ಹೃದ್ರೋಗಗಳು ಹೆಂಗಸರಿಗಿಂತ ಗಂಡಸರನ್ನು ಹೆಚ್ಚಾಗಿ ಕಾಡುತ್ತವೆಯೆಂದು ಹಲವರು ನಂಬುತ್ತಾರೆ. ಇದು ತಪ್ಪು ಕಲ್ಪನೆ! ಹೃದ್ರೋಗಗಳು, ಗಂಡಸರು ಹೆಂಗಸರು ಇಬ್ಬರನ್ನೂ ಕಾಡುತ್ತವೆ. ಹೆಂಗಸರಿಗಿಂತ ಗಂಡಸರನ್ನು ಹೆಚ್ಚಾಗಿ ಹೃದಯದ ತೊಂದರೆಗಳು ಹಿಂಡಿ ಹಿಪ್ಪೆ ಮಾಡುತ್ತವೆಯೆಂದು ನಾವು ಕೇಳುವುದಕ್ಕೆ ಕಾರಣ, ಹೆಂಗಸರನ್ನು ಎಸ್ಟ್ರೊಜೆನ್ ಎಂಬ ಹಾರ್ಮೋನ್ ಕಾಪಾಡುತ್ತದೆ. ಇದು ಹೆಂಗಸರಲ್ಲಿ ಮುಖ್ಯವಾದ ಸೆಕ್ಸ್ ಹಾರ್ಮೋನ್ ಆಗಿದ್ದು, ಅವರ ಮುಟ್ಟಿನ ಚಕ್ರ ಸರಿಯಾಗಿ ಕೆಲಸ ಮಾಡಲು ಕಾರಣವಾಗಿದೆ.[1]
ಹೆಂಗಸು, ಮಗುವನ್ನು ಹೆರುವ ಹರೆಯಕ್ಕೆ ಬಂದಾಗ, ಆಕೆಯ ಅಂಡಾಶಯವು ಎಸ್ಟ್ರೊಜೆನ್ ಉತ್ಪತ್ತಿ ಮಾಡುತ್ತದೆ. ಹೆಂಗಸರಿಗೆ ವಯಸ್ಸಾಗುತ್ತಾ, ಮುಟ್ಟು ನಿಲ್ಲುವ ಹಂತ ಬಂದಾಗ, ಎಸ್ಟ್ರೊಜೆನ್ ಮಟ್ಟದಲ್ಲಿ ಇಳಿಕೆ ಕಂಡುಬರುತ್ತದೆ. 60 ರ ಹರೆಯಕ್ಕೂ ಮುನ್ನ, ಗಂಡಸರಿಗೆ ಹೋಲಿಸಿದಾಗ, ಹೆಂಗಸರಿಗೆ ಹೃದ್ರೋಗಗಳು ಬರುವ ಅಪಾಯ ಕಡಿಮೆಯಿದೆಯೆಂದು ತೋರಿಸಲಾಗಿದೆ. 60 ರ ಹರೆಯ ದಾಟಿದ ಮೇಲೆ, ಹಲವು ಬಗೆಯ ಹೃದಯ ಮತ್ತು ರಕ್ತನಾಳಗಳ ಕಾಯಿಲೆ ಬರುವ ಸಾಧ್ಯತೆ, ಗಂಡಸರಿಗಿರುವಷ್ಟೆ ಹೆಂಗಸರಿಗೂ ಇದೆ. [2,3]
ಎಸ್ಟ್ರೊಜೆನ್ನ ಪಾತ್ರವೇನು?
ಎಸ್ಟ್ರೊಜೆನ್, ಹೃದಯ ಮತ್ತು ರಕ್ತನಾಳಗಳನ್ನು ಕಾಪಾಡುವ ಪಾತ್ರ ನಿರ್ವಹಿಸುತ್ತದೆ. ಅದು ರಕ್ತನಾಳಗಳ ಅಗಲ ಕಿರಿದಾಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ, ಲಿಪಿಡ್ ಮೆಟಬಾಲಿಸಮ್ ಹಾಗೂ ರಕ್ತ ಹೆಪ್ಪುಗಟ್ಟುವಿಕೆಗೂ ಕಾರಣವಾಗುತ್ತದೆ. ಈ ಎಲ್ಲಾ ಕೆಲಸಗಳು, ಹೃದಯದ ಕಾರ್ಯನಿರ್ವಹಣೆಯ ಮೇಲೆ ನೇರವಾದ ಇಲ್ಲವೆ ಪರೋಕ್ಷವಾದ ಪ್ರಭಾವ ಬೀರುತ್ತವೆ. ರಕ್ತನಾಳಗಳ ಗೋಡೆಯ ಮೇಲೆ, ರಕ್ತ ಹೆಪ್ಪುಗಟ್ಟುವುದು ಇಲ್ಲವೆ ಮೇಣದಂತಹ ಪದಾರ್ಥ ಅಂಟಿಕೊಳ್ಳುವುದರಿಂದ, ದೇಹದ ಬೇರೆ ಬೇರೆ ಅಂಗಗಳಿಗೆ ರಕ್ತದ ಹರಿವು ಕಡಿಮೆಯಾಗಬಹುದು. ಸಣ್ಣ ರಕ್ತನಾಳಗಳು ಇದಕ್ಕೆ, ತುಂಬ ಸುಲಭವಾಗಿ ತುತ್ತಾಗುತ್ತವೆ. ಅಂತಹ ತೊಂದರೆಯನ್ನು ಮೈಕ್ರೊವ್ಯಾಸ್ಕ್ಯುಲರ್ ಕೊರೊನರಿ ಆರ್ಟರಿ ರೋಗ ಎನ್ನುವರು. ದೇಹದ ಹೊರಗೆ, ಅದರ ಕುರುಹುಗಳು ಕಾಣಿಸಬಹುದು ಇಲ್ಲವೆ ಕಾಣಿಸದೆಯೂ ಇರಬಹುದು.
ಸುಮಾರು 50% ಹೆಂಗಸರಿಗೆ ಎದೆನೋವು ಬರಬಹುದು. ಆದರೆ, 10% ನಷ್ಟು ಹೆಂಗಸರಿಗೆ ಯಾವ ಕುರುಹುಗಳೂ ಕಾಣಿಸದು. 4 ಯಾವ ಹೆಂಗಸರಿಗೆ ಎದೆನೋವು ಕಾಣಿಸಿಕೊಳ್ಳುವುದೊ, ಅವರಿಗೆ ಭವಿಷ್ಯದಲ್ಲಿ ಗಂಭೀರ ಹೃದಯದ ತೊಂದರೆಗಳು ಆಗುವ ಸಾಧ್ಯತೆ ಹೆಚ್ಚಾಗಿದೆಯೆಂದು, ನೆದರ್ಲ್ಯಾಂಡ್ಸ್ನ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನದ ಪ್ರಕಾರ, ಹೃದ್ರೋಗಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು, ಹೆಂಗಸರು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಲು ಕ್ರಮಗಳನ್ನು ಕೈಗೊಳ್ಳುವುದು ತುಂಬ ಮುಖ್ಯ.[3]
ಇಂತಹ ಪರಿಸ್ಥಿತಿಗಳಿಂದ ದೂರವಿರಲು ನೀವೇನು ಮಾಡಬಹುದು?
ಮುಟ್ಟು ನಿಂತ ಮೇಲೆ, ಕಾಯಿಲೆಗಳು ಬರುವ ಅಪಾಯ ಇದ್ದೇ ಇದೆ. ಆ ಪಟ್ಟಿಯಲ್ಲಿ, ಹೃದ್ರೋಗ ಗಮನಾರ್ಹವಾದುದು. ಮುಟ್ಟು ನಿಲ್ಲುವುದು ಸಹಜ ಕ್ರಿಯೆ. ಅದನ್ನು ನೀವು ತಡೆಯಲು ಆಗುವುದಿಲ್ಲ. ಆದರೆ, ಹೃದಯದ ತೊಂದರೆಗಳು ಆಗುವುದನ್ನು ಆದಷ್ಟೂ ತಡ ಮಾಡಲು, ನೀವು ಕೆಲವು ಕ್ರಮಗಳನ್ನು ಕೈಗೊಳ್ಳಬಹುದು.
ಕೆಲವು ಉಪಯುಕ್ತ ಪರಿಹಾರಗಳು ಇಲ್ಲಿವೆ:
- ನಿಮ್ಮ ಕೊಲೆಸ್ಟರಾಲ್ ಮಟ್ಟದ ಮೇಲೊಂದು ಕಣ್ಣಿಡಿ:
ನಿಮಗೆ ವಯಸ್ಸಾದಂತೆ, ಎಲ್ಡಿಎಲ್ (ಕೆಟ್ಟ ಕೊಲೆಸ್ಟರಾಲ್) ನ ಮಟ್ಟ ಏರಬಹುದು ಹಾಗೂ ಎಚ್ಡಿಎಲ್ (ಒಳ್ಳೆಯ ಕೊಲೆಸ್ಟರಾಲ್)ನ ಮಟ್ಟ ಕುಸಿಯಬಹುದು. ದೇಹದಲ್ಲಿ ಆರೋಗ್ಯಕರ ಕೊಲೆಸ್ಟರಾಲ್ ಮಟ್ಟ ಇರಬೇಕೆಂದರೆ, ನಿಮ್ಮ ಆಹಾರಕ್ರಮದಲ್ಲಿ, ನಾರು ಹೆಚ್ಚಾಗಿರುವ ಆಹಾರ ಇಲ್ಲವೆ ಹೊಟ್ಟು ತೆಗೆಯದ ಕಾಳುಗಳನ್ನು ಸೇರಿಸುವುದು ಒಳ್ಳೆಯದು.
- ಮುಟ್ಟು ನಿಂತ ಮೇಲೆ ಕೂಡ, ಎಂದಿನಂತೆ ವ್ಯಾಯಾಮ ಮಾಡುತ್ತಲೇ ಇರಿ:
ಹೃದ್ರೋಗಗಳ ಅಪಾಯದಿಂದ ದೂರವಿರಲು, ಹೆಂಗಸರು ವಾರಕ್ಕೆ ಕಡಿಮೆ ಅಂದರೂ 150 ನಿಮಿಷಗಳಷ್ಟು ವ್ಯಾಯಾಮ ಮಾಡಬೇಕೆಂದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಸೂಚಿಸುತ್ತದೆ. ನಿಮ್ಮ ತೂಕ ಸರಾಸರಿ ಮಿತಿಗಿಂತ ಹೆಚ್ಚಿದ್ದರೆ, ವಾರದಲ್ಲಿ 300 ನಿಮಿಷಗಳಷ್ಟು ವ್ಯಾಯಾಮ ಮಾಡಲು ಪ್ರಯತ್ನಿಸಿ. ಅಂದರೆ, ಅದು ವಾರದಲ್ಲಿ 5 ದಿನ, 1 ಗಂಟೆಯ ದೈಹಿಕ ಚಟುವಟಿಕೆಗೆ ಸಮ. ದೈಹಿಕ ಚಟುವಟಿಕೆ ಎಂದರೆ, ಯಾವಾಗಲೂ ಜಿಮ್ಗೆ ಹೋಗಿ ಕಸರತ್ತು ಮಾಡುವುದು ಎಂದಲ್ಲ. ಕುಣಿತ, ಸೈಕ್ಲಿಂಗ್ ಇಲ್ಲವೆ ಈಜುವುದನ್ನು ಕೂಡ ಮಾಡಬಹುದು.
- ಧೂಮಪಾನ ಬಿಡಿ:
ಧೂಮಪಾನವು ಅನಾರೋಗ್ಯಕರ ಅಭ್ಯಾಸಗಳಲ್ಲಿ ಒಂದಾಗಿದ್ದು, ಅದು ನಿಮ್ಮ ಹಾರ್ಮೋನ್ ಮಟ್ಟಗಳಲ್ಲಿ ಏರುಪೇರು ಉಂಟುಮಾಡಬಹುದು, ರಕ್ತ ಹೆಪ್ಪುಗಟ್ಟುವುದನ್ನು ಹೆಚ್ಚಿಸಬಹುದು ಹಾಗೂ ನಿಮ್ಮ ರಕ್ತನಾಳಗಳ ಬಾಗುವಿಕೆಯನ್ನು ಕಡಿಮೆ ಮಾಡಬಹುದು. ಈ ಎಲ್ಲ ಸಂಗತಿಗಳು ನೇರವಾಗಿ, ನಿಮಗೆ ಹೃದ್ರೋಗ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಹಾಗಾಗಿ ಈ ಅಭ್ಯಾಸಕ್ಕೆ ಎಳ್ಳುನೀರು ಬಿಡಿ.
- ಸರಿಯಾದ ಪೋಷಕಾಂಶಗಳನ್ನು ತಿನ್ನಿರಿ:
ಹಿರಿಯರು ಹೇಳಿದಂತೆ, ದೇಹವೇ ದೇಗುಲ; ಅದನ್ನು ಸರಿಯಾಗಿ ನೋಡಿಕೊಳ್ಳಿ. ಹೃದ್ರೋಗಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು, ನೀವು ಏನೇನು ತಿನ್ನುತ್ತಿರುವಿರಿ ಎಂಬುದರ ಕಡೆ ಗಮನ ಕೊಡುವುದು ತುಂಬ ಮುಖ್ಯ. ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಹೆಚ್ಚಾಗಿ, ಹಣ್ಣು, ತರಕಾರಿಗಳು, ಮೀನು ಹಾಗೂ ನಟ್ಸ್ ಗಳನ್ನು ಸೇರಿಸಿ. ಸಕ್ಕರೆ, ರೆಡ್ ಮೀಟ್ ಮತ್ತು ಹೆಚ್ಚು ಕೊಬ್ಬಿರುವ ತಿನಿಸುಗಳನ್ನು ಮಿತವಾಗಿ ತಿನ್ನಿ. ಒಮ್ಮೊಮ್ಮೆ, ಪೂರ್ತಿ ಕೆನೆ ಹಾಲಿನ ಬದಲು, ಕೆನೆ ತೆಗೆದ ಹಾಲನ್ನು ಬಳಸಿ.
ಮುಟ್ಟು ನಿಲ್ಲುವ ಕ್ರಿಯೆ ಕಷ್ಟಕರವೆನಿಸಬಹುದು, ಆದರೆ ಈ ಸಲಹೆಗಳನ್ನು ಪಾಲಿಸಿದರೆ, ಬದಲಾವಣೆ ಸುಲಭವಾಗುವುದು. ನಿಮ್ಮ ಆರೋಗ್ಯ ಸರಿಯಾಗಿ ನೋಡಿಕೊಳ್ಳಿ. ನಿಮ್ಮ ಇತರ ಕೆಲಸಗಳಿಗೆ ಸಮಯ ನೀಡುವಂತೆ, ನಿಮ್ಮ ದೇಹದ ಕಡೆಗೂ ಗಮನ ಹರಿಸಿ. ತುಂಬ ತ್ರಾಸೆನಿಸಿದರೆ, ನಿಮ್ಮ ವೈದ್ಯರೊಂದಿಗೆ ಮಾತನಾಡಿ ಇಲ್ಲವೆ ಒಂದು “ಸಪೋರ್ಟ್ ಗ್ರೂಪ್” ಸೇರಿಕೊಳ್ಳಿ. ಹೋರಾಡಲು ಮನಸ್ಸು ಮಾಡಿದ ಮೇಲೆ, ಯಾವ ಸವಾಲು ಕೂಡ ನಿಮ್ಮನ್ನು ಹಿಮ್ಮೆಟ್ಟಿಸದು!
ಉಲ್ಲೇಖಗಳು:
1. Menopause and heart disease [Internet]. [updated 2015 Jul 31; cited 2019 Jul 23]. Available from: https://www.heart.org/en/health-topics/consumer-healthcare/what-is-cardiovascular-disease/menopause-and-heart-disease.
2. Ischemic Heart Disease [Internet]. [cited 2019 Jul 23]. Available from: https://www.nhlbi.nih.gov/health-topics/ischemic-heart-disease.
3. Elias-Smale SE, Günal A, Maas AH. Gynecardiology: Distinct patterns of ischemic heart disease in middle-aged women. Maturitas. 2015 Jul;81(3):348-52. doi: 10.1016/j.maturitas.2015.04.012.
4. Chiu MH, Heydari B, Batulan Z, Maarouf N, Subramanya V, Schenck-Gustafsson K, O’Brien ER. Coronary artery disease in post-menopausal women: are there appropriate means of assessment? Clin Sci (Lond). 2018 Sep 5;132(17):1937-1952. doi: 10.1042/CS20180067.