ತಜ್ಞರಿಂದ ವಿಮರ್ಶೆ – ಅಶ್ವಿನಿ ಎಸ್.ಕಾನಡೆ, ನೋಂದಾಯಿತ ಡಯಟಿಶಿಯನ್ ಮತ್ತು ಪ್ರಮಾಣೀಕೃತ ಡಯಾಬಿಟಿಸ್ ಶಿಕ್ಷಕರು. ಇವರಿಗೆ 17 ವರ್ಷಗಳ ಅನುಭವವಿದೆ
ಸತ್ಯಾಂಶವನ್ನು ಪರೀಕ್ಷಿಸಿದವರು – ಆದಿತ್ಯ ನಾರ್, ಬಿ.ಫಾರ್ಮ್, ಎಂ.ಎಸ್‌ಸಿ. ಸಾರ್ವಜನಿಕ ಆರೋಗ್ಯ ಮತ್ತು ಆರೋಗ್ಯ ಅರ್ಥಶಾಸ್ತ್ರ
ವಿಕ್ರಮ್ ಕುಲಕರ್ಣಿ, 45 ವರ್ಷದ ಬೆಂಗಳೂರಿನ ಟೆಕೀ, ಇವರಿಗೆ 2011 ರಲ್ಲಿ ಡಯಾಬಿಟಿಸ್ ಇರುವ ವಿಷಯ ಗೊತ್ತಾಯಿತು. “ಡಯಾಬಿಟಿಸ್ ಇದೆ ಎಂದು ಗೊತ್ತಾದಾಗ ನನಗೆ ಅಂತಹ ಆಶ್ಚರ್ಯವೇನೂ ಆಗಲಿಲ್ಲ, ಏಕೆಂದರೆ ನಮ್ಮ ಕುಟುಂಬದಲ್ಲಿ ಎಲ್ಲರಿಗೂ ಡಯಾಬಿಟಿಸ್ ಇದೆ, ಅಲ್ಲದೇ ಆ ದಿನಗಳಲ್ಲಿ ಒತ್ತಡವೂ ಸಹ ಹೆಚ್ಚಿತ್ತು,” ಹೀಗೆ ಕುಲಕರ್ಣಿಯವರು ಮಾತು ಮುಂದುವರೆಸುತ್ತಾರೆ. ಡಾಕ್ಟರ್ ಅವರಿಗೆ ಔಷಧಿಗಳನ್ನು ಸೂಚಿಸಿದ್ದರು. ಹಾಗೆಯೇ ಅವರ ಆಹಾರಕ್ರಮದ ಆದ್ಯತೆಯು ಸಮಂಜಸವಾಗಿತ್ತು ಹಾಗೂ ಅವರ ಜೀವನಶೈಲಿಯೂ ಚಟುವಟಿಕೆಯಿಂದಲೇ ಕೂಡಿತ್ತು. ಕೆಲವು ವರ್ಷಗಳ ನಂತರ, ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿದ್ದರೂ ಯಾವಾಗ ರಕ್ತದಲ್ಲಿನ ಗ್ಲೂಕೋಸ್ ಮಟ್ಟವೂ ಮಾತ್ರ ಕಡಿಮೆಯಾಗುತ್ತಿಲ್ಲ ಎಂಬುದು ತಿಳಿಯಿತು, ಆಗ ಡಾಕ್ಟರ್ ಔಷಧಿಯ ಪ್ರಮಾಣವನ್ನು ಹೆಚ್ಚಿಸಿದರು. “ಆಗಲೇ ನಾನು ಈ ಸ್ಥಿತಿಯೂ ನನ್ನ ಜೀವನದ ದಿಕ್ಕನ್ನು ನಿರ್ಣಯಿಸಬಾರದೆಂದು ನಿರ್ಧರಿಸಿದೆ, ಹಾಗೂ ಸೈಕ್ಲಿಂಗ್ ಮಾಡಲು ಶುರು ಮಾಡಿದೆ ಹಾಗೂ ಆಹಾರಕ್ರಮದ ಬಗ್ಗೆ ಹೆಚ್ಚು ಗಮನವಹಿಸಲು ತೀರ್ಮಾನಿಸಿದೆ. ಎಚ್ಚರದಿಂದ ತಿನ್ನುವುದರ ಜೊತೆಗೆ ಪ್ರತಿದಿನ ನಡೆಯುವ ಮೂಲಕ, ನಾನು ಡಯಾಬಿಟಿಸನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದೆ ಹಾಗೂ ಕಳೆದ 2 ವರ್ಷಗಳಿಂದ ಡಯಾಬಿಟಿಸ್‍ಗಾಗಿ ಯಾವುದೇ ಔಷಧಿಯನ್ನು ತೆಗೆದುಕೊಂಡಿಲ್ಲ,” ಎಂದು ಹೇಳುತ್ತಾರೆ.
ವಿಕ್ರಮ್‌ರಂತೆಯೇ ಡಯಾಬಿಟಿಸ್ ಇರುವ ಸಾವಿರಾರು ಜನ ತಮ್ಮ ಡಯಾಬಿಟಿಸ್ ಸಮಸ್ಯೆ ಬಗ್ಗೆ ಏನಾದರೂ ಮಾಡಲೇಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡು, ಸರಿಯಾದ ದಾರಿಯನ್ನು ಕಂಡುಕೊಂಡಿದ್ದಾರೆ. ಅಲ್ಲದೇ ಅತಿಮುಖ್ಯವಾಗಿ, ಡಯಾಬಿಟಿಸನ್ನು ಹಿಮ್ಮೆಟ್ಟಿಸುವ ಅವರ ಗುರಿಯನ್ನು ತಲುಪುವವರೆಗೂ ತಮ್ಮ ನಿರ್ಧಾರಕ್ಕೆ ಬದ್ದರಾಗಿದ್ದಾರೆ. ಇತರರ ಕೈಯಲ್ಲಿ ಇದು ಸಾಧ್ಯ ಎನ್ನುವಂತಿದ್ದರೆ, ಅದು ನೀವು ಸಹ ಸಾಧಿಸಬಹುದು. ಡಯಾಬಿಟಿಸ್ ಎನ್ನುವುದು ಜೀವನವಿಡಿ ನಿಮ್ಮನ್ನು ಬಾಧಿಸಬೇಕಾಗಿಲ್ಲ ಎಂಬ ವಿಷಯ ಈಗಾಗಲೇ ಸಾಬೀತಾಗಿದೆ. ಹೆಚ್ಚಿನ ತೊಡಕುಗಳಿಲ್ಲದ ಜೀವನವನ್ನು ನೀವೂ ಸಹ ಬಯಸಬಹುದು, ಹಾಗೂ ಔಷಧಿಗಳಿಲ್ಲದ ಜೀವನದೆಡೆಗೆ ಸಾಗಬಹುದು.
“‘ಡಯಾಬಿಟಿಸನ್ನು ಹಿಮ್ಮೆಟ್ಟಿಸುವುದು’ ಎಂಬ ಪದಗಳ ಅರ್ಥವು, ಮಾದರಿ ದೇಹದ ತೂಕ ಹಾಗೂ ನಿಯಮಿತವಾದ ದೈಹಿಕ ಚಟುವಟಿಕೆಯೊಡನೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಧಾರಣ ಮಟ್ಟದಲ್ಲಿ ಇರಿಸಿಕೊಂಡೇ ಸಂಪೂರ್ಣವಾಗಿ ಇಲ್ಲವೇ ಭಾಗಶಃವಾಗಿ ಔಷಧಿಗಳ ಸೇವನೆಯನ್ನು ನಿಲ್ಲಿಸುವುದು ಎಂದಾಗಿದೆ,” ಎಂದು ನೋಂದಾಯಿತ ಡಯಟಿಶಿಯನ್ ಮತ್ತು ಪ್ರಮಾಣೀಕೃತ ಡಯಾಬಿಟಿಸ್ ಶಿಕ್ಷಕರಾಗಿರುವ ಅಶ್ವಿನಿ ಕಾನಡೆ ಅವರು ಹೇಳುತ್ತಾರೆ.
ಡಯಾಬಿಟಿಸನ್ನು ಹಿಮ್ಮೆಟ್ಟಿಸುತ್ತಿರುವಿರಾ (ಡಯಾಬಿಟಿಸ್ ಹದಗೆಡುತ್ತಿಲ್ಲ ಎಂಬಂತಹ ಒಂದು ಸ್ಥಿತಿ) ಎಂಬುದನ್ನು ತಿಳಿಸುವ ಒಂದೇ ಒಂದು ಪರೀಕ್ಷೆ ಎಂದರೆ HbA1C ಪರೀಕ್ಷೆ, ಇದು ಮೂಲತಃ ಕಳೆದ 3 ತಿಂಗಳುಗಳಲ್ಲಿನ ಸರಾಸರಿ ರಕ್ತದಲ್ಲಿನ ಸಕ್ಕರೆಯ ಮಟ್ಟದ ಅಳತೆ.
ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್‌ನ ಡಯಾಬಿಟಿಸ್ ಕೇರ್ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಹಾರ್ಮೋನ್ ವ್ಯವಸ್ಥೆ, ಡಯಾಬಿಟಿಸ್ ಶಿಕ್ಷಣ, ದೇಹದ ಟ್ರಾನ್ಸ್‍ಪ್ಲ್ಯಾಂಟೇಶನ್, ಮೆಟಬಾಲಿಸಮ್, ತೂಕ-ಇಳಿಸುವ ಶಸ್ತ್ರಚಿಕಿತ್ಸೆ, ರಕ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಕ್ಯಾನ್ಸರ್, ಈ ಎಲ್ಲಾ ಕ್ಷೇತ್ರಗಳಲ್ಲಿ ತಜ್ಞರಾಗಿರುವಂತಹ ಒಂದು ಒಮ್ಮತದ ಗುಂಪಿನವರು, ವಿವಿಧ ಹಂತದಲ್ಲಿ ಡಯಾಬಿಟಿಸ್ ಹಿಮ್ಮೆಟ್ಟಿಸುವುದನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ ಎಂಬುದು ಈ ಕೆಳಗಿನ ಪಟ್ಟಿಯಲ್ಲಿದೆ. ಈ ಶಿಫಾರಸ್ಸುಗಳು ಎಡಿಎನ ಅಧಿಕೃತ ನಿಲುವಾಗಿರುವುದಿಲ್ಲ:(1)
ಭಾಗಶಃ ಹಿಮ್ಮೆಟ್ಟಿಸುವುದು | . ಖಾಲಿ ಹೊಟ್ಟೆಯ ಸಕ್ಕರೆ ಮಟ್ಟವು 100–125 ಮಿಗ್ರಾಂ/ಡಿಎಲ್ ಹಾಗೂ ಕನಿಷ್ಟ ಒಂದು ವರ್ಷದವರೆಗಾದರೂ ಎ1ಸಿ <6.5% ಯಾವುದೇ ಔಷಧಿ ಇಲ್ಲದೇ ನಿಭಾಯಿಸಿರಬೇಕು |
ಸಂಪೂರ್ಣವಾಗಿ ಹಿಮ್ಮೆಟ್ಟಿಸುವುದು | · ಸಾಮಾನ್ಯ ಖಾಲಿ ಹೊಟ್ಟೆಯ ಗ್ಲೂಕೋಸ್ ಮಟ್ಟ (<100 ಮಿಗ್ರಾಂ/ಡಿಎಲ್) ಹಾಗೂ ಕನಿಷ್ಟ ಒಂದು ವರ್ಷದವರೆಗಾದರೂ ಎ1ಸಿ ಅನ್ನು ಯಾವುದೇ ಔಷಧಿ ಇಲ್ಲದೇ ನಿಭಾಯಿಸಿರಬೇಕು |
ದೀರ್ಘಕಾಲದವರೆಗೆ ಹಿಮ್ಮೆಟ್ಟಿಸುವುದು | · ಕನಿಷ್ಠ 5 ವರ್ಷಗಳವರೆಗೆ ಸಂಪೂರ್ಣವಾಗಿ ಡಯಾಬಿಟಿಸ್ ಅನ್ನು ಹಿಮ್ಮೆಟ್ಟಿಸಿದಂತಹ ಸಂದರ್ಭದಲ್ಲಿ, ಡಯಾಬಿಟಿಸ್ ಸಂಪೂರ್ಣವಾಗಿ ಗುಣವಾಗಿದೆ ಎಂದು ಪರಿಗಣಿಸಬಹುದು |
‘ಡಯಾಬಿಟಿಸನ್ನು ಹಿಮ್ಮೆಟ್ಟಿಸುವುದು’ ಹೇಗೆ?
ಡಯಾಬಿಟಿಸನ್ನು ಹಿಮ್ಮೆಟ್ಟಿಸುವ ದಾರಿಯಲ್ಲಿ ಮುಂದುವರೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
1. ಆಹಾರಕ್ರಮ ಹಾಗೂ ವ್ಯಾಯಾಮದ ಮೂಲಕ ಡಯಾಬಿಟಿಸ್ ಹಿಮ್ಮೆಟ್ಟಿಸುವಿಕೆ
ಆಹಾರಕ್ರಮದ ಮೂಲಕ ಆಹಾರ ಸೇವನೆಯ ಮೇಲೆ ಹಿಡಿತವನ್ನು ಸಾಧಿಸುವುದರಿಂದ ಮೇದೋಜ್ಜೀರಕ ಗ್ರಂಥಿಯ ಕೆಲಸವನ್ನು ಸುಧಾರಿಸುವುದರ ಜೊತೆಗೆ ಡಯಾಬಿಟಿಸನ್ನು ಹಿಮ್ಮೆಟ್ಟಿಸಬಹುದು ಎಂದು ಅಧ್ಯಯನಗಳು ತಿಳಿಸಿವೆ.(2)
ಕಡಿಮೆ-ಕ್ಯಾಲರಿಯ ಆಹಾರಕ್ರಮದಿಂದ ಕನಿಷ್ಟ 6 ತಿಂಗಳವರೆಗೆ ಡಯಾಬಿಟಿಸನ ಪ್ರಭಾವವನ್ನು ಕುಗ್ಗಿಸಬಹುದು ಎಂದು ಮತ್ತೊಂದು ಸಂಶೋಧನೆಯ ಆರಂಭಿಕ ಫಲಿತಾಂಶಗಳು ಸೂಚಿಸಿವೆ.(3)
ಡಯಾಬಿಟಿಸನ್ನು ಹಿಮ್ಮೆಟ್ಟಿಸುವುದೊಂದು ಅದ್ಭುತ ವಿಚಾರದಂತೆ ಕಂಡರೂ, ಆ ಹಂತವನ್ನು ತಲುಪುವುದು ಅಸಾಧ್ಯವಾದ ಸಂಗತಿಯೇನಲ್ಲ. ತಜ್ಞರ ಸಹಾಯದೊಂದಿಗೆ ಆಹಾರಕ್ರಮದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವುದರ ಜೊತೆಗೆ ಆರೋಗ್ಯದಲ್ಲಿನ ಪ್ರಗತಿಯನ್ನು ಸತತವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಡಯಾಬಿಟಿಸನ್ನು ಹಿಮ್ಮೆಟ್ಟಿಸುವ ಪ್ರಯಾಣವನ್ನು ನೀವು ಪ್ರಾರಂಭಿಸಿಸಬೇಕು. ಈ ಜೀವನಶೈಲಿಯನ್ನು ನಿಯಮಿತವಾಗಿ ಪಾಲಿಸಿಕೊಂಡು ಹೋಗುವುದರಿಂದ ಇದು ನಿಮ್ಮ ಗುರಿಯನ್ನು ತಲುಪಲು ನೆರವಾಗುವುದು.
ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡುವುದರ ಜೊತೆಗೆ, ಸಾಕಷ್ಟು ದೈಹಿಕ ವ್ಯಾಯಾಮ ಮಾಡುವುದು ಕೂಡ ಅಗತ್ಯವಾಗಿರುತ್ತದೆ. ವ್ಯಾಯಾಮ ತೂಕವನ್ನು ಇಳಿಸಲು ಸಹಾಯ ಮಾಡುವುದಲ್ಲದೇ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸಲು ಸಹ ನೆರವಾಗುತ್ತದೆ.(6) ಡಯಾಬಿಟಿಸ್‌ಗಾಗಿ ಸುಲಭವಾದ ನಾಲ್ಕು ಯೋಗಾಸನಗಳು ಇಲ್ಲಿವೆ, ಇವನ್ನು ನೀವೂ ಪ್ರಯತ್ನಿಸಬಹುದು.
2. ಬೇರಿಯಾಟ್ರಿಕ್ ಸರ್ಜರಿಯ ನಂತರ ಡಯಾಬಿಟಿಸನ್ನು ಹಿಮ್ಮೆಟ್ಟಿಸುವುದು
ತೂಕ ಇಳಿಸುವುದು ನಿಮಗೆ ತುಂಬ ಕಷ್ಟವೆನಿಸಿ, ಡಾಕ್ಟರ್ ನಿಮಗೆ ಬೇರಿಯಾಟ್ರಿಕ್ ಸರ್ಜರಿಯನ್ನು ಶಿಫಾರಸ್ಸು ಮಾಡಿದ್ದರೆ,, ನೀವಿದನ್ನು ಪ್ರಯತ್ನಿಸುವುದು ಬಹುಶಃ ಒಳ್ಳೆಯದು. ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯು 45-95% ರಷ್ಟು ಡಯಾಬಿಟಿಸ್ ನಿವಾರಣೆಯೊಂದಿಗೆ ಸಂಬಂಧಿಸಿದೆ ಎಂದು ಅಧ್ಯಯನಗಳು ತೋರಿಸಿವೆ, ಇದು ಕಾರ್ಯವಿಧಾನದ ಪ್ರಕಾರವನ್ನು ಅವಲಂಬಿಸಿರುತ್ತದೆ.(4)
ಅಲ್ಲದೇ, ತೂಕವನ್ನು ಸಂಪೂರ್ಣವಾಗಿ ಇಳಿಸುವವರೆಗೂ ನೀವೂ ಕಾಯಬೇಕೆಂದೇನಿಲ್ಲ. ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸುವ ಕೆಲವು ದಿನಗಳ ಹಿಂದಿನಿಂದಲೇ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯ ಹಂತಕ್ಕೆ ತಲುಪಲು ಆರಂಭಿಸುತ್ತದೆ. ವಿವಿಧ ಹಾರ್ಮೋನುಗಳ ಬದಲಾದ ಸ್ರವಿಸುವಿಕೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವ ಹಠಾತ್ ಋಣಾತ್ಮಕ ಶಕ್ತಿಯ ಸಮತೋಲನ ಇದಕ್ಕೆ ಕಾರಣವೆಂದು ಅಂದಾಜಿಸಲಾಗಿದೆ.(5)
ಅದನ್ನು ಸಾಧಿಸುವುದು ಹೇಗೆ?
ಡಾಕ್ಟರ್ ಸೂಚಿಸಿರುವ ಪ್ರಸ್ತುತ ಚಿಕಿತ್ಸೆಯ ಜೊತೆಗೆ ಬೆಂಬಲ ಕಾರ್ಯಕ್ರಮದ ಸಹಾಯ ಪಡೆಯುವ ಮೂಲಕ ನೀವು ಡಯಾಬಿಟಿಸನ್ನು ಹಿಮ್ಮೆಟ್ಟಿಸಬಹುದು. ಈ ಕಾರ್ಯಕ್ರಮ ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ ಹಾಗೂ ಸ್ವಯಂ-ಆರೈಕೆಯನ್ನು ಒಳಗೊಂಡಿರಬೇಕು. ಅನುಭವಿ ಡಯಾಬಿಟಿಸ್ ಶಿಕ್ಷಣ ತಜ್ಞರಾಗಿರುವ ಅಶ್ವಿನಿ ಕಾನಡೆಯವರ ಪ್ರಕಾರ, “ಡಯಾಬಿಟಿಸ್ ಹಿಮ್ಮೆಟ್ಟಿಸುವುದು ಒಂದು ಸರಳ ಪರಿಹಾರವಾದರೂ ಇದೊಂದು ಸಂಕೀರ್ಣ ಕ್ರಿಯೆ. ಇದೊಂದು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆ ಹಾಗೂ ಅದನ್ನು ಹಿಮ್ಮೆಟ್ಟಿಸಲು ಕೆಲವು ನಿರ್ದಿಷ್ಟ ಚಿಕಿತ್ಸೆಗಳು ಸಹ ಲಭ್ಯವಿದೆ.”
ಇದನ್ನು ಜೀವನಪರ್ಯಂತ ಕಾಪಾಡಿಕೊಳ್ಳಬಹುದೇ?
ಡಯಾಬಿಟಿಸನ್ನು ಹಿಮ್ಮೆಟ್ಟಿಸುವುದು ಎಂದರೆ ಅದು ಗುಣವಾಯಿತೆಂದಲ್ಲ. ಹಿಮ್ಮೆಟ್ಟಿಸುವುದರೊಂದಿಗೆ, ಔಷಧಿಗಳನ್ನು ಅವಲಂಬಿಸದೆ ಡಯಾಬಿಟಿಸ್ ಪ್ರಗತಿಯನ್ನು ಯಶಸ್ವಿಯಾಗಿ ತಡೆಹಿಡಿಯಬಹುದು. ಆದರೆ ಹಿನ್ನಡೆಯಲ್ಲಿರುವ ಕಾಯಿಲೆಯು ಪುನಃ ಮರುಕಳಿಸುವ ಸಾಧ್ಯತೆ ಇದ್ದೇ ಇದೆ. ಕಡಿಮೆ ಕ್ಯಾಲರಿಯ ಆಹಾರಕ್ರಮ ಮತ್ತು ವ್ಯಾಯಾಮವನ್ನು ಕಾಪಾಡಿಕೊಳ್ಳುವ ಮೂಲಕ ಇದನ್ನು ಜೀವನದುದ್ದಕ್ಕೂ ಪುನಃ ಮರುಕಳಿಸದಂತೆ ನೋಡಿಕೊಳ್ಳಬಹುದು.
ಡಯಾಬಿಟಿಸನ್ನು ಹಿಮ್ಮೆಟ್ಟಿಸಿದ ನಂತರ ನಾನು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?
ನೀವು ಔಷಧಿಗಳನ್ನು ಪುನಃ ಬಳಸದಿರುವುದನ್ನು ಖಾತ್ರಿಪಡಿಸಿಕೊಳ್ಳಲು, ಆರೋಗ್ಯಕರ ಜೀವನಶೈಲಿಯನ್ನು ನಡೆಸುವ ನಿಮ್ಮ ಬದ್ದತೆಯನ್ನು ಕಾಪಾಡಿಕೊಂಡು ಅಂತೆಯೇ ಮುಂದುವರಿಸಬೇಕು. ಆರೋಗ್ಯಕರ ಮಟ್ಟದಲ್ಲಿರುವ ದೀರ್ಘಕಾಲದ ರಕ್ತದಲ್ಲಿನ ಗ್ಲೂಕೋಸ್‍ನೊಂದಿಗೆ, ಡಯಾಬಿಟಿಸ್‍ಗೆ ಸಂಬಂಧಿಸಿದ ರೆಟಿನೋಪತಿಯಂತಹ ಸಮಸ್ಯೆಗಳ ಅಪಾಯವು ಗಮನಾರ್ಹವಾಗಿ ಕುಸಿಯುವ ಸಾಧ್ಯತೆಯಿದೆ. ಒಂದು ವೇಳೆ ಯಾವುದೇ ತೊಂದರೆಗಳನ್ನು ಈಗಾಗಲೇ ಇದ್ದಲ್ಲಿ, ಅನಿರ್ದಿಷ್ಟ ಕಾಲದವರೆಗೂ ಮೇಲ್ವಿಚಾರಣೆಯ ಅಗತ್ಯವಿರುತ್ತದೆ.
ಇಲ್ಲವಾದರೆ, ದೀರ್ಘಕಾಲದವರೆಗಿನ ಹಿಮ್ಮೆಟ್ಟಿಸುವಿಕೆಯ ಹಂತವನ್ನು ತಲುಪುವವರೆಗೂ, ವಾರ್ಷಿಕವಾಗಿ ಸಮಸ್ಯೆಗಳನ್ನು ಗುರುತಿಸುವ ಪರೀಕ್ಷೆಗಳನ್ನು ಶಿಫಾರಸ್ಸು ಮಾಡಲಾಗುತ್ತದೆ. 5 ವರ್ಷ ಇಲ್ಲವೇ ಅದಕ್ಕಿಂತ ಹೆಚ್ಚಿನ ಕಾಲ ಡಯಾಬಿಟಿಸ್-ಮುಕ್ತ ಜೀವನವನ್ನು ನಡೆಸಿದ ನಂತರ, ಪರೀಕ್ಷೆಗಳನ್ನು ಕಡಿಮೆ ಮಾಡಬಹುದು ಹಾಗೂ ಅಂತಿಮವಾಗಿ ಡಾಕ್ಟರ್ ಜೊತೆ ಸಮಾಲೋಚಿಸಿದ ನಂತರ ಅದನ್ನು ಪೂರ್ತಿಯಾಗಿ ನಿಲ್ಲಿಸಬಹುದು.
ಉಲ್ಲೇಖಗಳು:
- Buse JB, Caprio S, Cefalu WT, et al. How Do We Define Cure of Diabetes? Diabetes Care. 2009;32(11):2133-2135. doi:10.2337/dc09-9036.
- Lim EL, Hollingsworth KG, Aribisala BS, Chen MJ, Mathers JC, Taylor R. Reversal of type 2 diabetes: normalisation of beta cell function in association with decreased pancreas and liver triacylglycerol. Diabetologia. 2011 Oct;54(10):2506-14. doi: 10.1007/s00125-011-2204-7. Epub 2011 Jun 9. PubMed PMID: 21656330; PubMed Central PMCID: PMC3168743.
- Steven S, Hollingsworth KG, Al-Mrabeh A, Avery L, Aribisala B, Caslake M, Taylor R. Very Low-Calorie Diet and 6 Months of Weight Stability in Type 2 Diabetes: Pathophysiological Changes in Responders and Nonresponders. Diabetes Care. 2016 May;39(5):808-15. doi: 10.2337/dc15-1942. Epub 2016 Mar 21. PubMed PMID: 27002059.
- Vetter ML, Ritter S, Wadden TA, Sarwer DB. Comparison of Bariatric Surgical Procedures for Diabetes Remission: Efficacy and Mechanisms. Diabetes Spectr. 2012 Nov 1;25(4):200-210. PubMed PMID: 23264721; PubMed Central PMCID: PMC3527013.
- Lim EL, Hollingsworth KG, Aribisala BS, Chen MJ, Mathers JC, Taylor R. Reversal of type 2 diabetes: normalisation of beta cell function in association with decreased pancreas and liver triacylglycerol. Diabetologia. 2011;54(10):2506-2514. doi:10.1007/s00125-011-2204-7.
- El-Badawy A, El-Badri N. Clinical Efficacy of Stem Cell Therapy for Diabetes Mellitus: A Meta-Analysis. Quaini F, ed. PLoS ONE. 2016;11(4):e0151938. doi:10.1371/journal.pone.0151938.
- Steven S, Lim EL, Taylor R. Population response to information on reversibility of Type 2 diabetes. Diabet Med. 2013 Apr;30(4):e135-8. doi: 10.1111/dme.12116. PubMed PMID: 23320491.
- Sarathi V, Kolly A, Chaithanya HB, Dwarakanath CS. High rates of diabetes reversal in newly diagnosed Asian Indian young adults with type 2 diabetes mellitus with intensive lifestyle therapy. Journal of Natural Science, Biology, and Medicine. 2017;8(1):60-63. doi:10.4103/0976-9668.198343.