Reading Time: 3 minutes

ಸರಿಯಾದ ಆಹಾರ ಕ್ರಮದೊಂದಿಗೆ ನಿರ್ವಹಿಸಬಹುದಾದ, ಅನೇಕ ಜೀವನಶೈಲಿಯ ಕಾಯಿಲೆಗಳಲ್ಲಿ ಅಧಿಕ ರಕ್ತದೊತ್ತಡವೂ ಒಂದು. ಕ್ರಮವಲ್ಲದ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಆಹಾರವು ನಿಮ್ಮ ರಕ್ತದೊತ್ತಡದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು. ಅದರ ಜೊತೆಗೆ ದೃಷ್ಟಿದೋಷ, ಮೂತ್ರಪಿಂಡದ ವೈಫಲ್ಯ, ಪಾರ್ಶ್ವವಾಯು ಅಥವಾ ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು. ಅದಲ್ಲದೇ, ಅತಿಯಾದ ತಂಬಾಕು ಮತ್ತು ಮದ್ಯ ಸೇವನೆ, ಹೆಚ್ಚಿನ ಸೋಡಿಯಂ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ಮಧುಮೇಹ ಅಥವಾ ಕೊಲೆಸ್ಟರಾಲ್‍ನಂತಹ ದೀರ್ಘಕಾಲದ ತೊಂದರೆಗಳು, ರಕ್ತದೊತ್ತಡದ ದುಷ್ಪರಿಣಾಮವನ್ನು ಇನ್ನೂ ಹೆಚ್ಚಿಸುತ್ತವೆ. ಆದ್ದರಿಂದ, ಈ ಪರಿಸ್ಥಿತಿಯನ್ನು ನಿರ್ವಹಿಸಬೇಕಿದೆ ಅಥವಾ ಅದನ್ನು ತಡೆಯಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ನವದೆಹಲಿಯ ಸರೋಜ್ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್‍ನ, ಡಯೆಟೆಟಿಕ್ಸ್ ವಿಭಾಗದಲ್ಲಿ ಎಚ್ಒಡಿ ಆಗಿರುವ ನಿಧಿ ಧವನ್ ಅವರು ರಕ್ತದೊತ್ತಡದ ನಿಯಂತ್ರಣಕ್ಕೆ ಕೆಲವು ಆಹಾರಗಳನ್ನು ಸೂಚಿಸುತ್ತಾರೆ. ಅವುಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಅವುಗಳನ್ನು ನಾವು ವಿವರವಾಗಿ ನೋಡೋಣ.

ಹಲವಾರು ಆರೋಗ್ಯಕರ ಆಹಾರಗಳು ಕಡಿಮೆ ಅಥವಾ ಯಾವುದೇ ಪೂರ್ವಸಿದ್ಧತೆಯಿಲ್ಲದೆ ಸುಲಭವಾಗಿ ನಿಮ್ಮ ದೈನಂದಿನ ಊಟ ಅಥವಾ ತಿಂಡಿಯ ಒಂದು ಭಾಗವಾಗಿಬಿಡಬಹುದು. ಆರೋಗ್ಯಪೂರ್ಣ ಆಹಾರ ಕ್ರಮವು ಹಣ್ಣು, ತರಕಾರಿ ಮತ್ತು ಕಡಿಮೆ ಕೊಬ್ಬಿರುವ ಹಾಲಿನ ಉತ್ಪನ್ನಗಳ ಜೊತೆಗೆ ಮಧ್ಯಮ ಪ್ರಮಾಣದ ಸಂಸ್ಕರಿಸದ ಧಾನ್ಯಗಳು, ಕೋಳಿ ಮತ್ತು ನಟ್ಸ್‌ಗಳ ಸೇವನೆಗೆ ಒತ್ತುಕೊಡುತ್ತದೆ. ಇದರ ಬಗ್ಗೆ ಈಗ ಮತ್ತಷ್ಟು ತಿಳಿದುಕೊಳ್ಳೋಣ.

1. ಸಂಸ್ಕರಿಸದ ಧಾನ್ಯಗಳು:

ಸಂಸ್ಕರಿಸದ ಧಾನ್ಯಗಳನ್ನು ಪ್ರತಿದಿನ ಮೂರು ಬಾರಿ ಸೇವಿಸಿದರೆ, ಅದು ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗಬಹುದು. ಇವುಗಳಲ್ಲಿರುವ ಪೌಷ್ಟಿಕಾಂಶಗಳಿಂದಾಗಿ ಇಂತಹ ಆರೋಗ್ಯಕರ ಲಾಭಗಳಿವೆ. ಆದರೆ ಸಂಸ್ಕರಿಸಿದ ಧಾನ್ಯಗಳಿಂದ ಇಂತಹ ಲಾಭಗಳು ಸಿಗುವುದಿಲ್ಲ. ಇವುಗಳಲ್ಲಿರುವ ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂ ಪೋಷಕಾಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ. ಸಂಸ್ಕರಿಸದ ಧಾನ್ಯಗಳಾದ ಗೋಧಿ, ಗೋಧಿ ರವೆ, ಬಾರ್ಲಿ ಮತ್ತು ಹೋಲ್ ವೀಟ್ ಬ್ರೆಡ್ ಜೊತೆಗೆ ಓಟ್ಸ್ ಮತ್ತು ಅಕ್ಕಿಯಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನಂಶವಿರುತ್ತದೆ. ಅದಲ್ಲದೇ, ಈ ಆಹಾರ ಪದಾರ್ಥಗಳಲ್ಲಿ ನಾರಿನಂಶ ಹೆಚ್ಚಾಗಿದ್ದು ಕೊಲೆಸ್ಟರಾಲ್‌ ಅನ್ನು ನಿರ್ವಹಿಸಲು ನೆರವಾಗುತ್ತದೆ.

2. ತರಕಾರಿಗಳು:

ಕಡಿಮೆ ಕೊಬ್ಬಿನಂಶವುಳ್ಳ ನಿಮ್ಮ ಆಹಾರ ಕ್ರಮದ ಭಾಗವಾಗಿ ಪ್ರತಿದಿನ ಐದು ಬಾರಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿದರೆ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಕುಂಬಳಕಾಯಿ, ಗೆಣಸು ಹಾಗೂ ಬೀಟ್‍ರೂಟ್ ಉತ್ತಮ ಪೌಷ್ಟಿಕಾಂಶಗಳನ್ನು ಒಳಗೊಂಡಿವೆ. ಸೊಪ್ಪುಗಳಾದ ಪಾಲಕ್, ಕೇಲ್ ಮತ್ತು ಮೂಲಂಗಿ ಸೊಪ್ಪುಗಳಲ್ಲಿ ಪೊಟ್ಯಾಸಿಯಂ ಹೆಚ್ಚಿದ್ದು, ಮೂತ್ರಪಿಂಡಗಳಲ್ಲಿರುವ ಅಧಿಕ ಸೋಡಿಯಂ ಅನ್ನು ಹೊರಹಾಕಲು ಸಹಕಾರಿಯಾಗಿವೆ. ತರಕಾರಿಗಳಾದ ಟೊಮೇಟೊ, ಕ್ಯಾರೆಟ್ ಮತ್ತು ಬ್ರಕೋಲಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ, ವಿಟಮಿನ್ಸ್ ಮತ್ತು ಮೆಗ್ನೀಸಿಯಂ ಇರುತ್ತವೆ. ನೀವು ಸೇವಿಸುವ ಸಲಾಡ್‍ಗೆ ಚೂರು ಆಲಿವ್ ಆಯಿಲ್ ಇಲ್ಲವೇ ಬಾಲ್ಸಮಿಕ್ ವಿನೆಗರ್‌ ಅನ್ನು ಸಿಂಪಡಿಸಿದರೆ ಅದರ ರುಚಿ ಹೆಚ್ಚುವುದಲ್ಲದೇ ದೇಹದ ಕೊಲೆಸ್ಟರಾಲ್ ಮಟ್ಟವನ್ನು ನಿರ್ವಹಿಸಲು ಕೊಡ ನೆರವಾಗಲಿದೆ. ಕ್ಯಾನ್‍ಗಳಲ್ಲಿ ಶೇಖರಿಸಿಟ್ಟ ತರಕಾರಿಯಲ್ಲಿ ಸೋಡಿಯಂನ ಅಂಶ ಹೆಚ್ಚಾಗಿ ಇರುವುದರಿಂದ, ಅವುಗಳಿಂದ ದೂರವಿರುವುದು ಉತ್ತಮ.

3. ಹಣ್ಣುಗಳು:

ಹಣ್ಣುಗಳಲ್ಲಿ ನಾರಿನಂಶ, ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂ ಇದ್ದು, ಕೊಬ್ಬಿನಂಶ ಕಡಿಮೆ ಇರುತ್ತದೆ. ಸೇಬಿನ ಸಿಪ್ಪೆ, ಮರಸೇಬು ಮತ್ತು ಬೀಜಗಳಿರುವ ಹಣ್ಣುಗಳು ನಿಮ್ಮ ಊಟ ಅಥವಾ ತಿಂಡಿಯ ರುಚಿಯನ್ನು ಹೆಚ್ಚಿಸುವುದಲ್ಲದೇ, ಆರೋಗ್ಯಕರ ಪೋಷಕಾಂಶ ಮತ್ತು ನಾರಿನಂಶವನ್ನು ಒದಗಿಸುತ್ತವೆ. ಹಣ್ಣುಗಳನ್ನು ಸಣ್ಣ ಪ್ರಮಾಣದಲ್ಲಿ ಅಥವಾ ರಸದ ರೂಪದಲ್ಲಿ ಸೇವಿಸಿದರೂ ಸಾಕು, ಅವು ಡಯಸ್ಟೊಲಿಕ್ ಮತ್ತು ಸಿಸ್ಟೊಲಿಕ್ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ನೆರವಾಗುತ್ತವೆ. ದಾಳಿಂಬೆ, ಒಣದ್ರಾಕ್ಷಿ, ಏಪ್ರಿಕಾಟ್ ಮತ್ತು ಬೆರ್‍ರಿಸ್ ಕೂಡ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವುದರ ಜೊತೆಗೆ ಹೃದಯಕ್ಕೆ ಆರೋಗ್ಯಕರ ತಿನಿಸುಗಳಾಗಿವೆ. ನಿಮ್ಮ ಗಮನದಲ್ಲಿರಬೇಕಾದ ಅಂಶವೆಂದರೆ, ನಿಂಬೆಜಾತಿಯ ಹಣ್ಣುಗಳು ಮತ್ತು ಪಾನೀಯಗಳು, ಉದಾಹರಣೆಗೆ ಗ್ರೇಪ್‌ಫ್ರೂಟ್, ಇವು ಕೆಲವು ಔಷಧಿಗಳ ಜೊತೆ ಪ್ರತಿಕ್ರಿಯಿಸಬಹುದು; ಆದ್ದರಿಂದ, ಅವುಗಳನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆಯಿರಿ. ಕ್ಯಾನ್‍ಗಳಲ್ಲಿ ಶೇಖರಿಸಿಟ್ಟ ಹಣ್ಣುಗಳು ಅಥವಾ ಹಣ್ಣಿನ ರಸವನ್ನು ತೆಗೆದುಕೊಳ್ಳುವಾಗ ಅದಕ್ಕೆ ಯಾವುದೇ ಸಕ್ಕರೆಯನ್ನು ಸೇರಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

4. ಹಾಲಿನ ಉತ್ಪನ್ನಗಳು:

ಕಡಿಮೆ ಕೊಬ್ಬಿನಂಶ ಇರುವ ಮತ್ತು ಕೊಬ್ಬಿನಂಶ ಇಲ್ಲದ ಹಾಲಿನ ಉತ್ಪನ್ನಗಳನ್ನು ನೀವು ಆಯ್ದುಕೊಳ್ಳಿ. ನಿಮ್ಮ ಡೈರಿ ಉತ್ಪನ್ನಗಳನ್ನು ಆಯ್ಕೆ ಮಾಡಲು ಇರುವ ಒಳ್ಳೆಯ ಉಪಾಯವೆಂದರೆ, ಅದರ ಮೇಲಿನ ಲೇಬಲ್‍ಗಳನ್ನು ಗಮನಿಸುವುದು. ಕೆನೆ ತೆಗೆದ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಕಡಿಮೆ ಕೊಬ್ಬಿನಂಶ ಇರುತ್ತದೆ. ರಕ್ತದೊತ್ತಡ ಕಡಿಮೆ ಮಾಡಲು ಇರುವ ಆಹಾರ ಕ್ರಮಕ್ಕೆ ಇವೆರಡು ತುಂಬಾ ಮುಖ್ಯವಾಗಿವೆ. ನಿಮಗೆ ಹಾಲು ಅಷ್ಟಾಗಿ ಇಷ್ಟವಿಲ್ಲದಿದ್ದರೆ, ಮೊಸರನ್ನು ಆಯ್ಕೆ ಮಾಡಬಹುದು. ನಿಮಗೆ ಡೈರಿ ಉತ್ಪನ್ನಗಳನ್ನು ಜೀರ್ಣಿಸಿಕೊಳ್ಳುವ ಸಮಸ್ಯೆ ಇದ್ದರೆ, ಲ್ಯಾಕ್ಟೋಸ್‍ ಇಲ್ಲದ ಉತ್ಪನ್ನಗಳನ್ನು ಆಯ್ದುಕೊಳ್ಳಿ, ಇಲ್ಲವೇ ಅಂಗಡಿಗಳಲ್ಲಿ ದೊರಕುವ ಲ್ಯಾಕ್ಟೇಸ್ ಎನ್‌ಜ಼ೈಮ್ ಹೊಂದಿರುವ ಉತ್ಪನ್ನಗಳನ್ನು ತೆಗೆದುಕೊಳ್ಳಿ. ಇದು ಲ್ಯಾಕ್ಟೋಸ್ ಇಂಟಾಲರೆನ್ಸ್‌ ಅನ್ನು ಕಡಿಮೆ ಅಥವಾ ನಿಯಂತ್ರಣ ಮಾಡುತ್ತದೆ. ಹಾಗೆಯೇ, ಮೊಸರಿನ ಜೊತೆ ಗ್ರನೋಲ ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಹೆಚ್ಚುವುದು.

5. ಮಾಂಸ:

ಮಾಂಸದಲ್ಲಿ ಹೇರಳವಾಗಿ ಪ್ರೋಟೀನ್, ವಿಟಮಿನ್ ಬಿ, ಕಬ್ಬಿಣ ಮತ್ತು ಜಿಂಕ್‍ ಪೋಷಕಾಂಶಗಳಿವೆ. ಸಾಲ್ಮನ್‍ ಮೀನಿನಂತಹ ಕೊಬ್ಬಿನಂಶ ಇರುವ ಮೀನುಗಳು ಹೃದಯ ಸ್ನೇಹಿ ಒಮೇಗಾ-3 ಫ್ಯಾಟಿ ಆ್ಯಸಿಡ್‌ ಅನ್ನು ಒಳಗೊಂಡಿವೆ. ಇವು ನಿಮ್ಮ ರಕ್ತದೊತ್ತಡವನ್ನು ಸುಧಾರಿಸುತ್ತವೆ. ಆದರೆ ಪ್ರಾಣಿಗಳಿಂದ ದೊರೆಯುವ, ಪ್ರೋಟೀನ್ ಹೆಚ್ಚಿರುವ ಆಹಾರ ಪದಾರ್ಥಗಳಲ್ಲಿ ಸಾಮಾನ್ಯವಾಗಿ ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುತ್ತದೆ, ಅದು ನಮ್ಮ ಹೃದಯಕ್ಕೆ ಬಹಳ ಅಪಾಯಕಾರಿ. ಕಡಿಮೆ ಕೊಬ್ಬಿನಂಶ ಇರುವ ಮಾಂಸದ ಪದಾರ್ಥಗಳನ್ನು ಆಯ್ಕೆ ಮಾಡಿ, ಒಂದು ದಿನಕ್ಕೆ 6 ಔನ್ಸ್‌ಗಳಿಗಿಂತ ಹೆಚ್ಚು ತೆಗೆದುಕೊಳ್ಳಬೇಡಿ. ಮಾಂಸದ ಬದಲಿಗೆ ಮೀನನ್ನು ಉಪಯೋಗಿಸುವುದು ಒಳ್ಳೆಯದು. ಮೀನಿನಲ್ಲಿ ಕೊಬ್ಬಿನಂಶ ಕಡಿಮೆಯಿದ್ದು ವಿಟಮಿನ್ಸ್, ಖನಿಜಗಳು ಮತ್ತು ಒಮೇಗಾ-3 ಫ್ಯಾಟ್ಸ್‌ಗಳು ಹೇರಳವಾಗಿವೆ. ಇವು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯಲು ನೆರವಾಗುತ್ತವೆ.

6. ಸೀಡ್ಸ್ ಮತ್ತು ನಟ್ಸ್:

ಮೆಗ್ನೀಸಿಯಂ ಇರುವ ಆಹಾರಗಳಾದ ಬಾದಾಮಿ, ಗೋಡಂಬಿ, ಕುಂಬಳಕಾಯಿ ಬೀಜಗಳು ಮತ್ತು ಸೂರ್ಯಕಾಂತಿ ಬೀಜಗಳು ಅಧಿಕ ರಕ್ತದೊತ್ತಡವನ್ನು ನಿರ್ವಹಿಸಿಲು ಸಹಾಯ ಮಾಡುತ್ತವೆ. ಅಗಸೆ ಬೀಜವು, ನಾರು ಹಾಗೂ ಒಮೆಗಾ-3 ಫ್ಯಾಟಿ ಆ್ಯಸಿಡ್ಸ್‌ನ ಒಂದು ದೊಡ್ಡ ಮೂಲವಾಗಿದೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ನಿಮ್ಮ ರಕ್ತಪರಿಚಲನಾ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ಇವುಗಳಲ್ಲಿ ಕೆಲವನ್ನು ನಿಮ್ಮ ನೆಚ್ಚಿನ ಪಾನೀಯ(ಸ್ಮೂದಿ) ಇಲ್ಲವೇ ಬೆಳಗಿನ ಓಟ್‍ಮೀಲ್‍ಗೆ ಸೇರಿಸುವುದು ಒಳ್ಳೆಯದು.

7. ಡಾರ್ಕ್ ಚಾಕೊಲೇಟ್:

ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸುವುದಕ್ಕಾಗಿ ನೀವು ಸಿಹಿತಿನಿಸುಗಳಿಂದ ದೂರ ಇರಬೇಕಾಗಿಲ್ಲ. ಸಣ್ಣ ಪ್ರಮಾಣದ ಡಾರ್ಕ್ ಚಾಕೋಲೇಟ್ ತಿಂದರೆ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲದು, ಹಾಗಾಗಿ ಅದರಲ್ಲಿರುವ ಫ್ಲವೊನಾಯ್ಡ್ ಅಂಶಕ್ಕೆ ನೀವು ಒಂದು ಧನ್ಯವಾದ ತಿಳಿಸಬೇಕು. ನೀವು ನಿಜವಾದ ಡಾರ್ಕ್ ಚಾಕೋಲೇಟನ್ನು ಆಯ್ಕೆ ಮಾಡಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ, ಅದರಿಂದ ಮಾತ್ರ ಹೆಚ್ಚಿನ ಲಾಭವಿದೆ. ಉಳಿದಂತೆ ಸಕ್ಕರೆ ಹೆಚ್ಚಾಗಿರುವ ಆಹಾರ ಪದಾರ್ಥಗಳು, ಅಂದರೆ ಮಿಲ್ಕ್ ಚಾಕೋಲೇಟ್ ಬಾರ್ ತರಹದ ಪದಾರ್ಥಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.