ಹೃದಯಾಘಾತದಿಂದ ಬದುಕುಳಿಯುವುದು, ಮಾನಸಿಕವಾಗಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು. ಆದರೆ, ಬದುಕುಳಿದ ಮೇಲೆ, ನಿಮ್ಮ ಆರೋಗ್ಯವನ್ನು ತುಂಬ ಚೆನ್ನಾಗಿ ಕಾಪಾಡಿಕೊಂಡು, ಇನ್ನೊಂದು ಹೃದಯಾಘಾತವಾಗದಂತೆ ನೋಡಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಬೇಕು. ಏಐಐಎಂಎಸ್ನಲ್ಲಿ ಹೃದಯರೋಗತಜ್ಞರಾಗಿರುವ ಡಾ. ಸಂದೀಪ್ ಮಿಶ್ರಾ ಅವರು, ಬಹಳಷ್ಟು ಮಂದಿಗೆ ಮೊದಲ ಬಾರಿ ಹೃದಯಾಘಾತವಾದ ಮೇಲೆ, ಆರೋಗ್ಯಕರ ಜೀವನಶೈಲಿ ಪಾಲಿಸಿದರೆ, ಅವರು ನಲಿವಿನಿಂದ ಕೂಡಿದ ಆರೋಗ್ಯಕರ ಬದುಕನ್ನು ಸವಿಯಬಹುದು ಎಂದು ಹೇಳುತ್ತಾರೆ.
ಹೃದಯಾಘಾತದ ನಂತರ, ಆರೋಗ್ಯಕರ ಜೀವನ ನಡೆಸುವುದು ಹೇಗೆಂದು ತಿಳಿಸುವ ಈ ಕಿರು ಕೈಪಿಡಿಗೆ, ಡಾ.ಮಿಶ್ರಾರವರು ಕೆಲವು ಸಲಹೆಗಳನ್ನು ಸೇರಿಸುತ್ತಾರೆ.
- ನಿಮ್ಮ ಮದ್ದುಗಳ ಕಡೆ ನಿಗಾವಹಿಸಿ:
“ಮೊದಲಿಗೆ, ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಪ್ಪಿಸಲು, ನಿಮ್ಮ ಡಾಕ್ಟರ್ ಕೆಲವು ರಕ್ತ ತೆಳುವಾಗುವ ಮದ್ದನ್ನು ನೀಡಬಹುದು. ನಿಮ್ಮ ಮದ್ದಿನ ಚೀಟಿಯಲ್ಲಿರುವುದನ್ನು ಅರ್ಥ ಮಾಡಿಕೊಂಡು, ಅದನ್ನು ಎಚ್ಚರದಿಂದ ಪಾಲಿಸಿ.” ಎಂದು ಅವರು ಹೇಳುತ್ತಾರೆ. ನಿಮ್ಮ ಕುಟುಂಬದವರು ಕೂಡ ನಿಮ್ಮ ಮದ್ದುಗಳ ಕಡೆ ನಿಗಾವಹಿಸಲಿ. ಡಾಕ್ಟರ್ ರೊಂದಿಗಿನ ಮರು ಭೇಟಿಯನ್ನು ತಪ್ಪಿಸಬೇಡಿ. ಅದರಿಂದ ನಿಮ್ಮ ಹೃದಯದ ಆರೋಗ್ಯಸ್ಥಿತಿಯ ಮೇಲೆ ಇನ್ನೂ ಚೆನ್ನಾಗಿ ನಿಗಾವಹಿಸಬಹುದು.
- ಆರೋಗ್ಯಕರವಾಗಿ ತಿನ್ನುವುದು:
ಹೃದಯಾಘಾತ ಆಗುವ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುವ (ಸಕ್ಕರೆ ಕಾಯಿಲೆ, ಅಧಿಕ ಕೊಲೆಸ್ಟರಾಲ್ ಮತ್ತು ಅಧಿಕ ರಕ್ತದೊತ್ತಡ) ಈ 3 ಅಂಶಗಳು, ಅನಾರೋಗ್ಯಕರ ತಿನ್ನುವ ಅಭ್ಯಾಸಗಳಿಂದ ಬರುವಂಥವು. ಡಾ.ಮಿಶ್ರಾ ಅವರ ಸಲಹೆಯಂತೆ, ಆಹಾರಕ್ರಮದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ.
- ಅಧಿಕ ರಕ್ತದೊತ್ತಡವನ್ನು ಹಿಡಿತದಲ್ಲಿಡಲು, ಉಪ್ಪು ಕಡಿಮೆ ತಿನ್ನಿರಿ
- ಸಕ್ಕರೆ ಕಾಯಿಲೆ ಹಾಗೂ ಕೊಲೆಸ್ಟರಾಲ್ ಮಟ್ಟಗಳನ್ನು ಹಿಡಿತದಲ್ಲಿಡಲು, ತುಂಬ ಸಿಹಿಯಾದ, ಎಣ್ಣೆ ತುಂಬಿದ ಮತ್ತು ಸಂಸ್ಕರಿಸಿದ ತಿನಿಸುಗಳನ್ನು ದೂರವಿಡಿ
- ಹಣ್ಣು, ತರಕಾರಿಗಳು, ನಟ್ಸ್, ಬೇಳೆ ಮತ್ತು ಹೊಟ್ಟು ತೆಗೆಯದ ಕಾಳುಗಳು ತುಂಬಿದ ಆಹಾರಕ್ರಮವನ್ನು ಪಾಲಿಸಿ
- ವನಸ್ಪತಿ ತುಪ್ಪ ಮತ್ತು ಹಸುವಿನ ತುಪ್ಪ ತಿನ್ನುವುದನ್ನು ಪೂರ್ತಿ ನಿಲ್ಲಿಸಿ
- ನಿಮ್ಮ ಆಹಾರಕ್ರಮದಲ್ಲಿ ಎಣ್ಣೆಯ ಅಳತೆ ಕಡಿಮೆ ಮಾಡಿ. ಎರಡು ಬೇರೆ ಬಗೆಯ ಎಣ್ಣೆಗಳನ್ನು ಒಂದಾದ ಮೇಲೊಂದರಂತೆ ಬಳಸುವುದು ಒಳ್ಳೆಯದು
- ರೆಡ್ ಮೀಟ್ ತಿನ್ನುವುದನ್ನು ನಿಲ್ಲಿಸಿ. ಒಮೇಗ-3 ಕೊಬ್ಬು ಹೇರಳವಾಗಿರುವ ಮೀನುಗಳನ್ನು ತಿನ್ನಬಹುದು.
- ಸರಿಯಾಗಿ ವ್ಯಾಯಾಮ ಮಾಡುವ ಬಗೆ:
“ಕೆಲವು ರೋಗಿಗಳು, ಒಮ್ಮೆ ಹೃದಯಾಘಾತ ಆದ ಮೇಲೆ, ಮತ್ತೊಂದು ಹೃದಯಾಘಾತ ಆಗಬಹುದೆಂಬ ಹೆದರಿಕೆಯಿಂದ, ಯಾವುದೇ ತೆರನಾದ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸುತ್ತಾರೆ. ಆದರೆ, ಹಾಗೆ ಮಾಡಬಾರದು. ನೆನಪಿಡಿ, ಸಂಪೂರ್ಣವಾಗಿ ಹಾಸಿಗೆಯಲ್ಲೆ ವಿಶ್ರಾಂತಿ ಪಡೆದರೆ, ನೀವು ಚೇತರಿಸಿಕೊಳ್ಳುವುದು ತಡವಾಗಬಹುದು. ಹಾಗೆಂದುಕೊಂಡು, ಮಿತಿ ಮೀರಿ ವ್ಯಾಯಾಮ ಮಾಡುವುದು ಇಲ್ಲವೆ ಬಿರುಸಿನ ಕೆಲಸ ಮಾಡುವುದು ಕೂಡ ತಪ್ಪು. ವ್ಯಾಯಾಮ ಶುರುಮಾಡುವ ಮೊದಲು, ನಿಮ್ಮ ಡಾಕ್ಟರ್ ಬಳಿ ಚರ್ಚಿಸಿ. ಭಾರ ಎತ್ತುವುದು ಮತ್ತು ದೇಹ ಹುರಿಗೊಳಿಸುವ ವ್ಯಾಯಾಮಗಳನ್ನು ಮಾಡದಿರಿ. ನಡಿಗೆ, ಈಜುವುದು ಮುಂತಾದ ಸುಳುವಾದ ವ್ಯಾಯಾಮಗಳಿಂದ ಶುರುಮಾಡಿ. ಜೊತೆಗೆ ಕೈಕಾಲು ನೀಡುವ ವ್ಯಾಯಾಮಗಳನ್ನೂ ಮಾಡಿ.” ಎಂದು ಡಾ.ಮಿಶ್ರಾ ಸೇರಿಸುತ್ತಾರೆ.
- ಮದ್ಯಪಾನದಿಂದ ದೂರವಿರಿ
ಡಾ.ಮಿಶ್ರಾ ಅವರು ಹೇಳುವಂತೆ, ಪಾಶ್ಚಿಮಾತ್ಯರ ಮೇಲೆ ನಡೆಸಿರುವ ಅಧ್ಯಯನಗಳು, ಹಿತಮಿತವಾಗಿ ಮದ್ಯಪಾನ ಮಾಡುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದಿರಬಹುದು ಎಂದು ಸಲಹೆ ನೀಡುತ್ತವೆ; ಆದರೆ, ಭಾರತೀಯರಿಗೆ ಇದು ಅನ್ವಯಿಸುವಂತಹ ಯಾವ ಅಧ್ಯಯನಗಳೂ ನಡೆದಿಲ್ಲ. ಹಾಗಾಗಿ, ನಿಮ್ಮ ಹೃದಯಕ್ಕೆ ಯಾವುದು ಒಳ್ಳೆಯದೆಂದು ಡಾಕ್ಟರ್ ಬಳಿ ಚರ್ಚಿಸಿ.
- ಧೂಮಪಾನ ಬಿಡುವುದು:
ಹೃದಯಾಘಾತದ ನಂತರವೂ, ಧೂಮಪಾನ ಮಾಡುತ್ತಿದ್ದರೆ, ಇನ್ನೊಂದು ಆಘಾತಕ್ಕೆ ಹತ್ತಿರವಾಗುತ್ತ ಹೋಗುವಿರಿ ಎಂದು ಡಾ.ಮಿಶ್ರಾ ಅಭಿಪ್ರಾಯ ಪಡುತ್ತಾರೆ. ಬರಿ ಧೂಮಪಾನವೊಂದೆ ಅಲ್ಲ, ಯಾವುದೇ ಬಗೆಯ ತಂಬಾಕು ಸೇವನೆಯನ್ನು ಬಿಡಬೇಕು. ಜೊತೆಗೆ, ನೀವು ಹೊಗೆ ಕುಡಿಯಬಹುದಾದ, ಇತರರು ಧೂಮಪಾನ ಮಾಡುವ ಜಾಗಗಳಿಂದ ದೂರವಿರಿ. ಯಾಕೆಂದರೆ, ಇದೂ ಕೂಡ ನಿಮ್ಮ ಹೃದಯದ ಆರೋಗ್ಯಕ್ಕೆ ಅಷ್ಟೇ ಮಾರಕವಾಗಬಹುದು.
- ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು:
ಡಾ. ಮಿಶ್ರಾರವರು, ಹೇಗೆ ಹೃದಯಾಘಾತದಿಂದ ಬದುಕುಳಿದ ಮೇಲೆ, ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಉಂಟಾಗಬಹುದೆಂದು ಕೂಡ ಹೇಳುತ್ತಾರೆ. ಅದು ಸಹಜವೆ ಸರಿ. ಅದರಿಂದ ಹಸಿವಾಗದಿರುವುದು, ತಲ್ಲಣ, ಯಾರೊಡನೆಯೂ ಬೆರೆಯದಿರುವುದು, ಸಕ್ರಿಯರಾಗುವ ಭಯ ಮತ್ತು ಕೆಲವು ಸನ್ನಿವೇಶಗಳಲ್ಲಿ ಖಿನ್ನತೆ ಸಹ ಉಂಟಾಗಬಹುದು. ಈ ಸಮಸ್ಯೆಗಳನ್ನು ಕಡೆಗಣಿಸದಿರಿ. ಸಮಯಕ್ಕೆ ಸರಿಯಾಗಿ ನೆರವು ಪಡೆದುಕೊಳ್ಳಿ. ನಿಮ್ಮ ಮನಸ್ಸಿನ ಸ್ಥಿತಿಯ ಬಗ್ಗೆ ಹಿಂಜರಿಕೆಯಿಲ್ಲದೆ ವೈದ್ಯರೊಂದಿಗೆ ಚರ್ಚಿಸಿ. ನೀವು ಮತ್ತೆ ಮೊದಲಿನಂತಾಗಲು, ಕೌನ್ಸಲಿಂಗ್ ಬೇಕಾದರೆ, ತೆರೆದ ಮನಸ್ಸಿನಿಂದ ಅದನ್ನು ಪಡೆಯಿರಿ.