ಅಧಿಕ ಕೊಲೆಸ್ಟರಾಲ್ ಮಟ್ಟವು, ಹಲವಾರು ಜೀವನಶೈಲಿಗೆ-ಸಂಬಂಧಿಸಿದ ಅಂಶಗಳಿಂದಾಗಿ ಕ್ರಮೇಣ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ ಮತ್ತು ಬೊಜ್ಜು ಮುಂತಾದವುಗಳಿಂದ ಅಧಿಕ ಕೊಲೆಸ್ಟರಾಲ್ ಮಟ್ಟದ ಸಮಸ್ಯೆ ಕಂಡುಬರುತ್ತದೆ. ಈಗ ಹೇಳಿದ ಮೆಲಿನ ಅಂಶಗಳನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲೇ ಇರುತ್ತದೆ. ಹಾಗಾಗಿ ನಾವು ಒಳ್ಳೆಯ ಆಯ್ಕೆಗಳನ್ನು ಮಾಡುವ ಮೂಲಕ ಅಧಿಕ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಬಹುದಾಗಿದೆ. ಆದಾಗ್ಯೂ, ನೀವು ಅನಾರೋಗ್ಯಕರ ಪದ್ಧತಿಗಳನ್ನು ಅಳವಡಿಸಿಕೊಂಡರೆ ಕೊಲೆಸ್ಟರಾಲ್ ಮಟ್ಟ ಹೆಚ್ಚಾಗುವ ಅಪಾಯವಿರುತ್ತದೆ. ಆದ್ದರಿಂದ, ಅಧಿಕ ಕೊಲೆಸ್ಟರಾಲ್ ಮಟ್ಟವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ; ಅಧಿಕ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಲು ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು ಅಷ್ಟೆ.
ನವ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಹೃದಯ ರೋಗ ತಜ್ಞ ಡಾ. ನಿತೀಶ್ ನಾಯಕ್ ಅವರು ಹೀಗೆ ಹೇಳಿದ್ದಾರೆ. ಆರೋಗ್ಯಕರ ಆಹಾರ ಕ್ರಮ, ನಿಯಮಿತವಾದ ದೈಹಿಕ ಚಟುವಟಿಕೆ ಮತ್ತು ಸರಿಯಾದ ದೇಹದ ತೂಕವು ಕೊಲೆಸ್ಟರಾಲ್ ನಿಯಂತ್ರಿಸಲು ಬೇಕಿರುವ ಮೂಲಾಧಾರಗಳಾಗಿವೆ. “ಹಲವು ರೋಗಿಗಳ ಕಾಯಿಲೆ ನಿಯಂತ್ರಿಸುವಲ್ಲಿ ಚಿಕಿತ್ಸೆಯು ಸಹ ಪ್ರಮುಖ ಪಾತ್ರವಹಿಸುತ್ತವೆ. ನಿಮ್ಮ ಕೊಲೆಸ್ಟರಾಲ್ ಮಟ್ಟವನ್ನು ಚಿಕಿತ್ಸೆಯ ನೆರವಿನಿಂದ ನಿಯಂತ್ರಣಕ್ಕೆ ತಂದ ಮೇಲೆ, ಅದನ್ನು ನಿರ್ವಹಿಸುವಲ್ಲಿ ಜೀವನಶೈಲಿಯ ಪಾತ್ರ ಏನೂ ಇಲ್ಲ ಎಂದು ತಪ್ಪು ತಿಳಿದುಕೊಳ್ಳಬಾರದು. ನಿಜ ಹೇಳಬೇಕೆಂದರೆ, ಹೃದಯ ರೋಗದ ಅಪಾಯವನ್ನು ಕಡಿಮೆಮಾಡಲು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವುದು ಸರಿಯಾದ ದಾರಿಯಾಗಿದೆ.”
ಆಹಾರ ಕ್ರಮದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ:
1. ಕೊಬ್ಬಿನಾಂಶ ಇರುವ ಆಹಾರವನ್ನು ಕಡಿಮೆ ಸೇವಿಸುವುದು:
ಸಂಸ್ಕರಿಸಿದ ಅಥವಾ ಸ್ಯಾಚುರೇಟೆಡ್ ಕೊಬ್ಬು ಹಾಗು ಟ್ರ್ಯಾನ್ಸ್ ಕೊಬ್ಬು ಹೆಚ್ಚಾಗಿರುವ ಆಹಾರ ಸೇವಿಸಬಾರದು. ಈ ಆಹಾರ ನಿಮ್ಮ ಹೃದಯದ ಅಪಧಮನಿ ಗೋಡೆಗಳ ಮೇಲೆ ಸಂಗ್ರಹವಾಗುವ LDL (ಲೋ-ಡೆನ್ಸಿಟಿ ಲಿಪೊಫ್ರೋಟೀನ್) ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ದೇಹದಲ್ಲಿನ ರಕ್ತದ ಸಂಚಾರಕ್ಕೆ ತೊಂದರೆಯಾಗುತ್ತದೆ. ಕೊನೆಗೆ ಇದು ಹೃದಯ ರೋಗಕ್ಕೆ ಕಾರಣವಾಗುತ್ತದೆ. ಆದ್ದರಿಂದ ಪಿಜ್ಜಾ, ಬರ್ಗರ್, ಉಪ್ಪು ಜಾಸ್ತಿ ಇರುವ ಆಹಾರ, ಸಿಹಿತಿಂಡಿ ಮತ್ತು ಕೆಂಪು ಮಾಂಸದ ಪದಾರ್ಥಗಳನ್ನು ದೂರ ಇಡುವುದರಿಂದ, ನಿಮ್ಮ ಕೊಲೆಸ್ಟರಾಲ್ ಮಟ್ಟದ ಮೇಲೆ ಸ್ವಾಭಾವಿಕವಾಗಿ ಒಂದು ನಿಯಂತ್ರಣವನ್ನು ಹೇರಬಹುದು.
2. ಆರೋಗ್ಯಕರ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುವುದು:
ನೀವು ಹೈ-ಡೆನ್ಸಿಟಿ ಲಿಪೊಫ್ರೋಟೀನ್ (HDL) ಕೊಲೆಸ್ಟರಾಲ್ ಹೆಚ್ಚಿರುವ ಆಹಾರ ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಅನಾರೋಗ್ಯಕರ ಕೊಲೆಸ್ಟರಾಲನ್ನು ಹೊರಹಾಕಬಹುದು. ಹಾಗಾಗಿ, ಆರೋಗ್ಯಕರ ಕೊಲೆಸ್ಟರಾಲನ್ನು ಹೆಚ್ಚಿಸುವ ಆಲಿವ್, ಕಡಲೆಕಾಯಿ ಮತ್ತು ಆವಕಾಡೊಗಳನ್ನು ಸಾಕಷ್ಟು ಸೇವಿಸಿ.
3.ನಾರಿನಾಂಶ ಹೆಚ್ಚಿರುವ ಆಹಾರವನ್ನು ಸೇವಿಸಿ:
ತರಕಾರಿ, ಹಣ್ಣುಗಳು ಮತ್ತು ದ್ವಿದಳ ಧಾನ್ಯಗಳಿಂದ ತಯಾರಿಸಿದ ಆಹಾರ ತಿನ್ನುವುದರಿಂದ, ನಿಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಖನಿಜಗಳು ಸಿಗುತ್ತವೆ. ಅವು ನಿಮ್ಮ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗುತ್ತವೆ. ಆ್ಯಂಟಿ-ಆಕ್ಸಿಡೆಂಟ್ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿ ಆಗ ನಿಮ್ಮ ಆರೋಗ್ಯಕರ ಕೊಲೆಸ್ಟರಾಲ್ ಹೆಚ್ಚಾಗುತ್ತದೆ. ಇದಲ್ಲದೇ, ನಾರಿನಾಂಶ ಇರುವ ಆಹಾರಗಳು ತೂಕ ಇಳಿಸಲು ನೆರವಾಗುತ್ತವೆ ಮತ್ತು ರಕ್ತದಿಂದ LDL ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತವೆ. ಇವು ಪರೋಕ್ಷವಾಗಿ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತವೆ.
ನಿಮ್ಮ ದೇಹವನ್ನು ಸದೃಢಗೊಳಿಸಿ
ನಿಮ್ಮ ದೇಹವನ್ನು ಸದೃಢಗೊಳಿಸಲು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಎಲ್ಲಾ ಕೆಟ್ಟ ಅಭ್ಯಾಸಗಳನ್ನು ಬಿಡುವುದು. ನಿಮಗೆ ಧೂಮಪಾನ ಮಾಡುವ ಚಟ ಇದ್ದರೆ, ಅದನ್ನು ಮೊದಲು ನಿಲ್ಲಿಸಿ; ಜೊತೆಗೆ ಕುಡಿತದ ಅಭ್ಯಾಸವಿದ್ದರೆ, ಆಲ್ಕೋಹಾಲ್ ಕುಡಿಯುವುದನ್ನು ಮಿತಿಯಲ್ಲಿರಿಸಿ. ಚೆನ್ನಾಗಿ ನಿದ್ದೆ ಮಾಡಿ. ತೂಕ ಇಳಿಸುವ ಕಡೆ ಗಮನಹರಿಸಿ, ವ್ಯಾಯಾಮ ಮಾಡಲು ಶುರುಮಾಡಿ. ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ಸದೃಢವಾಗಿರುವುದರ ಜೊತೆಗೆ ಕೊಲೆಸ್ಟರಾಲ್ ಮಟ್ಟ ಕೂಡ ಕಡಿಮೆ ಆಗುತ್ತದೆ. ವ್ಯಾಯಾಮವು ಹೃದಯ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಪ್ರತಿನಿತ್ಯ 45-60 ನಿಮಿಷಗಳ ಕಾಲ ಮಧ್ಯಮ-ತೀವ್ರತೆಯ ವ್ಯಾಯಾಮ ಮಾಡುವುದರ ಜೊತೆಗೆ, ಸರಿಯಾದ ಆಹಾರ ಕ್ರಮಗಳನ್ನು ಪಾಲಿಸುವುದರಿಂದ ದೇಹದಲ್ಲಿನ LDL ಬೇಗನೆ ಕಡಿಮೆಯಾಗುತ್ತದೆ.
ಒತ್ತಡದಿಂದ ದೂರವಿರಿ
ಅಧಿಕ ಒತ್ತಡದಿಂದ ಅಮೈನೊ ಆಮ್ಲವಾದ ಹೋಮೋಸಿಸ್ಟೈನ್ ಮಟ್ಟವು ಹೆಚ್ಚಾಗುತ್ತದೆ, ಇದರಿಂದ ಕೊಲೆಸ್ಟರಾಲ್ ಹೆಚ್ಚಾಗುವ ಮತ್ತು ಹೃದಯ ರೋಗದ ಅಪಾಯ ಎದುರಾಗುತ್ತದೆ. ಆದ್ದರಿಂದ, ಒತ್ತಡವಿಲ್ಲದ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಿ, ಆಗಾಗ್ಗೆ ನಿಮಗೆ ಅಗತ್ಯವಿರುವಾಗ ವಿಶ್ರಾಂತಿ ಪಡೆಯಿರಿ. ಯೋಗ, ಧ್ಯಾನ, ನೃತ್ಯ ಮತ್ತು ಈಜು ಮುಂತಾದ ಚಟುವಟಿಕೆಗಳನ್ನು ಮಾಡಿ ಇದರಿಂದ ನಿಮಗೆ ವಿಶ್ರಾಂತಿ ಸಿಗುವುದಲ್ಲದೇ, ಇವು ದಿನನಿತ್ಯ ಮಾಡಬಹುದಾದ ಒಳ್ಳೆಯ ವ್ಯಾಯಾಮಗಳಾಗಿವೆ.
ಚಿಕಿತ್ಸೆ
ಚಿಕಿತ್ಸೆಯಿಂದ ಅಧಿಕ ಕೊಲೆಸ್ಟರಾಲನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಚಿಕಿತ್ಸೆಯಿಂದ ನಿಮ್ಮ ಕೊಲೆಸ್ಟರಾಲನ್ನು ಸಾಮಾನ್ಯ ಮಟ್ಟಕ್ಕೆ ತರಬಹುದು. ನೀವು ಅಧಿಕ ಕೊಲೆಸ್ಟರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಸ್ಟಾಟಿನ್ಸ್ ಮತ್ತು ಫೈಬ್ರೇಟ್‌ಗಳಂತಹ ಔಷಧಿಗಳನ್ನು ತೆಗೆದುಕೊಳ್ಳುವಂತೆ ನಿಮ್ಮ ವೈದ್ಯರು ನಿಮಗೆ ಶಿಫಾರಸು ಮಾಡುತ್ತಾರೆ. ಒಂದು ವೇಳೆ, ನೀವು ಔಷಧಿ ತೆಗದುಕೊಳ್ಳುವುದನ್ನು ನಿಲ್ಲಿಸಿದರೆ, ನಿಮ್ಮ ಕೊಲೆಸ್ಟರಾಲ್ ಮಟ್ಟ ಏರುಪೇರಾಗಬಹುದು. ಇದಲ್ಲದೇ, ಔಷಧಿಗಳಿಂದ ಕೆಲವು ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ಹೆಚ್ಚಿನ ಕೊಲೆಸ್ಟರಾಲ್ ನಿಯಂತ್ರಿಸಲು ಮೊದಲಿಗೆ, ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳಿ, ಬಳಿಕ ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಳ್ಳಿ ಮತ್ತು ಸೂಕ್ತವಾದ ವ್ಯಾಯಾಮ ಮಾಡಿ.