Reading Time: 2 minutes

ನಿಮಗೆ ಡಿಸ್ಲಿಪಿಡೀಮಿಯ ಇರುವುದು ಗೊತ್ತಾದಾಗ ನೀವು ದಂಗಾಗಬಹುದು. ಆದರೆ ಎಲ್ಲವು ಮುಗಿದುಹೋಯಿತು ಎಂದು ಹತಾಶರಾಗದಿರಿ. ನಿಮ್ಮ ಜೀವನಶೈಲಿಯಲ್ಲಿ ಸರಳ ಮಾರ್ಪಾಡುಗಳನ್ನು ಮಾಡಿಕೊಂಡರೆ, ಈ ಪರಿಸ್ಥಿತಿಯನ್ನು ನಿಭಾಯಿಸಲು ತುಂಬ ಸಹಕಾರಿಯಾಗುವುದು.

ಡಿಸ್ಲಿಪಿಡೀಮಿಯ ಎಂದರೇನು?

ಒಬ್ಬ ವ್ಯಕ್ತಿಯ ರಕ್ತದ ಲಿಪಿಡ್‌ಗಳ ಅಳತೆಯಲ್ಲಿ ಏರುಪೇರಾದರೆ, ಆ ಸ್ಥಿತಿಯನ್ನು ಡಿಸ್ಲಿಪಿಡೀಮಿಯ ಎನ್ನುವರು.

ನಿಮ್ಮ ದೇಹದಲ್ಲಿ ಪ್ರಮುಖವಾಗಿ 3 ಬಗೆಯ ಲಿಪಿಡ್‌ಗಳು ಇರುತ್ತವೆ: ಹೈ-ಡೆನ್ಸಿಟಿ ಲಿಪೊಪ್ರೋಟೀನ್ (HDL), ಲೋ-ಡೆನ್ಸಿಟಿ ಲಿಪೊಪ್ರೋಟೀನ್ (LDL), ಇವು 2 ಮುಖ್ಯ ಬಗೆಯ ಕೊಲೆಸ್ಟರಾಲ್‌ಗಳಾಗಿವೆ ಹಾಗು ಟ್ರೈಗ್ಲಿಸರೈಡ್ಸ್, ಇದು ರಕ್ತದಲ್ಲಿ ಇರುವ ಇನ್ನೊಂದು ಬಗೆಯ ಕೊಬ್ಬಾಗಿದೆ.

ನಿಮಗೆ ಡಿಸ್ಲಿಪಿಡೀಮಿಯ ಇದ್ದರೆ, ನಿಮಗೆ ಹೈಪರ್‌ಲಿಪಿಡೀಮಿಯ ಇಲ್ಲವೇ ಹೆಚ್ಚಿನ ಮಟ್ಟದ LDL (ಅನಾರೋಗ್ಯಕಾರಿ ಕೊಲೆಸ್ಟರಾಲ್‌) ಮತ್ತು  ಟ್ರೈಗ್ಲಿಸರೈಡ್ಸ್ ಇದೆ ಎಂದರ್ಥ. ಇದೇ ಹೆಚ್ಚಾಗಿ ಕಂಡುಬರುವ ಬಗೆ. ಅಷ್ಟೊಂದು ಸಾಮಾನ್ಯವಲ್ಲದ ಮತ್ತೊಂದು ಬಗೆಯ ಡಿಸ್ಲಿಪಿಡೀಮಿಯ ಎಂದರೆ ಕಡಿಮೆ ಮಟ್ಟದ HDL (ಆರೋಗ್ಯಕಾರಿ ಕೊಲೆಸ್ಟರಾಲ್‌) ಇರುವುದು.

ಹೆಚ್ಚಿನ ಮಟ್ಟದ LDL ಮತ್ತು ಟ್ರೈಗ್ಲಿಸರೈಡ್ಸ್ ಇದ್ದರೆ ನಿಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಡಿಸ್ಲಿಪಿಡೀಮಿಯದ ಚಿಕಿತ್ಸೆಯಲ್ಲಿ ಜೀವನಶೈಲಿಯ ಮಾರ್ಪಾಡುಗಳು ಏಕೆ ಮುಖ್ಯವಾಗುತ್ತವೆ?

ಡಿಸ್ಲಿಪಿಡೀಮಿಯವನ್ನು ನಿಮ್ಮ ಅಪ್ಪ ಅಮ್ಮಂದಿರಿಂದ ಆನುವಂಶಿಕವಾಗಿ ಪಡೆಯುವ ಸಾಧ್ಯತೆಯಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ಅದು ಬರಲು ಕಾರಣವೆಂದರೆ, ಅಪಾಯಕಾರಿ ಜೀವನಶೈಲಿ ಇಲ್ಲವೆ ಬಹುಕಾಲದ ಆರೋಗ್ಯ ಸಮಸ್ಯೆಗಳು. ಅದಕ್ಕಾಗಿಯೇ, ಜೀವನಶೈಲಿಯ ನಿರ್ವಹಣೆ ತುಂಬ ಮುಖ್ಯ. ಆನುವಂಶಿಕ ಅಂಶಗಳು ನಿಮ್ಮ ಹಿಡಿತದಲ್ಲಿ ಇಲ್ಲದಿದ್ದರೂ, ಆರೋಗ್ಯ ಸುಧಾರಣೆಗೆ ಒಳ್ಳೆ ಕ್ರಮಗಳನ್ನು ರೂಢಿಸಿಕೊಳ್ಳಬಹುದು.

ನಿಮಗೆ ತೀವ್ರವಾದ ಡಿಸ್ಲಿಪಿಡೀಮಿಯ ಇದ್ದರೆ, ಇಲ್ಲವೆ ಬೇರೆ ಆರೋಗ್ಯ ಸಮಸ್ಯೆಗಳ ಜೊತೆಗೆ ಇದು ಕೂಡ ಇದ್ದರೆ, ನಿಮ್ಮ ಕೊಲೆಸ್ಟರಾಲ್‌ ಮಟ್ಟದ ನಿರ್ವಹಣೆಗೆ ಚಿಕಿತ್ಸೆ ಬೇಕಾಗಬಹುದು. ಆದರೆ, ಇದರರ್ಥ ನಿಮಗೆ ಆರೋಗ್ಯಪೂರ್ಣ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದಲ್ಲ. ಜೀವನಶೈಲಿಯ ಮಾರ್ಪಾಡುಗಳು ಡಿಸ್ಲಿಪಿಡೀಮಿಯದ ಚಿಕಿತ್ಸೆಯಲ್ಲಿ ಅತ್ಯಗತ್ಯವಾಗಿದೆ.

ನಿಮ್ಮ ಜೀವನಶೈಲಿಯ ಯಾವ ಭಾಗಗಳನ್ನು ನೀವು ಗುರಿಯಾಗಿಸಬೇಕು?

ಆಹಾರ ಕ್ರಮ

ಕೊಲೆಸ್ಟರಾಲ್‌ ಮಟ್ಟವನ್ನು ತಗ್ಗಿಸಲು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಅವರು ಹೃದಯ ಸ್ನೇಹಿ ಆಹಾರ ಕ್ರಮವನ್ನು ಸೂಚಿಸುತ್ತಾರೆ.[1] ಇದರ ಪ್ರಕಾರ, ಕೊಲೆಸ್ಟರಾಲ್‌ ಹೇರಳವಾಗಿರುವ, ಹೆಚ್ಚು ಸ್ಯಾಚುರೇಟಡ್ ಹಾಗು ಟ್ರಾನ್ಸ್‌ಫ್ಯಾಟ್ ತುಂಬಿರುವ ರೆಡ್ ಮೀಟ್ ಮತ್ತು ಕರಿದ ತಿಂಡಿಗಳನ್ನು ಕಡಿಮೆ ತಿನ್ನಬೇಕು. ಅದರ ಬದಲು ನಿಮ್ಮ ಆಹಾರ ಕ್ರಮದಲ್ಲಿ ನಾರಿನಂಶ ಇರುವ ಹಣ್ಣು, ತರಕಾರಿ, ಕಾಳುಗಳು, ಆರೋಗ್ಯಪೂರ್ಣ ಅನ್‍ಸ್ಯಾಚುರೇಟಡ್ ಕೊಬ್ಬು ಇರುವ ನಟ್ಸ್, ಬೀಜಗಳು, ಬೇಳೆಕಾಳು, ಮೀನು ಮತ್ತು ಆಲಿವ್ ಎಣ್ಣೆ ಹೆಚ್ಚಾಗಿ ಇರಬೇಕು.

ಬೊಜ್ಜು

ಸೊಂಟದ ಸುತ್ತ ಹೆಚ್ಚು ತೂಕ ಇದ್ದರೆ, ಅದು LDL ಕೊಲೆಸ್ಟರಾಲ್‌ ಅನ್ನು ಹೋಗಲಾಡಿಸುವ ನಿಮ್ಮ ದೇಹದ ಸಾಮರ್ಥ್ಯವನ್ನು ತಗ್ಗಿಸಿ, ನಿಮ್ಮ ರಕ್ತದಲ್ಲಿ ಅದರ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ದೇಹ ತೂಕದ ನಿರ್ವಹಣೆ, ಕೊಲೆಸ್ಟರಾಲ್‌ ಮಟ್ಟವನ್ನು ಕಮ್ಮಿ ಮಾಡುವುದರಲ್ಲಿ ನೆರವಾಗುತ್ತದೆ.

ದೈಹಿಕ ಚಟುವಟಿಕೆ

ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಲಸ್ಯದ ಜೀವನಶೈಲಿ, ಸಕ್ಕರೆ ಕಾಯಿಲೆ ಹಾಗು ಹೃದಯ ಸಂಬಂಧಿ ರೋಗಗಳು ಬರಲು ಎರಡು ಮುಖ್ಯ ಕಾರಣಗಳು. ವ್ಯಾಯಾಮಗಳಿಂದ ದೇಹದ ತೂಕ ಇಳಿಯುವುದು. ಆರೋಗ್ಯಪೂರ್ಣ ತೂಕವನ್ನು ಕಾಪಾಡಿಕೊಳ್ಳುವುದರಿಂದ, ಹೃದಯ ಬಲಗೊಂಡು ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಕೊಲೆಸ್ಟರಾಲ್‌ ಮತ್ತು ರಕ್ತದೊತ್ತಡ[2] ತಗ್ಗುತ್ತದೆ. ದೈಹಿಕ ಚಟುವಟಿಕೆಗಳಾದ ವೇಗದ ನಡಿಗೆ, ಜಾಗಿಂಗ್, ಓಡುವುದು, ಸೈಕಲ್ ಸವಾರಿ, ಈಜು ಇಲ್ಲವೆ ಏರೋಬಿಕ್ಸ್‌ಗಳನ್ನು ಪ್ರತಿದಿನ 30 ನಿಮಿಷಗಳ ಕಾಲ ಹಿತಮಿತವಾಗಿ ಮಾಡುವುದರಿಂದ, ನಿಮ್ಮ ಒಟ್ಟಾರೆ ಆರೋಗ್ಯ ಅದ್ಭುತವಾಗಿ ಸುಧಾರಿಸುವುದು.

ನಿದ್ದೆ

ಇಂದಿನ ಬಿರುಸಾದ ಜೀವನಶೈಲಿಯಲ್ಲಿ, ಬಹಳ ಮಂದಿಗೆ ಸಾಕಷ್ಟು ನಿದ್ದೆ ದೊರಕುವುದಿಲ್ಲ. ಯುಎಸ್ ನ್ಯಾಷ್‍ನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್ಸ್ಟಿಟ್ಯೂಟ್ (NHLBI)ನ ಪ್ರಕಾರ, ಸಾಕಷ್ಟು ಆರೋಗ್ಯಕರ ನಿದ್ದೆಯ ಕೊರತೆ ನಿಮ್ಮ ರಕ್ತದೊತ್ತಡದ ಮೇಲೆ ನೇರ ಪ್ರಭಾವ ಬೀರುತ್ತದೆ. ನಿಮಗೆ ಬೊಜ್ಜು, ಹೃದಯರೋಗ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. NHLBIಯು, ಪ್ರತಿ ರಾತ್ರಿ ಕಡಿಮೆ ಅಂದರೂ 7-8 ಗಂಟೆ ನಿದ್ದೆ ಮಾಡಲು ಸೂಚಿಸುತ್ತದೆ.[3]

ಧೂಮಪಾನ

ದೇಹಕ್ಕೆ ಹೆಚ್ಚಿನ ಹಾನಿ ಮಾಡುವ ಜೀವನಶೈಲಿಯ ಕೆಟ್ಟ ಅಭ್ಯಾಸಗಳಲ್ಲಿ ಧೂಮಪಾನಕ್ಕೆ ಬಹುಶಃ ಮೊದಲ ಸ್ಥಾನ ಸಿಗುತ್ತದೆ. ಡಿಸ್ಲಿಪಿಡೀಮಿಯದಲ್ಲಿ ಅದರ ಪಾತ್ರದ ಬಗ್ಗೆ ಹೇಳುವುದಾದರೆ, ಧೂಮಪಾನವು ನಿಮ್ಮ LDL ಕೊಲೆಸ್ಟರಾಲ್‌ಅನ್ನು ಹೆಚ್ಚಿಸಿ, ಅಥೆರೊಸ್‌ಕ್ಲಿರೋಸಿಸ್ ಉಂಟು ಮಾಡಿ, ನಿಮ್ಮ ರಕ್ತದೊತ್ತಡವನ್ನು[4] ಹೆಚ್ಚಿಸುತ್ತದೆ. ನಿಮ್ಮ ಹೃದಯದ ಹಾಗು ಒಟ್ಟಾರೆ ಆರೋಗ್ಯದ ಸುಧಾರಣೆಗೆ ಧೂಮಪಾನ ತ್ಯಜಿಸುವುದು, ನೀವು ಮಾಡಬಹುದಾದ ಅತೀ ಮುಖ್ಯ ಬದಲಾವಣೆಯಾಗಿದೆ.

ಬಹುಕಾಲದ ಅಭ್ಯಾಸಗಳನ್ನು ಬಿಡಲು ಹಾಗು ಹೊಸ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಲು ಬದ್ಧತೆ, ಹಠ ಹಾಗು ಶಿಸ್ತು ಅಗತ್ಯ. ನಿಮ್ಮ ಗುರಿ ತಲುಪುವಲ್ಲಿ ನೀವು ಯಶಸ್ವಿಯಾಗಲು, ನಿಮ್ಮ ದೈನಂದಿನ ಜೀವನದ ಚಟುವಟಿಕೆಗಳನ್ನು ಒಂದು ಮೊಬೈಲ್ ಆ್ಯಪ್‍ನ ಮುಖಾಂತರ ಟ್ರ್ಯಾಕ್ ಮಾಡುವುದು ಅತ್ಯುತ್ತಮ ದಾರಿಗಳಲ್ಲೊಂದು.

ನಿಮ್ಮ ಪೋಷಣೆ, ದೈಹಿಕ ಚಟುವಟಿಕೆಗಳು ಮತ್ತಿತರ ಆರೋಗ್ಯದ ಸ್ಥಿತಿಗಳನ್ನು ನಿಯಮಿತವಾಗಿ ಆ್ಯಪ್‍ನಲ್ಲಿ ದಾಖಲಿಸುವುದರಿಂದ ನಿಮ್ಮ ಅಭ್ಯಾಸಗಳ ಬಗ್ಗೆ ನಿಮಗೆ ಹೆಚ್ಚಿನ ಅರಿವು ಮೂಡುತ್ತದೆ. ಇದರಿಂದ ನಿಮ್ಮ ಆಹಾರ, ವ್ಯಾಯಾಮ ಮತ್ತು ಆರೋಗ್ಯದ ನಡುವಿನ ಪರಸ್ಪರ ಸಂಬಂಧದ ಬಗ್ಗೆ ನಿಮಗೆ ತಿಳಿಯುತ್ತದೆ.


ಆಕರಗಳು:

  1. American Heart Association. Prevention and Treatment of High Cholesterol (Hyperlipidemia). Available at: https://www.heart.org/en/health-topics/cholesterol/prevention-and-treatment-of-high-cholesterol-hyperlipidemia [Accessed 9 April 2019].
  2. The Center for Disease Control and Prevention. Preventing High Cholesterol. Available at: https://www.cdc.gov/cholesterol/prevention.htm [Accessed 9 April 2019].
  3. National Heart, Lung, and Blood Institute. Your Guide to Healthy Sleep. Available at: https://www.nhlbi.nih.gov/health-topics/all-publications-and-resources/your-guide-healthy-sleep [Accessed 9 April 2019].
  4. The Center for Disease Control and Prevention. Smoking and Cardiovascular Disease. Available at: https://www.cdc.gov/tobacco/data_statistics/sgr/50th-anniversary/pdfs/fs_smoking_CVD_508.pdf [Accessed 9 April 2019].

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.