Reading Time: 2 minutes

ಕೊಲೆಸ್ಟರಾಲ್ ನಿಮ್ಮ ರಕ್ತದಲ್ಲಿ (ಮತ್ತು ನಿಮ್ಮ ದೇಹದಲ್ಲಿನ ಇತರ ಭಾಗಗಳಲ್ಲಿ) ಸುತ್ತುತ್ತಿರುವ ಒಂದು ಕೊಬ್ಬಿನಂತಹ ವಸ್ತು. ಕೆಲವು ಹಾರ್ಮೋನ್‌ಗಳನ್ನು ಮತ್ತು ವಿಟಮಿನ್‌ಗಳನ್ನು ತಯಾರಿಸುವಲ್ಲಿ ಇದು ಅತ್ಯವಶ್ಯಕವಾಗಿದ್ದರೂ, ಅತಿ ಹೆಚ್ಚು ಕೊಲೆಸ್ಟರಾಲ್‌ನ ಉಪಸ್ಥಿತಿಯು ರಕ್ತನಾಳಗಳಲ್ಲಿ ಅದರ ಶೇಖರಣೆಗೆ ದಾರಿ ಮಾಡಿಕೊಡುತ್ತದೆ, ಹೀಗೆ ಅವುಗಳನ್ನು ಕಿರಿದು ಮತ್ತು ಬಿಗಿಗೊಳಿಸುತ್ತದೆ.(1) ಇದು ದೀರ್ಘಕಾಲದಲ್ಲಿ ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ತೊಂದರೆಗಳು(1, 2)

ಆ್ಯಂಜಿನ ಮತ್ತು ಹೃದಯಾಘಾತ:

ಒಂದು ವೇಳೆ ಹೃದಯಕ್ಕೆ ರಕ್ತವನ್ನು ಒದಗಿಸುವ ಕೊರೋನರಿ ಆರ್ಟರಿಗಳು (ಪರಿಧಮನಿಯ ಅಪಧಮನಿಗಳು) ಬ್ಲಾಕ್ ಆಗಿದ್ದರೆ, ಹೃದಯದ ಸ್ನಾಯುಗಳಿಗೆ ಪಂಪ್ ಮಾಡುವಷ್ಟು ರಕ್ತ ಸಾಮಾನ್ಯವಾಗಿ ಸಿಗುವುದಿಲ್ಲ. ಇದರಿಂದಾಗಿ ಕೊರೋನರಿ ಹೃದಯದ ಕಾಯಿಲೆ ಬರಬಹುದು, ಸಾಮಾನ್ಯವಾಗಿ ಇದು ಆ್ಯಂಜಿನ (ಎದೆ ನೋವು) ಅಥವಾ ಹೃದಯಾಘಾತವೇ ಆಗಿರುವ ಸಾಧ್ಯತೆ ಇರುತ್ತದೆ. ಹೃದಯಕ್ಕೆ ರಕ್ತದ ಹರಿಯುವಿಕೆಯು ದುರ್ಬಲಗೊಂಡಿದೆಯೆಂದು ಆ್ಯಂಜಿನ ಸೂಚಿಸುತ್ತದೆ; ಇದು ಸದ್ಯದಲ್ಲೇ ಬಂದೆರಗಬಹುದಾದ ಹೃದಯಾಘಾತದ ಮುನ್ಸೂಚನೆಯಾಗಿರುತ್ತದೆ.

ಪಾರ್ಶ್ವವಾಯು:

ಮೆದುಳಿನ ಒಂದು ಅಥವಾ ಹೆಚ್ಚಿನ ಭಾಗಗಳಿಗೆ ರಕ್ತವನ್ನು ಒದಗಿಸುವ  ಅಪಧಮನಿಗಳು ಕಿರಿದಾದಾಗ ಅಥವಾ ಬ್ಲಾಕ್ ಆದಾಗ, ಇದು ಟ್ರಾನ್ಸಿಯೆಂಟ್ ಇಸ್ಕೇಮಿಕ್ ಅಟ್ಯಾಕ್ (TIAs) ಅಥವಾ ಪಾರ್ಶ್ವವಾಯುಗಳಿಗೆ ಕಾರಣವಾಗಬಹುದು. ಟಿಐಎಗಳು ಸಣ್ಣ ಮಟ್ಟದ ಸ್ಟ್ರೋಕ್‌ಗಳಾಗಿದ್ದು, ಸ್ಟ್ರೋಕ್‌ನ ಲಕ್ಷಣಗಳನ್ನು ಹೊಂದಿರುತ್ತವೆ, ಆದರೆ ಇದರಿಂದಾಗುವ ಹಾನಿ ಶಾಶ್ವತವಲ್ಲ. ಆದರೆ, ಅವುಗಳನ್ನು ಎಚ್ಚರಿಕೆಯ ಸಂಕೇತವಾಗಿ ತೆಗೆದುಕೊಳ್ಳಬೇಕು.

ಪೆರಿಫೆರಲ್ ಆರ್ಟರಿ ಕಾಯಿಲೆ:

ಪೆರಿಫೆರಲ್ ಆರ್ಟರಿ ಕಾಯಿಲೆಯು, ಹೃದಯ ಮತ್ತು ಮೆದುಳಿನ ಭಾಗಗಳನ್ನು ಬಿಟ್ಟು ದೇಹದ ಉಳಿದ ಭಾಗಗಳಲ್ಲಿ, ಕಿರಿದಾಗಿರುವ ರಕ್ತನಾಳಗಳಲ್ಲಾಗಿರುವ ತೊಂದರೆಗಳನ್ನು ಸೂಚಿಸುತ್ತದೆ. ಕೈ ಮತ್ತು ಪಾದಗಳಲ್ಲಿನ ರಕ್ತನಾಳಗಳಲ್ಲಿ ಸಾಮಾನ್ಯವಾಗಿ ಇದು ಕಂಡುಬರುತ್ತದೆ.

ಅಧಿಕ ರಕ್ತದೊತ್ತಡ:

ಒಂದು ವೇಳೆ ಹೆಚ್ಚಿನ ಅಪಧಮನಿಗಳು ಕಿರಿದಾಗಿ ಮತ್ತು ಬಿಗಿಯಾಗಿದ್ದರೆ, ರಕ್ತವು ಅವುಗಳ ಮೂಲಕ ಹಾದುಹೋಗಲು ಮತ್ತು ಎಲ್ಲಾ ಅಂಗಗಳನ್ನು ತಲುಪಲು, ಹೃದಯವು ಹೆಚ್ಚಿನ ಪರಿಶ್ರಮದಿಂದ ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ. ಇದು ಸಾಮಾನ್ಯವಾಗಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಇದರಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ.

ತಡೆಗಟ್ಟುವಿಕೆ (1, 2)

ಜೀವನಶೈಲಿಯ ಮಾರ್ಪಾಡುಗಳು:

  • ಧೂಮಪಾನವನ್ನು ನಿಲ್ಲಿಸಿ. ಇದು ಹೃದಯರಕ್ತನಾಳಗಳ ಕಾಯಿಲೆಯನ್ನು ಉಂಟುಮಾಡುವ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
  • ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ. ಆರೋಗ್ಯಕರ ಆಹಾರವನ್ನು ಸೇವಿಸುವುದು, ನಿಮ್ಮ ತೂಕದ ಮೇಲೆ ಗಮನವಿಡುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು, ಅಂದರೆ ಏರೋಬಿಕ್‌ನಂತಹ ವ್ಯಾಯಾಮಗಳನ್ನು ಮಾಡುವುದು ಹೃದಯರಕ್ತನಾಳಗಳ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.
  • ಒತ್ತಡವನ್ನು ಉತ್ತಮವಾಗಿ ನಿಭಾಯಿಸಿ. ನಿಮ್ಮ ಸಮಸ್ಯೆಗಳನ್ನು ಒಂದೇಸಲಕ್ಕೆ ಹೊಡೆದೋಡಿಸಲು ಸಾಧ್ಯವಿಲ್ಲ. ಆದರೆ, ಯೋಗ ಮತ್ತು ಧ್ಯಾನಗಳಿಂದ ಅವುಗಳನ್ನು ಹೆಚ್ಚು ಉತ್ತಮವಾಗಿ ನಿರ್ವಹಿಸುವುದನ್ನು ಕಲಿಯಬಹುದು. ಅವು ನಿಮ್ಮ ದೈಹಿಕ ಆರೋಗ್ಯ ಸಮಸ್ಯೆಗಳನ್ನೂ ಕಡಿಮೆಗೊಳಿಸುತ್ತವೆ.

ಚಿಕಿತ್ಸೆಗಳು:

ಡಿಸ್ಲಿಪಿಡೀಮಿಯ ಚಿಕಿತ್ಸೆಯಲ್ಲಿ  ಸ್ಟ್ಯಾಟಿನ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಸ್ಟ್ಯಾಟಿನ್‌ಗಳು ಒಗ್ಗದ ಜನರಿಗೆ ಇತರೆ ಔಷಧಿಗಳಿವೆ.

ಅಧಿಕ ಕೊಲೆಸ್ಟರಾಲ್‌ ಅನ್ನು ಹೇಗೆ ಎದುರಿಸುವುದು ಮತ್ತು ಅದರ ಪರಿಣಾಮಗಳನ್ನು ಹೇಗೆ ತಡೆಗಟ್ಟುವುದು ಎಂಬುದರ ಕುರಿತು ಹೆಚ್ಚಿನ ವಿವರಗಳಿಗಾಗಿ, ನಮ್ಮ ಬರಹವಾದ “ಡಿಸ್ಲಿಪಿಡೀಮಿಯ ಚಿಕಿತ್ಸೆ – ನೀವು ತಿಳಿದಿರಬೇಕಾದ ಪ್ರತಿಯೊಂದು ಅಂಶಗಳು” ಇದನ್ನು ನೋಡಿ.

ತಪಾಸಣೆ:

ನೀವು ಧೂಮಪಾನಿಯಾಗಿದ್ದರೆ ಮತ್ತು/ಅಥವಾ ನಿಮಗೆ ಡಯಾಬಿಟಿಸ್ ಅಥವಾ ಹೃದಯರಕ್ತನಾಳದ ಯಾವುದೇ ಕಾಯಿಲೆ ಇದ್ದರೆ, ಅಥವಾ ನಿಮ್ಮ ಕುಟುಂಬದ ಸದಸ್ಯರಲ್ಲಿ ಯಾರಾದರೂ ಈ ಕಾಯಿಲೆಯನ್ನು ಹೊಂದಿದ್ದರೆ, ನಿಮ್ಮ ಕೊಲೆಸ್ಟರಾಲ್ ಅಂದರೆ ನಿಮ್ಮ ಲಿಪಿಡ್ ಪ್ರೊಫೈಲ್ಅನ್ನು ಪ್ರತಿ ವರ್ಷವೂ  ಪರೀಕ್ಷಿಸಿಕೊಳ್ಳಬೇಕು.(2) 

ಸಾಮಾನ್ಯವಾಗಿ, ಇದನ್ನು ನಿಖರವಾಗಿ ಪರೀಕ್ಷಿಸಲು 10-12 ಗಂಟೆಗಳ ಉಪವಾಸದ ಅಗತ್ಯವಿರುತ್ತದೆ, ಆದರೆ ಹೆಚ್ಚೇನೂ ವ್ಯತ್ಯಾಸಗಳಿಲ್ಲದ ಕಾರಣದಿಂದ, ಇತ್ತೀಚಿನ ಮಾರ್ಗಸೂಚಿಗಳು ಉಪವಾಸವಿಲ್ಲದೆಯೂ ಕೂಡ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು ಎಂದು ಹೇಳುತ್ತವೆ. ಹಾಗಾಗಿ, ನಿಮ್ಮ ಲಿಪಿಡ್ ಪ್ರೊಫೈಲ್ ಪರೀಕ್ಷೆಯನ್ನು ಯಾವಾಗ ಬೇಕಾದರೂ ಮಾಡಬಹುದು. ಲಿಪಿಡ್‌ಗಳ ಜೊತೆಗೆ, ನಿಮ್ಮ ಗ್ಲೂಕೋಸ್‌ಅನ್ನು ಸಹ ನೀವು ಪರೀಕ್ಷಿಸಬೇಕು.(2)

ಆಕರಗಳು:

  1. Lawes CM, Vander Hoorn ST, Law MR, Rodgers A. High cholesterol. Comparative Quantification of Health Risks, Global and Regional Burden of Disease Attributable to Selected Major Risk Factors. Geneva: the World Health Organization. 2004:391-496.
  2. Anderson TJ, Gregoire J, Pearson GJ, Barry AR, Couture P, Dawes M, et al. 2016 Canadian Cardiovascular Society guidelines for the management of dyslipidemia for the prevention of cardiovascular disease in the adult. Canadian Journal of Cardiology. 2016 Nov 1;32(11):1263-82.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.