Reading Time: 3 minutes

ಹೃದಯ ವೈಫಲ್ಯವು ದೀರ್ಘಕಾಲದ ಸಮಸ್ಯೆಯಾಗಿದ್ದು, ಇದು ಕ್ರಮೇಣ ಉಲ್ಬಣವಾಗುತ್ತಾ ಹೋಗುತ್ತದೆ. ಇದು ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದಾದರೂ, ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು[1]. ಹೃದಯ ವೈಫಲ್ಯ ಹೊಂದಿರುವವರಿಗೆ ಸಾಮಾನ್ಯವಾಗಿ ವೈದ್ಯರು ಕೆಲವು ಒಳ್ಳೆ ಜೀವನಶೈಲಿಗಳನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡುತ್ತಾರೆ, ಇದು ತೊಂದರೆಯ ಬೆಳವಣಿಗೆಯನ್ನು ನಿಧಾನಗೊಳಿಸಿ, ಕುರುಹುಗಳನ್ನು ನಿಯಂತ್ರಣಕ್ಕೆ ತರುವ ಮೂಲಕ ಸಮಸ್ಯೆಯನ್ನು[1] ನಿಭಾಯಿಸಲು ಅವರಿಗೆ ಸಹಾಯ ಮಾಡುತ್ತದೆ.

ಹೃದಯ ವೈಫಲ್ಯ ಎಂದರೇನು?

ದೇಹದ ಬೇಡಿಕೆಗಳನ್ನು ಪೂರೈಸುವಷ್ಟು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಹೃದಯಕ್ಕೆ ಇಲ್ಲದಿದ್ದಾಗ, ಹೃದಯದ ಒಂದು ಬದಿಗೆ ಅಥವಾ ಎರಡೂ ಬದಿಗಳಿಗೂ ತೊಂದರೆ ಆಗುತ್ತದೆ. ಇದರರ್ಥ ಹೃದಯವು ನಿಂತುಹೋಗಿದೆ ಎಂದಲ್ಲ, ಆದರೆ ಹೃದಯವು ತನ್ನ ಪೂರ್ಣ ಸಾಮರ್ಥ್ಯವನ್ನು ಉಪಯೋಗಿಸಿ ರಕ್ತವನ್ನು ಪಂಪ್ ಮಾಡುತ್ತಿಲ್ಲ ಎಂದಷ್ಟೆ[2].

ಹೃದಯದ ಚಟುವಟಿಕೆ ದುರ್ಬಲವಾಗುತ್ತಾ ಹೋದಂತೆ ಈ ಕೆಳಗಿನ ರೋಗಲಕ್ಷಣಗಳಿಗೆ ಕಾರಣವಾಗಬಹುದು[2]:

  • ಶ್ವಾಸಕೋಶದಲ್ಲಿ ರಕ್ತ ಮತ್ತು ನೀರು ನಿಂತುಕೊಳ್ಳುವುದು
  • ಕಾಲು, ಹಿಮ್ಮಡಿ ಗಂಟು ಮತ್ತು ಪಾದಗಳಲ್ಲಿ ನೀರು ಸೇರಿಕೊಳ್ಳುವುದು (ಎಡಿಮಾ)
  • ಸುಸ್ತು
  • ಉಸಿರಾಟದ ತೊಂದರೆ

ಯಾವ ಕಾರಣಗಳಿಗೆ ಹೃದಯ ವೈಫಲ್ಯವಾಗುತ್ತದೆ?

ಹೃದಯ ವೈಫಲ್ಯವು ಸಾಮಾನ್ಯವಾಗಿ ಮತ್ತೊಂದು ಹೃದಯ ಸಮಸ್ಯೆಯ ಕೊನೆಯ ಹಂತವಾಗಿದೆ.

ಹೃದಯ ವೈಫಲ್ಯಕ್ಕೆ ಕಾರಣವಾಗುವ ಸಮಸ್ಯೆಗಳು ಈ ಕೆಳಗಿನಂತಿವೆ[3]:

  • ಕೊರೋನರಿ ಆರ್ಟರಿ ಕಾಯಿಲೆ (ಆರ್ಟರಿಯಲ್ಲಿ ಅಡೆತಡೆ ಉಂಟಾಗುವುದು)
  • ಹೃದಯದ ಕವಾಟಗಳ ಅಸ್ವಸ್ಥತೆ
  • ಅಧಿಕ ರಕ್ತದೊತ್ತಡ
  • ಹುಟ್ಟಿನಿಂದ ಬಂದಂತಹ ಹೃದಯ ಸಮಸ್ಯೆಗಳು
  • ಅನಿಯಮಿತ ಎದೆ ಬಡಿತ
  • ಕಾರ್ಡಿಯೊಮಯೋಪತಿ (ಹೃದಯ ಸ್ನಾಯು ಕಾಯಿಲೆ)
  • ಹೃದಯಾಘಾತ
  • ಶ್ವಾಸಕೋಶದ ಕಾಯಿಲೆ
  • ಡಯಾಬಿಟಿಸ್
  • ಹೈಪರ್‌ಥೈರಾಯ್ಡಿಸಮ್
  • ಅತಿಯಾದ ಆಲ್ಕೋಹಾಲ್‌ನಂತಹ ವಿಷಗಳಿಗೆ ಒಡ್ಡಿಕೊಳ್ಳುವುದು

ಹೃದಯ ವೈಫಲ್ಯ ಹೊಂದಿರುವವರ ಮೇಲೆ ಜೀವನಶೈಲಿಯ ಬದಲಾವಣೆಗಳು ಕೆಲಸ ಮಾಡುತ್ತವೆಯೇ?

ಜೀವನಶೈಲಿಯ ಅಂಶಗಳಾದ ಕಳಪೆ ಆಹಾರ, ಬೊಜ್ಜು ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಹೃದಯ ವೈಫಲ್ಯ ಬೇಗನೆ ಶುರುವಾಗಲು ಕಾರಣವಾಗುತ್ತದೆ ಎಂದು ಅಧ್ಯಯನಗಳಿಂದ ಕಂಡುಬಂದಿದೆ. ಜೀವನಶೈಲಿಯ ನಿರ್ವಹಣೆಯು ಹೃದಯ ವೈಫಲ್ಯವನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ[4].

ನೀವು ಹೃದಯ ವೈಫಲ್ಯವನ್ನು ಹೊಂದಿದ್ದರೆ ಈ ಕೆಳಗಿನ ಉಪಯುಕ್ತ ಸಲಹೆಗಳು ನಿಮಗೆ ಆರೋಗ್ಯದಿಂದಿರಲು ಸಹಾಯ ಮಾಡುತ್ತವೆ[4,5]:

  • ಧೂಮಪಾನವನ್ನು ಬಿಟ್ಟುಬಿಡಿ: ಸಿಗರೇಟ್ ಹೊಗೆಯಲ್ಲಿ ನಿಕೋಟಿನ್ ಇದ್ದು, ಇದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಧೂಮಪಾನವು ರಕ್ತನಾಳಗಳಲ್ಲಿ ಅಂಟಿಕೊಳ್ಳುವಂತಹ ಪದಾರ್ಥಗಳು ಉಳಿದುಕೊಳ್ಳಲು ಕಾರಣವಾಗುತ್ತದೆ. ಧೂಮಪಾನವನ್ನು ಬಿಡುವುದರಿಂದ ಹೃದಯದ ಆರೋಗ್ಯಕ್ಕೆ ಒಳಿತಾಗುತ್ತದೆ.
  • ಆರೋಗ್ಯಕರ ತೂಕವನ್ನು ಕಾಪಾಡಿ: ನಿಮಗೆ ತಕ್ಕುದಾಗಿರುವಂತಹ ಆರೋಗ್ಯಕರ ತೂಕವನ್ನು ಕಾಪಾಡಿಕೊಂಡು ಹೋಗಿ. ಡಯಾಬಿಟಿಸ್ ಮತ್ತು ಹೃದಯ ಸಮಸ್ಯೆಯ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ದಾರಿಗಳಲ್ಲಿ ಇದೂ ಒಂದಾಗಿದೆ.
  • ನೀರಿನ ಸೇವನೆಯ ಬಗ್ಗೆ ನಿಗಾ ಇರಿಸಿ: ಹೃದಯ ವೈಫಲ್ಯ ಹೊಂದಿರುವವರು ದೇಹದಲ್ಲಿ ನೀರನ್ನು ಶೇಖರಿಸಿಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ. ಆದ್ದರಿಂದ, ನೀರಿನ ಸೇವನೆಯ ಬಗ್ಗೆ ನಿಗಾವಹಿಸುವುದು ತುಂಬಾ ಮುಖ್ಯ. ದೇಹದಲ್ಲಿ ನೀರು ಶೇಖರಣೆಯಾಗುವುದನ್ನು ತಡೆಯಲು ನೀವು ಎಷ್ಟು ಪ್ರಮಾಣದಲ್ಲಿ ನೀರನ್ನು ತೆಗೆದುಕೊಳ್ಳಬೇಕೆಂದು ನಿಮ್ಮ ವೈದ್ಯರು ನಿಮಗೆ ತಿಳಿಸಿಕೊಡಬಹುದು.
  • ಆಲ್ಕೋಹಾಲ್ ಕಡಿಮೆ ಮಾಡಿ: ಆಲ್ಕೋಹಾಲ್ ಸೇವನೆಯ ಬಗ್ಗೆ ನಿಮ್ಮ ಡಾಕ್ಟರೊಂದಿಗೆ ಚರ್ಚಿಸಿ. ನಿಮಗೆ ಡಾಕ್ಟರಿಂದ ಒಪ್ಪಿಗೆ ಸಿಕ್ಕಿದರೂ ಕೂಡ, ನಿಮ್ಮ ಆಲ್ಕೋಹಾಲ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳವುದು ಒಳ್ಳೆಯದು.
  • ಕೆಫೀನ್‌ ತಪ್ಪಿಸಿ: ನೀವು ಹೃದಯ ವೈಫಲ್ಯವನ್ನು ಹೊಂದಿದ್ದರೆ ಕೆಫೀನ್‌ ಸೇವನೆಯ ಮೇಲೆ ಮಿತಿ ಹೇರಿ.
  • ಹೃದಯಸ್ನೇಹಿ ಆಹಾರಕ್ರಮ ನಿಮ್ಮದಾಗಿಸಿ: ಟ್ರಾನ್ಸ್-ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು (ಬೆಣ್ಣೆ, ಕೆನೆ ತೆಗೆಯದ ಹಾಲು ಮುಂತಾದ ಡೈರಿ ಉತ್ಪನ್ನಗಳು, ಹಾಗೂ ಕುಕೀಸ್ ಮತ್ತು ಕ್ರ್ಯಾಕರ್‌ಗಳು ಕೂಡ ), ರೆಡ್ ಮೀಟ್, ಸಕ್ಕರೆ ಹಾಕಿ ಸಿಹಿಗೊಳಿಸಿದ ಪಾನೀಯಗಳನ್ನು ಮತ್ತು ಸಿಹಿತಿಂಡಿಗಳನ್ನು ತಪ್ಪಿಸಿ. ಸೋಡಿಯಂ ಸೇವನೆಯ ಮೇಲೆ ಮಿತಿ ಹೇರಿ. ನಿಮ್ಮ ಆಹಾರಕ್ರಮದಲ್ಲಿ ಹಣ್ಣು, ತರಕಾರಿ, ಬೇಳೆಕಾಳುಗಳು ಮತ್ತು ನಟ್ಸ್‌ಗಳನ್ನು ಸೇರಿಸಿಕೊಳ್ಳಿ. ಈ ಆಹಾರಕ್ರಮ ಬದಲವಾಣೆಗಳು ಹೃದಯ ವೈಫಲ್ಯವನ್ನು ತಡೆಗಟ್ಟಬಹುದೆಂದು ಅಧ್ಯಯನಗಳು ತೋರಿಸಿಕೊಟ್ಟಿವೆ[4].
  • ದೈಹಿಕವಾಗಿ ಚಟುವಟಿಕೆಯಿಂದಿರಿ: ದೈಹಿಕ ಚಟುವಟಿಕೆಯನ್ನು ನಿಮ್ಮ ದಿನಚರಿಯ ಒಂದು ಭಾಗವನ್ನಾಗಿಸಿಕೊಳ್ಳಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಫಿಟ್ನೆಸ್ ಯೋಜನೆಯನ್ನು ಹಾಕಿಕೊಳ್ಳಲು ನಿಮ್ಮ ಡಾಕ್ಟರ್ ಅಥವಾ ಫಿಸಿಕಲ್ ಥೆರಪಿಸ್ಟ್‌ಗಳೊಂದಿಗೆ ಚರ್ಚಿಸಿ. ಸ್ನಾಯುಗಳಿಗೆ ಬಲಕೊಡುವ ತಾಲೀಮು ಮತ್ತು ನಡಿಗೆಯಂತ ವ್ಯಾಯಾಮಗಳು ಪ್ರಯೋಜನಕಾರಿಯಾಗಿ ಕಂಡು ಬರುತ್ತವಾದರೂ, ನಿಮ್ಮ ಪಾಡಿಗೆ ನೀವೆ ಇವುಗಳಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮೊದಲು ನಿಮ್ಮ ವೈದ್ಯರ ಸಲಹೆ ಮತ್ತು ಅಭಿಪ್ರಾಯವನ್ನು ಕೇಳುವುದು ಉತ್ತಮ.
  • ಒತ್ತಡವನ್ನು ನಿಭಾಯಿಸಿ: ಯೋಗ, ಉಸಿರಾಟದ ವ್ಯಾಯಾಮ ಮತ್ತು ಧ್ಯಾನವು ಹೃದಯದ ವೈಫಲ್ಯವನ್ನು ನಿಯಂತ್ರಣದಲ್ಲಿಡಲು ಪ್ರಯೋಜನಕಾರಿ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಇದು ಊತ, ನೋವನ್ನು ಕಡಿಮೆ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವ್ಯಾಯಾಮದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪಠಣ ಮಾಡಿಕೊಂಡು ಮಾಡುವ ಧ್ಯಾನದ ತಂತ್ರಗಳು, ಹೃದಯ ವೈಫಲ್ಯವನ್ನು ಹೊಂದಿರುವ ಜನರಿಗೆ ಆತಂಕ ಮತ್ತು ಡಿಪ್ರೆಶನ್‌ ದೂರ ಮಾಡಿಕೊಳ್ಳಲು ಸಹಾಯ ಮಾಡುತ್ತವೆ.
  • ಸಂಪ್ಲಿಮೆಂಟ್‌ಗಳು ನೆರವಾಗಬಹುದು: ನಿಮ್ಮ ವೈದ್ಯರೊಂದಿಗೆ ಮಾತನಾಡಿ ಮತ್ತು ಡಾಕ್ಟರ್ ಸಲಹೆಯ ಆಧಾರದ ಮೇಲೆ ಆ್ಯಂಟಿಆಕ್ಸಿಡೆಂಟ್‌ಗಳನ್ನು ಮತ್ತು ವಿಟಮಿನ್ ಸಂಪ್ಲಿಮೆಂಟ್‌ಗಳಂತಹ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಿ.

ನಿಯಮಿತ ತಪಾಸಣೆಗಳೊಂದಿಗೆ ನಿಮ್ಮ ರೋಗಲಕ್ಷಣಗಳನ್ನು ಪತ್ತೆ ಮಾಡಿ, ತಪ್ಪದೇ ಔಷಧಿಗಳನ್ನು ತೆಗೆದುಕೊಳ್ಳಿ, ರಕ್ತದೊತ್ತಡವನ್ನು ಕಾಪಾಡಿಕೊಳ್ಳಿ ಹಾಗೂ ಹೃದಯ ವೈಫಲ್ಯ ಹೊಂದಿರುವವರ ಲೈಂಗಿಕ ಚಟುವಟಿಕೆ ಹೇಗಿರಬೇಕೆಂಬ ಮಾರ್ಗಸೂಚಿಗಳನ್ನು ಅನುಸರಿಸಿ. ಜ್ವರವು ನಿಮ್ಮ ಹೃದಯದ ಕೆಲಸದ ಮೇಲೆ ಹೆಚ್ಚುವರಿ ಹೊರೆ ಹಾಕುವ ಕಾರಣ, ಫ್ಲೂ ವಿರುದ್ಧ ಲಸಿಕೆ ಪಡೆಯುವುದರಿಂದ ನಿಮಗೆ ಸಹಾಯವಾಗುತ್ತದೆಯೇ ಎಂದು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ನಿಮ್ಮ ದಿನಚರಿಯಲ್ಲಿನ ಈ ಬದಲಾವಣೆಗಳು ನಿಮ್ಮ ಜೀವನದ ಗುಣಮಟ್ಟದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ[5]. ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಿ; ಹೃದಯ ವೈಫಲ್ಯವನ್ನು ಹೊಂದಿದ್ದರೂ ಆರೋಗ್ಯಕರ ಜೀವನವನ್ನು ಆಯ್ಕೆ ಮಾಡಿಕೊಳ್ಳಿ!

References:

  1. NHS. Heart failure [Internet]. [updated 2018 Oct 26; cited 2019 Dec 24]. Available from: https://www.nhs.uk/conditions/heart-failure/.
  2. MedlinePlus. Heart failure [Internet]. [updated 2019 Dec 13; cited 2019 Dec 24]. Available from: https://medlineplus.gov/heartfailure.html.
  3. Harvard Medical School. Heart failure [Internet]. [cited 2019 Dec 24]. Available from: https://www.health.harvard.edu/a_to_z/heart-failure-a-to-z.
  4. Aggarwal M, Bozkurt B, Panjrath G, Aggarwal B, Ostfeld RJ, Barnard ND, et al. Lifestyle Modifications for Preventing and Treating Heart Failure. Journal of the American College of Cardiology [Internet]. 2018 Nov [cited 2020 Jan 21];72(19):2391–405. Available from: http://www.onlinejacc.org/content/72/19/2391
  5. American Heart Association. Lifestyle changes for heart failure [Internet]. [updated 2017 May 31; cited 2019 Dec 24]. Available from: https://www.heart.org/en/health-topics/heart-failure/treatment-options-for-heart-failure/lifestyle-changes-for-heart-failure.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.