Reading Time: 3 minutes

ಹೈಪರ್‌ಟೆನ್ಶನನ್ನು (ಇಲ್ಲವೇ ಅಧಿಕ ರಕ್ತದೊತ್ತಡ) ಬೇರೆ ಯಾವುದೇ ಹೃದಯ ಹಾಗು ರಕ್ತನಾಳಗಳ ಕಾಯಿಲೆಯಂತೆ, ಸ್ವಲ್ಪ ಮಟ್ಟಿಗೆ ಔಷಧಗಳಿಂದ ಹಾಗು ಇನ್ನು ಸ್ವಲ್ಪ ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡುವುದರಿಂದ ನಿರ್ವಹಿಸಬೇಕಾಗುತ್ತದೆ. ಜಗತ್ತಿನಾದ್ಯಂತ, ಕೆಲವು ಹೈಪರ್‌ಟೆನ್ಶನ್‌ ಸಂಬಂಧಿತ ಮಾರ್ಗದರ್ಶನಗಳು (ಉದಾ: ಬ್ರಿಟಿಷ್ ಹೈಪರ್‌ಟೆನ್ಶನ್‌ ಸೊಸೈಟಿ, ದಿ ಕೊರಿಯನ್ ಸೊಸೈಟಿ ಆಫ್ ಹೈಪರ್‌ಟೆನ್ಶನ್‌ ಹಾಗು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ [AHA] ನೀಡಿರುವ ಸೂಚನೆಗಳು), ಹೈಪರ್‌ಟೆನ್ಶನ್‌ ಉಳ್ಳವರು (1-3) ತಮ್ಮ ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಬೇಕೆಂದು ಬಲವಾಗಿ ಪ್ರತಿಪಾದಿಸುತ್ತವೆ. ಈ ಮಾರ್ಪಾಡುಗಳಲ್ಲಿ, ತೂಕ ಇಳಿಕೆ, ಆರೋಗ್ಯಕರ ಆಹಾರಕ್ರಮದ ಪಾಲನೆ (ಗುಣಮಟ್ಟ ಹಾಗು ತಿನ್ನುವ ಪ್ರಮಾಣ), ದೈಹಿಕ ವ್ಯಾಯಾಮ (ಏರೋಬಿಕ್ ಮತ್ತು ಭಾರ ಎತ್ತುವುದು), ಉಪ್ಪಿನ ಸೇವನೆ ಕಡಿಮೆ ಮಾಡುವುದು ಹಾಗು ಮದ್ಯಪಾನ ಕಡಿಮೆ ಮಾಡುವುದು ಒಳಗೊಂಡಿವೆ.

ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡುವುದು ಸವಾಲೆನಿಸಬಹುದು. ಬೆಳಗ್ಗೆ ಎದ್ದು ಒಂದು ಮಾತ್ರೆ ನುಂಗುವುದು ಸುಲಭ, ಆದರೆ ಜಾಗಿಂಗ್ ಮಾಡುವುದು ಇಲ್ಲವೇ 20 ನಿಮಿಷಗಳ ಕಾಲ ಧ್ಯಾನ ಮಾಡುವುದು ಕಷ್ಟ. ವಾಸ್ತವದಲ್ಲಿ, ಹೈಪರ್‌ಟೆನ್ಶನ್‌ ಇರುವ ಅರ್ಧ ಮಂದಿ ಮಾತ್ರ ತಮ್ಮ ಆಹಾರಕ್ರಮ ಮತ್ತು ದೈಹಿಕ ಚಟುವಟಿಕೆಯಲ್ಲಿ ಮಾರ್ಪಾಡುಗಳನ್ನು ಮಾಡುತ್ತಾರೆ. (4) ಆದರೆ, ಮಾತ್ರೆಗಳಿಂದ ಆಗುವ ಲಾಭ ಅಷ್ಟಕ್ಕಷ್ಟೆ.

ನಿಮ್ಮ ಬಾಳಿನಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಮಾಡುವುದು ಯಾಕೆ ಮುಖ್ಯವಾಗಿದೆ ಎಂದು ಇಲ್ಲಿ ನೀವು ಕಲಿಯುತ್ತೀರಿ. ಜೊತೆಗೆ, ಈ ಬದಲಾವಣೆಗಳಿಂದ ಬರಿ ನಿಮ್ಮ ಪರೀಕ್ಷೆಗಳ ಫಲಿತಾಂಶವಷ್ಟೇ ಅಲ್ಲ, ನಿಮ್ಮ ಬಾಳಿನ ಗುಣಮಟ್ಟವೂ ಹೇಗೆ ಸುಧಾರಿಸುವುದೆಂದು ತಿಳಿಯುವಿರಿ.

 1. ಮಾತ್ರೆಗಳು vs. ಜೀವನಶೈಲಿ

ನಿಮ್ಮ ರಕ್ತದೊತ್ತಡಕ್ಕೆ ನೀಡುವ ಚಿಕಿತ್ಸೆಯಲ್ಲಿ, ಆ್ಯಂಟಿಹೈಪರ್‌ಟೆನ್ಸಿವ್ ಔಷಧಗಳು ಮಹತ್ತರ ಪಾತ್ರವಹಿಸುತ್ತವೆ. ಆದರೆ, ಜೀವನಶೈಲಿಯಲ್ಲಿ ಮಾರ್ಪಾಡು ಮಾಡದಿದ್ದರೆ, ನಿಮ್ಮ ರಕ್ತದೊತ್ತಡವನ್ನು ಹಿಡಿತದಲ್ಲಿಡಲು, ನಿಮಗೆ ಹೆಚ್ಚು ಅಳತೆಯ ಔಷಧಗಳು ಹಾಗು ಬೇರೆ ಮಾತ್ರೆಗಳು ಬೇಕಾಗಬಹುದು. ಅದಲ್ಲದೇ, ಹೈಪರ್‌ಟೆನ್ಶನ್‌ನೊಂದಿಗೆ ತಳಕು ಹಾಕಿಕೊಂಡಿರುವ ಇತರ ರೋಗಗಳನ್ನು ತಡೆಗಟ್ಟಲು, ಬರಿ ಔಷಧಗಳಿಂದ ಮಾತ್ರ ಸಾಧ್ಯವಿಲ್ಲ. ಒಳ್ಳೆಯ ಆಹಾರಕ್ರಮ ಮತ್ತು ವ್ಯಾಯಾಮದಿಂದ ನಿಮ್ಮ ಕಾರ್ಡಿಯೊಮೆಟಬಾಲಿಕ್ ಪ್ರೊಫೈಲ್ ಸುಧಾರಿಸುವುದು. ಇದರಿಂದ, ನೀವು ಬಹಳ ಕಾಲದವರೆಗೆ, ದಿನಕ್ಕೆ ಬರಿ ಒಂದು ಚಿಕ್ಕ ಮಾತ್ರೆ ತೆಗೆದುಕೊಳ್ಳುವಂತಾಗಬಹುದು.

 1. ಅತ್ಯುತ್ತಮವಾಗಿರುವುದೇ ಬೇಕೆಂದು ಪಣತೊಡಿ

ಇತ್ತೀಚೆಗೆ, AHA ಮಾರ್ಗದರ್ಶಿಯು (2017), ತನ್ನ ಹೈಪರ್‌ಟೆನ್ಶನ್‌‍ನ ವ್ಯಾಖ್ಯಾನವನ್ನು 130/80 mm Hg ಗಿಂತ ಹೆಚ್ಚಿರುವುದು ಎಂದು ಬದಲಿಸಿದೆ ಹಾಗು ರಕ್ತದೊತ್ತಡ, 120 ಮತ್ತು 130 mmHgಯ ನಡುವೆ ಇದ್ದರೆ, ಅದನ್ನು ಪ್ರೀಹೈಪರ್‌ಟೆನ್ಶನ್‌(2) ಎಂದು ವರ್ಗೀಕರಿಸಿದೆ. ಈ ಬದಲಾವಣೆಗಳು, ರಕ್ತದೊತ್ತಡವನ್ನು ಅತ್ಯುತ್ತಮ ಪರಿಮಿತಿಯ ಒಳಗೆ ಇರಿಸುವುದು ಅಗತ್ಯವಾಗಿದೆ ಹಾಗು ಸುಮಾರಾದ ಮಟ್ಟಕ್ಕೆ ಇಳಿಸಿದರೆ ಸಾಲದು ಎಂದು ಸೂಚಿಸುತ್ತವೆ. ಆದ್ದರಿಂದ, ಈ ಕ್ಷಣಕ್ಕೆ, ಮಾರ್ಗದರ್ಶಿಯಲ್ಲಿ ಸೂಚಿಸಿದಂತೆ, ರಕ್ತದೊತ್ತಡವನ್ನು ಇಳಿಸಲು ಒತ್ತಡ ಹೆಚ್ಚುತ್ತಿದೆ. ಹಾಗಾಗಿ, ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡದಿದ್ದರೆ, ವೈದ್ಯರು ಇನ್ನೂ ಹೆಚ್ಚಿನ ಮಾತ್ರೆಗಳನ್ನು ನುಂಗಲು ಕೊಡುವರು.

 1. ಧೂಮಪಾನ

ಎಲ್ಲ ಗೊತ್ತುವಳಿಗಳು, ನಿರ್ದಿಷ್ಟವಾಗಿ ಧೂಮಪಾನ ಕಡಿಮೆ ಮಾಡಲೇಬೇಕೆಂದು ಸೂಚಿಸುತ್ತವೆ, ಏಕೆಂದರೆ ಧೂಮಪಾನದಿಂದ ಹೃದಯ ಮತ್ತು ರಕ್ತನಾಳಗಳ ಕಾಯಿಲೆ ಬರುವ ಸಾಧ್ಯತೆ ದಟ್ಟವಾಗಿದೆ; ಒಬ್ಬ ವ್ಯಕ್ತಿಯ ರಕ್ತದೊತ್ತಡ ಹಿಡಿತದಲ್ಲಿದ್ದರೂ (1), ಧೂಮಪಾನದ ದೆಸೆಯಿಂದ ಹೃದಯಾಘಾತ ಇಲ್ಲವೆ ಪಾರ್ಶ್ವವಾಯು ಆಗಬಹುದು!

 1. ಆಹಾರಕ್ರಮ

ಆರೋಗ್ಯಕರ ಆಹಾರಕ್ರಮವು, ತೂಕ ಮತ್ತು ರಕ್ತದೊತ್ತಡವನ್ನು ಇಳಿಸಲು ನೆರವಾಗುತ್ತದೆ. ದ ಡಯಟರಿ ಅಪ್ರೋಚಸ್ ಟು ಸ್ಟಾಪ್ ಹೈಪರ್‌ಟೆನ್ಶನ್‌ (DASH) ಆಹಾರಕ್ರಮ ಇಲ್ಲವೆ ಮೆಡಿಟರೇನಿಯನ್ ಆಹಾರಕ್ರಮವು (ಇಲ್ಲವೆ ಅದರ ರೂಪಾಂತರ) ನಿಮ್ಮ ರಕ್ತದೊತ್ತಡವನ್ನು ಸರಾಸರಿ 11/6 mmHg ಯಷ್ಟು ಸುಧಾರಿಸಬಹುದು. (1) ಆದರೆ, ಅಂತಹ ಆಹಾರಕ್ರಮದಿಂದ ಮತ್ತಷ್ಟು ಲಾಭವಾಗುತ್ತದೆ: ಅದು, ಟೈಪ್ 2 ಸಕ್ಕರೆ ಕಾಯಿಲೆ, ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗು ನಿಮ್ಮ ಹೃದಯ ಮತ್ತು ಮೆಟಬಾಲಿಸಮ್‍ನ ಒಟ್ಟಾರೆ ಸ್ಥಿತಿಯನ್ನು ಸುಧಾರಿಸುತ್ತದೆ.

 1. ಉಪ್ಪು

ಬರಿ ನೀವು ಉಪ್ಪು ತಿನ್ನುವುದನ್ನು ಅರ್ಧದಷ್ಟು ಕಡಿಮೆ ಮಾಡಿದರೂ (ದಿನಕ್ಕೆ 5 ಗ‍್ರಾಂಗಿಂತ ಕಡಿಮೆ), ನಿಮ್ಮ ರಕ್ತದೊತ್ತಡ 4-6 mmHg ಯಷ್ಟು ಇಳಿಯುತ್ತದೆ. (1) ಈ ಅಂಕೆಯಲ್ಲಿ ವ್ಯತ್ಯಾಸವಿದೆಯಾದರೂ, ರಕ್ತದೊತ್ತಡ ಇಳಿಸಲು, ಉಪ್ಪಿಗೆ ಕಡಿವಾಣ ಹಾಕುವುದು ಸರಳ, ಪರಿಣಾಮಕಾರಿ ಉಪಾಯವಾಗಿದೆ.

 1. ವ್ಯಾಯಾಮ

ಹೈಪರ್‌ಟೆನ್ಶನ್‌‍ಗಾಗಿ, ವಾರದಲ್ಲಿ ಕಡಿಮೆ ಅಂದರೂ, 150 ನಿಮಿಷಗಳ ಹಿತಮಿತದಿಂದ ಸುಮಾರಾಗಿ ಬಿರುಸಾದ ಏರೋಬಿಕ್ ವ್ಯಾಯಾಮ, ಹಾಗು ಒಂದು ಇಲ್ಲವೇ ಎರಡು ಬಾರಿ ಭಾರವೆತ್ತುವ ವ್ಯಾಯಾಮ ಮಾಡಲು ಸೂಚಿಸಲಾಗುತ್ತದೆ. ಆಹಾರಕ್ರಮದಲ್ಲಿ ಬದಲಾವಣೆಯ ಜೊತೆಗೆ, ದೈಹಿಕ ಚಟುವಟಿಕೆಯು ರಕ್ತದೊತ್ತಡವನ್ನು ಹೆಚ್ಚುವರಿ 15/7 mmHg ಯಷ್ಟು ಇಳಿಸಬಹುದು. (3)

 1. ಈರೊಬ್ಬುಳಿ (ಒಗ್ಗಟ್ಟಿನ ಬಲ)

ಈ ಬದಲಾವಣೆಗಳು ಒಟ್ಟಾದರೆ, ಅದರಿಂದ ಲಾಭವಿದೆಯೇ? ಹೌದು! ಆಹಾರಕ್ರಮ ಮತ್ತು ವ್ಯಾಯಾಮವನ್ನು ಒಂದುಗೂಡಿಸುವುದರಿಂದ, ಹೈಪರ್‌ಟೆನ್ಶನ್‌‍ನೊಂದಿಗೆ ತಳಕು ಹಾಕಿಕೊಂಡಿರುವ ಇತರ ಕಾಯಿಲೆಗಳು ಬರುವ ಅಪಾಯವನ್ನು 75% ನಷ್ಟು ಕಡಿಮೆ ಮಾಡಬಹುದು. (5) ಜೊತೆಗೆ, ಅದು ಬಹುತೇಕ ಎಲ್ಲ ಮೆಟಬಾಲಿಕ್ ಅಂಶಗಳನ್ನು (ಉದಾ: ಕೊಲೆಸ್ಟರಾಲ್, ಸೊಂಟದ ಸುತ್ತಳತೆ, ಇತ್ಯಾದಿ) ಸುಧಾರಿಸುತ್ತದೆ.

 1. ಲೈಂಗಿಕ ಆರೋಗ್ಯ

ಬಹಳಷ್ಟು ಬಗೆಗಳಲ್ಲಿ ಅಧಿಕ ರಕ್ತದೊತ್ತಡವು, ಲೈಂಗಿಕ ನಿಷ್ಕ್ರಿಯತೆಯೊಂದಿಗೆ ಕೂಡ ತಳಕು ಹಾಕಿಕೊಂಡಿದೆ. ಅಲ್ಲದೆ, ಬಹುತೇಕ ಎಲ್ಲ ಜೀವನಶೈಲಿಯ ಅಂಶಗಳು ಸ್ವತಂತ್ರವಾಗಿ ಲೈಂಗಿಕ ನಿಷ್ಕ್ರಿಯತೆಯನ್ನು ಉಂಟುಮಾಡಬಹುದು. ಜೊತೆಗೆ, ಆ್ಯಂಟಿಹೈಪರ್‌ಟೆನ್ಸಿವ್ ಔಷಧಗಳು ಸ್ವತಃ ಉದ್ರೇಕದ ಸಮಸ್ಯೆಗಳನ್ನು ಉಂಟುಮಾಡುತ್ತವೆ. (6) ಹೈಪರ್‌ಟೆನ್ಶನ್‌ ಚಿಕಿತ್ಸೆಯಲ್ಲಿ, ಔಷಧವಿಲ್ಲದ ವಿಧಾನಗಳು ಪ್ರಮುಖವಾಗಲು ಇದು ಮತ್ತೊಂದು ಕಾರಣವಾಗಿದೆ.

 1. ದೈಹಿಕ ರೂಪ

ಕೊನೆಯದಾಗಿ, ಆರೋಗ್ಯಕರ ಜೀವನಶೈಲಿಯು ನಿಮ್ಮನ್ನು ಹೊರಗಿನಿಂದಲೂ ಹಾಗು ಒಳಗಿನಿಂದಲೂ ಆರೋಗ್ಯವಾಗಿಡುತ್ತದೆ, ನಿಮ್ಮ ಏಕಾಗ್ರತೆ ಮತ್ತು ಮಾಡುಗತನ ಸುಧಾರಿಸುತ್ತದೆ, ದಿನವಿಡೀ ನಿಮಗೆ ಹೆಚ್ಚು ಸುಸ್ತಾಗದಂತೆ ನೋಡಿಕೊಳ್ಳುತ್ತದೆ ಮತ್ತು ನಿಮ್ಮ ಚರ್ಮದ ಕಾಂತಿಯನ್ನು ಇಮ್ಮಡಿಗೊಳಿಸುತ್ತದೆ.

ಜೀವನಶೈಲಿಯ ಮಾರ್ಪಾಡುಗಳ ದೀರ್ಘಾವಧಿ ಪರಿಣಾಮಗಳನ್ನು ಇಂದೇ ಮನಗಾಣಲು ಆಗದಿರಬಹುದು. ಈ ಮಾರ್ಪಾಡುಗಳನ್ನು ಮಾಡುವುದು ಕಷ್ಟವೆನಿಸಬಹುದು, ಆದರೆ ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಆಚೆಗೂ, ಇದು ರೋಗಿಗಳಿಗೆ ಹಲವಾರು ಬಗೆಯಲ್ಲಿ ಲಾಭದಾಯಕವಾಗಿದೆಯೆಂದು ತೋರಿಸಲು ಸಾಕಷ್ಟು ಪುರಾವೆಗಳಿವೆ. ಜಿಮ್ ಸೇರಿಕೊಳ್ಳಿ ಇಲ್ಲವೆ ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಮತ್ತು ಸಮಗ್ರವಾದ ಆರೋಗ್ಯಕರ ಜೀವನಶೈಲಿ ನಡೆಸಲು ನೆರವಾಗುವ ವೆಲ್ತಿಯಂತಹ ಆ್ಯಪ್ ಬಳಸಿ.

ಆಕರ:

 1. Shin J, Park JB, Kim KI, Kim JH, Yang DH, Pyun WB, et al. 2013 Korean Society of Hypertension guidelines for the management of hypertension. Part II—treatments of hypertension. Clinical hypertension. 2015;21(1):2.
 2. Ioannidis JP. Diagnosis and treatment of hypertension in the 2017 ACC/AHA guidelines and in the real world. Jama. 2018;319(2):115-6.
 3. Nicoll R, Henein MY. Hypertension and lifestyle modification: how useful are the guidelines? 2010; 879-880.
 4. Abu HO, Aboumatar H, Carson K, Goldberg R, Cooper L. Hypertension knowledge, heart healthy lifestyle practices and medication adherence among adults with hypertension. European Journal for Person Centered Healthcare. 2018;6(1):108-14.
 5. Malakou E, Linardakis M, Armstrong M, Zannidi D, Foster C, Johnson L, Papadaki A. The combined effect of promoting the Mediterranean diet and physical activity on metabolic risk factors in adults: a systematic review and meta-analysis of randomised controlled trials. Nutrients. 2018;10(11):1577.
 6. DeLay KJ, Haney N, Hellstrom WJ. Modifying risk factors in the management of erectile dysfunction: a review. The world journal of men’s health. 2016;34(2):89-100.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.