Reading Time: 3 minutes

ತಜ್ಞರಿಂದ ವಿಮರ್ಶೆ – ಅಶ್ವಿನಿ ಎಸ್.ಕಾನಡೆ, ನೋಂದಾಯಿತ ಡಯಟಿಶೀಯನ್ ಮತ್ತು ಪ್ರಮಾಣೀಕೃತ ಡಯಾಬಿಟಿಸ್ ಶಿಕ್ಷಕರು. ಇವರಿಗೆ 17 ವರ್ಷಗಳ ಅನುಭವವಿದೆ

ಕಣ್ಣು, ಹಲವಾರು ಭಾಗಗಳಿಂದ ಕೂಡಿದ ಪುಟ್ಟ ಸಂಕೀರ್ಣ ಅಂಗವಾಗಿದ್ದು, ರಕ್ತದಲ್ಲಾಗುವ ಮೆಟಾಬಾಲಿಕ್ ಬದಲಾವಣೆಗಳಿಗೆ ಸಂವೇದನೆಯನ್ನು ಹೊಂದಿರುತ್ತವೆ.

ಮಧುಮೇಹವು ಕಣ್ಣನ್ನು ಕಣ್ಣಿನ ಒಣಗುವಿಕೆ, ಮಸುಕಾದ ದೃಷ್ಟಿ, ಕಣ್ಣಿನ ಪೊರೆ ಮತ್ತು ಡಯಾಬಿಟಿಕ್ ರೆಟಿನೋಪತಿಯಂತಹ ಇತರ ತೊಂದರೆಗಳಿಗೆ ಈಡು ಮಾಡುತ್ತದೆ-ಇದು ರೆಟಿನಾದ ಮೇಲೆ ಪರಿಣಾಮ ಬೀರುವ ಒಂದು ಗಂಭೀರ ಸ್ಥಿತಿಯಾಗಿದೆ.(1) ಟೈಪ್ 2 ಡಯಾಬಿಟಿಸ್ ಇರುವವರಲ್ಲಿ 20% ರಿಂದ 40% ರಷ್ಟು ಜನರು ಡಯಾಬಿಟಿಕ್ ರೆಟಿನೋಪತಿಯಿಂದ ಬಳಲುತ್ತಾರೆ, ಆದರೂ ಇದು ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಿಗಿಂತ ಏಷ್ಯಾದ ದೇಶಗಳಲ್ಲಿ ಇದರಿಂದ ಬಳಲುವವರ ಸಂಖ್ಯೆ (ಭಾರತದಲ್ಲಿ 23%) ಸ್ವಲ್ಪ ಕಡಿಮೆ.(2) ಡಯಾಬಿಟಿಸ್ ದೃಷ್ಟಿಹೀನತೆಯ ಸಾಮಾನ್ಯ ಕಾರಣವಾಗಿದೆ, ಅಲ್ಲದೆ ಇದು ಕುರುಡುತನಕ್ಕೂ ಕಾರಣವಾಗಬಹುದು.

ಡಯಾಬಿಟಿಸ್ ಹೇಗೆ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ?

ಹೈಪರ್ಗ್ಲೈಸೀಮಿಯಾ (ಅಧಿಕ ರಕ್ತದ ಸಕ್ಕರೆ) ರಕ್ತವನ್ನು ಕ್ಯಾಪಿಲ್ಲರೀಸ್ (ಚಿಕ್ಕ ಕನೆಕ್ಟರ್ ರಕ್ತನಾಳಗಳು) ಒಳಗೆ ಇರಿಸುವ ಶಕ್ತಿಗಳ ಸಹಜವಾದ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ. ಇದರಿಂದಾಗಿ, ದ್ರವ ಸೋರಿಕೆಯಾಗುತ್ತದೆ ಅಥವಾ ಕ್ಯಾಪಿಲ್ಲರಿಗಳು ಕಟ್ಟಿಕೊಳ್ಳುತ್ತವೆ. ತದನಂತರ ಇದು ರೆಟಿನಾಗೆ ಹಾನಿಯಾಗುವ ವಸ್ತುಗಳನ್ನು (ಉದಾಹರಣೆಗೆ, ಸುಧಾರಿತ ಗ್ಲೈಕೇಶನ್ ಎಂಡ್ ಪದಾರ್ಥಗಳು) ಉತ್ಪಾದಿಸುತ್ತವೆ.

ಯಾವ ಬಗೆಯ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳಬಹುದು?

ತೀವ್ರ ಡಯಾಬಿಟಿಕ್ ರೆಟಿನೋಪಥಿಯು ಗಿ ಒಣಗಿದ ಕಣ್ಣಿನಂತಹ ಚಿಕ್ಕ ಸಮಸ್ಯೆಗಳಿಂದ ಹಿಡಿದು ಕುರುಡುತನದಂತಹ ಗಂಭೀರ ಸಮಸ್ಯೆಯೆಡೆಗೆ ನಿಮ್ಮನ್ನು ಕರೆದೊಯ್ಯಬಹುದು. ಡಯಾಬಿಟಿಸ್ ಇರುವ ವ್ಯಕ್ತಿಯು ಸಾಮಾನ್ಯವಾಗಿ ಈ  ರೋಗದ ತೀವ್ರತೆಯು ಹೆಚ್ಚಾಗುವವರೆಗೂ ಅದನ್ನು ಗಮನಿಸಿರುವುದಿಲ್ಲ.

1. ಒಣಗಿದ ಕಣ್ಣು

ಡಯಾಬಿಟಿಸ್ ಇರುವ ಹೆಚ್ಚಿನ ಜನರು ಕನಿಷ್ಟ ಪಕ್ಷ ಕಡಿಮೆ ತೀವ್ರತೆಯ ಒಣಗಿದ ಕಣ್ಣುಗಳನ್ನು ಹೊಂದಿರುತ್ತಾರೆ. ಆದರೆ, ಅನೇಕ ಜನರಲ್ಲಿ, ಕಾರ್ನಿಯಾದ ಸಂವೇದನಾ ಶಕ್ತಿ ಕಡಿಮೆಯಾಗುವುದರಿಂದ, ಅವರು ಒಣಗಿದ ಕಣ್ಣನ್ನು ಗುರುತಿಸಲು ವಿಫಲರಾಗಿ, ಚಿಕಿತ್ಸೆಯನ್ನು ಪಡೆಯದಂತೆ ಮಾಡುತ್ತದೆ (ಚಿಕಿತ್ಸೆಯು ಸಾಮಾನ್ಯವಾಗಿ ಕೃತಕ ಕಣ್ಣೀರಾಗಿರುತ್ತದೆ).(2)  ಒಣಗಿದ ಕಣ್ಣಿಗೆ ಏನಾದರೂ ಸಮಸ್ಯೆಯಾಗುವ ಮೊದಲೇ ಗಮನ ಕೊಡಬೇಕು, ದೀರ್ಘಕಾಲದವರೆಗೆ ಚಿಕಿತ್ಸೆ ನೀಡದಿದ್ದರೆ ಅದು ನಿಮ್ಮ ಕಣ್ಣಿನ ಮೇಲ್ಮೈಯನ್ನು ಹಾನಿಗೊಳಿಸುತ್ತದೆ.

2. ಸೋಂಕುಗಳು

ಡಯಾಬಿಟಿಸ್‌ ಇರುವ ಜನರು ಕಣ್ಣುರೆಪ್ಪೆಗಳ ಸೋಂಕು, ಕಾರ್ನಿಯಾ ಮತ್ತು ಕಾಂಜಂಕ್ಟಿವೈಟಿಸ್ (ಮದ್ರಾಸ್ ಕಣ್ಣು) ಇತ್ಯಾದಿ ಬಗೆಯ ಕಣ್ಣಿನ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಇದನ್ನು ತಡೆಯಲು ರಕ್ತದಲ್ಲಿನ ಸಕ್ಕರೆಯ ಕಟ್ಟುನಿಟ್ಟಿನ ನಿರ್ವಹಣೆ ಅತ್ಯಗತ್ಯ, ಮತ್ತು ಈ ಸೋಂಕುಗಳು ಕಂಡುಬಂದರೆ ಅದಕ್ಕೆ ಶೀಘ್ರದಲ್ಲಿಯೇ ಚಿಕಿತ್ಸೆ ಕೊಡಿಸಬೇಕು.

3. ಕಣ್ಣಿನ ಪೊರೆ

ಇದು ಡಯಾಬಿಟಿಕ್‌ಗಳಲ್ಲಿ ಕಂಡುಬರುವ ಸರ್ವೇಸಾಮಾನ್ಯ ಕಣ್ಣಿನ ತೊಂದರೆಗಳಲ್ಲೊಂದಾಗಿದೆ. ಕಣ್ಣೊಳಗಿನ ಲೆನ್ಸ್ ಮಂಜಾಗುವುದನ್ನೇ ಕೆಟರಾಕ್ಟ್ ಅಥವಾ ಕಣ್ಣಿನ ಪೊರೆ ಎನ್ನುತ್ತಾರೆ. ಡಯಾಬಿಟಿಸ್‌ ಇರುವ ವಯಸ್ಕರರಲ್ಲಿ (65 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಕಣ್ಣಿನ ಪೊರೆಯ ಅಪಾಯವು ನಾಲ್ಕು ಪಟ್ಟು ಹೆಚ್ಚಿರುತ್ತದೆ. ಹೈಪರ್ಗ್ಲೈಸೀಮಿಯಾವು ಕಣ್ಣಿನ ಪೊರೆ ಬೆಳೆಯಲು ಪ್ರಮುಖ ಕಾರಣವಾಗಿದೆ, ಇದರ ಜೊತೆಗೆ ಪ್ರಿಡಿಯಾಬಿಟಿಸ್ ಎಂಬ ಸಮಸ್ಯೆಯೂ ಸೇರಿದೆ (ಖಾಲಿ ಹೊಟ್ಟೆಯ ರಕ್ತದಲ್ಲಿನ ಗ್ಲೂಕೋಸ್ 110 ರಿಂದ 125 ಮಿಗ್ರಾಂ/ಡಿಎಲ್). ಸಮಾಧಾನ ಪಡುವಂತಹ ಸುದ್ದಿ ಏನೆಂದರೆ ಕಟ್ಟುನಿಟ್ಟಾಗಿ ಸಕ್ಕರೆಯನ್ನು ನಿಭಾಯಿಸಿದರೆ, ಡಯಾಬಿಟಿಸ್ ಗೆ ಸಂಬಂಧಿಸಿದ ಚಿಕ್ಕ  ಪ್ರಮಾಣದ ಕಣ್ಣಿನ ಪೊರೆಯ ಸಮಸ್ಯೆಯು ಸಂಪೂರ್ಣವಾಗಿ ಗುಣವಾಗುವ ಸಾಧ್ಯತೆಗಳಿವೆ. ಕಣ್ಣಿನ ಪೊರೆಯ ಚಿಕಿತ್ಸೆ ಎಂದರೆ ಅದು ಸೋಂಕು ತಗುಲಿದ ಮಸೂರವನ್ನು(ಲೆನ್ಸ್) ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು ಮತ್ತು ಅದರ ಸ್ಥಳದಲ್ಲಿ ಕೃತಕ ಮಸೂರವನ್ನು ಅಳವಡಿಸುವುದಾಗಿದೆ.(3)

4. ಗ್ಲೌಕೋಮಾ:

ಇಲ್ಲಿ ಕಣ್ಣಿನೊಳಗಿನ ದ್ರವದ ಒತ್ತಡವು ಹೆಚ್ಚಾಗುತ್ತದೆ. ಇದು ಆರಂಭಿಕ ಹಂತಗಳಲ್ಲಿ, ಯಾವುದೇ ಲಕ್ಷಣಗಳನ್ನು ತೋರದೆ ಇರಬಹುದು, ಆದರೆ ದೀರ್ಘಾವಧಿಯಲ್ಲಿ, ಆಪ್ಟಿಕ್ ನರಗಳ ಸಂಕೋಚನದಿಂದ ದೃಷ್ಟಿ ಸಮಸ್ಯೆಗಳು ಉಂಟಾಗುತ್ತದೆ. ಗ್ಲೌಕೋಮಾದಿಂದ ಬಳಲುತ್ತಿರುವ ಜನರಲ್ಲಿ 10% ಜನರು ಚಿಕಿತ್ಸೆ ಪಡೆಯದೇ ಇದ್ದಲ್ಲಿ ತಮ್ಮ ದೃಷ್ಟಿಯನ್ನೇ ಕಳೆದುಕೊಳ್ಳಬಹುದು.(3) ಕಣ್ಣಿನ ಚಿಕಿತ್ಸಾಲಯದಲ್ಲಿ ಗ್ಲೌಕೋಮಾವನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ.

5. ಡಯಾಬಿಟಿಕ್ ರೆಟಿನೋಪತಿ

ಇದು ಬಹುಶಃ ಡಯಾಬಿಟಿಸ್‌ನ ಅತ್ಯಂತ ತೀವ್ರವಾದ ಕಣ್ಣಿನ ಸಮಸ್ಯೆ ಮತ್ತು ವಯಸ್ಕರಲ್ಲಿ ದೃಷ್ಟಿ ಕಳೆದುಕೊಳ್ಳುವ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.(2) ಡಯಾಬಿಟಿಕ್ ರೆಟಿನೋಪತಿ ನೇರವಾಗಿ ರೆಟಿನಾದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ, ಅಲ್ಲದೇ ಆರಂಭದಲ್ಲಿ ಯಾವುದೇ ಲಕ್ಷಣಗಳು ಕಂಡುಬರದಿದ್ದರೂ, ದೃಷ್ಟಿಯಲ್ಲಿ ಕ್ರಮೇಣ ಇಳಿಕೆ ಮತ್ತು ಕೆಲವೊಮ್ಮೆ ಕುರುಡುತನವಾಗುವ ಸಂಭವವೂ ಇದೆ. ಡಯಾಬಿಟಿಕ್ ರೆಟಿನೋಪತಿಯ ಬೆಳವಣಿಗೆಯಲ್ಲಿ ಮೂರು ಅಂಶಗಳು ಬಹುಮುಖ್ಯವಾಗಿವೆ: ಡಯಾಬಿಟಿಸ್‌ನ ಅವಧಿ, ಹೈಪರ್ಗ್ಲೈಸೀಮಿಯಾ, ಮತ್ತು ಅಧಿಕ ರಕ್ತದೊತ್ತಡ. ಇದಲ್ಲದೆ, ಡಯಾಬಿಟಿಕ್ ರೆಟಿನೋಪತಿ ಮತ್ತು ಜೀವನಶೈಲಿ (ಇತರ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳನ್ನು ಒಳಗೊಂಡಂತೆ) ಪರಸ್ಪರ ಸಂಬಂಧ ಹೊಂದಿವೆ. ಇದನ್ನು ಸಾಮಾನ್ಯವಾಗಿ ಲೇಸರ್ ಅಥವಾ ಶಸ್ತ್ರಚಿಕಿತ್ಸೆಯಿಂದ ತೀವ್ರತೆಗೆ ಅನುಗುಣವಾಗಿ ಚಿಕಿತ್ಸೆ ಮಾಡಲಾಗುತ್ತದೆ (ಪ್ಯಾನ್‌ರೆಟಿನಲ್ ಲೇಸರ್ ಫೋಟೊಕೊಆಗ್ಯುಲೇಷನ್ ಅಥವಾ ಪಾರ್ಸ್-ಪ್ಲಾನಾ ವಿಟ್ರೆಕ್ಟೊಮಿ), ಔಷಧಿಗಳು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಬಹುದಾದರೂ,(2) ಕಡಿಮೆ ತೀವ್ರತೆಯ ಡಯಾಬಿಟಿಕ್ ರೆಟಿನೋಪತಿ ಹೊಂದಿರುವ ಕೆಲವು ರೋಗಿಗಳಲ್ಲಿ ಇದು ಔಷಧಿಗಳಿಂದ 1 ಅಥವಾ 2 ಹಂತಗಳಲ್ಲಿ ಕಡಿಮೆಯಾಗಬಹುದು, ಹಾಗಾಗಿ ಕಟ್ಟುನಿಟ್ಟಾದ ರಕ್ತದಲ್ಲಿನ ಸಕ್ಕರೆ ನಿರ್ವಹಣೆ ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿರುತ್ತದೆ.(2)

ಫಾಲೋ-ಅಪ್ ಭೇಟಿಗಳು.

ನಿಮಗೆ ಇತ್ತೀಚೆಗೆ ಡಯಾಬಿಟಿಸ್ ಅಥವಾ ಪ್ರಿಡಿಯಾಬಿಟಿಸ್ ಇರುವ ವಿಷಯ ಗೊತ್ತಾಗಿದ್ದರೆ, ಕಣ್ಣಿನ ಡಾಕ್ಟರ್‌ರನ್ನು ಭೇಟಿ ಮಾಡುವಂತೆ ನಿಮಗೆ ಶಿಫಾರಸು ಮಾಡಲಾಗುತ್ತದೆ.(1) ನಂತರ, ಇದನ್ನು ವಾರ್ಷಿಕ ಕಣ್ಣಿನ ತಪಾಸಣೆಗಳಂತೆ ಅನುಸರಿಸಬೇಕು ಏಕೆಂದರೆ, ಮೊದಲೇ ಹೇಳಿದಂತೆ, ಕಣ್ಣಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳ ಲಕ್ಷಣಗಳು ಮುಂದುವರಿದ ಹಂತದವರೆಗೂ ಗೋಚರಿಸುವುದಿಲ್ಲ. ನಿಮಗೆ ಯಾವುದೇ ಕಣ್ಣಿನ ಸಮಸ್ಯೆಗಳಿದ್ದರೆ, ವಿಶೇಷವಾಗಿ ದೃಷ್ಟಿ ತೊಂದರೆಗಳು, ಓದುವಲ್ಲಿ ತೊಂದರೆ, ಹೊಸ ಸಮಸ್ಯೆ ಅಥವಾ ಹಠಾತ್ ತೊಂದರೆ, ಬಣ್ಣದ ಗ್ರಹಿಕೆಯಲ್ಲಿನ ಬದಲಾವಣೆಗಳು ಅಥವಾ ಅಸಹಜವಾದ ಚುಕ್ಕಿಗಳನ್ನು ನೋಡುವುದು, ಹೀಗಾದಲ್ಲಿ ನೀವು ಸಾಧ್ಯವಾದಷ್ಟು ಬೇಗ ಡಾಕ್ಟರೊಂದಿಗಿನ ಭೇಟಿಯನ್ನು ನಿಗದಿಪಡಿಸಿಕೊಳ್ಳಿ. ಮತ್ತು ನೀವು ಈಗಾಗಲೇ ಡಯಾಬಿಟಿಕ್ ರೆಟಿನೋಪತಿಯಿಂದ ಬಳಲುತ್ತಿದ್ದರೆ, ಅದರ ತೀವ್ರತೆಯ ಅನುಸಾರವಾಗಿ ನಿಮ್ಮ ಡಾಕ್ಟರ್ ನಿಮ್ಮನ್ನು ಪ್ರತಿ 3-6 ತಿಂಗಳಿಗೊಮ್ಮೆ ಭೇಟಿ ನೀಡುವಂತೆ ಸೂಚಿಸುತ್ತಾರೆ.

ವಿಶೇಷ ಆರೈಕೆ

ಗರ್ಭಾವಸ್ಥೆಯಲ್ಲಿ ಸಂಭವಿಸುವ ಹಾರ್ಮೋನುಗಳ ಬದಲಾವಣೆಗಳು ಡಯಾಬಿಟಿಕ್ ರೆಟಿನೋಪತಿಯನ್ನು ಇನ್ನಷ್ಟು ಹದಗೆಡಿಸಬಹುದು,(1)  ಆದ್ದರಿಂದ ಗರ್ಭಾವಸ್ಥೆಯಲ್ಲಿ ಹೆಚ್ಚುವರಿ ಕಾಳಜಿ ಮತ್ತು ಫಾಲೋ-ಅಪ್‍ಗಳ ಅಗತ್ಯವಿರುತ್ತದೆ. ಅಲ್ಲದೆ, ಡಯಾಬಿಟಿಕ್ ಕಣ್ಣಿನ ತೊಂದರೆ ಇರುವವರಿಗೆ ಮೂತ್ರಪಿಂಡದ ತೊಂದರೆಗಳ ಅಪಾಯವೂ ಇದೆ. ಆದ್ದರಿಂದ, ನಿಮಗೆ ಡಯಾಬಿಟಿಕ್ ಕಣ್ಣಿನ ಕಾಯಿಲೆ ಇದ್ದರೆ ಅಥವಾ ಕಿಡ್ನಿ ಸಮಸ್ಯೆಗಳಿದ್ದರೆ, ಕಿಡ್ನಿಗಳ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.

ಚಿಕಿತ್ಸೆಯ ಅವಲೋಕನ

ಅದೃಷ್ಟವಶಾತ್, ಆಗಾಗ್ಗೆ ಕಣ್ಣಿನ ತಪಾಸಣೆಗಳನ್ನು ಮಾಡಿಸುತ್ತಾ ಇದ್ದರೆ ಕಣ್ಣಿನ ಸಮಸ್ಯೆಗಳನ್ನು ಬೇಗನೆ ಪತ್ತೆ ಮಾಡಬಹುದು. ನಿಮ್ಮ ಕಣ್ಣನ್ನು ಕೂಲಂಕಷವಾಗಿ ಪರೀಕ್ಷಿಸಲು ಕಣ್ಣಿನ ಡಾಕ್ಟರ್‌ ವಿವಿಧ ಸಾಧನಗಳನ್ನು ಬಳಸಿ, ನಿಮ್ಮ ಕಾರ್ನಿಯಾ, ಇಂಟ್ರಾಕ್ಯುಲರ್ ಒತ್ತಡ, ರೆಟಿನಾ ಇತ್ಯಾದಿಗಳನ್ನು ಪರಿಶೀಲಿಸುತ್ತಾರೆ. ಕೆಲವು ಸಮಸ್ಯೆಗಳಿಗೆ (ಒಣಗಿದ ಕಣ್ಣು, ಸೋಂಕುಗಳು) ಔಷಧಿಗಳಿಂದ ಮಾತ್ರ ಚಿಕಿತ್ಸೆ ನೀಡಬಹುದು; ಇನ್ನುಳಿದವುಗಳಿಗೆ (ಡಯಾಬಿಟಿಕ್ ರೆಟಿನೋಪತಿ, ಕಣ್ಣಿನ ಪೊರೆ), ಕೆಲವು ಸಲ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.

ತಡೆಗಟ್ಟುವಿಕೆಯ ಅವಲೋಕನ

ಕಣ್ಣಿನ ಸಮಸ್ಯೆಗಳ ಅಪಾಯವನ್ನು ಕುಗ್ಗಿಸಲು ಪರಿಣಾಮಕಾರಿಯಾದ ಸಕ್ಕರೆ ಮತ್ತು ರಕ್ತದೊತ್ತಡದ ನಿಯಂತ್ರಣ ಅತ್ಯಗತ್ಯವಾಗಿದೆ. ಡಯಾಬಿಟಿಸ್-ಸ್ನೇಹಿ ಆಹಾರವನ್ನು ಸೇವಿಸಿ. ನೀವು ಧೂಮಪಾನವನ್ನು ಸಂಪೂರ್ಣವಾಗಿ ತಪ್ಪಿಸಬೇಕು, ಮತ್ತು ಕುಡಿಯಲೇ ಬೇಕು ಎಂದಿದ್ದರೆ ಕುಡಿತದಲ್ಲಿ ಒಂದು ಮಿತಿಯನ್ನು ಹೊಂದಿರಬೇಕು.(1) ಬಲವಾದ ಪುರಾವೆಗಳ ಕೊರತೆಯಿದ್ದರೂ, ವಿಟಮಿನ್ ಡಿ ಕೊರತೆಯು ಡಯಾಬಿಟಿಸ್ ರೆಟಿನೋಪತಿಗೆ ಒಂದು ಕಾರಣವಾಗಿರಬಹುದು,(2) ಆದ್ದರಿಂದ ಸಪ್ಲಿಮೆಂಟ್‍ಗಳ ಅಗತ್ಯವಿದೆಯೇ ಎಂದು ಪರಿಶೀಲಿಸಲು ನಿಮ್ಮ ಡಾಕ್ಟರಿಗೆ ರಕ್ತದ ಪರೀಕ್ಷೆ ಮಾಡಿಸುವಂತೆ ಕೇಳಿಕೊಳ್ಳಿ.

ಉಲ್ಲೇಖಗಳು:

  1. Nentwich MM, Ulbig MW. Diabetic retinopathy-ocular complications of diabetes mellitus. World journal of diabetes. 2015;6(3):489.
  2. Lee R, Wong TY, Sabanayagam C. Epidemiology of diabetic retinopathy, diabetic macular edema and related vision loss. Eye and vision. 2015;2(1):17.
  3. Skarbez K, Priestley Y, Hoepf M, Koevary SB. Comprehensive review of the effects of diabetes on ocular health. Expert review of ophthalmology. 2010;5(4):557-77.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.