ್ಷಿತವಾಗಿ ಮುಂದುವರೆಸಲು ಯಾವುದಾದರೂ ಒಂದು ದಾರಿಯಿದೆಯೇ?

ಬೇರೆ ವಿಧದ ಅಕ್ಕಿಯನ್ನು ಬಳಸಲು ಪ್ರಯತ್ನಿಸಿ: ಬ್ರೌನ್ ರೈಸ್, ಕಾಡು ಅಕ್ಕಿ ಅಥವಾ ಸಂಸ್ಕರಿಸದ ಬಾಸ್ಮತಿ ಅಕ್ಕಿಯನ್ನು ಬಳಸಿ. ಬ್ರೌನ್ ರೈಸ್ ಬಿಳಿ ಅಕ್ಕಿಯಾಗಿದ್ದು, ಅದರಲ್ಲಿ ಪೋಷಕಾಂಶಗಳನ್ನು ಬೇರ್ಪಡಿಸಿರುವುದಿಲ್ಲ. ಫೈಬರ್ ಮತ್ತು ಮೆಗ್ನೀಸಿಯಮ್‌ನ ಅಂಶ ಈ ಅಕ್ಕಿಯಲ್ಲಿ ಹೆಚ್ಚಾಗಿರುತ್ತದೆ ಹಾಗು ಈ ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿವೆ. ದಾವತ್, ಕೊಹಿನೂರ್, ಮತ್ತು ಇಂಡಿಯಾ ಗೇಟ್‌ನಂತಹ ಬ್ರಾಂಡ್‌ಗಳಿಂದ ಮಾರಾಟವಾಗುವ ಸಂಸ್ಕರಿಸದ ಬಾಸ್ಮತಿ ಅಕ್ಕಿಯಲ್ಲಿ  ಜಿಐ ಸ್ಕೋರ್ 55 ಕ್ಕಿಂತ ಕಡಿಮೆ ಇದೆ. ಹಾಗಾಗಿ ಇದು ಆರೋಗ್ಯಕರ ಆಯ್ಕೆಯಾಗಿದೆ [2]. ಟೈಪ್ 2 ಡಯಾಬಿಟಿಸ್‌ನ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಲು ವೈಟ್ ರೈಸ್‌ಗಿಂತ ಬ್ರೌನ್ ರೈಸ್ ಹೆಚ್ಚು ಸಹಕಾರಿಯಾಗಿದೆ. 

ವಿವಿಧ ರೀತಿಯ ಅಕ್ಕಿಗಳ ಜಿಐ ಸ್ಕೋರ್ ಇಲ್ಲಿದೆ:

ಅಕ್ಕಿಯ ವಿಧಗಳು[3]ಗ್ಲೈಸೆಮಿಕ್ ಸೂಚ್ಯಂಕ (ಗ್ಲುಕೋಸ್ = 100)
ಬಿಳಿ ಅಕ್ಕಿ, ಕುಸಲಕ್ಕಿ, ಇಲ್ಲವೇ ವಿಧವನ್ನು ತಿಳಿಸದಿರುವ ಅಕ್ಕಿ 72
ತ್ವರಿತ ಅಡುಗೆಯ ಬಿಳಿ ಬಾಸ್ಮತಿ63
ಬ್ರೌನ್ ರೈಸ್, ಆವಿಯಲ್ಲಿ 50
ಸಂಸ್ಕರಿಸದ ಬಾಸ್ಮತಿ ಅಕ್ಕಿ<55


ನೀವು ಅಕ್ಕಿ ಬೇಯಿಸುವ ವಿಧಾನವನ್ನು ಬದಲಾಯಿಸಿ: ಅಕ್ಕಿಯನ್ನು ಹಬೆ ಪಾತ್ರೆಯಲ್ಲಿ ಬೇಯಿಸುವ ಬದಲು ಹೆಚ್ಚುವರಿ ನೀರಿನೊಂದಿಗೆ ಬಾಣಲೆಯಲ್ಲಿ ಬೇಯಿಸಿ. ಅಕ್ಕಿ ಬೇಯಿಸಿದ ನಂತರ, ಅದರಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕಿ. ಇದು ಪಿಷ್ಟವನ್ನು ಹೊರಹಾಕಲು ಮತ್ತು ಕಾರ್ಬೋಹೈಡ್ರೇಟ್ ಮಟ್ಟವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ನೆರವಾಗುತ್ತದೆ.

ನಿಮ್ಮ ಆಹಾರದ ಪಾಲುಗಳನ್ನು ನಿಯಂತ್ರಿಸಿ ಹಾಗೆಯೇ ನಿಮ್ಮ ಆಹಾರದಲ್ಲಿ ಸಮತೋಲನವಿರಲಿ: ನೀವು ನಿಜವಾಗಲೂ ಅನ್ನದ ಆಹಾರವನ್ನು ತಿನ್ನಲು ಬಯಸಿದರೆ, ಸ್ವಲ್ಪ ಪ್ರಮಾಣದಲ್ಲಿ ಅದನ್ನು ಸೇವಿಸಿ ಹಾಗು ನೀವು ಸೇವಿಸುವ ಆಹಾರದ ಪ್ರಮಾಣದಲ್ಲಿ ಹೆಚ್ಚಿನ ಭಾಗ, ದ್ವಿದಳ ಧಾನ್ಯಗಳು / ಬೇಳೆ, ಬೀನ್ಸ್, ಸೊಪ್ಪು ತರಕಾರಿಗಳು ಮುಂತಾದ ಆರೋಗ್ಯಕರ ಆಹಾರದ ಆಯ್ಕೆಗಳಿರಬೇಕು. ಅನ್ನ ಹಾಗು ಬೇಳೆ ಸಮತೋಲಿತ ಆಹಾರಕ್ಕೆ ಬೇಕಾದ ಒಳ್ಳೆಯ ಜೋಡಿಯಾಗಿದೆ.

ಆದರೆ ಇಲ್ಲೊಂದು ಎಚ್ಚರಿಕೆಯ ಮಾತು ಇದೆ, ನೀವು ಅನ್ನದ ಆಹಾರ ಸೇವನೆ ಕಡಿಮೆ ಮಾಡುವುದರಿಂದ, ಅನಾರೋಗ್ಯಕರವಾದ ಬೇರೆ ಆಹಾರ ಪದಾರ್ಥಗಳನ್ನು ಹೊಟ್ಟೆ ಬಿರಿಯುವಷ್ಟು ತಿನ್ನಬಹುದು ಎಂದರ್ಥವಲ್ಲ. ಡಯಾಬಿಟಿಸ್‌ ರೋಗಿಯಾಗಿ, ಬರೀ ಅನ್ನ ಅಷ್ಟೆ ಅಲ್ಲ, ನೀವು ತಿನ್ನುವ ಪ್ರತಿಯೊಂದು ಆಹಾರದ ಮೇಲೂ ನಿಗಾವಹಿಸಬೇಕು.

ಅಕ್ಕಿಯಿಂದ ತಯಾರಿಸಿದ ಇತರೆ ಆಹಾರಗಳ ಕತೆ ಏನು?

ಅಕ್ಕಿಯ ಹಿಟ್ಟಿನಿಂದ ತಯಾರಿಸಿದ ಇಡ್ಲಿ ಹಾಗು ದೋಸೆಯನ್ನು ಸಮತೋಲಿತ ಆಹಾರವನ್ನಾಗಿಸಲು ಅವುಗಳನ್ನು ಬೇಳೆಯ ಜೊತೆ ತಿನ್ನಬೇಕು. ನಿಮ್ಮ ಇಡ್ಲಿ ಹಿಟ್ಟಿನಲ್ಲಿ ಅಕ್ಕಿಯ ಒಂದು ಭಾಗದ ಬದಲು ಓಟ್ಸ್ ಸೇರಿಸಲು ಪ್ರಯತ್ನಿಸಿ (ಸಂಸ್ಕರಿಸದ ಓಟ್ಸ್‌ ಹಾಕಿ, ಸಂಸ್ಕರಿಸಿದ್ದು ಬೇಡ) ಇದರಿಂದ ಇಡ್ಲಿಯಲ್ಲಿ ಅಕ್ಕಿಯ ಬಳಕೆ ಕಡಿಮೆಯಾಗುತ್ತದೆ. ಅವಲಕ್ಕಿಯಂತಹ ಆಹಾರವನ್ನು ಸಮತೋಲನ ಆಹಾರವನ್ನಾಗಿಸಲು ಪ್ರೋಟೀನಾಂಶವಿರುವ ಆಹಾರ ಬೇಕಾಗುತ್ತದೆ. ಆದ್ದರಿಂದ ಅವಲಕ್ಕಿಯನ್ನು ಹಾಲು, ಮೊಸರಿನೊಂದಿಗೆ ಸೇವಿಸಿ ಇಲ್ಲವೇ ಅದಕ್ಕೆ ಸೇವ್ ಬದಲು ಮೊಳಕೆ ಕಾಳುಗಳಿಂದ ಸಿಂಗರಿಸಿ ಸೇವಿಸಿ. ಇಲ್ಲವೇ ಇನ್ನೊಂದು ಒಳ್ಳೆಯ ದಾರಿ ಎಂದರೆ, ಬಿಳಿ ಅವಲಕ್ಕಿ ಬದಲು ಕೆಂಪವಲಕ್ಕಿ ಇಲ್ಲವೇ ಕಂದವಲಕ್ಕಿಯನ್ನು ಬಳಸುವುದು.

ಆರೋಗ್ಯಕರವಾದ ಪರ್ಯಾಯ ಧಾನ್ಯಗಳು:

ನಿಮ್ಮ ಡಯಾಬಿಟಿಸನ್ನು ನಿಯಂತ್ರಿಸುವಂತಹ ಬೇರೆ ಆಹಾರ ಧಾನ್ಯಗಳನ್ನು ಪ್ರಯತ್ನಿಸಿ, ಆದರೆ ಆರೋಗ್ಯಕರ ಆಹಾರಕ್ರಮಕ್ಕೆ ಅಂಟಿಕೊಂಡಿರಿ. ಕಡಿಮೆ ಜಿಐ ಸ್ಕೋರ್ ಹೊಂದಿರುವ ಓಟ್ಸ್‌, ಕಿರುಧಾನ್ಯಗಳು (ಅಥವಾ ರಾಗಿ), ಬಾರ್ಲಿ (ಅಥವಾ ಜೌ) ಮತ್ತು ಬಕ್‌ವೀಟ್ (ಅಥವಾ ಬಕ್‌ವೀಟ್‌ ಹಿಟ್ಟು) ಇವನ್ನು ಸೇವಿಸಲು ಪ್ರಯತ್ನಿಸಿ.

ಆರೋಗ್ಯಕರ ಅಕ್ಕಿಯ ಪಾಕವಿಧಾನಗಳನ್ನು ನೀವು ಪ್ರಯತ್ನಿಸಬೇಕು:

ಅಕ್ಕಿಯ ಬಗ್ಗೆ ಈ ಎಲ್ಲಾ ಮಾತುಗಳು ನಿಮ್ಮನ್ನು ಅಕ್ಕಿಗಾಗಿ ಹಾತೊರೆಯುವಂತೆ ಮಾಡಿದರೆ, ನೀವು ಪ್ರಯತ್ನಿಸಬಹುದಾದ ಕೆಲವು ಆರೋಗ್ಯಕರ ಅಕ್ಕಿಯ ಅಡುಗೆಯ ಬಗೆಗಳು ಇಲ್ಲಿವೆ!

ಬ್ರೌನ್ ರೈಸ್ ಪಲಾವ್ ಮಾಡುವ ಬಗೆ

ಬ್ರೌನ್ ರೈಸ್ ರುಚಿಕರವಾಗಿರಲು ಸಾಧ್ಯವಿಲ್ಲ ಎಂದು ಯಾರು ಹೇಳಿದ್ದು? ಬ್ರೌನ್ ರೈಸ್ ಪಲಾವ್ ಮಾಡುವ ಸುಲಭವಾದ ಬಗೆಯನ್ನು ಇಲ್ಲಿ ನೋಡಿ, ನೀವಿದನ್ನು ಸಂತೋಷದಿಂದ ಸೇವಿಸುತ್ತೀರಿ ಎಂದು ನಮಗೆ ಖಾತ್ರಿಯಿದೆ ( ಆ ಆಲೂಗಡ್ಡೆಯನ್ನು ಮಾತ್ರ ಹಾಕಬೇಡಿ!).

Courtesy: YouTube/Rajshri Food

ಅಮರಂತ್ ಅಕ್ಕಿ (ರಾಮದಾನ)

ಅಮರಂತ್ ಅಕ್ಕಿಯು ಹೈಪರ್‌ಗ್ಲೈಸೆಮಿಯಾವನ್ನು ನಿಯಂತ್ರಿಸಲು ಮತ್ತು ಡಯಾಬಿಟಿಸ್ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.[4]

Courtesy: YouTube/SasiRekhas Kitchen

ಚೈನೀಸ್ ಫ್ರೈಡ್ ರೈಸ್

ಈ ಚೀನೀ ಅಡುಗೆ ಬಗೆಯು ಬಹಳಷ್ಟು ತರಕಾರಿ, ಫೈಬರ್ ಭರಿತ ಕಂದು ಅಕ್ಕಿ ಮತ್ತು ಕಡಿಮೆ ಎಣ್ಣೆಯಿಂದ ಕೂಡಿರುತ್ತದೆ ಹಾಗಾಗಿ ಈ ಚೀನೀ ಪಾಕವಿಧಾನವನ್ನು ನಿಮ್ಮ ಮುಂದಿನ ಊಟಕ್ಕೆ ಪ್ರಯತ್ನಿಸಲೇಬೇಕು.


Courtesy: YouTube/Tarla Dalal

ಕೊನೆಯದಾಗಿ – ನೀವು ಅಕ್ಕಿಯನ್ನು ಸಂಪೂರ್ಣವಾಗಿ ಬಿಡಬೇಕಾಗಿಲ್ಲ. ಆದರೆ ನೀವು ಅದನ್ನು ಜಾಣತನದಿಂದ ಬಳಸಬೇಕು. ನೀವು ತಿನ್ನುವ ಅಕ್ಕಿಯ ವಿಧ, ಎಷ್ಟು ತಿನ್ನುತ್ತೀರಿ ಹಾಗು ಯಾವುದರ ಜೊತೆ ಅದನ್ನು ತಿನ್ನುತ್ತೀರಿ ಎಂಬೆಲ್ಲಾ ಸಂಗತಿಗಳು, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಅಕ್ಕಿಯ ಪರಿಣಾಮವನ್ನು ನಿರ್ಧರಿಸಬಹುದು. ಆದ್ದರಿಂದ, ಜಾಗರೂಕರಾಗಿರಿ, ಹಾಗೆಯೇ ನಿಮ್ಮ ಊಟವನ್ನು ಆನಂದಿಸಿ!

 

ಉಲ್ಲೇಖ:

  1. Venn BJ, Green TJ. Glycemic index and glycemic load: measurement issues and their effect on diet-disease relationships. Eur J Clin Nutr. 2007 Dec;61 Suppl 1:S122-31. Review. PubMed PMID: 17992183.
  2. D. Srinivasa, A. Raman, P. Meena, G. Chitale, A. Marwaha, K. J. Jainani; Glycaemic Index (GI) of an Indian Branded Thermally Treated Basmati Rice Variety : A Multi Centric Study; Journal of the Association of Physicians of India, October 2013, VOL. 61, 32
  3. F. S. Atkinson, K. Foster-Powell, J. C. Brand-Miller; International tables of glycemic index and glycemic load values, Diabetes Care; December 2008; 31, 12, 2281-2283
  4. Kim HK, Kim MJ, Cho HY, Kim EK, Shin DH. Antioxidative and anti-diabetic
    effects of amaranth (Amaranthus esculantus) in streptozotocin-induced diabetic
    rats. Cell Biochem Funct. 2006 May-Jun;24(3):195-9. PubMed PMID: 16634092

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.