Reading Time: 2 minutes

ಹೃದಯ ವೈಫಲ್ಯ ಎಂಬುದು ದಿಗಿಲು ಹುಟ್ಟಿಸುವ ಪದಕಂತೆಯಾಗಿದ್ದು, ಅದರ ಸುತ್ತ ಹಲವು ತಪ್ಪು ತಿಳುವಳಿಕೆಗಳಿವೆ. ಮೊದಲಿಗೆ, ಅದು ಮುಂದಾಗಿ ತಿಳಿಯಲು ಸಾಧ್ಯವಿಲ್ಲದ ಒಮ್ಮೆಗೆ ಬಂದೆರಗುವ ಅನಾಹುತವಲ್ಲ. ಅದು, ಅನಾರೋಗ್ಯಕರ ಜೀವನಶೈಲಿ ಮಾದರಿಗಳ ಪರಿಣಾಮವಾಗಿದೆ. ಇವು ಮಾನಸಿಕ ಬದಲಾವಣೆಗಳ ಜೊತೆಗೂಡಿ, ಅಧಿಕ ರಕ್ತದೊತ್ತಡ, ಕೊಲೆಸ್ಟರಾಲ್, ಇತ್ಯಾದಿ ಹಾಗೂ/ಇಲ್ಲವೇ ಹೃದಯದ ಸ್ನಾಯುಗಳಿಗೆ ಗಾಯ ಉಂಟುಮಾಡುತ್ತವೆ. ಇದರಿಂದ ಹೃದಯದ ಸಾಮರ್ಥ್ಯ ಕುಗ್ಗುತ್ತದೆ. ದೇಹದ ಬೇಡಿಕೆಗಳನ್ನು ಪೂರೈಸಲು ಹೃದಯ ಒದ್ದಾಡುವುದರಿಂದ, ಆಕ್ಸಿಜನ್‍ ಪೂರೈಕೆ ಹಾಗೂ ರಕ್ತದ ಹರಿವಿನಲ್ಲಿ ಏರುಪೇರಾಗಿ, ಹಂತಹಂತವಾಗಿ ಹೃದಯದ ಮೇಲೆ ಒತ್ತಡ ಹೆಚ್ಚುತ್ತದೆ. ಸೋಲುತ್ತಿರುವ ಹೃದಯವು ಸರಿಯಾಗಿ ರಕ್ತವನ್ನು ಪಂಪ್‌ ಮಾಡಲು ಆಗುವುದಿಲ್ಲ. ಆಗಲೇ ನಿಮಗೆ ಹೃದಯ ವೈಫಲ್ಯ ಆಗಿದೆ ಎಂದು ಗೊತ್ತಾಗುವುದು. ಇದರ ಪರಿಣಾಮ? ನಿಮ್ಮ ಬದುಕಿನ ಗುಣಮಟ್ಟ, ಮೆಲ್ಲನೆ ಹಂತಹಂತವಾಗಿ ಕುಸಿಯುತ್ತದೆ.

ನಿಮ್ಮ ಹೃದಯ ತುಂಬ ಕಾಲದವರೆಗೆ ಚೆನ್ನಾಗಿ ಕೆಲಸ ಮಾಡಿಕೊಂಡಿರಲು, ನೀವು ಮಾಡುವಂಥದ್ದು ಏನಾದರೂ ಇದೆಯೇ?

ನಿಮಗೆ ಹೃದಯ ವೈಫಲ್ಯ ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುವ ಹಲವು ಸಂಗತಿಗಳ ಉದ್ದದ ಪಟ್ಟಿಯಲ್ಲಿ, ನಿಮ್ಮ ಹೃದಯವನ್ನು ಗಟ್ಟಿಮುಟ್ಟಾಗಿಡಲು, ನೀವು ಬದಲಾಯಿಸಬಹುದಾದ ಕೆಲವು ಅಂಶಗಳಿವೆ[1].

ಡಯಾಬಿಟಿಸ್: ಒಮ್ಮೆ ನಿಮಗೆ ಡಯಾಬಿಟಿಸ್ ಬಂದಿತೆಂದರೆ, ಅದು ಹಲವಾರು ಬೇರೆ ರೋಗಗಳ ಬಾಗಿಲನ್ನು ತೆರೆಯುತ್ತದೆ. ಡಯಾಬಿಟಿಸ್ ಇರುವ ಮಂದಿಯಲ್ಲಿ, ಸಾಮಾನ್ಯವಾಗಿ ಲಿಪಿಡ್‌ ಇಲ್ಲವೇ ಕೊಲೆಸ್ಟರಾಲ್ ಮಟ್ಟ ಹೆಚ್ಚಿರುತ್ತದೆ. ಇದರಿಂದ ಅವರ ರಕ್ತನಾಳಗಳಲ್ಲಿ ಕೊಲೆಸ್ಟರಾಲ್ ತುಂಬಿಕೊಂಡು, ರಕ್ತ ಪಂಪ್‌ ಮಾಡಲು ಅವರ ಹೃದಯ ಒದ್ದಾಡುತ್ತದೆ[2]. ನಿಮ್ಮ ಹೃದಯದ, ಕೆಲಸ ಮಾಡುವ ಶಕ್ತಿ ಕುಂದುತ್ತದೆ. ಡಯಾಬಿಟಿಸ್ ತಾಗಿದ ಮಂದಿಗೆ ಹೃದಯ ವೈಫಲ್ಯ ಆಗುವ ಸಾಧ್ಯತೆ ಎರಡರಷ್ಟು ಹೆಚ್ಚಿದೆ ಎಂದು ಜನವರಿ 2019ರ ಪ್ರಕಟಣೆಯೊಂದು ಹೇಳುತ್ತದೆ[3]. “ಇದನ್ನು ನಾನು ಹೇಗೆ ತಡೆಗಟ್ಟಬಹುದು?” ಎಂದು ನೀವು ಕೇಳಬಹುದು. ಡಯಾಬಿಟಿಸ್ ಅನ್ನು ತಡೆಗಟ್ಟಬಹುದು. ನಿಮಗೆ ಡಯಾಬಿಟಿಸ್ ಆಗಬಹುದು ಎಂದು ನಿಮಗೆ ಅನಿಸಿದರೆ, ವೃತ್ತಿಪರರ ನೆರವು ಪಡೆಯಿರಿ[4].

ಬೊಜ್ಜುತನ: ನೇರವಾಗಿ ಇಲ್ಲವೇ ಸುತ್ತು ಬಳಸಿ, ಕೊನೆಗೊಂದು ದಿನ ಹೆಚ್ಚುವರಿ ತೂಕ ನಿಮ್ಮ ಹೃದಯದ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ನವೆಂಬರ್‌ 2018 ರಲ್ಲಿ ಪ್ರಕಟಿಸಲಾದ ವಿಮರ್ಶೆಯೊಂದರ ಪ್ರಕಾರ, ಸರಾಸರಿಗಿಂತ ಹೆಚ್ಚು ತೂಕ ಹೊಂದಿರುವವರಲ್ಲಿ, ಆರೋಗ್ಯಕರ ತೂಕ ಹೊಂದಿರುವವರಿಗಿಂತ 10 ವರ್ಷ ಮುಂಚಿತವಾಗಿ ಹೃದಯ ವೈಫಲ್ಯದ ಸುಳಿವುಗಳು ಕಾಣಿಸಿಕೊಳ್ಳುತ್ತವೆ! ಬಿಎಂಐನಲ್ಲಿ ಪ್ರತಿ 1 kg/m2 ಹೆಚ್ಚಳವು, ನಿಮಗೆ ಹೃದಯ ವೈಫಲ್ಯವಾಗುವ ಸಾಧ್ಯತೆಯನ್ನು 5% ನಷ್ಟು ಹೆಚ್ಚಿಸಬಹುದು[5]! ನಿಮ್ಮ ತೂಕ ಇಳಿಸಲು ಇದಕ್ಕಿಂತ ಮಿಗಿಲಾದ ಕಾರಣಗಳು ಇನ್ನೇನು ಬೇಕು?

ಮಿತಿಮೀರಿ ಉಪ್ಪು ತಿನ್ನುವುದು: ಗರಿಗರಿ ಆಲೂಗೆಡ್ಡೆ ಚಿಪ್ಸ್‌ ಅನ್ನು ಯಾರು ತಾನೆ ಬೇಡವೆಂದಾರು? ಇಡೀ ಪ್ಯಾಕೆಟ್‌ ತಿಂದು ಮುಗಿಸಿದಾಗ ನಮಗೆ ಗೊತ್ತೇ ಆಗುವುದಿಲ್ಲ! ಅಷ್ಟು ಚಿಪ್ಸ್‌ನೊಂದಿಗೆ ಒಳಸೇರಿದ ಉಪ್ಪಿನ ಮೊತ್ತ ತುಂಬ ಕೆಡುಕನ್ನು ಉಂಟುಮಾಡುತ್ತದೆ. ಉಪ್ಪಿನಲ್ಲಿ ಸೋಡಿಯಂ ಇದೆ. ದೇಹದಲ್ಲಿ ಸೋಡಿಯಂ ಹೆಚ್ಚಾದರೆ, ದೇಹವು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ನಿಮ್ಮ ಹೃದಯ, ಶ್ವಾಸಕೋಶಗಳ ಸುತ್ತ ತುಂಬಿಕೊಳ್ಳುತ್ತದೆ ಹಾಗೂ ನಿಮ್ಮ ಪಾದಗಳ ಊತಕ್ಕೆ ಕೂಡ ದಾರಿಯಾಗಬಹುದು[6].

ಧೂಮಪಾನ: “ಧೂಮಪಾನದಿಂದ ಸಾವು ಸಂಭವಿಸುತ್ತದೆ” ಎಂದು ಮಾರುಕಟ್ಟೆಯಲ್ಲಿರುವ ಪ್ರತಿಯೊಂದು ಸಿಗರೇಟ್‌ ಪ್ಯಾಕ್‌ ಮೇಲೂ ಹಾಗೂ ಪ್ರತಿ ಜಾಹೀರಾತಿನಲ್ಲೂ ನೋಡುತ್ತೇವೆ. ಧೂಮಪಾನ ನಿಮ್ಮ ಶ್ವಾಸಕೋಶಗಳಿಗೆ ನಾಟುವುದಲ್ಲದೆ, ನಿಮ್ಮ ಹೃದಯದ ಸಾಮರ್ಥ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು.[1] ಹಾಗಾಗಿ, ಹೃದಯ ವೈಫಲ್ಯದ ಬರುವಿಕೆಯನ್ನು ಮುಂದೂಡಲು, ಇಂದೇ ಧೂಮಪಾನ ನಿಲ್ಲಿಸಿ.

ದೈಹಿಕ ಚಟುವಟಿಕೆಯ ಕೊರತೆ: ನಮ್ಮಲ್ಲಿ ಬಹಳಷ್ಟು ಮಂದಿ ಕುಳಿತು ಮಾಡುವ ಕೆಲಸದಲ್ಲಿ ಇದ್ದೇವೆ; ನಾವು ಗಂಟೆಗಟ್ಟಲೆ ಕಂಪ್ಯೂಟರ್‌ ಪರದೆಯ ಮುಂದೆ ಕುಳಿತಿರುತ್ತೇವೆ. ಹೆಚ್ಚು ಸಂಬಳ ಕೊಡುವ ಕೆಲಸಗಳು, ಹೆಚ್ಚು ಒತ್ತಡದ ಗಡುವು ಹಾಗೂ ಹೃದಯ ವೈಫಲ್ಯದ ಹೆಚ್ಚು ಅಪಾಯಗಳೊಂದಿಗೆ ಬರುತ್ತವೆ.[1] ದೈಹಿಕ ಚಟುವಟಿಕೆ ಕಡಿಮೆಯಾದಂತೆ, ಸೊಂಟದ ಸುತ್ತಳತೆ ಹೆಚ್ಚುತ್ತದೆ. ಇದರಿಂದ ಬೊಜ್ಜುಮೈ ಹಾಗೂ ಅದರೊಂದಿಗೆ ಇನ್ನೂ ಏನೇನು ಬರಬೇಕೊ, ಎಲ್ಲವೂ ಬರುತ್ತದೆ. ಹಾಗಾಗಿ, ಪ್ರತಿ ಗಂಟೆಗೊಮ್ಮೆ, 5-10 ನಿಮಿಷವಾದರೂ ನೀವು ಕುಳಿತಲ್ಲಿಂದ ಮೇಲೆದ್ದು, ಆಚೀಚೆ ನಡೆಯಿರಿ. ಇದರಿಂದ ನಿಮ್ಮ ಹೃದಯ ಹೆಚ್ಚು ಕಾಲದವರೆಗೆ ಚೆನ್ನಾಗಿ ಕೆಲಸ ಮಾಡಿಕೊಂಡಿರುತ್ತದೆ.

ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿರುವ ಎಲ್ಲರೂ ಹಾಗೂ ನಿಮ್ಮ ಡಾಕ್ಟರುಗಳು ಕೂಡ ಯಾವಾಗಲೂ ಚಟುವಟಿಕೆಯ ಜೀವನಶೈಲಿಯನ್ನು ಏಕೆ ಬೆಂಬಲಿಸುತ್ತಾರೆ ಎಂದು ನಿಮಗೆ ಈಗ ಅರಿವಿಗೆ ಬಂದಿರಬಹುದು. ಭಾರತೀಯರಲ್ಲಿ ಹೃದಯ ವೈಫಲ್ಯ ಕಾಣಿಸಿಕೊಳ್ಳುವ ವಯಸ್ಸು, ಪಾಶ್ಚಿಮಾತ್ಯರಿಗಿಂತ 10 ವರ್ಷ ಕಡಿಮೆ ಇರುತ್ತದೆ ಎಂದು ಪತ್ತೆಮಾಡಲಾಗಿದೆ.[7] ಹಾಗಾಗಿ, ನಾವು ಎಚ್ಚರಗೊಂಡು ಮುಂದಿನ ಹೆಜ್ಜೆ ಇಡಬೇಕಾದ ಹೊತ್ತಾಗಿದೆ. ನೀವು ನಿಮ್ಮ ವಯಸ್ಸು, ಲಿಂಗ, ಕುಟುಂಬದ ಇತಿಹಾಸ ಇಲ್ಲವೇ ವಂಶವಾಹಿಗಳನ್ನು ಬದಲಾಯಿಸುವುದು ಸಾಧ್ಯವೇ ಇಲ್ಲ. ಆದರೆ, ಆರೋಗ್ಯಕರ ಹೃದಯಕ್ಕಾಗಿ, ನಿಮ್ಮ ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ನೀವು ಮಾಡಬಹುದು ಹಾಗೂ ನಿಮ್ಮ ಬದುಕಿನ ಗುಣಮಟ್ಟವನ್ನು ಸುಧಾರಿಸಬಹುದು!

References:

  1. Congestive heart failure- are you at risk? [Internet]. [cited 2019 Jul 18]. Available from: https://www.crh.org/service-centers/heart-and-vascular-center/congestive-heart-failure-risks.
  2. Causes of heart failure [Internet]. 2019 [updated 2017 May 31; cited 2019 Jul 18]. Available from: https://www.heart.org/en/health-topics/heart-failure/causes-and-risks-for-heart-failure/causes-of-heart-failure.
  3. Kenny HC, Abel ED. Heart failure in type 2 diabetes mellitus. Circ Res. 2019 Jan 04;124(1):121-141. doi:10.1161/CIRCRESAHA.118.311371.
  4. Preventing type 2 diabetes [Internet]. [updated 2016 Nov; cited 2019 Jul 18]. Available from: https://www.niddk.nih.gov/health-information/diabetes/overview/preventing-type-2-diabetes.
  5. Csige I, Ujvárosy D, Szabó Z, Lőrincz I, Paragh G, Harangi M, Somodi S. The impact of obesity on the cardiovascular system. J Diabetes Res. 2018;2018:3407306. doi:10.1155/2018/3407306.
  6. Heart failure diet: Low sodium [Internet]. [updated 2019 May 01; cited 2019 Jul 18]. Available from: https://my.clevelandclinic.org/health/diseases/17072-heart-failure-diet-low-sodium.
  7. Guha S, Harikrishnan S, Ray S, Sethi R, Ramakrishnan S, Banerjee S, et al. CSI position statement on management of heart failure in India. Indian Heart J. 2018 Jul;70(Suppl 1):S1-S72. doi:10.1016/j.ihj.2018.05.003.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.