ಟೈಪ್ 2 ಡಯಾಬಿಟಿಸ್ ಇರುವ ಜನರು ತಮ್ಮ ದಿನನಿತ್ಯದ ಕಾರ್ಯಗಳನ್ನು ಮಾಡಲು ಸಾಮಾನ್ಯವಾಗಿ ಇನ್ಸುಲಿನ್ ಇಂಜೆಕ್ಷನ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ಇನ್ಸುಲಿನ್ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅದನ್ನು ದಿನದಲ್ಲಿ ಒಂದು ಅಥವಾ ಎರಡು ಬಾರಿ ತೆಗೆದುಕೊಳ್ಳಲೇಬೇಕಾಗುತ್ತದೆ. ನೀವು ಬಿಡುವಿಲ್ಲದ ಜೀವನವನ್ನು ಹೊಂದಿದ್ದರೆ, ಸರಿಯಾದ ಸಮಯಕ್ಕೆ ಡೋಸ್ ತೆಗೆದುಕೊಳ್ಳುವುದನ್ನು ಮರೆಯುವ ಸಾಧ್ಯತೆ ಇರುತ್ತದೆ. ಜೊತೆಗೆ, ನೀವು ಇನ್ಸುಲಿನ್ ಪೆನ್‍ನ ಕಾರ್ಟ್ರಿಜ್‌ಗಳನ್ನು ಮನೆಗೆ ಪುನಃ ತಂದಿಟ್ಟುಕೊಳ್ಳುವುದನ್ನು ಕೂಡ ಮರೆಯುವ ಸಾಧ್ಯತೆ ಇರುತ್ತದೆ. ಡಯಾಬಿಟಿಸ್ ಇರುವ ಸುಮಾರು 1/3 ರಷ್ಟು ಜನರು ತಿಂಗಳಿಗೆ ಕನಿಷ್ಠಪಕ್ಷ 1 ಡೋಸ್ ಇನ್ಸುಲಿನ್ ಅನ್ನು ತಪ್ಪಿಸುತ್ತಾರೆ.(1) ಕೆಲವರು ನಿಜವಾಗಿಯೂ ಮರೆತುಹೋದರೆ, ಕೆಲವರು ಬೇಕಂತಲೇ ತಪ್ಪಿಸುತ್ತಾರೆ. ಹಾಗಾಗಿ, ಸನ್ನಿವೇಶ ಯಾವುದೇ ಆದರೂ ಒಟ್ಟಾರೆಯಾಗಿ ಇನ್ಸುಲಿನ್ ಡೋಸ್ ತಪ್ಪಿಸುವುದು ಒಳ್ಳೆಯದಲ್ಲ. ಹಾಗಾದರೆ, ನೀವು ಒಂದು ಡೋಸ್ ಅನ್ನು ತಪ್ಪಿಸಿದಾಗ ಏನು ಮಾಡಬೇಕು?
ನಿಮ್ಮ ಇನ್ಸುಲಿನ್‍ನ ಬಗೆ ಯಾವುದೆಂದು ನಿಮಗೆ ಗೊತ್ತಿರಲಿ
ಡೋಸ್ ಒಂದನ್ನು ತಪ್ಪಿಸುವುದರ ಪರಿಣಾಮ ಮತ್ತು ನೀವು ಆಗ ತೆಗೆದುಕೊಳ್ಳಬೇಕಾದ ಕ್ರಮಗಳಲ್ಲಿ ಬಹಳ ವ್ಯತ್ಯಾಸವಿದೆ. ನಿಮಗೆ ಪ್ರಿಸ್ಕ್ರೈಬ್ ಮಾಡಲಾದ ಇನ್ಸುಲಿನ್‍ನ ಬಗೆ ಅದಕ್ಕೆ ಒಂದು ಮುಖ್ಯ ಕಾರಣ. ಅತ್ಯಂತ ಸಾಮಾನ್ಯವಾದ ಡೋಸ್ ಎಂದರೆ ಅದು ಮಿಶ್ರಿತ ಅಥವಾ ತಡವಾಗಿ ಕೆಲಸ ಶುರು ಮಾಡುವ ಇನ್ಸುಲಿನ್, ಇದನ್ನು ದಿನದಲ್ಲಿ ಒಂದು ಬಾರಿ ತೆಗೆದುಕೊಳ್ಳಬೇಕು. ಆದರೂ, ಈ ಕೆಳಗಿನ ಯಾವುದಾದರೂ ಒಂದನ್ನು ನೀವು ತೆಗೆದುಕೊಳ್ಳುತ್ತಿರಬಹುದು:
– ರೆಗುಲರ್, ಲಿಸ್‍ಪ್ರೋ, ಆ್ಯಸ್‍ಪಾರ್ಟ್ ಇತ್ಯಾದಿಯಂತಹ ತಕ್ಷಣವೇ ಪ್ರಭಾವ ಬೀರುವ ಅಥವಾ ಶಾರ್ಟ್-ಆ್ಯಕ್ಟಿಂಗ್ ಇನ್ಸುಲಿನ್,
– ಪೂರ್ವ-ಮಿಶ್ರಿತ ಇನ್ಸುಲಿನ್, ಅಥವಾ
– ಅಲ್‍ಟ್ರಾ-ಲಾಂಗ್ ಆ್ಯಕ್ಟಿಂಗ್ ಇನ್ಸುಲಿನ್, ಉದಾಹರಣೆಗೆ, ಇನ್ಸುಲಿನ್ ಡೆಗ್ಲುಡೆಕ್ (ಟ್ರೆಸಿಬಾ).
ನೀವು ಡೋಸ್ ತೆಗೆದುಕೊಳ್ಳುವುದನ್ನು ತಪ್ಪಿಸಿದರೆ ಏನಾಗುತ್ತದೆ
ಮೇಲೆ ತಿಳಿಸಲಾದ ಯಾವುದೇ ಇನ್ಸುಲಿನ್ ಪ್ರಕಾರಗಳೊಂದಿಗೆ, ಆದರೆ ಹೆಚ್ಚು ಸಾಮಾನ್ಯವಾಗಿ ಶಾರ್ಟ್-ಆ್ಯಕ್ಟಿಂಗ್ ಇನ್ಸುಲಿನ್‍ನ ಡೋಸ್ ಅನ್ನು ತಪ್ಪಿಸಿದಾಗ, ಬ್ಲಡ್ ಶುಗರ್ ಮತ್ತು/ಅಥವಾ ಕೀಟೋನ್ ಮಟ್ಟಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇವುಗಳನ್ನು ಕ್ರಮವಾಗಿ ಹೈಪರ್‍ಗ್ಲೈಸೀಮಿಯಾ ಮತ್ತು ಕೀಟೋಆ್ಯಸಿಡೋಸಿಸ್ ಎಂದು ಹೇಳುತ್ತಾರೆ. ನೀವು ಒಂದು ವೇಳೆ ಡೋಸ್ ಅನ್ನು ತಪ್ಪಿಸಿಕೊಂಡರೆ, ಈ ಕೆಳಗಿನ ಯಾವುದಾದರೂ ಲಕ್ಷಣಗಳು ಇವೆಯೇ ಎಂದು ನೋಡಿ.
– ತೀವ್ರ ಬಾಯಾರಿಕೆ
– ಆಗಾಗ ಮೂತ್ರ ಬರುವುದು
– ಗೊಂದಲ ಅಥವಾ ಮಂಪರು (ನಿದ್ದೆ ಬಂದಂತೆ ಆಗುವುದು, ಸುಸ್ತು, ಆಲಸ್ಯ; ಮನಸ್ಸಿನಲ್ಲಿ ಮೋಡ ಕವಿದಂತಹ ಅನುಭವ)
– ಬಾಯಿಯಿಂದ ಹಣ್ಣಿನ ವಾಸನೆ ಬರುವುದು
– ವಾಕರಿಕೆ ಅಥವಾ ವಾಂತಿ ಬಂದಂತೆ ಆಗುವುದು
– ಹಸಿವು ಆಗದೆ ಇರುವುದು
– ಚರ್ಮ ಕೆಂಪಾಗುವುದು ಮತ್ತು/ಅಥವಾ ಒಣಗುವುದು.
– ಹೃದಯದ ಬಡಿತ ಹೆಚ್ಚುವುದು
ಇದಲ್ಲದೆ, ನಿಮ್ಮ ಗ್ಲುಕೋಮೀಟರ್ ಮತ್ತು ಡಿಪ್‌ಸ್ಟಿಕ್‌ಗಳನ್ನು ಬಳಸಿಕೊಂಡು ನಿಮ್ಮ ರಕ್ತ ಅಥವಾ ಮೂತ್ರದಲ್ಲಿನ ಗ್ಲುಕೋಸ್ ಮತ್ತು ಕೀಟೋನ್ ಮೌಲ್ಯಗಳನ್ನು ಸಹ ನೀವು ಪರಿಶೀಲಿಸಬೇಕು.
ನೀವೇನು ಮಾಡಬೇಕು
ಖಚಿತತೆ ಇರಲಿ
ನೀವು ಡೋಸ್ ತಪ್ಪಿಸಿದ್ದೀರಿ ಎಂದು ನಿಮಗೆ ಸರಿಯಾಗಿ ಗೊತ್ತಿರಬೇಕು. ಏಕೆಂದರೆ ಹೆಚ್ಚುವರಿ ಡೋಸ್ ನಿಮ್ಮ ಬ್ಲಡ್ ಶುಗರ್ ಮಟ್ಟವನ್ನು ಅಪಾಯಕಾರಿ ಮಟ್ಟಗಳಿಗೆ ಇಳಿಸಬಹುದು.
ತಕ್ಷಣವೇ ಪ್ರಭಾವ ಬೀರುವ ಅಥವಾ ಶಾರ್ಟ್-ಆ್ಯಕ್ಟಿಂಗ್ ಇನ್ಸುಲಿನ್
ಇಂತಹ ಇನ್ಸುಲಿನ್ ಬಗೆಗಳನ್ನು (ಉದಾ: ಲಿಸ್‌ಪ್ರೋ) ಸಾಮಾನ್ಯವಾಗಿ ಊಟ ಆದ ಮೇಲೆ ಅಥವಾ ಅದಕ್ಕಿಂತ ಮುಂಚೆ 30 ರಿಂದ 60 ನಿಮಿಷಗಳ ಅಂತರದಲ್ಲಿ ತೆಗೆದುಕೊಳ್ಳಲಾಗುತ್ತದೆ. ಡೋಸ್ ತಪ್ಪಿ ಸ್ವಲ್ಪವೇ ಹೊತ್ತಾದ ಮೇಲೆ ನಿಮಗೆ ನೆನಪಾದರೆ, ಒಂದು ಡೋಸ್ ತೆಗೆದುಕೊಳ್ಳಿ. ಒಂದು ವೇಳೆ ಸಮಯ ಮೀರಿ ಹೋಗಿದ್ದರೆ (ಒಂದು ಗಂಟೆಗೂ ಹೆಚ್ಚು ಕಾಲ) ನೀವು ನಿಮ್ಮ ಗ್ಲುಕೋಸ್ ಮಟ್ಟಗಳನ್ನು ಪರೀಕ್ಷಿಸಿಕೊಳ್ಳಬೇಕಾಗುತ್ತದೆ ಮತ್ತು/ಅಥವಾ ನಿಮ್ಮ ವೈದ್ಯರು ಸೂಚಿಸಿರುವ ಕ್ರಮಗಳನ್ನು ಪಾಲಿಸಬೇಕಾಗುತ್ತದೆ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.(2)
ಇಂಟರ್‍ಮೀಡಿಯೇಟ್-ಆ್ಯಕ್ಟಿಂಗ್ ಅಥವಾ ಮಿಶ್ರಿತ ಇನ್ಸುಲಿನ್
ಐಸೋಲೇಟಡ್ ಇಂಟರ್‍ಮೀಡಿಯೇಟ್-ಆ್ಯಕ್ಟಿಂಗ್ ಇನ್ಸುಲಿನ್ ಅಪರೂಪವಾಗಿದ್ದು ತಕ್ಷಣವೇ ಪ್ರಭಾವ ಬೀರುವ ಅಥವಾ ಶಾರ್ಟ್-ಆ್ಯಕ್ಟಿಂಗ್ ಇನ್ಸುಲಿನ್‍ನ ಸಂಯೋಜನೆಯೊಂದಿಗೆ ಕೊಡಲಾಗುತ್ತದೆ. ಆದ್ದರಿಂದ, ಯಾವ ಇನ್ಸುಲಿನ್‍ಗಳನ್ನು ಯಾವ ಸಂಯೋಜನೆಯಲ್ಲಿ ಬಳಸಲಾಗಿದೆ ಎಂಬುದರ ಮೇಲೆ (30-70 ಅಥವಾ 50-50) ಅವಲಂಬಿಸಿರುತ್ತದೆ. ಕೆಳಗೆ ಕೊಟ್ಟಿರುವುದು, ಸಾಮಾನ್ಯ ನಿಯಮವಾಗಿದೆ, ಆದರೆ ಅಂತಹ ಇನ್ಸುಲಿನ್‍ಗಳ ವಿಷಯದಲ್ಲಿ ನಿಮ್ಮ ವೈದ್ಯರ ಬಳಿ ಮೊದಲೇ ಮಾತನಾಡುವುದನ್ನು ಮರೆಯಬೇಡಿ.
1.5 ರಿಂದ 2 ಗಂಟೆ ಒಳಗೆ: ಒಂದು ವೇಳೆ ನೀವು 1.5 ರಿಂದ 2 ಗಂಟೆಗಳ ಒಳಗೆ ನೆನಪಿಸಿಕೊಂಡರೆ, ನೀವು ನಿಮ್ಮ ಸಾಮಾನ್ಯ ಡೋಸ್ ಅನ್ನು ತೆಗೆದುಕೊಳ್ಳಬಹುದು.
1.5 ರಿಂದ 2 ಗಂಟೆ ನಂತರ: ಡೋಸ್ ತಪ್ಪಿ ಹೋಗಿದೆ ಎಂದು ತಡವಾಗಿ ನೆನಪಾದರೆ, ಅದು ಮುಂದಿನ ಡೋಸ್ ಮೇಲೆಯೂ ತನ್ನ ಪ್ರಭಾವ ಬೀರುತ್ತದೆ; ಸಾಮಾನ್ಯವಾಗಿ ತೆಗೆದುಕೊಳ್ಳುವ ಸಮಯಕ್ಕಿಂತ ಕೊಂಚ ತಡವಾಗಿ ನೀವು ಇನ್ಸುಲಿನ್ ತೆಗೆದುಕೊಂಡರೆ ನಿಮ್ಮ ಇನ್ಸುಲಿನ್ ಮಟ್ಟಗಳು ಮುಂದಿನ ಡೋಸ್ ತೆಗೆದುಕೊಳ್ಳುವ ಹೊತ್ತಿಗೆ ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಇದು ಹೈಪರ್‍ಗ್ಲೈಸೀಮಿಯಾದ ಅಪಾಯವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ, ನಿಮ್ಮ ರೋಗಲಕ್ಷಣಗಳು ಮತ್ತು ನಿಮ್ಮ ಗ್ಲುಕೋಸ್ ಮತ್ತು ಕೀಟೋನ್ ಮಟ್ಟಗಳ ಮೇಲೆ ನೀವು ಎಂದಿನಂತೆ ನಿಗಾ ಇಡಬೇಕು (ಬ್ಲಡ್ ಮತ್ತು/ಅಥವಾ ಮೂತ್ರ). ಒಂದು ವೇಳೆ ಶುಗರ್ ಮಟ್ಟಗಳು ಅಧಿಕವಾಗಿದ್ದರೆ, ನಿಮ್ಮ ವೈದ್ಯರಿಗೆ ಕರೆ ಮಾಡಿ ಅಥವಾ ನಿಮಗೆ ಯಾವುದಾದರೂ ಸಲಹೆ ನೀಡಿದ್ದರೆ, ಅದನ್ನು ಪಾಲಿಸಿ. ನಿಮ್ಮ ಮುಂದಿನ ಡೋಸ್‍ನ ಸಮಯ ಬರುವವರೆಗೂ ಕಾಯಿರಿ ಹಾಗೂ ಆ ಡೋಸ್ ಅನ್ನು ಎಂದಿನಂತೆ ತೆಗೆದುಕೊಳ್ಳಿ.
ತಡವಾಗಿ ಮತ್ತು ತುಂಬ ತಡವಾಗಿ ಕೆಲಸ ಶುರು ಮಾಡುವ ಇನ್ಸುಲಿನ್
ಇಲ್ಲಿ ನಿಮಗೆ ಸಾಕಷ್ಟು ಸಮಯ ಸಿಗುತ್ತದೆ. ಈ ಇನ್ಸುಲಿನ್ ಅನ್ನು ಸಾಮಾನ್ಯವಾಗಿ ಬೆಳಗ್ಗೆ ತೆಗೆದುಕೊಳ್ಳಬೇಕು ಮತ್ತು ಒಂದು ವೇಳೆ ಅದನ್ನು ತಪ್ಪಿಸಿದರೆ ನೀವು ದಿನದ ಯಾವ ಹೊತ್ತಲ್ಲಿ ಬೇಕಾದರೂ ಅದನ್ನು ತೆಗೆದುಕೊಳ್ಳಬಹುದು.(4,5) ತೆಗೆದುಕೊಳ್ಳುವ ಪ್ರತಿ ಡೋಸ್‍ನ ನಡುವೆ ಕನಿಷ್ಠ ಪಕ್ಷ 8 ರಿಂದ 10 ಗಂಟೆಗಳ ಅಂತರವಿರುವಂತೆ ನೋಡಿಕೊಳ್ಳಲು ಮರೆಯಬೇಡಿ. ಒಂದು ವೇಳೆ ಎರಡರ ನಡುವೆ ಹೆಚ್ಚುಕಡಿಮೆ ಇಷ್ಟೇ ಅಥವಾ ಇದಕ್ಕಿಂತ ಕಡಿಮೆ ಸಮಯದ ಅಂತರವಿದ್ದರೆ, ಆ ಡೋಸ್ ಬಿಟ್ಟು ಮುಂದಿನ ಸಾಮಾನ್ಯ ಡೋಸ್ ತೆಗೆದುಕೊಳ್ಳಿ.
ಯಾವುದೇ ಸಮಯದಲ್ಲೂ
ಒಂದು ವೇಳೆ ಈ ಹಿಂದೆ ಹೇಳಿದ ಯಾವುದೇ ರೋಗಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಅಥವಾ ನಿಮ್ಮ ಗ್ಲುಕೋಸ್ ಅಥವಾ ಕೀಟೋನ್ ರೀಡಿಂಗ್‍ಗಳು ಅಧಿಕವಾಗಿದ್ದರೆ (ಯಾವುದೇ ರೋಗಲಕ್ಷಣ ಕಂಡುಬರದಿದ್ದರೂ ಕೂಡ), ನಿಮ್ಮ ವೈದ್ಯರಿಗೆ ಕರೆ ಮಾಡಿ.
ಒಂದು ವೇಳೆ ನಿಮ್ಮ ವೈದ್ಯರು ಇಂತಹ ಸನ್ನಿವೇಶಗಳಿಗಾಗಿ ಮೊದಲೇ ಏನಾದರೂ ಕೊಟ್ಟಿದ್ದರೆ (ಉದಾಹರಣೆಗೆ, ರ‍್ಯಾಪಿಡ್-ಆ್ಯಕ್ಟಿಂಗ್ ಇನ್ಸುಲಿನ್), ಅದನ್ನು ಮರೆಯದೆ ತೆಗೆದುಕೊಳ್ಳಿ.
2. ತಪ್ಪಿಸುವುದನ್ನು ಬಿಡಿ
ಒಂದು ಡೋಸ್ ತಪ್ಪಿಸಿದಾಗ ಕೊಂಚ ಒತ್ತಡ ಆಗಬಹುದು, ಆದರೆ ಆಗಾಗ್ಗೆ ತಪ್ಪಿಸುತ್ತಿದ್ದರೆ ನಿಮ್ಮ ಗ್ಲುಕೋಸ್ ಮೇಲಿರುವ ನಿಯಂತ್ರಣ ದೀರ್ಘಾವಧಿಯಲ್ಲಿ ಕುಗ್ಗಬಹುದು.(1) ಅಲ್ಲದೆ, ಡಯಾಬಿಟಿಸ್‍ಗೆ ಸಂಬಂಧಿಸಿದ ತೊಡಕುಗಳಿಗೆ ಅಹ್ವಾನ ಕೊಟ್ಟಂತೆ ಆಗುತ್ತದೆ. ಮೊದಲಿಗೆ ಡೋಸ್ ತಪ್ಪಿಸುವುದನ್ನು ಬಿಡಿ ಹಾಗೂ ಪ್ರತಿದಿನವೂ ಇನ್ಸುಲಿನ್ ಅನ್ನು ತಪ್ಪದೇ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ.
ಉಲ್ಲೇಖಗಳು:
- Josse RG, Woo V. Flexibly timed once‐daily dosing with degludec: a new ultra‐long‐acting basal insulin. Diabetes, Obesity and Metabolism. 2013;15(12):1077-84.
- Insulin Lispro (Humalog®): Important Patient Information [Internet]. University of Rochester Medical Center. 2019 [cited 26 April 2019]. Available from: https://www.urmc.rochester.edu/medialibraries/urmcmedia/medicine/general-medicine/patientcare/documents/humalog_brochure_urmc.pdf
- Insulin Aspart Protamine and Insulin Aspart (Novolog Mix 70/30®): Important Patient Information [Internet]. University of Rochester Medical Center. 2019 [cited 26 April 2019]. Available from: https://www.urmc.rochester.edu/medialibraries/urmcmedia/medicine/general-medicine/patientcare/documents/novologmix_brochure_urmc.pdf
- Insulin Detemir (Levemir®): Important Patient Information [Internet]. University of Rochester Medical Center. 2019 [cited 26 April 2019]. Available from: https://www.urmc.rochester.edu/medialibraries/urmcmedia/medicine/general-medicine/patientcare/documents/levemir_brochure_urmc.pdf
- What To Do If Your Patient Missed An Insulin Dose [Internet]. Tresibapro.com. 2019 [cited 26 April 2019]. Available from: https://www.tresibapro.com/peer-perspectives/hear-from-your-peers/missed-insulin-dose.html