Reading Time: 3 minutes

ನಿಮ್ಮ ಸ್ಥಿತಿಯನ್ನು ಮತ್ತಷ್ಟು ಉತ್ತಮವಾಗಿ ನಿಭಾಯಿಸಲು ನಿಮಗೆ ಇನ್ಸುಲಿನ್ ಅನ್ನು ಪ್ರಿಸ್ಕ್ರೈಬ್ ಮಾಡಿದ್ದರೆ, ಮರೆಯಬೇಡಿ; ಈ ಪಯಣದಲ್ಲಿ ನೀವು ಒಬ್ಬಂಟಿ ಅಲ್ಲ. ಡಯಾಬಿಟಿಸ್‍ನಿಂದ ಬಳಲುತ್ತಿರುವ ಶೇ. 50% ರಷ್ಟು ಜನರಿಗೆ ಇನ್ಸುಲಿನ್ ಅನ್ನು ಪ್ರಿಸ್ಕ್ರೈಬ್ ಮಾಡಲಾಗುತ್ತದೆ. ಇದನ್ನು ಸರಿಯಾಗಿ ಬಳಸಿದಾಗ, ಬ್ಲಡ್ ಶುಗರ್ ಮಟ್ಟಗಳನ್ನು ಇಳಿಸಲು ಇನ್ಸುಲಿನ್ ಒಂದು ಪರಿಣಾಮಕಾರಿ ಔಷಧಿಯಾಗಿದೆ. ಟೈಪ್ 2 ಡಯಾಬಿಟಿಸ್ ಇರುವವರಲ್ಲಿ ಹೆಚ್ಚು ಕಡಿಮೆ ಶೇ. 73% ರಷ್ಟು ಜನರಿಗೆ ಇನ್ಸುಲಿನ್ ಚಿಕಿತ್ಸೆಯನ್ನು ಪ್ರಾರಂಭಿಸುವುದೋ ಬೇಡವೋ ಎಂಬ ಭಯ ಇರುತ್ತದೆ. ಕಾರಣ: ಇನ್ಸುಲಿನ್ ಚಿಕಿತ್ಸೆಯ(1-4) ಬಗ್ಗೆ ಇರುವ ಭಯ ಮತ್ತು ತಪ್ಪು ಅಭಿಪ್ರಾಯಗಳು. ಬಹಳಷ್ಟು ರೋಗಿಗಳು ಸರಿಯಾದ ಚಿಕಿತ್ಸೆಯನ್ನು ಪಡೆಯುವುದರಲ್ಲಿ ತಡ ಮಾಡುವುದಕ್ಕೆ ಇರುವ ಮುಖ್ಯ ಕಾರಣ ಇದೇ.

ಇನ್ಸುಲಿನ್ ತೆಗೆದುಕೊಳ್ಳುವುದಕ್ಕೂ ಮುನ್ನ ಸಾಮಾನ್ಯವಾಗಿ ಇರಬೇಕಾದ ಬ್ಲಡ್ ಶುಗರ್ ಮಟ್ಟಗಳಿಗಿಂತ ಹೆಚ್ಚಿನ ಮಟ್ಟಗಳು ಹಲವಾರು ಜನರಲ್ಲಿ ಬಹಳಷ್ಟು ವರ್ಷಗಳಿಂದ ಇರುತ್ತದೆ ಎಂಬುದು ಇತ್ತೀಚಿನ ಅಧ್ಯಯನವೊಂದು ತೋರಿಸಿದೆ.(1) ಶುಗರ್ ಅನ್ನು ನಿಯಂತ್ರಿಸುವಲ್ಲಿ ಇನ್ಸುಲಿನ್ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆಯಾದರೂ, ಇನ್ಸುಲಿನ್ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇದು ಯಾವುದೇ ಆಧಾರವಿಲ್ಲದ ಭಯಗಳನ್ನು ತೊಲಗಿಸಲು ನೆರವಾಗುತ್ತದೆ.

ಭಯ 1: ನಾನು ಡಯಾಬಿಟಿಸ್ ಅನ್ನು ಸರಿಯಾಗಿ ನಿಯಂತ್ರಿಸುವಲ್ಲಿ ಸೋತಿದ್ದೇನೆ

ಟೈಪ್ 2 ಡಯಾಬಿಟಿಸ್ ಇರುವ ಜನರಿಗೆ, ಇನ್ಸುಲಿನ್ ಎಂದಿಗೂ ಮೊದಲನೆಯ ಚಿಕಿತ್ಸೆ ಆಗಿರುವುದಿಲ್ಲ. ಜೀವನಶೈಲಿಯಲ್ಲಿ ಬದಲಾವಣೆ ತಂದು, ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಟಾರ್ಗೆಟ್ ಬ್ಲಡ್ ಶುಗರ್ ಮಟ್ಟವನ್ನು ಸಾಧಿಸಲು ಸಾಧ್ಯವಾಗದೇ ಹೋದಾಗ ಇನ್ಸುಲಿನ್ ಅನ್ನು ಪರಿಚಯಿಸಲಾಗುತ್ತದೆ. ಬಹಳಷ್ಟು ಜನರು ಇದನ್ನು ಒಂದು ವೈಯಕ್ತಿಕ ಸೋಲು ಎಂಬಂತೆ ಭಾವಿಸುತ್ತಾರೆ. ಇಂತಹ ಮನಸ್ಥಿತಿಯು ಇನ್ಸುಲಿನ್ ಚಿಕಿತ್ಸೆಯ ಬಗ್ಗೆ ಅವರಿಗೆ ಇರುವ ಪ್ರತಿರೋಧವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇನ್ಸುಲಿನ್ ಅನ್ನು ನಿಮ್ಮ ಶುಗರ್ ನಿಭಾಯಿಸಲು ಇರುವ ಒಂದು ಪರಿಹಾರದಂತೆ ನೋಡಬೇಕು ಹಾಗೂ ಅದನ್ನು ಒಂದು ಶಿಕ್ಷೆ ಎಂಬಂತೆ ನೋಡಬಾರದು.(1) ನಿಮ್ಮ ಭೂತಕಾಲವನ್ನು ಹಿಂದಕ್ಕೆ ಬಿಟ್ಟು ನಿಮ್ಮ ಭವಿಷ್ಯಕ್ಕೆ ಹೆಚ್ಚು ಒತ್ತು ಕೊಡಬೇಕು.

ಭಯ 2: ಇನ್ಸುಲಿನ್ ಚಿಕಿತ್ಸೆ ಪರಿಣಾಮಕಾರಿಯಲ್ಲ

ಇನ್ಸುಲಿನ್ ಚಿಕಿತ್ಸೆಯನ್ನು ಇನ್ನೂ ಪ್ರಾರಂಭಿಸದ ಶೇ. 40% ರಷ್ಟು ಮಂದಿ ಇನ್ಸುಲಿನ್‍ನಿಂದ ಅವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ನಂಬಿದ್ದಾರೆ.(1) ಈ ಮೊದಲೇ ಹೇಳಿದಂತೆ, ಪ್ರಸ್ತುತ ಲಭ್ಯವಿರುವ ಶುಗರ್ ನಿಯಂತ್ರಿಸುವ ಏಜೆಂಟ್‍ಗಳಲ್ಲಿ ಇನ್ಸುಲಿನ್ ಅತ್ಯುತ್ತಮ ಏಜೆಂಟ್. ಡಯಾಬಿಟಿಸ್‍ಗೆ ಸಂಬಂಧಿಸಿದ ದೀರ್ಘಕಾಲದ ತೊಡಕುಗಳ ಅಪಾಯವನ್ನು ಇದು ಕುಗ್ಗಿಸುತ್ತದೆ ಹಾಗೂ ಒಬ್ಬ ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವನ್ನು ಬೀರುವುದಿಲ್ಲ. ಇಂತಹ ತಪ್ಪು ಅಭಿಪ್ರಾಯಗಳನ್ನು ತೊಲಗಿಸುವ ಸಲುವಾಗಿಯೇ ಇನ್ಸುಲಿನ್ ಬಗ್ಗೆ ಇರುವ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಭಯ 3: ಇನ್ಸುಲಿನ್ ಕಟ್ಟುಪಾಡುಗಳು ಸರಳವಾಗಿರದೆ ಬಹಳ ಸಂಕೀರ್ಣವಾಗಿರುತ್ತವೆ

ಡಯಾಬಿಟಿಸ್ ಇರುವ ನಾಲ್ಕನೇ ಒಂದು ಭಾಗದಷ್ಟು ಜನರು ನಿಗದಿತ ಸಮಯಕ್ಕೆ ಪ್ರತಿದಿನ ಇನ್ಸುಲಿನ್ ತೆಗೆದುಕೊಳ್ಳುವುದು ಕಷ್ಟಕರ ಎಂದು ಪರಿಗಣಿಸುತ್ತಾರೆ. ಬಹಳಷ್ಟು ರೀತಿಯ ಇನ್ಸುಲಿನ್ ಕಟ್ಟುಪಾಡುಗಳಿವೆ; ನಿಮ್ಮ ದಿನಚರಿ ಮತ್ತಷ್ಟು ಸರಳವಾಗಿರಬೇಕು ಎಂದು ನೀವು ಬಯಸಿದರೆ ನಿಮ್ಮ ವೈದ್ಯರೊಡನೆ ಬೇರೆ ಆಯ್ಕೆಗಳ ಬಗ್ಗೆ ಮಾತನಾಡಿ.

ಭಯ 4: ಇನ್ಸುಲಿನ್ ಇಂಜೆಕ್ಷನ್ ಚುಚ್ಚುವಾಗ ನೋವು ತೀವ್ರವಾಗಿರುತ್ತದೆ

ಕೆಲವರು ಇನ್ಸುಲಿನ್ ಇಂಜೆಕ್ಷನ್ ಚುಚ್ಚುವಾಗ ನೋವು ಹೆಚ್ಚು ಎಂದು ನಂಬಿರುತ್ತಾರೆ ಅಥವಾ ಅವರಿಗೆ ಸೂಜಿಯ ಭಯವೇ ಇರುತ್ತದೆ.(2) ಆದರೆ ಸುಲಭವಾದ ಉಪಾಯ ಒಂದಿದೆ. ಇನ್ಸುಲಿನ್ ಪೆನ್ ಬಳಸುವುದು, ಇದರಲ್ಲಿ ನೀವು ಸಣ್ಣ ಸೂಜಿಯನ್ನು ಬಳಸುತ್ತೀರಿ. ಇದು ಯಾವುದೇ ಹಿಂಸೆಯನ್ನು ಗಮನಾರ್ಹವಾಗಿ ಕುಗ್ಗಿಸುತ್ತದೆ ಹಾಗೂ ಇಂಜೆಕ್ಷನ್ ಚುಚ್ಚಿದಾಗ ನೋವು ಹೆಚ್ಚುಕಡಿಮೆ ಗೊತ್ತಾಗುವುದೇ ಇಲ್ಲ. ನಿಮ್ಮ ವೈದ್ಯರು ಅಥವಾ ನರ್ಸ್ ಅನ್ನು ಚುಚ್ಚುವುದು ಹೇಗೆ ಎಂಬುದನ್ನು ತೋರಿಸಿಕೊಡಲು ಹೇಳಿ, ನಂತರ ಅವರ ಮುಂದೆಯೇ ನೀವು ಕೂಡ ಒಂದೆರಡು ಬಾರಿ ತೋರಿಸಿ ಕೊಟ್ಟಂತೆ ಮಾಡಿ ಕಲಿಯಿರಿ. ಹೀಗೆ ಮಾಡುವುದರಿಂದ ಯಾವುದೇ ಭಯವಿದ್ದರೂ ಅದು ದೂರವಾಗಿ, ನೋವು ಹೆಚ್ಚು ಎಂಬ ಭಾವ ಕಡಿಮೆ ಆಗುತ್ತದೆ. ಇನ್ಸುಲಿನ್ ಇಂಜೆಕ್ಷನ್‍ಗಳಿಗೆ ಸೂಜಿ ಇಲ್ಲದ ಬದಲಿಗಳು ಕೂಡ ಲಭ್ಯವಿವೆ, ಉದಾಹರಣೆಗೆ ಇನ್ಸುಲಿನ್ ಪಂಪ್ ಮತ್ತು ಇನ್ಸುಲಿನ್ ಇನ್‍ಹೇಲರ್.

ಭಯ 5: ಜನ ಏನಂತಾರೆ!

ಕೆಲವರು ಇನ್ಸುಲಿನ್ ಇಂಜೆಕ್ಷನ್‍ಗೆ ಸಂಬಂಧಿಸಿದ ಸಾಮಾಜಿಕ ಕಳಂಕದಿಂದ ಚಿಂತೆಗೀಡಾಗುತ್ತಾರೆ, ಅದೂ ವಿಶೇಷವಾಗಿ ಭಾರತದಲ್ಲಿ.(4) ಇದೇ ಕಾರಣಕ್ಕೆ, ಹಲವರು ದೀರ್ಘಕಾಲದ ಇನ್ಸುಲಿನ್ ಚಿಕಿತ್ಸೆಯನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಅಥವಾ ಜನರ ಮಧ್ಯೆ ಇದ್ದಾಗ ಡೋಸ್‍ಗಳನ್ನು ಬಿಟ್ಟು ಬಿಡುತ್ತಾರೆ. ಸಮಾಧಾನ ಪಡುವ ವಿಷಯ ಏನೆಂದರೆ ಭಾರತದಲ್ಲಿ ಡಯಾಬಿಟಿಸ್ ಆರೈಕೆಗೆ ಸಂಬಂಧಿಸಿದ ಜಾಗೃತಿ ಈಗ ಹೆಚ್ಚಾಗುತ್ತಿದೆ. ರೆಸ್ಟೋರೆಂಟ್ ಅಥವಾ ಬೇರೆಯವರ ಮನೆಗೆ ಹೋಗಿದ್ದಾಗ, ವಾಶ್‍ರೂಮ್‍ಗೆ ಹೋಗಿ ಇಂಜೆಕ್ಷನ್ ಅನ್ನು ಯಾರಿಗೂ ಗೊತ್ತಾಗದಂತೆ ಕೂಡ ತೆಗೆದುಕೊಳ್ಳಬಹುದು.(2)

ಭಯ 6: ಇನ್ಸುಲಿನ್ ಚಿಕಿತ್ಸೆಯಿಂದ ಹೈಪೊಗ್ಲೈಸೀಮಿಯಾ ಆಗುವ ಸಾಧ್ಯತೆ ಹೆಚ್ಚಿರುತ್ತದೆ

ಇನ್ಸುಲಿನ್ ಚಿಕಿತ್ಸೆಯಿಂದ ಹೈಪೊಗ್ಲೈಸೀಮಿಯಾ ಉಂಟಾಗುವ ಸಾಧ್ಯತೆ ಇದೆ ಎಂಬುದು ನಿಜ, ಆದರೆ ಬ್ಲಡ್ ಶುಗರ್ ಇಳಿಸುವ ಯಾವುದೇ ಔಷಧಿ ವಿಷಯದಲ್ಲೂ ಈ ಅಪಾಯ ಇದ್ದೇ ಇದೆ (ಉದಾಹರಣೆಗೆ, ಗ್ಲಿಮೆಪಿರೈಡ್ ಮತ್ತು ಮೆಟ್‍ಫಾರ್ಮಿನ್). ಇನ್ಸುಲಿನ್ ಇತ್ತೀಚಿಗೆ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ. ಉದಾಹರಣೆಗೆ, ದೀರ್ಘಕಾಲೀನ ಪ್ರಭೇದಗಳು, ಇದು ದಿನಕ್ಕೆ ಅಗತ್ಯವಿರುವ ಚುಚ್ಚುಮದ್ದಿನ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಹಾಗೂ ಹೈಪೊಗ್ಲೈಸೀಮಿಯಾದ ಅಪಾಯವನ್ನು ಕುಗ್ಗಿಸುತ್ತದೆ, ಇತ್ಯಾದಿ.(3) ನೀವು ಬಳಸುತ್ತಿರುವ ಇನ್ಸುಲಿನ್ ಯಾವುದೇ ಆಗಿರಲಿ ಹೈಪೊಗ್ಲೈಸೀಮಿಯಾ, ಇನ್ಸುಲಿನ್ ಚಿಕಿತ್ಸೆ ಮತ್ತು ಇನ್ಸುಲಿನ್ ಅನ್ನು ಸರಿಯಾಗಿ ಬಳಸುವುದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವುದು ಹೈಪೊಗ್ಲೈಸೀಮಿಯಾ ಉಂಟಾಗುವ ಸಾಧ್ಯತೆಯನ್ನು ಕುಗ್ಗಿಸುತ್ತದೆ.

ಭಯ 7: ಇನ್ಸುಲಿನ್ ಬಳಕೆಯಿಂದ ತೂಕ ಹೆಚ್ಚುತ್ತದೆ

ತೂಕದ ಹೆಚ್ಚಳ ನಿಜವಾಗಿಯೂ ಇನ್ಸುಲಿನ್ ಚಿಕಿತ್ಸೆಯ ಒಂದು ಅಡ್ಡಪರಿಣಾಮ. ಆದರೆ ಇನ್ಸುಲಿನ್ ತೆಗೆದುಕೊಳ್ಳುತ್ತಿರುವ ಪ್ರತಿಯೊಬ್ಬರ ತೂಕವೂ ಹೆಚ್ಚಾಗುವುದಿಲ್ಲ.  ವ್ಯಾಯಾಮ ಮತ್ತು ಆಹಾರಕ್ರಮದ ಸರಿಯಾದ ಸಂಯೋಜನೆಯೊಂದಿಗೆ ನಿಮ್ಮ ತೂಕವನ್ನು ನಿರ್ವಹಿಸಬಹುದು.(4) ಅಲ್ಲದೆ, ಪ್ರಿಸ್ಕ್ರೈಬ್ ಮಾಡಲಾದ ಇನ್ಸುಲಿನ್ ಪ್ರಮಾಣ ಸಾಕಾಗದಿದ್ದರೆ, ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಬದಲು, ತೂಕ ಹೆಚ್ಚಳದ ಅಪಾಯ ಕಡಿಮೆ ಇರುವ ಔಷಧಿಗಳನ್ನು ಜೊತೆಯಾಗಿ ಬಳಸಬಹುದು.

ನಿಮ್ಮನ್ನೇ ನೀವು ಒಮ್ಮೆ ಪ್ರಶ್ನಿಸಿ, ಭಯ ಮತ್ತು ಆತಂಕ ಸರಿಯಾದ ಚಿಕಿತ್ಸೆ ಪಡೆಯುವುದರಿಂದ ನಿಮ್ಮನ್ನು ತಡೆಯುತ್ತಿದೆಯೇ? ಇನ್ಸುಲಿನ್ ಚಿಕಿತ್ಸೆಯನ್ನು ಬೇರೆ ಔಷಧಿಗಳಂತೆಯೇ ನೋಡಲು ಪ್ರಯತ್ನಿಸಿ. ಯಾರು ಇನ್ಸುಲಿನ್ ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಅವರಿಗೆ ಸೈಕಲಾಜಿಕಲ್ ಇನ್ಸುಲಿನ್ ರೆಸಿಸ್ಟೆನ್ಸ್ (ಮಾನಸಿಕ ಇನ್ಸುಲಿನ್ ಪ್ರತಿರೋಧ)  ಎಂಬ ಸಮಸ್ಯೆ ಇರುತ್ತದೆ. ಈ ಜನರು ಇನ್ಸುಲಿನ್ ಚಿಕಿತ್ಸೆಯನ್ನು ಹೆಚ್ಚು ನೋವಿನಿಂದ ಕೂಡಿದ, ಹೆಚ್ಚು ಜಟಿಲವಾದ ಮತ್ತು ಹೆಚ್ಚು ಅತೃಪ್ತಿಕರವೆಂದು ಭಾವಿಸುತ್ತಾರೆ. ಹಾಗಾಗಿ ಅವರು ಇನ್ಸುಲಿನ್ ಚಿಕಿತ್ಸೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇನ್ಸುಲಿನ್ ಅನ್ನು ತಪ್ಪಿಸಿದರೆ ಅದು ಮತ್ತಷ್ಟು ತೊಡಕುಗಳಿಗೆ ಕಾರಣವಾಗುತ್ತದೆ ಹಾಗೂ ಅವರು ಹಲವು ಬಾರಿ ಆಸ್ಪತ್ರೆ/ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.

ಹೆಚ್ಚೆಚ್ಚು ತಿಳಿದುಕೊಳ್ಳಿ

ರೋಗ, ಔಷಧಿ, ಮತ್ತು ದೇಹದ ಮೇಲೆ ಆ ಔಷಧಿಗಳ ಪ್ರಭಾವಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಜನರಲ್ಲಿ ಬ್ಲಡ್ ಶುಗರ್ ನಿಯಂತ್ರಣದ ಬಹುತೇಕ ಎಲ್ಲ ಅಂಶಗಳೂ ಶ್ರೇಷ್ಠವಾಗಿರುತ್ತವೆ ಎಂದು ಸಂಶೋಧನೆಗಳು ಸತತವಾಗಿ ತೋರಿಸಿಕೊಟ್ಟಿವೆ.(1,4) ನೆನಪಿರಲಿ, ಇನ್ಸುಲಿನ್ ಬಳಕೆ ನೀವು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಸಾಮಾನ್ಯವಾಗಿದೆ: ಟೈಪ್ 2 ಡಯಾಬಿಟಿಸ್ ಇರುವ ಇಬ್ಬರಲ್ಲಿ ಒಬ್ಬರಿಗೆ ಅದು ಕಾಣಿಸಿಕೊಂಡ ಆರು ವರ್ಷಗಳಲ್ಲಿ ಇನ್ಸುಲಿನ್‍ನ ಅಗತ್ಯವಿರುತ್ತದೆ.(3) ಭಾರತದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈಗ ಡಯಾಬಿಟಿಸ್ ಶಿಕ್ಷಕರು ಇದ್ದಾರೆ.(4) ಅವರ ಸೇವೆಯನ್ನು ಬಳಸಿಕೊಳ್ಳಿ ಮತ್ತು ಅವರಿಂದ ಡಯಾಬಿಟಿಸ್‍ಗೆ ಸಂಬಂಧಿಸಿದಂತೆ ಎಷ್ಟು ಸಾಧ್ಯವೋ ಅಷ್ಟು ಮಾಹಿತಿಯನ್ನು ಪಡೆಯಿರಿ. ಯಾರ ಬಳಿ ಹೆಚ್ಚು ಮಾಹಿತಿ ಇರುತ್ತದೆಯೋ ಅವರು ವೈದ್ಯರ ಸಲಹೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಅದನ್ನು ಪಾಲಿಸುವಲ್ಲಿ ಮುಂದಿರುತ್ತಾರೆ.

ಉಲ್ಲೇಖಗಳು:

  1. Russell‐Jones D, Pouwer F, Khunti K. Identification of barriers to insulin therapy and approaches to overcoming them. Diabetes, Obesity and Metabolism. 2018;20(3):488-96.
  2. Kunt T, Snoek FJ. Barriers to insulin initiation and intensification and how to overcome them. International Journal of Clinical Practice. 2009;63:6-10.
  3. Larkin ME, Capasso VA, Chen CL, et al. Measuring psychological insulin resistance. The Diabetes Educator. 2008;34(3):511-7.
  4. Jha S, Panda M, Kumar S, et al. Psychological insulin resistance in patients with type 2 diabetes. Journal of the Association of Physicians of India. 2015;63(7):33-9.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.