Reading Time: 3 minutes

ಒತ್ತಡದ ಸನ್ನಿವೇಶಗಳಲ್ಲಿ ಇಲ್ಲವೆ ದೈಹಿಕವಾಗಿ ಶ್ರಮಪಡುವಾಗ ನಿಮ್ಮ ರಕ್ತದೊತ್ತಡ ಏರುಪೇರಾಗುತ್ತದೆ. ಆದರೆ, ನೀವು ವಿಶ್ರಮಿಸುತ್ತಿರುವಾಗ ಇಲ್ಲವೆ ಒತ್ತಡವಿರದೆ ಹಾಯಾಗಿದ್ದಾಗಲೂ ಅದು ಹೆಚ್ಚಿನ ಮಟ್ಟದಲ್ಲಿದ್ದರೆ, ನೀವು ಹೈಪರ್‌ಟೆನ್ಶನ್‌ನಿಂದ ಬಳಲುತ್ತಿರಬಹುದು. ಅಧಿಕ ರಕ್ತದೊತ್ತಡ (ಹೈಪರ್‌ಟೆನ್ಶನ್‌) ಎಂದರೆ, ನಿಮ್ಮ ರಕ್ತನಾಳಗಳಲ್ಲಿ ಬಹುಕಾಲದವರೆಗೆ ನಿಲ್ಲದೇ ಮುಂದುವರಿದ, ಎಲ್ಲೆ ಮೀರಿ ಏರಿದ ಒತ್ತಡ. ಜಗತ್ತಿನಲ್ಲಿ, ಜೀವನಪರ್ಯಂತ ಉಳಿಯುವ ಅತೀ ಸಾಮಾನ್ಯ ರೋಗಗಳಲ್ಲಿ ಇದೂ ಒಂದು.

ಅಧಿಕ ರಕ್ತದೊತ್ತಡಕ್ಕೆ ಇರುವ ಕಾರಣಗಳನ್ನು ಆಧರಿಸಿ, ಅದನ್ನು ಎರಡು ಬಗೆಗಳಲ್ಲಿ ಬೇರ್ಪಡಿಸಲಾಗಿದೆ: ಪ್ರಾಥಮಿಕ ಮತ್ತು ದ್ವಿತೀಯ.

ಪ್ರಾಥಮಿಕ ಹೈಪರ್‌ಟೆನ್ಶನ್‌

ಬಹಳಷ್ಟು ಸನ್ನಿವೇಶಗಳಲ್ಲಿ, ಹೈಪರ್‌ಟೆನ್ಶನ್‌ ಉಂಟುಮಾಡುವ ಕಾರಣಗಳನ್ನು ಇನ್ನೂ ಕಂಡುಹಿಡಿದಿಲ್ಲ ಇಲ್ಲವೆ ಅವನ್ನು ಕಂಡುಹಿಡಿಯುವುದು ಕಷ್ಟ, ಇದನ್ನು ಸಾಮಾನ್ಯವಾಗಿ ಪ್ರಾಥಮಿಕ ಹೈಪರ್‌ಟೆನ್ಶನ್‌ ಎನ್ನುವರು. ಕೆಲವು ಕಾರಣಗಳು ಇಲ್ಲಿವೆ:

 1. ಕುಟುಂಬದ ಚರಿತ್ರೆ ಮತ್ತು ವಂಶವಾಹಿಗಳು: ನಿಮ್ಮ ರಕ್ತದೊತ್ತಡದ ಮೇಲೆ ವಂಶವಾಹಿಗಳು, 30-50% ನಷ್ಟು ಪ್ರಭಾವ ಬೀರಬಹುದೆಂದು ಅಧ್ಯಯನಗಳು[1] ಹೇಳಿವೆ. ನಿಮ್ಮ ಹೆತ್ತವರು, ತಾತ ಅಜ್ಜಿಯಂದಿರು ಇಲ್ಲವೆ ಒಡಹುಟ್ಟಿದವರಿಗೆ ಅಧಿಕ ರಕ್ತದೊತ್ತಡವಿದ್ದರೆ, ನಿಮಗೂ ಬರುವ ಸಾಧ್ಯತೆಯಿದೆ.
 2. ವಯಸ್ಸು ಮತ್ತು ಲಿಂಗ: ಆರ್ಟೀರಿಯಲ್ ಹೈಪರ್‌ಟೆನ್ಶನ್, ಗಂಡಸರಲ್ಲಿ ಬೇಗ ಕಾಣಿಸಿಕೊಳ್ಳುತ್ತದೆ. ಎಸ್ಟ್ರೊಜೆನ್‍ನ ಕಾಪಾಡುವ ಗುಣಗಳಿಂದಾಗಿ, ಬಸಿರಿನ ವಯಸ್ಸಿಗೆ ಬಂದ ಹೆಂಗಸರಲ್ಲಿ ಹೈಪರ್‌ಟೆನ್ಶನ್ ಕಾಣಿಸಿಕೊಳ್ಳುವುದು ಕಡಿಮೆ. ಮುಟ್ಟು ನಿಲ್ಲುವ ಕಾಲವಾದಾಗ, ಹೆಂಗಸರಿಗೆ ಹೈಪರ್‌ಟೆನ್ಶನ್ ಬರುವ ಸಾಧ್ಯತೆ ಗಂಡಸರಷ್ಟೆ ಇರುತ್ತದೆ. ಮುಪ್ಪಾಗುವುದು ಕೂಡ ಹೈಪರ್‌ಟೆನ್ಶನ್ ಉಂಟುಮಾಡುವ ಕಾರಣಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಇದಕ್ಕೆ ಕಾರಣ, ರಕ್ತನಾಳಗಳು ಬಿಗಿಯಾಗುವುದು, ಇದರಿಂದ, ಸಿಸ್ಟೊಲಿಕ್ ರಕ್ತದೊತ್ತಡ ಏರುತ್ತದೆ [2].
 3. ಒತ್ತಡ: ಅಧ್ಯಯನಗಳು, ಮಾನಸಿಕ ಒತ್ತಡವನ್ನು ಹೈಪರ್‌ಟೆನ್ಶನ್‌ನೊಂದಿಗೆ ತಳಕುಹಾಕುತ್ತವೆ. ಕೆಲವು ಸನ್ನಿವೇಶಗಳಲ್ಲಿ, ಬಹುಕಾಲದ ಒತ್ತಡ ಕೂಡ ಹೈಪರ್‌ಟೆನ್ಶನ್ ಉಂಟುಮಾಡಬಹುದು.
 4. ಬೊಜ್ಜುಮೈ: ದೇಹದ ಒಳಗೆ ಏನೆಲ್ಲ ಇದೆಯೊ, ಅದರ ಮೇಲೆ ಬೊಜ್ಜುಮೈ ಪ್ರಭಾವ ಬೀರುವುದರಿಂದ, ಅಂಗಾಂಗಗಳಿಗೂ ಅಪಾಯವಾಗಬಹುದು. ಬೊಜ್ಜುಮೈ ದೆಸೆಯಿಂದ, ಸುಮಾರಾಗಿ 65-78% ನಷ್ಟು ಪ್ರಾಥಮಿಕ ಹೈಪರ್‌ಟೆನ್ಶನ್ ಆಗುವ ಸಾಧ್ಯತೆಯಿದೆ ಎಂದು ಅಧ್ಯಯನಗಳು[4] ತಿಳಿಸುತ್ತವೆ.
 5. ದೈಹಿಕ ಚಟುವಟಿಕೆಯ ಕೊರತೆ: ವಯಸ್ಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು, ಕಡಿಮೆ ಅಂದರೂ 30 ನಿಮಿಷಗಳ ವ್ಯಾಯಾಮ ಪ್ರತಿನಿತ್ಯ ಮಾಡುವುದು ಬಹಳ ಮುಖ್ಯ. ಹೈಪರ್‌ಟೆನ್ಶನ್ ಒಳಗೊಂಡಂತೆ, ಇನ್ನೂ ಹಲವಾರು ಕಾಯಿಲೆಗಳಿಗೆ, ಚಟುವಟಿಕೆಯಿಲ್ಲದ ಜೀವನಶೈಲಿಯ ಕೊಡುಗೆ ದೊಡ್ಡದಿದೆ.
 6. ಹಾರ್ಮೋನ್‍ಗಳ ಏರಿಳಿತ: ಹಾರ್ಮೋನ್‍ಗಳ ಏರಿಳಿತದಿಂದ ಹೈಪರ್‌ಟೆನ್ಶನ್ ಉಂಟಾಗಬಹುದು [5]. ಇದಕ್ಕಾಗಿಯೆ, ಮುಟ್ಟು ನಿಲ್ಲುವ ಕಾಲದಲ್ಲಿ ಹಾಗು ಪೂರ್ತಿ ನಿಂತ ಮೇಲೆ, ಅಥವಾ ಬಸಿರಿನಲ್ಲಿ, ಹೆಂಗಸರಿಗೆ ಅಧಿಕ ರಕ್ತದೊತ್ತಡ ಆಗಬಹುದು. ಚುರುಕಾದ ಇಲ್ಲವೆ ಮಂದವಾದ ಥೈರಾಯ್ಡ್, ಹೆಚ್ಚಿದ ಆಲ್ಡೊಸ್ಟಿರೋನ್ ಮಟ್ಟ ಇಲ್ಲವೆ ಕುಶಿಂಗ್ಸ್ ಸಿಂಡ್ರೋಮ್, ಇವೆಲ್ಲ ಕೆಲವು ಮೇಲ್ನೋಟಕ್ಕೆ ಕಾಣಿಸದ ಕಾರಣಗಳು

ದ್ವಿತೀಯ ಹೈಪರ್‌ಟೆನ್ಶನ್

ಇತರ ಬಹುಕಾಲದ ತೊಂದರೆಗಳು ಹಾಗು ಸರಿಪಡಿಸಬಹುದಾದ ಸಂಗತಿಗಳಿಂದ ಉಂಟಾಗುವ ಅಧಿಕ ರಕ್ತದೊತ್ತಡವನ್ನು ದ್ವಿತೀಯ ಹೈಪರ್‌ಟೆನ್ಶನ್ ಎಂದು ಕರೆಯಲಾಗುವುದು. ಅಂದಾಜು, 5-10% ವಯಸ್ಕರಿಗೆ, ದ್ವಿತೀಯ ಹೈಪರ್‌ಟೆನ್ಶನ್[6] ಇರುವುದು ಕಂಡುಬಂದಿದೆ. ಅದಕ್ಕೆ ಕೆಲವು ಮುಖ್ಯ ಕಾರಣಗಳು ಈ ಕೆಳಗಿನಂತಿವೆ:

 1. ಬಹುಕಾಲದ ತೊಂದರೆಗಳು: ಮೂತ್ರಪಿಂಡದ ರೋಗ, ಫೈ಼ಬ್ರೊಮಸ್ಕ್ಯುಲಾರ್ ಡಿಸ್ಪ್ಲೇಸಿಯ, ರೀನಲ್ ಆರ್ಟರಿ ಸ್ಟೆನೋಸಿಸ್, ಅಗಲ ಕಿರಿದಾದ ಎಯೋರ್ಟ, ಥೈರಾಯ್ಡ್ ಸಮಸ್ಯೆಗಳು ಹಾಗು ಸ್ಲೀಪ್ ಆ್ಯಪ್ನಿಯ, ದ್ವಿತೀಯ ಹೈಪರ್‌ಟೆನ್ಶನ್ ಉಂಟುಮಾಡುವ ಕೆಲವು ಕಾರಣಗಳಾಗಿವೆ.[6]
 2. ಬಸಿರು: ಪ್ರೀ-ಎಕ್ಲಾಂಪ್ಸಿಯ ಅಥವಾ ಬಸಿರಿನಿಂದಾಗುವ ಹೈಪರ್‌ಟೆನ್ಶನ್ ಕೂಡ ತುಂಬ ಸಾಮಾನ್ಯ[7]. ಇದಕ್ಕೆ ಹಾರ್ಮೋನ್‍ಗಳ ಏರಿಳಿತ ಕಾರಣವೆನ್ನಬಹುದು; ಆದರೂ, ಇದು ಬಸಿರಿನಲ್ಲಿ ಮಾತ್ರ ಕಂಡುಬರುವುದರಿಂದ, ಇದನ್ನು ದ್ವಿತೀಯ ಹೈಪರ್‌ಟೆನ್ಶನ್ ಎಂದು ವಿಂಗಡಿಸಲಾಗಿದೆ.
 3. ಔಷಧಗಳು: ಕೆಲವೊಂದು ಬಾಯಿಯ ಮೂಲಕ ತೆಗೆದುಕೊಳ್ಳುವ ಬಸಿರುತಡೆ ಔಷಧಗಳು, NSAIDಗಳು, ಸ್ಟೆರಾಯ್ಡ್‌ಗಳು, ಲಿಕರಿಸ್ ನಂತಹ ಗಿಡಮೂಲಿಕೆ ಹಾಗು ಆ್ಯಂಟಿಡಿಪ್ರೆಸೆಂಟ್‍ಗಳಂತಹ ಸಾಮಾನ್ಯ ಔಷಧಗಳು ಹೈಪರ್‌ಟೆನ್ಶನ್ ಆಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಕ್ಷಣಿಕ ಸುಖಕ್ಕಾಗಿ ತೆಗೆದುಕೊಳ್ಳುವ ಕೊಕೇಯ್ನ್, ಹೆರಾಯ್ನ್ ಇಲ್ಲವೆ ಆ್ಯಂಫೆ಼ಟಮೀನ್‍ನಂತಹ ಮಾದಕ ವಸ್ತುಗಳು ರಕ್ತದೊತ್ತಡದಲ್ಲಿ ಹಠಾತ್ ಏರುಪೇರು ಉಂಟುಮಾಡುತ್ತವೆ. ಇದರಿಂದ ಸಣ್ಣ ವಯಸ್ಸಿನಲ್ಲೇ ಬಹುಕಾಲದ ಹೈಪರ್‌ಟೆನ್ಶನ್‌ಗೆ ಗುರಿಯಾಗಬಹುದು.
 4. ಜೀವನಶೈಲಿ: ಹೈಪರ್‌ಟೆನ್ಶನ್ ಅನ್ನೂ ಒಳಗೊಂಡಂತೆ, ಹಲವಾರು ಆರೋಗ್ಯ ಸಮಸ್ಯೆಗಳಿಗೆ, ನಿಮ್ಮ ಜೀವನಶೈಲಿ ಹಾಗು ನೀವು ವಾಸಿಸುವ ಪರಿಸರದ ಕೊಡುಗೆ ಇರಬಹುದು. ಉಪ್ಪು ಹೆಚ್ಚಿರುವ ಹಾಗು ಹಣ್ಣು ತರಕಾರಿ ಕಡಿಮೆಯಿರುವ ಆಹಾರಕ್ರಮ, ಚುರುಕಿಲ್ಲದ ಜೀವನಶೈಲಿ; ಧೂಮಪಾನ ಹಾಗು ಮದ್ಯಪಾನದ ಚಟ; ಮತ್ತು ದೈಹಿಕ ಚಟುವಟಿಕೆಯ ಕೊರತೆ, ಇವೆಲ್ಲ ದ್ವಿತೀಯ ಹೈಪರ್‌ಟೆನ್ಶನ್ ಉಂಟುಮಾಡಬಹುದು. ಈ ಸಂಗತಿಗಳ ಕಡೆ ಗಮನಹರಿಸಿ, ಅವುಗಳನ್ನು ಸರಿಪಡಿಸಿದರೆ, ಹೈಪರ್‌ಟೆನ್ಶನ್ ಬರದಂತೆ ತಡೆಯಬಹುದು ಇಲ್ಲವೆ ಕಡಿಮೆ ಮಾಡಬಹುದು, ಆದರೆ ಬೇರೆ ಕೆಲವು ವಿಷಯಗಳಲ್ಲಿ ಏನನ್ನೂ ಬದಲಿಸಲು ಸಾಧ್ಯವಿಲ್ಲ.

ಆಕರ:

 1. Russo A, Di Gaetano C, Cugliari G, Matullo G. Advances in the Genetics of Hypertension: The Effect of Rare Variants. International Journal of Molecular Sciences. 2018; 19(3):688.
 2. AlGhatrif M1, Strait JB, Morrell CH, Canepa M, Wright J, Elango P, Scuteri A, Najjar SS, Ferrucci L, Lakatta EG. Hypertension. 2013 Nov; 62(5):934-41. doi: 10.1161/HYPERTENSIONAHA.113.01445. Epub 2013 Sep 3.
 3. Esler M1, Eikelis N, Schlaich M, Lambert G, Alvarenga M, Dawood T, Kaye D, Barton D, Pier C, Guo L, Brenchley C, Jennings G, Lambert E. Clin Exp Pharmacol Physiol. 2008 Apr;35(4):498-502. doi: 10.1111/j.1440-1681.2008.04904.x.
 4. do Carmo JM 1 ,  da Silva AA 2, Wang Z 3,  Fang T 3, Aberdein N 3, de Lara Rodriguez CE 3,  Hall JE 3 . Current Hypertension Reports [01 Jul 2016, 18(7):58]. doi: 10.1007/s11906-016-0658-1
 5. Niegowska J1, Sitkiewicz D. Pol Arch Med Wewn. 2004 May;111(5):547-56.
 6. Anthony J. Viera, MD, MPH, and Dana M. Neutze, MD, PhD. Am Fam Physician. 2010 Dec 15;82(12):1471-1478
 7. Braunthal S, Brateanu A. SAGE Open Med. 2019 Apr 10;7:2050312119843700. doi: 10.1177/2050312119843700. eCollection 2019.
 8. Penninkilampi R, Eslick EM, Eslick GD1. J Hum Hypertens. 2017 Nov;31(11):699-707. doi: 10.1038/jhh.2017.45. Epub 2017 Jun 29.
 9. Mir D1, Ardabilygazir A, Afshariyamchlou S, Sachmechi I. Cureus. 2018 Jul 13;10(7):e2978. doi: 10.7759/cureus.2978.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.