Reading Time: 2 minutes

ಕುಟುಂಬದವರ ಜೊತೆ ಹಬ್ಬದೂಟ ಸವಿಯುವ ಸುಸಂದರ್ಭವೇ ಇಫ್ತಾರ್. ಊಟದ ಟೇಬಲ್ಲಿನ ಮೇಲೆ ರುಚಿಕರವಾದ ತಿನಿಸುಗಳ ಜೊತೆಗೆ ಪ್ರೀತಿಪಾತ್ರರೆಲ್ಲರೂ ಸುತ್ತಲೂ ಕುಳಿತಿದ್ದರೆ ಅದಕ್ಕಿಂತ ಇನ್ನೇನು ಬೇಕು ಹೇಳಿ? ಟೇಬಲ್ಲಿನ ಮೇಲೆ ಬಾಯಲ್ಲಿ ನೀರೂರಿಸುವ ಮಟನ್ ಕರಿ, ಬಿಸಿ ಬಿಸಿ ಕಬಾಬ್, ಸವಿಯಾದ ಹಲೀಂ, ದೇಹ ತಂಪಾಗಿಸುವ ಶರಬತ್ತುಗಳು, ನಾಲಗೆಯ ರುಚಿಗ್ರಂಥಿಗಳನ್ನು ಥಕಥೈ ಎಂದು ಕುಣಿಸುವ ಬಿರಿಯಾನಿ ಹಾಗೂ ಬೇಡ ಎಂದು ಹೇಳಲು ಸಾಧ್ಯವಾಗದ ಸಿಹಿತಿನಿಸುಗಳೆಲ್ಲಾ ಇದೆ ಎಂದು ಊಹಿಸಿಕೊಳ್ಳಿ. ಈ ಸವಿಯೂಟವನ್ನು ಊಹಿಸಿಕೊಂಡೇ ನಿಮ್ಮ ಬಾಯಲ್ಲಿ ನೀರು ಬಂದಿರಬೇಕು. ಆದರೆ ಪದೇ ಪದೇ ಇಂತಹ ಊಟವನ್ನು ಸವಿಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ಚಿಂತಿಸಬೇಡಿ! ನಮ್ಮ ಬಳಿ ಪರಿಹಾರವಿದೆ: ಆಹಾರದ ಬದಲಿ ಆಯ್ಕೆಗಳು!

ಎಲ್ಲೋ ಒಮ್ಮೊಮ್ಮೆ ಸಿಹಿಖಾರ ತುಂಬಿದ ಹಬ್ಬದೂಟಗಳನ್ನು ಸವಿಯುವುದರಿಂದ ತೊಂದರೆ ಇಲ್ಲ, ಆದರೆ ಪ್ರತಿದಿನ ಇದೇ ಕೆಲಸವಾಗಬಾರದು. ರಂಜಾನಿನಲ್ಲೂ ಕೂಡ ಆರೋಗ್ಯಕರ ಆಹಾರ ಸೇವಿಸುವುದನ್ನು ಮುಂದುವರಿಸುವುದು ತುಂಬಾ ಮುಖ್ಯ.

ನಿಮ್ಮ ಅಚ್ಚುಮೆಚ್ಚಿನ ತಿನಿಸುಗಳಿಗೆ ಎಳ್ಳುನೀರು ಬಿಡಿ ಎಂದು ನಾವು ಹೇಳುತ್ತಿಲ್ಲ. ನೀವು ಅವನ್ನು ತಿನ್ನಬಹುದು. ಆದರೆ ಅವನ್ನು ಆರೋಗ್ಯಕರ ತಿನಿಸನ್ನಾಗಿ ಮಾಡುವುದೇ ಇಲ್ಲಿರುವ ತಂತ್ರ. ರಂಜಾನ್ ಹಬ್ಬದೂಟಕ್ಕೆ ನಿಮಗಿರುವ ಆರೋಗ್ಯಕರ ಆಹಾರದ ಕೆಲವು ಬದಲಿ ಆಯ್ಕೆಗಳು ಇಲ್ಲಿವೆ. 

ಬದಲಿ ಆಯ್ಕೆ 1: ಅಡುಗೆಯ ಶೈಲಿಯನ್ನು ಬದಲಿಸಿ!

ಪಕೋಡ, ಸಮೋಸ, ಕಟ್ಲೆಟ್‌ಗಳು: ಈ ತಿನಿಸುಗಳು ನಿಮ್ಮ ಬಾಯಲ್ಲಿ ನೀರೂರಿಸುತ್ತಿವೆಯೇ? ಅವು ರುಚಿಕರವಾಗಿರಬಹುದು ಆದರೆ ಅನಾರೋಗ್ಯಕರ ಕೊಬ್ಬುಗಳು ಅವುಗಳಲ್ಲಿ ತುಂಬಿತುಳುಕುತ್ತಿವೆ. ಇದರ ಬದಲಿ ಆಯ್ಕೆ ಏನು? ಬೇಕ್ ಮಾಡಿ! ಕರಿದ ತಿನಿಸುಗಳಿಗಿಂತ ಬೇಕ್ ಮಾಡಿದ ತಿನಿಸುಗಳು ಆರೋಗ್ಯಕರವಾಗಿರುತ್ತವೆ. ಜೊತೆಗೆ ಅವುಗಳಲ್ಲಿ ಕಡಿಮೆ ಕ್ಯಾಲರಿ ಇರುತ್ತದೆ.(1) ಉದಾಹರಣೆಗೆ, ಕರಿದ ಸಮೋಸಾದಲ್ಲಿ 2301 ಕ್ಯಾಲರಿಗಳಿದ್ದರೆ ಬೇಕ್ ಮಾಡಿದ ಸಮೋಸಾದಲ್ಲಿ 120 ಕ್ಯಾಲರಿಗಳಿರುತ್ತವೆ(2)

ಎಣ್ಣೆಯಲ್ಲಿ ಕರಿಯುವುದು ಇಲ್ಲವೇ ಹೆಚ್ಚು ಎಣ್ಣೆ ಹಾಕಿ ಅಡುಗೆ ಮಾಡುವುದರ ಬದಲಿಗೆ ಸ್ವಲ್ಪ ಎಣ್ಣೆ ಹಾಕಿ ಹುರಿಯುವುದು, ಗ್ರಿಲ್ ಮಾಡುವುದು ಹಾಗೂ ಬೇಕ್ ಮಾಡುವುದು ಒಳ್ಳೆಯ ಆಯ್ಕೆಗಳಾಗಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನೀವು ನಿಮ್ಮ ಆಹಾರವನ್ನು ಗಾಳಿಯಲ್ಲಿ ಉರಿಯಬಹುದು ಅಂದರೆ ಏರ್‌ ಫ್ರೈ ಮಾಡಬಹುದು!

ಬದಲಿ ಆಯ್ಕೆ 2: ಸ್ಟಾಕ್‌ ಕ್ಯೂಬ್‌ಗಳಿಗೆ ‘ಟಾಟಾ’ ಹೇಳಿ!

ಸೂಪ್ ಇಲ್ಲದ ಇಫ್ತಾರ್ ಹಬ್ಬದೂಟವನ್ನು ಊಹಿಸಲು ಸಾಧ್ಯವಿಲ್ಲ. ಹಲವಾರು ಮನೆಗಳಲ್ಲಿ ಇದೇ ಮುಖ್ಯ ಆಹಾರದ ಜೊತೆಗೆ ಉಪವಾಸವನ್ನು ಮುರಿಯಲು ಇದು ಒಳ್ಳೆಯ ಆಯ್ಕೆ. ಆದರೆ, ಹೆಚ್ಚಿನವರು ಸೂಪ್‌ಗಳಿಗೆ ಮಾಂಸ ಇಲ್ಲವೇ ಮೀನಿನಿಂದ ಮಾಡಿದ ತುಂಡುಗಳಾದ ಸ್ಟಾಕ್‌ ಕ್ಯೂಬ್‌ಗಳನ್ನು ಬಳಸುತ್ತಾರೆ. ಇದನ್ನು ಹಾಕಲೇಬಾರದು! ಏಕೆ? ಸ್ಟಾಕ್‌ ಕ್ಯೂಬ್‌ಗಳಲ್ಲಿ ಸೋಡಿಯಂ(3) ಹೆಚ್ಚಾಗಿರುತ್ತದೆ, ಜೊತೆಗೆ ಮೋನೋಸೋಡಿಯಂ ಗ್ಲೂಟಮೇಟ್ (ಎಮ್‌ಎಸ್‍ಜಿ) ಕೂಡ ಇರುತ್ತದೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅದರ ಬದಲಿಗೆ, ನಿಮಗೆ ಬೇಕಿರುವ ಸ್ಟಾಕ್ ಇಲ್ಲವೇ ಸಾರನ್ನು ಮನೆಯಲ್ಲಿ ನೀವೇ ಖುದ್ದಾಗಿ ತಯಾರಿಸಿ. ಮಸಾಲೆ ಪದಾರ್ಥಗಳನ್ನು ಹಾಕಿ ತರಕಾರಿಗಳನ್ನು ನೀರಿನಲ್ಲಿ ಬೇಯಿಸಿದರೆ ರುಚಿಯಾದ ತರಕಾರಿ ಸ್ಟಾಕ್ ಸಿದ್ಧವಾದಂತೆ. ಕೋಳಿ ಮಾಂಸ ಹಾಗೂ ಎಲುಬನ್ನು ಬಳಸಿದರೆ ಕೋಳಿ ಸಾರು ಅಥವಾ ಬ್ರಾತ್ ಸಿದ್ಧ. ಮನೆಯಲ್ಲೇ ಮಾಡಿದ ಸ್ಟಾಕ್‌ಗಳನ್ನು ಬಳಸಿ! ಅವು ರುಚಿಯಾಗಿಯೂ ಇರುತ್ತವೆ, ಆರೋಗ್ಯವಾಗಿಯೂ ಇರುತ್ತವೆ.

ಬದಲಿ ಆಯ್ಕೆ 3: ಜ್ಯೂಸ್ ಹಾಗೂ ತಂಪು ಪಾನೀಯಗಳನ್ನು ಮೂಲೆಗೆ ತಳ್ಳಿ!

ಇಫ್ತಾರ್‌ನಲ್ಲಿ ರೂಹ್ ಅಫ್ಜಾ, ಹಣ್ಣಿನ ರಸ, ಶರಬತ್ತಿನಂತಹ ಪಾನೀಯಗಳನ್ನು ನೀಡುವುದು ತುಂಬಾ ಸಾಮಾನ್ಯ. ಆದರೂ, ಅಂತಹ ಪಾನೀಯಗಳಲ್ಲಿ ಹೆಚ್ಚಿನ ಸಕ್ಕರೆ ಇರುವ ಸಾಧ್ಯತೆ ಇರುತ್ತದೆ. ಅದರಿಂದ ನಿಮ್ಮ ತೂಕ ಹೆಚ್ಚಿ, ಬ್ಲಡ್ ಶುಗರ್ ಮಟ್ಟ ಏರುವ ಸಾಧ್ಯತೆಯೂ ಇರುತ್ತದೆ.

ಅದರ ಬದಲಿಗೆ, ನೀರನ್ನು ಆಯ್ದುಕೊಳ್ಳಿ. ನೀವು ಹೆಚ್ಚು ಕಾಲ ಉಪವಾಸ ಮಾಡುವುದರಿಂದ (8+ ಗಂಟೆಗಳು), ನಿಮ್ಮ ದೇಹದಲ್ಲಿ ನೀರು ಕಡಿಮೆಯಾಗುವ ಸಾಧ್ಯತೆ ಹೆಚ್ಚು. ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾಗುವುದನ್ನು ತಪ್ಪಿಸಲು ಉಪವಾಸ ಮುರಿಯುವಾಗ ಸಾಕಷ್ಟು ನೀರು ಕುಡಿಯುವುದು ತುಂಬಾ ಮುಖ್ಯ. ನೀವು ಉಲ್ಲಾಸಿತರಾಗಲು, ನಿಂಬೆ ಜ್ಯೂಸನ್ನು (ಸಕ್ಕರೆ ಇಲ್ಲದೇ) ಕೂಡ ಕುಡಿಯಬಹುದು ಇಲ್ಲವೇ ಹಣ್ಣುಗಳನ್ನು ನೀರಿಗೆ ನೆನೆ ಹಾಕಿ ಕುಡಿಯಬಹುದು. ಸುಹೂರ್ ಹಾಗೂ ಇಫ್ತಾರ್ ನಡುವೆ ನೀರನ್ನು ಸರಿಯಾದ ಸಮಯಕ್ಕೆ ಆಗಾಗ ತಪ್ಪದೇ ಕುಡಿಯುತ್ತಿರಿ. ದೇಹದ ನೀರಿನ ಮಟ್ಟ ಕಾಯ್ದುಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ!

ಬದಲಿ ಆಯ್ಕೆ 4: ಪೋಷಾಕಾಂಶಗಳು ಹೆಚ್ಚಿರುವ ಸುಹೂರ್ ನಿಮ್ಮದಾಗಿರಲಿ!

ಸುಹೂರ್ ರಂಜಾನಿನ ಬಹುಮುಖ್ಯ ಭಾಗ. ದಿನದ ಉಳಿದ ಭಾಗಕ್ಕೆ ಬೇಕಾದಂತೆ ಅದು ನಿಮ್ಮನ್ನು ಸಜ್ಜುಗೊಳಿಸುತ್ತದೆ. ಸುಹೂರ್ ಹೊತ್ತಿನಲ್ಲಿ ತುಂಬಾ ಸಿಹಿಯಿರದ ಹಾಗೂ ತುಂಬಾ ಉಪ್ಪಿರದ ಆಹಾರವನ್ನು ಆಯ್ದುಕೊಳ್ಳುವುದು ತುಂಬಾ ಒಳ್ಳೆಯದು. ಸಕ್ಕರೆ ತುಂಬಿರುವ ಆಹಾರಗಳು, ಉಪವಾಸ ಶುರುಮಾಡಿದ ಕೆಲವೇ ಗಂಟೆಗಳಲ್ಲಿ ನಿಮಗೆ ಹಸಿವಾಗುವಂತೆ ಮಾಡುತ್ತವೆ. ಇನ್ನು ಉಪ್ಪಿರುವ ಆಹಾರಗಳು ಬಾಯಾರಿಕೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಅವನ್ನು ಬದಿಗೊತ್ತಿ!  

ಅದರ ಬದಲಾಗಿ, ತಾಜಾ ಹಾಲಿನೊಂದಿಗೆ ಇಡೀ-ಕಾಳಿನ ಸೀರಿಯಲ್‌ಗಳು, ಮೊಟ್ಟೆ, ಯೋಗರ್ಟ್, ಹಣ್ಣು, ನಟ್ಸ್ ಹಾಗೂ ಬೀಜಗಳನ್ನು ಆಯ್ದುಕೊಳ್ಳಿ. ಹೆಚ್ಚು ನೀರಿರುವ ಕಲ್ಲಂಗಡಿ ಹಣ್ಣಿನಂತಹ ಹಣ್ಣುಗಳನ್ನು ತಿನ್ನಿ. ಉಪವಾಸ ಇದ್ದಾಗ ದೇಹದ ನೀರಿನಾಂಶ ಕಡಿಮೆಯಾಗದಂತೆ ಇವು ನೆರವಾಗುತ್ತವೆ. ಸಿಟ್ರಸ್ ಇರುವ ಹಣ್ಣುಗಳಾದ ಕಿತ್ತಳೆ, ಮೂಸಂಬಿ, ಅನಾನಸ್, ಇತ್ಯಾದಿ ಹಣ್ಣುಗಳಲ್ಲಿ ನಾರಿನಂಶ ಹೆಚ್ಚಿದ್ದು ಹೊಟ್ಟೆಯನ್ನೂ ತುಂಬಿಸುತ್ತವೆ.

ಹಾಗಾದರೆ, ಗೊತ್ತಾಯಿತಲ್ಲ! ಮೇಲೆ ತಿಳಿಸಿದ 4 ಬದಲಿ ಆಯ್ಕೆಗಳನ್ನು ಪ್ರಯತ್ನಿಸಿ ನೋಡಿ, ಈ ರಂಜಾನ್‌ನಲ್ಲಿ ಆರೋಗ್ಯದಿಂದಿರಿ.

ಸಂಬಂಧ:

  1. [Internet]. 2020 [cited 17 February 2020]. Available from: https://fdc.nal.usda.gov/fdc-app.html#/food-details/533186/nutrients
  2. Baked Samosas Nutrition Facts & Calories [Internet]. Nutritiondata.self.com. 2020 [cited 17 February 2020]. Available from: https://nutritiondata.self.com/facts/recipe/2983143/2
  3. [Internet]. 2020 [cited 17 February 2020]. Available from: https://fdc.nal.usda.gov/fdc-app.html#/food-details/506572/nutrients

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.