Reading Time: 2 minutes

ಅಶ್ವಿನಿ ಎಸ್.ಕಾನಡೆ, 17 ವರ್ಷಗಳ ಅನುಭವ ಹೊಂದಿರುವ ನೋಂದಾಯಿತ ಆಹಾರ ತಜ್ಞರು ಮತ್ತು ಸರ್ಟಿಫೈಡ್ ಡಯಾಬಿಟಿಸ್‌ ಶಿಕ್ಷಣ ತಜ್ಞರು, ಇದನ್ನು ಇವರಿಂದ ವಿಮರ್ಶಿಸಲಾಗಿದೆ.

ನಿಮ್ಮ ಉತ್ತಮ ಆರೋಗ್ಯವು, ನೀವು ಪ್ರತಿದಿನ ನಡೆದಾಡುವುದರ ಮೇಲೆ ಅವಲಂಬಿಸಿದೆ. ಪಾಶ್ಚಿಮಾತ್ಯ ಮೆಡಿಸಿನ್‌ನ ಪಿತಾಮಹ ಎಂದು ಕರೆಸಿಕೊಳ್ಳುವ ಹಿಪೊಕ್ರೆಟಿಸ್‌ನ ಕಾಲದಿಂದಲೂ, ನಡಿಗೆಯ ಅನುಕೂಲಗಳು ಎಲ್ಲರಿಗೂ ತಿಳಿದಿವೆ. ನಡೆಯುವುದರಿಂದ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ, ಜೊತೆಗೆ ನಿಮ್ಮ ಸ್ನಾಯುಗಳು ಆರೋಗ್ಯವಾಗಿರುತ್ತವೆ, ಮತ್ತು ನಿಮ್ಮ ಆಯಸ್ಸು ಕೂಡ ಹೆಚ್ಚುತ್ತದೆ. ನಡೆಯುವುದರಿಂದ ನಿಮ್ಮ ಮೆಟಬಾಲಿಸಮ್ ಹೆಚ್ಚಾಗುತ್ತದೆ ಹಾಗು ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ನಿಮ್ಮ ದೇಹ ಕೂಡ ಸರಿಯಾದ ಆಕಾರ ಪಡೆದುಕೊಳ್ಳುವುದು. ಆದರೆ ಅದರ ಅತಿ ದೊಡ್ಡ ಪ್ರಯೋಜನ ಇಲ್ಲಿದೆ – ಅದು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು!

ಈ ಸರಳ ದೈನಂದಿನ ಚಟುವಟಿಕೆಯು ಹಲವು ಜನರ ಜೀವನವನ್ನು ಪರಿವರ್ತಿಸಿದೆ. ಆದರೂ, ಡಯಾಬಿಟಿಸ್ ಎದುರಿಸುವುದಕ್ಕಾಗಿ ಈ ವ್ಯಾಯಾಮ ಮಾಡುತ್ತಿದ್ದರೆ, ಹೊತ್ತಿಗೆ ಸರಿಯಾಗಿ ಅದನ್ನು ಮಾಡುವುದು ಮುಖ್ಯವಾಗಿರುತ್ತದೆ.

ಹೊತ್ತಿಗೆ ಸರಿಯಾಗಿ ಕೆಲಸ ಮಾಡುವುದು ತುಂಬಾ ಮುಖ್ಯ

ಪ್ರತಿದಿನ ನಡೆಯುವುದು ಒಳ್ಳೆಯದು, ಆದರೆ ಊಟದ ನಂತರ ನಡೆಯುವುದು ಇನ್ನೂ ಒಳ್ಳೆಯದು. ಒಂದೇ ಸಲಕ್ಕೆ 30 ನಿಮಿಷಗಳ ಕಾಲ ನಡೆಯುವ ಜನರಿಗಿಂತ, ಊಟ ಮುಗಿಸಿ 10 ನಿಮಿಷಗಳ ಕಾಲ ನಡೆಯುವ ಜನರು ಹೆಚ್ಚಿನ ಆರೋಗ್ಯದ ಅನುಕೂಲಗಳನ್ನು ಪಡೆಯುತ್ತಾರೆ ಎಂದು ಸಂಶೋಧನೆಯು ತಿಳಿಸಿದೆ.[1] ನಿಮ್ಮ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಲು ಹೊತ್ತಿಗೆ ಸರಿಯಾಗಿ ನಡೆಯುವುದು ತುಂಬಾ ಮುಖ್ಯ.

ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯಲು, ಮೊದಲಿಗೆ, ನೀವು ನಡೆಯುವಾಗ ರಕ್ತದಲ್ಲಿನ ಗ್ಲುಕೋಸ್ ಮಟ್ಟಕ್ಕೆ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ದೇಹವು ಕೆಲಸ ಮಾಡುವಾಗ

ವಿಶ್ರಾಂತಿಯಲ್ಲಿದ್ದಾಗ ದೇಹಕ್ಕೆ ಹೆಚ್ಚಿನ ಶಕ್ತಿ ಬೇಕಾಗುವುದಿಲ್ಲ. ಆದರೆ ಏನಾದರೂ ಕೆಲಸ ಮಾಡಲು ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ, ಅಂತಹ ಶಕ್ತಿಯನ್ನು ದೇಹದ ಸ್ನಾಯುಗಳಿಗೆ ನಿಮ್ಮ ರಕ್ತದಲ್ಲಿನ ಗ್ಲುಕೋಸ್‌ ಒದಗಿಸುತ್ತದೆ. ಓಡಾಡುತ್ತಿರುವ ದೇಹಕ್ಕೆ ಬೇಕಿರುವ ಶಕ್ತಿಯನ್ನು ನೀಡಲು, ನಿಮ್ಮ ಹೃದಯದ ಬಡಿತ ಹೆಚ್ಚಾಗಿ, ದೇಹದ ತುಂಬೆಲ್ಲಾ ಹೆಚ್ಚಿನ ರಕ್ತ ಸಂಚಾರವಾಗುತ್ತದೆ. ನಡಿಗೆಯಂತಹ ಸರಳ ವ್ಯಾಯಾಮದಿಂದ, ನಿಮ್ಮ ಹೃದಯದ ಬಡಿತ ನಿಮಿಷಕ್ಕೆ 70 ರಿಂದ 100 ಬಡಿತಕ್ಕೆ ಹೆಚ್ಚಾಗುತ್ತದೆ. ರಕ್ತದ ಹರಿವು ಹೆಚ್ಚಾಗುವುದರಿಂದ ನಿಮ್ಮ ರಕ್ತನಾಳಗಳು ಕೂಡ ಹಿಗ್ಗುತ್ತವೆ.

ಇದು ಹೇಗೆ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ

ನೀವು ಊಟ ಸೇವಿಸಿದ ನಂತರ ರಕ್ತದಲ್ಲಿನ ಗ್ಲುಕೋಸ್‌ ಮಟ್ಟ ಹೆಚ್ಚುತ್ತದೆ. ಇದನ್ನು ನಿಯಂತ್ರಿಸಲು ನಿಮ್ಮ ದೇಹ ಇನ್ಸುಲಿನ್ ಉತ್ಪತ್ತಿ ಮಾಡುತ್ತದೆ. ಆದರೆ ನಿಮಗೆ ಡಯಾಬಿಟಿಸ್ ಇದ್ದಾಗ ಇಂತಹ ಸಂದರ್ಭಗಳು ತುಂಬಾ ತೊಂದರೆಯನ್ನು ತರುತ್ತವೆ. ಏಕೆಂದೆರೆ ದೇಹದಲ್ಲಿ ಇನ್ಸುಲಿನ್ ಸ್ಪಂದನೆ ಕಡಿಮೆ ಆಗುವುದರಿಂದ, ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುವುದಿಲ್ಲ. ಹೀಗೆ ನಿಯಂತ್ರಣದಲ್ಲಿ ಇರದ, ರಕ್ತದಲ್ಲಿನ ಸಕ್ಕರೆ ಮಟ್ಟದ ಹೆಚ್ಚಳವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ.

ಆದರೆ ನೀವು ಊಟ ಸೇವಿಸಿದ ತಕ್ಷಣವೇ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆಯು ದೇಹದ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ ಹಾಗು ರಕ್ತದ ಸಕ್ಕರೆ ಮಟ್ಟವನ್ನು ಕೂಡಲೇ ಮೇಲೇರದಂತೆ ತಡೆಯುತ್ತದೆ. ಊಟದ ಬಳಿಕ ಸ್ವಲ್ಪ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ 12% ಕಡಿಮೆ ಆಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ನಿಮಗೆ ಅರಿವಿಲ್ಲದೇ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಈ 8 ವಿಷಯಗಳನ್ನು ತಿಳಿದುಕೊಳ್ಳಿ.

ಬದಲಾವಣೆಯತ್ತ ಒಂದೊಂದೇ ಸಣ್ಣ ಹೆಜ್ಜೆಗಳು

ಊಟದ ಬಳಿಕ ನಡೆಯಲು ಹೋಗುವ ಅಭ್ಯಾಸವನ್ನು ನೀವು ಸುಲಭವಾಗಿ ನಿಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬಹುದು. 10 ನಿಮಿಷಗಳ ಕಾಲ ನಡೆಯಿರಿ, ಅದು ನಿಮ್ಮ ಆಫೀಸ್‌ನ ಸುತ್ತಮುತ್ತ ಓಡಾಡುವುದಾಗಿರಲಿ, ಅಥವಾ ಮೆಟ್ಟಿಲುಗಳನ್ನು ಹತ್ತಿ ಇಳಿಯುವುದಾಗಿರಲಿ, ಇಂತಹ ಅಭ್ಯಾಸಗಳು ತುಂಬಾ ಮುಖ್ಯ. ಈ ಚಟುವಟಿಕೆಗಳನ್ನು ಮಾಡಲು ನಿಮಗೆ ಹೆಚ್ಚಿನ ಆಯಾಸ ಆಗುವುದಿಲ್ಲ. ಅದಲ್ಲದೇ, ಇಂತಹ ಚಿಕ್ಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯ ಸ್ಥಿರವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಈ ಸಲಹೆಗಳು ನಿಮ್ಮ ನೆನಪಿನಲ್ಲಿರಲಿ.

ಒಂದು ಸಣ್ಣ ಅಭ್ಯಾಸ ರೂಢಿಸಿಕೊಳ್ಳುವುದು ಸಕಾರಾತ್ಮಕ ನಡುವಳಿಕೆಯಾಗಿದ್ದು, ಅದನ್ನು ನೀವು ಪ್ರತಿದಿನ ಮಾಡಲು ಬಯಸುತ್ತೀರಿ; ಈ ಅಭ್ಯಾಸವನ್ನು ನೀವು ತಪ್ಪಿಸುವ ಸಾಧ್ಯತೆಗಳು ಕಡಿಮೆ, ಹಾಗೆಯೇ ಇದು, ನಿಮಗೆ ಹೊರೆ ಎನಿಸದ, ತುಂಬಾ ಶಕ್ತಿಶಾಲಿಯಾದ ಮತ್ತು ಅಭ್ಯಾಸವನ್ನು ರೂಢಿಸಿಕೊಳ್ಳಲು ಇರುವ ಒಳ್ಳೆಯ ತಂತ್ರವಾಗಿದೆ. “ನಿಮ್ಮ ಕೆಲಸದಲ್ಲಿ ನೀವು ಮುಂದುವರೆಯುವಾಗ, ನಿಮ್ಮನ್ನು ನೀವು ನಂಬಬೇಕು, ಅದನ್ನು ಬಿಟ್ಟು ನಿಮಗೆ ಬೇರೆ ಯಾವುದೇ ಆಯ್ಕೆ ಇರುವುದಿಲ್ಲ.” ಎಂದು ಸ್ಟೀಫನ್ ಗೈಸ್ ತಮ್ಮ ಮಿನಿ ಹ್ಯಾಬಿಟ್ಸ್ – ಸ್ಮಾಲ್ ಹ್ಯಾಬಿಟ್ಸ್, ಬಿಗ್ಗರ್ ರಿಸಲ್ಟ್‌ಸ್, ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ವಾಕ್‌ ಮಾಡಲು ಒಳ್ಳೆಯ ಸಮಯ

ಊಟದ ನಂತರ ಸ್ವಲ್ಪ ಸಮಯ ಓಡಾಡುವುದು ಒಳ್ಳೆಯದು. ಆದರೆ ಕೆಲವೊಮ್ಮೆ ನಿಮಗೆ ಊಟದ ಬಳಿಕ ನಡೆದಾಡಲು ಸಾಧ್ಯವಾಗುವುದಿಲ್ಲ. ಆಗ ರಾತ್ರಿ ಊಟ ಆದ ಮೇಲೆ 10 ನಿಮಿಷಗಳ ಕಾಲ ನಡೆಯುವುದನ್ನು ಮರೆಯಬೇಡಿ. ರಾತ್ರಿಯ ಊಟ ಆದ ಮೇಲೆ ನಡೆಯುವುದು ತುಂಬಾ ಒಳ್ಳೆಯದು, ಏಕೆಂದರೆ, ಕತ್ತಲಾದ ಮೇಲೆ ನಿಮ್ಮ ಮೆಟಬಾಲಿಸಮ್ ತನ್ನ ಚುರುಕುತನವನ್ನು ಕಳೆದುಕೊಳ್ಳುತ್ತದೆ, ಅದನ್ನು ಚುರುಕಾಗಿಸಲು ವಾಕಿಂಗ್‌ ನೆರವಾಗುವುದು. “ರಾತ್ರಿ ಊಟದ ನಂತರ 10-15 ನಿಮಿಷಗಳ ಕಾಲ ನಡೆಯುವುದರಿಂದ, ಅದು ನಮ್ಮ ದೇಹದ ರಕ್ತದಲ್ಲಿರುವ ಪೋಸ್ಟ್-ಪ್ರಾಂಡಿಯಲ್ ಶುಗರನ್ನು 20-25% ನಷ್ಟು ಕಡಿಮೆ ಮಾಡುತ್ತದೆ.” ಎಂದು ಗಾಡ್ಗೆ ಡಯಾಬಿಟಿಸ್‌ ಸೆಂಟರ್‌ನಲ್ಲಿ ಡಯಾಬಿಟಾಲಜಿಸ್ಟ್‌ ಕನ್ಸಲ್‌ಟೆಂಟ್‌ ಆಗಿರುವ ಡಾ. ರೋಶನಿ ಗಾಡ್ಗೆ ಅವರು ತಿಳಿಸುತ್ತಾರೆ.

ಬಿಡುವಿಲ್ಲದ ಬದುಕಿನಲ್ಲಿ, ಪ್ರತಿದಿನ ಮಾಡಬಹುದಾದ ಸಣ್ಣ ಅಭ್ಯಾಸಗಳನ್ನು ನೀವು ರೂಢಿಸಿಕೊಳ್ಳುವುದರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಪ್ರತಿ ಸಲ ಊಟದ ಬಳಿಕ 10 ನಿಮಿಷಗಳ ಕಾಲ ನಡೆಯುವುದು ಇಂತಹ ಅಭ್ಯಾಸಗಳಲ್ಲಿ ಒಂದು. ಬದ್ಧತೆಯಿಂದ ಇದನ್ನು ಪಾಲಿಸಿ, ಆಗ ನಿಮ್ಮ ಬದುಕು ಬದಲಾಗುವುದನ್ನು ನೋಡುವಿರಿ.

ಉಲ್ಲೇಖಗಳು:

  1. Incremental area under the blood glucose curve was significantly lower when participants walked after meals compared with on a single daily occasion (ratio of geometric means 0.88, 95% CI 0.78, 0.99) https://link.springer.com/article/10.1007/s00125-016-4085-2
  2. https://www.ncbi.nlm.nih.gov/pubmed/21995867

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.