Can gut bacteria cause heart failure
Reading Time: 3 minutes

ಎಲ್ಲಾ ರೋಗಗಳು ಕರುಳಿನಿಂದ ಆರಂಭವಾಗುತ್ತವೆ. – ಹಿಪೊಕ್ರೆಟಿಸ್1

ಹೃದಯ ವೈಫಲ್ಯದ ಬಗ್ಗೆ ಎಲ್ಲಾ ತರಹದ ಸಂಶೋಧನೆಗಳು ನಡೆದಿವೆ ಮತ್ತು ಅದರ ಚಿಕಿತ್ಸೆಯಲ್ಲಿ ಅಭಿವೃದ್ಧಿಯೂ ಆಗಿದೆ, ಆದರೂ ವಿಶ್ವದಲ್ಲಿ ನಡೆಯುತ್ತಿರುವ ಹಲವು ಸಾವುಗಳಿಗೆ ಹೃದಯ ವೈಫಲ್ಯವೇ ಪ್ರಮುಖ ಕಾರಣವಾಗಿದೆ.2 ಚಿಕಿತ್ಸೆಯ ಹೊಸ ವಿಧಾನಗಳ ಅಗತ್ಯವು ಹೃದಯ ವೈಫಲ್ಯದ ಬೆಳವಣಿಗೆಯಲ್ಲಿ ಕರುಳಿನೊಳಗಿನ ಸೂಕ್ಷ್ಮಜೀವಿಗಳ ಪಾತ್ರವನ್ನು ಅನ್ವೇಷಿಸಲು ಸಂಶೋಧಕರನ್ನು ಪ್ರೇರೇಪಿಸಿದೆ.  

ಕರುಳಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಒಟ್ಟಾಗಿ ಕರುಳಿನ ಮೈಕ್ರೋಬಯೋಟಾ ಎಂದು ಕರೆಯಲಾಗುತ್ತದೆ.1 ಕರುಳಿನ ಬ್ಯಾಕ್ಟೀರಿಯಾದಲ್ಲಾಗುವ ಬದಲಾವಣೆಯು, ಹೃದಯ ರೋಗ ಹಾಗೂ ಇಡೀ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತದೆ ಎಂದು ಇತ್ತೀಚಿಗೆ ನಡೆದ ಅಧ್ಯಯನಗಳಿಂದ ತಿಳಿದು ಬಂದಿದೆ.  

ಮೊದಲು ಕರುಳಿನ ಮೈಕ್ರೋಬಯೋಟಾ ಬಗ್ಗೆ ತಿಳಿಯೋಣ!

ಸರಿಸುಮಾರು 2000 ಕ್ಕೂ ಹೆಚ್ಚು ವಿವಿಧ ಜಾತಿಯ ಸೂಕ್ಷ್ಮ ಜೀವಿಗಳಿವೆ, ಅದರಲ್ಲಿ ಹೆಚ್ಚಾಗಿ ಬ್ಯಾಕ್ಟೀರಿಯಾಗಳು ನಮ್ಮ ದೇಹದಲ್ಲಿರುತ್ತವೆ, ಅದರಲ್ಲೂ ಹೆಚ್ಚಿನವು ಕಂಡುಬರುವುದು ಕರುಳಿನಲ್ಲಿ. ಒಬ್ಬ ಆರೋಗ್ಯವಂತ ವಯಸ್ಕರ ಕರುಳಿನಲ್ಲಿ ಸುಮಾರು 100 ಟ್ರಿಲಿಯನ್ ಬ್ಯಾಕ್ಟಿರಿಯಾಗಳು ವಾಸ ಮಾಡುತ್ತಿರುತ್ತವೆ, ಎಂಬ ವಿಷಯ ನಿಮ್ಮಲ್ಲಿ ಆಶ್ಚರ್ಯ ಮೂಡಿಸಬಹುದು. 

ಹುಟ್ಟಿನಿಂದಲೇ ನಮ್ಮ ಕರುಳಿನಲ್ಲಿ ಬ್ಯಾಕ್ಟೀರಿಯಾಗಳು ಇರುವುದಿಲ್ಲ; ಬೆಳೆಯುವಾಗ ಅವು ಹೊರಗಿನ ವಾತಾವರಣದಿಂದ ನಮ್ಮ ದೇಹಕ್ಕೆ ಸೇರುತ್ತವೆ. ಹೊಸದಾಗಿ ಜನಿಸಿದ ಮಗುವಿನಲ್ಲಿ ಇದ್ದ ಸೂಕ್ಷ್ಮ ಜೀವಿಗಳು, ಆ ಮುಗುವು ಮುಂದೆ ಬೆಳೆದು ದೊಡ್ಡವರಾದ ಮೇಲೆ ಇರುವ ಸೂಕ್ಷ್ಮಜೀವಿಗಳು ವಿಭಿನ್ನವಾಗಿರುತ್ತವೆ. ಆ ಮಗುವಿನ ಆಹಾರಕ್ರಮ ಹಾಗೂ ಇರುವ ವಾತಾವರಣದಿಂದ ಹೀಗೆ ವಿಭಿನ್ನ ಸೂಕ್ಷ್ಮಜೀವಿಗಳ ಪ್ರವೇಶ ದೇಹಕ್ಕಾಗುತ್ತವೆ.1  

ಕರುಳಿನ ಮೈಕ್ರೋಬಯೋಟಾವು, ಸಾವಿರಾರು ವರ್ಷಗಳಿಂದ ವಿಕಸನಗೊಂಡಿರುವ ಮಾನವ ಕುಲದೊಂದಿಗೆ ಸಹಜೀವನದ ಸಂಬಂಧವನ್ನು ರೂಪಿಸಿದೆ.3 ಕರುಳಿನ ಮೈಕ್ರೋಬಯೋಟಾದ ಸಾಮಾನ್ಯ ಕಾರ್ಯವು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ, ಏಕೆಂದರೆ ಈ ಕಾರ್ಯವು ನಮ್ಮ ದೇಹದ ಕೆಲಸಗಳಲ್ಲಿ ಅನೇಕ ಮಹತ್ವದ ಪಾತ್ರಗಳನ್ನು ವಹಿಸುತ್ತದೆ, ಅವು ಈ ಕೆಳಗಿನಂತಿವೆ:

  • ದೇಹಕ್ಕೆ ಸಾಮಾನ್ಯವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಪೋಷಕಾಂಶಗಳ ಜೀರ್ಣಕ್ರಿಯೆಗೆ ನೆರವಾಗುವುದು
  • ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು
  • ಹಾರ್ಮೋನುಗಳು ಮತ್ತು ಜೀವಸತ್ವಗಳನ್ನು ಉತ್ಪಾದಿಸುವುದು
  • ಸೋಂಕನ್ನು ತರುವ ಅಥವಾ ವಿಷವನ್ನು ಬಿಡುಗಡೆ ಮಾಡುವ ಬ್ಯಾಕ್ಟೀರಿಯಾಗಳು, ದೇಹಕ್ಕೆ ವಲಸೆ ಬರದಂತೆ ತಡೆಯುವುದು.2 

ಕರುಳಿನ ಬ್ಯಾಕ್ಟೀರಿಯಾವು ಹೇಗೆ ಹೃದಯ ವೈಫಲ್ಯದ ಸಮಸ್ಯೆಯನ್ನು ತೀವ್ರವಾಗಿಸುತ್ತದೆ?

ಹೆಚ್ಚಿನ ಕೊಬ್ಬಿನಾಂಶವಿರುವ ಡೈರಿ ಉತ್ಪನ್ನಗಳು, ಮೊಟ್ಟೆಯ ಮಧ್ಯದಲ್ಲಿರುವ ಹಳದಿ ಭಾಗ, ಹಾಗೂ ಮಾಂಸ, ಇವುಗಳಲ್ಲಿರುವ ಕೆಲವು ಆಹಾರ ಪೋಷಕಾಂಶಗಳನ್ನು ಕರುಳಿನ ಸೂಕ್ಷ್ಮ ಜೀವಿಗಳು ತಿನ್ನುತ್ತವೆ. ಹೀಗೆ ತಿನ್ನುವಾಗ ಅವು ಟ್ರಿಮೆಥೈಲಮೈನ್ (ಟಿಎಮ್‌ಎ) ಎಂಬ ದ್ರವ್ಯವನ್ನು ಬಿಡುಗಡೆ ಮಾಡುತ್ತವೆ. ನಂತರ ಲಿವರ್ ಈ ಟಿಎಮ್‌ಎ ಅನ್ನು ಟ್ರಿಮೆಥೈಲಮೈನ್-ಎನ್-ಆಕ್ಸೈಡ್ (ಟಿಎಮ್‌ಎಒ) ಆಗಿ ಬದಲಾಯಿಸುತ್ತದೆ, ಈ ಟಿಎಮ್‌ಎಒ ಮುಂದೆ ಹಲವು ಹೃದಯ-ಸಂಬಂಧಿ ಕಾಯಿಲೆಗಳ ಬೆಳವಣಿಗೆಗೆ ಕಾರಣವಾಗುತ್ತದೆ.4

ಕರುಳಿನ ಮೈಕ್ರೋಬಯೋಟಾದ ರಚನೆಯಲ್ಲಾಗುವ ಬದಲಾವಣೆಯನ್ನು, ಡಿಸ್ಬಯೋಸಿಸ್ ಎಂದು ಕರೆಯಲಾಗುತ್ತದೆ. ಇದು ಟಿಎಮ್‌ಎಒ ಮತ್ತು ಇತರ ವಿಷ ಜೀವಾಣುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.5 ಟಿಎಮ್‌ಎಒ ನಿಂದ ರಕ್ತನಾಳಗಳ ಒಳಗಿನ ಗೋಡೆಗಳ ಮೇಲೆ ಕೊಲೆಸ್ಟರಾಲ್ ಕೂರುತ್ತದೆ. ದೀರ್ಘಕಾಲದವರೆಗೆ ರಕ್ತದಲ್ಲಿ ಟಿಎಮ್‌ಎಒ ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಹೃದಯ-ಸಂಬಂಧಿ ಕಾಯಿಲೆಗಳು ಮತ್ತು ಸಾವು ಬರುವ ಅವಕಾಶಗಳು ದ್ವಿಗುಣವಾಗುತ್ತವೆ. ರಕ್ತದಲ್ಲಿನ ಟಿಎಮ್‌ಎಒ ಮಟ್ಟವನ್ನು ಹೃದಯ ಕಾಯಿಲೆಗಳ ಅಪಾಯದ ಸೂಚಕವೆಂದು ತಿಳಿಯಬಹುದು.4

ದೀರ್ಘಕಾಲದ ಕಿಡ್ನಿ ಕಾಯಿಲೆ (ಸಿಕೆಡಿ) ಇರುವವರಲ್ಲಿ, ಕರುಳಿನ ಮೈಕ್ರೋಬಯೋಟಾದ ರಚನೆಯಲ್ಲಿ ತೊಂದರೆ ಇರುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಸಿಕೆಡಿಯಲ್ಲಿ, ಹೆಚ್ಚಾಗಿರುವ ಟಿಎಮ್‌ಎಒ ಮತ್ತು ಕರುಳಿನ ಬ್ಯಾಕ್ಟೀರಿಯಾದ ಡಿಎನ್‌ಎ ಹಾಗೂ ಕರುಳು ಉತ್ಪಾದಿಸುವ ವಿಷ ಜೀವಾಣುಗಳು (ಯುರೆಮಿಕ್ ವಿಷ ಜೀವಾಣು) ರಕ್ತದೊಂದಿಗೆ ಸೇರುವುದರಿಂದ, ವಿವಿಧ ಅಂಗಗಳ ಕೆಲಸಕ್ಕೆ ಅಡ್ಡಿ, ಬ್ಯಾಕ್ಟೀರಿಯಾದಿಂದ ಸೋಂಕು ಹಾಗೂ ಆಘಾತ, ಈ ತರಹದ ಸಮಸ್ಯೆಗಳಾಗಬಹುದು.5,6 ಹೃದಯ ವೈಫಲ್ಯದ ಪ್ರಗತಿ ಹೆಚ್ಚಾಗಲು ಯುರೆಮಿಕ್ ವಿಷ ಜೀವಾಣುಗಳು ಕಾರಣವಾಗಿವೆ ಎಂದು ಕಂಡುಬಂದಿದೆ.5

ಮಧ್ಯಮ ವಯಸ್ಸಿನ ಸುಮಾರು 617 ಮಹಿಳೆಯರಿಂದ ಪಡೆದ ಸಂಶೋಧನೆಯ ಮಾಹಿತಿಯು, ಹೆಚ್ಚು ವಿಭಿನ್ನವಾಗಿರದ ಕರುಳಿನ ಬ್ಯಾಕ್ಟೀರಿಯಾದಿಂದ, ಹೃದಯ ರಕ್ತನಾಳಗಳು ಗಟ್ಟಿಯಾಗಬಹುದು, ಇದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ತಿಳಿಸುತ್ತದೆ. ಬೊಜ್ಜು ಅಥವಾ ಧೂಮಪಾನದ ಹೊರತಾಗಿ, ಯುವಕ-ಯುವತಿಯರಲ್ಲಿ ಕಂಡುಬರುವ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕರುಳಿನ ಬ್ಯಾಕ್ಟೀರಿಯಾ ಕಾರಣವಾಗಬಹುದು ಎಂದು ಸಂಶೋಧಕರು ಅನುಮಾನಿಸಿದ್ದಾರೆ.7

ಹೀಗಾಗಿ, ಕರುಳಿನ ಡಿಸ್ಬಯೋಸಿಸ್ನಲ್ಲಿನ ಬದಲಾವಣೆಗಳು ಹೃದಯ ವೈಫಲ್ಯಕ್ಕೆ ಪ್ರಮುಖ ಕಾರಣವಾಗುವ ಸಾಧ್ಯತೆಯಿದೆ ಎಂದು ನಾವು ನೋಡಬಹುದು.

ಕರುಳಿನ ಮೈಕ್ರೋಬಯೋಟಾವನ್ನು ನಾನು ಹತೋಟಿಯಲ್ಲಿಡುವುದು ಹೇಗೆ? 

ಕರುಳಿನ ಡಿಸ್ಬಯೋಸಿಸ್ ಅನ್ನು ಕಡಿಮೆ ಮಾಡುವ ಒಳ್ಳೆಯ ಉಪಾವೆಂದರೆ ಆಹಾರಕ್ರಮದಲ್ಲಿ ಮಾರ್ಪಾಡು ಮಾಡಿಕೊಳ್ಳುವುದರ ಜೊತೆಗೆ ಪ್ರಿಬಯಾಟಿಕ್‌ಗಳು ಮತ್ತು ಪ್ರೋಬಯಾಟಿಕ್‌ಗಳನ್ನು ಆಹಾರಕ್ರಮದಲ್ಲಿ ಬಳಸುವುದು.5

  • ಆಹಾರಕ್ರಮದಲ್ಲಿ ಮಾರ್ಪಾಡು: ಆಹಾರಕ್ರಮದ ಅಭ್ಯಾಸಗಳು ಕರುಳಿನ ಮೈಕ್ರೋಬಯೋಟಾದ ರಚನೆಯ ಮೇಲೆ ಪರಿಣಾಮ ಬೀರುತ್ತವೆ. ಸಂಸ್ಕರಿಸದ ಧಾನ್ಯಗಳು, ನಟ್ಸ್, ದ್ವಿದಳ ಧಾನ್ಯಗಳು, ಹಣ್ಣುಗಳು, ಆಲಿವ್ ಎಣ್ಣೆ ಮತ್ತು ಮೀನುಗಳಿಂದ ಗಣನೀಯ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಆಹಾರಕ್ರಮ ಸೇವಿಸುವುದು ಹಾಗೂ ಡೈರಿ ಉತ್ಪನ್ನಗಳು ಮತ್ತು ಕೆಂಪು ಮಾಂಸದ ಸೇವನೆಯನ್ನು ಕುಗ್ಗಿಸುವುದು, ಕರುಳಿನ ಮೈಕ್ರೋಬಯೋಟಾವನ್ನು ನಿಯಂತ್ರಿಸಲು ಶಿಫಾರಸು ಮಾಡಲಾಗಿರುವ ಆಹಾರಕ್ರಮ.5
  • ಪ್ರೋಬಯಾಟಿಕ್‌ಗಳು ​​ಮತ್ತು ಪ್ರಿಬಯಾಟಿಕ್‌ಗಳು: ಪ್ರೋಬಯಾಟಿಕ್‌ಗಳು ಜೀವಂತ ಬ್ಯಾಕ್ಟೀರಿಯಾಗಳಾಗಿದ್ದು, ಅವು ಕರುಳಿನ ಮೈಕ್ರೋಬಯೋಟಾವನ್ನು ಸರಿದೂಗಿಸಲು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಬಳಸುವ ಪ್ರೋಬಯಾಟಿಕ್ ಲ್ಯಾಕ್ಟೋಬಾಸಿಲಸ್‌ನ ವ್ಯವಸ್ಥೆ, ಕರುಳಿಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಸಿಕೆಡಿ ರೋಗಿಗಳಲ್ಲಿ ವಿಷ ಜೀವಾಣುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.5 ಪ್ರಿಬಯಾಟಿಕ್‌ಗಳು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವ ದ್ರವ್ಯ. ರಕ್ತದೊತ್ತಡವನ್ನು ಕಡಿಮೆ ಮಾಡುವಂತಹ ದ್ರವ್ಯವನ್ನು ಉತ್ಪಾದಿಸಲು ಬ್ಯಾಕ್ಟೀರಿಯಾಗಳು ಪ್ರಿಬಯಾಟಿಕ್‌ಗಳನ್ನು ಬಳಸಿಕೊಳ್ಳುತ್ತವೆ.8

ಫೈಬರ್ ಹೆಚ್ಚಾಗಿರುವ ಆಹಾರಕ್ರಮದಿಂದ, ಕರುಳಿನ ಡಿಸ್ಬಯೋಸಿಸ್ ಕಡಿಮೆಯಾಗಿದೆ, ರಕ್ತದೊತ್ತಡ ಕಡಿಮೆಯಾಗಿದೆ ಮತ್ತು ಅಧಿಕ ರಕ್ತದೊತ್ತಡದಿಂದ ಉಂಟಾಗುವ ಹೃದಯ ವೈಫಲ್ಯ ಸಮಸ್ಯೆ ಇರುವವರ ಹೃದಯವು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.2

ಕರುಳಿನ ಮೈಕ್ರೋಬಯೋಟಾದಲ್ಲಿ ಏನೇ ವ್ಯತ್ಯಾಸವಾದರೂ, ಅದು ಹೃದಯಾಘಾತಕ್ಕೆ ಕಾರಣವಾಗಬಹುದು, ಹಾಗಾಗಿ ನಿಮ್ಮ ಕರುಳನ್ನು ಎಂದಿನಂತೆ ಆರೋಗ್ಯವಾಗಿರಿಸಿ ಎಂದು ನಾವು ಸೂಚಿಸುತ್ತೇವೆ. ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡುವುದರ ಜೊತೆಗೆ ಪ್ರಿಬಯಾಟಿಕ್‌ಗಳು ಮತ್ತು ಪ್ರೋಬಯಾಟಿಕ್‌ಗಳನ್ನುನಿಮ್ಮ ಆಹಾರಕ್ರಮದಲ್ಲಿ ಖಾಯಂ ಆಗಿ ಅಳವಡಿಸಿಕೊಳ್ಳುವುದರ ಮೂಲಕ ಕರುಳಿನ ಮೈಕ್ರೋಬಯಾಟವನ್ನು ಆರೋಗ್ಯಕರವಾಗಿಸಬಹುದು. ಹೀಗೆ ಕರುಳಿನ ಮೈಕ್ರೋಬಯೋಟಾವನ್ನು ಆರೋಗ್ಯಕರವಾಗಿಸುವುದರಿಂದ ಹೃದಯದ ಕಾಯಿಲೆಗಳಿಗೆ ಕಾರಣವಾಗುವ ಕನಿಷ್ಟ ಒಂದು ಅಂಶವನ್ನಾದರೂ ತಪ್ಪಿಸಬಹುದು.

 

ಉಲ್ಲೇಖಗಳು::

  1. Harikrishnan S. Diet, the gut microbiome and heart failure. Card Fail Rev. 2019 May 24;5(2):119-122. doi: 10.15420/cfr.2018.39.2.
  2. Branchereau M, Burcelin R, Heymes C. The gut microbiome and heart failure: A better gut for a better heart. Rev Endocr Metab Disord. 2019 Nov 9. doi: 10.1007/s11154-019-09519-7. [Epub ahead of print].
  3. Thursby E, Juge N. Introduction to the human gut microbiota. Biochem J. 2017 May 16;474(11):1823-1836. doi: 10.1042/BCJ20160510.
  4. Cleveland Clinic. How gut bacteria may help curb your heart disease [Internet]. [updated 2015 Dec 31; cited 2019 Nov 22]. Available from: https://health.clevelandclinic.org/how-gut-bacteria-may-help-curb-heart-disease/.
  5. Kitai T, Kirsop J, Tang WH. Exploring the microbiome in heart failure. Curr Heart Fail Rep. 2016 Apr;13(2):103-9. doi: 10.1007/s11897-016-0285-9.
  6. National Cancer Institute. Systemic inflammatory response syndrome [Internet]. [cited 2019 Nov 22]. Available from: https://www.cancer.gov/publications/dictionaries/cancer-terms/def/systemic-inflammatory-response-syndrome.
  7. European Society of Cardiology. New link between gut microbiome and artery hardening discovered [Internet]. [updated 2018 May 10; cited 2019 Nov 22]. Available from: https://www.escardio.org/The-ESC/Press-Office/Press-releases/new-link-between-gut-microbiome-and-artery-hardening-discovered.
  8. John Hopkins Medicine. The power of gut bacteria and probiotics for heart health [Internet]. [cited 2019 Nov 22]. Available from: https://www.hopkinsmedicine.org/health/wellness-and-prevention/the-power-of-gut-bacteria-and-probiotics-for-heart-health.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.