Reading Time: 3 minutes

ಕೆಲವೊಮ್ಮೆ ಔಷಧಿ ಅಂಗಡಿಗಳಲ್ಲಿ ಪ್ರಿಸ್ಕ್ರಿಪ್ಷನ್ ಇಲ್ಲದೇ ಸಿಗುವ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ, ಯಾವುದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಇದು ವೇಗವಾದ ಮತ್ತು ಅಗ್ಗವಾದ ಮಾರ್ಗವಾಗಿದೆ. ಇನ್ನೊಂದೆಡೆ, ಸ್ವಯಂ ಔಷಧೋಪಚಾರ ಎಂದರೆ ತಮ್ಮ ಕಾಯಿಲೆಗಳಿಗೆ ಡಾಕ್ಟರನ್ನು ಭೇಟಿಯಾಗದೆ ಖುದ್ದು ತಾವಾಗಿಯೇ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸ. ಡಯಾಬಿಟಿಸ್ ಇರುವವರು ಸೇರಿದಂತೆ ಬಹಳಷ್ಟು ಜನರು, ಔಷಧಿಗಳಿಗೆ ತಗಲುವ ಖರ್ಚುವೆಚ್ಚ, ಸ್ನೇಹಿತರ ಹೇಳಿಕೆ, ಇತ್ಯಾದಿ ಕಾರಣಗಳಿಂದಾಗಿ ಖುದ್ದು ತಾವಾಗಿಯೇ ಔಷಧೋಪಚಾರ ಮಾಡಿಕೊಳ್ಳುತ್ತಾರೆ. ಕಾರಣ ಏನೇ ಇರಲಿ, ಅಲೋಪತಿಯೇ ಆಗಿರಲಿ, ಹರ್ಬಲ್ ಅಥವಾ ಫುಡ್ ಸಪ್ಲಿಮೆಂಟ್‌ಗಳೇ ಆಗಿರಲಿ,[1] ಪ್ರಿಸ್ಕ್ರಿಪ್ಶನ್ ಇಲ್ಲದೆ ಔ‍ಷಧಿ ತೆಗೆದುಕೊಳ್ಳುವ ಅಭ್ಯಾಸ ಅಪಾಯವನ್ನು ತಂದೊಡ್ಡುತ್ತದೆ.

ಅಧ್ಯಯನವೊಂದರ ಪ್ರಕಾರ ಶೇಖಡ 40ರಷ್ಟು ಡಯಾಬಿಟಿಸ್ ರೋಗಿಗಳು ತಾವಾಗಿಯೇ-ಔಷಧೋಪಚಾರ ಮಾಡಿಕೊಳ್ಳುತ್ತಾರೆ.[2] ಕುತೂಹಲಕಾರಿ ಸಂಗತಿ ಎಂದರೆ, ತಾವಾಗಿಯೇ-ಔಷಧೋಪಚಾರ ಮಾಡಿಕೊಳ್ಳುವ ವಿಚಾರದಲ್ಲಿ ಪುರಷರು ಮತ್ತು ಮಹಿಳೆಯರು ಇಬ್ಬರೂ ಸಮಸ್ಪರ್ಧಿಗಳಾಗಿದ್ದರೆ, ಹಾಗೂ ಶಿಕ್ಷಿತರು ಕೂಡ ಇದಕ್ಕೆ ಹೊರತಾಗಿಲ್ಲ. ಈ ಕೆಳಗಿನ ಅಂಶಗಳು ಒಬ್ಬ ವ್ಯಕ್ತಿಯು ತಾನಾಗಿಯೇ-ಔಷಧೋಪಚಾರ ಮಾಡಿಕೊಳ್ಳಲು ಕಾರಣವಾಗಬಹುದು:

  1. ಡಾಕ್ಟರ್‌ಗಳ ಮೇಲೆ ನಂಬಿಕೆ ಇಲ್ಲದಿರುವುದು

ಯಾವುದೇ ವೈದ್ಯಕೀಯ ಮೇಲ್ವಿಚಾರಣೆಗಳಿರದೆ ಆಂಟಿ-ಡಯಾಬಿಟಿಸ್ ಔಷಧಿಗಳನ್ನು ತೆಗೆದುಕೊಳ್ಳುವವರಲ್ಲಿ ಡಾಕ್ಟರ್‌ಗಳ ಮೇಲೆ ನಂಬಿಕೆ ಇರದ ರೋಗಿಗಳೆ ಹೆಚ್ಚು ಕಂಡುಬರುತ್ತಾರೆ.

  1. ಕುಟುಂಬ ಸದಸ್ಯರ ಅಥವಾ ಸ್ನೇಹಿತರ ಮಾತುಗಳನ್ನು ಕೇಳುವುದು

ಕೆಲವು ರೋಗಿಗಳು ತಮ್ಮ ಸೇಹಿತರು ಅಥವಾ ಕುಟುಂಬದವರು ಹೇಳುವ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇದಕ್ಕೆ ಡಯಾಬಿಟಿಸ್ ಇರುವವರು ಕೂಡ ಹೊರತಾಗಿರದೆ, ಕೆಲವು ನಿರ್ದಿಷ್ಟ ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಆ ಔಷಧಿಗಳು ರೋಗಿಗೆ ಆಗಿ ಬರದೆ, ರೋಗಿಗೆ ಮತ್ತಷ್ಟು ತೊಂದರೆ ಆಗುವ ಸಾಧ್ಯತೆ ಇರುತ್ತದೆ.

  1. ಬಿಡುವಿಲ್ಲದ ಕೆಲಸದ ವಾತಾವರಣ

ಯಾವ ರೋಗಿಗಳು ಡಾಕ್ಟರ್ ಭೇಟಿಗೆ ಅಥವಾ ಔಷಧಿಗಳನ್ನು ತರಲು ಬಿಡುವಿಲ್ಲ ಎಂದು ಭಾವಿಸುತ್ತಾರೋ, ಅಂತವರು ತಾವಾಗಿಯೇ-ಔಷಧೋಪಚಾರ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದಾಗಿ ನಿಯಮಿತ ತಪಾಸಣೆಗಳಾಗದೆ ಡಯಾಬಿಟಿಸ್ ತೊಂದರೆಗಳು ಹೆಚ್ಚಾಗುತ್ತವೆ. ಅಷ್ಟೆ ಅಲ್ಲದೆ, ಕೆಲವು ರೋಗಿಗಳು ಅನುಮಾನಾಸ್ಪದಕ್ಕೆ ಒಳಪಟ್ಟಿರುವ ಆನ್‌ಲೈನ್ ಫಾರ್ಮಸಿಗಳ ಮೊರೆ ಹೋಗುತ್ತಾರೆ, ಅಲ್ಲಿ ದೊರೆಯುವ ನಕಲಿ ಔಷಧಿಗಳು ಅಥವಾ ಕ್ರಮವಿರದ ಮತ್ತು ಅಶುದ್ಧ ಔಷಧಿಗಳು ಹೆಚ್ಚುವರಿ ಅಪಾಯವನ್ನು ತರುತ್ತವೆ.

  1. ವೈದ್ಯಕೀಯ ಖರ್ಚುವೆಚ್ಚ

ಡಾಕ್ಟರ್‌ಗಳ ಶುಲ್ಕ ಸೇರಿದಂತೆ ಚಿಕಿತ್ಸೆಗೆ ತಗಲುವ ಖರ್ಚಿನ ಹೊರೆಯನ್ನು ತಗ್ಗಿಸುವ ಸಲುವಾಗಿ ಕೆಲ ರೋಗಿಗಳು ತಾವಾಗಿಯೇ-ಔಷಧೋಪಚಾರ ಮಾಡಿಕೊಳ್ಳಲು ಮುಂದಾಗುತ್ತಾರೆ.

  1. ಡಯಾಬಿಟಿಸ್‌ನ ಸುದೀರ್ಘಾವಧಿ

ಡಯಾಬಿಟಿಸ್‌ನ ನಿರ್ವಹಣೆ ಎಂಬುದು ಜೀವನವಿಡೀ ನಡೆಯುವ ಕಾರ್ಯ. ಈ ದೀರ್ಘಾವಧಿಯು ವ್ಯಕ್ತಿಯನ್ನು ಸ್ವಯಂ-ಔಷಧೋಪಚಾರ ಎಂಬ ಹಳ್ಳದಲ್ಲಿ ಬೀಳುವಂತೆ ಒತ್ತಾಯಿಸುತ್ತದೆ. ಕಾಯಿಲೆಯ ದೀರ್ಘಾವಧಿ ಸ್ವಭಾವದಿಂದ ಉಂಟಾದ ಖಿನ್ನತೆ, ಹಾಗೂ ಪೋಲಾಗುತ್ತಿರುವ ಹಣ ಮತ್ತು ಕಡಿಮೆಯಾಗದ ರೋಗಲಕ್ಷಣಗಳ ಕಾಟ ಈ ಎಲ್ಲಾ ಕಾರಣಗಳು ಒಬ್ಬ ವ್ಯಕ್ತಿಗೆ ತಾವಾಗಿಯೇ-ಔಷಧೋಪಚಾರ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ.

ತಾವಾಗಿಯೇ-ಔಷಧೋಪಚಾರ ಮಾಡಿಕೊಳ್ಳುವುದರಲ್ಲಿ ಏನು ತಪ್ಪು?

ತಾವಾಗಿಯೇ-ಔಷಧೋಪಚಾರ ಮಾಡಿಕೊಳ್ಳುವುದರಿಂದ ಜೀವಕ್ಕೆ ಹಾನಿಯುಂಟಾಗಬಹುದು. ಸೂಚಿಸದೆ ಇರುವ ಔಷಧಿಗಳು ರೋಗಿಯ ಒಟ್ಟಾರೆ ಸ್ಥಿತಿಗತಿಯನ್ನು ಲೆಕ್ಕಕ್ಕೆ ತೆಗೆದುಕೊಂಡಿರುವುದಿಲ್ಲ, ಇವುಗಳಿಂದ ಕ್ರಮೇಣ ಲಾಭಕ್ಕಿಂತ ಹಾನಿಯೇ ಹೆಚ್ಚಿರುತ್ತದೆ. ರೋಗಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಆಧಾರದ ಮೇಲೆ ಫಿಸಿಶಿಯನ್‌ಗಳು ಔಷಧಿಗಳ ಪ್ರಮಾಣ ಎಷ್ಟಿರಬೇಕು ಮತ್ತು ಯಾವಾಗ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧಾರ ಮಾಡುತ್ತಾರೆ; ವೈದ್ಯಕೀಯ ಮೇಲ್ವಿಚಾರಣೆಗೆ ಒಳಪಡದಿದ್ದರೆ, ಇಂತಹ ಮುಖ್ಯವಾದ ಕ್ರಮ ತಪ್ಪಿಹೋಗುತ್ತದೆ. ಅಲ್ಲದೇ, ಸೂಚಿಸದೆ ಇರುವ ಔಷಧಿಗಳು ಅಡ್ಡಪರಿಣಾಮನ್ನು ಹೊಂದಿದ್ದು, ಬೇರೆ ಔಷಧಿಗಳೊಂದಿಗೆ ಬೆರೆತು ಕ್ರಾಸ್-ರಿಯಾಕ್ಷನ್ ಉಂಟಾಗುವ ಅಪಾಯ ಇರುತ್ತದೆ. ಯಾವುದೇ ವೈದ್ಯಕೀಯ ಮೇಲ್ವಿಚಾರಣೆಗಳಿಲ್ಲದೆ ಔ‍ಷಧಿಗಳನ್ನು ಮಿಕ್ಸ್ ಮಾಡುವುದರಿಂದ (ಉದಾಹರಣೆಗೆ ಹೇಳುವುದಾದರೆ, ಒಂದು ಸೂಚಿಸಿದ ಔಷಧಿಯನ್ನು ಮತ್ತೊಂದು ಸೂಚಿಸದ ಔಷಧಿಯೊಂದಿಗೆ ಬೆರೆಸುವುದರಿಂದ), ಎರಡು ಔಷಧಿಗಳು ಬೆರೆತು ಔಷಧಿ-ಔಷಧಿ ಬೆರೆಯುವಿಕೆ ಎಂಬ ಹಾನಿಕಾರಕ ಪ್ರಕ್ರಿಯೆ ಉಂಟಾಗಿ ಹಲವಾರು ತೊಂದರೆಗಳು ಮನೆ ಮಾಡಬಹುದು. ಪ್ರತಿ ಏಳು ವಯಸ್ಕರಲ್ಲಿ ಒಬ್ಬರು ಈ ರೀತಿ ಔಷಧಿಗಳನ್ನು ಮಿಕ್ಸ್ ಮಾಡಿ, ಅಪಾಯ ತಂದುಕೊಳ್ಳುತ್ತಾರೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ.[3]

ಹರ್ಬಲ್ (ಗಿಡಮೂಲಿಕೆ) ಔಷಧಿಗಳು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ ಎಂಬ ತಪ್ಪುತಿಳುವಳಿಕೆ ಇದೆ, ಈ ತಪ್ಪುತಿಳುವಳಿಕೆ ಪ್ರಪಂಚದಾದ್ಯಂತ ಹರ್ಬಲ್ ಔಷಧಿಗಳನ್ನು ಪ್ರಯತ್ನಿಸಿ ನೋಡೋಣ ಎಂಬ ಮನೋಭಾವಕ್ಕೆ ದೂಡುತ್ತದೆ. ಅವುಗಳಲ್ಲಿ ಕೆಲವು ಕೆಲಸ ಮಾಡುತ್ತವೆ ಎಂಬುದಕ್ಕೆ ಪುರಾವೆಗಳು ಇವೆಯಾದರೂ, ಯಾವುದೇ ಕಟ್ಟುಪಾಡು ಅಥವಾ ಮೇಲ್ವಿಚಾರಣೆಗಳಿರದೆ ಅವುಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮಗಳಾಗುವ ಸಾಧ್ಯತೆಯು ಅಷ್ಟೆ ಇದೆ. ಗಿಡಮೂಲಿಕೆಗಳನ್ನು ಬಳಸಿ ಡಯಾಬಿಟಿಸ್‌ಗೆ ತಾವಾಗಿಯೇ-ಔಷಧೋಪಚಾರ ಮಾಡಿಕೊಳ್ಳುವುದರಿಂದ ಆಗುವ ಅಪಾಯದ ಕುರಿತು ನಮ್ಮ ಬರಹಗಳನ್ನು ಓದಿರಿ.

ಭಾರತದಂತಹ ಬೆಳವಣಿಗೆ ಹೊಂದುತ್ತಿರುವ ಅನೇಕ ದೇಶಗಳು ಬಲವಾದ ಫಾರ್ಮಕೊವಿಜಿಲೆನ್ಸ್ ವ್ಯವಸ್ಥೆಯನ್ನು ಹೊಂದಿಲ್ಲ, ಹಾಗೂ ಸ್ಥಳೀಯ ಕೆಮಿಸ್ಟ್‌ಗಳ ಬಳಿ ಮತ್ತು ಔಷಧಿ ಅಂಗಡಿಗಳಲ್ಲಿ ಇರುವ ಫಾರ್ಮಾಸಿಸ್ಟ್‌ಗಳು ಆರೋಗ್ಯದ ತಪಾಸಣೆಯಲ್ಲಿ ಮತ್ತು ಆರೋಗ್ಯದ ಬೆಳವಣಿಗೆಯಲ್ಲಿ ತುಂಬಾ ಸಣ್ಣ ಪಾತ್ರ ವಹಿಸುತ್ತಾರೆ. ಇದರಿಂದ ರೋಗಿಗಳು ವಿಧಿಯಿಲ್ಲದೇ ಡಾಕ್ಟರನ್ನು ಮತ್ತೆ ಮತ್ತೆ ಭೇಟಿ ಮಾಡಬೇಕಾಗುತ್ತದೆ. ಡಾಕ್ಟರ್ ಭೇಟಿಯನ್ನು ತಪ್ಪಿಸುವ ಮೂಲಕ, ಕಾಯಿಲೆಯ ಬೆಳವಣಿಗೆಯನ್ನು ಹತೋಟಿಯಲ್ಲಿ ಇಡುತ್ತೀವಿ ಎಂಬುದು ಸವಾಲಿನ ಕೆಲಸ ಅಥವಾ ಆಗದ ಕೆಲಸ. ನೀವು ಚೆನ್ನಾಗಿ ಸುಧಾರಿಸುತ್ತಿದ್ದು, ಔಷಧಿ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಸಂಗತಿ ಅಥವಾ ನಿಮ್ಮ ಸ್ಥಿತಿಯು ತೀರಾ ಹದಗೆಡುತ್ತಿದ್ದು, ಮುಂದಾಗಬಹುದಾದ ತೊಂದರೆಗಳನ್ನು ತಡೆಗಟ್ಟಲು ಹೆಚ್ಚುವರಿ ಪರೀಕ್ಷೆಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳು ಬೇಕಿದೆಯೇ ಎಂಬ ವಿಷಯಗಳು, ನಿಮಗೆ ತಿಳಿಯದೆ ಹೋಗಬಹುದು.

ತಾವಾಗಿಯೇ-ಔಷಧಿ ತೆಗೆದುಕೊಳ್ಳುವುದನ್ನು ತಪ್ಪಿಸುವುದು

ಸಣ್ಣಪುಟ್ಟ ಕಾಯಿಲೆ ಇರುವವರಿಗೇ ಹಾನಿ ಮಾಡುವಂತಹ, ವೈದ್ಯಕೀಯ ಮೇಲ್ವಿಚಾರಣೆ ಇಲ್ಲದ ಔಷಧಿಗಳು, ಇನ್ನೂ ಡಯಾಬಿಟಿಸ್ ಇರುವವರಿಗೆ (ಹಾಗೆಯೇ ಇತರೆ ದೊಡ್ಡ ಕಾಯಿಲೆ ಇರುವವರಿಗೂ) ಮಾರಾಣಾಂತಿಕವಾಗಿಯೇ ಪರಿಣಮಿಸಬಹುದು. ನಿಮ್ಮ ಸ್ನೇಹಿತರ, ಮನೆಯವರ, ಅಥವಾ ಮಾಧ್ಯಮದವರ ಮಾತನ್ನು ನೆಚ್ಚಿಕೊಂಡು ಔಷಧಿಗಳನ್ನು ತೆಗೆದುಕೊಳ್ಳಬೇಡಿ. ಕೆಲವು ಔಷಧಿಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಡಾಕ್ಟರ್ ಬಳಿ ಸಲಹೆ ಕೇಳಿ. ಹೆಚ್ಚು ಹೊತ್ತು ಚರ್ಚೆ ಮಾಡಲಾಗದೆ ಇರಬಹುದು, ಆದರೆ ಆ ಔಷಧಿಗಳು ನಿಮಗೆ ಎಷ್ಟು ಮುಖ್ಯ ಎಂಬುದನ್ನು ಅವರಿಗೆ ವಿವರಿಸಿ ಹಾಗೂ ಆ ಔಷಧಿಗಳಿಗೆ ಬದಲಾಗಲು ಮತ್ತು ಇರುವ ಔಷಧಿಗಳೊಟ್ಟಿಗೆ ಸೇರಿಸಿಕೊಳ್ಳಲು ಅವರ ಅಭಿಪ್ರಾಯ ಏನೆಂದು ಕೇಳಿ. ಡಯಾಬಿಟಿಸ್‌ನ ನಿರ್ವಹಣೆಯಲ್ಲಿ, ಔಷಧಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ, ಮುಂದಾಗಬಹುದಾದ ತೊಂದರೆಗಳನ್ನು ತಡೆಯುತ್ತವೆ ಅಥವಾ ಮುಂದೂಡುತ್ತವೆ. ಭವಿಷ್ಯದಲ್ಲಿ ಯಾವಾಗಲೂ ಡಯಾಲಿಸಿಸ್‌ಗೆಂದು ಅಡ್ಮಿಟ್ ಆಗುವುದಕ್ಕಿಂತ ನಿಯಮಿತ ತಪಾಸಣೆಗಾಗಿ ಈಗಲೇ ಸಮಯ ಮತ್ತು ಹಣವನ್ನು ಖರ್ಚು ಮಾಡುವುದು ಲೇಸು. ನಿಮ್ಮೆಲ್ಲಾ ಪ್ರಶ್ನೆ ಮತ್ತು ಅನುಮಾನಗಳನ್ನು ಡಾಕ್ಟರ್ ಬಳಿ ಕೇಳಲು ಮರೆಯದಿರಿ.

ಉಲ್ಲೇಖಗಳು: 

  1. You JH, Wong FY, Chan FW, Wong EL, Yeoh EK. Public perception on the role of community pharmacists in self-medication and self-care in Hong Kong. BMC clinical pharmacology. 2011;11(1):19. Available at: https://bmcclinpharma.biomedcentral.com/articles/10.1186/1472-6904-11-19
  2. Rezaei M, Safavi AR, Alavi NM, Kashefi H. Study of Self Medication In Patients With Diabetes Using Path Analysis. Journal of Diabetology &58; Official Journal of Diabetes in Asia Study Group. 2015;6(3):2. Available at: http://www.journalofdiabetology.org/temp/JDiabetol632-8622245_235702.pdf
  3. Qato DM, Wilder J, Schumm LP, Gillet V, Alexander GC. Changes in prescription and over-the-counter medication and dietary supplement use among older adults in the United States, 2005 vs 2011. JAMA internal medicine. 2016;176(4):473-82.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.