Reading Time: 5 minutes


ಡಯಾಬಿಟಿಸ್ ಇರುವ ಜನರು ಸಾಮಾನ್ಯವಾಗಿ ಅದರೊಂದಿಗೆ ಬರುವ ಇತರ ಸಮಸ್ಯೆಗಳೊಂದಿಗೆ ಕೂಡ ಹೋರಾಡಬೇಕಾಗುತ್ತದೆ, ಅದರಲ್ಲಿ ಮೊದಲನೆಯದು ತೂಕದ ಹೆಚ್ಚಳ ಅಥವಾ ಇಳಿಕೆ. ಇವೆರಡರಲ್ಲಿ ಯಾವುದೇ ಆದರೂ ಅದು ಆರೋಗ್ಯ ಕ್ಷೀಣಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ, ಇದ್ದಕ್ಕಿದ್ದಂತೆ ಯಾವುದೇ ಕಾರಣವಿಲ್ಲದೆ ತೂಕ ಇಳಿಯುವುದು ಪ್ರೀ-ಡಯಾಬಿಟಿಸ್ ಅಥವಾ ಡಯಾಬಿಟಿಸ್‍ನ ರೋಗಲಕ್ಷಣವೇ ಆಗಿರುತ್ತದೆ. ಅಲ್ಲದೆ, ಬೊಜ್ಜು ಕೂಡ ಡಯಾಬಿಟಿಸ್‍ನ ಅಪಾಯಕಾರಿ ಅಂಶಗಳಲ್ಲಿ ಒಂದು. ಮತ್ತೊಂದೆಡೆ, ಈಗಾಗಲೆ ಡಯಾಬಿಟಿಸ್ ಇರುವವರ ತೂಕ ಹೆಚ್ಚಾದರೆ, ಅದನ್ನು ಕೂಡ ಒಂದು ಸಮಸ್ಯೆಯಂತೆ ಪರಿಗಣಿಸುತ್ತಾರೆ. ನಿಮ್ಮ ಡಯಾಬಿಟಿಸ್ ಯಾವುದೇ ಹಂತದಲ್ಲಿ ಇರಲಿ, ನಿಮ್ಮ ತೂಕವು ಸಹ ಏನೇ ಇರಲಿ, ಈ ಸಮಸ್ಯೆಗಳನ್ನು ಯಾವುದೇ ಒತ್ತಡ ಇಲ್ಲದೆ ನಿಭಾಯಿಸುವುದು ಎಷ್ಟು ಮುಖ್ಯ ಎಂಬುದು ನಮಗೆ ತಿಳಿದಿದೆ.

ಸಾಮಾನ್ಯ ಜನರಿಗೆ ತೂಕವನ್ನು ಇಳಿಸಲು ಅಥವಾ ಹೆಚ್ಚಿಸಿಕೊಳ್ಳಲು ಆಹಾರಕ್ರಮ ಮತ್ತು ಬಹಳಷ್ಟು ದೈಹಿಕ ಚಟುವಟಿಕೆ ಆಯ್ಕೆಗಳ ಮೂಲಕ ಸಹಾಯ ಮಾಡುವ ಹಲವಾರು ಮಾರ್ಗಸೂಚಿಗಳು ಈಗಾಗಲೆ ಲಭ್ಯವಿವೆ, ಆದರೆ ಅವೆಲ್ಲವೂ ಡಯಾಬಿಟಿಸ್ ಇರುವ ಜನರಿಗೆ ನೇರವಾಗಿ ಅನ್ವಯವಾಗುವುದಿಲ್ಲ. ಹಾಗಾಗಿ, ಡಯಾಬಿಟಿಸ್ ಇರುವವರಿಗೆ ಕಾಡುವ ತೂಕ, ಡಯಾಬಿಟಿಸ್ ಮತ್ತು ಅವೆರಡರ ನಂಟಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳನ್ನು ನಾವು ಉತ್ತರಿಸಲು ಪ್ರಯತ್ನಿಸಿದ್ದೇವೆ. ಡಯಾಬಿಟಿಸ್‍ನಂತಹ ಸಮಸ್ಯೆ ಇದ್ದಾಗ, ತೂಕದ ಸಮಸ್ಯೆಗಳಿಗೆ ಸಂಬಂಧಿಸಿದ ಶರೀರವಿಜ್ಞಾನವನ್ನು ಅರಿಯುವುದು ಅತ್ಯಗತ್ಯ, ಆಗ ಆ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಬನ್ನಿ, ನಿಮ್ಮ ಡಯಾಬಿಟಿಸ್‍ಗೆ ಸಂಬಂಧಿಸಿದ ತೂಕದ ಸಮಸ್ಯೆ ಏನೆಂದು ನೋಡಿ, ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಹೇಗೆಂದು ತಿಳಿಯೋಣ.

ತೂಕ ಹೆಚ್ಚಳದ ಶರೀರವಿಜ್ಞಾನ

“ನಿಮ್ಮ ತೂಕ ಹೆಚ್ಚಿದ್ದರೆ ಅಥವಾ ನೀವು ಬೊಜ್ಜನ್ನು ಹೊಂದಿದ್ದರೆ, ನಿಮಗೆ ಡಯಾಬಿಟಿಸ್ ಬರುವ ಅಪಾಯ ಇರುತ್ತದೆ” – ನಿಮಗೆ ಡಯಾಬಿಟಿಸ್ ಬಗ್ಗೆ ಈಗಾಗಲೆ ಗೊತ್ತಿದ್ದರೆ ಈ ಸಾಲನ್ನು ನೀವು ಬಹುಶಃ ಕೇಳಿರುತ್ತೀರಿ. ಬೊಜ್ಜು ಮತ್ತು ಅಧಿಕ ತೂಕ ಡಯಾಬಿಟಿಸ್ ಬರಲು ಕಾರಣವಾಗುವ ಪ್ರಮುಖ ಸಮಸ್ಯೆಗಳು. ಆದರೆ, ಈ ಹಂತದಲ್ಲಿ ಡಯಾಬಿಟಿಸ್ ಬರಲು ಇದೊಂದೆ ಕಾರಣ ಆಗಿರುವುದಿಲ್ಲ. ಡಯಾಬಿಟಿಸ್ ಉಂಟಾಗಲು ಕೊಡುಗೆ ನೀಡುವ ಮತ್ತಷ್ಟು ಅಪಾಯಕಾರಿ ಅಂಶಗಳಿವೆ, ತೂಕ ಯಾವತೂ ಹೆಚ್ಚೇ ಆಗದವರಿಗೆ ಕೂಡ ಡಯಾಬಿಟಿಸ್ ಬರಬಹುದು.

ತೂಕದೊಂದಿಗಿನ ಡಯಾಬಿಟಿಸ್‍ನ ಎರಡನೇ ಸಂಬಂಧ ತೂಕದ ಇಳಿಕೆಯು ಡಯಾಬಿಟಿಸ್‍ನ ಲಕ್ಷಣವಾಗಿ ಕಾಣಿಸಿಕೊಂಡಾಗ ಬೆಳಕಿಗೆ ಬರುತ್ತದೆ. ಇದು ಮುಖ್ಯವಾಗಿ ಆಗುವುದು ಎರಡೇ ಸಂದರ್ಭಗಳಲ್ಲಿ; ಪ್ಯಾನ್‍ಕ್ರಿಯಾಸ್ ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸಲು ಸೋತಾಗ ಅಥವಾ ಇನ್ಸುಲಿನ್ ಅದರ ಕೆಲಸವನ್ನು ಸರಿಯಾಗಿ ಮಾಡದೆ ಇದ್ದಾಗ. ಇದರ ಫಲಿತಾಂಶವಾಗಿ, ದೇಹಕ್ಕೆ ಸಾಕಷ್ಟು ಗ್ಲುಕೋಸ್ ಸಿಗದ ಕಾರಣ ದೇಹವು ಶಕ್ತಿಗಾಗಿ ಕೊಬ್ಬಿನ ಜೀವಕೋಶ ಮತ್ತು ಸ್ನಾಯುಗಳನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತದೆ. ಒಬ್ಬ ವ್ಯಕ್ತಿಯ ತೂಕವು ಹೀಗೆ ಡಯಾಬಿಟಿಸ್‍ನ ಈ ಹಂತಗಳಲ್ಲಿ ಇಳಿದು ಹೋಗುತ್ತದೆ.

ಡಯಾಬಿಟಿಸ್ ಇದ್ದರೆ ತೂಕ ಹೆಚ್ಚುತ್ತದೆಯೇ?

ಆಗಾಗ ಮೂತ್ರ ಬರುವುದು, ಹೆಚ್ಚಿದ ಕಿರಿಕಿರಿ ಮತ್ತು ಸುಸ್ತಾಗುವುದು ಸೇರಿದಂತೆ ಇದ್ದಕ್ಕಿದ್ದಂತೆ ತೂಕ ಇಳಿಯುವುದು ಡಯಾಬಿಟಿಸ್‍ನ ರೋಗಲಕ್ಷಣಗಳು. ಹಾಗಾಗಿ, ತೂಕ ಇಳಿದಾಗ ಅದು ಡಯಾಬಿಟಿಸ್‍ನೊಂದಿಗೆ ಸಂಬಂಧಿಸಿದ್ದು ಎಂದು ಊಹಿಸುವುದು ಸುಲಭ. ಆದರೆ, ಈ ಲಕ್ಷಣಗಳು ಡಯಾಬಿಟಿಸ್‍ನ ಪ್ರಾರಂಭಿಕ ಹಂತಗಳಲ್ಲಿ ಅಥವಾ ಪ್ರೀ-ಡಯಾಬಿಟಿಸ್ ಹಂತಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣವೆಂದು ತಿಳಿದು ಬಂದಿದೆ. ಪೂರ್ತಿ-ಪ್ರಮಾಣದಲ್ಲಿ ಪ್ರಕಟವಾದ ಡಯಾಬಿಟಿಸ್, ತೂಕದಲ್ಲಿ ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ.

ನಿಮ್ಮ ಬ್ಲಡ್ ಶುಗರ್ ಮಟ್ಟಗಳು ಹೆಚ್ಚಾಗಿದ್ದಾಗ, ದೇಹದಲ್ಲಿ ಬಳಸದ ಇನ್ಸುಲಿನ್‍ನ ಪ್ರಮಾಣ ಕೂಡ ಹೆಚ್ಚುತ್ತಿರುತ್ತದೆ (ಏಕೆಂದರೆ ಇನ್ಸುಲಿನ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ). ಬಳಸದ ಈ ಹೆಚ್ಚುವರಿ ಇನ್ಸುಲಿನ್ ದೇಹದಲ್ಲಿ ಕೊಬ್ಬಿನಂಶ ಕರಗದಂತೆ ನೋಡಿಕೊಳ್ಳುತ್ತದೆ. ನಂರದಲ್ಲಿ ಈ ಹೆಚ್ಚುವರಿ ಇನ್ಸುಲಿನ್ ನಿಮ್ಮ ಮಾಂಸಖಂಡಗಳಲ್ಲಿ ಬಳಸದಿರುವ ದೇಹದ ಕೊಬ್ಬಾಗಿ ಶೇಖರಣೆಯಾಗುತ್ತವೆ. ಡಯಾಬಿಟಿಸ್ ಇರುವವರಿಗೆ ಇದು ತೂಕವನ್ನು ಹೆಚ್ಚಿಸಿಕೊಳ್ಳಲು ಇರುವ ಸುಲಭವಾದ ವಿಧಾನ.

ಡಯಾಬಿಟಿಸ್ ಇರುವವರಲ್ಲಿ ತೂಕ ಹೆಚ್ಚಾಗಲು ಇರುವ ಮತ್ತೊಂದು ಕಾರಣ ಹೆಚ್ಚಿದ ಶುಗರ್ ಮಟ್ಟಗಳಿಗೆ ಸಂಬಂಧಿಸಿದೆ. ಈ ಅಧಿಕ ಮಟ್ಟದ ಬ್ಲಡ್ ಗ್ಲೂಕೋಸ್ ಅನ್ನು (ಅಥವಾ ಬ್ಲಡ್ ಶುಗರ್, ಶಕ್ತಿ ಉತ್ಪಾದಿಸಲು ಇದು ಬೇಕು) ದೇಹದ ಜೀವಕೋಶಗಳಿಂದ ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಆಗದೇ ಇರುವುದರಿಂದ ಅವು ಮಾಡಬೇಕಿದ್ದ ಕಾರ್ಯವನ್ನು ಅವುಗಳಿಂದ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ಅವುಗಳನ್ನು ದೇಹದಿಂದ ಮೂತ್ರದ ಮೂಲಕ ಹೊರಹಾಕಲಾಗುತ್ತದೆ. ಆದರೆ, ದೇಹಕ್ಕೆ ಈಗಲೂ ಗ್ಲುಕೋಸ್‍ನ ಅಗತ್ಯ ಇರುವುದರಿಂದ ಅದು ಇನ್ನು ಹೆಚ್ಚು ಬೇಕು ಎಂದು ಸಿಗ್ನಲ್ ಕಳುಹಿಸುತ್ತದೆ ಹಾಗೂ ನಮಗೆ ಮತ್ತಷ್ಟು ಶುಗರ್ ಅಗತ್ಯವಿದೆ ಎಂದು ನಂಬುವಂತೆ ಮಾಡುತ್ತದೆ. ಸರಳವಾಗಿ ಹೇಳುವುದಾದರೆ, ಇದು ಒಬ್ಬ ವ್ಯಕ್ತಿಯ ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಎಚ್ಚರದಿಂದ ಇಲ್ಲದಿದ್ದರೆ ನಮ್ಮನ್ನು ಬಹುಶಃ ಹೆಚ್ಚು ಅನಾರೋಗ್ಯಕರ ಆಹಾರಗಳನ್ನು ತಿನ್ನುವಂತೆ ಮಾಡುತ್ತದೆ. ತೂಕ ಹೆಚ್ಚಾಗುವುದು ಡಯಾಬಿಟಿಸ್ ಸೈಕಲ್‍ನ ಸ್ಪಷ್ಟ ಪರಿಣಾಮ ಎಂದು ಪುನಃ ಹೇಳಬೇಕಾಗಿಲ್ಲ.

ಅದಾಗ್ಯೂ, ನಿಮ್ಮ ಬ್ಲಡ್ ಶುಗರ್ ಮಟ್ಟಗಳನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ತೂಕದ ಹೆಚ್ಚಳ ಒಂದು ಸಮಸ್ಯೆ ಆಗಲಾರದು ಎಂದು ನೀವು ಯೋಚಿಸುತ್ತಿರಬಹುದು. ಬಹುತೇಕ ಸಂದರ್ಭಗಳಲ್ಲಿ, ನಿಮ್ಮ ಡಯಾಬಿಟಿಸ್ ಔಷಧೋಪಚಾರಗಳು ಅಥವಾ ನೀವು ಚಿಕಿತ್ಸೆ ತೆಗೆದುಕೊಳ್ಳುತ್ತಿರುವ ಇತರ ಕೆಲವು ಆರೋಗ್ಯ ಸಮಸ್ಯೆಗಳಿಂದ ಕೂಡ ತೂಕ ಹೆಚ್ಚಳ ಆಗಿರಬಹುದು.

ಡಯಾಬಿಟಿಸ್ ಇದ್ದಾಗ ತೂಕ ನಿರ್ವಹಿಸುವುದು ಹೇಗೆ

ಇತ್ತೀಚಿನ ದಿನಗಳಲ್ಲಿ, ಉತ್ಕೃಷ್ಟ ಮಟ್ಟದ ಆರೋಗ್ಯವನ್ನು ಹೊಂದಿದ್ದರೂ ಕೂಡ ಪ್ರಚಲಿತ ಜೀವನಶೈಲಿ ಮತ್ತು ಅಹಾರಕ್ರಮ ಪ್ರತಿಯೊಬ್ಬ ವ್ಯಕ್ತಿಯು ಎದುರಿಸುತ್ತಿರುವ ತೂಕದ ಸಮಸ್ಯೆಗಳಿಗೆ ಭಾರಿ ಕೊಡುಗೆ ನೀಡಿದೆ. ಈ ಸನ್ನಿವೇಶವನ್ನು ತಲೆಯಲ್ಲಿಟ್ಟುಕೊಂಡು, ಡಯಾಬಿಟಿಸ್ ಇರುವ ಪ್ರತಿಯೊಬ್ಬರೂ ಅವರ ತೂಕ ಹೆಚ್ಚಳದ ಬಗ್ಗೆ ಎಚ್ಚರವಹಿಸಬೇಕು ಹಾಗೂ ಬೊಜ್ಜನ್ನು ಕರಗಿಸಿ ಆರೋಗ್ಯವಂತರಾಗುವ ದಿಕ್ಕಲ್ಲಿ ಹೆಜ್ಜೆಯನ್ನು ಇಡಲು ಪ್ರಾರಂಭಿಸಬೇಕು. 

ಡಯಾಬಿಟಿಸ್ ಇದ್ದಾಗ ಸವಾಲುಗಳು ಮತ್ತು ಕಷ್ಟಗಳು ಹೆಚ್ಚಿರುತ್ತದೆ ಎಂಬುದು ನಿಜವಾದರೂ, ಡಯಾಬಿಟಿಸ್ ಇರುವವರು ತೂಕದ ಹೆಚ್ಚಳವನ್ನು ನಿಯಂತ್ರಿಸಲು ಅಥವಾ ತೂಕವನ್ನು ಇಳಿಸಲು ಕೆಲವೊಂದು ಮೂಲಭೂತ ಅಂಶಗಳನ್ನು ಪಾಲಿಸುವ ಅಗತ್ಯವಿರುತ್ತದೆ. ತೂಕವನ್ನು ಇಳಿಸಲು ಪ್ರಯತ್ನಿಸುತ್ತಿರುವ ಡಯಾಬಿಟಿಕ್‍ಗಳು, ಪಾಲಿಸಲು ಶುರು ಮಾಡಬಹುದಾದ ಕೆಲವೊಂದು ಮೂಲಭೂತ ಅಭ್ಯಾಸಗಳು ಇಲ್ಲಿವೆ:

ಮೊದಲಿಗೆ, ಪ್ರಜ್ಞಾಪೂರ್ವಕವಾಗಿ ನಿಮ್ಮ ಆಹಾರಕ್ರಮದ ಮೇಲೆ ಗಮನ ಹರಿಸುವುದು ತುಂಬಾ ಮುಖ್ಯ, ಏಕೆಂದರೆ ಇದು ನಿಮಗೆ ನಿಮ್ಮ ತೂಕವನ್ನು ಇಳಿಸಲು ಸಹಾಯ ಮಾಡುವುದಲ್ಲದೆ ನಿಮ್ಮ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ. ಸಮತೋಲಿತ ಆಹಾರ ಕ್ರಮದ ಸೇವನೆ ಮತ್ತು ತಿನ್ನಲು ಆರೋಗ್ಯಕರ ತಿಂಡಿಗಳನ್ನು ಆರಿಸುವುದು ನೀವು ಪಾಲಿಸಬೇಕಾದ ಕೆಲವೊಂದು ಮೂಲಭೂತ ಅಂಶಗಳು. ಇದಲ್ಲದೆ, ಆಗಾಗ ಸಣ್ಣ ಪ್ರಮಾಣದಲ್ಲಿ ಊಟ ಮಾಡುವುದು ನಿಮ್ಮ ಬ್ಲಡ್ ಶುಗರ್ ಮಟ್ಟಗಳನ್ನು ಮತ್ತು ತೂಕವನ್ನು ನಿರ್ವಹಿಸುವ ಕೀಲಿಕೈ ಆಗಿದೆ. ಇದು ಮೇಲ್ನೋಟಕ್ಕೆ ಒಂದಕ್ಕೊಂದು ತದ್ವಿರುದ್ಧ ಹೇಳಿಕೆ ಎಂಬಂತೆ ಕಂಡರು, ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಸಣ್ಣ ಪ್ರಮಾಣದಲ್ಲಿ ಮಾಡುವ ಊಟ ನಿಮ್ಮನ್ನು ಪೋಷಿಸುತ್ತದೆ ಹಾಗೂ ಆಗಾಗ ಹಸಿವಾಗದೆ ಇರುವುದರಿಂದ ನೀವು ಅಗತ್ಯಕ್ಕಿಂತ ಹೆಚ್ಚು ಊಟ ಮಾಡುವುದಿಲ್ಲ.

ಎರಡನೆಯದಾಗಿ, ಸಾಕಷ್ಟು ನೀರನ್ನು ಕುಡಿಯಿರಿ. ಆಗಾಗ, ದೇಹವು ಆಹಾರವನ್ನು ಬೇಡುವಂತೆ ನೀರಿನ ಅವಶ್ಯಕತೆ ಇದೆ ಎಂಬ ಲಕ್ಷಣಗಳನ್ನು ತೋರಿಸುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ದೇಹದ ವ್ಯವಸ್ಥೆಯಿಂದ ವಿಷವನ್ನು ಹೊರಹಾಕುವ ಪ್ರಮುಖ ಕೆಲಸವನ್ನು ನೀರು ಮಾಡುತ್ತದೆ ಹಾಗೂ ಈ ಮೂಲಕ ದೇಹದ ಆರೋಗ್ಯವನ್ನು ಸುಧಾರಿಸಿ ಪೋಷಿಸುತ್ತದೆ. ಪ್ರತಿದಿನ 6 ರಿಂದ 8 ಗ್ಲಾಸ್ ನೀರನ್ನು ಕುಡಿಯಬೇಕೆಂದು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಇದು ತುಂಬ ಹೆಚ್ಚು ಎಂದು ನಿಮಗೆ ಅನಿಸುತ್ತಿದ್ದರೆ, ನೀವು ಎಲ್ಲಿಗೆ ಹೋದರೂ ಸಣ್ಣ ಸಣ್ಣ ಗುಟುಕು ನೀರನ್ನು ಹೀರಲು ನಿಮ್ಮೊಂದಿಗೆ ವಾಟರ್ ಬಾಟಲ್ ಕೊಂಡೊಯ್ಯಿಲು ಮರೆಯಬೇಡಿ.

ಮೂರನೆಯದಾಗಿ, ನಿಮ್ಮ ದೇಹ ಕೊಂಚ ಚಲಿಸುವಂತೆ ಮಾಡಿ! ತೂಕವನ್ನು ಇಳಿಸಲು ನೀವು ಯಾವುದೇ ಯೋಜನೆಯನ್ನು ಹಾಕಿಕೊಂಡಿದ್ದರೂ ಸಹ, ಆ ಯೋಜನೆಗೆ ಕೊಂಚ ದೈಹಿಕ ಚಟುವಟಿಕೆಯನ್ನು ನೀವು ಸೇರಿಸಲೇ ಬೇಕು. ದೈಹಿಕ ವ್ಯಾಯಾಮ ನಿಮ್ಮ ತೂಕವನ್ನು ಇಳಿಸಲು ಸಹಾಯ ಮಾಡುವುದಲ್ಲದೆ, ಇತರ ಆರೋಗ್ಯ ಸಮಸ್ಯೆಗಳನ್ನು ದೂರ ಇಡಲು, ಒತ್ತಡವನ್ನು ನಿವಾರಿಸಲು, ಮತ್ತು ಮಾನಸಿಕೆ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ. ದೈಹಿಕ ಚಟುವಟಿಕೆಗಳು ನಿಮ್ಮನ್ನು ದಣಿಸುವ ಬಿರುಸಾದ ವ್ಯಾಯಾಮಗಳೇ ಆಗಿರಬೇಕು ಎಂದೇನಿಲ್ಲ. ನೀವು ಇಷ್ಟಪಡುವ ಅಥವಾ ನೀವು ಈ ಹಿಂದೆ ಮಾಡಿದ ಚಟುವಟಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು; ಉದಾಹರಣೆಗೆ, ಜಾಗಿಂಗ್, ಆಟ ಆಡುವುದು, ಡ್ಯಾನ್ಸ್, ಯೋಗ, ಇತ್ಯಾದಿ. ಆಯ್ಕೆ ನಿಮ್ಮದೇ! 

ಅಲ್ಲದೆ, ನೀವು ಬಹಳ ಸಮಯದಿಂದ ಯಾವುದೇ ವ್ಯಾಯಾಮಗಳನ್ನು ಮಾಡದೆ ಜಡವಾಗಿದ್ದರೆ, ನಿಧಾನವಾಗಿ ಪ್ರಾರಂಭಿಸಿ. ನಿಮ್ಮ ವಯಸ್ಸು ಅಥವಾ ತೂಕ ಒಂದು ಸಮಸ್ಯೆಯೇ ಅಲ್ಲ, ನಿಜವಾಗಿಯೂ ನಿಮಗೆ ಮಾರ್ಗದರ್ಶನವನ್ನು ಕೊಡಬೇಕಿರುವುದು ನಿಮ್ಮ ಆರೋಗ್ಯವನ್ನು ಸುಧಾರಿಸಬೇಕು ಎಂಬ ನಿಮ್ಮ ಛಲ.

ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಪೌಷ್ಟಿಕತಜ್ಞರನ್ನು ಸಂಪರ್ಕಿಸಿ. ನಿಮ್ಮ ಪರಿಸ್ಥಿತಿಗಳನ್ನು ಮತ್ತು ನಿಮ್ಮ ಆರೋಗ್ಯದ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಪೌಷ್ಟಿಕತಜ್ಞರು ಸಜ್ಜುಗೊಂಡಿರುತ್ತಾರೆ. ಅವರು ನಿಮ್ಮ ದೇಹಕ್ಕೆ ಸೂಕ್ತವಾದ ಆಹಾರಕ್ರಮವನ್ನು ಸೂಚಿಸುವುದಲ್ಲದೆ, ತೂಕವನ್ನು ಇಳಿಸಲು ಅಥವಾ ನಿಮಗೆ ಬೇಕಾದ ಬೇರೆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನೆರವಾಗುವ ಮತ್ತು ನಿಮ್ಮ ದೇಹಕ್ಕೆ ಸರಿಹೊಂದುವ ಸೂಪರ್ ಫುಡ್‍ಗಳನ್ನು ಕೂಡ ಶಿಫಾರಸು ಮಾಡಬಲ್ಲರು.

ನಿಯಮಿತವಾಗಿ ಬ್ಲಡ್ ಶುಗರ್ ಮಟ್ಟಗಳನ್ನು ಪರೀಕ್ಷಿಸಿಕೊಳ್ಳಲು ಮರೆಯಬೇಡಿ. ನಿಮ್ಮ ಬ್ಲಡ್ ಗ್ಲೂಕೋಸ್ ಅನ್ನು ದಿನಕ್ಕೆ ಎಷ್ಟು ಬಾರಿ ಮತ್ತು ಯಾವ ಸಮಯದಲ್ಲಿ ಮಾನಿಟರ್ ಮಾಡಬೇಕೆಂದು ತಿಳಿದುಕೊಳ್ಳಲು ನಿಮ್ಮ ವೈದ್ಯರನ್ನು ಭೇಟಿಯಾಗಿ.

ತೂಕದ ಹೆಚ್ಚಳ ಡಯಾಬಿಟಿಸ್‍ನ ಲಕ್ಷಣವೇ?

ತೂಕದಲ್ಲಿನ ಏರುಪೇರು ಅತ್ಯಂತ ಬೇಗನೆ ಕಾಣಿಸಿಕೊಳ್ಳುವ ಮತ್ತು ಹೆಚ್ಚು ಗಮನಕ್ಕೆ ಬರುವ ಡಯಾಬಿಟಿಸ್‍ನ ಒಂದು ರೋಗಲಕ್ಷಣವಾಗಿದೆ. ಸಾಮಾನ್ಯವಾಗಿ ಇದು ಡಯಾಬಿಟಿಸ್ ಅನ್ನು ಸರಿಯಾಗಿ ನಿಯಂತ್ರಿಸದೇ ಹೋದಾಗ ಅಥವಾ ಅ ನಿಟ್ಟಿನಲ್ಲಿ ಪ್ರಯತ್ನಗಳು ಮಾಡದೇ ಹೋದಾಗ ಕಂಡುಬರುತ್ತದೆ. ಇದ್ದಕ್ಕಿದ್ದಂತೆ ತೂಕ ಇಳಿಯುವುದು ಡಯಾಬಿಟಿಸ್‍ನ ಆರಂಭದ ರೋಗಲಕ್ಷಣವಾಗಿದೆ ಹಾಗೂ ತೂಕದ ಹೆಚ್ಚಳ ಅದರ ಮುಂದಿನ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಡಯಾಬಿಟಿಸ್‍ನ ಈ ಹಂತದಲ್ಲಿ, ನೀವು ಬಳಸಿರದ ಗ್ಲುಕೋಸ್ ಅನ್ನು ಮೂತ್ರದ ಮೂಲಕ ಹೊರಹಾಕುತ್ತೀರಿ, ಇದಕ್ಕೆ ಕಾರಣ ಇನ್ಸುಲಿನ್ ತನ್ನ ಕಾರ್ಯಗಳನ್ನು ಸರಿಯಾಗಿ ಮಾಡದೆ ಇರುವುದು. ಇಲ್ಲಿ ನೀವು ಕ್ಯಾಲರಿಗಳನ್ನು ಕಳೆದುಕೊಳ್ಳುತ್ತೀರಿ ಮತ್ತು ಈ ರೀತಿಯಾಗಿ ತೂಕ ಇಳಿಯುತ್ತಾ ಹೋಗುತ್ತದೆ.

ಒಂದು ಕಡೆ ನಿಮ್ಮ ಪರಿಶೀಲಿಸದ ಡಯಾಬಿಟಿಸ್ ಬೆಳೆಯುತ್ತಾ ಹೋದರೆ, ಇತ್ತ ನಿಮ್ಮ ದೇಹಕ್ಕೆ ತನ್ನ ದೈನಂದಿನ ಕಾರ್ಯಗಳಿಗೆ ಬೇಕಾಗುವಷ್ಟು ಶುಗರ್ ಅಥವಾ ಗ್ಲುಕೋಸ್ ಸಿಗುವುದಿಲ್ಲ. ಇದರಿಂದ ದೇಹವು ಸಾಕಷ್ಟು ಆಹಾರ ಸಿಗುತ್ತಿಲ್ಲ ಎಂದು ಭಾವಿಸಿ ಮೆದುಳಿಗೆ ಸಿಗ್ನಲ್ ಕಳುಹಿಸುತ್ತದೆ. ನಿಮ್ಮ ಮೆದುಳು ನಿಮ್ಮ ದೇಹಕ್ಕೆ ಆಹಾರದ ಅಗತ್ಯವಿದೆ ಎಂದು ನಿಮಗೆ ಸೂಚಿಸುತ್ತದೆ ಹಾಗೂ ನೀವು ಆ ಹೆಚ್ಚುವರಿ ತಿಂಡಿಯನ್ನು ಸೇವಿಸುವ ಮೂಲಕ ಹೆಚ್ಚುವರಿ ಕ್ಯಾಲರಿಯನ್ನು ಪಡೆಯುತ್ತೀರಿ. ಇದೇ ರೀತಿಯಾಗಿ ಡಯಾಬಿಟಿಸ್ ಇದ್ದವರು ತೂಕವನ್ನು ಹೆಚ್ಚಿಸಿಕೊಳ್ಳುವುದು.

ನಿಮಗೆ ಡಯಾಬಿಟಿಸ್ ಇದೆ ಎಂಬುದು ಇನ್ನು ಗೊತ್ತಾಗಿಲ್ಲ ಎಂದಾದರೆ, ಈ ಲಕ್ಷಣ ನಿಮಗೆ ಅದನ್ನೇ ಹೇಳುತ್ತಿರಬಹುದು. ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವಂತಹ ಇಂತಹ ತೂಕದ ಸಮಸ್ಯೆಗಳನ್ನು ತಪ್ಪಿಸುವುದು ಒಳ್ಳೆಯದು. ಇದ್ದಕ್ಕಿದ್ದಂತೆ ತೂಕ ಇಳಿದಿದ್ದು ಕಂಡು ಬಂದರೆ, ಕೂಡಲೇ ನೀವು ನಿಮ್ಮ ವೈದ್ಯರನ್ನು ಕಾಣುವುದು ಒಳ್ಳೆಯದು. ಡಯಾಬಿಟಿಸ್ ಸಮಸ್ಯೆ ಪ್ರಾರಂಭವಾಗುವ ಮೊದಲೇ, ನಿಮ್ಮ ತೂಕವನ್ನು ಇಳಿಸುವ ಮೂಲಕ ಮತ್ತು ಸಾಮಾನ್ಯವಾದ ಬಾಡಿ ಮಾಸ್ ಇಂಡೆಕ್ಸ್ (BMI) ತಲುಪುವ ಮೂಲಕ ಇದನ್ನು ಮತ್ತಷ್ಟು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯಕರವಾದ ಹೆಜ್ಜೆಯನ್ನು ನೀವು ಇಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ತೂಕ ಹೆಚ್ಚಾಗುವುದು ಖಂಡಿತವಾಗಿಯೂ ಡಯಾಬಿಟಿಸ್‍ನ ರೋಗಲಕ್ಷಣ. ನೀವು ಎಷ್ಟು ಬೇಗನೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತೀರೋ ಅಷ್ಟು ಬೇಗ ನೀವು ಉತ್ತಮ ಆರೋಗ್ಯವನ್ನು ಸಾಧಿಸುತ್ತೀರಿ.

ತೂಕ ಕಳೆದುಕೊಂಡ ಡಯಾಬಿಟಿಕ್‍ಗಳು ಆರೋಗ್ಯಕರ ತೂಕವನ್ನು ಪುನಃ ಹೇಗೆ ಪಡೆದುಕೊಳ್ಳುತ್ತಾರೆ?

ಸಾಮಾನ್ಯವಾಗಿ ಇರಬೇಕಾದ BMI ಶ್ರೇಣಿಗಿಂತ ಕೆಳಗಡೆ ಹೋಗುವುದು ಬೊಜ್ಜು ಅಥವಾ ಅಧಿಕ ತೂಕದ ಸಮಸ್ಯೆಗಳಷ್ಟೇ ಅನಾರೋಗ್ಯಕರ. ಒಬ್ಬ ಭಾರತೀಯ ವಯಸ್ಕನಲ್ಲಿ, ಆರೋಗ್ಯಕರ ತೂಕವನ್ನು ಸೂಚಿಸುವ BMI ಪ್ರಾರಂಭವಾಗುವುದು 18.5ರಿಂದ; ಅದಕ್ಕಿಂತ ಎಷ್ಟೇ ಕಡಿಮೆ ಇದ್ದರೂ, ಅದನ್ನು ಕಡಿಮೆ ತೂಕ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ, ತೂಕ ಕಡಿಮೆ ಇದೆ ಎಂದು ಹಿಗ್ಗಿದರೆ ಪ್ರಯೋಜನವಿಲ್ಲ.

ಕಡಿಮೆ ತೂಕದ ಡಯಾಬಿಟಿಕ್‍ಗಳು ಮತ್ತು ಆರೋಗ್ಯಕ್ಕಾಗಿ ತೂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ನಿಧಾನವಾಗಿ ಪ್ರಾರಂಭಿಸುವುದು ಒಳ್ಳೆಯದು. ತೂಕದ ಹೆಚ್ಚಿಸುವುದು ಅಥವಾ ತೂಕವನ್ನು ಇಳಿಸುವುದು, ಯಾವುದೇ ಆದರೂ ತ್ವರಿತ ಫಲಿತಾಂಶಗಳನ್ನು ಪಡೆಯಲು ಪ್ರಯತ್ನಿಸಿದರೆ, ಅದು ದೀರ್ಘಕಾಲದವರೆಗೆ ಉಳಿದುಕೊಳ್ಳುವುದಿಲ್ಲ. ಸಣ್ಣ ಸಣ್ಣ ಹೆಜ್ಜೆಯನ್ನು ಇಡುವುದೇ ಉತ್ತಮ ವಿಧಾನ.

ತೂಕವನ್ನು ಇಳಿಸಲು ಅಥವಾ ತೂಕವನ್ನು ಹೆಚ್ಚಿಸಲು, ಈ ಎರಡರಲ್ಲೂ ಆಹಾರಕ್ರಮದ ಪಾತ್ರ ಪ್ರಮುಖವಾಗಿರುತ್ತದೆ. ನಿಮ್ಮ ಆಹಾರಕ್ರಮವನ್ನು ತೂಕ ಇಳಿಸಲು ಸಹಾಯ ಮಾಡುವಂತೆ ಮಾಡಲು ನೀವು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ:

ಒಂದು ದಿನ ಮುಂಚಿತವಾಗಿಯೇ ನಿಮ್ಮಊಟವನ್ನು ಯೋಜಿಸಿ ಮತ್ತು ಸಾಧ್ಯವಾದರೆ ಅವುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ಸಕ್ಕರೆ-ಭರಿತ ಅನಾರೋಗ್ಯಕರ ಆಹಾರವನ್ನು ತಿನ್ನುವ ಆಯ್ಕೆ ನಿಮಗೆ ಇರುವುದಿಲ್ಲ; ಅದನ್ನು ತಪ್ಪಿಸುವುದೇ ಒಳ್ಳೆಯದು. ಡಯಾಬಿಟಿಸ್ ಇಲ್ಲದವರು ಕೂಡ ಅದನ್ನು ಹೆಚ್ಚು ತಿನ್ನದಂತೆ ಎಚ್ಚರವಹಿಸಬೇಕು.

ಅಧಿಕ ಮಟ್ಟದ ಆರೋಗ್ಯಕರ ಕ್ಯಾಲರಿ ಇರುವ ಆಹಾರವನ್ನೇ ಆರಿಸಿ. ಪ್ರೋಟೀನ್‍ಗಳು ಮತ್ತು ಆರೋಗ್ಯಕರ ಕಾರ್ಬ್ ನಿಮ್ಮ ತಟ್ಟೆಯಲ್ಲಿ ಸೂಕ್ತ ಪ್ರಮಾಣಗಳಲ್ಲಿ ಇರಬೇಕು, ಆದರೆ ಇತರ ಪೋಷಕಾಂಶಗಳ ಗುಂಪುಗಳೊಂದಿಗೆ ಯಾವುದೇ ರಾಜಿಯನ್ನು ಮಾಡಿಕೊಂಡಿರಬಾರದು.

ಆಗಾಗ ಸಣ್ಣ ಸಣ್ಣ ಊಟವನ್ನು ಮಾಡುವುದು ತುಂಬಾ ಮುಖ್ಯ. ಹೌದು, ತೂಕದ ಇಳಿಕೆಯ ವಿಷಯದಲ್ಲಿ ಕೂಡ ನಾವು ಇದನ್ನೇ ಹೇಳಿದ್ದು. ಆದರೆ ಆರೋಗ್ಯಕರವಾಗಿ ತಿನ್ನುವುದು ಮತ್ತು ಸೂಕ್ತವಾದ ಸಮಯದ ಅಂತರಗಳಲ್ಲಿ ಸಣ್ಣ ಊಟ ಮಾಡುವುದರಿಂದ ಇದೆರಡೂ ಸಾಧ್ಯವಾಗುತ್ತದೆ. ದೇಹಕ್ಕೆ ಪೋಷಕಾಂಶಗಳ ಅಗತ್ಯ ಇದ್ದಾಗ ಸಣ್ಣ ಸಣ್ಣ ಊಟಗಳ ಮೂಲಕ ಒದಗಿಸುವುದರಿಂದ, ಹಸಿವು ತಪ್ಪುತ್ತದೆ ಆದರೆ ಹಾಗೆಂದು ದೇಹಕ್ಕೆ ಬಲವಂತವಾಗಿ ತುಂಬಬಾರದು. ಹಾಗಾಗಿ, ಹಸಿವಾಗದಂತೆ ನೋಡಿಕೊಳ್ಳಿ!

ನೀವು ನಿಮ್ಮ ಜೀವನಶೈಲಿಯಲ್ಲಿ ಸೇರಿಸಿಕೊಳ್ಳಬೇಕಾದ ಮುಂದಿನ ಅತ್ಯಂತ ನಿರ್ಣಾಯಕವಾದ ಅಂಶ ಎಂದರೆ ಅದು ದೈಹಿಕ ಚಟುವಟಿಕೆ. ಇದು ನೀವು ತೂಕವನ್ನು ಹೆಚ್ಚಿಸಿಕೊಳ್ಳಬೇಕು ಎಂದಿದ್ದರೂ ಅನ್ವಯವಾಗುತ್ತದೆ. ದೈಹಿಕ ಚಟುವಟಿಕೆ ಇಲ್ಲದೆ ನೀವು ತೂಕವನ್ನು ಹೆಚ್ಚಿಸಿದರೆ, ಅದು ಬೊಜ್ಜು ಬರಲು ಕಾರಣವಾಗುತ್ತದೆ. ಆದರೆ, ನೀವು ವ್ಯಾಯಾಮ ಮಾಡಲು ತೀರ್ಮಾನಿಸಿದರೆ, ನಿಮ್ಮ ಮಾಂಸಖಂಡಗಳು ಬೆಳೆಯುತ್ತವೆ, ಈ ಹಂತದಲ್ಲಿ ನಿಮಗೆ ಬೇಕಾಗಿರುವುದು ಅದೇ. ಹಾಗಾದರೆ, ಬನ್ನಿ ವ್ಯಾಯಾಮ ಮಾಡೋಣ.

ಸಾಕಷ್ಟು ನೀರು ಕುಡಿಯಿರಿ! ದೇಹದಲ್ಲಿರುವ ವಿಷವನ್ನೆಲ್ಲಾ ಹೊರಹಾಕುವ ಮೂಲಕ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸಿ. ಒಂದು ವೇಳೆ ನೀವು ಈಗಾಗಲೇ ಕಡಿಮೆ ದೇಹದ ತೂಕದಿಂದ ಬಳಲುತ್ತಿದ್ದರೆ, ಅದಕ್ಕೆ ದೇಹದಲ್ಲಿ ನೀರಿನಾಂಶದ ಕೊರತೆ ಅಥವಾ ಅಭಾವದಂತಹ ಹೊಸ ಸಮಸ್ಯೆಯನ್ನು ಸೇರಿಸಬೇಡಿ. ದೇಹದಲ್ಲಿ ನೀರಿನಂಶ ಕಡಿಮೆ ಆದಾಗ ಸುಸ್ತು, ತಲೆ ಸುತ್ತುವುದು, ಮಾಂಸಖಂಡಗಳಲ್ಲಿ ನೋವು ಮತ್ತು ಆಹಾರ ತಿನ್ನುವ ಕಡುಬಯಕೆಗಳು ಉಂಟಾಗುವುದು, ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ನೀರು ಕುಡಿಯಲು ಮರೆಯಬೇಡಿ. 

ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಮಾಡಿ. ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಎಲ್ಲವನ್ನೂ ಸ್ವಿಚ್ ಆಫ್ ಮಾಡಿ ಹಾಗೂ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ನಿದ್ರೆಯನ್ನು ಮಾಡಿ. ವಿಶ್ರಾಂತಿ ತೆಗೆದುಕೊಳ್ಳುವ ಅವಧಿಗಳನ್ನು ನೀವು ಹಾಳು ಮಾಡುತ್ತಿದ್ದರೆ ಅದು ನೇರವಾಗಿ ನಿಮ್ಮ ನಿದ್ರೆಯ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕೂಡ ದುರ್ಬಲಗೊಳಿಸಬಹುದು ಮತ್ತು ಇದು ಹೈಪರ್‍‍ಟೆನ್ಷನ್‍ನಂತಹ ಸಮಸ್ಯೆಗಳನ್ನು ಉಂಟುಮಾಡಲು ಹಾಗೂ ಹೃದ್ರೋಗದ ಅಪಾಯ ಹೆಚ್ಚಾಗಲು ಕೂಡ ಕಾರಣವಾಗಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ.

ಬ್ಲಡ್ ಶುಗರ್ ಅನ್ನು ನಿಯಮಿತವಾಗಿ ಮಾನಿಟರ್ ಮಾಡಲು ಶಿಫಾರಸು ಮಾಡಲಾಗಿದೆ. ನಿಮ್ಮ ಏರುಪೇರಾದ ತೂಕ ಹಾಗೂ ಅದಕ್ಕೆ ಸಂಬಂಧಿಸಿದ ರೀಡಿಂಗ್‍ಗಳು ನಿಮ್ಮ ಡಯಾಬಿಟಿಸ್ ಮೇಲೆ ಪ್ರಭಾವ ಬೀರುತ್ತದೆ. ನಿಯಮಿತವಾಗಿ ಬ್ಲಡ್ ಗ್ಲುಕೋಸ್ ಅನ್ನು ಮಾನಿಟರ್ ಮಾಡಿದಾಗ ನೀವು ಇದನ್ನು ಗಮನದಲ್ಲಿರಿಸಿಕೊಳ್ಳಬಹುದು ಮತ್ತು ನಿಮ್ಮ ಚಟುವಟಿಕೆಗಳನ್ನು ಅದಕ್ಕೆ ಅನುಸಾರವಾಗಿ ರೂಪಿಸಿಕೊಳ್ಳಬಹುದು.

ಡಯಾಬಿಟಿಸ್ ಇದ್ದಾಗ ತೂಕದ ಹೆಚ್ಚಳ ಮತ್ತು ತೂಕವನ್ನು ಇಳಿಸುವಂತಹ ಪರಿಸ್ಥಿತಿಗಳನ್ನು ನಿಭಾಯಿಸುವುದು ಹೆಚ್ಚು ಕಷ್ಟಕರವಾಗಿರುತ್ತದೆ. ಅದೇನೇ ಇದ್ದರೂ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಹಾರಕ್ರಮ, ದೈಹಿಕ ಚಟುವಟಿಕೆ ಹಾಗೂ ಮತ್ತಿತರ ಕ್ರಮಗಳ ಸಮ್ಮಿಶ್ರಣವನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಶ್ರೇಣಿಯಲ್ಲಿ ನಿಮ್ಮ ತೂಕವನ್ನು ಕಾಪಾಡಿಕೊಳ್ಳುವುದು ಅತಿಮುಖ್ಯ. ನಿಮ್ಮ ಆಹಾರ ಮತ್ತು ದೈಹಿಕ ಚಟುವಟಿಕೆಗಳನ್ನು ಗಮನದಲ್ಲಿರಿಸಿಕೊಳ್ಳುವಂತಹ ಆ್ಯಪ್‍ಗಳನ್ನು ನೀವು ನಿಸ್ಸಂದೇಹವಾಗಿ ಬಳಸಬಹುದು, ವಿಶೇಷವಾಗಿ ಡಯಾಬಿಟಿಸ್ ಇರುವ ಜನರ ಅಗತ್ಯಗಳಿಗೆ ತಕ್ಕಂತೆ ರೂಪಿಸಿರುವ ಆ್ಯಪ್‍ಗಳನ್ನು ಬಳಸಬಹುದು. ಇದಲ್ಲದೆ, ಡಯಾಬಿಟಿಸ್ ನಿಮ್ಮ ತೂಕದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ನಿಮ್ಮ ವೈದ್ಯರು ಮತ್ತು ಪೌಷ್ಟಿಕತಜ್ಞರನ್ನು ಸಂಪರ್ಕಿಸಿ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.