Reading Time: 1 minute

ಅಧಿಕ ರಕ್ತದೊತ್ತಡ ಒಂದು ಗಂಭೀರವಾದ ಸಮಸ್ಯೆಯಾಗಿದ್ದು, ಕಾಳಜಿ ವಹಿಸದಿದ್ದರೆ ಇದರಿಂದ ಹೃದಯಾಘಾತ ಅಥವಾ ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ. ಅಧಿಕ ರಕ್ತದೊತ್ತಡದಿಂದ ನಿಮಿರುವಿಕೆಯ ಸಮಸ್ಯೆಯನ್ನೂ ಒಳಗೊಂಡಂತೆ ಅದಕ್ಕೆ ಸಂಬಂಧಿಸಿದ ಇತರ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ. ನಾವು ಅಧಿಕ ರಕ್ತದೊತ್ತಡ ಮತ್ತು ನಿಮಿರುವಿಕೆಯ ಸಮಸ್ಯೆಯ ನಡುವೆ ಸಂಬಂಧವಿದೆಯೇ ಎಂದು ನವದೆಹಲಿಯ ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ.ಚಂದ್ರಶೇಖರ್ ಅವರನ್ನು ಕೇಳಿದೆವು. ಅವರು ಹೇಳಿದ್ದು ಹೀಗೆ:

ಗಂಡಸರಲ್ಲಿ ಅಧಿಕ ರಕ್ತದೊತ್ತಡ ಮತ್ತು ಲೈಂಗಿಕ ಸಮಸ್ಯೆಗಳ ನಡುವೆ ದೊಡ್ಡ ಸಂಬಂಧವಿದೆ. ವಯಸ್ಸಾದಂತೆ ಅಧಿಕ ರಕ್ತದೊತ್ತಡ ಬರುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಇದು ಅಸಹಜ ಲಿಪಿಡ್ ಮಟ್ಟಗಳನ್ನು ಹೊಂದಿರುವವರಿಗೆ ಮತ್ತು ಧೂಮಪಾನ ಮಾಡುವವರಿಗೂ ಹೆಚ್ಚಾಗಿರುತ್ತದೆ. ಡಯಾಬಿಟಿಸ್, ಮೆಟಬಾಲಿಕ್ ಸಿಂಡ್ರೋಮ್, ಆಬ್ಸ್‌ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಅಥವಾ ಪರಿಧಮನಿಯ ನಾಳಗಳಲ್ಲಿ ಬದಲಾವಣೆ ಮುಂತಾದವುಗಳೆಲ್ಲವೂ ಅಧಿಕ ರಕ್ತದೊತ್ತಡವಿರುವ ವ್ಯಕ್ತಿಗಳಲ್ಲಿ ಏಕಕಾಲದಲ್ಲಿ ಕಂಡುಬರುತ್ತವೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಜನನಾಂಗದ ನಿಮಿರುವಿಕೆಯ ಸಮಸ್ಯೆ ಹೆಚ್ಚು ಜನರಲ್ಲಿ ಕಾಣಿಸುತ್ತಿದೆ.

ಹೆಚ್ಚಿನ ರಕ್ತದೊತ್ತಡದಿಂದ ED ಹೇಗೆ ಉಂಟಾಗುತ್ತದೆ?

ಕಾಲಕ್ರಮೇಣ, ಅಧಿಕ ರಕ್ತದೊತ್ತಡದಿಂದ ರಕ್ತ ನಾಳಗಳ ಒಳಪದರಗಳಿಗೆ ಹಾನಿಯಾಗುತ್ತದೆ ಮತ್ತು ಅಪಧಮನಿಗಳು ಗಟ್ಟಿಯಾಗುತ್ತವೆ ಹಾಗೂ ಸಣ್ಣದಾಗುತ್ತಾ ಹೋಗುತ್ತವೆ. ಇದರಿಂದ ಸರಿಯಾಗಿ ರಕ್ತ ಹರಿಯಲು ತೊಂದರೆಯಾಗುತ್ತದೆ. ಈ ಕಾರಣದಿಂದ ದೇಹದಲ್ಲಿ ಒಟ್ಟಾರೆ ರಕ್ತ ಸಂಚಾರ ಕಡಿಮೆಯಾಗುತ್ತದೆ. ಹೀಗೆ ಶಿಶ್ನದ ಕಡೆಗೆ ಹರಿಯುವ ರಕ್ತವೂ ಕಡಿಮೆಯಾಗುತ್ತದೆ. ಇದರಿಂದ ಸರಿಯಾದ ಸಮಯದಲ್ಲಿ ನಿಮಿರುವಿಕೆಯನ್ನು ಸಾಧಿಸಲು ಮತ್ತು ನಿರ್ವಹಿಸಲು ಕಷ್ಟವಾಗುತ್ತದೆ.

ಒಂದು ಸಲ ನಿಮಿರುವಿಕೆಯ ಸಮಸ್ಯೆಯಾದರೂ ಅದರಿಂದ ಆತಂಕವಾಗುತ್ತದೆ ಮತ್ತು ಗಂಡಸರಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಸ್ಖಲನದ ತೊಂದರೆಗಳು ಮತ್ತು ಕ್ರಮೇಣ ಲೈಂಗಿಕ ಬಯಕೆ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಹೆಚ್ಚಿನ ರಕ್ತದೊತ್ತಡವಿರುವ ಗಂಡಸರಲ್ಲಿ ಟೆಸ್ಟೋಸ್ಟೆರೋನ್ ಪ್ರಮಾಣ ಕಡಿಮೆ ಇರುತ್ತದೆ, ಇದು ಲೈಂಗಿಕ ಪ್ರಚೋದನೆಯ ಮೂಲ ಹಾರ್ಮೋನ್ ಆಗಿದೆ.

ಅಧಿಕ ರಕ್ತದೊತ್ತಡಕ್ಕಾಗಿ ತೆಗೆದುಕೊಳ್ಳುವ ಕೆಲವು ಔಷಧಿಗಳಿಂದಲೂ ನಿಮಿರುವಿಕೆಯ ಸಮಸ್ಯೆ ಬರಬಹುದು. ಅದರಲ್ಲೂ ಬೀಟಾ-ಬ್ಲಾಕರ್‌ಗಳು ಮತ್ತು ಮೂತ್ರವರ್ಧಕಗಳ ಗುಂಪಿಗೆ ಸೇರುವ ಔಷಧಿಗಳಿಂದ ಇದರ ಸಾಧ್ಯತೆ ಹೆಚ್ಚು. ಸತು, ದೇಹದಲ್ಲಿ ಟೆಸ್ಟೋಸ್ಟೆರೋನ್ ಮಟ್ಟವನ್ನು ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವ ಒಂದು ಮುಖ್ಯ ಖನಿಜವಾಗಿದೆ. ಮೂತ್ರವರ್ಧಕ ಔಷಧಗಳಲ್ಲಿ ಸತುವಿನ ಪ್ರಮಾಣ ಕಡಿಮೆ ಇರುತ್ತದೆ, ಇವುಗಳನ್ನು ತೆಗೆದುಕೊಳ್ಳುವುದರಿಂದ ಲೈಂಗಿಕ ಬಯಕೆ ಕಡಿಮೆಯಾಗುತ್ತದೆ. ಇವು ಶಿಶ್ನಕ್ಕೆ ಕಡಿಮೆ ರಕ್ತ ಸಂಚಾರವಾಗುವಂತೆ ಮಾಡುತ್ತವೆ ಇದರಿಂದ ನಿಮಿರುವಿಕೆಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದು ಕಡೆ ಬೀಟಾ-ಬ್ಲಾಕರ್‌ಗಳು, ನಿಮಿರುವಿಕೆಯನ್ನು ಸಾಧ್ಯವಾಗಿಸುವ ನರಗಳ ಮೇಲೆ ಪರಿಣಾಮ ಬೀರಬಹುದು.

ಈ ಸಮಸ್ಯೆಗೆ ಪರಿಹಾರ ಹುಡುಕುವ ಜಾಣ ದಾರಿಯೆಂದರೆ ನಿಮ್ಮ ಡಾಕ್ಟರೊಂದಿಗೆ ಮಾತನಾಡಿ, ಇದರ ಬಗ್ಗೆ ಅವರೊಂದಿಗೆ ಚರ್ಚೆ ಮಾಡುವುದು. ಅವರು ಪರಿಸ್ಥಿತಿ ಹದಗೆಡುವ ಮುನ್ನ ಸರಿಯಾದ ಸಮಯಕ್ಕೆ ತಕ್ಕ ಚಿಕಿತ್ಸೆಯನ್ನು ಕೊಡುತ್ತಾರೆ. ಆ ಮೂಲಕ ನಿಮಗಾಗುತ್ತಿರುವ ತೊಂದರೆಯನ್ನು ಸರಿಪಡಿಸುತ್ತಾರೆ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.