diabetes and mental health
Reading Time: 3 minutes

ಡಯಾಬಿಟಿಸನ್ನು ನಿಭಾಯಿಸುವಾಗ, ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಎಷ್ಟು ಮಹತ್ವವಾಗಿದೆ ಎಂದು ನಿಮಗೆ ತಿಳಿದಿದಿಯೇ? ಈ ವಿಷಯದ ಬಗ್ಗೆ ‘ತಿಳಿದಿಲ್ಲ’ ಎಂದರೆ, ಇಂತಹ ಸಮಯದಲ್ಲಿ ನಿಮ್ಮ ಆದ್ಯತೆಗಳನ್ನು ತಿಳಿಯಲು  ಈ ಬರಹವನ್ನು ಓದಿ. 

ಡಯಾಬಿಟಿಸ್‌ ಇದೆ ಎಂದು ಗೊತ್ತಾದಾಗ ಗೊಂದಲ ಹಾಗೂ ತಳಮಳ ಉಂಟಾಗುವುದು ಸಹಜ.1 ಡಯಾಬಿಟಿಸ್, ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಜೀವನ ವಿಧಾನಕ್ಕೂ ಅಪಾಯಕಾರಿ ಎಂದೆನಿಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನದಲ್ಲಿಡುವುದು, ಊಟ ಹಾಗೂ ಇನ್ಸುಲಿನ್ ಡೋಸನ್ನು ಯೋಜಿಸುವುದು, ಇವು ಡಯಾಬಿಟಿಸನ್ನು ನಿಭಾಯಿಸುವ ಪ್ರಮುಖ ಕಾರ್ಯಗಳಾಗಿವೆ.2 ಈ ಯಥೇಚ್ಚವಾದ ಕೆಲಸಗಳಿಂದ ನೀವು ಭಾವನಾತ್ಮಕವಾಗಿ ಕುಗ್ಗಬಹುದು.3 ಇದರಿಂದ ದೈಹಿಕ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ನೀವು ಹೆಚ್ಚು ತೊಡಗಿಸಿಕೊಳ್ಳಬಹುದು, ಹೀಗಾಗಿ ಆಗ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವುದು ನಿಮ್ಮ ಆದ್ಯತೆಗಳ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಬರಬಹುದು.4

ಅದೇನೆ ಇರಲಿ, ಆರೋಗ್ಯಕರ ಜೀವನ ನಡೆಸಲು ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವುದು ಅತ್ಯಗತ್ಯ. ಆತಂಕ ಪಡುವುದು ಹಾಗೂ ಕೊರಗುವಂತಹ ಮಾನಸಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿದಾಗ, ಡಯಾಬಿಟಿಸ್‌ನ ಅಪಾಯ ಇನ್ನಷ್ಟೂ ಹೆಚ್ಚಾಗುತ್ತದೆ.5 ಆದರೆ, ಈ ಮಾನಸಿಕ ಸಮಸ್ಯೆಗಳನ್ನು ದೂರ ಮಾಡಿಕೊಂಡಾಗ ಡಯಾಬಿಟಿಸನ್ನು ನಿಭಾಯಿಸುವುದು ಕೂಡ ಸುಲಭವಾಗುತ್ತದೆ.4 

ಡಯಾಬಿಟಿಸ್-ಮಾನಸಿಕ ಆರೋಗ್ಯ, ಇವೆರೆಡರ ನಂಟು

ಡಯಾಬಿಟಿಸನ್ನು ನಿಭಾಯಿಸುವುದು ನಿಮಗೆ ಒಂದು ಹೊರೆಯಾಗಿ ಕಾಣಬಹದು. ಇದರಿಂದ ನೀವು, ಡಯಾಬಿಟಿಸನ್ನು ನಿಭಾಯಿಸುವ  ಕೆಲಸಗಳು ಯಥೇಚ್ಚವಾಗಿವೆ ಹಾಗೂ ಆ ಕೆಲಸಗಳನ್ನು ಮಾಡಲು ನಿಮ್ಮಲ್ಲಿ ಅಗತ್ಯ ಶಕ್ತಿಯಿಲ್ಲ ಎಂದು ಯೋಚಿಸಲು ಆರಂಭಿಸಬಹುದು. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತವಾಗಬಹುದು, ಹೀಗಾದಾಗ ಕಂಡು ಬರುವ ರೋಗಲಕ್ಷಣಗಳು ಈ ಕೆಳಗಿನಂತಿವೆ:   

 • ಬೇಗನೆ ನಿಮ್ಮ ಮನಸ್ಥಿತಿ ಬದಲಾಗುವುದು
 • ಸ್ಪಷ್ಟವಾಗಿ ಯೋಚಿಸುವಲ್ಲಿ ತೊಂದರೆ
 • ಆಯಾಸ
 • ಆತಂಕ

ಡಯಾಬಿಟಿಸ್ ಯಾತನೆ ಎಂಬ ಸಮಸ್ಯಗೆ ಡಯಾಬಿಟಿಸ್‌ ಕಾರಣವಾಗಬಹುದು; ಈ ಸಮಸ್ಯೆಯ ರೋಗಲಕ್ಷಣಗಳು ಒತ್ತಡ, ಆತಂಕ ಹಾಗೂ ಕೊರಗುವಿಕೆ. ಡಯಾಬಿಟಿಸ್ ಇರುವ 30-50% ರಷ್ಟು ಜನರು ಕೆಲವು ಹಂತದಲ್ಲಿ ಡಯಾಬಿಟಿಸ್ ಯಾತನೆಯ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದು ಅಂದಾಜಿಸಲಾಗಿದೆ.5

ಒತ್ತಡ ಮತ್ತು ಆತಂಕ

ಒತ್ತಡವು ನಿಮ್ಮ ದೈನಂದಿನ ಜೀವನದ ಒಂದು ಭಾಗವಾಗಿರಬಹುದು. ಈ ಒತ್ತಡದ ಜೊತೆಗೆ, ಅಸಹಜವಾದ ಸಕ್ಕರೆ ಮಟ್ಟಗಳು, ಔಷಧಿಗಳ ವೆಚ್ಚ ಮತ್ತು ಡಯಾಬಿಟಿಸ್-ಸಂಬಂಧಿ ಅಪಾಯಗಳು, ಇವೆಲ್ಲವೂ ನಿಮಗೆ ದೊಡ್ಡ ಚಿಂತೆಯಾಗಬಹುದು. ಒತ್ತಡ ಬಂದಾಗ, ಕೋಪ ಬರಬಹುದು ಅಥವಾ ಭಯದಿಂದ  ಹೃದಯ ಬಡಿತ ಹೆಚ್ಚಾಗಬಹುದು ಇಲ್ಲವೇ ಬೆವರಬಹುದು, ಅಥವಾ ಎರಡು, ಹೀಗೆ ದೈಹಿಕ ಪ್ರತಿಕ್ರಿಯೆಯ ರೂಪದಲ್ಲಿ ಒತ್ತಡ ವ್ಯಕ್ತವಾಗುತ್ತದೆ.4    

ಕೆಲವೊಮ್ಮೆ ನಿಯಂತ್ರಿಸಲಾಗದ  ಕೋಪವು ಒಳ್ಳೆಯದು ಎನಿಸಬಹುದು ಹಾಗೂ ಅಧಿಕಾರವನ್ನು ನೀಡಬಹುದು, ಆದರೆ ಕೋಪವು ನಿಮ್ಮ ಪ್ರೀತಿಪಾತ್ರರ ಹಾಗೂ ನಿಮ್ಮ ಸಂಬಂಧಕ್ಕೆ ಅಡ್ಡಿಯಾಗಬಹುದು. ಕೋಪ ನಿಭಾಯಸುವುದು ಹೇಗೆಂದು ತಿಳಿದುಕೊಳ್ಳದಿದ್ದರೆ, ಅದು ಮನೆಯಲ್ಲಿ ಹಾಗೂ ಕೆಲಸದಲ್ಲಿ ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಕೋಪ ಬಂದಾಗ ಸಮಾಧಾನವಾಗಲು ಕೆಲವು ಸಲಹೆಗಳು ಹೀಗಿವೆ:

 • ಉಸಿರನ್ನು ಆಳವಾಗಿ ಎಳೆದುಕೊಳ್ಳಿ
 • ಕುಳಿತುಕೊಳ್ಳಿ, ಹಿಂದೆ ಒರಗಿಕೊಂಡು ವಿಶ್ರಮಿಸಲು ಪ್ರಯತ್ನಿಸಿ
 • ಕೈಗಳನ್ನು ಸಡಿಲಗೊಳಿಸಿ
 • ನಿಮ್ಮನ್ನು ನೀವು ಸಮಾಧಾನಪಡಿಸಿಕೊಳ್ಳಿ
 • ಹಾಗೆ ಸುತ್ತಾ ಮುತ್ತಾ ಒಮ್ಮೆ ನಡೆಯಿರಿ2

ಆತಂಕ ಎಂದರೆ, ಚಿಂತೆ ಮಾಡುವುದು, ಭಯ ಪಡುವುದು ಅಥವಾ ಜೀವನ ಇಲ್ಲಿಗೆ ಕೊನೆ ಎಂದು ಭಾವಿಸುವುದು ಇಂತಹ ಅನೇಕ ವಿಚಾರಗಳ ಮೊತ್ತ ಆಗಿದೆ.  ಒತ್ತಡ ಹಾಗೂ ಆತಂಕದಿಂದ ಬಳಲುತ್ತಿರುವವರಲ್ಲಿ ಡಯಾಬಿಟಿಸ್ ಇಲ್ಲದಿರುವವರಿಗಿಂತ ಡಯಾಬಿಟಿಸ್ ಇರುವವರು 20% ಹೆಚ್ಚು ಎಂದು ತಿಳಿದಿರಲಿ. ಡಯಾಬಿಟಿಸ್‌ನಂತಹ ದೀರ್ಘಕಾಲದ ಕಾಯಿಲೆಯನ್ನು ನಿಭಾಯಿಸುವಾಗ ಕೆಲವರಿಗೆ ಆತಂಕವಾಗಬಹುದು.4  

ಒತ್ತಡ ಹಾಗೂ ಆತಂಕವನ್ನು ನಿಭಾಯಿಸಲು ನೆರವಾಗುವ ಕೆಲವು ಸುಲಭ ತಂತ್ರಗಳು ಹೀಗಿವೆ:

 • ನಿಮ್ಮದೇ ಭಾವನೆಗಳ ಮೇಲೆ ಗಮನವಿರಿಸುವುದು.
 • ಡಯಾಬಿಟಿಸ್ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಹಾಯ ಕೇಳುವುದು
 • ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡುವುದು ಮತ್ತು ನಿಮ್ಮ ಕುರಿತು ಕಾಳಜಿ ವಹಿಸಲು ಅವರಿಗೆ ಅವಕಾಶ ಮಾಡಿಕೊಡುವುದು
 • ಇಷ್ಟದ ಕೆಲಸಗಳನ್ನು ಮಾಡಲು ಸಮಯ ಮಾಡಿಕೊಳ್ಳುವುದು
 • ಯೋಗ ಹಾಗೂ ಧ್ಯಾನ ಮಾಡುವ ಮೂಲಕ ವಿಶ್ರಾಂತಿ ಪಡೆಯುವುದು
 • ಆಲ್ಕೋಹಾಲ್ ಹಾಗೂ ಕೆಫೀನ್ ಸೇವನೆಯನ್ನು ಕಡಿಮೆ ಮಾಡಿ, ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಜೊತೆಗೆ ಚೆನ್ನಾಗಿ ನಿದ್ದೆ ಮಾಡುವುದು4

 ಖಿನ್ನತೆ

ಖಿನ್ನತೆಯಿಂದ ದುಃಖ ಆಗಬಹುದು ಮತ್ತು ದಿನನಿತ್ಯ ಮಾಡುವ ಚಟುವಟಿಕೆಗಳತ್ತ ಆಸಕ್ತಿ ಕಳೆದುಕೊಳ್ಳಬಹುದು. ಡಯಾಬಿಟಿಸ್ ಇರುವವರಲ್ಲಿ ಖಿನ್ನತೆಯ ಅಪಾಯವು ಡಯಾಬಿಟಿಸ್ ಇಲ್ಲದ ಜನರಿಗಿಂತ ಎರಡು ಪಟ್ಟು ಹೆಚ್ಚಾಗಿರುವುದು. ಅಲ್ಲದೇ, ಖಿನ್ನತೆಯಿಂದ ಒಬ್ಬರು ಬಳಲುತ್ತಿದ್ದಾರೆ ಎಂದು ತಿಳಿಯುವುದು ಸಹ ಕಷ್ಟ. ಇದು ಕೆಲಸದಲ್ಲಿ ನಿಮ್ಮ ಸಾಮರ್ಥ್ಯ, ಮನೆ ಜೀವನ ಹಾಗೂ ಡಯಾಬಿಟಿಸನ್ನು ನಿಭಾಯಿಸುವ ಸಾಮರ್ಥ್ಯ, ಇವೆಲ್ಲದರ ಮೇಲೆ ಪರಿಣಾಮ ಬೀರಬಹುದು, ಆ ಮೂಲಕ ನರ ಹಾನಿ ಹಾಗೂ ಹೃದಯ ರೋಗದಂತಹ ತೊಂದರೆಗಳಿಗೆ ಕಾರಣವಾಗುವುದು.4  

ಖಿನ್ನತೆಯನ್ನು ಗುರುತಿಸುವುದು ಬಹಳ ಮುಖ್ಯ. ನಿಮ್ಮ ಖಿನ್ನತೆಯನ್ನು ಗುರುತಿಸಲು ಈ ಕೆಳಗೆ ತಿಳಿಸಲಾಗಿರುವ ಅಂಶಗಳು ನೆರವಾಗಬಹುದು:

 • ನಿದ್ದೆ ಮಾಡುವ ವಿಧಾನದಲ್ಲಿ ಬದಲಾವಣೆ
 • ಹಸಿವಾಗುವ ಸಮಯದಲ್ಲಿ ಬದಲಾವಣೆ
 • ಶಕ್ತಿ ಇಲ್ಲದಿರುವುದು
 • ತಪ್ಪಿತಸ್ಥ ಭಾವನೆ
 • ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆಗಳು
 • ಶಾಲೆಯಲ್ಲಿ ಹಾಗೂ ಕೆಲಸದ ಸಾಮರ್ಥ್ಯದಲ್ಲಿ ಇಳಿಕೆ
 • ಆಸಕ್ತಿ ಕಳೆದುಕೊಳ್ಳುವುದು ಅಥವಾ ಒತ್ತಡ
 • ಎಂದಿಗಿಂತ ಬೇಗನೆ ಎದ್ದೇಳುವುದು
 • ಒಂದೆಡೆಗೆ ಗಮನ ಕೊಡುವಲ್ಲಿ ತೊಂದರೆ
 • ಧೈರ್ಯ ಇಲ್ಲದಿರುವುದು
 • ಬೆಳಿಗ್ಗೆ ಮಂಕಾಗಿರುವುದು

ಚಿಕಿತ್ಸೆಯ ವಿಧಾನ

ನನಗೆ ಡಯಾಬಿಟಿಸ್ ಬಂದಿದೆ ಎಂದು ಒಪ್ಪಿಕೊಳ್ಳುವುದು/ಸ್ವೀಕರಿಸುವುದು  ಆರೋಗ್ಯದೆಡೆಗೆ ಕಾಳಜಿವಹಿಸುವುದರ ಮೊದಲ ಹೆಜ್ಜೆಯಾಗಿದೆ. ದುಃಖ ಮತ್ತು ಖಿನ್ನತೆಯ ಬಗ್ಗೆ ಮಾತನಾಡಲು ಇರುಸುಮುರುಸೆನಿಸಬಹುದು. ಆದಾಗ್ಯೂ, ನಿಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವ ಸರಿಯಾದ ವೈದ್ಯರನ್ನು  ಭೇಟಿ ಮಾಡುವುದರ ಮೂಲಕ ಮಾನಸಿಕ ಆರೋಗ್ಯ ಹಾಗೂ ದೇಹದ ಆರೋಗ್ಯವನ್ನು ಉತ್ತಮವಾಗಿಸುವುದರೆಡೆಗೆ ಸಾಗಬಹುದು. 

ನಿಮ್ಮ ಡಯಾಬಿಟಿಸ್ ಆರೈಕೆಯ ವೈದ್ಯರು, ಮಾನಸಿಕ ಡಾಕ್ಟರನ್ನು ಭೇಟಿ ಮಾಡುವಂತೆ ನಿಮಗೆ ಸಲಹೆ ನೀಡಬಹುದು. ವೈದ್ಯಕೀಯ ವೃತ್ತಿಪರರು ನಿಮ್ಮ ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಒತ್ತಡ ಹಾಗೂ ಆತಂಕಕ್ಕೆ ಕಾರಣವಾಗುವ ಅನೇಕ ವಿಷಯಗಳನ್ನು ನಿಭಾಯಿಸಲು ಸಹಾಯ ಮಾಡಬಹುದು. ನಿಮ್ಮ ಮನಸ್ಸು ಹಾಗೂ ದೇಹದ ಆರೋಗ್ಯವನ್ನು ಸುರಕ್ಷಿತವಾಗಿರಿಸಲು  ನೆರವಾಗುವಂತಹ ಒಂದು ಚಿಕಿತ್ಸೆಯ ಯೋಜನೆಯನ್ನು ವಿನ್ಯಾಸಗೊಳಿಸಲು ಡಾಕ್ಟರ್‌ಗಳು ಒಟ್ಟಿಗೆ ಸೇರಿ ಕಾರ್ಯ ನಿರ್ವಹಿಸಬಹುದು.5  

ಹಾಗಾಗಿ, ನಿಮ್ಮ ಮಾನಸಿಕ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಮೂಲಕ  ಡಯಾಬಿಟಿಸನ್ನು ಯಶಸ್ವಿಯಾಗಿ ನಿಭಾಯಿಸಿ.2 

 

ಉಲ್ಲೇಖಗಳು:

 1. American Diabetes Association. Newly diagnosed [Internet]. [cited 2019 Nov 12]. Available from: https://www.diabetes.org/diabetes/newly-diagnosed
 2. American Diabetes Association. Mental health [Internet]. [cited 2019 Nov 12]. Available from: https://www.diabetes.org/diabetes/mental-health
 3. American Diabetes Association. Mental health: living with type 1 [Internet]. [cited 2019 Nov 12]. Available from: https://www.diabetes.org/diabetes/type-1/mental-health
 4. Centers for Disease Control and Prevention. Diabetes and mental health [Internet]. [updated 2018 Aug 06; cited 2019 Nov 12]. Available from: https://www.cdc.gov/diabetes/managing/mental-health.html
 5. Mental Health America. Diabetes and mental health [Internet]. [cited 2019 Nov 12]. Available from: https://www.mhanational.org/diabetes-and-mental-health
 6. Centers for disease control and prevention. 10 Tips for coping with diabetes distress [Internet] [updated 2019 Oct 08; cited 2019 Nov 12]. Available from: https://www.cdc.gov/diabetes/managing/diabetes-distress/ten-tips-coping-diabetes-distress.html

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.