ನಾವೆಲ್ ಕೊರೋನ ವೈರಸ್ ಕಾಯಿಲೆ COVID-19 ಕ್ಕೆ ತುತ್ತಾಗಿರುವ ಮಂದಿಯ ಎಣಿಕೆ ಬಹಳ ಹೆಚ್ಚಾಗುತ್ತಿರುವುದರೊಂದಿಗೆ, ಅದು ಹೇಗೆ ಹರಡುತ್ತದೆ ಮತ್ತು ಅದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಮೂಡನಂಬಿಕೆಗಳು ಹೆಚ್ಚುತ್ತಿವೆ. ಅವು ಮೂಡನಂಬಿಕೆಗಳೋ ಇಲ್ಲವೇ ಸತ್ಯವೋ? ಅದರ ಪಟ್ಟಿ ಇಲ್ಲಿದೆ.(1,2,3)
ಉಷ್ಣವಲಯದಲ್ಲಿ ವಾಸಿಸುತ್ತಿರುವುದರಿಂದ (ಭಾರತದಂತಹ ದೇಶದಲ್ಲಿ) ನಾನು ವೈರಸ್ನಿಂದ ಸುರಕ್ಷಿತನೇ? ಭಾರತವು ಬಿಸಿಲು ಮತ್ತೆ ಸೆಕೆಯ ದೇಶವಾಗಿದೆ, ಚೀನಾದಂತೆ ತಂಪಾಗಿಲ್ಲ!
ಇಲ್ಲ, ನಿಮಗೆ ವೈರಸ್ ಅಂಟಿಕೊಳ್ಳುವ ಸಾಧ್ಯತೆ ಖಂಡಿತ ಇದೆ. ಇದರ ಹರಡುವಿಕೆಗೆ ಹವಾಮಾನ ತಡೆಯಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ನಿಜ ಹೇಳಬೇಕೆಂದರೆ, ಎಲ್ಲ ಪ್ರದೇಶಗಳಲ್ಲಿ ವೈರಸ್ ಹರಡಬಹುದು ಎಂದು ಕಂಡುಬಂದಿದೆ. ಸುರಕ್ಷಿತವಾಗಿರಲು ಗೊತ್ತಿರುವ ಒಂದೇ ದಾರಿಯೆಂದರೆ, ಆಗಾಗ ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು ಮತ್ತು ಪ್ರತ್ಯೇಕವಾಗಿರುವುದು ಇಲ್ಲವೇ ಗುಂಪಿನಿಂದ ದೂರ ಉಳಿಯುವುದು.
ವೈರಸ್ ಬಿಸಿಗೆ ಸಾಯುತ್ತದೆಯೆಂದು ನಾನು ಕೇಳಿರುವೆ! ಹಾಗಾಗಿ ಬರಿ ಕೈಗಳನ್ನು ತೊಳೆದುಕೊಳ್ಳುವ ಬದಲು ಬಿಸಿ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದಲ್ಲವೇ?
ಇಲ್ಲ, ಬಿಸಿ ನೀರಿನ ಸ್ನಾನದಿಂದ ವೈರಸ್ ಸಾಯುವುದಿಲ್ಲ. ಆಗಲೂ ವೈರಸ್ ಹರಡಬಹುದು. ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯುವುದು ಇಲ್ಲವೇ 60 % ಆಲ್ಕೊಹಾಲ್ ಇರುವ ಸ್ಯಾನಿಟೈಸರ್ಗಳನ್ನು ಬಳಸುವುದು, ಸೋಂಕು ತಗಲದಿರಲು ಒಳ್ಳೆಯ ದಾರಿಗಳಾಗಿವೆ.
ಆಲ್ಕೊಹಾಲ್ ಇರುವ ಸ್ಯಾನಿಟೈಸರ್ ಕೊರೋನ ವೈರಸ್ ಅನ್ನು ಕೊಲ್ಲುತ್ತದೆಯೆಂದರೆ, ನನ್ನನ್ನು ಕಾಪಾಡಿಕೊಳ್ಳಲು, ನಾನು ಬರಿ ಆಲ್ಕೊಹಾಲ್ ಇಲ್ಲವೇ ಕ್ಲೋರಿನ್ ಅನ್ನು ಬಾಡಿ ಸ್ಪ್ರೇ ರೀತಿ ಬಳಸಬಹುದೇ?
ಇಲ್ಲ. ನಿಮ್ಮ ಬಳಿ ನೀರು ಮತ್ತು ಸಾಬೂನು ಇಲ್ಲವೆಂದರೆ, ಆಲ್ಕೊಹಾಲ್ ಇರುವ ಸ್ಯಾನಿಟೈಸರ್ ಒಂದು ಆಯ್ಕೆಯಾಗಿದೆ. ಕ್ಲೋರಿನ್ ಇಲ್ಲವೇ ಆಲ್ಕೊಹಾಲ್ ಅನ್ನು ನಿಮ್ಮ ಮೇಲೆ ಚಿಮುಕಿಸಿಕೊಳ್ಳುವುದರಿಂದ ನಿಮ್ಮ ಚರ್ಮ ಮತ್ತು ಕಣ್ಣುಗಳಿಗೆ ಹಾನಿಯಾಗಬಹುದು. ಅದರಿಂದ ಏನೂ ಉಪಯೋಗವಿಲ್ಲ.
ನನಗೆ ಶೀತವಾಗಿದ್ದರೆ, ನನ್ನ ಮೂಗನ್ನು ತೊಳೆಯುವುದರಿಂದ ಇಲ್ಲವೇ ಉಪ್ಪು ನೀರಿನಿಂದ ಗಂಟಲು ಗಲಬರಿಸಿದರೆ ಅದು ಸರಿಹೋಗುತ್ತಿತ್ತು. ಈ ಹೊಸ ಕೊರೋನ ವೈರಸ್ಗೂ ಇದನ್ನೇ ಮಾಡಬಹುದೇ?
ನಿಮ್ಮ ಮೂಗನ್ನು ತೊಳೆಯುವುದರಿಂದ ಇಲ್ಲವೇ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ, ಊತದಿಂದ ಉಂಟಾದ ನೋವು, ಕೆರೆತದಂತಹ ರೋಗ ಲಕ್ಷಣಗಳು ಕಡಿಮೆಯಾಗಬಹುದು, ಆದರೆ ಉಸಿರಾಟದ ಸೋಂಕಾಗಿರುವ COVID-19 ಅನ್ನು ಕೊಲ್ಲುವ ಇಲ್ಲವೇ ವಾಸಿಮಾಡುವ ವಿಷಯದಲ್ಲಿ ಇದರಿಂದ ಯಾವ ಲಾಭವೂ ಸಿಗದು.
ನನ್ನನ್ನು ಕಾಪಾಡಿಕೊಳ್ಳಲು ನಾನು ಮಾಸ್ಕ್ ಹಾಕಬಹುದೇ?
ನಿಮಗೆ ಆರೋಗ್ಯದ ತೊಂದರೆಯಿದ್ದು, ಬಹಳ ಕೆಮ್ಮುತ್ತಿದ್ದರೆ ಇಲ್ಲವೇ ಸೀನುತ್ತಿದ್ದರೆ ಇಲ್ಲವೇ ಪ್ರಯಾಣ ಮಾಡುತ್ತಿದ್ದರೆ ಮಾತ್ರ ಮಾಸ್ಕ್ ಹಾಕಿಕೊಳ್ಳಿ. ಅದರಿಂದ ನೀವು ಬೇರೆಯವರಿಗೆ ಕಾಯಿಲೆಯನ್ನು ಹರಡುವುದು ಕಡಿಮೆಯಾಗುತ್ತದೆ. ಅಲ್ಲದೆ, ನೀವು ಮಾಸ್ಕ್ ಹಾಕಿದರೆ, ಬಳಸಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಬಿಸಾಡಿ. ನೀವು ಆರೋಗ್ಯವಾಗಿರುವಾಗ ಮಾಸ್ಕ್ ಹಾಕಿದರೆ ಮತ್ತು ನೀವು ಆರೈಕೆಗಾರರಲ್ಲದಿದ್ದರೆ, ಜಾಗತಿಕ ಕೊರತೆಯಿರುವಾಗ ನೀವು ಒಂದು ಮಾಸ್ಕ್ ಅನ್ನು ಹಾಳು ಮಾಡಿದಂತೆ! ಅದನ್ನು ವಿವೇಚನೆಯಿಂದ ಬಳಸಿ!
ಅರಿಶಿನ ಮತ್ತು ಬೆಳ್ಳುಳ್ಳಿ ಬಳಸುವುದರಿಂದ ನೆರವಾಗಬಹುದೇ? ಹಲವು ರೋಗಗಳನ್ನು ತಡೆಗಟ್ಟಲು ಮತ್ತು ಹೋರಾಡಲು ಅವು ನೆರವಾಗುತ್ತವೆ ಎಂದು ನಂಬಲಾಗಿದೆ!
ಅರಿಶಿನ ಮತ್ತು ಬೆಳ್ಳುಳ್ಳಿ ಆರೋಗ್ಯಕರ ಆಹಾರಗಳಾಗಿದ್ದು, ಅವನ್ನು ಸಾಂಪ್ರದಾಯಿಕ ಔಷಧಿ ಮತ್ತು ಮನೆ ಮದ್ದುಗಳಲ್ಲಿ ಬಳಸುತ್ತಾರಾದರೂ, ಅವನ್ನು ತಿನ್ನುವುದರಿಂದ ಈ ಹೊಸ ಕೊರೋನ ವೈರಸ್ನಿಂದ ಕಾಪಾಡಿಕೊಳ್ಳಬಹುದೆನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ.
COVID-19 ಕ್ಕೆ ಚಿಕಿತ್ಸೆ ಕಂಡುಹಿಡಿಯಲಾಗಿದೆಯೇ? ಆ್ಯಂಟಿಬಯೋಟಿಕ್ಗಳು, ಚುಚ್ಚುಮದ್ದುಗಳು ಇಲ್ಲವೇ ಯಾವುದೇ ಔಷಧಿಗಳು ಇವೆಯೇ?
ಇಲ್ಲ, ಯಾವ ಚಿಕಿತ್ಸೆ ಇಲ್ಲವೇ ಔಷಧಿಯೂ ಇಲ್ಲ. ಆ್ಯಂಟಿಬಯೋಟಿಕ್ಗಳ ಬಗ್ಗೆ ಒಂದು ಕಿವಿಮಾತು – ಅವು ವೈರಸ್ಗಳ ಎದುರು ಕೆಲಸ ಮಾಡುವುದಿಲ್ಲ! ಒಂದು ಚಿಕಿತ್ಸೆಯನ್ನು ಕಂಡುಹಿಡಿಯಲು ವಿಜ್ಞಾನಿಗಳು ಮತ್ತು ಸಂಶೋಧಕರು ಹಲಗಲಿರುಳು ದುಡಿಯುತ್ತಿದ್ದಾರೆ.
ಸೊಳ್ಳೆಗಳು, ಬೇರೆ ರೋಗಗಳಾದ ಮಲೇರಿಯಾ ಮತ್ತು ಡೆಂಗ್ಯೂ ಹರಡುತ್ತವೆ. ಆದರೆ ಈ ಹೊಸ COVID-19 ರ ಕತೆಯೇನು?
ಇಲ್ಲ. ಸೊಳ್ಳೆಗಳ ಬಗ್ಗೆ ಚಿಂತಿಸಬೇಡಿ. COVID-19 ಅನ್ನು ಉಂಟುಮಾಡುವ ಕೊರೋನ ವೈರಸ್ ಉಸಿರಾಟದ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ ಹಾಗೂ ಸೋಂಕಿತ ವ್ಯಕ್ತಿ ಕೆಮ್ಮುವಾಗ ಇಲ್ಲವೇ ಸೀನುವಾಗ ಹೊರಬರುವ ನೀರಿನ ತೊಟ್ಟುಗಳ ಸಂಪರ್ಕಕ್ಕೆ ನೀವು ಬಂದಾಗ ಅದು ಹರಡುತ್ತದೆ. ಹಾಗಾಗಿ, ಕೆಮ್ಮುವವರು ಮತ್ತು ಸೀನುವವರೊಂದಿಗೆ ಯಾವುದೇ ಸಂಪರ್ಕ ಮಾಡದಿದ್ದರೆ ಇಲ್ಲವೇ ಕಡಿಮೆ ಸಂಪರ್ಕ ಮಾಡಿದರೆ ಒಳಿತು.
ಚೀನಾ ಇಲ್ಲವೇ ವೈರಸ್ ಹೆಚ್ಚಿದೆ ಎಂದು ವರದಿಯಾಗಿರುವ ಇತರ ದೇಶಗಳಲ್ಲಿ ತಯಾರಾದ ಉತ್ಪನ್ನಗಳ ಪ್ಯಾಕೇಜ್ಗಳನ್ನು ತೆರೆಯುವುದು ಸುರಕ್ಷಿತವೇ?
ಹೌದು, ಪ್ಯಾಕೇಜ್ಗಳನ್ನು ಸುರಕ್ಷಿತವಾಗಿ ತೆರೆಯಬಹುದು! ಹಲವಾರು ಬಗೆಯ ಹೊರಮೈಗಳ ಮೇಲೆ ಈ ಹೊಸ ಕೊರೋನ ವೈರಸ್ ಕುಳಿತುಕೊಳ್ಳುವ ಸಾಧ್ಯತೆ ಇದೆ ಎಂದು ಕಂಡುಬಂದಿದ್ದರೂ, ಅಷ್ಟೊಂದು ದೂರದಿಂದ ಸಾಗಿ ಬಂದಿರುವುದರಿಂದ, ಅದು ಇನ್ನೂ ಪ್ಯಾಕೇಜ್ ಮೇಲೆಯೇ ಇರಲು ಸಾಧ್ಯವಿಲ್ಲ. ಆದರೆ ನಿಮಗೆ ಸಂದೇಹವಿದ್ದು, ನೀವು ಚಿಂತಿತರಾಗಿದ್ದರೆ, ಪ್ಯಾಕೇಜ್ ಅನ್ನು ಮೊದಲು ಸೋಂಕು ನಿವಾರಕದಿಂದ (ಡಿಸ್ಇನ್ಫೆಕ್ಟೆಂಟ್) ಸ್ವಚ್ಛಗೊಳಿಸಿ. ಜೊತೆಗೆ, ನಿಮ್ಮ ಕೈಗಳನ್ನು ಸಾಬೂನು ಇಲ್ಲವೇ ಸ್ಯಾನಿಟೈಸರ್ನಿಂದ ಚೆನ್ನಾಗಿ ತೊಳೆಯಿರಿ.
ಉಲ್ಲೇಖಗಳು:
- Q&A on coronaviruses [Internet]. Who.int. World Health Organization; 2020 [cited 2020 Mar 21]. Available from: https://www.who.int/news-room/q-a-detail/q-a-coronaviruses
- Myth busters [Internet]. who.int. World Health Organization; 2019 [cited 2020 Mar 21]. Available from: https://www.who.int/emergencies/diseases/novel-coronavirus-2019/advice-for-public/myth-busters
- Publishing HH. Coronavirus Resource Center [Internet]. Harvard Health. [cited 2020 Mar 21]. Available from: https://www.health.harvard.edu/diseases-and-conditions/coronavirus-resource-center#COVID