Reading Time: 2 minutes

ಹೈಪರ್‌ಟೆನ್ಶನ್ ಉಳ್ಳವರು ಹೆಚ್ಚು ಸಕ್ಕರೆ ಹಾಗು ಉಪ್ಪಿನಿಂದ ಕೂಡಿದ ಆಹಾರ ಸವಿಯಲಾಗುವುದಿಲ್ಲ. ಆದರೆ, ಅದರರ್ಥ ಇನ್ನೆಂದೂ ನೀವು ನಿಮ್ಮ ಬಾಯಿ ರುಚಿ ತಣಿಸಲಾಗುವುದಿಲ್ಲ ಎಂದಲ್ಲ. ಆರೋಗ್ಯಕರ ಅಡಕಗಳನ್ನು ಬಳಸಿಕೊಂಡು ಹಾಗು ಕೆಲವು ವಾಡಿಕೆಯ ಅಡುಗೆಗಳನ್ನು ಮಾರ್ಪಡಿಸಿ, ಯಾವುದೇ ಅಪರಾಧಿ ಪ್ರಜ್ಞೆ ಇಟ್ಟುಕೊಳ್ಳದೇ ಎಂದಿನಂತೆ ಊಟ ಮಾಡಬಹುದು. ಈ ಅಡುಗೆಗಳನ್ನು ನಿಮ್ಮ ವಾರದ ಮೆನ್ಯುವಿನ ಭಾಗವಾಗಿಸಲು ಪ್ರಯತ್ನಿಸಿ, ಆಗ ಇನ್ನೆಂದೂ ನೀವು ಆರೋಗ್ಯಕರ ಊಟದ ಬಗ್ಗೆ ಬೇಸರಿಸುವುದಿಲ್ಲ.

  1. ಕಿನೋವಾ ಸ್ಟಫ್ಡ್ ಟೊಮ್ಯಾಟೊ:

ನಿಮ್ಮ ಆಹಾರಕ್ರಮದಲ್ಲಿ, ಕಿನೋವಾ ಹಾಗು ತರಕಾರಿಗಳನ್ನು ಸೇರಿಸಿಕೊಳ್ಳಲು ಇದು ಒಳ್ಳೆಯ ದಾರಿಗಳಲ್ಲೊಂದಾಗಿದೆ. ಕಿನೋವಾ ಬೇಯಿಸಿ, ಬಳಿಕ ಅದನ್ನು, ಅರೆ ಟೀಚಮಚ ಎಣ್ಣೆ, ಜೀರಿಗೆ, ಹೆಚ್ಚಿದ ದೊಣ್ಣೆಮೆಣಸು, ಚಿಟಿಕೆ ಉಪ್ಪು, ಮಸಾಲೆಗಳೊಂದಿಗೆ ಹುರಿಯಿರಿ. ಟೊಮ್ಯಾಟೊಗಳಿಂದ ಬೀಜ ತೆಗೆದು, ಅದರೊಳಗೆ ಕಿನೋವಾ ಮಿಶ್ರಣವನ್ನು ತುಂಬಿ ಬೇಕ್ ಮಾಡಿ. ಇದನ್ನು ಬಿಸಿಯಿರುವಾಗಲೆ, ಎಣ್ಣೆಯಲ್ಲಿ ಬಾಡಿಸಿದ ತರಕಾರಿ ಇಲ್ಲವೆ ಹೊಟ್ಟು ತೆಗೆಯದ ಅಕ್ಕಿಯ ಅನ್ನದೊಂದಿಗೆ ಬಡಿಸಿ. ಕಿನೋವಾ, ಪ್ರೋಟೀನ್‍ನಿಂದ ತುಂಬಿದ್ದು, ನಾರಿನಾಂಶ, ಮೆಗ್ನೀಸಿಯಂ ಹಾಗು ಪೊಟ್ಯಾಸಿಯಂ ಪೋಷಕಾಂಶಗಳ ಗಣಿಯಾಗಿದೆ. ಹಾಗಾಗಿ, ಇದು ಹೈಪರ್‌ಟೆನ್ಶನ್ ಉಳ್ಳವರಿಗೆ ಹೇಳಿ ಮಾಡಿಸಿದ ಆಹಾರವಾಗಿದೆ.

  1. ಕಡಲೆ ಪನೀರ್:

ಇದು ಭಾರತೀಯ ಶೈಲಿಯ ಸವಿಯಾದ ಅಡುಗೆಯಾಗಿದ್ದು, ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಕಡಲೆಕಾಳು, ನಾರಿನಾಂಶ, ಪ್ರೋಟೀನ್‍ ಹಾಗು ಖನಿಜಗಳಿಂದ ಸಂಪದ್ಭರಿತವಾಗಿದೆ. ಕಡಲೆಕಾಳಿನಲ್ಲಿ, ಸೋಡಿಯಂ ಸಹಜವಾಗಿ ಕಡಿಮೆಯಿರುತ್ತದೆ, 100 ಗ್ರಾಂನಲ್ಲಿ 24 ಮಿಲಿಗ್ರಾಂ ಇರುತ್ತದೆ (USDA); ಆದ್ದರಿಂದ, ಅದು ಅಧಿಕ ರಕ್ತದೊತ್ತಡವಾಗದಂತೆ ತಡೆಯಬಹುದು ಹಾಗು ಹೃದ್ರೋಗ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಪನೀರ್‌ನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ ಹಾಗು ಇನ್ನಿತರ ಮುಖ್ಯವಾದ ಪೋಷಕಾಂಶಗಳು ಹೇರಳವಾಗಿದ್ದು, ಕಡಲೆಕಾಳಿನೊಂದಿಗೆ ಬೆರೆಸಿ ತಿನ್ನುವುದು ಹೈಪರ್‌ಟೆನ್ಶನ್ ಉಳ್ಳವರಿಗೆ ಅತ್ಯುತ್ತಮವಾಗಿದೆ. ಟೊಮ್ಯಾಟೊ, ತರಕಾರಿ ಹಾಗು ಮಸಾಲೆ ರುಬ್ಬಿ ಮಾಡಿದರೆ, ನೀವು ಎಂದಿನಂತೆ ಮಧ್ಯಾಹ್ನ ಇಲ್ಲವೆ ರಾತ್ರಿಗೆ ತಿನ್ನುವ ಊಟಕ್ಕೆ ಯಾವುದರಲ್ಲೂ ಕಡಿಮೆಯಿಲ್ಲದಷ್ಟು ಈ ಅಡುಗೆಯು ಸವಿಯಾಗಿರುತ್ತದೆ.

  1. ನಾರಿನಾಂಶದಿಂದ ಸಮೃದ್ಧವಾದ ಪಾಸ್ತ:

ಹೊಟ್ಟು ತೆಗೆಯದ ಅಕ್ಕಿಯ ಅನ್ನ ಹಾಗು ಹೊಟ್ಟು ತೆಗೆಯದ ಗೋಧಿಯ ಪಾಸ್ತ, ಹೈಪರ್‌ಟೆನ್ಶನ್ ಉಳ್ಳವರಿಗೆ ಒಳ್ಳೆಯ ಆಯ್ಕೆಯಾಗಿವೆ. ನಿಮ್ಮ ಆಹಾರಕ್ರಮದಿಂದ ಸಂಪೂರ್ಣವಾಗಿ ಪಾಸ್ತ ಕೈಬಿಡುವುದರ ಬದಲು, ನಾರಿನಾಂಶದಿಂದ ಸಮೃದ್ಧವಾದ ಪಾಸ್ತವನ್ನು ಸೇರಿಸಿ. ಕಡಿಮೆ ಕ್ಯಾಲರಿ ಇರುವ ಸಾಸ್‍ ಹಾಗು ಸಾಕಷ್ಟು ತರಕಾರಿಗಳನ್ನು ಬಳಸಿದರೆ, ಈ ಅಡುಗೆಗೆ ಬಹಳಷ್ಟು ಪೋಷಕಾಂಶಗಳು ಸೇರಿಕೊಳ್ಳುತ್ತವೆ.

  1. ಬೆಳಗಿನ ತಿಂಡಿಗೆ ಆರೋಗ್ಯಕರ ಅಂಬಲಿ:

ಈ ಅಂಬಲಿಯನ್ನು ಜೋಳದ ಹಿಟ್ಟಿನಿಂದ ಮಾಡಲಾಗುತ್ತದೆ. ಕಬ್ಬಿಣ, ಪ್ರೋಟೀನ್‍ ಹಾಗು ಕ್ಯಾಲ್ಸಿಯಂನಿಂದ ತುಂಬಿ ತುಳುಕುವ ಜೋಳವು ತನ್ನ ಹೆಚ್ಚಿನ ನಾರಿನಾಂಶದಿಂದ ಬಹಳ ಹೊತ್ತಿನವರೆಗೆ ಹೊಟ್ಟೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಬಹುಬೇಗ ತಯಾರಾಗುವ ಈ ತಿಂಡಿಯನ್ನು ಮಾಡಲು, ಜೋಳದ ಹಿಟ್ಟು ತರಿತರಿಯಾಗಿದ್ದರೆ ಚಂದ ಹಾಗು ಇದನ್ನು ಪ್ರೆಷರ್ ಕುಕ್ಕರಿನಲ್ಲಿ ಬೇಯಿಸಲಾಗುತ್ತದೆ. ಸಾಸಿವೆ ಒಗ್ಗರಣೆ ಹಾಕಿ, ಈರುಳ್ಳಿ ಟೊಮ್ಯಾಟೊ, ಕೊತ್ತಂಬರಿ ಸೊಪ್ಪು ಹಾಗು ಇತರ ಮಸಾಲೆಗಳೊಂದಿಗೆ ಹುರಿಯಿರಿ.

  1. ಅಗಸೆಬೀಜದ ಮೊಸರು ಬಜ್ಜಿ:

ಒಮೇಗ-3 ಫ್ಯಾ಼ಟಿ ಆ್ಯಸಿಡ್‍ಗಳಿಂದ ಸಂಪದ್ಭರಿತವಾದ ಅಗಸೆಬೀಜಗಳು, ರಕ್ತದೊತ್ತಡವನ್ನು ಇಳಿಸಲು ಪರಿಣಾಮಕಾರಿಯಾಗಬಲ್ಲವು. ಸಾಮಾನ್ಯವಾಗಿ, ಒಮೇಗ-3 ಫ್ಯಾ಼ಟಿ ಆ್ಯಸಿಡ್‍ಗಳು ಕಡಲತಿನಿಸುಗಳಲ್ಲಿ ಕಂಡುಬರುವುದರಿಂದ, ಹೈಪರ್‌ಟೆನ್ಶನ್ ದೂರವಿಡಲು, ಸಸ್ಯಾಹಾರಿಗಳಿಗೆ ಅಗಸೆಬೀಜಗಳು ಪರ್ಯಾಯವಾಗಿವೆ. ನಿಮ್ಮ ಎಂದಿನ ಮೊಸರು ಬಜ್ಜಿಗೆ, ಅಗಸೆಬೀಜಗಳನ್ನು ಇಡಿಯಾಗಿ ಇಲ್ಲವೆ ಪುಡಿಮಾಡಿ ಹಾಕಬಹುದು. ಅದಕ್ಕೆ ಚಿಟಿಕೆ ಉಪ್ಪು ಹಾಗು ಸಕ್ಕರೆ, ಜೀರಿಗೆ ಪುಡಿ ಹಾಗು ತಾಜಾ ಕೊತ್ತಂಬರಿ ಸೊಪ್ಪು ಹಾಕಿದರೆ, ನಿಮ್ಮ ಊಟದೊಂದಿಗೆ ತಿನ್ನಲು ಸವಿಯಾದ ಗರಿಗರಿ ಮೊಸರು ಬಜ್ಜಿ ತಯಾರಾಗುತ್ತದೆ.

  1. ಹಸಿರು ಬಟಾಣಿ ಸೂಪ್:

ಬಟಾಣಿಯು, ಒಂದು ಅದ್ಭುತ ಲೋ-ಫ್ಯಾ಼ಟ್ ಆಹಾರವಾಗಿದ್ದು, ಅದರಲ್ಲಿ ಪ್ರೋಟೀನ್‍, ನಾರಿನಾಂಶ ಹಾಗು ವಿಟಮಿನ್‍ಗಳು ಕೂಡ ಇವೆ. ಬಟಾಣಿಯಲ್ಲಿ ಪೊಟ್ಯಾಸಿಯಂ ಖನಿಜವು ಹೇರಳವಾಗಿದ್ದು, ಇದು ಉಪ್ಪಿನ ನಕಾರಾತ್ಮಕ ಪರಿಣಾಮಗಳನ್ನು ಸರಿತೂಗಿಸಿ, ರಕ್ತದೊತ್ತಡವನ್ನು ಇಳಿಸಲು ನೆರವಾಗುವುದೆಂದು ನಂಬಲಾಗಿದೆ. ನಡುಹಗಲಿನ ಇಲ್ಲವೆ ರಾತ್ರಿಯ ಊಟಕ್ಕೆ, ಬಿಸಿ ಬಿಸಿ ಬಟಾಣಿ ಸೂಪ್ ಮನತಣಿಸಬಹುದು. ಈರುಳ್ಳಿ ಹೂವನ್ನು ಕಾಂಡದ ಸಮೇತ ಅರೆ ಟೀಚಮಚ ಎಣ್ಣೆಯಲ್ಲಿ ಹುರಿದು, ಅದಕ್ಕೆ ಬಟಾಣಿ ಬೆರೆಸಿ. 2 ಬಟ್ಟಲು ನೀರು, ಸ್ವಲ್ಪ ಕಾಳುಮೆಣಸು ಹಾಗು ಚಿಟಿಕೆ ಉಪ್ಪು ಹಾಕಿ. ಬಟಾಣಿ ಬೆಂದ ಮೇಲೆ, ನುಣ್ಣಗೆ ರುಬ್ಬಿ. ಬಿಸಿ ಬಿಸಿ ಬಡಿಸಿ.

  1. ಎಲೆಕೋಸು ಹಾಗು ಬೇಳೆಯ ಪರಾಠ:

ಬಹಳಷ್ಟು ಭಾರತೀಯ ಮನೆಗಳಲ್ಲಿ, ವಾಡಿಕೆಯಂತೆ ಬೆಳಗಿನ ತಿಂಡಿ ಹಾಗು ಮಧ್ಯಾಹ್ನದ ಊಟಕ್ಕೆ ಪರಾಠ ತಿನ್ನುತ್ತಾರೆ. ಪರಾಠ ಮಾಡಲು, ಎಲೆಕೋಸು ಮತ್ತು ಬೇಯಿಸಿದ ಬೇಳೆಯನ್ನು ಹಿಟ್ಟಿನ ಜೊತೆ ಕಲಸಿ, ಚೆನ್ನಾಗಿ ನಾದಿ. ಬೇಕಾದ ಮಸಾಲೆಗಳನ್ನು ಸೇರಿಸಿ, ಸ್ವಲ್ಪ ಎಣ್ಣೆ ಇಲ್ಲವೆ ತುಪ್ಪ ಹಾಕಿ ಪರಾಠ ಕಾಯಿಸಿ. ಎಲೆಕೋಸು ಹಾಗು ಬೇಳೆ, ಎರಡರಲ್ಲೂ ಪೊಟ್ಯಾಸಿಯಂ ಹೇರಳವಾಗಿದ್ದು, ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ. ಬೇಳೆ ಕಾಳುಗಳಲ್ಲಿರುವ ಕರಗದ ನಾರಿನಾಂಶವು, ಕೊಲೆಸ್ಟರಾಲ್ ಮತ್ತು ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ. ನೀವು ಗೋಧಿ ಹಿಟ್ಟಿನ ಬದಲು ರಾಗಿ ಇಲ್ಲವೆ ಸೋಯಾ ಹಿಟ್ಟನ್ನು ಕೂಡ ಬಳಸಬಹುದು.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.