low blood sugar insulin
Reading Time: 3 minutes

ದೇಹವು ಇನ್ಸುಲಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ವಿಫಲವಾದಾಗ ಅಥವಾ ಅದು ಉತ್ಪಾದಿಸುತ್ತಿರುವ ಇನ್ಸುಲಿನ್‍ಗೆ ತಾನೇ ನಿರೋಧವನ್ನು ಒಡ್ಡಿದಾಗ ಡಯಾಬಿಟಿಸ್ ಉಂಟಾಗುತ್ತದೆ. ಎರಡು ಸಂದರ್ಭಗಳಲ್ಲಿಯೂ, ಡಯಾಬಿಟಿಸ್ ನಿರ್ವಹಣೆಗೆ ಇನ್ಸುಲಿನ್‌ನ ಬಾಹ್ಯ ಚುಚ್ಚುಗೆಯು ಇಲ್ಲಿಯವರೆಗಿನ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಾಗ್ಯೂ, ನೀವು ಇನ್ಸುಲಿನ್ ತೆಗೆದುಕೊಳ್ಳುವಾಗ ಈ ನಿಬಂಧನೆಯನ್ನು ಅಡ್ಡಿಪಡಿಸುವಂತಹ ಹಲವಾರು ವಿಷಯಗಳಿವೆ, ಇವು ಹೈಪೋಗ್ಲೈಸೀಮಿಯಾ ಅಥವಾ ಕಡಿಮೆ ರಕ್ತದ ಸಕ್ಕರೆಯ ಮಟ್ಟಗಳಿಗೆ ಕಾರಣವಾಗುತ್ತವೆ.

ನವದೆಹಲಿಯ ಅಪೊಲೊ ಆಸ್ಪತ್ರೆಯ ಆಸ್ಥಾ ಮಲ್ಟಿಸ್ಪೆಷಾಲಿಟಿ ಸೆಂಟರ್‌ನ ಹಿರಿಯ ಸಲಹೆಗಾರ ಡಾ. ರತನ್ ಕುಮಾರ್ ವೈಶ್, ಇನ್ಸುಲಿನ್‌ನಲ್ಲಿರುವಾಗ ಹೈಪೊಗ್ಲೈಸಿಮಿಯಾವನ್ನು ಎದುರಿಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ವಿವರಿಸುತ್ತಾರೆ.

ಇನ್ಸುಲಿನ್ ತೆಗೆದುಕೊಳ್ಳುವ ಡಯಾಬಿಟಿಸ್ ರೋಗಿಗಳಲ್ಲಿ ಹೈಪೊಗ್ಲೈಸಿಮಿಯಾ ಎಂಬ ಸ್ಥಿತಿ ಬರಲು ಕಾರಣವೇನು?

“ಇನ್ಸುಲಿನ್ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಉದ್ದೇಶದಿಂದ ಕೊಡಲಾಗುವುದು, ಆದರೆ ಹೈಪೊಗ್ಲಿಸಿಮಿಯಾ ಉಂಟಾಗುವ ಮಟ್ಟಕ್ಕೆ ರಕ್ತದ ಸಕ್ಕರೆಯನ್ನು ಇಳಿಸಬಾರದು,” ಎಂದು ಡಾ ವೈಶ್ ಹೇಳುತ್ತಾರೆ. “ನೀವು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವು ತೀವ್ರವಾಗಿ ಇಳಿಯುತ್ತಿದ್ದರೆ, ಏನಾದರೂ ಖಂಡಿತವಾಗಿಯೂ ತಪ್ಪಾಗುತ್ತಿದೆ ಎಂದರ್ಥ. ನೀವು ಸರಿಯಾದ ಸಮಯದಲ್ಲಿ ಇನ್ಸುಲಿನ್ ತೆಗೆದುಕೊಳ್ಳದ ಕಾರಣ ಅಥವಾ ನೀವು ಹೆಚ್ಚಿನ ಪ್ರಮಾಣವನ್ನು ತೆಗೆದುಕೊಳ್ಳುತ್ತಿರುವುದರಿಂದ ಹೈಪೊಗ್ಲಿಸಿಮಿಯಾ ಉಂಟಾಗುತ್ತದೆ, ಇದರಿಂದಾಗಿ ಸಕ್ಕರೆ ಪ್ರಮಾಣವು ಸಾಮಾನ್ಯ ಶ್ರೇಣಿಗಿಂತ ಕಡಿಮೆಯಾಗುತ್ತದೆ. 

ಹೈಪೊಗ್ಲಿಸಿಮಿಯಾ ಏಕೆ ಅಪಾಯಕಾರಿ?

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು 150-250 ಮಿಲಿಗ್ರಾಂ/ಡಿಎಲ್ ವ್ಯಾಪ್ತಿಗೆ ಇಳಿದರೆ, ಯಾವುದೇ ಗಂಭೀರ ತೊಂದರೆಗಳು ಸಂಭವಿಸುವುದಿಲ್ಲ. ಆದರೆ ತಕ್ಷಣದ ಪರಿಣಾಮವಾಗಿ ನೀವು ತಲೆತಿರುಗುವಿಕೆ, ಕಿರಿಕಿರಿ, ಅಲುಗಾಡುವಿಕೆ, ಕಣ್ಗತ್ತಲೆ, ದೌರ್ಬಲ್ಯ ಮತ್ತು ಕಡಿಮೆ ತೀವ್ರತೆಯ ಉಸಿರಾಟದ ತೊಂದರೆಗಳನ್ನು ಅನುಭವಿಸಬಹುದು. ಈ ರೋಗಲಕ್ಷಣಗಳನ್ನು ತಕ್ಷಣವೇ ಗಮನಿಸಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಸುಮಾರು 100 ಮಿಲಿಗ್ರಾಂ/ಡಿಎಲ್ ತನಕ ಇಳಿಯಬಹುದು ಅಥವಾ ಇನ್ನೂ ಕೆಳಗಿಳಿಯಬಹುದು.

ರಕ್ತದಲ್ಲಿನ ಸಕ್ಕರೆಯ ಮಟ್ಟವು 60 ಮಿಲಿಗ್ರಾಂ/ಡಿಎಲ್‌ಗಿಂತ ಕೆಳಗಿಳಿದರೆ ಗಂಭೀರ ತೊಂದರೆಗಳು ಉಂಟಾಗುತ್ತವೆ. ಈ ಹಂತದಲ್ಲಿ, ಸಕ್ಕರೆಯ ಮಟ್ಟವನ್ನು ತಕ್ಷಣವೇ ನಿಯಂತ್ರಿಸದಿದ್ದರೆ, ರೋಗಿಯು ಪ್ರಜ್ಞಾಹೀನನಾಗಬಹುದು, ಸೀಜರ್ ಉಂಟಾಗಬಹುದು ಅಥವಾ ಕೋಮಾಗೂ ಸಹ ಜಾರಬಹುದು. ವಯಸ್ಸಾದ ರೋಗಿಗಳು ಇದಕ್ಕೆ ವಿಶೇಷವಾಗಿ ಒಳಗಾಗುವ ಸಾಧ್ಯತೆ ಹೆಚ್ಚು, ಏಕೆಂದರೆ ಅವರ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ರಾತ್ರಿಯ ಸಮಯದಲ್ಲಿ ಅತ್ಯಂತ ಕಡಿಮೆ ಹಂತವನ್ನು ತಲುಪುವ ಸಾಧ್ಯತೆಗಳಿವೆ. ಇಂತಹ ಪ್ರಕರಣಗಳು ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡಬಹುದು. 

ಇನ್ಸುಲಿನ್ ತೆಗೆದುಕೊಂಡ ಬಳಿಕ ನೀವು ಹೈಪೊಗ್ಲೈಸಿಮಿಕ್ ಆದರೆ ನೀವು ಏನು ಮಾಡಬೇಕು?

ಇನ್ಸುಲಿನ್ ತೆಗೆದುಕೊಂಡ ಬಳಿಕ, ನೀವು ನಿಮ್ಮ ಊಟವನ್ನು ಸೇವಿಸಲು ಮರೆತು, ತದನಂತರ ತಲೆತಿರುಗುವಿಕೆ ಅಥವಾ ಕಣ್ಗತ್ತಲೆಯನ್ನು ಅನುಭವಿಸಿದರೆ, ನೀವು ಏನು ಮಾಡುತ್ತಿದ್ದರೂ ಅದನ್ನು ಅಲ್ಲಿಯೇ ತಕ್ಷಣ ಬಿಟ್ಟು ನಾಲ್ಕು ಅಥವಾ ಐದು ಚಮಚ ಪುಡಿ ಸಕ್ಕರೆಯನ್ನು ಸೇವಿಸಬೇಕು. ಪುಡಿ ಸಕ್ಕರೆ ಲಭ್ಯವಿಲ್ಲದಿದ್ದರೆ, ಜ್ಯೂಸ್, ಚಾಕೋಲೇಟ್ ಅಥವಾ ಗ್ಲೂಕೋಸ್ ಪುಡಿಯಂತಹ ಯಾವುದೇ ಪರ್ಯಾಯಗಳು ನಿಮ್ಮ ಸಕ್ಕರೆಯ ಮಟ್ಟವನ್ನು ಸಾಮಾನ್ಯ ವ್ಯಾಪ್ತಿಗೆ ಮರಳಿ ತರಲು ಸಹಾಯ ಮಾಡುತ್ತದೆ. ವೈದ್ಯರಿಗೆ ತಿಳಿಸುವ ಮೊದಲೇ ನೀವು ಈ ಕೆಲಸವನ್ನು ಮಾಡಬೇಕು.

ಒಮ್ಮೆ ನೀವು ಚೇತರಿಸಿಕೊಳ್ಳಲು ಪ್ರಾರಂಭಿಸಿದರೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಲು ಮೂಲ ಕಾರಣವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಹೈಪೊಗ್ಲೈಸಿಮಿಯಾ ಪ್ರಸಂಗದ ಬಗ್ಗೆ ನಿಮ್ಮ ವೈದ್ಯರಿಗೆ ತಿಳಿಸಿ. ನಿಮ್ಮ ಊಟದ ಸಮಯ ಮತ್ತು ನೀವು ಇನ್ಸುಲಿನ್ ತೆಗೆದುಕೊಳ್ಳುವ ಸಮಯದ ಬದಲಾವಣೆಗಳನ್ನು ಕಾರ್ಯಗತಗೊಳಿಸಲು ನಿಮ್ಮ ವೈದ್ಯರು ನಿಮಗೆ ಶಿಫಾರಸು ಮಾಡಬಹುದು.

ಇನ್ಸುಲಿನ್ ತೆಗೆದುಕೊಳ್ಳುವಾಗ ಹೈಪೊಗ್ಲೈಸಿಮಿಯಾವನ್ನು ತಪ್ಪಿಸುವುದು ಹೇಗೆ?

ಡಯಾಬಿಟಿಸ್ ಇರುವವರು ಹೈಪೋಗ್ಲೈಸೀಮಿಯಾವನ್ನು ತಡೆಗಟ್ಟಲು ಡಾ. ವೈಶ್ ಈ ಕೆಳಗಿನ ಸಲಹೆಗಳನ್ನು ನೀಡುತ್ತಾರೆ:

1. ರೋಗದ ಸ್ಥಿತಿಯ ಬಗ್ಗೆ ಅರಿವಿರಲಿ

ಡಾ. ವೈಶ್, ಹೈಪೊಗ್ಲಿಸಿಮಿಯಾ ಉಂಟಾಗುವ ಸಂದರ್ಭಗಳ ಬಗ್ಗೆ ಅರಿವನ್ನು ಹೊಂದಿರುವುದು ಈ ಸ್ಥಿತಿಯನ್ನು ತಪ್ಪಿಸಲು ತೆಗೆದುಕೊಳ್ಳುವ ಉತ್ತಮ ಕ್ರಮ ಎಂದು ಹೇಳುತ್ತಾರೆ. “ವೈದ್ಯರು ಯಾವಾಗಲೂ ರೋಗಿಗಳಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಇನ್ಸುಲಿನ್ ತೆಗೆದುಕೊಳ್ಳಲು ಸರಿಯಾದ ಸಮಯ ಯಾವುದೆಂದು ತಿಳಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಊಟದ ಸಮಯವನ್ನು ಕೂಡ ನಿಗದಿಪಡಿಸುತ್ತಾರೆ. ನಿಮ್ಮ ಡಯಾಬಿಟಿಸ್ ತಜ್ಞರು ನಿಮಗೆ ಸೂಚಿಸಿರುವ ವೇಳಾಪಟ್ಟಿಯನ್ನು ನೀವು ತಪ್ಪದೆ ಪಾಲಿಸಿದಲ್ಲಿ, ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೀವು ಸಂಪೂರ್ಣವಾಗಿ ತಪ್ಪಿಸಬಹುದು, ”ಎಂದು ಅವರು ಹೇಳುತ್ತಾರೆ.

2. ಆಹಾರ ನಮೂನೆಯೊಂದನ್ನುನಿಶ್ಚಯಿಸಿ

ನಿಮ್ಮ ಮೊದಲ ಊಟ ಅಥವಾ ಆಹಾರದ ಮೊದಲ ಭಾಗವನ್ನು ಬೆಳಿಗ್ಗೆ ಎದ್ದ 15 ನಿಮಿಷಗಳಲ್ಲಿ ಸೇವಿಸಿ. ಅದೊಂದು ಚಪಾತಿ, ಸಕ್ಕರೆ ರಹಿತ ಬಿಸ್ಕತ್ತು ಅಥವಾ ಹಣ್ಣು ಸಹ ಆಗಿರಬಹುದು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ರಾತ್ರಿ ಇಳಿದಿದ್ದರೆ ಇದು ಅದನ್ನು ನಿಯಂತ್ರಿಸುತ್ತದೆ. ದಿನದಲ್ಲಿ ಮೂರು ಬಾರಿ ಊಟ ಮಾಡುವ ಬದಲಾಗಿ, ಪ್ರತಿ ಎರಡು ಗಂಟೆಗಳಿಗೊಮ್ಮೆ ತೆಗೆದುಕೊಳ್ಳುವ ಸಣ್ಣ ಭಾಗಗಳಾಗಿ ನಿಮ್ಮ ಊಟವನ್ನು ವಿಂಗಡಿಸುವ ಮೂಲಕ ನಿಮ್ಮ ಊಟವನ್ನು ಸೀಮಿತಗೊಳಿಸಿ. ಹೀಗೆ ಮಾಡುವುದರಿಂದ ದಿನವಿಡೀ ರಕ್ತದಲ್ಲಿನ ಸಕ್ಕರೆಯ ಮಟ್ಟ ಸ್ಥಿರವಾಗಿರುತ್ತದೆ.

3. ಸೇವನೆಗಾಗಿ ಸಮಯ ಮೀಸಲಿಡಿ

ಸಾಮಾನ್ಯವಾಗಿ, ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿರುವಂತಹ ವ್ಯಕ್ತಿಗಳು ತಮ್ಮ ಡಯಾಬಿಟಿಸ್ ನಿರ್ವಹಣಾ ಕಾರ್ಯಗಳಿಗಾಗಿ ಸಮಯವನ್ನು ತೆಗೆದಿಡಲು ಹೆಣಗಾಡುತ್ತಾರೆ. ಅವರು ಅವಸರದಲ್ಲಿದ್ದರೆ ಉಪಹಾರವನ್ನು ಬಿಟ್ಟುಬಿಡುತ್ತಾರೆ ಅಥವಾ ಯಾವುದೋ ಸಭೆಯಲ್ಲಿ ಸಿಲುಕಿಕೊಂಡ ಕಾರಣದಿಂದ ತಮ್ಮ ಇನ್ಸುಲಿನ್ ಡೋಸ್ ಅನ್ನು ತೆಗೆದುಕೊಳ್ಳಲು ಮರೆತು ಬಿಡುತ್ತಾರೆ. ಇಂತಹ ಅಭ್ಯಾಸಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಹಾಗಾಗಿ ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ನೀವು ಮರೆತು ಹೋಗುತ್ತೀರಿ ಎನ್ನುವುದಾದರೆ, ನಿಮ್ಮ ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಅಥವಾ ಸಹೋದ್ಯೋಗಿಗಳಿಗೆ ನಿಮಗೆ ನೆನಪಿಸುವಂತೆ ಹೇಳಿ ಅಥವಾ ನಿಮ್ಮ ಇನ್ಸುಲಿನ್ ಡೋಸ್ ಹಾಗೂ ಊಟದ ಸಮಯಗಳಿಗಾಗಿ ನಿಮ್ಮ ಫೋನ್‌ನಲ್ಲಿ ರಿಮೈಂಡರ್ ಒಂದನ್ನು ಇಟ್ಟುಕೊಳ್ಳಿ.

4. ಇನ್ಸುಲಿನ್ ಅನ್ನು ಸರಿಯಾಗಿ ಶೇಖರಿಸಿ ಇಡಿ

ಇನ್ಸುಲಿನ್ ಡೋಸ್ ಮತ್ತು ಭೋಜನ ಸಮಯದ ಹೊರತಾಗಿ, ಇನ್ಸುಲಿನ್‍ನ ಶಕ್ತಿ ಹಾಗೂ ಸಾಮರ್ಥ್ಯದಂತಹ ಇತರ ಅಂಶಗಳು ಹೈಪೊಗ್ಲೈಸಿಮಿಯಾವನ್ನು ಉಂಟುಮಾಡಲು ಕಾರಣವಾಗಬಹುದು. ಇನ್ಸುಲಿನ್ ಪರಿಣಾಮಕಾರಿಯಾಗಲು ಅದನ್ನು ಕಡಿಮೆ ತಾಪಮಾನದಲ್ಲಿ ಶೇಖರಿಸಿ ಇಡುವುದು ಮುಖ್ಯ. ಅದನ್ನು ರೆಫ್ರಿಜರೇಟರ್‌ನಲ್ಲಿ ಶೇಖರಿಸಿ ಇಡದಿದ್ದರೆ, ಅದು ಅದರ ಶಕ್ತಿಯನ್ನು ಕಳೆದುಕೊಳ್ಳಬಹುದು, ಅಂದರೆ ಅಂತಹ ಸಂದರ್ಭದಲ್ಲಿ ನಿಮ್ಮ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಅಗತ್ಯವಿರುತ್ತದೆ. ಆದರೆ ಇದನ್ನು ಲೆಕ್ಕಾಚಾರ ಮಾಡುವುದು ಕಷ್ಟದ ಕೆಲಸ, ಇದರಿಂದ ಇನ್ಸುಲಿನ್‌ ಅಧಿಕ ಪ್ರಮಾಣದಲ್ಲಿ ನಿಮ್ಮ ದೇಹವನ್ನು ಸೇರುವ ಸಾಧ್ಯತೆ ಇರುತ್ತದೆ, ಇದು ಹೈಪೊಗ್ಲೈಸಿಮಿಯಾಕ್ಕೆ ಕಾರಣವಾಗಬಹುದು. ಋತುಗಳ ಬದಲಾವಣೆಗಳು ಸಹ ಇನ್ಸುಲಿನ್ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಇನ್ಸುಲಿನ್‌ನ ಸರಿಯಾದ ಶೇಖರಣೆಯನ್ನು ನಾವು ಕಡೆಗಣಿಸುವಂತಿಲ್ಲ. 

5. ಇನ್ಸುಲಿನ್ ಚುಚ್ಚುಮದ್ದನ್ನು ಬಳಸುವ ಸರಿಯಾದ ತಂತ್ರವನ್ನು ಅನುಸರಿಸಿ

ಇನ್ಸುಲಿನ್ ಚುಚ್ಚುಮದ್ದನ್ನು ಬಳಸಲು ಸರಿಯಾದ ತಂತ್ರವನ್ನು ಅನುಸರಿಸದಿರುವುದು ರಕ್ತದ ಸಕ್ಕರೆಯ ಮಟ್ಟದಲ್ಲಿನ ಏರಿಳಿತಕ್ಕೆ ಮತ್ತೊಂದು ಕಾರಣವಾಗಿರಬಹುದು. ಕೆಲವೊಮ್ಮೆ, ತಪ್ಪಾದ ತಂತ್ರವು ರಕ್ತಪ್ರವಾಹದಲ್ಲಿ ಇನ್ಸುಲಿನ್‍ನ ಶೀಘ್ರ ಬಿಡುಗಡೆಗೆ ಕಾರಣವಾಗಿ, ಸಕ್ಕರೆ ಮಟ್ಟದಲ್ಲಿನ ಕುಸಿತಕ್ಕೆ ಕಾರಣವಾಗುತ್ತದೆ.

6. ದೈಹಿಕ ಚಟುವಟಿಕೆಯನ್ನು ತಪ್ಪಿಸಿ

ನೀವು ಈಗ ಇನ್ಸುಲಿನ್ ತೆಗೆದುಕೊಂಡಿದ್ದ ಪಕ್ಷದಲ್ಲಿ, ಯಾವುದೇ ಕಠಿಣ ದೈಹಿಕ ಚಟುವಟಿಕೆಯನ್ನು ತಪ್ಪಿಸಿ, ಏಕೆಂದರೆ ಅಂತಹ ಚಟುವಟಿಕೆಗಳಲ್ಲಿ ಹೆಚ್ಚಿನ ಶಕ್ತಿ ಬಳಕೆಯಾಗುವುದರಿಂದ ಅದು ಹೈಪೊಗ್ಲೈಸಿಮಿಯಾಕ್ಕೆ ಕಾರಣವಾಗುತ್ತದೆ. ಡಯಾಬಿಟಿಸ್ ಹೊಂದಿರುವ ಕ್ರೀಡಾಪಟುಗಳು ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಅವರು ತಮ್ಮ ಆಹಾರ ತಜ್ಞ ಅಥವಾ ಡಯಾಬಿಟಿಸ್ ತಜ್ಞರ ಮಾರ್ಗದರ್ಶನದಲ್ಲಿ ಮಾತ್ರ ವ್ಯಾಯಾಮ ಮಾಡಬೇಕು.

7. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಸ್ವಯಂ ಮೇಲ್ವಿಚಾರಣೆ ಮಾಡುತ್ತಲಿರಿ

ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸರಿಯಾಗಿ ನಿಯಂತ್ರಿಸಲು, ನಿಯಮಿತವಾಗಿ ಅವುಗಳ ಮೇಲೊಂದು ಗಮನವನ್ನು ಇಟ್ಟಿರಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಪರಿಣಾಮಕಾರಿಯಾಗಿ ಸ್ವಯಂ-ಮೇಲ್ವಿಚಾರಣೆ ಮಾಡುವುದು (ಎಸ್‌ಎಮ್‌ಬಿಜಿ) ಇನ್ಸುಲಿನ್ ಪ್ರಮಾಣ, ಊಟದ ಸಮಯ ಮತ್ತು ಹೈಪೊಗ್ಲಿಸಿಮಿಯಾ ಸಂಭವಿಸುವ ಸಾಧ್ಯತೆಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.