Reading Time: 2 minutes

ಅಧಿಕ ರಕ್ತದೊತ್ತಡದ (ಅಥವಾ ಹೈಪರ್‌ಟೆನ್ಶನ್) ಬಹುಮುಖ್ಯವಾದ ಸಮಸ್ಯೆಯೆಂದರೆ, ಸಾಮಾನ್ಯವಾಗಿ ಯಾವುದೇ ಕುರುಹುಗಳು ಇಲ್ಲವೆ ಗುರುತುಗಳು ಕಾಣಿಸದಿರುವುದು. ಆದ್ದರಿಂದ ಇದನ್ನು ‘ಸೈಲೆಂಟ್ ಕಿಲ್ಲರ್’ ಎಂದು ಕರೆಯುತ್ತಾರೆ. ಆದರೆ, ಚಿಕಿತ್ಸೆ ಮಾಡದೆ ಹಾಗೆ ಬಿಟ್ಟರೆ, ಅಧಿಕ ರಕ್ತದೊತ್ತಡವು ನಿಮ್ಮ ದೇಹದ ಹಲವಾರು ಭಾಗಗಳಿಗೆ ತುಂಬ ಹಾನಿಯುಂಟುಮಾಡುತ್ತದೆ. ವಾಸ್ತವದಲ್ಲಿ, ಚಿಕಿತ್ಸೆ ಪಡೆಯದ ಹೈಪರ್‌ಟೆನ್ಷನ್‍ನಿಂದಾಗಿ ಸಾವುಗಳು ಸಂಭವಿಸಿವೆ.

ಹೈಪರ್‌ಟೆನ್ಶನ್ ನಿಮ್ಮ ದೇಹವನ್ನು ಹಾನಿಗೊಳಿಸುವ ಸಾಮಾನ್ಯ ವಿಧಾನಗಳು:

ಹೃದಯ: ಹೃದಯವು, ದೇಹಕ್ಕೆ ರಕ್ತವನ್ನು ಪೂರೈಕೆ ಮಾಡುವ ಅಂಗವಾಗಿದೆ. ಅಧಿಕ ರಕ್ತದೊತ್ತಡವು, ಹೃದಯ ಸರಿಯಾಗಿ ರಕ್ತ ಪೂರೈಕೆ ಮಾಡಲು ಹೆಚ್ಚು ಕಠಿಣವಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಆದ್ದರಿಂದ, ಹೃದಯದ ಕೆಲ ಭಾಗಗಳು, ಅದರಲ್ಲೂ ವಿಶೇಷವಾಗಿ ಎಡಗಡೆಯ ವೆಂಟ್ರಿಕಲ್ ಮಿತಿಮೀರಿ ಕೆಲಸ ಮಾಡಿ ದಪ್ಪಗಾಗುತ್ತದೆ (ಲೆಫ್ಟ್ ವೆಂಟ್ರಿಕ್ಯುಲರ್ ಹೈಪರ್ಟ್ರಫಿ ಎಂದು ಪರಿಚಿತ).(1)

1. ರಕ್ತನಾಳಗಳು

 ಅಧಿಕ ರಕ್ತದೊತ್ತಡವು ನಿಮ್ಮ ರಕ್ತನಾಳಗಳ, ಅದರಲ್ಲೂ ವಿಶೇಷವಾಗಿ ಆರ್ಟರಿಗಳ ಒಳಪದರದ ಕೆಲಸಕ್ಕೆ ಅಡ್ಡಿಪಡಿಸುತ್ತದೆ. ಕಾಲ ಸರಿದಂತೆ, ತೊಂದರೆಗೀಡಾದ ಆರ್ಟರಿಯು ದುರ್ಬಲಗೊಂಡು, ಸಪೂರವಾಗಿ, ಸೆಟೆದುಕೊಳ್ಳುತ್ತದೆ ಮತ್ತು ಯಾವ ಭಾಗಕ್ಕೆ ಅದು ರಕ್ತ ಪೂರೈಕೆ ಮಾಡುತ್ತಿತ್ತೊ ಅಲ್ಲಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ.

ಹೃದಯಕ್ಕೆ ರಕ್ತ ಕೊಂಡೊಯ್ಯುವ ಆರ್ಟರಿಯ (ಕೊರೊನರಿ ಆರ್ಟರಿ) ಅಗಲ ಕಿರಿದಾದಾಗ ಇಲ್ಲವೆ ಅದು ಪೂರ್ತಿ ಮುಚ್ಚಿಕೊಂಡಾಗ, ಅದರಿಂದ ಆ್ಯಂಜಿನ ಅಥವಾ ಹೃದಯಾಘಾತವಾಗಬಹುದು.(2) ನಿಮ್ಮ ಕೈಕಾಲುಗಳಿಗೆ ರಕ್ತ ಕೊಂಡೊಯ್ಯುವ ಆರ್ಟರಿಗಳು ಮುಚ್ಚಿಕೊಂಡಾಗ ಇಲ್ಲವೆ ಅವುಗಳ ಅಗಲ ಕಿರಿದಾದಾಗ, ನಿಮಗೆ ಅಡಿಗಡಿಗೆ ಸೆಳೆತ, ನೋವು ಮತ್ತು ದಣಿವಾಗುವುದು (ಪೆರಿಫೆ಼ರಲ್ ಆರ್ಟರಿ ರೋಗ ಎಂದು ಪರಿಚಿತ). ಕೆಲವೊಮ್ಮೆ, ದುರ್ಬಲಗೊಂಡ ಆರ್ಟರಿಗಳು ಹೆಚ್ಚಿನ ಒತ್ತಡಕ್ಕೆ ಸೋತು, ಊದಿಕೊಂಡು, ಇನ್ನೂ ದೊಡ್ಡ ಊತಕ್ಕೆ ಎಡೆಮಾಡಿಕೊಡುತ್ತವೆ. ಇದನ್ನು ಆನ್ಯುರಿಸಂ ಎನ್ನುವರು. ಇದು ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

2. ಮೆದುಳು

 ಮೆದುಳಿನ ಯಾವುದೇ ಒಂದು ನಿರ್ದಿಷ್ಟ ಭಾಗಕ್ಕೆ ರಕ್ತಸಂಚಾರ ತುಂಬ ಕಡಿಮೆಯಾದರೆ, ಟ್ರ್ಯಾನ್ಸಿಯೆಂಟ್ ಇಸ್ಕೀಮಿಕ್ ಅಟ್ಯಾಕ್ (TIA) ಅಥವಾ ಪೂರ್ಣ ಪ್ರಮಾಣದ ಪಾರ್ಶ್ವವಾಯು ಆಗಬಹುದು. ಹೈಪರ್‌ಟೆನ್ಶನ್ ಇರುವ ಮಂದಿಗೆ, ಮೆದುಳಿನಲ್ಲಿ ಪದೇ ಪದೇ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ; ಇದು TIA ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮೆದುಳಿಗೆ ರಕ್ತಸಂಚಾರ ಕಡಿಮೆಯಾಗುವುದರಿಂದ ಸಣ್ಣದಾಗಿ ಯೋಚನಾಶಕ್ತಿ ಸಹ ಕುಂದಬಹುದು (ಇಲ್ಲವೆ ವಿಪರೀತವಾದರೆ, ಡಿಮೆನ್ಷಿಯ ಆಗಬಹುದು).(2)

3. ಮೂತ್ರಪಿಂಡ

ಮೂತ್ರಪಿಂಡ ವೈಫಲ್ಯ ಹಾಗು ಗ್ಲೊಮೆರ‍್ಯುಲೊಸ್ಕ್ಲೆರೋಸಿಸ್ (ಮೂತ್ರಪಿಂಡದ ಕೆಲವು ಭಾಗಗಳ ಮೇಲೆ ಗಾಯದ ಗುರುತು ಉಳಿಯುವುದು) ಆಗಲು, ಅತೀ ಸಾಮಾನ್ಯ ಕಾರಣಗಳಲ್ಲಿ ಅಧಿಕ ರಕ್ತದೊತ್ತಡವು ಒಂದಾಗಿದೆ. ಈ ಸಮಸ್ಯೆಗಳು, ರಕ್ತವನ್ನು ಶುದ್ಧೀಕರಿಸುವ ಮೂತ್ರಪಿಂಡದ ಸಾಮರ್ಥ್ಯವನ್ನು ಕುಗ್ಗಿಸುತ್ತವೆ ಹಾಗು ದೇಹದಲ್ಲಿ ದ್ರವ ಶೇಖರಣೆಯಾಗುವಂತೆ ಸಹ ಮಾಡಬಹುದು.

4. ಕಣ್ಣುಗಳು ಮತ್ತು ದೃಷ್ಟಿ

ಬಹುಕಾಲದ ಹೈಪರ್‌ಟೆನ್ಶನ್, ಕಣ್ಣುಗಳಲ್ಲಿನ ರಕ್ತನಾಳಗಳು ಹಾಗು ನರಗಳನ್ನು ಕೂಡ ಹಾನಿಗೊಳಿಸುತ್ತದೆ. ಇದರಿಂದ ರೆಟಿನೊಪತಿ, ಕೊರಾಯ್ಡೊಪತಿ ಮತ್ತು ಆಪ್ಟಿಕ್ ನ್ಯೂರೊಪತಿ ಅಂತಹ ಪರಿಸ್ಥಿತಿಗಳು ಸಂಭವಿಸಬಹುದು. ಇಂತಹ ಪರಿಸ್ಥಿತಿಗಳಲ್ಲಿ, ಕಣ್ಣಿನಲ್ಲಿ ರಕ್ತಸ್ರಾವ ಆಗಿ, ದೃಷ್ಟಿ ಮಸುಕಾಗಬಹುದು ಇಲ್ಲವೆ ಪೂರ್ತಿ ಕುರುಡಾಗಬಹದು. ಅಕ್ಷಿಪಟಲದ ಮುಖ್ಯ ಆರ್ಟರಿ ಮತ್ತು ವೇನ್‍ಗಳಿಗೆ ತಡೆ ಉಂಟಾಗಬಹುದು, ಇದರಿಂದ ದೃಷ್ಟಿ ಸಾಮರ್ಥ್ಯ ಕುಂದಬಹುದು.(4)

5. ಲೈಂಗಿಕ ನಿಷ್ಕ್ರಿಯತೆ

ಸಹಜ ಲೈಂಗಿಕ ಕ್ರಿಯೆಗಳಲ್ಲಿ ತೊಂದರೆಗಳಾಗುವುದು ಸಾಮಾನ್ಯ – ಆದರೆ ಮುಕ್ತವಾಗಿ ಚರ್ಚಿಸಲ್ಪಡುವುದಿಲ್ಲ – ಹೈಪರ್‌ಟೆನ್ಶನಿನ ಸಾಮಾನ್ಯ ಪರಿಣಾಮಗಳಲ್ಲೊಂದಾಗಿದೆ. ಗಂಡಸರಲ್ಲಿ ತೀವ್ರವಾದ ಹೈಪರ್‌ಟೆನ್ಶನ್ ಇದ್ದಾಗ, ಶಿಶ್ನಕ್ಕೆ ರಕ್ತಸಂಚಾರವಾಗದೆ ಉದ್ರೇಕದ ಸಮಸ್ಯೆಗಳು ತಲೆದೋರಬಹುದು. ಹೆಂಗಸರಲ್ಲಿ, ತೀವ್ರವಾದ ಹೈಪರ್‌ಟೆನ್ಶನಿಂದಾಗಿ, ಯೋನಿಗೆ ರಕ್ತಸಂಚಾರ ಕಡಿಮೆಯಾಗಿ, ಉದ್ರೇಕ ಕಮ್ಮಿಯಾಗಬಹುದು ಮತ್ತು ಯೋನಿ ತೇವ ಕಳೆದುಕೊಳ್ಳಬಹುದು. ವಾಸ್ತವದಲ್ಲಿ, ಹೈಪರ್‌ಟೆನ್ಶನ್ ಸಂಬಂಧಿತ ಲೈಂಗಿಕ ನಿಷ್ಕ್ರಿಯತೆ, ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ನಿಮ್ಮ ಮನೆಯಲ್ಲಿ ಯಾರಿಗಾದರೂ ಅಧಿಕ ರಕ್ತದೊತ್ತಡ ಇದ್ದರೆ, ನಿಮ್ಮ ರಕ್ತದೊತ್ತಡದ ಪರೀಕ್ಷೆ ತಪ್ಪದೆ ನಿಯಮಿತವಾಗಿ ಮಾಡಿಸುವುದು ಅತ್ಯಗತ್ಯ. ರಕ್ತದೊತ್ತಡವು ಹಿಡಿತದಲ್ಲಿದ್ದರೆ, ಹಲವಾರು ಜಟಿಲ ಸಮಸ್ಯೆಗಳು ಬರದಂತೆ ತಡೆಯಬಹುದು. ನೆನಪಿಡಿ, ನಿಮ್ಮ ರಕ್ತದೊತ್ತಡವು ಕೇವಲ 10mmHg ಯಷ್ಟು ಇಳಿದರೂ ಕೂಡ, ನಿಮಗೆ ಈ ರೋಗಗಳು ಬರುವ ಸಾಧ್ಯತೆ 20% ನಷ್ಟು ಕಡಿಮೆಯಾಗುತ್ತದೆ. (2)

ಹೆಚ್ಚಿನ ತಿಳುವಳಿಕೆಗಾಗಿ, ಹೈಪರ್‌ಟೆನ್ಷನ್ ನಿವಾರಣೆ ಇಲ್ಲವೆ ಹಿಡಿತದಲ್ಲಿ ಇಟ್ಟುಕೊಳ್ಳಲು ಸಂಬಂಧಿಸಿದ ನಮ್ಮ ಬರಹಗಳನ್ನು ಓದಿ.

ಆಕರಗಳು:

  1. Brandt MC, Mahfoud F, Reda S, Schirmer SH, Erdmann E, Böhm M, et al. Renal sympathetic denervation reduces left ventricular hypertrophy and improves cardiac function in patients with resistant hypertension. Journal of the American College of Cardiology. 2012;59(10):901-9.
  2. Ettehad D, Emdin CA, Kiran A, Anderson SG, Callender T, Emberson J, et al. Blood pressure lowering for the prevention of cardiovascular disease and death: a systematic review and meta-analysis. The Lancet. 2016;387(10022):957-67.
  3. Udani S, Lazich I, Bakris GL. Epidemiology of hypertensive kidney disease. Nature Reviews Nephrology. 2011;7(1):11.
  4. Fraser‐Bell S, Symes R, Vaze A. Hypertensive eye disease: a review. Clinical & experimental ophthalmology. 2017;45(1):45-53.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.