‘ಕೊಲೆಸ್ಟರಾಲ್’ ಎಂಬ ಪದ ಕಿವಿಗೆ ಬಿದ್ದೊಡನೆ, ಅದು ನಿಮ್ಮ ಆರೋಗ್ಯಕ್ಕೆ ಕೆಟ್ಟದ್ದು ಎಂಬುದೇ ನಿಮ್ಮ ಮನದಲ್ಲಿ ಮೂಡುವ ಮೊದಲ ಎಣಿಕೆಯಾಗಿರುತ್ತದೆ. ಆದ್ದರಿಂದ, ಕೊಲೆಸ್ಟರಾಲ್ ಪೂರ್ತಿ ಕೆಟ್ಟದ್ದೇನಲ್ಲ ಎಂದು ತಿಳಿದು ನಿಮಗೆ ಅಚ್ಚರಿಯಾಗಬಹುದು. ವಾಸ್ತವದಲ್ಲಿ, ನಿಮ್ಮ ದೇಹವೇ ಸ್ವಾಭಾವಿಕವಾಗಿ ಕೊಲೆಸ್ಟರಾಲ್ ಅನ್ನು ಉತ್ಪಾದಿಸುತ್ತದೆ ಹಾಗು ಅದನ್ನು ನಿರ್ಣಾಯಕ ಕ್ರಿಯೆಗಳಾದ ಜೀವಕೋಶಗಳ ಕಟ್ಟುವಿಕೆ ಮತ್ತು ಹಲವಾರು ಅಗತ್ಯದ ಹಾರ್ಮೋನ್‍ಗಳನ್ನು ತಯಾರಿಸಲು ಬಳಸುತ್ತದೆ.
ಆದರೆ, ಕೊಲೆಸ್ಟರಾಲ್ ಹೇರಳವಾಗಿರುವ ತಿನಿಸುಗಳಲ್ಲಿ ಸ್ಯಾಚುರೇಟಡ್ ಇಲ್ಲವೆ ಟ್ರಾನ್ಸ್ ಕೊಬ್ಬು ಹೆಚ್ಚಾಗಿರುತ್ತದೆ. ಇಂತಹ ತಿನಿಸುಗಳ ಅತಿಯಾದ ಸೇವನೆಯಿಂದ ನಿಮ್ಮ ದೇಹದ ಕೊಲೆಸ್ಟರಾಲ್ ಮಟ್ಟ ಏರಿದಾಗ, ಅದು ಅಧಿಕ ರಕ್ತದೊತ್ತಡ, ಹೃದ್ರೋಗ ಹಾಗು ಪಾರ್ಶ್ವವಾಯುವಿನಂತಹ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು.
ಕೊಲೆಸ್ಟರಾಲ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?
ಕೊಲೆಸ್ಟರಾಲ್ ಒಂದು ಲಿಪಿಡ್ ಆಗಿದ್ದು, ಅದು ರಕ್ತದಲ್ಲಿರುವ ಕೊಬ್ಬಿನಂತಹ ಒಂದು ಪದಾರ್ಥ. ನಿಮ್ಮ ದೇಹವು, ಕ್ಯಾಲರಿಗಳನ್ನು ಲಿಪಿಡ್‍ಗಳಾಗಿ ಪರಿವರ್ತಿಸಿ ಅವುಗಳಿಂದ ಬೇಕಾದಾಗ ಮಾತ್ರ ಶಕ್ತಿಯನ್ನು ಪಡೆಯಲು ಶೇಖರಿಸಿಡುತ್ತದೆ. ಅವು[2] ಜೀವಕೋಶದ ಪದರಗಳ ತಯಾರಿಕೆಯಲ್ಲಿ ಕೂಡ ಮಹತ್ವದ ಪಾತ್ರ ವಹಿಸುತ್ತವೆ.
ದೇಹದಲ್ಲಿ ಎರಡು ಮುಖ್ಯ ಬಗೆಯ ಕೊಲೆಸ್ಟರಾಲ್ ಇದೆ. ಹೈ ಡೆನ್ಸಿಟಿ ಲಿಪೊಪ್ರೋಟೀನ್ (HDL) ಮತ್ತು ಲೋ ಡೆನ್ಸಿಟಿ ಲಿಪೊಪ್ರೋಟೀನ್ (LDL). ಕೊಬ್ಬು ಹಾಗು ಪ್ರೋಟೀನ್‍ಗಳು ಸೇರಿ ಲಿಪೊಪ್ರೋಟೀನ್‍ಗಳಾಗಿವೆ, ಇವು ನಿಮ್ಮ ದೇಹದ ಮೂಲೆ ಮೂಲೆಗೂ ರಕ್ತದ ಮೂಲಕ ಕೊಲೆಸ್ಟರಾಲ್‌ಅನ್ನು ಕೊಂಡೊಯ್ಯುವ ಹೊಣೆ ಹೊತ್ತಿವೆ.
LDL, ಇದು ರಕ್ತನಾಳಗಳಿಗೆ ಕೊಲೆಸ್ಟರಾಲ್‌ಅನ್ನು ಕೊಂಡೊಯ್ಯುತ್ತದೆ. LDL ಒಳ್ಳೆಯದಲ್ಲ, ಯಾಕೆಂದರೆ ಇದು ನಿಮ್ಮ ರಕ್ತನಾಳಗಳಲ್ಲಿ ಸಂಗ್ರಹಗೊಂಡು ರಕ್ತಸಂಚಾರಕ್ಕೆ ಅಡ್ಡಿಪಡಿಸುತ್ತದೆ. HDL ಒಳ್ಳೆಯ ಕೊಲೆಸ್ಟರಾಲ್ ಆಗಿದೆ, ಯಾಕೆಂದರೆ ಇದು ರಕ್ತನಾಳಗಳಿಂದ ಹೆಚ್ಚುವರಿ LDL ಅನ್ನು ಲಿವರ್‌ಗೆ ಸಾಗಿಸುತ್ತದೆ. ಲಿವರ್ ಅದನ್ನು ದೇಹದಿಂದ ಹೊರಹಾಕುತ್ತದೆ.
ಆದ್ದರಿಂದ, ಅತ್ಯುತ್ತಮ ಕೊಲೆಸ್ಟರಾಲ್ ಮಟ್ಟ ಎಂದರೆ, ನಿಮ್ಮ ದೇಹದಲ್ಲಿ LDL ಕಡಿಮೆ ಇರುವುದು ಮತ್ತು HDL ಹೆಚ್ಚು ಇರುವುದು.
ಹೆಚ್ಚಿನ ಮಟ್ಟದ ಕೊಲೆಸ್ಟರಾಲ್ ನಿಮ್ಮ ದೇಹಕ್ಕೆ ಏನು ಮಾಡಬಲ್ಲದು?
ನಿಮ್ಮ ರಕ್ತದಲ್ಲಿ ಹೆಚ್ಚಿನ ಮಟ್ಟದಲ್ಲಿ LDL ಕೊಲೆಸ್ಟರಾಲ್ ಇರುವುದು ಅಪಾಯಕ್ಕೆ ಎಡೆ ಮಾಡಿಕೊಡಬಹುದು.
ಆ್ಯಥೆರೊಸ್‌ಕ್ಲೆರೋಸಿಸ್
ರಕ್ತದಲ್ಲಿ ಹೆಚ್ಚಿನ ಮಟ್ಟದ LDL ಕೊಲೆಸ್ಟರಾಲ್ ಇದ್ದಾಗ, ದಪ್ಪ ಮೇಣದಂತಹ ಪದಾರ್ಥ ರಕ್ತನಾಳಗಳ ಒಳಗೆ ಜಮೆಯಾಗುತ್ತದೆ. ಇದನ್ನು ಪ್ಲಾಕ್ಸ್ ಎನ್ನುವರು. ದಿನ ಕಳೆದಂತೆ ಇದು ತಡೆಯನ್ನು ನಿರ್ಮಿಸಿಸುವುದರಿಂದ, ರಕ್ತಸಂಚಾರಕ್ಕೆ ಅಡ್ಡಿಯಾಗಿ, ರಕ್ತನಾಳಗಳ ಒಳಗಿನ ಅಗಲ ಕಿರಿದಾಗುತ್ತದೆ. ಇದನ್ನು ಆ್ಯಥೆರೊಸ್‌ಕ್ಲೆರೋಸಿಸ್ ಎನ್ನುವರು. ಇದು ಇನ್ನಷ್ಟು ಕ್ಲಿಷ್ಟವಾದ ಸಮಸ್ಯೆಗಳನ್ನು ತಂದೊಡ್ಡಬಹುದು.
ಅಧಿಕ ರಕ್ತದೊತ್ತಡ
ಕಿರಿದಾದ ರಕ್ತನಾಳಗಳು ರಕ್ತಸಂಚಾರವನ್ನು ಅಡ್ಡಿಪಡಿಸಿ, ರಕ್ತದೊತ್ತಡ ಹೆಚ್ಚಲು ಕಾರಣವಾಗುತ್ತವೆ. ನಿಮ್ಮ ರಕ್ತನಾಳಗಳ ಅಗಲ ಕಿರಿದಾದಷ್ಟೂ, ನಿಮ್ಮ ರಕ್ತದೊತ್ತಡ ಮೇಲಕ್ಕೇರುವುದು. ದಿನ ಕಳೆದಂತೆ ಇದು ಹೃದ್ರೋಗದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುವುದು.
ಆ್ಯಂಜಿನ (ಎದೆನೋವು)
ರಕ್ತನಾಳಗಳ ಒಳಗೆ ಪ್ಲಾಕ್ ಶೇಖರಣೆಯಾಗುವುದರಿಂದ, ಹೃದಯಕ್ಕೆ ರಕ್ತದ ಮೂಲಕ ತಲುಪಬೇಕಾದ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಎದೆನೋವು ಬರುತ್ತದೆ. ಇದಕ್ಕೆ ಆ್ಯಂಜಿನ ಎಂದು ಕರೆಯುತ್ತಾರೆ. ಇದು ಕೊರೊನರಿ ಆರ್ಟರಿ ರೋಗದ ಲಕ್ಷಣವಾಗಿದ್ದು, ನೀವು ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ ಇದೆಯೆಂದು ಸೂಚಿಸುತ್ತದೆ.
ಹೃದಯಾಘಾತ
ಪ್ಲಾಕ್ ಹರಿದರೆ ಇಲ್ಲವೆ ಅದರ ಚಿಕ್ಕ ಚೂರೊಂದು ಮುರಿದುಬಿದ್ದರೆ ರಕ್ತ ಹೆಪ್ಪುಗಟ್ಟಿ, ರಕ್ತಸಂಚಾರಕ್ಕೆ ಮತ್ತಷ್ಟು ತಡೆಯೊಡ್ಡಬಹುದು ಇಲ್ಲವೆ ರಕ್ತನಾಳ ಪೂರ್ತಿ ಮುಚ್ಚಿಕೊಳ್ಳಬಹುದು. ಹೃದಯಕ್ಕೆ ಹೋಗುವ ರಕ್ತನಾಳಗಳಲ್ಲೊಂದರಲ್ಲಿ ಹೀಗಾದರೆ ಹೃದಯಾಘಾತವಾಗುತ್ತದೆ.
ಪಾರ್ಶ್ವವಾಯು
ಮೇಲ್ಕಂಡ ಪ್ರಕ್ರಿಯೆ ಮೆದುಳಿಗೆ ಹೋಗುವ ರಕ್ತನಾಳಗಳಲ್ಲೊಂದರಲ್ಲಿ ಸಂಭವಿಸಿದರೆ, ಅದು ಪಾರ್ಶ್ವವಾಯುವಿನಲ್ಲಿ ಕೊನೆಯಾಗುತ್ತದೆ.
ಮೆದುಳಿನ ಮೇಲಾಗುವ ಇತರ ಪರಿಣಾಮಗಳು
ಅಧಿಕ ಕೊಲೆಸ್ಟರಾಲ್‌ನ ಕಾರಣದಿಂದ ರಕ್ತನಾಳಗಳಲ್ಲಿ ತಡೆ ಉಂಟಾಗಿ, ಅದರಿಂದಾಗುವ ರಕ್ತಸಂಚಾರದಲ್ಲಿನ ವ್ಯತ್ಯಯವು ಯೋಚನಾಶಕ್ತಿಯನ್ನು ಕುಗ್ಗಿಸಿ, ಮರೆವು ಇಲ್ಲವೆ ಚಲನಾಶಕ್ತಿ ಕಳೆದುಕೊಳ್ಳುವಿಕೆಗೆ ಎಡೆಮಾಡಿಕೊಡುತ್ತದೆ.
ಲಿವರ್ ಮೇಲಾಗುವ ಪರಿಣಾಮ
ಪಿತ್ತರಸವನ್ನು(ಬೈಲ್) ಹುಟ್ಟುಹಾಕಲು ಕೊಲೆಸ್ಟರಾಲ್ ಅತ್ಯಗತ್ಯ, ಜೀರ್ಣಕ್ರಿಯೆಗೆ ಸಹಕಾರಿಯಾಗುವ ಈ ಪಿತ್ತರಸವನ್ನು ಲಿವರ್ ಉತ್ಪಾದಿಸುತ್ತದೆ. ಆದರೆ ನಿಮ್ಮ ಪಿತ್ತರಸದಲ್ಲಿ ಹೆಚ್ಚು ಕೊಲೆಸ್ಟರಾಲ್ ಇದ್ದರೆ ಅದರಿಂದ ನಿಮ್ಮ ಪಿತ್ತಕೋಶದಲ್ಲಿ, ತುಂಬ ನೋವು ಕೊಡುವ ಪಿತ್ತಕೋಶದ ಕಲ್ಲುಗಳು ಉತ್ಪತ್ತಿಯಾಗಬಹುದು.
ನಿಮ್ಮ ಕೊಲೆಸ್ಟರಾಲ್‌ನ ಪರೀಕ್ಷೆ ನಿಯಮಿತವಾಗಿ ಮಾಡಿಸುವುದರಿಂದ, ನಿಮ್ಮ ವಯಸ್ಸಿಗೆ ಅನುಗುಣವಾಗಿ ಅದು ಯಾವ ಮಟ್ಟದಲ್ಲಿರಬೇಕೊ ಅದನ್ನು ನೋಡಿಕೊಳ್ಳುವುದರಿಂದ ಹಾಗು ಹೃದ್ರೋಗ ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು ಸರಿಯಾದ ಕ್ರಮಗಳನ್ನು ಪಾಲಿಸುವುದರಿಂದ, ನಿಮ್ಮ ಕೊಲೆಸ್ಟರಾಲ್ ಮಟ್ಟ ಉತ್ತಮವಾಗಿರುತ್ತದೆ.