ಹಬ್ಬಗಳಲ್ಲಿ ನೀವು ಮಾಡಬಯಸುವ ಅಡುಗೆಗಳಲ್ಲಿ ಸಿಹಿ ತಿನಿಸುಗಳೇ ಹೆಚ್ಚು. ಇಂತಹ ಸಂದರ್ಭಗಳಲ್ಲಿ ನಾವು ನಮ್ಮ ಆಹಾರ ಕ್ರಮವನ್ನು ನಮಗೇ ತಿಳಿಯದಂತೆ ಮುರಿಯುವ ಸಾಧ್ಯತೆಗಳು ಹೆಚ್ಚಿರುತ್ತದೆ. ಆ ಆಕರ್ಷಕ ಸಿಹಿ ತಿನಿಸುಗಳು ನಮ್ಮ ಗಟ್ಟಿ ಮನಸ್ಸನ್ನು ಸಹ ಮುರಿಯಬಲ್ಲವು. ಇಷ್ಟಾಗಿಯೂ ಇಂತಹ ಸ್ಥಿತಿಯಲ್ಲಿ ಮನಸ್ಸು ಜಾರಿದ್ದೇ ಆದಲ್ಲಿ, ಹಬ್ಬದ ಊಟವು ಕೇವಲ ನಿಮ್ಮ ತೂಕವನ್ನಷ್ಟೇ ಹೆಚ್ಚಿಸದೆ, ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಹೆಚ್ಚಿಸುತ್ತದೆ.
ಈ ಹೆಚ್ಚುವರಿ ತೂಕವನ್ನು ಕರಗಿಸಲು ವ್ಯಾಯಾಮವು ಸಹಾಯ ಮಾಡಬಹುದಾದರೂ, ನೀವು ಸೇವಿಸಿದ ಎಲ್ಲಾ ಕೊಲೆಸ್ಟ್ರಾಲ್ ತುಂಬಿದ ಆಹಾರಗಳಿಂದ ನಿಮ್ಮ ಆರ್ಟರಿಗಳಲ್ಲಿ ತುಂಬಿಕೊಂಡ ಪ್ಲಾಕ್ ಅನ್ನು ತೆಗೆಯಲು ವ್ಯಾಯಾಮದಿಂದ ಆಗುವುದಿಲ್ಲ.1
ನಿಮ್ಮ ಆರ್ಟರಿಗಳಲ್ಲಿ ಕೊಲೆಸ್ಟ್ರಾಲ್ ತುಂಬಿಕೊಳ್ಳುವುದನ್ನು ತಪ್ಪಿಸಲು, ಈ ಸರಳವಾದ ಕಡಿಮೆ-ಕೊಲೆಸ್ಟ್ರಾಲ್ ಸಿಹಿ ತಿನಿಸುಗಳ ರೆಸಿಪಿಗಳ ಮೂಲಕ ನಿಮ್ಮ ಸಿಹಿ ತಿನ್ನುವ ಆಸೆಯನ್ನು ನೀವು ಈಡೇರಿಸಿಕೊಳ್ಳಬಹುದು, ಮತ್ತು ನಿಮ್ಮ ಹೃದಯದ ಆರೋಗ್ಯದ ಕುರಿತು ಚಿಂತಿಸುವುದನ್ನು ನಿಲ್ಲಿಸಬಹುದು.
ಅನ್ನದ ಪಾಯಸ
ಎಷ್ಟು ಜನರಿಗೆ – 5
ಇದು ಪ್ರತಿ ಅರ್ಧ ಬಟ್ಟಲಿನಲ್ಲಿ ಕೇವಲ 3 ಮಿಗ್ರಾಂ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ.
ಬೇಕಾಗುವ ಪದಾರ್ಥಗಳು:
- ಅಕ್ಕಿ – 1 ಬಟ್ಟಲು
- ಕೆನೆ ತೆಗೆದ ಹಾಲು – 3 ಬಟ್ಟಲು
- ನೀರು – 6 ಬಟ್ಟಲು
- ಚಕ್ಕೆ ತುಂಡುಗಳು – 2
- ಸಕ್ಕರೆ – 2/3 ಟೀಸ್ಪೂನ್
- ಉಪ್ಪು – ½ ಟೀಚಮಚ
ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ, ನೀರು ಮತ್ತು ಚಕ್ಕೆಯನ್ನು ಹಾಕಿ ಕುದಿಸಿ.
- ಅಕ್ಕಿಯನ್ನು ಸೇರಿಸಿ ಮತ್ತು ನೀರು ಆವಿಯಾಗಿ ಅಕ್ಕಿ ಬೆಂದು ಅನ್ನವಾಗುವವರೆಗೆ ಕಡಿಮೆ ಉರಿಯಲ್ಲಿ 30 ನಿಮಿಷ ಬೇಯಿಸಿ.
- ಸಕ್ಕರೆ, ಉಪ್ಪು ಮತ್ತು ಕೆನೆರಹಿತ ಹಾಲು ಸೇರಿಸಿ, ಮತ್ತು ಮಿಶ್ರಣವು ಗಟ್ಟಿಯಾಗುವವರೆಗೆ ಇನ್ನೂ 15 ನಿಮಿಷ ಬೇಯಿಸಿ.
- ಒಲೆ ಆರಿಸಿ. ಅದು ಗಟ್ಟಿಯಾಗುವವರೆಗೆ ರೆಫ್ರಿಜರೇಟರ್‌ನಲ್ಲಿಟ್ಟು ತಣ್ಣಗಾಗಿಸಿ.2
ಚಳಿಗಾಲದ ಕುರುಕಲು
ಎಷ್ಟು ಜನರಿಗೆ – 6
ಪ್ರತಿ 1¾ ರಿಂದ 2-ಇಂಚಿನ ತುಂಡುಗಳು ಶೂನ್ಯ ಕೊಲೆಸ್ಟ್ರಾಲ್ ಮತ್ತು ಕಡಿಮೆ ಸೋಡಿಯಂ ಅನ್ನು ಹೊಂದಿರುತ್ತದೆ.
ಬೇಕಾಗುವ ಪದಾರ್ಥಗಳು
ಹೂರಣಕ್ಕಾಗಿ:
- ಮೈದಾ ಹಿಟ್ಟು – 3 ದೊಡ್ಡ ಚಮಚ
- ಸಿಪ್ಪೆ ತೆಗೆಯದೆ ಹೆಚ್ಚಿದ ಸೇಬು – 5 ಬಟ್ಟಲು
- ಸಕ್ಕರೆ – 1/2 ಬಟ್ಟಲು
- ತುರಿದ ನಿಂಬೆ ಹಣ್ಣಿನ ಸಿಪ್ಪೆ – 1 ಸಣ್ಣ ಚಮಚ
- ಕ್ರ್ಯಾನ್‍ಬೆರಿ – 1 ಬಟ್ಟಲು
- ನಿಂಬೆ ರಸ- ¾ ಚಮಚ
ಮೇಲೆ ಉದುರಿಸಲು:
- ಕಂದು ಸಕ್ಕರೆ – 1/3 ಬಟ್ಟಲು
- ರೋಲ್ಡ್ ಓಟ್ಸ್ – 2/3 ಬಟ್ಟಲು
- ಚಕ್ಕೆ ಪುಡಿ – 2 ಸಣ್ಣ ಚಮಚ
- ಇಡೀ ಗೋಧಿ ಹಿಟ್ಟು – 1/4 ಬಟ್ಟಲು
- ಮೆತ್ತಗಿನ ಮಾರ್ಗರೀನ್ – 1 ದೊಡ್ಡ ಚಮಚ
ಮಾಡುವ ವಿಧಾನ:
ಹೂರಣಕ್ಕೆ:
- ಮಧ್ಯಮ ಗಾತ್ರದ ಬಟ್ಟಲಿನಲ್ಲಿ ಸಕ್ಕರೆ, ನಿಂಬೆ ಸಿಪ್ಪೆ ತುರಿ ಮತ್ತು ಮೈದಾ ಹಿಟ್ಟನ್ನು ಹಾಕಿ ಕಲಸಿ.
- ಇದಕ್ಕೆ ಸೇಬು, ಕ್ರ್ಯಾನ್‌ಬೆರಿ ಮತ್ತು ನಿಂಬೆ ರಸ ಸೇರಿಸಿ. ಚೆನ್ನಾಗಿ ಬೆರೆಸಿ.
- ಈ ಮಿಶ್ರಣವನ್ನು 6 ಕಪ್ ಬೇಕಿಂಗ್ ಬಟ್ಟಲಿಗೆ ತುಂಬಿರಿ.
ಮೇಲೆ ಉದುರಿಸಲು:
- ಒಂದು ಪಾತ್ರೆಯಲ್ಲಿ ಕಂದು ಸಕ್ಕರೆ, ಚಕ್ಕೆ, ಇಡೀ ಗೋಧಿ ಹಿಟ್ಟು ಮತ್ತು ಓಟ್ಸ್ ಸೇರಿಸಿ ಚೆನ್ನಾಗಿ ಬೆರೆಸಿ.
- ಇದಕ್ಕೆ ಕರಗಿಸಿದ ಮಾರ್ಗರೀನ್ ಅನ್ನು ಸೇರಿಸಿ ಚೆನ್ನಾಗಿ ಕಲಸಿ.
- ತುಂಬಿದ ಬಟ್ಟಲುಗಳ ಮೇಲೆ ಉದುರಿಸಿ
- ಓವನ್‌ನಲ್ಲಿ 375ºF ನಲ್ಲಿ 40 ರಿಂದ 50 ನಿಮಿಷಗಳ ಕಾಲ ಅಥವಾ ಮೇಲ್ಭಾಗವು ಕಂದು ಬಣ್ಣ ಬಂದು, ಹೂರಣ ಉಬ್ಬುವವರೆಗೂ ಬೇಯಿಸಿ. ಬಿಸಿ ಇರುವಾಗಲೇ ಬಡಿಸಿ ಅಥವಾ ಬಿಸಿ ಆರಿದ ಮೇಲೆ ಬಡಿಸಿ.3
ರೈನ್ ಬೋ ಹಣ್ಣಿನ ಸಲಾಡ್
ಎಷ್ಟು ಜನರಿಗೆ – 12
ಪ್ರತಿ 4 ಔನ್ಸ್ ಕಪ್, ಶೂನ್ಯ ಕೊಲೆಸ್ಟ್ರಾಲ್ , ಕಡಿಮೆ ಕೊಬ್ಬು ಹಾಗೂ ಸೋಡಿಯಂ ಹೊಂದಿರುತ್ತದೆ.
ಬೇಕಾಗಿರುವ ಪದಾರ್ಥಗಳು
ಹಣ್ಣು ಸಲಾಡ್‌ಗಾಗಿ
- ಎರಡು ಹೋಳಾಗಿ ಕತ್ತರಿಸಿದ ಸ್ಟ್ರಾಬೆರಿ – 2 ಬಟ್ಟಲು
- ತಾಜಾ ಬ್ಲೂಬೆರಿ – 2 ಬಟ್ಟಲು
- ಹೆಚ್ಚಿದ ಬಾಳೆಹಣ್ಣು – 2
- ಸಿಪ್ಪೆ ಸುಲಿದು ಹೆಚ್ಚಿದ ಕಿವಿ ಹಣ್ಣು – 1
- ಸಿಪ್ಪೆ ಸುಲಿಯದೆ ಹೆಚ್ಚಿದ ನೆಕ್ಟರೀನ್ ಹಣ್ಣು- 2
- ಬೀಜ ತೆಗೆದ ದ್ರಾಕ್ಷಿ – 2 ಬಟ್ಟಲು
ಜೇನು ಕಿತ್ತಳೆ ಸಾಸ್‍ಗಾಗಿ:
- ಸಕ್ಕರೆ ಬೆರೆಸದ ಕಿತ್ತಳೆ ರಸ -1/3 ಕಪ್
- ಜೇನು – 1½ ದೊಡ್ಡ ಚಮಚ
- ಶುಂಠಿ ಪುಡಿ – ¼ ಟೀಚಮಚ
- ನಿಂಬೆ ರಸ – 2 ದೊಡ್ಡ ಚಮಚ
- ಜಾಯಿಕಾಯಿ – ಒಂದು ಚಿಟಿಕೆ
ಮಾಡುವ ವಿಧಾನ:
- ಹಣ್ಣುಗಳನ್ನೆಲ್ಲ ಒಟ್ಟಿಗೆ ಬೆರೆಸಿ.
- ಸಾಸ್‍ಗೆ ಬೇಕಾದ ಪದಾರ್ಥಗಳನ್ನು ಒಟ್ಟಿಗೆ ಕಲಸಿ.
- ಹಣ್ಣಿನ ಸಲಾಡ್ ಮೇಲೆ ಸಾಸ್ ಹರಡಿ ಮತ್ತು ಬಡಿಸಿ.4
ಕರ್ಬೂಜ ಕ್ರಷ್
ಎಷ್ಟು ಜನರಿಗೆ – 4
ಪ್ರತಿ ½ ಬಟ್ಟಲಿನಲ್ಲಿ ಶೂನ್ಯ ಕೊಲೆಸ್ಟ್ರಾಲ್ ಇರುತ್ತದೆ.
ಬೇಕಾಗುವ ಪದಾರ್ಥಗಳು:
- ಕರ್ಬೂಜ ಹಣ್ಣು – ½
- ಕೆನೆ ತೆಗೆದ ಹಾಲು – 1 ಬಟ್ಟಲು
- ಸಕ್ಕರೆ – 1 ರಿಂದ 2 ಟೀಚಮಚ (ಅಥವಾ ಇಷ್ಟೇ ಅಳತೆಯ ಯಾವುದೇ ಇತರ ಸಿಹಿಕಾರಕ)
- ಐಸ್ – 1.5 ಬಟ್ಟಲು
ಮಾಡುವ ವಿಧಾನ:
- ಕರ್ಬೂಜ ಹಣ್ಣನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
- ಹಾಲು, ಐಸ್ ಮತ್ತು ಕರ್ಬೂಜ ಹಣ್ಣನ್ನು ಮೆತ್ತಗಾಗುವವರೆಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
- ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ ಮತ್ತು ಬಡಿಸಿ.5
ಆ್ಯಪಲ್ ಕಾಫಿ಼ ಕೇಕ್
ಎಷ್ಟು ಜನರಿಗೆ – 20
3.5 x 2.5 ಇಂಚಿನ ಒಂದು ತುಂಡಲ್ಲಿ 11 ಮಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ.
ಬೇಕಾಗಿರುವ ಪದಾರ್ಥಗಳು:
- ಕಪ್ಪು ಒಣದ್ರಾಕ್ಷಿ – 1 ಬಟ್ಟಲು
- ಸಿಪ್ಪೆ ಸುಲಿದು, ಬೀಜ ತೆಗೆದು, ಹೆಚ್ಚಿಕೊಂಡ ಸೇಬು – 5 ಬಟ್ಟಲು
- ಹೆಚ್ಚಿದ ಪೀಕನ್ ನಟ್ – ½ ಬಟ್ಟಲು
- ಜರಡಿ ಹಿಡಿದ ಮೈದಾ ಹಿಟ್ಟು – 2.5 ಬಟ್ಟಲು
- ತರಕಾರಿ ಎಣ್ಣೆ – ¼ ಬಟ್ಟಲು
- ಚಕ್ಕೆ ಪುಡಿ – 2 ಟೀಚಮಚ
- ಚೆನ್ನಾಗಿ ಕಲಕಿದ ಮೊಟ್ಟೆ- 1
- ಸಕ್ಕರೆ – 1 ಬಟ್ಟಲು
- ವೆನಿಲ್ಲಾ ಎಸೆನ್ಸ್ – 2 ಟೀಚಮಚ
- ಅಡುಗೆ ಸೋಡಾ – 1.5 ಟೀಚಮಚ
ಮಾಡುವ ವಿಧಾನ
- ದೊಡ್ಡ ಮಿಕ್ಸಿಂಗ್ ಬೌಲ್‍ನಲ್ಲಿ ಸೇಬು, ಪೀಕನ್, ಒಣದ್ರಾಕ್ಷಿ ಮತ್ತು ಸಕ್ಕರೆಯನ್ನು ಬೆರೆಸಿ ಅರ್ಧ ಘಂಟೆಯವರೆಗೆ ಪಕ್ಕದಲ್ಲಿಡಿ.
- 13 x 9 x 2 ಇಂಚಿನ ಬೇಕಿಂಗ್ ಪ್ಯಾನ್‌ಗೆ ಎಣ್ಣೆ ಸವರಿ. ಓವನ್ ಅನ್ನು 350 ° F ವರೆಗೆ ಪ್ರೀಹೀಟ್ ಮಾಡಿ.
- ಈಗ ಮಿಕ್ಸಿಂಗ್ ಬೌಲ್‍ಗೆ, ವೆನಿಲ್ಲಾ, ಮೊಟ್ಟೆ ಮತ್ತು ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕಲಸಿ.
- ಚಕ್ಕೆ ಪುಡಿ, ಅಡುಗೆ ಸೋಡಾ ಮತ್ತು ಮೈದಾ ಹಿಟ್ಟನ್ನು ಒಟ್ಟಿಗೆ ಜರಡಿ ಹಿಡಿದು, ನಿಧಾನವಾಗಿ ಸೇಬಿನ ಮಿಶ್ರಣಕ್ಕೆ ಬೆರೆಸಿ ತಿರುಗಿಸಿ. ಒಣ ಪದಾರ್ಥಗಳನ್ನು ತೇವಗೊಳಿಸಲು ಒಂದು ಬಾರಿಗೆ 1/3ರಷ್ಟು ಮಾತ್ರ ಹಾಕಿ ತಿರುಗಿಸಿ.
- ಕಲಸಿದ ಹಿಟ್ಟನ್ನು ಅನ್ನು ಪ್ಯಾನ್‌ಗೆ ಹಾಕಿ ಮತ್ತು 35 ರಿಂದ 40 ನಿಮಿಷಗಳ ಕಾಲ ಬೇಕ್ ಮಾಡಿ. ಕೇಕ್ ಚೆನ್ನಾಗಿ ಬೆಂದಿದೆಯೇ ಎಂದು ನೋಡಲು, ಕೇಕ್ ಮಧ್ಯದಲ್ಲಿ ಟೂತ್‌ಪಿಕ್ ಚುಚ್ಚಿ. ಅದನ್ನು ಹೊರಗೆಳೆದಾಗ ಕೇಕ್ ಅದಕ್ಕೆ ಅಂಟಿಕೊಂಡಿರಬಾರದು.
- ಇದು ಸ್ವಲ್ಪ ತಣ್ಣಗಾಗಲು ಬಿಡಿ, ನಂತರ ಸೇವಿಸಿ.6
ನಿಮ್ಮ ಕೊಲೆಸ್ಟ್ರಾಲ್ ಬಗ್ಗೆ ಹೆಚ್ಚು ಚಿಂತಿಸದೆ ಈ ಅದ್ಭುತ ಸಿಹಿತಿಂಡಿಗಳನ್ನು ತಯಾರಿಸಿ, ಸೇವಿಸಿ ಹಬ್ಬದ ಸಂಭ್ರಮವನ್ನು ಆನಂದದಿಂದ ಅನುಭವಿಸಿ.
ಉಲ್ಲೇಖಗಳು::
- Rush University Medical Center. 6 Facts About Cholesterol [internet]. [cited 2019 Nov 19]. Available from: https://www.rush.edu/health-wellness/discover-health/6-facts-about-cholesterol.
- Alabama Department of Public Health. Healthy home cooking recipes for a healthy lifestyle [Internet]. [cited 2019 Nov 19]. Available from: https://www.alabamapublichealth.gov/npa/assets/cookbook.pdf.
- Office of Disease Prevention and Health Promotion. Winter crisp [Internet]. [cited 2019 Nov 20]. Available from: https://health.gov/dietaryguidelines/dga2005/healthieryou/html/desserts.html#10.
- Office of Disease Prevention and Health Promotion. Rainbow fruit salad [Internet]. [cited 2019 Nov 20]. Available from: https://health.gov/dietaryguidelines/dga2005/healthieryou/html/desserts.html#2.
- National Heart, Lung, and Blood Institute. Cantaloupe crush [Internet]. [cited 2019 Nov 20]. Available from: https://healthyeating.nhlbi.nih.gov/recipedetail.aspx?linkId=18&cId=12&rId=264.National Heart, Lung, and Blood Institute. Apple Coffee Cake. [Internet]. [cited 2019 Nov 20]. Available from: https://healthyeating.nhlbi.nih.gov/recipedetail.aspx?linkId=13&cId=12&rId=201