Reading Time: 2 minutes

ನಾವೆಲ್ಲರೂ ‘ಹೈಪರ್‌ಟೆನ್ಶನ್’ ಇಲ್ಲವೇ ‘ಅಧಿಕ ರಕ್ತದೊತ್ತಡ’ ಎಂಬ ಪದಗಳನ್ನು ಕೇಳಿದ್ದೇವೆ. ರೋಗ ನಿರ್ಣಯದಲ್ಲಿ ಹೆಚ್ಚಾಗಿ ಕಂಡುಬರುವ ಕಾಯಿಲೆ ಇದಾಗಿದೆ, ಆದರೂ ಇದರ ಬಗ್ಗೆ ನಾವು ಬೆರಗಾಗುವಷ್ಟು ದೊಡ್ಡ ಪ್ರಮಾಣದ ತಪ್ಪು ಮಾಹಿತಿ ಹರಡಿಕೊಂಡಿದೆ.

ಅಧಿಕ ರಕ್ತದೊತ್ತಡವು ಹೃದಯ ರೋಗ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ವೈಫಲ್ಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ, ಅದರ ಸುತ್ತ ಅಂಟಿಕೊಂಡಿರುವ ಕಟ್ಟುಕತೆಗಳಿಂದ ಹೊರಬರುವುದು ಮುಖ್ಯವಾಗಿದೆ. ಇದರ ಕುರಿತು ಎಚ್ಚರಿಕೆಯಿಂದ ಇದ್ದರೆ, ನಿಮ್ಮ ಇಲ್ಲವೇ ನಿಮ್ಮ ಪ್ರೀತಿಪ್ರಾತ್ರರ ಜೀವ ಉಳಿಸಬಹುದು.

ಅಧಿಕ ರಕ್ತದೊತ್ತಡ ಏಂದರೇನು?

ದೇಹದಲ್ಲಿರುವ ರಕ್ತವು ನಿಮ್ಮ ರಕ್ತನಾಳಗಳ ಮೂಲಕ ಹರಿಯುವಾಗ, ರಕ್ತನಾಳದ ಗೋಡೆಗಳ ವಿರುದ್ದ ಹಾಕುವ ಬಲವನ್ನು ಅಳೆಯುವುದೇ ರಕ್ತದೊತ್ತಡವಾಗಿದೆ. ನಿಮಗೆ ಹೆಚ್ಚು ರಕ್ತದೊತ್ತಡ ಇದ್ದರೆ, ರಕ್ತವು ನಿಮ್ಮ ಅಪಧಮನಿ ಗೋಡೆಗಳ ಮೇಲೆ ಹೆಚ್ಚು ಒತ್ತಡ ಹೇರುತ್ತಿದೆ ಎಂದರ್ಥ. ನಿಮ್ಮ ರಕ್ತದೊತ್ತಡದ ಮಟ್ಟವು ನಿರಂತರವಾಗಿ ಹೆಚ್ಚುತ್ತಿದ್ದರೆ, ಆ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ.

ಅಧಿಕ ರಕ್ತದೊತ್ತಡದ ಬಗ್ಗೆ ಇರುವ ಕೆಲವು ಕಟ್ಟುಕತೆಗಳು ಯಾವುವು?

ಕಟ್ಟುಕತೆ 1: ನೀವು ಅಧಿಕ ರಕ್ತದೊತ್ತಡ ಹೊಂದಿದ್ದೀರಿ ಎಂಬುದು ನಿಮಗೆ ಹಾಗೆಯೇ ತಿಳಿದುಬಿಡುತ್ತದೆ, ಏಕೆಂದರೆ ನೀವು ಅದರ ರೋಗಲಕ್ಷಣಗಳನ್ನು ಅನುಭವಿಸುತ್ತೀರಿ

ಇದು ಅಧಿಕ ರಕ್ತದೊತ್ತಡದ ಬಗ್ಗೆ ಜನರು ಹೊಂದಿರುವ ಅತ್ಯಂತ ಅಪಾಯಕಾರಿ ತಪ್ಪು ಕಲ್ಪನೆಯಾಗಿದೆ. ವೈದ್ಯರು ಈ ಅಧಿಕ ರಕ್ತದೊತ್ತಡವನ್ನು ಕಣ್ಣಿಗೆ ಕಾಣದ ಕೊಲೆಗಾರ ಎಂದು ಕರೆಯಲೂ ಒಂದು ಕಾರಣವಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಅಧಿಕ ರಕ್ತದೊತ್ತಡವು ಹಲವಾರು ವರ್ಷಗಳ ಅವಧಿಯಲ್ಲಿ ನಿಧಾನವಾಗಿ ಬೆಳೆಯುತ್ತದೆ. ಜೊತೆಗೆ, ಇದು ತುಂಬಾ ವಿರಳವಾಗಿ ಎಚ್ಚರಿಕೆಯ ಚಿಹ್ನೆ ಅಥವಾ ರೋಗಲಕ್ಷಣಗಳನ್ನು ತೋರಿಸುತ್ತದೆ.

ಅದಕ್ಕಾಗಿಯೇ, ಈ ರೋಗವನ್ನು ಮೊದಲೇ ಪತ್ತೆ ಹಚ್ಚುವುದು ತುಂಬಾ ಮುಖ್ಯ. ಜೊತೆಗೆ ನೀವು ವೈದ್ಯರನ್ನು ಭೇಟಿಮಾಡಿದಾಗ ನಿಯಮಿತವಾಗಿ ನಿಮ್ಮ ರಕ್ತದೊತ್ತಡವನ್ನು ಪರಿಶೀಲಿಸುವುದೂ ಅಷ್ಟೇ ಮುಖ್ಯವಾದದ್ದು.

ಕಟ್ಟುಕತೆ 2: ಅಧಿಕ ರಕ್ತದೊತ್ತಡವನ್ನು ತಡೆಯಲು ಸಾಧ್ಯವಿಲ್ಲ

ದುರಾದೃಷ್ಟವಶಾತ್, ಅಧಿಕ ರಕ್ತದೊತ್ತಡವನ್ನು ಗುಣಪಡಿಸಲು ಯಾವುದೇ ಚಿಕಿತ್ಸೆ ಇಲ್ಲ. ಆದರೆ, ನೀವು ಅಧಿಕ ರಕ್ತದೊತ್ತಡದ ಅಪಾಯಕಾರಿ ಅಂಶಗಳನ್ನು ಹೊಂದಿದ್ದರು ಸಹ, ಆರೋಗ್ಯಕರ ಜೀವನ ಶೈಲಿಯ ಆಯ್ಕೆಗಳ ಮೂಲಕ ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಮತ್ತು ತಡೆಯಬಹುದು. ಈ ಕುರಿತು ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನ ಶಿಫಾರಸುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ[1]:

ಒಂದು ಸಮತೋಲಿತ ಆಹಾರ ಕ್ರಮವನ್ನು ಪಾಲಿಸಬೇಕು, ಅದರಲ್ಲಿ ಉಪ್ಪು ಹಾಗೂ ಹೇರಳವಾಗಿ ಕೊಲೆಸ್ಟರಾಲ್ ತುಂಬಿರುವ ಆಹಾರಗಳು ಕಡಿಮೆ ಇರಬೇಕು.

ನಿಯಮಿತವಾಗಿ ದೈಹಿಕ ವ್ಯಾಯಾಮ ಮಾಡುವುದು

ಧೂಮಪಾನ ಬಿಡುವುದು

ನಿಮ್ಮ ಆಲ್ಕೊಹಾಲ್ ಸೇವನೆ ಮಿತಿಗೊಳಿಸುವುದು

ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು

ಕಟ್ಟುಕತೆ 3: ನಿಮ್ಮ ಕುಟುಂಬದಲ್ಲಿ ಅಧಿಕ ರಕ್ತದೊತ್ತಡದ ಇತಿಹಾಸವಿದ್ದರೆ ಮತ್ತು ಅದನ್ನು ಅನುವಂಶಿಕವಾಗಿ ನೀವು ಪಡೆದರೆ, ಅದರ ಬಗ್ಗೆ ನೀವು ಏನೂ ಮಾಡಲೂ ಸಾಧ್ಯವಿಲ್ಲ

ಅನುವಂಶಿಕವಾಗಿ ಬರುವ ಅಧಿಕ ರಕ್ತದೊತ್ತಡವನ್ನು ತಪ್ಪಿಸಲು ನಿಮ್ಮಿಂದ ಸಾಧ್ಯವಿಲ್ಲ, ಆದರೆ ನೀವು ತಕ್ಷಣವೇ ಆರೋಗ್ಯಕರವಾದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಅದನ್ನು ನಿಯಂತ್ರಿಸಬಹುದು. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಅದನ್ನು ಆರೋಗ್ಯಕರ ವ್ಯಾಪ್ತಿಯಲ್ಲಿಡಲು ನಿಮ್ಮ ದೈನಂದಿನ ದಿನಚರಿಯಲ್ಲಿ, ಮೇಲೆ ತಿಳಿಸಲಾದ ಅಭ್ಯಾಸಗಳನ್ನು ಸೇರಿಸಿ.

ಕಟ್ಟುಕತೆ 4: ನಿಮ್ಮ ಆಹಾರದಲ್ಲಿ ಹೆಚ್ಚುವರಿ ಉಪ್ಪನ್ನು ಹಾಕದಿದ್ದರೆ ನಿಮಗೆ ಅಪಾಯವಿಲ್ಲ

ಆಹಾರಕ್ಕೆ ನೀವು ಏನು ಸೇರಿಸುತ್ತೀರಿ ಎಂಬುದರ ಮೇಲೆ ನಿಮ್ಮ ಉಪ್ಪಿನ ಸೇವನೆ ಅವಲಂಬಿಸಿರುವುದಿಲ್ಲ, ಬದಲಾಗಿ ಆಹಾರ ಪದಾರ್ಥ ತಯಾರಿಸುವಾಗ ಅದರಲ್ಲಿ ಏನನ್ನು ಸೇರಿಸಿಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ದಿನಸಿ ಪದಾರ್ಥ ಖರೀದಿಸುವಾಗ ಅವುಗಳಲ್ಲಿರುವ ಉಪ್ಪಿನ ಪ್ರಮಾಣವನ್ನು ತಿಳಿಯಲು ಆಹಾರದ ಲೇಬಲ್‌ನಲ್ಲಿ ‘ಸೋಡಿಯಂ’ ಮತ್ತು ‘Na’ ನಂತಹ ಪದಗಳನ್ನು ನೋಡಿ ತಿಳಿದುಕೊಳ್ಳಿ.

ಕಟ್ಟುಕತೆ 5: ನೀವು ಧೂಮಪಾನ ಮಾಡದಿದ್ದರೆ ಮತ್ತು ಅಧಿಕ ತೂಕ ಹೊಂದಿಲ್ಲದಿದ್ದರೆ ನಿಮಗೆ ಅಧಿಕ ರಕ್ತದೊತ್ತಡ ಇರುವುದಿಲ್ಲ

ಧೂಮಪಾನ ಮತ್ತು ಹೆಚ್ಚು ತೂಕವಿರುವುದು ಅಧಿಕ ರಕ್ತದೊತ್ತಡದ ಅಪಾಯಕಾರಿ ಅಂಶಗಳು. ನೀವು ಧೂಮಪಾನ ಮಾಡದಿದ್ದರೆ ಮತ್ತು ನಿಮ್ಮ ತೂಕ ಆರೋಗ್ಯಕರ ವ್ಯಾಪ್ತಿಯಲ್ಲಿದ್ದರೆ, ನಿಮಗೆ ಹೆಚ್ಚು ರಕ್ತದೊತ್ತಡ ಇಲ್ಲವೆಂದು ನೀವು ಊಹಿಸಬಹುದು. ಆದರೆ, ಇದು ನಿಜವಲ್ಲ. ಅನುವಂಶಿಕ ಮತ್ತು ಜಡ ಜೀವನಶೈಲಿಯಂತಹ ಇತರೆ ಅಂಶಗಳೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.

ಕಟ್ಟುಕತೆ 6: ನೀವು ಚಿಕ್ಕವರಾಗಿದ್ದರೆ ಅಧಿಕ ರಕ್ತದೊತ್ತಡದ ಬಗ್ಗೆ ಚಿಂತಿಸಬೇಕಾಗಿಲ್ಲ

ಅಧಿಕ ರಕ್ತದೊತ್ತಡದ ಬಗ್ಗೆ 40 ವರ್ಷ ವಯಸ್ಸಿನ ಬಳಿಕ ಮಾತ್ರ ಚಿಂತಿಸಿದರೆ ಸಾಕು ಎಂದು ಹಲವರು ಭಾವಿಸುತ್ತಾರೆ. ವಯಸ್ಸಾದಂತೆ ಅಧಿಕ ರಕ್ತದೊತ್ತಡ ಬರುವ ಅಪಾಯ ಹೆಚ್ಚಿದ್ದರೂ, ಯಾವ ಸಮಯದಲ್ಲಾದರೂ ಜನರಿಗೆ ಅಧಿಕ ರಕ್ತದೊತ್ತಡ ಬರಬಹುದು, ಮಕ್ಕಳಿಗೂ ಸಹ ಬರಬಹುದು.[2]

ಕಟ್ಟುಕತೆ 7: ನಿಮ್ಮ ರಕ್ತದೊತ್ತಡವನ್ನು ವೈದ್ಯರ ಬಳಿ ಮಾತ್ರ ಪರಿಶೀಲಿಸಬಹುದು

ಮನೆಯಲ್ಲಿಯೇ ನಿಮ್ಮ ರಕ್ತದೊತ್ತಡವನ್ನು ನೀವು ಪರೀಕ್ಷಿಸಬಹುದು. ಅದರಲ್ಲೂ, ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾದರೆ, ನಿಯಮಿತವಾಗಿ ರಕ್ತದೊತ್ತಡವನ್ನು ಪರೀಕ್ಷಿಸುವುದು ತುಂಬಾ ಮುಖ್ಯವಾಗಿದೆ. ಉತ್ತಮ ಮಾನಿಟರಿಂಗ್ ಸಾಧನದೊಂದಿಗೆ ನಿಮ್ಮ ರಕ್ತದೊತ್ತಡದ ಮಟ್ಟವನ್ನು ನಿಯಮಿತವಾಗಿ ಟ್ರ್ಯಾಕ್ ಮಾಡುವ ಮೂಲಕ, ನೀವು ಅದರ ಮಾದರಿ ಮತ್ತು ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುತ್ತೀರಿ. ಹಾಗೆಯೇ, ನಿಮ್ಮ ಜೀವನಶೈಲಿ, ಅಭ್ಯಾಸಗಳು ಹಾಗು ಚಿಕಿತ್ಸೆಯು ರಕ್ತದೊತ್ತಡದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೀವು ತಿಳಿಯುತ್ತೀರಿ.

ಕಟ್ಟುಕತೆ 8: ಒಮ್ಮೆ ನಿಮ್ಮ ರಕ್ತದೊತ್ತಡವು ಚಿಕಿತ್ಸೆಯ ಮೂಲಕ ಕಡಿಮೆಯಾದಮೇಲೆ, ನೀವು ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಬಹುದು ಅಥವಾ ಅದರ ಪ್ರಮಾಣವನ್ನು ಸರಿಹೊಂದಿಸಿಕೊಳ್ಳಬಹುದು

ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ತಾವೇ-ರೋಗನಿರ್ಣಯ ಮಾಡುವುದು ಎಂದಿಗೂ ಒಳ್ಳೆಯದಲ್ಲ. ನೀವು ಚಿಕಿತ್ಸೆಯನ್ನು ಬದಲಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ. ನೀವು ತೀವ್ರ ರಕ್ತದೊತ್ತಡವನ್ನು ಹೊಂದಿದ್ದರೆ, ನಿಮ್ಮ ವೈದ್ಯರು ದೀರ್ಘಕಾಲದವರೆಗೆ ಚಿಕಿತ್ಸೆಯನ್ನು ಶಿಫಾರಸು ಮಾಡಬಹುದು.

ಕಟ್ಟುಕತೆ 9: ನೀವು ‘ವೈಟ್-ಕೋಟ್’ ರಕ್ತದೊತ್ತಡವನ್ನು ಮಾತ್ರ ಅನುಭವಿಸಿದರೆ, ಅದು ಆತಂಕಕ್ಕೆ ಕಾರಣವಲ್ಲ

ಕೆಲವು ಸಂದರ್ಭದಲ್ಲಿ, ವೈದ್ಯರನ್ನು ಭೇಟಿ ಮಾಡಿದಾಗ ನೀವು ವಿಶೇಷವಾಗಿ ಒತ್ತಡಕ್ಕೊಳಗಾಗಬಹುದು, ನಿಮ್ಮ ರಕ್ತದೊತ್ತಡದ ಮಟ್ಟ ಸಾಮಾನ್ಯವಾಗಿದ್ದರೂ, ವೈದ್ಯರು ಪರೀಕ್ಷಿಸುವಾಗ ರಕ್ತದೊತ್ತಡ ಹೆಚ್ಚಾಗಿದೆ ಎಂದು ತೋರಿಸಲು ಈ ಒತ್ತಡ ಕಾರಣವಾಗಬಹುದು. ಇದನ್ನು ವೈಟ್ ಕೋಟ್ ರಕ್ತದೊತ್ತಡ ಎನ್ನಲಾಗುತ್ತದೆ. ಈ ಸ್ಥಿತಿಯು ಆತಂಕಕಾರಿಯಾಗಿದೆ ಏಕೆಂದರೆ ವೈಟ್ ಕೋಟ್ ರಕ್ತದೊತ್ತಡ ಹೊಂದಿರುವ ಜನರು ಭವಿಷ್ಯದಲ್ಲಿ ರಕ್ತದೊತ್ತಡ ಹೆಚ್ಚುವ ಅಪಾಯವನ್ನು ಎದುರಿಸುತ್ತಾರೆ. [2]

ಆಕರಗಳು:

  1. American Heart Association. Changes You Can Make to Manage High Blood Pressure. Available at: https://www.heart.org/en/health-topics/high-blood-pressure/changes-you-can-make-to-manage-high-blood-pressure [Accessed 18 April 2019].
  2. Rush University Medical Center. Myths About High Blood Pressure. Available at: https://www.rush.edu/health-wellness/discover-health/high-blood-pressure-myths [Accessed 19 April 2019].

 

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.