Reading Time: 3 minutes

ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿ 17 ವರ್ಷಗಳ ಅನುಭವ ಇರುವ ರಿಜಿಸ್ಟರ್ಡ್ ಡಯಟೀಶಿಯನ್ ಅಶ್ವಿನಿ ಎಸ್.ಕಾನಡೆ ಅವರು ನುರಿತ-ವಿಮರ್ಶೆ ಮಾಡಿದ್ದಾರೆ.

ನಿಮಗೆ ಎಂದಾದರೂ ನಿಶ್ಶಕ್ತಿಯೆನಿಸಿ, ತಲೆಸುತ್ತು ಬಂದು, ದಿಕ್ಕು ತೋಚದಂತಾಗಿ ಎಲ್ಲವೂ ಬರಿದು ಎನಿಸಿದ್ದಿದೆಯಾ? ನೀವು ಬೆವರಿ ತಲ್ಲಣಗೊಂಡು ತಬ್ಬಿಬ್ಬಾಗಿರಬಹುದು. ನಿಮಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದ ಇಲ್ಲವೆ ಹೈಪೊಗ್ಲೈಸೆಮಿಯಾದ ಅನುಭವ ಆಗಿರುವ ಸಾಧ್ಯತೆಯಿದೆ.

ಹೈಪೊಗ್ಲೈಸೆಮಿಯ ಇಲ್ಲವೆ ಕಡಿಮೆ ರಕ್ತದ ಸಕ್ಕರೆ ಮಟ್ಟ ಎಂದರೇನು?

ರಕ್ತದ ಸಕ್ಕರೆ ಮಟ್ಟ 80-110 mg/dl ನ ನಡುವೆ ಇದ್ದರೆ ಒಳ್ಳೆಯದು. ಸರಾಸರಿಯಾಗಿ ರಕ್ತದ ಸಕ್ಕರೆ ಮಟ್ಟ 90 mg/dl ಇರುತ್ತದೆ. ಬಹಳಷ್ಟು ಮಂದಿಗೆ, ರಕ್ತದ ಸಕ್ಕರೆ ಮಟ್ಟ ಏರಿದರೆ ಅದು ತೊಂದರೆ ಎಂದು ಗೊತ್ತಿದೆ. ಆದರೆ, ಅದು ತೀರಾ ಕಡಿಮೆಯಾಗಿದ್ದರೂ ಅಪಾಯಕಾರಿ ಎಂದು ಗೊತ್ತೇ ಇಲ್ಲ.

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ 72 mg/dl ಗಿಂತ ಕೆಳಗೆ ಕುಸಿದರೆ, ನಿಮಗೆ ಹೈಪೊಗ್ಲೈಸೆಮಿಯ ಆಗಿರಬಹುದು.

ಸಕ್ಕರೆ ಕಾಯಿಲೆಗಾಗಿ ನೀವು ತೆಗೆದುಕೊಳ್ಳುವ ಔಷಧಗಳ ಪ್ರಮಾಣ ಹೆಚ್ಚಿವುದು, ಹೈಪೊಗ್ಲೈಸೆಮಿಯ ಉಂಟುಮಾಡುವ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಆದರೆ, ನೀವು ತುಂಬ ಕಡಿಮೆ ಊಟ ಮಾಡಿದರೆ ಇಲ್ಲವೆ ತಿನ್ನುವುದು ತಡವಾದರೆ, ಹೈಪೊಗ್ಲೈಸೆಮಿಯ ಆಗುವ ಅಪಾಯ ಇನ್ನೂ ಹೆಚ್ಚು.

ಸಕ್ಕರೆ ಕಾಯಿಲೆಯ ನಿರ್ವಹಣೆಯಲ್ಲಿ, ದೈಹಿಕ ಚಟುವಟಿಕೆಯ ಪಾತ್ರ ಮಹತ್ತರವಾದದ್ದು. ಆದರೆ ನೀವು ಸಕ್ಕರೆ ಕಾಯಿಲೆ ಹಿಡಿತದಲ್ಲಿಡಲು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರೆ, ವ್ಯಾಯಾಮದ ನಡುವೆ ಹಾಗು ತರುವಾಯ, ನಿಮಗೆ ಹೈಪೊಗ್ಲೈಸೆಮಿಯ ಆಗುವ ಸಾಧ್ಯತೆ ಹೆಚ್ಚಾಗುವುದು.(1) ಮದ್ಯಪಾನ ಕೂಡ ಒಮ್ಮೊಮ್ಮೆ ಹೈಪೊಗ್ಲೈಸೆಮಿಯ ಉಂಟುಮಾಡಬಹುದು.

ನೀವು ಮಲಗಿರುವಾಗ ಕೂಡ ಹೈಪೊಗ್ಲೈಸೆಮಿಯ ಆಗಬಹುದು (ಇರುಳಿನ ಅಥವಾ ನಾಕ್ಟರ್ನಲ್ ಹೈಪೊಗ್ಲೈಸೆಮಿಯ), ಆದರೆ ಬಹಳಷ್ಟು ಸಲ ಅದು ಗೊತ್ತೇ ಆಗುವುದಿಲ್ಲ. ಇನ್ಸುಲಿನ್ ಬಳಸುವವರಲ್ಲಿ ಇದು ಸರ್ವೇಸಾಮಾನ್ಯ.

ಹೈಪೊಗ್ಲೈಸೆಮಿಯಾದ ಹಿಂದಿರುವ ವಿಜ್ಞಾನ:

ದೇಹಕ್ಕೆ ಸಕ್ಕರೆಯೇ ಪ್ರಮುಖವಾದ ಶಕ್ತಿಯ ಮೂಲವಾಗಿದ್ದು, ಜೊತೆಗೆ ಮೆದುಳು ಕೂಡ ಸಂಪೂರ್ಣವಾಗಿ ಸಕ್ಕರೆಯನ್ನೇ ನೆಚ್ಚಿಕೊಂಡಿದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿದಾಗ, ನಿಮ್ಮ ಮೆದುಳಿಗೆ ಅದರ ಬಿಸಿ ತಟ್ಟುತ್ತದೆ. ಹೈಪೊಗ್ಲೈಸೆಮಿಯಾದಿಂದ ಹೊರಬರಲು, ನಿಮ್ಮ ದೇಹಕ್ಕೆ ಹುಟ್ಟಿನಿಂದಲೇ ಬಂದ, ತನ್ನನ್ನು ತಾನು ಕಾಪಾಡಿಕೊಳ್ಳುವ ಗುಣದಿಂದಾಗಿ, ಅದು ಇನ್ಸುಲಿನ್ ಉತ್ಪತ್ತಿ ಕಡಿಮೆ ಮಾಡಿ, ಗ್ಲುಕಗನ್ ಉತ್ಪತ್ತಿ ಹೆಚ್ಚಿಸುತ್ತದೆ.

ಹೈಪೊಗ್ಲೈಸೆಮಿಯ ಉಂಟಾದರೆ ಅದನ್ನು ಕಡೆಗಣಿಸದಿರಿ:

ತೀವ್ರವಾದ ಹೈಪೊಗ್ಲೈಸೆಮಿಯ ಎಚ್ಚರಿಕೆಯ ಗಂಟೆಯಾಗಿರಬಹುದು. ಅದರಿಂದ ತಟಸ್ಥ ಸ್ಥಿತಿ, ಪಾರ್ಶ್ವವಾಯು ಇಲ್ಲವೆ ಕೋಮ ಕೂಡ ಆಗಬಹುದು. ಕೆಲವೊಮ್ಮೆ ಅದು ಸಾವು ಕೂಡ ತರಬಹುದು.

ನಿಮಗೆ ಹೈಪೊಗ್ಲೈಸೆಮಿಯ ಆಗಿ ಕೆಳಗೆ ಬಿದ್ದರೆ, ರಸ್ತೆ ಅಪಘಾತವಾದರೆ ಇಲ್ಲವೆ ಬೇರೆ ರೀತಿ ಪೆಟ್ಟಾದರೆ, ಅದು ಬಹಳ ಹಾನಿಕರ.

ಹೈಪೊಗ್ಲೈಸೆಮಿಕ್ ಪ್ರಸಂಗಗಳು ಮರುಕಳಿಸಿದರೆ, ಅದರಿಂದ ದೀರ್ಘಾವಧಿ ಪರಿಣಾಮಗಳು ಸಹ ಉಂಟಾಗಬಹುದು. ಮತ್ತೆ ಯಾವಾಗ ಹೈಪೊಗ್ಲೈಸೆಮಿಯ ಆಗುವುದೊ ಎಂಬ ಹೆದರಿಕೆಯೇ ನಿಮ್ಮ ಬಾಳಿನ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.(2) ಇದರಿಂದ, ಬಂಡಿ ಓಡಿಸುವುದು, ಕೆಲಸ, ಪ್ರಯಾಣ ಮಾಡುವುದು ಇತ್ಯಾದಿಗಳಲ್ಲಿ ನಿಮ್ಮ ಸಾಮರ್ಥ್ಯ ಕುಂಠಿತವಾಗಬಹುದು.

ಇಂತಹ ಪ್ರಸಂಗಗಳು, ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹಿಡಿತದಲ್ಲಿಡಬೇಕಾದ ಗುರಿಯನ್ನು ಸಡಿಲಗೊಳಿಸಬಹುದು ಎಂದು ನಿಮ್ಮನ್ನು ದಾರಿತಪ್ಪಿಸಬಹುದು. ನೀವು ಸರಿಯಾದ ಆಹಾರಕ್ರಮ ಹಾಗು ಔಷಧಗಳನ್ನು ತೆಗೆದುಕೊಳ್ಳಲು ನಿರುತ್ಸಾಹ ತೋರಬಹುದು. ಇದರಿಂದ ಮುಂದೊಂದು ದಿನ ಸಕ್ಕರೆ ಕಾಯಿಲೆ ಹತೋಟಿಗೆ ಸಿಗದಿರುವ ಅಪಾಯವಿದೆ. ಸರಿಯಾದ ಆಹಾರಕ್ರಮ ಪಾಲಿಸದಿದ್ದರೆ, ನಿಮ್ಮ ದೇಹದ ತೂಕ ಸಹ ಹೆಚ್ಚಾಗಬಹುದು.

ಜೊತೆಗೆ ಮುಖ್ಯವಾಗಿ, ಒಂದು ಅಧ್ಯಯನದ ಪ್ರಕಾರ, ಟೈಪ್ 2 ಸಕ್ಕರೆ ಕಾಯಿಲೆಯಿರುವ ಹಿರಿಯರಲ್ಲಿ, ತೀವ್ರವಾದ ಹೈಪೊಗ್ಲೈಸೆಮಿಯ, ಬುದ್ಧಿಮಾಂದ್ಯತೆಯನ್ನು ಉಂಟುಮಾಡುವ ಅಪಾಯ ತುಂಬ ಇದೆ.(3)

ಎಚ್ಚರಿಕೆಯ ಸೂಚನೆಗಳಿಲ್ಲದ ಹೈಪೊಗ್ಲೈಸೆಮಿಯದ ಬಗ್ಗೆ ಹುಷಾರಾಗಿರಿ:

ಹೈಪೊಗ್ಲೈಸೆಮಿಯ ಆಗುವಂತಿದ್ದರೆ, ನಿಮ್ಮ ದೇಹವು ಕೆಲವು ನಿರ್ದಿಷ್ಟ ಸೂಚನೆ ಹಾಗು ಕುರುಹುಗಳನ್ನು ನೀಡುತ್ತದೆ. ಆದರೆ ರಕ್ತದಲ್ಲಿನ ಸಕ್ಕರೆ ಅಂಶ ಪದೇ ಪದೇ ಕಡಿಮೆಯಾಗುತ್ತಿದ್ದರೆ, ದೇಹದ ರಕ್ಷಣೆಯ ಸಾಮರ್ಥ್ಯ ಬಡವಾಗಿ, ಎಚ್ಚರಿಕೆಯ ಸೂಚನೆಗಳನ್ನು ಗುರುತಿಸುವುದು ಸಾಧ್ಯವಾಗದಿರಬಹುದು. ಟೈಪ್ 2 ಸಕ್ಕರೆ ಕಾಯಿಲೆಗಾಗಿ ಇನ್ಸುಲಿನ್ ಚಿಕಿತ್ಸೆ ಪಡೆಯುತ್ತಿರುವ, ಸರಿಸುಮಾರು 8-10% ಮಂದಿ, ಈ ರೀತಿ ಹೈಪೊಗ್ಲೈಸೆಮಿಯವನ್ನು ಗುರುತಿಸಲಾರದೆ ಹೋಗುತ್ತಾರೆ (hypoglycaemia unawareness). ಇವರಿಗೆ ತೀವ್ರವಾದ ಹೈಪೊಗ್ಲೈಸೆಮಿಯ ಆಗುವ ಅಪಾಯ 17 ಪಟ್ಟು ಹೆಚ್ಚಿದೆ.(4)

ಹೈಪೊಗ್ಲೈಸೆಮಿಯ ಆದಾಗ, ಏನು ಮಾಡಬೇಕು?

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಕೆಯಾದಾಗ, ನೀವು ಬೇಗನೆ ಚೇತರಿಸಿಕೊಳ್ಳಲು ಕೂಡಲೆ ಚಿಕಿತ್ಸೆ ಮಾಡಬೇಕು. ಇಲ್ಲದಿದ್ದರೆ ಸಕ್ಕರೆ ಅಂಶ ಅಪಾಯಕಾರಿ ಮಟ್ಟಕ್ಕೆ ಕುಸಿಯಬಹುದು. ಕೂಡಲೆ ಚಿಕಿತ್ಸೆ ಕೊಡಿಸುವುದರಿಂದ, ಮುಂದೊಂದು ದಿನ ನೀವು, ಹೈಪೊಗ್ಲೈಸೆಮಿಯವನ್ನು ಗುರುತಿಸಲಾರದ ಸ್ಥಿತಿ (hypoglycaemia unawareness) ಬೆಳೆಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ.

ಹಾಗಾಗಿ, ನಿಮಗೆ ಹೈಪೊಗ್ಲೈಸೆಮಿಯ ಆದರೆ, ನೀವೇನು ಮಾಡಬೇಕು? ಪರಿಸ್ಥಿತಿ ಗಂಭೀರವಾಗಿಲ್ಲದಿದ್ದರೆ, ಬೇಗನೆ ಸಕ್ಕರೆ ಬಿಡುಗಡೆ ಮಾಡುವಂತಹ ಏನನ್ನಾದರೂ ತಿನ್ನಿ ಇಲ್ಲವೆ ಕುಡಿಯಿರಿ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್‍ನ ಸೂಚನೆಗಳ ಪ್ರಕಾರ:(5)

ನೀವು ಪ್ರಜ್ಞೆಯಿಂದಿದ್ದು, ನಿಮ್ಮ ರಕ್ತದ ಗ್ಲುಕೋಸ್ 70 mg/dL ನಷ್ಟು ಇಲ್ಲವೆ ಅದಕ್ಕಿಂತ ಕಡಿಮೆಯಿದ್ದರೆ, 15-20 ಗ್ರಾಂ ಗ್ಲುಕೋಸ್ ತೆಗೆದುಕೊಳ್ಳುವುದು ಸರಿಯಾದ ಚಿಕಿತ್ಸೆಯಾಗಿದೆ. ಆದರೆ ನೀವು ಗ್ಲುಕೋಸ್ ಇರುವ ಯಾವುದೇ ಕಾರ್ಬೊಹೈಡ್ರೇಟ್ ತೆಗೆದುಕೊಳ್ಳಬಹುದು (ಸಿಹಿತಿಂಡಿ ಇಲ್ಲವೆ ಹಣ್ಣಿನ ರಸ). ಇಂತಹ ತುರ್ತು ಪರಿಸ್ಥಿತಿಗಳಿಗಾಗಿ ಮಾತ್ರ, ಗ್ಲುಕೋಸನ್ನು ಯಾವಾಗಲೂ ನಿಮ್ಮ ಬ್ಯಾಗಿನಲ್ಲಿ ಕೊಂಡೊಯ್ಯಿರಿ.

ಹದಿನೈದು ನಿಮಿಷಗಳಾದ ಮೇಲೆ, ನಿಮ್ಮ ರಕ್ತದ ಸಕ್ಕರೆ ಮಟ್ಟ ಪರೀಕ್ಷಿಸಿ. ಹೈಪೊಗ್ಲೈಸೆಮಿಯ ಮುಂದುವರಿದರೆ, ಮತ್ತೆ ಚಿಕಿತ್ಸೆ ಮಾಡಿ.

ನಿಮ್ಮ ಸಕ್ಕರೆ ಮಟ್ಟ ಸಹಜ ಸ್ಥಿತಿಗೆ ಮರಳಿದ ಮೇಲೆ, ಮತ್ತೆ ಹೈಪೊಗ್ಲೈಸೆಮಿಯ ಆಗದಂತೆ ತಡೆಯಲು ಊಟ ಇಲ್ಲವೆ ಲಘು ಉಪಾಹಾರ ಮಾಡಿ.

ರಕ್ತದ ಸಕ್ಕರೆ ಅಂಶ ಅಪಾಯಕಾರಿ ಮಟ್ಟಕ್ಕೆ ಕುಸಿದಾಗ, ನೀವು ತಟಸ್ಥರಾಗಬಹುದು ಇಲ್ಲವೆ ಪ್ರಜ್ಞೆ ಕಳೆದುಕೊಳ್ಳಬಹುದು. ಆಗ ನಿಮ್ಮಿಂದ ಸಕ್ಕರೆ ತಿನ್ನಲು ಆಗದಿರಬಹುದು. ನಿಮ್ಮ ಚೇತರಿಕೆಗಾಗಿ, ಬೇರೊಬ್ಬರ ನೆರವು ಬೇಕಾಗುತ್ತದೆ. ನಿಮಗೆ ತೀವ್ರವಾದ ಹೈಪೊಗ್ಲೈಸೆಮಿಯ ಆದರೆ, ಅಂದರೆ ನಿಮ್ಮ ರಕ್ತದ ಗ್ಲುಕೋಸ್ 54 mg/dL ಗಿಂತ ಕಡಿಮೆಯಿದ್ದರೆ, ನಿಮ್ಮ ಆರೈಕೆಗಾರರು ಇಲ್ಲವೆ ಕುಟುಂಬದವರು ನಿಮಗೆ ಗ್ಲುಕಗನ್ ಚುಚ್ಚುಮದ್ದನ್ನು ನೀಡಬೇಕು.

ನಿಮ್ಮ ಪರಿಸ್ಥಿತಿ ಸುಧಾರಿಸದಿದ್ದರೆ, ನಿಮ್ಮನ್ನು ಆಸ್ಪತ್ರೆಗೆ ಸೇರಿಸಬೇಕು. ನಿಮಗೆ ಪದೇ ಪದೇ ತೀವ್ರವಾದ ಹೈಪೊಗ್ಲೈಸೆಮಿಯ ಆಗುತ್ತಿದ್ದರೆ ಅಥವಾ ನಿಮಗೆ ಹೈಪೊಗ್ಲೈಸೆಮಿಯವನ್ನು ಗುರುತಿಸಲಾರದ ಸ್ಥಿತಿ (hypoglycaemia unawareness) ಇದ್ದರೆ, ವೈದ್ಯರು ನಿಮ್ಮ ಚಿಕಿತ್ಸೆಯನ್ನು ಮರುಪರಿಶೀಲಿಸಬಹುದು.

ಹೈಪೊಗ್ಲೈಸೆಮಿಯವನ್ನು ತಡೆಗಟ್ಟುವುದು:

ಹೈಪೊಗ್ಲೈಸೆಮಿಯವನ್ನು ದೂರವಿಡಲು, ನಿಮ್ಮ ರಕ್ತದ ಸಕ್ಕರೆ ಮಟ್ಟ ಯಾಕೆ ಕುಸಿಯುವುದು ಎಂಬ ಅರಿವು ನೆರವಿಗೆ ಬರುತ್ತದೆ. ಉಪವಾಸವಿರುವುದು, ತಡವಾಗಿ ಊಟ ಮಾಡುವುದು, ಬಿರುಸಿನ ದೈಹಿಕ ಚಟುವಟಿಕೆ ಇತ್ಯಾದಿಗಳಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುವ ಅಪಾಯ ಹೆಚ್ಚುತ್ತದೆ. ಅಂತಹ ಪ್ರಸಂಗ ಎದುರಾಗದಂತೆ ತಡೆಯಲು ಇಲ್ಲಿ ಕೆಲವು ಸಲಹೆಗಳಿವೆ:

ನಿಮ್ಮ ಔಷಧಗಳಿಗೆ ಅನುಗುಣವಾಗಿ ಊಟದ ಸಿದ್ಧತೆ ಮಾಡಿಕೊಳ್ಳಿ. ಊಟ ತಪ್ಪಿಸಬೇಡಿ ಇಲ್ಲವೆ ತಡವಾಗಿ ಊಟ ಮಾಡಬೇಡಿ.

ರಕ್ತದ ಸಕ್ಕರೆ ಅಂಶ ಕಡಿಮೆಯಾಗುವುದನ್ನು ಸೂಚಿಸುವ ವಿಶಿಷ್ಟ ಗುರುತುಗಳಿಗಾಗಿ ಒಂದು ಕಣ್ಣಿಟ್ಟಿರಿ. ಕುರುಹುಗಳನ್ನು ಮುಂಚಿತವಾಗಿಯೇ ಕಂಡುಹಿಡಿದು ಕ್ರಮ ಕೈಗೊಳ್ಳಿ. ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ.

ಗ್ಲುಕೋಸ್ ಮಾತ್ರೆ ಇಲ್ಲವೆ ಸಿಹಿತಿಂಡಿಗಳನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ.

ನಾಕ್ಟರ್ನಲ್ ಹೈಪೊಗ್ಲೈಸೆಮಿಯ ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು, ನಿಯಮಿತವಾಗಿ ಮಲಗುವ ಮುನ್ನ ರಕ್ತದ ಗ್ಲುಕೋಸ್ ಪರೀಕ್ಷೆ ಮಾಡಿ, ಏನಾದರೂ ಲಘು ಉಪಾಹಾರ ತಿಂದು ಮಲಗಿ. ಸರಿಯಾದ ಬಗೆಯ, ಸರಿಯಾದ ಅಳತೆಯ ಇನ್ಸುಲಿನ್ ತೆಗೆದುಕೊಳ್ಳುವುದು ಕೂಡ ನೆರವಾಗುತ್ತದೆ.

ವ್ಯಾಯಾಮದ ನಡುವೆ ಹಾಗು ತರುವಾಯ ಹೈಪೊಗ್ಲೈಸೆಮಿಯ ಆಗದಂತೆ ತಡೆಯಲು, ನಿಯಮಿತವಾಗಿ ರಕ್ತದ ಸಕ್ಕರೆ ಮಟ್ಟದ ಮೇಲೆ ನಿಗಾವಹಿಸಿ, ವ್ಯಾಯಾಮಕ್ಕೂ ಮುನ್ನ ಇನ್ಸುಲಿನ್ ಅಳತೆಯಲ್ಲಿ ಬದಲಾವಣೆ ಮಾಡಿ ಮತ್ತು ಕಾರ್ಬೊಹೈಡ್ರೇಟ್ ಸಪ್ಲಿಮೆಂಟ್‍ಗಳನ್ನು ತಿನ್ನಿರಿ.(1) ನಿಮ್ಮ ಔಷಧಗಳ ಅಳತೆಯಲ್ಲಿ ಬದಲಾವಣೆ ಮಾಡಲು ವೈದ್ಯರನ್ನು ಸಂಪರ್ಕಿಸಿ. ಸಕ್ಕರೆ ಕಾಯಿಲೆ ಉಳ್ಳವರು, ವ್ಯಾಯಾಮ ಮಾಡುವಾಗ ಹೇಗೆ ಎಚ್ಚರವಹಿಸಬೇಕೆಂದು ಇಲ್ಲಿ ಕೆಲವು ಸಲಹೆಗಳಿವೆ.

ನಿಮ್ಮ ಆರೈಕೆಗಾರರು ಇಲ್ಲವೆ ಕುಟುಂಬದ ಸದಸ್ಯರಿಗೆ, ಗ್ಲುಕಗನ್ ಕಿಟ್‍ನ ಬಳಕೆಯ ಬಗ್ಗೆ ಸ್ಪಷ್ಟ ಸೂಚನೆಗಳು ಸಿಗುವಂತೆ ನೋಡಿಕೊಳ್ಳಿ. ಅವರಿಗೆ ಕಿಟ್ ಎಲ್ಲಿದೆಯೆಂದು ಗೊತ್ತಿರಬೇಕು ಹಾಗು ಅದನ್ನು ಯಾವಾಗ ಮತ್ತು ಹೇಗೆ ಬಳಸಬೇಕೆಂಬ ಅರಿವಿರಬೇಕು.

ನಿಮಗೆ ಹೈಪೊಗ್ಲೈಸೆಮಿಯವನ್ನು ಗುರುತಿಸಲಾರದ ಸ್ಥಿತಿ ಇದ್ದರೆ, ಸಕ್ಕರೆ ಹಿಡಿತದಲ್ಲಿಡಬೇಕೆಂಬ ಗುರಿಯನ್ನು ಸಡಿಲಿಸಬಹುದು. ಹಲವು ವಾರ ಕಟ್ಟುನಿಟ್ಟಾಗಿ ಸಕ್ಕರೆ ಮಟ್ಟ ಕಮ್ಮಿಯಾಗದಂತೆ ನೋಡಿಕೊಂಡರೆ, ಹೈಪೊಗ್ಲೈಸೆಮಿಯವನ್ನು ಗುರುತಿಸುವ ಶಕ್ತಿ ಸುಧಾರಿಸುತ್ತದೆ.(6)

ಉಲ್ಲೇಖಗಳು::

  1. Younk LM, Mikeladze M, Tate D, Davis SN. Exercise-related hypoglycaemia in diabetes mellitus. Expert review of endocrinology & metabolism. 2011;6(1):93-108. doi:10.1586/eem.10.78.
  2. Barendse S, Singh H, Frier BM, Speight J. The impact of hypoglycaemia on quality of life and related patient-reported outcomes in Type 2 diabetes: a narrative review. Diabet Med. 2012 Mar;29(3):293-302. doi: 10.1111/j.1464-5491.2011.03416.x. Review. PubMed PMID: 21838763.
  3. Whitmer RA, Karter AJ, Yaffe K, Quesenberry CP Jr, Selby JV. Hypoglycemic episodes and risk of dementia in older patients with type 2 diabetes mellitus. JAMA. 2009 Apr 15;301(15):1565-72. doi: 10.1001/jama.2009.460. PubMed PMID: 19366776; PubMed Central PMCID: PMC2782622.
  4. Brož J, Píthová P, Janíčková Žďárská D. [Impaired hypoglycaemia awareness in diabetes mellitus]. Inner Lek. Fall 2016; 62 (7-8): 547-50. Review. Czech. PubMed PMID: 27627076.
  5. Glycemic Targets: Standards of Medical Care in Diabetes—2018 American Diabetes Association Diabetes Care Jan 2018, 41 (Supplement 1) S55-S64; DOI: 10.2337/dc18-S006

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.