diet tips heart attack patients
Reading Time: 2 minutes

ನೀವು ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗಿದ್ದರೆ, ನೀವು ಮುಖ್ಯವಾಗಿ ಮಾಡಬೇಕಾದ ಜೀವನಶೈಲಿಯ ಮಾರ್ಪಾಡುಗಳಲ್ಲಿ, ಆಹಾರಕ್ರಮದ ಅಭ್ಯಾಸಗಳನ್ನು ಬದಲಾಯಿಸುವುದು ಕೂಡ ಒಂದು. ಆರೋಗ್ಯಕರವಾಗಿ ತಿನ್ನುವುದರಿಂದ, ನಿಮ್ಮ ಚೇತರಿಕೆ ಬೇಗನೆ ಆಗುವುದಷ್ಟೆ ಅಲ್ಲದೆ, ಇತರ ಹೃದಯ ಸಂಬಂಧಿ ತೊಂದರೆಗಳನ್ನು ದೂರವಿಡಬಹುದು. ಏಐಐಎಂಎಸ್ ನಲ್ಲಿ ಹೃದಯರೋಗತಜ್ಞರಾಗಿರುವ ಡಾ. ಸಂದೀಪ್ ಮಿಶ್ರಾ ಅವರು, ಹೃದ್ರೋಗಿಗಳಲ್ಲಿ ಆರೋಗ್ಯಕ್ರಮದ ಬದಲಾವಣೆಯ ಬಗ್ಗೆ ವಿವರವಾದ ಒಳನೋಟ ಕೊಡುತ್ತಾರೆ.

1. ಅತಿಯಾಗಿ ಬೇಯಿಸಿದ ಆಹಾರದಿಂದ ದೂರವಿರಿ:

ಭಾರತೀಯರು ಪ್ರಧಾನವಾಗಿ ಸಸ್ಯಾಹಾರಿಗಳಾದರೂ, ಹಣ್ಣು ತರಕಾರಿಗಳನ್ನು ತಿನ್ನುವುದರ ಬಗ್ಗೆ, ಅವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯ ಹೆಚ್ಚಾಗುತ್ತಿದೆ. ಜನರು ಹೆಚ್ಚಾಗಿ ತರಕಾರಿಗಳನ್ನು ಸಾರು ಮಾಡಿ ತಿನ್ನುತ್ತಾರೆ. ಹಸಿ ತರಕಾರಿಯಷ್ಟು ಪೋಷಕಾಂಶಗಳು ಇದರಿಂದ ಸಿಗುವುದಿಲ್ಲ. ಜೊತೆಗೆ, ಎಣ್ಣೆ ತುಪ್ಪ ಹಾಕುವುದರಿಂದ, ಅಡುಗೆಯು ಕೊಬ್ಬು ಮತ್ತು ಕೊಲೆಸ್ಟ್ರಾಲ್‍ನಿಂದ ತುಂಬಿದ್ದು, ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಮನೆಯಲ್ಲೇ ಮಾಡಿದ ಅಡುಗೆಯು ಕೂಡ ಸತ್ವಹೀನವಾಗಿರುತ್ತದೆ, ಯಾಕೆಂದರೆ ನಾವು ಎಲ್ಲದನ್ನೂ ಹೆಚ್ಚು ಬೇಯಿಸುತ್ತೇವೆ. ಇದರಿಂದ ಪೋಷಕಾಂಶಗಳು ಹಾಳಾಗುತ್ತವೆ. ಒಬ್ಬ ಹೃದ್ರೋಗಿಗೆ, ಇದು ಚಿಂತೆಯ ವಿಷಯವಾಗಬಹುದು. ಹೃದಯಾಘಾತದಿಂದ ಚೇತರಿಸಿಕೊಳ್ಳುತ್ತಿರುವಾಗ, ನೀವು ಹೆಚ್ಚೆಚ್ಚು ತರಕಾರಿಗಳನ್ನು ತಿಂದರೆ ಒಳ್ಳೆಯದು. ಅವುಗಳ ಪೋಷಕಾಂಶಗಳು ನಾಶವಾಗದಿದ್ದರೆ ಇನ್ನೂ ಒಳ್ಳೆಯದು. ಆದ್ದರಿಂದ, ಹೆಚ್ಚು ಬೇಯಿಸದೆ ಸುಳುವಾಗಿ ತಯಾರಿಸಿದ ಅಡುಗೆಗಳನ್ನು ಮಾಡಿ ತಿನ್ನುವುದು ಒಳಿತು.

2. ಹಸಿರು ಸೊಪ್ಪಿನ ತರಕಾರಿಗಳು ಮತ್ತು ನಾರು ತುಂಬಿದ ಹಣ್ಣುಗಳನ್ನು ಹೆಚ್ಚು ತಿನ್ನಿರಿ:

ಅತಿಯಾಗಿ ಬೇಯಿಸಿದ ಆಹಾರದ ಬದಲು, ಕೋಸಂಬರಿ, ಹಸಿರು ಸೊಪ್ಪಿನ ತರಕಾರಿಗಳಾದ ಪಾಲಕ್, ಕಿತ್ತಳೆ ಹಣ್ಣಿನಂತಹ ನಾರು ಹೆಚ್ಚಾಗಿರುವ ಹಣ್ಣುಗಳನ್ನು ತಿನ್ನಿರಿ. ಇವುಗಳಲ್ಲಿ ವಿಟಮಿನ್ ಕೆ ಹೇರಳವಾಗಿದೆ. ಇದು ರಕ್ತದೊತ್ತಡವನ್ನು ಹಿಡಿತದಲ್ಲಿಡುತ್ತದೆ ಹಾಗೂ ರಕ್ತನಾಳಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಹೃದಯದ ಆರೋಗ್ಯ ಕಾಪಾಡುತ್ತದೆ. ಅದರ ಜೊತೆಗೆ, ಅವುಗಳಲ್ಲಿ ಹೃದ್ರೋಗಗಳನ್ನು ತಡೆಗಟ್ಟಲು ನೆರವಾಗುವ ನಾರು ಮತ್ತು ಆ್ಯಂಟಿಆಕ್ಸಿಡಂಟ್‍ಗಳಿವೆ.

3. ಉಪ್ಪು ತಿನ್ನುವುದು ಕಡಿಮೆ ಮಾಡಿ: 

ಉಪ್ಪಿನಲ್ಲಿರುವ ಸೋಡಿಯಂ ನೇರವಾಗಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗಿಗಳಿಗೆ ಒಳ್ಳೆಯದಲ್ಲ. ಇದರಿಂದ ಇನ್ನೊಂದು ಹೃದಯಾಘಾತ ಆಗುವ ಅಪಾಯವಿದೆ. ನೀವು ಹೊರಗೆ ತಿಂದರೂ ಸಹ, ಕಮ್ಮಿ ಸೋಡಿಯಂ ಅಥವಾ ಕಡಿಮೆ ಉಪ್ಪನ್ನು ಹಾಕಿ ಮಾಡಿದ ಆರೋಗ್ಯಕರ ಅಡುಗೆಗಳನ್ನೆ ಆಯ್ಕೆ ಮಾಡಿಕೊಳ್ಳಿ. ಉಪ್ಪಿನ ಗಣಿಗಳಾದ ಚಿಪ್ಸ್, ಬರ್ಗರ್, ಫ್ರೈಗಳಂತಹ ಕುರುಕಲು ತಿನಿಸು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

4. ರೆಡ್ ಮೀಟ್ ತಿನ್ನದಿರಿ:

ನೀವು ಮಾಂಸ ತಿನ್ನುವವರಾದರೆ, ರೆಡ್ ಮೀಟ್‍ನಿಂದ ದೂರವಿರಿ. ಅದು ನಿಮ್ಮ ಹೃದಯಕ್ಕೆ ತುಂಬ ಹಾನಿಕರ. ಅದರಲ್ಲಿ ಸ್ಯಾಚುರೇಟಡ್ ಕೊಬ್ಬು ತುಂಬಿದೆ. ಅದು ನಿಮ್ಮ ಕೊಲೆಸ್ಟ್ರಾಲ್‍ ಮಟ್ಟವನ್ನು ಹೆಚ್ಚಿಸಿ, ಹೃದಯದ ಸ್ಥಿತಿಯನ್ನು ಹದಗೆಡಿಸುತ್ತದೆ. ಮಾಂಸ ತಿನ್ನಬೇಕೆಂದರೆ, ಲೀನ್ ಚಿಕನ್ ತಿನ್ನಿರಿ.

5. ನಿಮ್ಮ ಆಹಾರಕ್ರಮದಲ್ಲಿ ಮೊಟ್ಟೆಗಳನ್ನು ಸೇರಿಸಿ:

ಹೃದಯದ ಆರೋಗ್ಯಕ್ಕಾಗಿ ರಚಿಸುವ ಆಹಾರಕ್ರಮದಲ್ಲಿ, ದಿನಕ್ಕೊಂದು ಮೊಟ್ಟೆ ತಿಂದರೆ ಏನೂ ಹಾನಿಯಿಲ್ಲ.  ಒಂದು ವೇಳೆ, ಆರೋಗ್ಯ ಸಮಸ್ಯೆಯಾದರೆ, ಅದು ಮೊಟ್ಟೆಯ ಹಳದಿ ತುಣುಕಿನಲ್ಲಿರುವ ಕೊಲೆಸ್ಟ್ರಾಲ್‍ನಿಂದಲ್ಲ, ಆದರೆ ಮೊಟ್ಟೆಗಳನ್ನು ಯಾವ ಬಗೆಯಲ್ಲಿ ಅಡುಗೆ ಮಾಡುವಿರೊ ಮತ್ತು ಅದರೊಡನೆ ಬೇರೆ ಏನನ್ನು ತಿನ್ನುವಿರೊ ಅದರಿಂದ ಆಗುತ್ತದೆ. ಎಣ್ಣೆ, ಬೆಣ್ಣೆ ಮತ್ತು ಮಾಂಸದ ಬೇರೆ ರೂಪಗಳಂತಹ ಸ್ಯಾಚುರೇಟಡ್ ಕೊಬ್ಬನ್ನು ಕಡಿಮೆ ತಿನ್ನಿ. ಯಾಕೆಂದರೆ, ಇದು ಅನಾರೋಗ್ಯಕರ ಆಹಾರಕ್ರಮವಾಗಿದೆ. ಬರಿ ಮೊಟ್ಟೆಗಳನ್ನು ತಿನ್ನುವುದು ಒಳ್ಳೆಯದು. ಅವುಗಳಲ್ಲಿ ಉತ್ತಮ ಪೋಷಕಾಂಶಗಳು ಬಹಳಷ್ಟಿದ್ದು, ಒಳ್ಳೆ ಆಹಾರಕ್ರಮ ರೂಪಿಸುವಲ್ಲಿ ನೆರವಾಗುತ್ತವೆ.

6. ಮೀನು ಹೆಚ್ಚಾಗಿ ತಿನ್ನಿರಿ:

ಸಾಲ್ಮನ್ (ರಾವಾಸ್) ಮತ್ತು ಬಂಗುಡೆ ಮೀನುಗಳಲ್ಲಿ ಒಮೇಗ-3 ಕೊಬ್ಬು ಹೇರಳವಾಗಿದ್ದು, ಇವು ಹೃದಯಕ್ಕೆ ಹಿತಕಾರಿಯಾಗಿವೆ. ಹೃದಯಾಘಾತದಿಂದ ಬೇಗ ಚೇತರಿಸಿಕೊಳ್ಳಲು, ವಾರಕ್ಕೆ ಎರಡು ಬಾರಿ ಮೀನು ತಿನ್ನಬಹುದು. ಮತ್ತೊಮ್ಮೆ ನೆನಪಿಸುತ್ತ, ವಿಪರೀತ ಎಣ್ಣೆ ಹಾಕಿ ಮೀನು ಸಾರು ಮಾಡಬೇಡಿ.

7. ಆರೋಗ್ಯಕರ ಎಣ್ಣೆಗಳ ಮೊರೆ ಹೋಗಿ:

ಭಾರತೀಯ ಅಡುಗೆಗಳಿಗೆ ಸಾಕಷ್ಟು ಎಣ್ಣೆ ಬಳಸದಿದ್ದರೆ, ಅವು ಅರೆಬರೆ ಅಡುಗೆಯಂತೆ. ಈ ಅನಿಸಿಕೆಯಿಂದ ಹೊರಬರಲು ಪ್ರಯತ್ನಿಸಬೇಕು. ಆದರೆ, ಇದರ ನಡುವೆ, ಆರೋಗ್ಯಕರ ಎಣ್ಣೆ ಬಳಸುವುದರಿಂದ ಖಂಡಿತ ವ್ಯತ್ಯಾಸ ಕಂಡುಬರುವುದು. ಸಾಸಿವೆ ಎಣ್ಣೆ ಮತ್ತು ಅಕ್ಕಿ ಹೊಟ್ಟಿನ ಎಣ್ಣೆಯಂತಹ (ರೈಸ್ ಬ್ರ್ಯಾನ್ ಆಯಿಲ್) ಎರಡು ಬಗೆಯ ಎಣ್ಣೆಗಳನ್ನು ಬಳಸುವುದು ತುಂಬ ಒಳ್ಳೆಯದು. ಅವುಗಳಲ್ಲಿ ಅನ್‍ಸ್ಯಾಚುರೇಟಡ್ ಕೊಬ್ಬುಗಳು ಸಮತೋಲನದಲ್ಲಿದ್ದು, ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರ ಜೊತೆಗೆ, ಕೊಲೆಸ್ಟರಾಲ್ ತಗ್ಗಿಸಲು ಕೂಡ ಅವು ನೆರವಾಗಬಹುದು. ಅಲ್ಲದೆ, ಎಣ್ಣೆಯನ್ನು ಮೊದಲ ಬಾರಿಗೆ ಬಳಸಿ, ಅದೇ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದು/ಕುದಿಸುವುದು ಖಂಡಿತ ಮಾಡದಿರಿ. ಇದರಿಂದ ಫ್ರೀ಼ ರ‍್ಯಾಡಿಕಲ್ಸ್ ಹೆಚ್ಚಾಗುತ್ತದೆ. ಅವು ನಿಮ್ಮ ರಕ್ತನಾಳಗಳು ಮತ್ತು ಹೃದಯದ ಜೀವಕೋಶಕ್ಕೆ ಹಾನಿ ಉಂಟುಮಾಡಬಹುದು.

8. ನಿಮ್ಮ ಆಹಾರಕ್ರಮದಿಂದ ತುಪ್ಪವನ್ನು ತೆಗೆದುಹಾಕಿ:

ವನಸ್ಪತಿ ತುಪ್ಪ ಮತ್ತು ಹಸುವಿನ ತುಪ್ಪದ ಬಳಕೆ ಭಾರತದಲ್ಲಿ ಸರ್ವೇ ಸಾಮಾನ್ಯ. ಆದರೆ, ಅವೆರಡೂ ಹೃದಯದ ಆರೋಗ್ಯಕ್ಕೆ ಹಾನಿಕರ. ವನಸ್ಪತಿ ತುಪ್ಪದಲ್ಲಿ ಟ್ರ್ಯಾನ್ಸ್ ಕೊಬ್ಬು ಇದ್ದು, ಅದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‍ (ಎಲ್‍ಡಿಎಲ್) ನ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಆಗುವ ಅಪಾಯ ಹೆಚ್ಚುತ್ತದೆ. ಜೊತೆಗೆ, ಅದು ದೇಹದಲ್ಲಿನ ಒಳ್ಳೆ ಕೊಲೆಸ್ಟರಾಲ್ (ಎಚ್‍ಡಿಎಲ್) ಅನ್ನು ಕೂಡ ಕಡಿಮೆ ಮಾಡುತ್ತದೆ. ಹಸುವಿನ ತುಪ್ಪದಲ್ಲಿ ಸ್ಯಾಚುರೇಟಡ್ ಕೊಬ್ಬು ಇದ್ದು, ಅದೂ ಕೂಡ ಕೆಟ್ಟ ಕೊಲೆಸ್ಟ್ರಾಲ್‍ ಮಟ್ಟವನ್ನು ಏರಿಸುತ್ತದೆ.

9. ಹೊಟ್ಟು ತೆಗೆದ ಕಾಳುಗಳ ಬದಲು ಇಡಿ ಕಾಳುಗಳನ್ನು ತಿನ್ನಿರಿ:

ಹೊಟ್ಟು ತೆಗೆಯದ ಗೋಧಿ, ಓಟ್‍ಮೀಲ್ ಮತ್ತು ಬ್ರೌನ್ ರೈಸ್‍ನಂತಹ ಇಡಿ ಕಾಳುಗಳಲ್ಲಿ, ನಾರಿನಾಂಶ ಹೇರಳವಾಗಿರುತ್ತದೆ. ಇದರಿಂದ ದೇಹದಲ್ಲಿನ ಒಳ್ಳೆ ಕೊಲೆಸ್ಟರಾಲ್ ಮಟ್ಟ ಸುಧಾರಿಸಿ, ಹೃದ್ರೋಗ ಬರುವ ಅಪಾಯ ಕಮ್ಮಿಯಾಗಬಹುದು. ಅವುಗಳು ಅಗತ್ಯ ವಿಟಮಿನ್‍ಗಳ ಒಳ್ಳೆಯ ಮೂಲ ಕೂಡ ಆಗಿವೆ. ಈ ವಿಟಮಿನ್‍ಗಳು, ನೀವು ಬೇಗ ಚೇತರಿಸಿಕೊಳ್ಳಲು ನೆರವಾಗಬಹುದು ಮತ್ತು ಹೃದಯದ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.