ಡಿಸ್ಲಿಪಿಡೀಮಿಯಾ ಎಂದರೇನು?
ಡಿಸ್ಲಿಪಿಡೀಮಿಯಾ ಎಂದರೆ ನಿಮ್ಮ ದೇಹದ ಲಿಪಿಡ್ ಮಟ್ಟವು ಅಸಹಜವಾಗಿರುವ ಸ್ತಿತಿ. ಅದು LDL, HDL, ಟ್ರೈಗ್ಲಿಸರೈಡ್ಗಳು ಅಥವಾ ಅವುಗಳೆಲ್ಲದರ ಮಟ್ಟವಾಗಿರಬಹುದು, ಅವು ಸಾಮಾನ್ಯ ಸ್ಥಿತಿಯಲ್ಲಿ ಇಲ್ಲದೇ ಇದ್ದಾಗ ಅದನ್ನು ಡಿಸ್ಲಿಪಿಡೀಮಿಯಾ ಎನ್ನುವರು. ಇದರ ಅತ್ಯಂತ ಸಾಮಾನ್ಯವಾದ ರೂಪವೆಂದರೆ ಹೈಪರ್ಲಿಪಿಡೀಮಿಯಾ ಅಥವಾ ಮೇಲೇರಿದ ಲಿಪಿಡ್ ಮಟ್ಟ. ಈ ಸ್ಥಿತಿಯಲ್ಲಿ, ನಿಮ್ಮ LDL ಅಥವಾ ಟ್ರೈಗ್ಲಿಸರೈಡ್ ಮಟ್ಟಗಳು ಸಾಮಾನ್ಯ ಮಟ್ಟಕ್ಕಿಂತ ಮೇಲಿರುತ್ತವೆ. ಆದರೆ ನಿಮ್ಮ HDL ಮಟ್ಟ ಕಡಿಮೆಯಾಗಿರುತ್ತದೆ. ಇದರ ಪರಿಣಾಮವಾಗಿ, ಹೃದಯದ ಕಾಯಿಲೆಗಳು ಬರುವ ಅಪಾಯ ದುಪ್ಪಾಟ್ಟಾಗುತ್ತದೆ. ಅಷ್ಟೇನು ಹೆಚ್ಚಾಗಿ ಕಂಡುಬರದ ಡಿಸ್ಲಿಪಿಡೀಮಿಯಾದ ಇನ್ನೊಂದು ಬಗೆ ಅಂದರೆ ಹೈಪೊಲಿಪಿಡೀಮಿಯಾ. ಇದರಲ್ಲಿ ಲಿಪಿಡ್ ಮಟ್ಟಗಳು ಅಸಹಜವಾಗಿ ಕಡಿಮೆಯಾಗಿರುತ್ತವೆ. ಅಧಿಕ ರಕ್ತದೊತ್ತಡದಂತೆಯೇ, ನೀವೇನಾದರು ಡಿಸ್ಲಿಪಿಡೀಮಿಯಾದಿಂದ ಬಳಲುತಿದ್ದರೆ ಅದು ನಿಮಗೆ ಗೊತ್ತಾಗುವುದೇ ಇಲ್ಲ. ನೀವು ಲಿಪಿಡ್ ಪ್ರೊಫೈಲ್ ರಕ್ತ ಪರೀಕ್ಷೆಗೆ ಒಳಗಾಗುವವರೆಗೂ ಅದರ ಬಗ್ಗೆ ನಿಮಗೆ ಹೆಚ್ಚಿನ ಸುಳಿವು ಸಿಗುವುದಿಲ್ಲ.
ಸಾಮಾನ್ಯವಾಗಿ ಇರಬೇಕಾದಂತಹ ಲಿಪಿಡ್ ಮಟ್ಟಗಳು ಹೀಗಿವೆ:
- ಒಟ್ಟು ಕೊಲೆಸ್ಟರಾಲ್: 200 mg / dL ಗಿಂತ ಕಡಿಮೆ
- HDL ಕೊಲೆಸ್ಟರಾಲ್: ಗಂಡಸರಲ್ಲಿ ಇದು 40 mg/dL ಗಿಂತ ಹೆಚ್ಚಿರಬೇಕು, ಮತ್ತು ಹೆಂಗಸರಲ್ಲಿ ಇದು 50 mg/dL ಗಿಂತ ಹೆಚ್ಚಿರಬೇಕು.
- LDL ಕೊಲೆಸ್ಟರಾಲ್:100 mg/ dL ಗಿಂತ ಕಡಿಮೆ; ಡಯಾಬಿಟಿಸ್ ಅಥವಾ ಹೃದಯದ ಕಾಯಿಲೆ ಇರುವ ಜನರಲ್ಲಿ ಇದು 70 mg/dL ಗಿಂತ ಕಡಿಮೆ ಇರಬೇಕು.
- ಟ್ರೈಗ್ಲಿಸರೈಡ್ಗಳು:150 mg/dL ಗಿಂತ ಕಡಿಮೆ ಇರಬೇಕು
ಡಿಸ್ಲಿಪಿಡೀಮಿಯಾದ ಅಪಾಯವನ್ನು ಯಾರು ಎದುರಿಸಬೇಕಾಗುತ್ತದೆ?
ಡಿಸ್ಲಿಪಿಡೀಮಿಯಾದಲ್ಲಿರುವ ಕೆಲವು ಅಪಾಯಕಾರಿ ಅಂಶಗಳು:
ವಯಸ್ಸು: ನಿಮಗೆ ವಯಸ್ಸಾದಂತೆ, ನಿಮ್ಮ ದೇಹಕ್ಕೆ ರಕ್ತದಿಂದ ಹೆಚ್ಚುವರಿ ಕೊಲೆಸ್ಟರಾಲ್ ಅನ್ನು ತೆರವುಗೊಳಿಸಲು ಕಷ್ಟವಾಗುತ್ತದೆ.
ಲಿಂಗ: ಹೆಂಗಸರಿಗಿಂತ ಗಂಡಸರು ಕಡಿಮೆ ಎಚ್ಡಿಎಲ್ ಮಟ್ಟವನ್ನು ಹೊಂದಿರುತ್ತಾರೆ. 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಂಗಸರಿಗೆ ಸಾಮಾನ್ಯವಾಗಿ ಕಡಿಮೆ ಎಲ್ಡಿಎಲ್ ಮಟ್ಟವಿರುತ್ತದೆ.
ಕುಟುಂಬದ ಇತಿಹಾಸ: ಯಾರ ಪೋಷಕರು ಅಥವಾ ಪೂರ್ವಜರು ಹೆಚ್ಚಿನ ಕೊಲೆಸ್ಟರಾಲ್ನ ಇತಿಹಾಸವನ್ನು ಹೊಂದಿರುತ್ತಾರೋ, ಅಂಥಹವರಿಗೆ ಇದು ಬರುವ ಸಾಧ್ಯತೆ ತುಂಬ ಹೆಚ್ಚಿರುತ್ತದೆ.
ಡಿಸ್ಲಿಪಿಡೀಮಿಯಾ ಬರಲು ಮುಖ್ಯ ಕಾರಣಗಳು ಯಾವುವು?
ಒಬೆಸಿಟಿ: ಬೊಜ್ಜು ನಿಮ್ಮ ಲಿವರ್ ತಯಾರಿಸುವ ಎಲ್ಡಿಎಲ್ ಕೊಲೆಸ್ಟರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ; ಜೊತೆಗೆ ಇದು ನಿಮ್ಮ ರಕ್ತದಿಂದ ಎಲ್ಡಿಎಲ್ ಕೊಲೆಸ್ಟರಾಲ್ ತೆರವುಗೊಳಿಸುವುದನ್ನು ಕೂಡ ಕಡಿಮೆಗೊಳಿಸುತ್ತದೆ.
ತಪ್ಪು ಆಹಾರ ಆಯ್ಕೆಗಳು: ಸ್ಯಾಚುರೇಟಡ್ ಮತ್ತು ಟ್ರಾನ್ಸ್ ಕೊಬ್ಬುಗಳುಳ್ಳ ಆಹಾರವನ್ನು ತಿನ್ನುವುದು, ಅದು ಯಾವುದೆಂದರೆ ಫುಲ್ -ಫ್ಯಾಟ್ ಡೈರಿ, ಕೆಂಪು ಮಾಂಸ, ಮತ್ತು ಬೇಕರಿ ಉತ್ಪನ್ನಗಳು. ಇವು ಎಲ್ಡಿಎಲ್ ಅನ್ನು ಹೆಚ್ಚಿಸುತ್ತದೆ ಮತ್ತು ಎಚ್ಡಿಎಲ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಆಗಾಗ್ಗೆ ಸೇವಿಸುವ ಸಕ್ಕರೆ-ಸಮೃದ್ಧ ಆಹಾರಗಳು ಅಂದರೆ ಕುಕ್ಕೀಸ್, ಚಾಕೊಲೇಟ್ಗಳು ಮತ್ತು ಸಿಹಿತಿನಿಸುಗಳು, ಮತ್ತು ಪಾನೀಯಗಳಾದ ಕೋಲಾ ಮತ್ತು ಪ್ಯಾಕ್ಡ್ ಹಣ್ಣಿನ ರಸಗಳು, ನಿಮ್ಮ ರಕ್ತದೊಳಗೆ ಹಾನಿಕಾರಕ ಕೊಬ್ಬುಗಳನ್ನು ಸೇರಿಸಲು ಲಿವರನ್ನು ಪ್ರಚೋದಿಸುತ್ತದೆ.
ಆಲ್ಕೋಹಾಲ್: ಅತಿಯಾದ ಆಲ್ಕೊಹಾಲ್ ಸೇವನೆ ನಿಮ್ಮ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ಗಳ ಪರಿಚಲನೆಯನ್ನು ನಿಮ್ಮ ರಕ್ತದಲ್ಲಿ ಒಮ್ಮೆಲೆ ಏರಿಸುತ್ತದೆ. ಜೊತೆಗೆ, ನಿಮ್ಮ ಕೈಯಲ್ಲಿರುವ ಪಾನೀಯದೊಂದಿಗೆ, ಕಡಲೆಕಾಯಿಗಳು, ಬಾರ್ ನಟ್ಸ್, ಚಿಪ್ಸ್, ಫ್ರೈಸ್ ಮತ್ತು ಚೀಸನ್ನು ನೀವು ಸೇವಿಸದಿರಲು ಸಾಧ್ಯವಿಲ್ಲ. ಹೆಚ್ಚೆಚ್ಚು ಕೊಬ್ಬಿದ ಆಹಾರಕ್ಕಿರುವ ಈ ನಿಮ್ಮ ಬಯಕೆ, ದೇಹದ ಕೊಲೆಸ್ಟರಾಲ್ಗೆ ದುಪ್ಪಟ್ಟು ತೊಂದರೆಗಳನ್ನು ಉಂಟುಮಾಡುತ್ತದೆ.
ಹೈಪೋಥೈರಾಯ್ಡಿಸಮ್: ಕೊಲೆಸ್ಟರಾಲ್ ಅನ್ನು ಉತ್ಪಾದಿಸಲು ಮತ್ತು ಅನಗತ್ಯವಾದ ಕೊಲೆಸ್ಟರಾಲ್ ಅನ್ನು ಹೊರಹಾಕಲು ನಿಮ್ಮ ದೇಹಕ್ಕೆ ಥೈರಾಯ್ಡ್ ಹಾರ್ಮೋನುಗಳು ಅವಶ್ಯಕ. ಹೈಪೋಥೈರಾಯ್ಡಿಸಮ್ನ ವಿಷಯದಲ್ಲಿ, ನಿಮ್ಮ ದೇಹವು ಎಲ್ಡಿಎಲ್ ಕೊಲೆಸ್ಟರಾಲ್ ಅನ್ನು ಪರಿಣಾಮಕಾರಿಯಾಗಿ ಮುರಿದು ಅದನ್ನು ತೆಗೆದುಹಾಕುವುದಿಲ್ಲ ಮತ್ತು ಇದು ನಿಮ್ಮ ಆರ್ಟರೀಸ್ಗಳಲ್ಲಿ ಎಲ್ಡಿಎಲ್ ಕೊಲೆಸ್ಟರಾಲ್ ಅನ್ನು ಶೇಖರಿಸಲು ಕಾರಣವಾಗುತ್ತದೆ.
ಡಯಾಬಿಟಿಸ್: ಟೈಪ್ 2 ಡಯಾಬಿಟಿಸ್ ಹೊಂದಿರುವ ಜನರ ವಿಶಿಷ್ಟವಾದ ಇನ್ಸುಲಿನ್ ಪ್ರತಿರೋಧವು ಅವರ ದೇಹವು ಕೊಲೆಸ್ಟರಾಲ್ ಅನ್ನು ಉತ್ಪಾದಿಸುವ ಮತ್ತು ಹೊರಹಾಕುವ ಪದ್ದತಿಯ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚುವರಿಯಾಗಿ, ಡಯಾಬಿಟಿಸ್ ಹೊಂದಿರುವ ಜನರು ಹೆಚ್ಚಿನ ಎಲ್ಡಿಎಲ್ ಮತ್ತು ಟ್ರೈಗ್ಲಿಸರೈಡ್ಗಳನ್ನು ಹಾಗೂ ಕಡಿಮೆ ಎಚ್ಡಿಎಲ್ ಹೊಂದಿರುತ್ತಾರೆ.
ಈ ಕಾರಣಗಳ ಜೊತೆಗೆ, ಡಿಸ್ಲಿಪಿಡೀಮಿಯಾಗೆ ಕಾರಣವಾಗುವ ಇತರ ಅಂಶಗಳು:
- ಧೂಮಪಾನ
- ಒತ್ತಡ
- ವ್ಯಾಯಾಮದ ಕೊರತೆ
- ಪಾಲಿಸಿಸ್ಟಿಕ್ ಒವೆರಿಯನ್ ಸಿಂಡ್ರೋಮ್ (ಪಿಸಿಓಎಸ್)
- ಮೂತ್ರಪಿಂಡದ ರೋಗ
- ಬೀಟಾ-ಬ್ಲಾಕರ್ಸ್, ಡೈಯುರೆಟಿಕ್ಸ್, ಬರ್ತ್ ಕಂಟ್ರೋಲ್ ಪಿಲ್ಸ್ ಮತ್ತು ಆಂಟಿಡಿಪ್ರೆಸೆಂಟ್ನಂತಹ ಔಷಧಿಗಳು
ಡಿಸ್ಲಿಪಿಡೀಮಿಯಾದ ರೋಗಲಕ್ಷಣಗಳು ಯಾವುವು?
ದುರದೃಷ್ಟವಶಾತ್, ಡಿಸ್ಲಿಪಿಡೀಮಿಯಾದಿಂದ ಬಳಲುತ್ತಿರುವ ಹೆಚ್ಚಿನ ಜನರಿಗೆ ಆ ರೋಗ ಅವರಿಗಿದೆ ಎಂದು ತಿಳಿದಿರುವುದಿಲ್ಲ ಏಕೆಂದರೆ ಅದು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ರೋಗವನ್ನು ಪತ್ತೆಹಚ್ಚುವ ಒಂದೇ ದಾರಿಯೆಂದರೆ ಲಿಪಿಡ್ ಪ್ರೊಫೈಲ್ ಡಯಗ್ನೋಸ್ಟಿಕ್ ಪರೀಕ್ಷೆ.
ಡಿಸ್ಲಿಪಿಡೀಮಿಯಾದ ದೀರ್ಘಕಾಲೀನ ಪರಿಣಾಮಗಳು ಯಾವುವು?
- ದೀರ್ಘಾವಧಿಯಲ್ಲಿ, ಹೆಚ್ಚಿದ ಕೊಲೆಸ್ಟರಾಲ್ ಮಟ್ಟಗಳು ನಿಮ್ಮ ಆರ್ಟರಿಸ್ ಮತ್ತು ನಿಮ್ಮ ಅಂಗಾಂಗಗಳನ್ನು ಹಾನಿಗೊಳಿಸುತ್ತವೆ.
- ಡಿಸ್ಲಿಪಿಡೀಮಿಯಾದ ಕೆಲವು ಪರಿಣಾಮಗಳು ಈ ಕೆಳಕಂಡಂತಿವೆ.
- ಹೃದಯಾಘಾತ ಅಥವಾ ಸ್ಟ್ರೋಕ್
- ಅಧಿಕ ರಕ್ತದೊತ್ತಡ
- ಪೆರಿಫೆರಲ್ ಆರ್ಟರಿ ಡಿಸೀಸ್: ಆರ್ಟರಿಸ್ಗಳ ತಡೆಗಟ್ಟುವಿಕೆಯಿಂದ ಕಾಲುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ.
- ಅಥೆರೊಸ್ಕ್ಲೆರೋಸಿಸ್: ಆರ್ಟರೀಸ್ಗಳಲ್ಲಿ ಪ್ಲೇಕ್ ಶೇಖರಣೆಗೊಳ್ಳುವುದರಿಂದ ಆರ್ಟರೀಸ್ಗಳು ಕಿರಿದಾಗುತ್ತಾ ಹೋಗುತ್ತವೆ.
- ಕೊರೋನರಿ ಆರ್ಟರಿ ಡಿಸೀಸ್ (ಸಿಎಡಿ): ನಿಮ್ಮ ಹೃದಯದ ಆರ್ಟರೀಸ್ಗಳ ತಡೆಗಟ್ಟುವಿಕೆ.
- ಆರ್ಟಿರಿಯೊಸ್ಕ್ಲೆರೋಸಿಸ್: ಆರ್ಟರಿಯ ಗೋಡೆಗಳು ಗಟ್ಟಿಯಾಗುವುದು ಅಥವಾ ಕಠಿಣಗೊಳ್ಳುವುದು.
ನೀವು ಡಿಸ್ಲಿಪಿಡೀಮಿಯಾಗೆ ಹೇಗೆ ಚಿಕಿತ್ಸೆ ನೀಡಬಹುದು?
ಔಷಧಿ ಹಾಗೂ ಜೀವನಶೈಲಿಯ ಬದಲಾವಣೆಯ ಸಂಯೋಜನೆಯು ಡಿಸ್ಲಿಪಿಡೀಮಿಯಾಗೆ ಶಿಫಾರಸು ಮಾಡಿದ ಚಿಕಿತ್ಸೆಯಾಗಿದೆ.
ಈ ರೋಗಕ್ಕೆ ಶಿಫಾರಸು ಮಾಡಲಾದ ಅತ್ಯಂತ ಸಾಮಾನ್ಯವಾದ ಔಷಧಿಗಳೆಂದರೆ:
- ಸ್ಟ್ಯಾಟಿನ್ಸ್
- ಎಜೆಟಿಮಿಬ್
- ನಿಯಾಸಿನ್
- ಫೈಬ್ರೇಟ್ಸ್
- ಬೈಲ್ ಆಸಿಡ್ ಸೀಕ್ವೇಸ್ಟ್ರೆಂಟ್ಸ್
- ಇವಲೋಕ್ಯುಮಾಬ್ ಮತ್ತು ಅಲೈರೊಕ್ಯುಮಾಬ್
- ಲೋಮಿಟೇಪಿಡ್ ಮತ್ತು ಮಿಪೊಪರ್ಸನ್
- ಪಿಸಿಎಸ್ಕೆ9 ಇನ್ಹಿಬಿಟರ್ಸ್
ಈ ಔಷಧಿಗಳೊಂದಿಗೆ, ನೀವು ನಿಮ್ಮ ಜೀವನಶೈಲಿಯಲ್ಲಿ ಈ ಕೆಳಕಂಡಂತೆ ಬದಲಾವಣೆಗಳನ್ನು ಮಾಡಬೇಕಾಗಿದೆ:
- ತೂಕವನ್ನು ಕಡಿಮೆಮಾಡಿಕೊಳ್ಳಿ: ಹೆಚ್ಚುವರಿ ತೂಕದ 5-10% ತೂಕವನ್ನು ಇಳಿಸಿದರೂ ಸಾಕು, ಇದರಿಂದ ನೀವು ಹೆಚ್ಚು ಪ್ರಯೋಜನವನ್ನು ಪಡೆಯುತ್ತೀರಿ.
- ವ್ಯಾಯಾಮ ಮಾಡಿ, ಅದು ಸೈಕಲ್ ಹೊಡೆಯೋದು ಆಗಿರಬಹುದು, ವಾಕಿಂಗ್ ಆಗಿರಬಹುದು ಅಥವಾ ವಾರದಲ್ಲಿ ಕನಿಷ್ಠ 3 ಬಾರಿ 30 ನಿಮಿಷಗಳ ಕಾಲ ವ್ಯಾಯಾಮ ಶಾಲೆಗೆ ಹೋಗೋದು ಆಗಿರಬಹುದು.
- ಆಲ್ಕೊಹಾಲನ್ನು ಮಿತವಾಗಿ ಸೇವಿಸಿ: ಒಂದು ಲೆಕ್ಕದಲ್ಲಿ, ನಾಲ್ಕು ಬಾರಿಗಿಂತಲೂ ಹೆಚ್ಚು ಸೇವಿಸಬಾರದು.
- ಧೂಮಪಾನವನ್ನು ನಿಲ್ಲಿಸಿ
- ಸಕ್ಕರೆ, ಬೇಕರಿ ಉತ್ಪನ್ನಗಳು, ಸಿಹಿತಿಂಡಿಗಳು, ಹುರಿದ ಆಹಾರಗಳು ಮತ್ತು ಜಂಕ್ ಆಹಾರವನ್ನು ನೀವು ಸೇವಿಸುವುದನ್ನು ನಿಲ್ಲಸಬೇಕು.
- ಒಮೇಗಾ-3 ಸಮೃದ್ಧ ಆಹಾರಗಳಾದ ಅಗಸೆ ಬೀಜಗಳು, ವಾಲ್ನಟ್ಸ್, ಚಿಯಾ ಬೀಜಗಳು ಮತ್ತು ಕುಂಬಳಕಾಯಿ ಬೀಜಗಳನ್ನು ನಿಮ್ಮ ಆಹಾರಕ್ರಮದಲ್ಲಿ ಎರಡು ಚಮಚ ಸೇರಿಸಿ.
- ಬೆಣ್ಣೆ, ತುಪ್ಪ, ಕೆನೆ, ರೆಡ್ ಮೀಟ್ ಮತ್ತು ಫುಲ್-ಫ್ಯಾಟ್ ಡೈರಿಗಳಂತಹ ಸ್ಯಾಚುರೇಟಡ್ ಕೊಬ್ಬುಗಳ ಸೇವನೆಯನ್ನು ಕಡಿಮೆ ಮಾಡಿ ಹಾಗೂ ಬೀಜಗಳು, ಎಣ್ಣೆಬೀಜಗಳು, ಲೀನ್ ಮೀಟ್, ವಿಶೇಷವಾಗಿ ಮೀನುಗಳು ಮತ್ತು ಕಡಿಮೆ-ಕೊಬ್ಬು/ಸ್ಕಿಮ್ ಹಾಲಿನ ಉತ್ಪನ್ನಗಳಂತಹ ಪದಾರ್ಥಗಳೊಡನೆ ಬದಲಿಸಿಕೊಳ್ಳಿ.
- ಪ್ರತಿದಿನ ಕನಿಷ್ಠ ಐದು ಬಾರಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.