ಡಯಾಬಿಟಿಸ್ ಎಂಬುದು ಜೀವನಶೈಲಿ ಆಧಾರಿತ ಸಮಸ್ಯೆಯಾಗಿದೆ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ, ಇದು ನಿಮ್ಮನ್ನು ಬಿಟ್ಟು ಹೋಗುತ್ತದೆ’, ಈ ಮಾತುಗಳನ್ನು ಹೇಳಿದವರು ಆಫ್ರಿಕನ್-ಅಮೇರಿಕನ್ ಹಾಸ್ಯಕಲಾವಿದ ಹಾಗೂ ನಾಗರಿಕ ಹಕ್ಕುಗಳ ಹೋರಾಟಗರಾರದ ಡಿಕ್ ಗ್ರೆಗೊರಿ ಅವರು.
ಅವರ ಹೇಳಿಕೆ ಅರ್ಧ ಸರಿಯಿದೆ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಡಯಾಬಿಟಿಸ್ ವಿರುದ್ಧ ಹೋರಾಡಲು ಖಂಡಿತ ಸಹಾಯವಾಗುತ್ತದೆ, ಆದರೆ ಡಯಾಬಿಟಿಸ್ ಬರಲು ಜೀವನಶೈಲಿ ಒಂದೇ ಕಾರಣವಾಗಲಾರದು! ಈ ಸಮಸ್ಯೆಯು ಅನೇಕ ಅಂಶಗಳ ಬಳುವಳಿ ಆಗಿದೆ, ಆದರೆ ಪರಿಸರದ ಪ್ರಭಾವದ ಜೊತೆಗೆ ಅನುವಂಶಿಕ ಅಂಶಗಳು ಡಯಾಬಿಟಿಸ್‌ಗೆ ಪ್ರಮುಖ ಕಾರಣಗಳಾಗಿವೆ.
ಇನ್ನಷ್ಟು ಆಳವಾಗಿ ಕೆದಕುತ್ತಾ ಹೋದರೆ, ಇನ್ಸುಲಿನ್ ಪ್ರತಿರೋಧವೇ ಡಯಾಬಿಟಿಸ್‌ಗೆ ಮುಖ್ಯ ಕಾರಣವೆಂಬುದು ತಿಳಿದುಬರುತ್ತದೆ. ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದಿದ್ದಾಗ ಅಥವಾ ಇನ್ಸುಲಿನ್ ಚಟುವಟಿಕೆಯು ದುರ್ಬಲಗೊಂಡಾಗ ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ.
ಇನ್ಸುಲಿನ್ ಮತ್ತು ಡಯಾಬಿಟಿಸ್
ಪ್ಯಾನ್‌ಕ್ರಿಯಾಸ್‌ನಲ್ಲಿರುವ ಬೀಟಾ ಜೀವಕೋಶಗಳು ಇನ್ಸುಲಿನ್ ಎಂಬ ಹಾರ್ಮೋನ್‌ಗಳನ್ನು ಉತ್ಪಾದಿಸುತ್ತವೆ. ದೇಹದ ಕೆಲಸಕಾರ್ಯಗಳಿಗೆ ಬೇಕಿರುವ ಶಕ್ತಿಯನ್ನು ಸಕ್ಕರೆಯಿಂದ (ನಾವು ತಿನ್ನುವ ಕಾರ್ಬ್‌ಗಳು ಮತ್ತು ಕೊಬ್ಬಿನಿಂದ) ಪರಿವರ್ತಿಸಿ ಕೊಡಲು, ದೇಹದ ಜೀವಕೋಶಗಳಿಗೆ ಇನ್ಸುಲಿನ್ ಹಾರ್ಮೋನ್ ಸಹಾಯ ಮಾಡುತ್ತದೆ. ಹೆಚ್ಚುವರಿಯಾದಂತಹ ಸಕ್ಕರೆಯನ್ನು ಗ್ಲೈಕೊಜೆನ್ ಆಗಿ ಪರಿವರ್ತಿಸಿ, ಲಿವರ್‌ನಲ್ಲಿ ಶೇಖರಿಸಿ ಇಡುತ್ತದೆ. ಶಕ್ತಿಯನ್ನಾಗಿ ಪರಿವರ್ತಿಸಲು ಸಾಕಷ್ಟು ಸಕ್ಕರೆ ಇರದಿದ್ದಾಗ ಇದನ್ನು ಬಳಸಿಕೊಳ್ಳುತ್ತದೆ.
ಇನ್ಸುಲಿನ್ ಪ್ರತಿರೋಧವು ದುರ್ಬಲಗೊಂಡಾಗ ಇನ್ಸುಲಿನ್, ಡಯಾಬಿಟಿಸ್‌ಗೆ ದಾರಿ ಮಾಡಿಕೊಡುತ್ತದೆ. ಇನ್ಸುಲಿನ್‌ನ ಪರಿಣಾಮಗಳಿಗೆ ನೀವು ಎಷ್ಟು ಸ್ಪಂದಿಸುತ್ತಿದ್ದೀರಿ ಎಂಬುದರ ಮೇಲೆ ಇನ್ಸುಲಿನ್ ಪ್ರತಿರೋಧವನ್ನು ಅಳೆಯಲಾಗುತ್ತದೆ. ನೀವು ಇನ್ಸುಲಿನ್‌ಗೆ ಹೆಚ್ಚು ಪ್ರತಿರೋಧವನ್ನು ಹೊಂದಿದ್ದರೆ, ನಿಮ್ಮ ರಕ್ತದ ಹರಿವಿನಲ್ಲಿರುವ ಸಕ್ಕರೆಯನ್ನು ಹೊರಹಾಕಬೇಕಿರುತ್ತದೆ ಹಾಗೂ ಅದಕ್ಕಾಗಿ ಇನ್ಸುಲಿನ್‌ಗೆ ಕಡಿಮೆ ಪ್ರತಿರೋಧ ಹೊಂದಿರುವವರಿಗಿಂತಲೂ ಕಡಿಮೆ ಪ್ರಮಾಣದ ಇನ್ಸುಲಿನ್ ನಿಮಗೆ ಸಾಕಾಗುತ್ತದೆ.
ಇನ್ಸುಲಿನ್‌ಗೆ ವ್ಯಕ್ತವಾಗುವ ಕಡಿಮೆ ಸ್ಪಂದನೆಯನ್ನು ಇನ್ಸುಲಿನ್ ಪ್ರತಿರೋಧ ಎನ್ನಲಾಗುತ್ತದೆ. ದೇಹದಲ್ಲಿರುವ ಜೀವಕೋಶಗಳು ಇನ್ಸುಲಿನ್‌ಗೆ ಪ್ರತಿಕ್ರಿಯೆ ತೋರದಿರುವುದನ್ನು ಇನ್ಸುಲಿನ್ ಪ್ರತಿರೋಧ ಎನ್ನಲಾಗುತ್ತದೆ, ಹಾಗಾದಾಗ ಸಕ್ಕರೆಯು ಜೀವಕೋಶಗಳಿಗೆ ಹೋಗದೇ ರಕ್ತದಲ್ಲಿಯೇ ಉಳಿದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ದೇಹವು ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ ಹೊಂದಿರುವ ಸ್ಥಿತಿಯನ್ನು ಹೈಪರ್‌ಗ್ಲೈಸೀಮಿಯಾ ಎಂದು ಕರೆಯಲಾಗುತ್ತದೆ, ಇದು ಡಯಾಬಿಟಿಸ್‌ಗೆ ಕಾರಣವಾಗುತ್ತದೆ. ಇನ್ಸುಲಿನ್ ಪ್ರತಿರೋಧ ಸಾಮಾನ್ಯವಾಗಿ ಟೈಪ್ 2 ಡಯಾಬಿಟಿಸ್‌ನಲ್ಲಿ ಕಂಡು ಬರುತ್ತದೆಯಾದರೂ, ಟೈಪ್ 1 ಡಯಾಬಿಟಿಸ್ ಹೊಂದಿರುವವರು ಕೂಡ ಇನ್ಸುಲಿನ್ ಪ್ರತಿರೋಧವನ್ನು ಹೊಂದಬಹುದು.
ಇನ್ಸುಲಿನ್ ಪ್ರತಿರೋಧ ಹೇಗೆ ಡಯಾಬಿಟಿಸ್‌ಗೆ ಕಾರಣವಾಗುತ್ತದೆ?
ಇನ್ಸುಲಿನ್ ಪ್ರತಿರೋಧಿಂದಾಗಿ ಜೀವಕೋಶಗಳು ರಕ್ತದಿಂದ ಸಕ್ಕರೆಯನ್ನು ಹೀರಿಕೊಳ್ಳದಿದ್ದಾಗ, ಸಕ್ಕರೆಯು ರಕ್ತದಲ್ಲಿಯೇ ಉಳಿದುಬಿಡುತ್ತದೆ. ಇನ್ಸುಲಿನ್ ಬೇಡಿಕೆಯನ್ನು ಪೂರೈಸುವ ಸಲುವಾಗಿ, ಬೀಟಾ ಜೀವಕೋಶಗಳು ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸಲು ಶುರುಮಾಡುತ್ತವೆ. ಬೀಟಾ ಜೀವಕೋಶಗಳು ಎಲ್ಲಿಯವರೆಗೆ ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆಯೋ ಅಲ್ಲಿಯವರೆಗೆ ಎಲ್ಲವೂ ನಿಯಂತ್ರಣದಲ್ಲಿರುತ್ತದೆ. ಕ್ರಮೇಣ, ಬೀಟಾ ಜೀವಕೋಶಗಳಿಗೆ ದೇಹದ ಇನ್ಸುಲಿನ್ ಬೇಡಿಕೆಯನ್ನು ಪೂರೈಸಲಾಗುವುದಿಲ್ಲ. ಆಗ ಸಕ್ಕರೆಯು ರಕ್ತದ ಹರಿವಿನಲ್ಲಿ ಸೇರಿಕೊಳ್ಳುವ ಮೂಲಕ ಡಯಾಬಿಟಿಸ್‌ಗೆ ಕಾರಣವಾಗುತ್ತದೆ.
ಯಾವ ಅಂಶಗಳು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತವೆ?
ಅನುವಂಶೀಯ ಅಂಶಗಳು ಮತ್ತು ಸುತ್ತಮುತ್ತಲಿನ ಪರಿಸರದ ಅಂಶಗಳು ಡಯಾಬಿಟಿಸ್‌ನ ಬೆಳವಣಿಗೆಗೆ ಕಾರಣವಾಗುತ್ತವೆ. ಈಗ ನಿರ್ದಿಷ್ಟವಾಗಿ ಟೈಪ್ 2 ಡಯಾಬಿಟಿಸ್ ಬಗ್ಗೆ ತಿಳಿದುಕೊಳ್ಳೋಣ.
1. ಅನುವಂಶೀಯ ಅಂಶಗಳು
ಟೈಪ್ 2 ಡಯಾಬಿಟಿಸ್ ಅಪಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ 75 ಜೀನ್ ಸ್ಥಳಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಕರ್ನಾಟಕದ ಸಂಶೋಧಕರು, ಭಾರತದ ಜನಸಂಖ್ಯೆಯಲ್ಲಿ ಎರಡು ಬಗೆ ಜೀನ್ ವೇರಿಯಂಟ್‌ಗಳನ್ನು ಪತ್ತೆ ಮಾಡಿದ್ದು, ಅವುಗಳನ್ನು TCF7L2 ಮತ್ತು SLC30A8 ಜೀನ್ಸ್ ಎಂದು ಹೆಸರಿಸಲಾಗಿದೆ. ಭಾರತದ ಟೈಪ್ 2 ಡಯಾಬಿಟಿಸ್ ಪ್ರಕರಣಗಳಲ್ಲಿ ಶೇಖಡ 30 ರಷ್ಟು ಪಾಲು ಈ ಜೀನ್‌ಗಳದ್ದೇ ಆಗಿದೆ.[2]
ಈ ಅಪಾಯಕಾರಿ ವಂಶವಾಹಿ(ಜೀನ್ಸ್) ಗಳನ್ನು ಹೊಂದಿದ್ದರು ಕೂಡ, ಕೆಲ ವ್ಯಕ್ತಿಗಳು ಡಯಾಬಿಟಿಸ್‌ನಿಂದ ಪಾರಾಗಿದ್ದಾರೆ. ಬೊಜ್ಜು, ಆಹಾರಕ್ರಮ, ಪರಿಸರ, ಮತ್ತು ಜೀವನಶೈಲಿಯಂತಹ ಇನ್ನಿತರೆ ಅಂಶಗಳು ಕೂಡ ಟೈಪ್[2] ಡಯಾಬಿಟಿಸ್‌ಗೆ ಕಾರಣವೆಂದು ಸಂಶೋಧಕರು ತೀರ್ಮಾನಕ್ಕೆ ಬಂದಿದ್ದಾರೆ.
2. ಬೊಜ್ಜು
ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಹೆಚ್ಚಿನ ಕೊಬ್ಬನ್ನು ಬೊಜ್ಜು ಎನ್ನಲಾಗುತ್ತದೆ, ಟೈಪ್ 2 ಡಯಾಬಿಟಿಸ್‌ನ ಬೆಳವಣಿಗೆಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಇದು ಒಂದು.
ಕೊಬ್ಬಿನ ಜೀವಕೋಶಗಳು ಹಾರ್ಮೋನ್‌ಗಳನ್ನು ಮತ್ತು ಉರಿಯೂತ ಉಂಟು ಮಾಡುವ ರಾಸಾಯನಿಕಗಳನ್ನು ಉತ್ಪಾದಿಸುವ ಮೂಲಕ ಹಾಗೂ ನಾನ್-ಎಸ್ಟೆರಿಫೈಡ್ ಫ್ಯಾಟಿ ಆಸಿಡ್‌ಗಳನ್ನು (NEFA)ಬಿಡುಗಡೆ ಮಾಡುವ ಮೂಲಕ ಮೆಟಬಾಲಿಸಮ್ ಮೇಲೆ ಪರಿಣಾಮ ಬೀರುತ್ತವೆ. ಬೊಜ್ಜಿರುವ ವ್ಯಕ್ತಿಗಳಲ್ಲಿ, ಈ ವಸ್ತುಗಳ ಸ್ರವಿಸುವಿಕೆಯು ಅನೇಕ ಪಟ್ಟು ಹೆಚ್ಚಿರುತ್ತದೆ. NEFA ಅನ್ನು ಇನ್ಸುಲಿನ್‌ಗೆ ಪ್ರತಿರೋಧ ಉಂಟು ಮಾಡುವ ಹಾಗೂ ಬೀಟಾ ಜೀವಕೋಶಗಳ ಕೆಲಸಕ್ಕೆ ಅಡ್ಡಿಯುಂಟು ಮಾಡುವ ಪ್ರಮುಖ ಅಂಶವೆಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ, ಹೀಗಾಗಿ ಇದು ಡಯಾಬಿಟಿಸ್‌ಗೆ ಕಾರಣವಾಗುತ್ತದೆ.[1]
ನಿಮ್ಮ ದೇಹದಲ್ಲಿ ಕೊಬ್ಬು ಹೇಗೆ ಶೇಖರಣೆಯಾಗಿದೆ ಎಂಬುದರ ಮೇಲೆ ನಿಮ್ಮ ಇನ್ಸುಲಿನ್ ಪ್ರತಿರೋಧ ನಿರ್ಧರಿತವಾಗಿರುತ್ತದೆ. ದೇಹದಾದ್ಯಂತ ಸಮ ಪ್ರಮಾಣದಲ್ಲಿ ಕೊಬ್ಬನ್ನು ಹೊಂದಿರುವವರು, ಹೊಟ್ಟೆಯಲ್ಲಿ ಹೆಚ್ಚು ಕೊಬ್ಬು ಹೊಂದಿರುವವರಿಗಿಂತ ಹೆಚ್ಚು ಇನ್ಸಲಿನ್‌ಗೆ ಸ್ಪಂದನೆ ಹೊಂದಿರುತ್ತಾರೆ
3. ಕರುಳಿನಲ್ಲಿರುವ ಬ್ಯಾಕ್ಟೀರಿಯಾ
ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ಸಂಖ್ಯೆಯಲ್ಲಿ ಆಗುವ ಬದಲಾವಣೆ ಕೂಡ ಡಯಾಬಿಟಿಸ್‌ಗೆ ಕಾರಣವಾಗುತ್ತದೆ. ಉದಾಹರಣೆಗೆ, ಬಿಫಿಡೊಬ್ಯಾಕ್ಟೇರಿಯಾಮ್ ವರ್ಗಕ್ಕೆ ಸೇರಿದ ಭಾರಿ ಪ್ರಮಾಣದ ಬ್ಯಾಕ್ಟೀರಿಯಾಗಳು ಗ್ಲುಕೋಸ್-ಸಹಿಷ್ಣುತೆಯನ್ನು(ಇದು ಟೈಪ್ 2 ಡಯಾಬಿಟಿಸ್‌ನ ಗುರುತಾಗಿದ್ದು, ನಿಮ್ಮ ದೇಹವು ಎಷ್ಟು ಚೆನ್ನಾಗಿ ಸಕ್ಕರೆಯನ್ನು ಹೀರಿಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತದೆ) ಸುಧಾರಸಿಲು ಸಹಾಯ ಮಾಡುತ್ತವೆ ಮತ್ತು ಕೆಳ-ದರ್ಜೆಯ ಉರಿಯೂತವನ್ನು (ಲೋ-ಗ್ರೇಡ್ ಇಂಫ್ಲೇಮೇಶನ್) ಕಡಿಮೆ ಮಾಡುತ್ತವೆ. ಮತ್ತೊಂದೆಡೆ, ಬ್ಯಾಕ್ಟೀರಾಯ್ಡ್‌ಗಳಂತಹ ಬ್ಯಾಕ್ಟರಿಯಾಗಳ ಭಾರಿ ಪ್ರಮಾಣವು ಟೈಪ್ 1 ಡಯಾಬಿಟಿಸ್‌ಗೆ ಕಾರಣವಾಗಬಹುದು.[3]
ಹಾಗೆಯೇ, ಕರುಳಿನಲ್ಲಿನ ಬ್ಯಾಕ್ಟೀರಿಯಾಗಳ ಅನುಪಾತ ಕೂಡ ಡಯಾಬಿಟಿಸ್‌ನ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಡಯಾಬಿಟಿಸ್ ಹೊಂದಿಲ್ಲದವರಿಗೆ ಹೋಲಿಸಿದರೆ, ಡಯಾಬಿಟಿಸ್ ಹೊಂದಿರುವವರಲ್ಲಿ ಫರ್ಮಿಕ್ಯುಟ್‌ಗಳ ಅನುಪಾತವು ತೀರಾ ಕಡಿಮೆ ಇದ್ದು, ಬ್ಯಾಕ್ಟೀರಾಯ್ಡ್‌ಗಳ ಅನುಪಾತವು ಸ್ವಲ್ಪ ಹೆಚ್ಚಿದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.[3]
ಇನ್ನೂ ಇತ್ತೀಚಿನ ಅಧ್ಯಯನವೊಂದು, ಒಂದು ಹೆಜ್ಜೆ ಮುಂದೆ ಹೋಗಿ, ಕರುಳಿನ ಮೈಕ್ರೋಬ್‌ನಲ್ಲಿರುವ ಸಿಂಗಲ್ ನ್ಯೂಕ್ಲಿಯೊಟೈಡ್ ಪಾಲಿಮಾರ್ಫಿಸ್ಮ್ ಎಂದು ಕರೆಯಲ್ಪಡುವ ಒಂದು ರೀತಿಯ ಆನುವಂಶಿಕ ವ್ಯತ್ಯಯವು, ಡಯಾಬಿಟಿಸ್‌ಗೆ ಕಾರಣವಾಗಬಹುದು ಎಂದು ಸೂಚಿಸಿದೆ.[4]
4. ಮಾನಸಿಕ / ಭಾವನಾತ್ಮಕ ಒತ್ತಡ
ಖಿನ್ನತೆ, ಆತಂತ, ಮತ್ತು ಒತ್ತಡ ಈ ಮೂರು ಭಾರತದ ಪ್ರಮುಖ ಆರೋಗ್ಯ ಸಮಸ್ಯೆಗಳಾಗಿವೆ.
ಒತ್ತಡಕ್ಕೊಳಗಾದಾಗ, ಕಾರ್ಟಿಸೊಲ್‌ನಂತಹ ಒತ್ತಡದ ಹಾರ್ಮೋನ್‌ಗಳು ರಕ್ತಕ್ಕೆ ಬಿಡುಗಡೆ ಆಗುತ್ತದೆ, ಇದರ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಮತ್ತು ಬೀಟಾ ಜೀವಕೋಶಗಳಿಗೆ ಇನ್ಸುಲಿನ್ ಉತ್ಪಾದಿಸಲು ತೊಂದರೆಯಾಗುತ್ತದೆ.[5]
ಇದು ಕೇವಲ ಡಯಾಬಿಟಿಸ್‌ಗಷ್ಟೆ ಕಾರಣವಾಗುವುದಲ್ಲದೆ, ಡಯಾಬಿಟಿಸ್ ಇರುವವರು ತಮ್ಮ ಅಸ್ವಸ್ಥತೆಯನ್ನು ಸರಿಪಡಿಸಿಕೊಳ್ಳದಂತೆ ಅಡ್ಡಿಯುಂಟು ಮಾಡುತ್ತದೆ. ಸಂದರ್ಶನವೊಂದರಲ್ಲಿ ಸಂಶೋಧಕರೊಂದಿಗೆ ಮಾತನಾಡಿದ ರೈತರೊಬ್ಬರು, ತಮಗೆ ಕೆಲಸ ಮಾಡಲು ಇಷ್ಟ ಇದೆಯಾದರೂ ಡಯಾಬಿಟಿಸ್‌ನಿಂದಾಗಿ ಬೇಗ ಸುಸ್ತಾಗಿ ಕುಸಿದು ಬೀಳುವಂತೆ ಆಗುತ್ತದೆ ಎಂದು ಹೇಳಿದ ಉದಾಹರಣೆ ಇದೆ. ಗಾಯಗಳಿಗೆ ಸೋಂಕಾಗಬಹುದು ಎಂದು ಅವರು ಹೆದರಿರುವುದು ಕಂಡುಬರುತ್ತಿತ್ತು. ಅದು ಅವರನ್ನ ಬಹಳಷ್ಟು ಒತ್ತಡ ಮತ್ತು ಆತಂಕಕ್ಕೆ ದೂಡಿತ್ತು, ಹಾಗೂ ಅವರ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿದ್ದವು.[6]
5. ಇತರೆ ಜೀವನಶೈಲಿ ಅಂಶಗಳು
ಈ ಕೆಳಗಿನ ಅಂಶಗಳು ಇತರೆ ಅಪಾಯಕಾರಿ ಅಂಶಗಳಾಗಿವೆ:
- ಜಡ ಜೀವನಶೈಲಿ
- ಕಡಿಮೆ ನಾರಿನಂಶ ಮತ್ತು ಅಧಿಕ ಗ್ಲೈಸಿಮಿಕ್ ಇಂಡೆಕ್ಸ್ ಆಹಾರಕ್ರಮ
- ದೈಹಿಕ ಚಟುವಟಿಕೆಯ ಕೊರತೆ
- ಧೂಮಪಾನ
- ಮದ್ಯಪಾನ
- ನಿದ್ರೆ ಸಮಸ್ಯೆ
ಮಕ್ಕಳ ವೈದ್ಯರು ಮತ್ತು ಅಲರ್ಜಿ ತಜ್ಞರು ಆದ ಡಾ. ಜಾನ್ ಪೂಥೂಲ್ಲಿಲ್, ‘ಡಯಾಬಿಟಿಸ್: ನಿಜವಾದ ಕಾರಣ ಮತ್ತು ಸರಿಯಾದ ಚಿಕಿತ್ಸೆ’ ಎಂಬ ತಮ್ಮ ಪುಸ್ತಕದಲ್ಲಿ ಡಯಾಬಿಟಿಸ್‌ಗೆ ಕಾರಣವಾಗುವ ಇನ್ಸುಲಿನ್ ಪ್ರತಿರೋಧದ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಕೊಬ್ಬಿನಾಮ್ಲದ ಕರಗುವಿಕೆಯ ಸಿದ್ಧಾಂತದೊಂದಿಗೆ ಬಂದಿರುವ ಅವರು, ಡಯಾಬಿಟಿಸ್‌ಗೆ ಕಾರಣವಾಗುವ ಕೊಬ್ಬಿನ ಶೇಖರಣೆಗೆ ಅನುವಂಶೀಯ ಸಾಮರ್ಥ್ಯವೇ ಕಾರಣವೆಂದು ಸೂಚಿಸಿದ್ದಾರೆ. ಅವರ ಪ್ರಕಾರ, ಸ್ನಾಯುಗಳು ಸಕ್ಕರೆಯನ್ನು ಶಕ್ತಿಯನ್ನಾಗಿ ಬಳಸುವ ಬದಲು, ಕೊಬ್ಬಿನಾಮ್ಲಗಳನ್ನು ಶಕ್ತಿಗಾಗಿ ಬಳಸಿಕೊಳ್ಳುತ್ತವೆ. ಹೀಗಾಗಿ ರಕ್ತದ ಹರಿವಿನಲ್ಲಿಯೇ ಉಳಿದು ಬಿಡುವ ಸಕ್ಕರೆಯು, ಕೊನೆಗೆ ಹೈ ಬ್ಲಡ್ ಶುಗರ್‌ಗೆ ಕಾರಣವಾಗಿ, ಡಯಾಬಿಟಿಸ್ ಉಂಟಾಗುತ್ತದೆ. ಅದಾಗ್ಯೂ, ಈ ಸಿದ್ಧಾಂತಕ್ಕೆ ಇನ್ನಷ್ಟು ಬೆಂಬಲ ಸಿಗಬೇಕಿದೆ.[7]
ಉಲ್ಲೇಖಗಳು:
- A.S. Al-Goblan, M.A. Al-Alfi, M.Z. Khan. Mechanism linking diabetes mellitus and obesity. Diabetes, Metabolic Syndrome and Obesity: Targets and Therapy. 2014. 7:587-591. doi:10.2147/DMSO.S67400.
- N.M. Phani, P. Adhikari, S.K. Nagri, S.C. D’Souza, K. Satyamoorthy, P.S. Rai. Replication and Relevance of Multiple Susceptibility Loci Discovered from Genome-Wide Association Studies for Type 2 Diabetes in an Indian Population. PLoS ONE. 2016. 11(6): e0157364. https://doi.org/10.1371/journal.pone.0157364
- N. Larsen, F.K. Vogensen, F.W.J. van den Berg, D.S. Nielsen, A.S. Andreasen, B.K. Pedersen, et al. Gut Microbiota in Human Adults with Type 2 Diabetes Differs from Non-Diabetic Adults. PLoS ONE. 2010. 5(2): e9085. https://doi.org/10.1371/journal.pone.0009085
- Y. Chen, Z. Li, S. Hu, J. Zhang, J. Wu, N. Shao, et al. Gut metagenomes of type 2 diabetic patients have characteristic single-nucleotide polymorphism distribution in Bacteroides coprocola. Microbiome. 2017. 5:15. https://doi.org/10.1186/s40168-017-0232-3
- H. Zardooz, S. Zahediasl, F. Rostamkhani, B. Farrokhi, S. Nasiraei, B. Kazeminezhad, B., & Gholampour, et al. Effects of acute and chronic psychological stress on isolated islets’ insulin release. EXCLI Journal, 11, 163–175.
- M. Little, S. Humphries, K. Patel, C. Dewey. Decoding the Type 2 Diabetes Epidemic in Rural India. Medical Anthropology. 2017. 36(2):96-110. doi:10.1080/01459740.2016.1231676.
- Sysy Morales. New Book: Diabetes: The Real Cause and the Real Cure. Diabetes Daily. https://www.diabetesdaily.com/blog/new-book-diabetes-the-real-cause-and-the-real-cure-476102/