heart disease treatment medical tests
Reading Time: 2 minutes

“ಹೃದಯ ರಕ್ತನಾಳಗಳ ಕಾಯಿಲೆಗೆ ಹೃದಯ ವೈಫಲ್ಯವನ್ನು ಆರಂಭದ ಹಂತದಲ್ಲಿ ಗುರುತಿಸುವುದೇ ಮಹಾಮದ್ದು ” 1993 ರಲ್ಲಿ ಹೀಗೆಂದವರು ಸರ್ ಥಾಮಸ್ ಲೆವಿಸ್. ಇವರು ಬ್ರಿಟಿಷ್ ಕಾರ್ಡಿಯಾಕ್ ಸೊಸೈಟಿಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ವಿಪರ್ಯಾಸ ನೋಡಿ, 1945 ರಲ್ಲಿ ಅವರೂ ಕೂಡ ಹೃದಯಾಘಾತದಿಂದ ನಿಧನರಾದರು. 

ಆ ಸಮಯದಲ್ಲಿ ಒಳ್ಳೆಯ ತಪಾಸಣಾ ಸೌಲಭ್ಯವಿದ್ದಿದ್ದರೆ ಅವರಿನ್ನೂ ಹೆಚ್ಚು ಕಾಲ ಬದುಕಬಹುದಿತ್ತು[1]

2019ನೆ ವರ್ಷದಲ್ಲಿರುವ ನಿಮಗೆ ಹೃದಯದ ಸಮಸ್ಯೆ ನಿಖರವಾಗಿ ಪತ್ತೆಯಾಗುವುದರ ಬಗ್ಗೆ ಚಿಂತೆ ಬೇಡ. ತೊಂದರೆಯಲ್ಲಿರುವ ಹೃದಯದ ಸ್ಥಿತಿಗತಿಯ ಬಗ್ಗೆ ತಿಳಿಯುವ ಅತ್ಯುತ್ತಮ ಸಾಧನಗಳು, ತಪಾಸಣೆಯ ಕ್ರಮಗಳು ಇಂದಿನ ಡಾಕ್ಟರ್‌ಗಳ ಬಳಿ ಇವೆ. ಇಂತಹ ಕೆಲವು ಸಾಧನಗಳನ್ನು ನೀವೂ ಯಾವಾಗಲಾದರೂ ನೋಡಿರಬಹುದು. ಒಂದೇ ಸಮಸ್ಯೆಯನ್ನು ಪತ್ತೆ ಹಚ್ಚಲು ಇಷ್ಟೊಂದು ಪರೀಕ್ಷೆಗಳನ್ನು ಏಕೆ ಮಾಡಿಸಬೇಕು ಎಂದು ನೀವು ಅಚ್ಚರಿ ಪಟ್ಟಿದ್ದಿದೆಯೇ? ಹಾಗಾದರೆ ಬನ್ನಿ, ಅವುಗಳ ಬಗ್ಗೆ ತಿಳಿದುಕೊಳ್ಳೋಣ.

1. ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ):

ಯಾರಾದರೂ ಹೃದಯಕ್ಕೆ ಸಂಬಂಧಿಸಿದ ಪರೀಕ್ಷೆಗಳ ಬಗ್ಗೆ ಮಾತನಾಡುತ್ತಿದ್ದರೆ ಮೊಟ್ಟಮೊದಲಿಗೆ ನಮ್ಮ ಮನಸ್ಸಿಗೆ ಬರುವುದು ಇಸಿಜಿ ಪರೀಕ್ಷೆ. ನಿಜಕ್ಕೂ ಇದು ಹೃದಯಕ್ಕೆ ಸಂಬಂಧಪಟ್ಟ ಪ್ರಮುಖ ತಪಾಸಣೆಗಳಲ್ಲಿ ಒಂದಾಗಿದೆ. ECG ಪರೀಕ್ಷೆ ಮಾಡಿಸಿಕೊಳ್ಳುವಾಗ ಯಾವುದೇ ರೀತಿಯ ನೋವಾಗುವುದಿಲ್ಲ, ಪರೀಕ್ಷೆ ಮಾಡುವವರು ಎದೆಯ ಮೇಲೆ ಎಲೆಕ್ಟ್ರೋಡ್‌ಗಳನ್ನು ಅಂಟಿಸುತ್ತಾರೆ, ಅದು ಹೃದಯದ ಲಯವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ. ಎದೆಬಡಿತದ ಮಾದರಿಯಲ್ಲಿ ಏನಾದರೂ ಅಸಹಜತೆಗಳಿದ್ದರೆ ಅವುಗಳನ್ನಿದು ಡಾಕ್ಟರಿಗೆ ತಿಳಿಸುತ್ತದೆ; ಉದಾಹರಣೆಗೆ, ಒಂದು ನಿಮಿಷಕ್ಕೆ ತುಂಬಾ ಹೆಚ್ಚು ಅಥವಾ ಅಥವಾ ತುಂಬಾ ಕಡಿಮೆ ಬಡಿತಗಳು, ತುಂಬಾ ವೇಗವಾದ ಅಥವಾ ನಿಧಾನವಾದ ಬಡಿತಗಳು, ಅಥವಾ ಎರಡು ಬಡಿತಗಳ ನಡುವೆ ಏನಾದರೂ ಅಸಹಜತೆ ಇರುವುದು, ಇತ್ಯಾದಿ.

2. ಒತ್ತಡದ ಪರೀಕ್ಷೆ ಅಥವಾ ವ್ಯಾಯಾಮದಿಂದಾಗುವ ಒತ್ತಡದ ಪರೀಕ್ಷೆ:

ನಿಮಗೆ ಇದರ ಅನುಭವವೂ ಇರಬಹುದು ಅಥವಾ ಯಾವುದಾದರೂ ಆರೋಗ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ನೀವಿದನ್ನು ನೋಡಿರಬಹುದು. ದೈಹಿಕ ಚಟುವಟಿಕೆಗಳಿಗೆ ನಿಮ್ಮ ಹೃದಯ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ತಿಳಿಯಲು ಈ ಪರೀಕ್ಷೆಯನ್ನು ಮಾಡುತ್ತಾರೆ. ಹೀಗಾಗಿ ಪರೀಕ್ಷೆ ಮಾಡುವ ತಂತ್ರಜ್ಞರು ಅಥವಾ ನರ್ಸ್ ನಿಮಗೊಂದು ಹಾರ್ಟ್‌ ಮಾನಿಟರನ್ನು ಜೋಡಿಸಿ, ಟ್ರೆಡ್‌ಮಿಲ್ ಮೇಲೆ ನಡೆಯಲು ಹೇಳುತ್ತಾರೆ. ಬರುಬರುತ್ತಾ ವೇಗವಾಗಿ ನಡೆಯಲು ಹೇಳುತ್ತಾರೆ. ಬಳಿಕ ನಿಮ್ಮನ್ನು ಮಲಗಿಸಿ ರಕ್ತದೊತ್ತಡವನ್ನು ಪರೀಕ್ಷಿಸುತ್ತಾರೆ. ಈ ಪರೀಕ್ಷೆಯಿಂದ, ವ್ಯಾಯಾಮ ಮಾಡುವಾಗ ನಿಮ್ಮ ಹೃದಯಕ್ಕೆ ರಕ್ತ ಹರಿಯುವುದೇನಾದರು ಕಡಿಮೆಯಾಯಿತೆ ಎಂಬುದನ್ನು ತಿಳಿಯಲು ಸಾಧ್ಯವಾಗುವುದು. ಇದರಿಂದ ನಿಮಗೆ ಹೃದಯದ ಅಪಧಮನಿಗಳ ಕಾಯಿಲೆಯ ಅಪಾಯವಿದ್ದರೆ ಅದನ್ನು ಸುಲಭವಾಗಿ ಪತ್ತೆ ಹಚ್ಚಬಹುದು(ಹೃದಯದ ರಕ್ತನಾಳಗಳು ಬ್ಲಾಕ್ ಆಗಿರುವುದು)

3. ಎಕೋಕಾರ್ಡಿಯೋಗ್ರಫಿ ಅಥವಾ ಎಕೋ ಪರೀಕ್ಷೆ:

ಎಕೋ ಪರೀಕ್ಷೆಯು ಹೃದಯಕ್ಕೆ ಮಾಡುವ ಅಲ್ಟ್ರಾಸೌಂಡ್ ಪರೀಕ್ಷೆಯಾಗಿದೆ. ನರ್ಸ್ ಅಥವಾ ತಂತ್ರಜ್ಞರು ಮಿಡಿಯುತ್ತಿರುವ ಹೃದಯದ ಚಿತ್ರಗಳನ್ನು ತೆಗೆದುಕೊಳ್ಳುತ್ತಾರೆ. ಈ ಚಿತ್ರಗಳು ಹೃದಯದ ಸ್ನಾಯುಗಳು ಎಷ್ಟು ದಪ್ಪಗಿವೆ ಮತ್ತು ಹೃದಯವು ರಕ್ತವನ್ನು ಎಷ್ಟು ಚೆನ್ನಾಗಿ ಪಂಪ್ ಮಾಡುತ್ತಿದೆ ಎಂಬುದನ್ನು ತೋರಿಸುತ್ತವೆ. ಹೃದಯದ ಸ್ನಾಯು ದೊಡ್ಡದಾಗಿದ್ದರೆ ಅಥವಾ ಒಂದು ನಿಶ್ಚಿತ ಸಮಯದಲ್ಲಿ ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ಡಾಕ್ಟರ್ ಅದನ್ನು ಅರ್ಥಮಾಡಿಕೊಳ್ಳಲು ಈ ಪರೀಕ್ಷೆ ಸಹಾಯ ಮಾಡುತ್ತದೆ. 

4. ಎದೆಯ ಎಕ್ಸ್‌-ರೆ:

ಎದೆಯ ಎಕ್ಸ್‌-ರೆ ಮಾಡಿಸುವುದರಿಂದ ಶ್ವಾಸಕೋಶಗಳು ಹೇಗಿವೆ ಎಂದು ಗೊತ್ತಾಗುತ್ತದೆ, ಈ ಸಂಗತಿಯನ್ನು ನೀವು ಈಗಾಗಲೇ ಕೇಳಿರಬಹುದು, ಆದರೆ ನಿಮಗೆ ಇನ್ನೊಂದು ವಿಷಯ ಗೊತ್ತಾ? ಇದರಿಂದ ಹೃದಯದ ಕಾಯಿಲೆಗಳನ್ನೂ ಪತ್ತೆ ಮಾಡಬಹುದು. ಒಂದು ವೇಳೆ ಹೃದಯದ ಸ್ನಾಯು ದೊಡ್ಡದಾಗಿದ್ದರೆ, ಎದೆಯ ಎಕ್ಸ್‌-ರೆ ಮಾಡಿಸುವುದರಿಂದ ಅದು ಪತ್ತೆಯಾಗುತ್ತದೆ. ಹೃದಯದ ಹೊರಭಾಗದಲ್ಲಿ ಬದಲಾವಣೆಗಳೇನಾದರೂ ಆಗಿವೆಯೇ ಎಂದು ತಿಳಿಯಲೂ ಸಹ ಈ ಪರೀಕ್ಷೆ ನೆರವಾಗುತ್ತದೆ. ಇಂತಹ ಬದಲಾವಣೆಗಳು ಹೃದಯದ ಕೆಲಸದ ಮೇಲೂ ಪ್ರಭಾವ ಬೀರಬಲ್ಲವು. ಶ್ವಾಸಕೋಶಗಳಲ್ಲಿ ಏನಾದರೂ ಕೂಡಿಕೊಂಡಿದ್ದರೆ, ಅದರ ಪರಿಣಾಮ ಹೃದಯದ ಸಾಮರ್ಥ್ಯದ ಮೇಲಾಗುತ್ತದೆ. ಇದನ್ನೂ ಸಹ ಎದೆಯ ಎಕ್ಸ್‌-ರೆಯಿಂದ ಪತ್ತೆ ಹಚ್ಚಬಹುದು. 

5. ರಕ್ತ ಪರೀಕ್ಷೆಗಳು:

ದೇಹದ ಪ್ರಮುಖ ಅಂಗಗಳ ಆರೋಗ್ಯದ ಬಗ್ಗೆ ತಿಳಿಯಲು ಅನೇಕ ರಕ್ತ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ರಕ್ತದಲ್ಲಿರುವ ಪ್ರೋಟೀನ್‌ ಇಲ್ಲವೇ ಎಲೆಕ್ಟ್ರೋಲೈಟ್‌ (ಸೋಡಿಯಂ ಹಾಗೂ ಪೊಟ್ಯಾಸಿಯಂ) ಮಟ್ಟದಲ್ಲಿ ಏನಾದರು ಬದಲಾವಣೆ ಆಗಿದ್ದರೆ, ಅದು ದೇಹದ ಅಂಗಗಳಲ್ಲಿ ಒತ್ತಡವಿದೆ ಎಂದು ಸೂಚಿಸುತ್ತದೆ. ಈ ಒತ್ತಡವು ಹೃದಯ ವೈಫಲ್ಯದಿಂದಲೂ ಉಂಟಾಗಿರಬಹುದು.

ಹಾಗಾಗಿ, ಡಾಕ್ಟರ್‌ ಏಕೆ ಬೇರೆ ಬೇರೆ ಪರೀಕ್ಷೆಗಳನ್ನು ಮಾಡಿಸಲು ಹೇಳುತ್ತಾರೆ ಎಂದು ಈಗ ನಿಮಗೆ ಗೊತ್ತಾಗಿರಬಹುದು. ಕೆಲವೊಮ್ಮೆ ಅಗತ್ಯವಿದೆ ಎನಿಸಿದರೆ ಒಂದಕ್ಕಿಂತ ಹೆಚ್ಚು ಪರೀಕ್ಷೆಗಳನ್ನು ಒಟ್ಟಿಗೇ ಮಾಡಿಸಬೇಕೆಂದು ಡಾಕ್ಟರ್ ಹೇಳಬಹುದು. ಹೀಗೆ ಮಾಡುವುದರಿಂದ, ಒಂದೇ ಪರೀಕ್ಷೆ ಮಾಡಿದಾಗ ಪತ್ತೆಯಾಗದಂತಹ ಕೆಲವು ತೊಂದರೆಗಳನ್ನು ಗುರುತಿಸಲು ಅವರಿಗೆ ಅನುಕೂಲವಾಗುತ್ತದೆ. ಮಾಡಿಸಿದ ಪ್ರತಿಯೊಂದು ಪರೀಕ್ಷೆಯೂ ನಿಮ್ಮ ಡಾಕ್ಟರಿಗೊಂದು ಹೊಸ ಮಾಹಿತಿಯನ್ನು ನೀಡುತ್ತದೆ ಅಥವಾ ಹೃದಯದ ಕಾರ್ಯವೈಖರಿಯನ್ನು ಬೇರೊಂದು ದೃಷ್ಟಿಕೋನದಿಂದ ನೋಡಲು ಅನುವು ಮಾಡಿಕೊಡುತ್ತದೆ. ಹೀಗೆ ಪಡೆದ ಈ ಪ್ರಮುಖ ಮಾಹಿತಿಯಿಂದ ನಿಮ್ಮ ಹೃದಯದ ಆರೋಗ್ಯದ ಸ್ಥಿತಿಯನ್ನು ಬೇಗನೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಅಲ್ಲದೇ ನೀವು ಹೆಚ್ಚುಕಾಲ ಆರೋಗ್ಯದಿಂದ ಬಾಳಲು ದಾರಿಯಾಗುತ್ತದೆ.

ಉಲ್ಲೇಖಗಳು:

  1. Thomas Lewis (1881-1945) [Internet]. [cited 2019 Jul 22]. Available from: http://broughttolife.sciencemuseum.org.uk/broughttolife/people/thomaslewis.
  2. Common tests for heart failure [Internet]. [updated 2017 May 31; cited 2019 Jul 22]. Available from: https://www.heart.org/en/health-topics/heart-failure/diagnosing-heart-failure/common-tests-for-heart-failure.

 

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.