IHD and mental health
Reading Time: 2 minutes


ಹೃದಯ ಸಂಬಂಧಿ ಕಾಯಿಲೆಗಳು (ಸಿವಿಡಿ) ಮತ್ತು ಮಾನಸಿಕ ಕಾಯಿಲೆಗಳು, ಜಗತ್ತಿನ ಕಾಯಿಲೆಗಳ ಹೊರೆಗೆ ಪ್ರಮುಖ ಪಾಲುದಾರರಾಗಿವೆ. ಪ್ರಪಂಚದಾದ್ಯಂತ ಸಂಭವಿಸುವ ಸಾವುಗಳಿಗೆ ಸಿವಿಡಿ ಪ್ರಮುಖ ಕಾರಣವಾಗಿದ್ದು, 7.4 ದಶಲಕ್ಷ ಜನರು ಇಸ್ಕೆಮಿಕ್ ಹೃದ್ರೋಗ (ಐಎಚ್‌ಡಿ) ಮತ್ತು ಕೊರೋನರಿ ಆರ್ಟರಿ ರೋಗದಿಂದ (ಸಿಎಡಿ) ಸಾವಿಗೀಡಾಗುತ್ತಾರೆ. ಐಎಚ್‌ಡಿ ಎಂಬುದು ಒಂದು ಸ್ಥಿತಿಯಾಗಿದ್ದು, ಆರ್ಟರಿಯಲ್ಲಿ ಪ್ಲೇಕ್‌ ಕಟ್ಟಿಕೊಂಡು ಹೃದಯಕ್ಕೆ ರಕ್ತಸಂಚಾರವಾಗದಂತೆ ಮಾಡುತ್ತದೆ.
[1] ಐಎಚ್‌ಡಿಯನ್ನು ತಂದೊಡ್ಡುವ ಅಪಾಯಕಾರಿ ಅಂಶಗಳು:[1]

 • ಅಧಿಕ ರಕ್ತದೊತ್ತಡ (ಆರ್ಟೀರಿಯಲ್ ರಕ್ತದೊತ್ತಡವು ಒಳಗೊಂಡಂತೆ)
 • ಡಯಾಬಿಟಿಸ್
 • ಡಿಸ್ಲಿಪಿಡೀಮಿಯಾ
 • ಧೂಮಪಾನ
 • ಬೊಜ್ಜು
 • ದೈಹಿಕ ನಿಷ್ಕ್ರಿಯತೆ
 • ಒತ್ತಡ
 • ಪುರಷ ಲಿಂಗ
 • ಕುಟುಂಬದ ಐಎಚ್‌ಡಿ ಹಿನ್ನೆಲೆ

ಮಾನಸಿಕ ಅಸ್ವಸ್ಥತೆ ಅಥವಾ ಮಾನಸಿಕ ತೊಳಲಾಟ, ಇವು ವ್ಯಕ್ತಿಯು ಜೀವನದಲ್ಲಿ ಗೊಂದಲ ಮತ್ತು ತೊಂದರೆಗಳು ಎದುರಾದಾಗ ಅನುಭವಿಸುವ ರೋಗಲಕ್ಷಣಗಳನ್ನು ಹೆಸರಿಸಲು ಬಳಸುವ ಪದಗಳಾಗಿವೆ. ಮಾನಸಿಕ ತೊಳಲಾಟಕ್ಕೆ ಒಳಗಾದ ವ್ಯಕ್ತಿಯು ವೈದ್ಯಕೀಯ ಅರ್ಥದಲ್ಲಿ ನಿಜವಾಗಿ “ಅನಾರೋಗ್ಯ” ಕ್ಕೊಳಗಾಗದೆ ಕೋಪ, ಆತಂಕ, ಭ್ರಮೆ, ಖಿನ್ನತೆ ಮತ್ತು ಗೊಂದಲಮಯ ಭಾವನೆಗಳಂತಹ ಲಕ್ಷಣಗಳನ್ನು ಹೊರಹಾಕಬಹುದು, ಹಾಗೆಯೇ ಮಾನಸಿಕ ತೊಳಲಾಟವು, ವೈದ್ಯಕೀಯವಾಗಿ ವ್ಯಾಖ್ಯಾನಿಸಲಾದ ರೋಗಲಕ್ಷಣಗಳನ್ನು ಅಥವಾ ಸ್ಥಿತಿಯನ್ನು ಗುಂಪಾಗಿ ಒಟ್ಟುಗೂಡಿಸುತ್ತದೆ.[2] ರೋಗದ ಹೊರತಾಗಿಯು, ಒಬ್ಬ ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಸನ್ನಿವೇಶಗಳು:[2]

 • ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ
 • ಒತ್ತಡ
 • ನಿರುದ್ಯೋಗ
 • ನಿದ್ರೆಯ ಕೊರತೆ
 • ನಿಂದನೆ
 • ಅಪಘಾತ
 • ಆಲ್ಕೋಹಾಲ್ ಅಥವಾ ಮಾದಕ ವಸ್ತುಗಳ ಬಳಕೆ
ಇಸ್ಕೀಮಿಕ್ ಹೃದ್ರೋಗ ಮತ್ತು ಮಾನಸಿಕ ತೊಳಲಾಟದ ನಡುವಿನ ಸಂಬಂಧ

ಮಾನಸಿಕ ಅಸ್ವಸ್ಥತೆ ಮತ್ತು ಐಎಚ್‌ಡಿ ನಡುವೆ ಸಂಬಂಧ ಇರುವುದು ಅಧ್ಯಯನಗಳ ಮೂಲಕ ಬೆಳಕಿಗೆ ಬಂದಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಲ್ಲಿ ಐಎಚ್‌ಡಿ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ, ಐಎಚ್‌ಡಿ ಹೊಂದಿರುವ ರೋಗಿಗಳು ಕೂಡ ಹೆಚ್ಚು ಮಾನಸಿಕ ತೊಳಲಾಟಕ್ಕೀಡಾಗಬಹುದು.

ಹೃದ್ರೋಗವನ್ನು ಹೊಂದಿರುವ ರೋಗಿಗಳಲ್ಲಿ ಕಂಡುಬರುವ ಸಾಮಾನ್ಯ ಮಾನಸಿಕ ಅಸ್ವಸ್ಥತೆಗಳು.[1]

 • ಖಿನ್ನತೆ
 • ಸ್ಕಿಜೋಫ್ರೇನಿಯಾ
 • ಆಂಕ್ಸೈಟಿ ಡಿಸಾರ್ಡರ್
 • ಪೋಸ್ಟ್-ಟ್ರಾಮಾಟಿಕ್ ಒತ್ತಡದ ಕಾಯಿಲೆ
 • ಬೈಪೋಲಾರ್ ಡಿಸಾರ್ಡರ್

ಪ್ರಪಂಚದಾದ್ಯಂತ ಎಲ್ಲಾ ವಯೋಮಾನದ ಸುಮಾರು 300 ದಶಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸುತ್ತಿರುವ ಕಾಯಿಲೆಗಳಲ್ಲಿ ಖಿನ್ನತೆಯು ಒಂದು. ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ, ಸಿಎಡಿ ರೋಗಿಗಳಲ್ಲಿ ಖಿನ್ನತೆಯ ಹರಡುವಿಕೆಯು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಖಿನ್ನತೆಯು, ಐಎಚ್‌ಡಿ ಮತ್ತು ಅದಕ್ಕೆ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಹಾಗೂ ಮರಣವನ್ನು ತಂದೊಡ್ಡುವ ಅಪಾಯಕಾರಿ ಅಂಶವಾಗಿದೆ ಎಂಬುದನ್ನು ಅನೇಕ ವರದಿಗಳು ದೃಢಪಡಿಸುತ್ತವೆ.[1] ಐಎಚ್‌ಡಿ ಮತ್ತು ಖಿನ್ನತೆ ಸಂಬಂಧಿತ ಹೆಚ್ಚಿನ ಸಂಶೋಧನೆಗಳನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಸಲಾಗಿದೆ.[3]

ಸ್ಕಿಜೋಫ್ರೇನಿಯಾವು ಹೃದಯ ಸಂಬಂಧಿ ಕಾಯಿಲೆಗಳ ಅಪಾಯದ ಮೇಲೆ ಗಮನರ್ಹಾವಾಗಿ ಪರಿಣಾಮ ಬೀರುತ್ತದೆ.  ಆಂಕ್ಸೈಟಿ ಡಿಸಾರ್ಡರ್ ನ ಉಪಪ್ರಕಾರವಾದ ಜನರಲೈಸ್ಡ್ ಆಂಕ್ಸೈಟಿ ಡಿಸಾರ್ಡರ್ ಕೂಡ ಐಎಚ್‌ಡಿ ರೋಗಿಗಳಲ್ಲಿ ಹೃದಯ ಸಂಬಂಧಿತ ಪ್ರಮುಖ ಘಟನೆಗಳಿಗೆ ಕಾರಣವಾಗುತ್ತದೆ. ಮಾನಸಿಕ ಅಸ್ವಸ್ಥತೆ ಮತ್ತು ಐಎಚ್‌ಡಿ ನಡುವಿನ ಸಂಬಂಧವು ಜಟಿಲವಾಗಿದ್ದು, ಮಾನಸಿಕ ಆರೋಗ್ಯದ ಅಸ್ವಸ್ಥತೆ ಹೇಗೆ ಐಎಚ್‌ಡಿಗೆ ಕೊಡುಗೆ ನೀಡುತ್ತದೆ, ಅದರ ಕಾರ್ಯವಿಧಾನವೇನು ಎಂಬುದು ಸಂಪೂರ್ಣವಾಗಿ ತಿಳಿದುಬಂದಿಲ್ಲ. ಆದಾಗ್ಯೂ, ಮಾನಸಿಕ ಸಮಸ್ಯೆಗಳಿರುವ ಜನರಲ್ಲಿ ಐಎಚ್‌ಡಿಯ ಹೆಚ್ಚಿನ ಅಪಾಯವು, ವಿವಿಧ ಜೈವಿಕ, ಮನೋವೈಜ್ಞಾನಿಕ, ನಡವಳಿಕೆ ಮತ್ತು ಆನುವಂಶಿಕ ಕಾರ್ಯವಿಧಾನಗಳಿಗೆ ಕಾರಣವಾಗಿದೆ.[1]

ಮಾನಸಿಕ ಅಸ್ವಸ್ಥತೆ ಹೊಂದಿರುವ ಇಸ್ಕೀಮಿಕ್ ಹೃದ್ರೋಗಿಗಳಿಗೆ ಸಲಹೆಗಳು

ಐಎಚ್‌ಡಿ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಈ ಸಮಸ್ಯೆಯ ಪರಿಣಾಮವನ್ನು ನಿಭಾಯಿಸಲು ನೆರವಾಗುವ ಸಲುವಾಗಿ ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಬೇಕು ಮತ್ತು ಅನುಸರಿಸಬೇಕು.[2]

 • ವ್ಯಾಯಾಮ: ದಿನಕ್ಕೆ ಕನಿಷ್ಠ 30 ನಿಮಿಷಗಳಾದರೂ ಮಧ್ಯಮ-ತೀವ್ರತೆಯ ಏರೋಬಿಕ್ ವ್ಯಾಯಾಮ, ಟ್ರೆಡ್‌ಮಿಲ್‌ನಲ್ಲಿ ನಡೆಯುವುದು, ಸೈಕ್ಲಿಂಗ್, ಈಜು, ಜಾಗಿಂಗ್, ಮೆಟ್ಟಿಲು ಹತ್ತುವುದು ಮತ್ತು ಚುರುಕಾದ ನಡಿಗೆ ಮುಂತಾದ ಚಟುವಟಿಕೆಗಳು.
 • ಧ್ಯಾನ: ಇದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಹಾಗೂ ಇದು ಸಣ್ಣ ಅವಧಿಗಳೊಂದಿಗೆ ಪ್ರಾರಂಭವಾಗಬೇಕು, ಉದಾ, ಒಂದು ಬಾರಿಗೆ 10 ನಿಮಿಷಗಳು.
 • ಉಸಿರಾಟದ ವ್ಯಾಯಾಮ: 10-15 ನಿಮಿಷಗಳ ಕಾಲ ನಿಯಮಿತವಾಗಿ ಉಸಿರಾಟದ ವ್ಯಾಯಾಮ ಮಾಡುವುದು ಸಹಾಯಕವಾಗಲಿದೆ.
 • ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (ಸಿಬಿಟಿ): ಹೊರಗಿನ ಚಿಂತನೆಗಳಿಂದ ಉಂಟಾಗುವ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಗುರುತಿಸಲು ಸಿಬಿಟಿ ನೆರವಾಗುತ್ತದೆ. ಒತ್ತಡ, ಖಿನ್ನತೆ, ಆತಂಕ ಇರುವ ರೋಗಿಗಳಿಗೆ ಸಿಬಿಟಿ ಒಳ್ಳೆಯದು.

ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಯಲ್ಲಿ ಐಎಚ್‌ಡಿಯ ಹೆಚ್ಚಾದ ಅಪಾಯ ಮತ್ತು ಅದರ ನಿಖರವಾದ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ, ಇದು ಸಮಸ್ಯೆಯನ್ನು ತಡೆಗಟ್ಟುವಿಕೆಗೆ ಮತ್ತು ಚಿಕಿತ್ಸೆಯ ಕಾರ್ಯತಂತ್ರಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.


ಉಲ್ಲೇಖಗಳು

 1. Hert MD, Detraux J, Vancampfort D. The intriguing relationship between coronary heart disease and mental disorders. Dialogues Clin Neurosci. 2018 Mar;20(1):31-40.
 2. Chaddha A, Robinson EA, Kline-Rogers E, Alexandris-Souphis T, Rubenfire M. Mental health and cardiovascular disease. Am J Med. 2016 Nov;129(11):1145-1148. doi: 10.1016/j.amjmed.2016.05.018.
 3. Ormel J, Von Korff M, Burger H, Scott K, Demyttenaere K, Huang YQ, et al. Mental disorders among persons with heart disease – results from the World Mental Health surveys. Gen Hosp Psychiatry. 2007 July-Aug;29(4):325-34. doi: 10.1016/j.genhosppsych.2007.03.009.

 

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.