Reading Time: 2 minutes

ನೀವು ಚಿಕ್ಕವರಿದ್ದಾಗ ನೇರಳೆ ಹಣ್ಣನ್ನು ತಿಂದಿರುವುದು ನಿಮಗೆ ನೆನಪಿರಬೇಕು. ಅದರ ರುಚಿ ನಿಮಗೆ ತುಂಬಾ ಇಷ್ಟ ಎಂದೋ ಇಲ್ಲವೇ ಅದು ಆರೋಗ್ಯಕ್ಕೆ ಒಳ್ಳೆಯದು ಎಂದೋ ಅದನ್ನು ತಿಂದಿದ್ದಕ್ಕಿಂತ ಹೆಚ್ಚಾಗಿ, ಆ ಹಣ್ಣನ್ನು ತಿಂದಾಗ ನಾಲಗೆ ನೇರಳೆ ಬಣ್ಣಕ್ಕೆ ತಿರುಗುತ್ತಿದ್ದದ್ದು ನಿಮಗೆ ಹೆಚ್ಚು ಇಷ್ಟ ಆಗುತ್ತಾ ಇತ್ತು ಅಲ್ವಾ?

ನೀವು ಈಗ ಗಮನಿಸಿರಬಹುದು, ನೇರಳೆ ಹಣ್ಣು ಮತ್ತೆ ಅಂಗಡಿಗಳಲ್ಲಿ ಕಾಣಸಿಗುತ್ತಿವೆ. ಅವು ನೇರಳೆ ಹಣ್ಣಿನ ರಸ, ಚಿಪ್ಸ್, ಪುಡಿ ಹಾಗೂ ನೇರಳೆ ಜೇನಿನ ರೂಪದಲ್ಲೂ ಸಿಗುತ್ತಿವೆ. ಇದಕ್ಕಿರುವ ಹಲವು ಕಾರಣಗಳಲ್ಲಿ ಒಂದು ಎಂದರೆ ನೇರಳೆ ಹಣ್ಣು ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂಬುದು.(1)

ನೇರಳೆ ಹಣ್ಣು ನಿಜವಾಗಿಯೂ ಡಯಾಬಿಟಿಸ್‌ ನಿರ್ವಹಿಸಲು ನೆರವಾಗುವುದೇ?

1960ರಿಂದಲೂ ಪ್ರಾಣಿಗಳ ಮೇಲೆ ನಡೆದ ಹಲವಾರು ಅಧ್ಯಯನಗಳು ಹೇಳುವುದೇನೆಂದರೆ ನೇರಳೆ ಹಣ್ಣು (ಹಣ್ಣು ಮತ್ತು ಬೀಜ ಎರಡೂ) ಡಯಾಬಿಟಿಸ್‌ ಕಡಿಮೆ ಮಾಡುವ ಲಕ್ಷಣಗಳನ್ನು ತೋರಿದೆ.(2) ಇಂಡಿಯಾದಲ್ಲಿ ನಡೆದ ಅಧ್ಯಯನದ ಬಗ್ಗೆ ಹೇಳಬೇಕೆಂದರೆ, 2011ರಲ್ಲಿ, ಕರ್ನಾಟಕದ ಮಂಗಳೂರಿನಲ್ಲಿ ನಡೆದ ಒಂದು ಅಧ್ಯಯನದಲ್ಲಿ, ನೇರಳೆ ಹಣ್ಣಿನ ಬೀಜದ ಪುಡಿಯನ್ನು ಸೇವಿಸುವುದರಿಂದ ಖಾಲಿ ಹೊಟ್ಟೆಯ ರಕ್ತದ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ ಎಂದು ಕಂಡುಬಂದಿದೆ.(3)

ನೇರಳೆ ಹಣ್ಣು ಹೇಗೆ ಕೆಲಸಮಾಡುವುದು?

ನೇರಳೆ ಹಣ್ಣಿನ ಬೀಜದಲ್ಲಿ ಜಂಬೊಸಿನ್‌ (jambosine) ಹಾಗೂ ಜಂಬೊಲಿನ್‌ (jamboline) ಎನ್ನುವ ಅಂಶಗಳಿವೆ. ಇವರಡೂ ಆಹಾರದಲ್ಲಿರುವ ಗಂಜಿಯ(ಸ್ಟಾರ್ಚ್‌) ಅಂಶವನ್ನು ಸಕ್ಕರೆಯನ್ನಾಗಿ ಮಾರ್ಪಡಿಸುವ ಕೆಲಸವನ್ನು ನಿಧಾನಗೊಳಿಸುತ್ತವೆ ಎಂದು ನಂಬಲಾಗಿದೆ. ಇದರರ್ಥ, ನಿಮ್ಮ ಆಹಾರದಲ್ಲಿರುವ ಗಂಜಿಯು ಮೆಟಬಾಲಿಸಂ ಮೂಲಕ ಅರಗಿದ ಕೂಡಲೇ ನಿಮ್ಮ ರಕ್ತದ ಸಕ್ಕರೆ ಮಟ್ಟ ಮೇಲೇರುವುದಿಲ್ಲ ಎಂದು.  

ಟೈಪ್‌ 2 ಡಯಾಬಿಟಿಸ್‌ ಇರುವವರಲ್ಲಿ ದೇಹದಲ್ಲಿರುವ ರಕ್ತದ ಸಕ್ಕರೆಯನ್ನು ಬಳಸಿಕೊಳ್ಳುವಷ್ಟು ಇನ್ಸುಲಿನ್‌ ಇರುವುದಿಲ್ಲ; ಇದಕ್ಕೆ ಕಾರಣ, ಒಂದೋ ಅವರ ದೇಹದಲ್ಲಿರುವ ಪ್ಯಾಂಕ್ರಿಯಾಸ್‌ ಸಾಕಷ್ಟು ಪ್ರಮಾಣದ ಇನ್ಸುಲಿನ್‌ ಅನ್ನು ಉತ್ಪಾದಿಸುವುದಿಲ್ಲ, ಇಲ್ಲವೇ ಉತ್ಪತ್ತಿಯಾದ ಇನ್ಸುಲಿನ್‌ ಪ್ರಮಾಣ ಬೇಗನೆ ಇಳಿದುಬಿಡುವುದಾಗಿರುತ್ತದೆ. ನೇರಳೆ ಹಣ್ಣಿನ ಬೀಜಗಳು ಇನ್ಸುಲಿನ್‌ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಇಲ್ಲವೇ ಅದರ ಪ್ರಮಾಣ ಬೇಗನೆ ಇಳಿದುಹೋಗದಂತೆ ತಡೆದು ದೇಹಕ್ಕೆ ಬೇಕಾದಷ್ಟು ಇನ್ಸುಲಿನ್‌ ದೊರಕುವಂತೆ ಮಾಡುತ್ತವೆ.(4)  

ನೇರಳೆ ಹಣ್ಣನ್ನು ಡಯಾಬಿಟಿಸ್‌ಗೆ ಹೇಗೆ ಮದ್ದಾಗಿ ಬಳಸಬಹುದು?

ನೇರಳೆ ಹಣ್ಣು ರಸ, ಚಿಪ್ಸ್ ಹಾಗೂ ಇಡೀ ಹಣ್ಣಿನ ರೂಪದಲ್ಲಿ ಸಿಗುತ್ತಿದ್ದರೂ, ಅದನ್ನು ಪುಡಿಯ ರೂಪದಲ್ಲಿ ಬಳಸಿದರೆ ಒಳ್ಳೆಯದು ಎಂದು ವೈದ್ಯಕೀಯವಾಗಿ ಸಾಬೀತಾಗಿದೆ. ಮಂಗಳೂರಿನಲ್ಲಿ ನಡೆದ ಅಧ್ಯಯನದ ಪ್ರಕಾರ ಪ್ರತಿದಿನ 10 ಗ್ರಾಂನಷ್ಟು ನೇರಳೆ ಹಣ್ಣಿನ ಬೀಜದ ಪುಡಿಯನ್ನು ತಿಂದರೆ, ಅದು ಖಾಲಿ ಹೊಟ್ಟೆಯ ರಕ್ತದ ಸಕ್ಕರೆ ಮಟ್ಟವನ್ನು ಇಳಿಸಲು ನೆರವಾಗುವುದು. ನೇರಳೆ ಹಣ್ಣಿನ ಬೀಜದ ಪುಡಿ ಅಂಗಡಿಗಳಲ್ಲಿ ಸಿಗುತ್ತದೆ, ನೀವು ಎರಡು ಟೀ ಚಮಚ ಪುಡಿಯನ್ನು ತೆಗೆದುಕೊಂಡರೆ ಅದು 10 ಗ್ರಾಂ ಡೋಸ್‌ ಆಗುವುದು. ಮನೆಯಲ್ಲಿಯೇ ಬೇಕಾದರೂ ನೀವು ನೇರಳೆ ಹಣ್ಣಿನ ಬೀಜದ ಪುಡಿ ಮಾಡಿಕೊಳ್ಳಬಹುದು. ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ, ಅದು ಒಣಗಿದ ಮೇಲೆ ಪುಡಿ ಮಾಡಿ ಇಟ್ಟುಕೊಂಡರೆ ಆಯಿತು. ಬೇಕಾದರೆ ನೀವು ಹಣ್ಣಿನ ತಿರುಳನ್ನು ಮಿಲ್ಕ್‌ಶೇಕ್‌ ಇಲ್ಲವೇ ಆರೋಗ್ಯಕರ ಸಿಹಿತಿನಿಸನ್ನು ಮಾಡಲು ಬಳಸಬಹುದು.

ಏನಾದರೂ ಅಡ್ಡ ಪರಿಣಾಮಗಳಿವೆಯೇ?

ಗರ್ಭಾವಸ್ಥೆಯಲ್ಲಿ ನೇರಳೆ ಹಣ್ಣು ಸುರಕ್ಷಿತವಾದದ್ದು ಎಂದು ಸಾಬೀತು ಮಾಡಲು ಯಾವುದೇ ಹೆಚ್ಚಿನ ಮಾಹಿತಿ ಸಿಗುತಿಲ್ಲ. ಹಾಗಾಗಿ, ಗರ್ಭಿಣಿಯರು ಇದನ್ನು ದೂರ ಇಡುವುದು ಒಳ್ಳೆಯದು. ನೇರಳೆ ಹಣ್ಣು ರಕ್ತದ ಸಕ್ಕರೆ ಮಟ್ಟದ ಮೇಲೆ ಬೀರುವ ಪರಿಣಾಮವು ಸ್ಥಿರವಾಗಿರುವುದಿಲ್ಲ, ಹಾಗಾಗಿ, ನೀವು ಯಾವುದಾದರೂ ಸರ್ಜರಿ ಮಾಡಿಸಿಕೊಳ್ಳುವುದಿದ್ದರೆ, ಸರ್ಜರಿಯ ಹದಿನೈದು ದಿನಗಳಿಗೆ ಮೊದಲೇ ಅದು ತಿನ್ನುವುದನ್ನು ನಿಲ್ಲಿಸುವುದು ಒಳ್ಳೆಯದು.(5)

ಡಯಾಬಿಟಿಸ್‌ಗೆ ನೇರಳೆ ಹಣ್ಣು ಸುರಕ್ಷಿತವಾದ ಗಿಡಮೂಲಿಕೆಯಾಗಿದೆ, ಆದರೂ ಇದು ಎಷ್ಟು ಪ್ರಮಾಣದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಇಳಿಸುತ್ತದೆ ಎಂದು ಊಹಿಸಲು ಆಗುವುದಿಲ್ಲ. ಹಾಗಾಗಿ, ನೀವು ಈ ಹಣ್ಣನ್ನು ಇಲ್ಲವೇ, ಇದರ ಬೀಜದ ಪುಡಿಯನ್ನು ನಿಯಮಿತವಾಗಿ ಸೇವಿಸುವ ಮೊದಲು ನಿಮ್ಮ ಡಾಕ್ಟರ್‌ ಅವರ ಸಲಹೆ ಪಡೆಯುವುದು ಒಳ್ಳೆಯದು. ಅವರಿಂದ ಹೈಪೋಗ್ಲೈಸೆಮಿಯಾದ  ಲಕ್ಷಣಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ, ಆಗ ಒಂದು ವೇಳೆ ನಿಮಗೆ ಆ ಲಕ್ಷಣಗಳು ಕಂಡುಬಂದರೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ನಿಮಗೆ ತಿಳಿದಿರುತ್ತದೆ.

ಉಲ್ಲೇಖಗಳು:

  1. A.R. Shivashankara, A.N. Prabhu, P.P. D’souza, B.R.V. Baliga, M.S. Baliga, P.L. Palatty. Antidiabetic and Hypoglycemic Effects of  Syzygium cumini  (Black Plum). Bioactive Food as Dietary Interventions for Diabetes. 2013 Elsevier Inc.  537-554. http://dx.doi.org/10.1016/B978-0-12-397153-1.00033-0
  2. M. Ayyanar, P.S. Babu. Syzygium cumini (L.) Skeels: A review of its phytochemical constituents and traditional uses. Asian Pac J Trop Biomed. 2012 Mar; 2(3); 240–246. doi:  10.1016/S2221-1691(12)60050-1
  3. G. Shivaprakash, M.R.S.M. Pai, M. Nandini, K. Reshma, D.A. Sahana, K. Rajendran et al. Antioxidant potential of Eugenia jambolana seed; a randomized clinical trial in type 2diabetes mellitus. International Journal of Pharma and Bio Sciences. June 2011; 2(2)
  4. S.I. Rizvi, N. Mishra. Traditional Indian Medicines Used for the Management of Diabetes Mellitus. J. Diabetes Res. 2013 June; 2013: 712092. doi:  10.1155/2013/712092
  5. Jambolan.  WebMD. Available at https://www.webmd.com/vitamins-supplements/ingredientmono-530-jambolan.aspx?activeingredientid=530&activeingredientname=jambolan

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.