heart health tips
Reading Time: 2 minutes

ನೀವು ಹೊಸ ಫೋನ್ ಕೊಂಡುಕೊಂಡಿದ್ದೀರಿ, ತುಂಬಾ ಖುಶಿಯಾಗಿದ್ದೀರಿ. ಅದು ತುಂಬಾ ವೇಗವಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ. ಬ್ರೌಸ್‌ ಮಾಡುವಾಗ ಇದಕ್ಕಿದ್ದಂತೆ ನಿಂತುಬಿಡುವುದಿಲ್ಲ. ಆಗಾಗ ಹ್ಯಾಂಗ್ ಆಗುವ ಮೂಲಕ ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತಿಲ್ಲ. ಅದೃಷ್ಟವಶಾತ್, ನಿಮ್ಮ ಹಳೆಯ ಫೋನನ್ನು ಬದಲಾಯಿಸಲು ನೀವು ಹೊಸ ಫೋನನ್ನು ಖರೀದಿ ಮಾಡಲು ಸಾಧ್ಯವಾಯಿತು. ಆದರೆ, ಒಮ್ಮೆ ಹಾನಿಗೊಳಗಾದ ನಿಮ್ಮ ಹೃದಯವನ್ನು ಬದಲಾಯಿಸಲು ಸಾಧ್ಯವಿಲ್ಲ! ಬೇಜವಾಬ್ದಾರಿಯುತ ಬಳಕೆಯು ಫೋನ್‌ನ ಗುಣಮಟ್ಟವನ್ನು ಹೇಗೆ ಕಡಿಮೆ ಮಾಡುತ್ತದೆಯೋ ಹಾಗೆಯೇ, ಅನಾರೋಗ್ಯಕರ ಜೀವನಶೈಲಿ ನಿಮ್ಮ ಹೃದಯದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ಅಸಮರ್ಥ ಹೃದಯವು ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಸರಿಯಾಗಿ ಪಂಪ್ ಮಾಡುವುದಿಲ್ಲ. ಆಗ ನೀವು ಹೃದ್ರೋಗಕ್ಕೆ ಒಳಗಾಗುತ್ತೀರಿ. ಇದು ನಿಮ್ಮ ಜೀವನದ ಗುಣಮಟ್ಟದ ಮೇಲೆ ಪ್ರಭಾವ ಬೀರಿ, ಬೆಳವಣಿಗೆಯನ್ನು ಕುಂಠಿತವಾಗಿಸುತ್ತದೆ.

ನಿಮ್ಮ ಹೃದಯವು ಹೆಚ್ಚು ಕಾಲ ಚೆನ್ನಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ನೀವು ಏನೇನು ಮಾಡಬಹುದು?

ಹೃದ್ರೋಗಕ್ಕೆ ಕಾರಣವಾಗುವ ಅಂಶಗಳ ದೊಡ್ಡ ಪಟ್ಟಿಯಲ್ಲಿ, ಕೆಲವು ಅಂಶಗಳ ಮೇಲೆ ಹಿಡಿತ ಸಾಧಿಸುವ ಮೂಲಕ ನಿಮ್ಮ ಹೃದಯವನ್ನು ಆರೋಗ್ಯದಿಂದ ಇರಿಸಿಕೊಳ್ಳಬಹುದು.[1]

ಡಯಾಬಿಟಿಸ್: ಡಯಾಬಿಟಿಸನ್ನು ಕಾಯಿಲೆಗಳ ಪೆಟ್ಟಿಗೆ ಎನ್ನಲಾಗುತ್ತದೆ. ಏಕೆಂದರೆ, ಒಮ್ಮೆ ನಿಮ್ಮಲ್ಲಿ ಡಯಾಬಿಟಿಸ್ ಕಾಣಿಸಿಕೊಂಡರೆ, ಅದು ಮತ್ತಷ್ಟು ಕಾಯಿಲೆಗಳಿಗೆ ಬಾಗಿಲನ್ನು ತೆರೆಯುತ್ತಾ ಹೋಗುತ್ತದೆ. ಡಯಾಬಿಟಿಸ್‌ನಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಲಿಪಿಡ್ ಮತ್ತು ಕೊಲೆಸ್ಟರಾಲ್ ಹೊಂದಿರುತ್ತಾರೆ. ಇದರಿಂದ ರಕ್ತನಾಳಗಳಲ್ಲಿ ಕೊಲೆಸ್ಟರಾಲ್ ಶೇಖರಣೆಯಾಗುತ್ತದೆ. ಪರಿಣಾಮವಾಗಿ, ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಕಷ್ಟವಾಗುತ್ತದೆ.[2] ಹೃದಯವು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳಲು ಶುರುಮಾಡುತ್ತದೆ. ಡಯಾಬಿಟಿಸ್‌ಗೆ ಗುರಿಯಾದ ಜನರು ಹೃದಯ ವೈಫಲ್ಯಕ್ಕೆ ಒಳಗಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚಿರುತ್ತದೆ ಎಂದು 2019 ರ ಜನವರಿಯಲ್ಲಿ ಪ್ರಕಟಣೆಯಾದ ಸುದ್ದಿಯೊಂದು ಹೇಳುತ್ತದೆ.

“ಇದನ್ನು ತಡೆಯುವುದು ಹೇಗೆ” ಎಂದು ನೀವು ಕೇಳಬಹುದು, ನೀವು ಡಯಾಬಿಟಿಸ್‌ಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ನಿಮಗನಿಸಿದರೆ, ವೈದ್ಯಕೀಯ ವೃತ್ತಿಪರರ ನೆರವನ್ನು ಪಡೆಯುವ ಮೂಲಕ ಡಯಾಬಿಟಿಸ್‌ಗೆ ಕಡಿವಾಣ ಹಾಕಲು ಅವಕಾಶ ಇದೆ.[4] ಆ ಮೂಲಕ ಕಾಯಿಲೆಗಳ ಪೆಟ್ಟಿಗೆಯ ಬಾಗಿಲು ತೆರೆದುಕೊಳ್ಳದಂತೆ ನೋಡಿಕೊಳ್ಳಬಹುದು.

ಬೊಜ್ಜು: ನಿಮ್ಮ ಹೃದಯದ ಮೇಲೆ ಹೆಚ್ಚುವರಿ ತೂಕವು ನೇರವಾಗಿ ಇಲ್ಲವೇ ಪರೋಕ್ಷವಾಗಿ ಇನ್ನಷ್ಟು ಹೊರೆ ಹೊರಿಸುತ್ತದೆ. 2018 ರ ನವೆಂಬರ್‌ನಲ್ಲಿ ಪ್ರಕಟವಾದ ವಿಮರ್ಶೆಯೊಂದರ ಪ್ರಕಾರ, ಸರಾಸರಿ ತೂಕಕ್ಕಿಂತಲೂ ಹೆಚ್ಚು ತೂಕವನ್ನು ಹೊಂದಿರುವವರು, ಆರೋಗ್ಯಕರ ತೂಕವನ್ನು ಹೊಂದಿರುವವರಿಗಿಂತ 10 ವರ್ಷ ಮುಂಚಿತವಾಗಿಯೇ ಹೃದಯ ವೈಫಲ್ಯದ ಚಿಹ್ನೆಗಳನ್ನು ತೋರುತ್ತಾರೆ! ಬಿಎಂಐ ಅಲ್ಲಿ ಪ್ರತಿ ಚದರ ಮೀಟರ್‌ಗೆ ಹೆಚ್ಚುವರಿಯಾಗಿ ಕಾಣಿಸಿಕೊಳ್ಳುವ 1 ಕೆಜಿ ತೂಕವು(1 kg/m2), ಹೃದಯ ವೈಫಲ್ಯದ ಸಾಧ್ಯತೆಯನ್ನು 5% ರಷ್ಟು ಹೆಚ್ಚಿಸುತ್ತದೆ![5] ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳಲು ಇದು ಮತ್ತೊಂದು ಪ್ರಮುಖ ಕಾರಣವಾಗಿದೆ.

ಸಿಕ್ಕಾಪಟ್ಟೆ ಉಪ್ಪು ತಿನ್ನುವುದು: ಒಂದು ಬಟ್ಟಲು ಪೂರ್ತಿ ಗರಿಗರಿಯಾದ ಆಲೂಗಡ್ಡೆ ಚಿಪ್ಸ್ ಕೊಟ್ಟರೆ ಯಾರಿಗೆ ಬೇಡ ಹೇಳಿ. ಅದ್ಯಾವ ಮಾಯೆಯಲ್ಲಿ ಖಾಲಿ ಮಾಡಿ ಮುಗಿಸುತ್ತೇವೆಯೋ ತಿಳಿಯುವುದಿಲ್ಲ! ಆದರೆ, ಆ ಚಿಪ್ಸ್‌ನಲ್ಲಿರುವ ಉಪ್ಪಿನ ಪ್ರಮಾಣ ಖಂಡಿತ ಅಪಾಯವನ್ನು ತಂದಿಡುತ್ತದೆ.

ಉಪ್ಪಿನಲ್ಲಿ ಸೋಡಿಯಂ ಇರುತ್ತದೆ. ಹೆಚ್ಚು ಸೋಡಿಯಂ ಎಂದರೆ ದೇಹದಲ್ಲಿ ಹೆಚ್ಚಿನ ನೀರು. ಇದು ನಿಮ್ಮ ಹೃದಯ ಮತ್ತು ಶ್ವಾಸಕೋಶವನ್ನು ಅಪಾಯಕ್ಕೆ ಗುರಿ ಮಾಡುತ್ತದೆ. ಜೊತೆಗೆ ನಿಮ್ಮ ಕಾಲುಗಳು ಕೂಡ ಊದಿಕೊಳ್ಳಲು ಕಾರಣವಾಗುತ್ತದೆ.[6]

ಧೂಮಪಾನ: “ಧೂಮಪಾನ ಸಾವನ್ನು ತರುತ್ತದೆ” ಮಾರುಕಟ್ಟೆಯಲ್ಲಿ ಸಿಗುವ ಪ್ರತಿಯೊಂದು ಸಿಗರೇಟ್ ಪ್ಯಾಕ್‌ಗಳ ಮೇಲೆ ಮತ್ತು ಪ್ರತಿಯೊಂದು ಜಾಹೀರಾತಿನಲ್ಲಿ ಈ ಸಂದೇಶವನ್ನು ನಾವು ಓದಿರುತ್ತೇವೆ. ಧೂಮಪಾನ ಕೇವಲ ನಿಮ್ಮ ಶ್ವಾಸಕೋಶವನ್ನು ಮಾತ್ರ ಬಲಿ ಪಡೆಯುವುದಿಲ್ಲ, ಜೊತೆಗೆ ನಿಮ್ಮ ಹೃದಯದ ಸಾಮರ್ಥ್ಯದ ಮೇಲೆ ಕೂಡ ಹೆಚ್ಚಿನ ಪರಿಣಾಮ ಬೀರುತ್ತದೆ.[1] ಮುಂದಾಗಬಹುದಾದ ಹೃದಯ ವೈಫಲ್ಯವನ್ನು ತಪ್ಪಿಸಲು ಇಂದೇ ಧೂಮಪಾನವನ್ನು ನಿಲ್ಲಿಸಿ.

ದೈಹಿಕ ಚಟುವಟಿಕೆಯ ಕೊರತೆ: ನಮ್ಮಲ್ಲಿ ಬಹಳಷ್ಟು ಜನ ಕುಳಿತಲ್ಲೆ ಕುಳಿತು ಕೆಲಸ ಮಾಡುತ್ತಿರುತ್ತಾರೆ; ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತಿರುತ್ತೇವೆ. ಹೆಚ್ಚಿನ ಸಂಬಳದ ಕೆಲಸಗಳು ಹೆಚ್ಚಿನ ಕೆಲಸದೊತ್ತಡ ಮತ್ತು ಹೆಚ್ಚಿನ ಹೃದಯ ವೈಫಲ್ಯದ ಸಾಧ್ಯತೆಯನ್ನು ಹೊತ್ತು ಬರುತ್ತವೆ.[1] ದೈಹಿಕ ಚಟುವಟಿಕೆ ಕಡಿಮೆಯಾದಂತೆ, ಸೊಂಟದ ಸುತ್ತಳತೆ ಹೆಚ್ಚಾಗುತ್ತಾ ಹೋಗುತ್ತದೆ, ಬೊಜ್ಜಿಗೆ ಕಾರಣವಾಗುತ್ತದೆ ಹಾಗೂ ತೂಕ ಹೆಚ್ಚಾದಂತೆ ಕಾಣಿಸಿಕೊಳ್ಳುವ ಎಲ್ಲಾ ಸಮಸ್ಯೆಗಳು ಬಂದೆರಗುತ್ತವೆ. ಹಾಗಾಗಿ ಪ್ರತಿ ಗಂಟೆಗೊಮ್ಮೆ 5-10 ನಿಮಿಷ ಕುರ್ಚಿಯಿಂದ ಮೇಲೇಳಿ, ಒಂದು ಸುತ್ತು ನಡೆದಾಡಿ. ಆ ಮೂಲಕ ನಿಮ್ಮ ಹೃದಯವು ಚೆನ್ನಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಿ.

ಸಾಮಾಜಿಕ ಮಾಧ್ಯಮದಲ್ಲಿರುವ ಪ್ರತಿಯೊಬ್ಬರೂ ಮತ್ತು ಡಾಕ್ಟರ್‌ಗಳು ಏಕೆ ಚುರುಕಾದ ಜೀವನಶೈಲಿಯನ್ನು ಅನುಮೋದಿಸುತ್ತಿದ್ದಾರೆಂದು ನಿಮಗೆ ಈಗ ಸ್ಪಷ್ಟವಾಗಿದೆ. ಹೃದಯ ವೈಫಲ್ಯಕ್ಕೆ ಒಳಗಾಗುವ ವಿಚಾರದಲ್ಲಿ ವೆಸ್ಟರ್ನ್ ದೇಶಗಳ ಜನರಿಗಿಂತಲೂ ಭಾರತೀಯರು 10 ವರ್ಷ ಕಡಿಮೆ ವಯಸ್ಕರಾಗಿರುತ್ತಾರೆ ಎಂದು ತಿಳಿದುಬಂದಿದೆ.[7] ಹಾಗಾಗಿ, ನಾವು ಈಗಲೇ ಮೇಲೆದ್ದು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ನಿಮ್ಮ ವಯಸ್ಸು, ಲಿಂಗ, ಕುಟುಂಬದ ಹಿನ್ನೆಲೆ ಇಲ್ಲವೇ ಅನುವಂಶೀಕತೆಯನ್ನು ನೀವು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಿಮ್ಮ ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಹಾಗೂ ಆರೋಗ್ಯಕರ ಹೃದಯಕ್ಕಾಗಿ ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು!

ಉಲ್ಲೇಖಗಳು:

  1. Congestive heart failure- are you at risk? [Internet]. [cited 2019 Jul 18]. Available from: https://www.crh.org/service-centers/heart-and-vascular-center/congestive-heart-failure-risks.
  2. Causes of heart failure [Internet]. 2019 [updated 2017 May 31; cited 2019 Jul 18]. Available from: https://www.heart.org/en/health-topics/heart-failure/causes-and-risks-for-heart-failure/causes-of-heart-failure.
  3. Kenny HC, Abel ED. Heart failure in type 2 diabetes mellitus. Circ Res. 2019 Jan 04;124(1):121-141. doi:10.1161/CIRCRESAHA.118.311371.
  4. Preventing type 2 diabetes [Internet]. [updated 2016 Nov; cited 2019 Jul 18]. Available from: https://www.niddk.nih.gov/health-information/diabetes/overview/preventing-type-2-diabetes.
  5. Csige I, Ujvárosy D, Szabó Z, Lőrincz I, Paragh G, Harangi M, Somodi S. The impact of obesity on the cardiovascular system. J Diabetes Res. 2018;2018:3407306. doi:10.1155/2018/3407306.
  6. Heart failure diet: Low sodium [Internet]. [updated 2019 May 01; cited 2019 Jul 18]. Available from: https://my.clevelandclinic.org/health/diseases/17072-heart-failure-diet-low-sodium.
  7. Guha S, Harikrishnan S, Ray S, Sethi R, Ramakrishnan S, Banerjee S, et al. CSI position statement on management of heart failure in India. Indian Heart J. 2018 Jul;70(Suppl 1):S1-S72. doi:10.1016/j.ihj.2018.05.003.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.