Reading Time: 3 minutes

ತಜ್ಞರಿಂದ ವಿಮರ್ಶೆ – ಅಶ್ವಿನಿ ಎಸ್.ಕಾನಡೆ, ನೋಂದಾಯಿತ ಡಯಟಿಶಿಯನ್ ಮತ್ತು ಪ್ರಮಾಣೀಕೃತ ಡಯಾಬಿಟಿಸ್ ಶಿಕ್ಷಕರು. ಇವರಿಗೆ 17 ವರ್ಷಗಳ ಅನುಭವವಿದೆ

ಸತ್ಯಾಂಶ ಪರೀಕ್ಷಿಸಿದವರು – ಆದಿತ್ಯ ನಾರ್, ಬಿ.ಫಾರ್ಮ್, ಎಂ.ಎಸ್‌ಸಿ. ಸಾರ್ವಜನಿಕ ಆರೋಗ್ಯ ಮತ್ತು ಆರೋಗ್ಯ ಅರ್ಥಶಾಸ್ತ್ರ

ಅದರ ರುಚಿಯಿಂದಾಗಿ ಜನರು ತಿನ್ನಲಿಚ್ಛಿಸದ ಒಂದು ತರಕಾರಿ ಯಾವುದಾದರೂ ಇದ್ದರೆ, ಅದು ಹಾಗಲಕಾಯಿಯೇ ಆಗಿರಬೇಕು, ಇದನ್ನು ಉತ್ತರ ಭಾರತದಲ್ಲಿ ‘ಕರೇಲಾ’ ಎಂದೂ ಕರೆಯುತ್ತಾರೆ. ಆದರೆ ಮುಖ ನೋಡಿ ಮಣೆ ಹಾಕಬಾರದು ಎಂಬಂತೆ – ಈ ಕಹಿ ತರಕಾರಿಯನ್ನು ಡಯಾಬಿಟಿಸ್ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಸಾಂಪ್ರದಾಯಿಕ ಔಷಧವಾಗಿ ಬಳಸಲಾಗುತ್ತದೆ. ಮತ್ತು ನೀವು ಅದನ್ನು ಹೇಗೆಲ್ಲಾ ಬಳಸಬಹುದು ಎಂಬುದು ಇಲ್ಲಿದೆ.

ಡಯಾಬಿಟಿಸನ್ನು ನಿಯಂತ್ರಿಸಲು ಹಾಗಲಕಾಯಿಯನ್ನು ಹೇಗೆ ಬಳಸಬೇಕು

ಸಾಮಾನ್ಯವಾಗಿ ಹಾಗಲಕಾಯಿಯನ್ನು ಕತ್ತರಿಸಿ, ರುಬ್ಬಿ, ಜ್ಯೂಸ್ ಮಾಡಿಟ್ಟುಕೊಂಡು, ದಿನಕ್ಕೆ 50 ರಿಂದ 100 ಮಿ.ಲೀ ನಷ್ಟು ಸೇವಿಸುವುದಾಗಿದೆ.

ಜ್ಯೂಸ್ ಮಾಡುವುದು ಹೇಗೆ:

  1. ಒಂದು ಮಧ್ಯಮ ಗಾತ್ರದ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು, ಕತ್ತರಿಸಿ ಬೀಜಗಳನ್ನು ಹಾಗೂ ಅದರ ಸುತ್ತಲಿರುವ ಬಿಳಿ ಭಾಗವನ್ನು ತೆಗೆದುಹಾಕಿರಿ.
  2. ನಂತರ ಹಸಿರು ಭಾಗವನ್ನು ತುಂಡುತಂಡಾಗಿ ಕತ್ತರಿಸಿ, ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ.
  3. ಜ್ಯೂಸ್‌ನ ಕಹಿಯನ್ನು ತಗ್ಗಿಸಲು ಚೂರು ಉಪ್ಪನ್ನಾಗಲಿ ಅಥವಾ ಅರ್ಧದಷ್ಟು ನಿಂಬೇಹಣ್ಣಿನ ರಸವನ್ನಾಗಲಿ ಸೇರಿಸಿ. 
  4. ನೀರಿನಿಂದ ಕಾಯಿಯ ತುಂಡುಗಳನ್ನು ತೆಗೆದು, ಜ್ಯೂಸ್ ಮಾಡಲು ಮಿಕ್ಸಿಗೆ ಹಾಕಿ ಅವಶ್ಯಕತೆಗೆ ತಕ್ಕಂತೆ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿರಿ. 
  5. ಜ್ಯೂಸನ್ನು ಹೆಚ್ಚು ರುಚಿಕರವಾಗಿಸಲು ಕೆಲವರು ಚಿಟಿಕೆ ಕರಿಮೆಣಸು ಪುಡಿ ಅಥವಾ ಪುಡಿಮಾಡಿದ ಶುಂಠಿಯನ್ನು ಸೇರಿಸುತ್ತಾರೆ.

ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡಿನ ಹಾಗಲಕಾಯಿಯ ಜ್ಯೂಸ್‌ಗಳು, ಡೋಸೇಜ್‌ನ ಸೂಚನೆಗಳೊಂದಿಗೆ ದೊರೆಯುತ್ತವೆ. ಅದೇನೇ ಇದ್ದರೂ ಇದು ರಕ್ತದಲ್ಲಿನ ಗ್ಲೂಕೋಸ್‌ ಮಟ್ಟದ ಅನಿರೀಕ್ಷಿತ ಇಳಿಕೆಗೆ ಕಾರಣವಾಗುವುದರಿಂದ, ಇದನ್ನು ಸೇವಿಸುವುದಕ್ಕು ಮೊದಲೂ ನಿಮ್ಮ ಡಾಕ್ಟರ್‌ರ ಸಲಹೆ ಪಡೆಯುವುದು ಉತ್ತಮ. 

ಇದರ ಬದಲು ನಾನು ಹಾಗಲಕಾಯಿ ಪಲ್ಯ ತಿನ್ನಬಹುದೆ?

ತನ್ನ ವೆಬ್‌ಸೈಟ್‌ನಲ್ಲಿ, ಬಾಣಸಿಗ ಸಂಜೀವ್ ಕಪೂರ್, ಬೇಯಿಸಿದ ಹಾಗಲಕಾಯಿಯನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಹಾಗಲಕಾಯಿಯ ಕಹಿಯನ್ನು ಕಡಿಮೆ ಮಾಡಲು ಸಾಕಷ್ಟು ಎಣ್ಣೆ ಮತ್ತು ಇತರ ಮಸಾಲೆಗಳು ಅಥವಾ ಬೆಲ್ಲವನ್ನು ಬಳಸುವುದರಿಂದ ಹಾಗಲಕಾಯಿಯ ಎಷ್ಟೋ ಪ್ರಯೋಜನಗಳು ಈ ಪ್ರಕ್ರಿಯೆಯಲ್ಲಿ ನಾಶವಾಗುವವು.

ಹಾಗಲಕಾಯಿಯನ್ನು ಸೇವಿಸುವಾಗ ಇದು ನೆನೆಪಿರಲಿ

ಹಾಗಲಕಾಯಿಯ ಸೇವನೆ ಹೆಚ್ಚಿನ ಜನರಿಗೆ ಸುರಕ್ಷಿತವಾಗಿದ್ದರೂ, ಇದನ್ನು ಗರ್ಭಿಣಿಯರು ಸೇವಿಸಬಾರದು, ಏಕೆಂದರೆ ಇದರ ಬೀಜ ಮತ್ತು ರಸವೂ ಪ್ರಾಣಿಗಳ ಗರ್ಭಪಾತಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. ಗ್ಲೂಕೋಸ್ 6 ಫಾಸ್ಫೇಟ್ ಡಿಹೈಡ್ರೋಜಿನೇಸ್ ಎನ್ಝಯ್ಮ್ (G6PD)ನ ಕೊರತೆಯಿರುವ ಜನರು ಹಾಗಲಕಾಯಿಯನ್ನು ಸೇವಿಸುವಾಗ ‘ಫೆವಿಸಂ’ (ಕೆಂಪು ರಕ್ತ ಕಣಗಳು ಒಡೆಯುತ್ತವೆ, ಇದು ಹೀಮೋಲೈಟಿಕ್ ರಕ್ತಹೀನತೆಗೆ ಕಾರಣವಾಗುತ್ತವೆ) ಎಂಬ ಸಮಸ್ಯೆಗೆ ಕಾರಣವಾಗಬಹುದು, ಮತ್ತು ಅಂತಹ ಜನರು ಇದನ್ನು ಸೇವಿಸುವುದನ್ನು ತಪ್ಪಿಸುವುದು ಕಡ್ಡಾಯ.(1)

ಜ್ಯೂಸ್‌ನ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಅದು ಅತಿಸಾರವನ್ನು(ಭೇದಿ) ಉಂಟು ಮಾಡಬಹುದು.(2)

ಆದರೆ ಹಾಗಲಕಾಯಿಯೇ ಏಕೆ?

ಹಾಗಲಕಾಯಿ ಹಲವಾರು ಫೈಟೊಕೆಮಿಕಲ್‍ಗಳನ್ನು ಹೊಂದಿರುತ್ತದೆ; ಅವುಗಳಲ್ಲಿರುವ ಮೂರು ಅಂಶಗಳು (ಚರಂಟಿನ್, ವೈಸಿನ್ ಮತ್ತು ಪಾಲಿಪೆಪ್ಟೈಡ್-ಪಿ) ಡೈಯಾಬಿಟಿಸನ್ನು ಗಮನಾರ್ಹವಾಗಿ ನಿಗ್ರಹಿಸುತ್ತವೆ ಎಂದು ತೋರಿಸಿವೆ. ಇದಲ್ಲದೆ, ಇದು ಲೆಕ್ಟಿನ್ ಎಂಬ ಮತ್ತೊಂದು ಸಂಯುಕ್ತವನ್ನು ಸಹ ಹೊಂದಿದ್ದು, ಇದು ಹಸಿವನ್ನು ಕಡಿಮೆ ಮಾಡುತ್ತದೆ – ಡಯಾಬಿಟಿಸ್‌ ಇರುವವರಲ್ಲಿ ಕಾಣಿಸಿಕೊಳ್ಳುವ ಅನಿರೀಕ್ಷಿತ ಹಸಿವಿನ ಭಾವವನ್ನು ಕುಗ್ಗಿಸಲು ಸಹಾಯ ಮಾಡುವ ಸೂಕ್ತವಾದ ಔಷಧಿ ಇದಾಗಿದೆ.(3)

ಸಂಶೋಧನೆಗಳು ಹೇಳುವುದೇನು

ಹಾಗಲಕಾಯಿಯು ಟೈಪ್ 2 ಡಯಾಬಿಟಿಸ್‌ನಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಭಿನ್ನ ಕಾರ್ಯವಿಧಾನಗಳಿಂದ ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಇದು ಸ್ನಾಯುಗಳಿಂದಾಗುವ ಗ್ಲೂಕೋಸ್ ಬಳಕೆಯನ್ನು ಉತ್ತೇಜಿಸುತ್ತದೆ; ದೇಹದೊಳಗೆ ಗ್ಲೂಕೋಸ್ ಉತ್ಪಾದನೆಗೆ ಕಾರಣವಾಗಿರುವ ಎಂಜೈಮ್‍ಗಳನ್ನು ಇದು ನಿಗ್ರಹಿಸುತ್ತದೆ, ಅಲ್ಲದೇ ಇದು ಹಸಿವನ್ನು ಕಡಿಮೆ ಮಾಡಲು ಸಹ ನೆರವಾಗುತ್ತದೆ.

ಆದಾಗ್ಯೂ, ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ, ಈ ಅಧ್ಯಯನಗಳಲ್ಲಿ ಹೆಚ್ಚಿನವು ಕ್ಲಿನಿಕಲ್ (ಮಾನವರ ಮೇಲೆ ಮಾಡುವಂತಹ ಪರೀಕ್ಷೆಗಳು) ಅಧ್ಯಯನಗಳಿಗಿಂತ ಜೀವರಾಸಾಯನಿಕ ಮತ್ತು ಪ್ರಾಣಿಗಳ ಮೇಲೆ ನಡೆದ ಅಧ್ಯಯನಗಳಾಗಿವೆ. ನಡೆಸಿದ ಕೆಲವು ಮಾನವ ಅಧ್ಯಯನಗಳು, ಅಧ್ಯಯನದ ಕಳಪೆ ವಿನ್ಯಾಸ, ರೋಗಿಗಳ ಕೊರತೆ ಮತ್ತು ನಿಯಂತ್ರಣವಿಲ್ಲದ ಪ್ರಯೋಗಗಳಿಂದ ಹಿನ್ನಡೆಯನ್ನು ಕಂಡಿದೆ. ಆದ್ದರಿಂದ, ಈ ಅಧ್ಯಯನದ ಫಲಿತಾಂಶಗಳು ಹಾಗಲಕಾಯಿಯು ಡಯಾಬಿಟಿಸ್‌ನ ವಿಷಯದಲ್ಲಿ ಪರಿಣಾಮಕಾರಿಯಾಗಿ ಔಷಧದಂತೆ ಕೆಲಸ ಮಾಡುತ್ತದೆ ಎಂಬುದಕ್ಕೆ ನಿರ್ಣಾಯಕ ಸಾಕ್ಷಿಗಳಲ್ಲ.(1), (3), (4)

ಹಾಗಾದರೆ ನೀವು ಹಾಗಲಕಾಯಿಯನ್ನು ಬಳಸಬೇಕಾ, ಬಳಸಬಾರದಾ?

ಆಯುರ್ವೇದಿಕ್ ಡಾಕ್ಟರ್‌, ಡಾ.ಕಲಾರಂಜನಿ ನಮಗೆ ಹೀಗೆ ಹೇಳುತ್ತಾರೆ, “ಡಯಾಬಿಟಿಸ್ ಚಿಕಿತ್ಸೆಯಲ್ಲಿ ಹಾಗಲಕಾಯಿಯು ಕೆಲವು ಪ್ರಯೋಜನಗಳನ್ನು ಹೊಂದಿದೆ. ಆದಾಗ್ಯೂ, ಆಯುರ್ವೇದದ ಪ್ರಕಾರ, ಇದೊಂದೇ ಡಯಾಬಿಟಿಸ್‌ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ, ಇದನ್ನು ಇತರೆ ಮದ್ದುಗಳೊಂದಿಗೆ ಸೇರಿಸಿಕೊಳ್ಳಬೇಕಾಗುತ್ತದೆ, ಇದನ್ನು ಪ್ರತಿಯೊಬ್ಬ ವ್ಯಕ್ತಿಯ ದೇಹದ ಗುಣ ಅಥವಾ ಪ್ರಕೃತಿಯನ್ನು ಪರಿಗಣಿಸಿದ ನಂತರವೇ ನಿರ್ಧರಿಸಲಾಗುತ್ತದೆ.” 

ಅಲ್ಲದೆ, 2011ರ ಅಧ್ಯಯನವು 4 ವಾರಗಳ ಅವಧಿಯಲ್ಲಿ ಹಾಗಲಕಾಯಿಯನ್ನು ದಿನಕ್ಕೆ 2000 ಮಿ.ಗ್ರಾಂನಂತೆ ಸೇವಿಸುತ್ತಾ ಬಂದಾಗ ಟೈಪ್ 2 ಡಯಾಬಿಟಿಕ್‌ಗಳ ದೇಹದಲ್ಲಿ ಗ್ಲೂಕೋಸ್ ಕಡಿಮೆಯಾಗುವ ಪರಿಣಾಮವನ್ನು ತೋರಿತ್ತು ಎಂಬುದನ್ನು ಕಂಡುಕೊಳ್ಳಲಾಗಿದೆ.(4)

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಹಾಗಲಕಾಯಿಯನ್ನು ಡಯಾಬಿಟಿಸ್‌ಗೆ ಪರಿಹಾರವಾಗಿ ಪ್ರಯತ್ನಿಸಬಹುದು, ಆದರೆ ಆಯುರ್ವೇದ ಔಷಧ ತಜ್ಞರ ಸಲಹೆಯೊಂದಿಗೆ ಇದನ್ನು ಬಳಸುವುದು ಹೆಚ್ಚು ಉತ್ತಮ ಎಂದು ಹೇಳಬಹುದು.

ಆದರೆ ಈ ಕಹಿ ತರಕಾರಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಏಕೈಕ ಮನೆಮದ್ದು ಅಲ್ಲ, ಡಯಾಬಿಟಿಸ್‌ಗೆ ನೀವು ಪ್ರಯತ್ನಿಸಬಹುದಾದ ಇನ್ನೂ ಕೆಲವು ಸಂಶೋಧನಾ-ಬೆಂಬಲಿತ ಮನೆಮದ್ದುಗಳು ಇಲ್ಲಿವೆ.

ಅಡಿಬರಹ

ಡಾ. ಎ. ಕಲಾರಂಜನಿ, ಆಯುರ್ವೇದ ವೈದ್ಯರಾಗಿದ್ದು, ಬೆಂಗಳೂರಿನ ಕೆ ಆರ್ ಪುರಂನ ಸಂಜೀವನಿ ಆಯುರ್ ಕ್ಲಿನಿಕ್ನಲ್ಲಿ ಸಮಾಲೋಚಿಸುತ್ತಾರೆ.


ಉಲ್ಲೇಖಗಳು:

  1. WebMD: Bitter Melon. Available at:  https://www.webmd.com/vitamins-supplements/ingredientmono-795-bitter%20melon.aspx?activeingredientid=795&
  2. Barhum. Bitter melon and diabetes: How does it affect blood sugar levels? June 2017 Available at https://www.medicalnewstoday.com/articles/317724.php
  3. Joseph, D. Jini. Antidiabetic effects of Momordica charantia(bitter melon) and its medicinal potency. Asian Pac J Trop Dis. 2013 Apr; 3(2): 93–102. doi:  10.1016/S2222-1808(13)60052-3
  4. Fuangchan, P. Sonthisombat, T. Seubnukam, R. Chanouan, P. Chotchaisuwat, V. Sirigulsatien et al. Hypoglycemic effect of bitter melon compared with metformin in newly diagnosed type 2 diabetes patients.  J Ethnopharmacol. 2011 Mar 24;134(2):422-8. doi: 10.1016/j.jep.2010.12.045. Epub 2011 Jan 4.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.