Symptoms of congestive heart failure
Reading Time: 2 minutes


ಹೃದಯ ವೈಫಲ್ಯ ಎಂಬ ಪದ ಕೇಳಿದ ಕೂಡಲೇ ಹೃದಯ ಕೆಲಸ ಮಾಡುವುದನ್ನೇ ನಿಲ್ಲಿಸಿಬಿಟ್ಟಿದೆ ಎಂದು ಕೆಲವರು ಅಂದುಕೊಳ್ಳುವರು. ಆದರೆ, ಹೃದಯ ವೈಫಲ್ಯ ಎಂದರೆ, ಹೃದಯ ಸಾಮಾನ್ಯವಾಗಿ ಹೇಗೆ ರಕ್ತವನ್ನು ಪಂಪ್ ಮಾಡಬೇಕೊ, ಅಷ್ಟು ಚೆನ್ನಾಗಿ ಕೆಲಸ ಮಾಡುತ್ತಿಲ್ಲವೆಂದು ಅರ್ಥ. ಹಲವು ಬಗೆಯ ಹೃದಯ ವೈಫಲ್ಯಗಳಿವೆ. ಅವುಗಳಲ್ಲಿ ಕಂಜೆಸ್ಟಿವ್ ಹೃದಯ ವೈಫಲ್ಯ ಒಂದು ಒಳಬಗೆಯಾಗಿದೆ. ಆದರೂ, ಹಲವು ಪ್ರಕರಣಗಳಲ್ಲಿ, ಕಂಜೆಸ್ಟಿವ್ ಹೃದಯ ವೈಫಲ್ಯವನ್ನು ಹೃದಯಘಾತ ಎಂತಲೂ ಹೇಳುತ್ತಾರೆ.[1]

ಆರೋಗ್ಯವಾದ  ಹೃದಯವು ದೇಹದ ಎಲ್ಲ ಅಂಗಗಳಿಗೆ ಆಕ್ಸಿಜನ್‍ ಸರಬರಾಜು ಮಾಡುತ್ತದೆ. ದುರ್ಬಲಗೊಂಡ ಹೃದಯಕ್ಕೆ ಈ ಕೆಲಸವನ್ನು ಸರಿಯಾಗಿ ಮಾಡಲು ಆಗದೆ, ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಹೊಡೆತ ಬೀಳುತ್ತದೆ.[1] ಹೃದಯ ವೈಫಲ್ಯಗಳ ಹಲವು ಬಗೆಗಳು ಮತ್ತು ಕಂಜೆಸ್ಟಿವ್ ಹೃದಯ ವೈಫಲ್ಯದ ಲಕ್ಷಣಗಳನ್ನು ಗುರುತಿಸಲು ಈ ಬರಹವು ನಿಮಗೆ ನೆರವಾಗುತ್ತದೆ. ಇದರಿಂದ ನೀವು ನಿಮ್ಮ ಹೃದಯದ ಆರೈಕೆ ಸರಿಯಾಗಿ ಮಾಡಬಹುದು.

ಹೃದಯ ವೈಫಲ್ಯವಾದಾಗ ಏನಾಗುತ್ತದೆ?

ಹೃದಯ ವೈಫಲ್ಯವು ಒಂದು ದೀರ್ಘಕಾಲದ ಸ್ಥಿತಿಯಾಗಿದ್ದು, ಇಲ್ಲಿ ಹೃದಯದ ಸ್ನಾಯು ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸೋಲುತ್ತದೆ. ಪ್ರತಿಯಾಗಿ, ದೇಹದ ಬೇಡಿಕೆಗಳನ್ನು ಪೂರೈಸಲು ಹೃದಯಕ್ಕೆ ಆಗುವುದಿಲ್ಲ.

ಈ ಕೊರತೆಯನ್ನು ನೀಗಿಸಲು ನಿಮ್ಮ ಹೃದಯವು ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡುತ್ತದೆ:[1]

  • ಹೃದಯದ ಸ್ನಾಯುಗಳ ಮೇಲೆ ಒತ್ತಡ ಹೇರುವುದು
  • ಸ್ನಾಯುಗಳನ್ನು ಹೆಚ್ಚಿಸಿಕೊಳ್ಳುವುದು
  • ಬಿರುಸಾಗಿ ರಕ್ತವನ್ನು ಪಂಪ್ ಮಾಡುವುದು

ಹೃದಯವು ಹೇಗಾದರೂ ಸರಿದೂಗಿಸಲು ನೋಡಲಿ, ಅದರಿಂದ ಹೃದಯ ವೈಫಲ್ಯದ ತೊಂದರೆಗಳು ದೂರವಾಗುವುದಿಲ್ಲ ಹಾಗೂ ಹೃದಯವು ನಿಮಗೆ ಎಚ್ಚರಿಕೆಯ ಸುಳಿವುಗಳನ್ನು ಕೊಡಲು ಪ್ರಾರಂಭಿಸುತ್ತದೆ.[1]

ಕಂಜೆಸ್ಟಿವ್ ಹೃದಯ ವೈಫಲ್ಯ ಎಂದರೇನು?

ಹೃದಯ ವೈಫಲ್ಯದ ಬಗೆಗಳು ಈ ಕೆಳಗಿನಂತಿವೆ:[2]

  • ಎಡಬದಿಯ ಹೃದಯ ವೈಫಲ್ಯ
  • ಬಲಬದಿಯ ಹೃದಯ ವೈಫಲ್ಯ
  • ಕಂಜೆಸ್ಟಿವ್ ಹೃದಯ ವೈಫಲ್ಯ

ಕಂಜೆಸ್ಟಿವ್ ಹೃದಯ ವೈಫಲ್ಯವು ಗಂಭೀರವಾದ ತೊಂದರೆಯಾಗಿದ್ದು, ಇದರಲ್ಲಿ ಹೃದಯದ ಸ್ನಾಯುಗಳ ಕುಗ್ಗುವ ಶಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ, ಹೃದಯದಿಂದ ಹೊರಹೋಗುವ ರಕ್ತದ ಹರಿವು ನಿಧಾನವಾಗುತ್ತದೆ ಹಾಗೂ ಹೃದಯದ ಒಳಕ್ಕೆ ಹೋಗುವ ರಕ್ತ, ದೇಹದ ಜೀವಕೋಶಗಳಲ್ಲಿ ಉಳಿದುಕೊಂದು, ಕಟ್ಟಿಕೊಳ್ಳುವಿಕೆಗೆ ಕಾರಣವಾಗುತ್ತದೆ.[2,3] ಕಂಜೆಸ್ಟಿವ್ ಹೃದಯ ವೈಫಲ್ಯದಲ್ಲಿ ಕಟ್ಟಿಕೊಳ್ಳುವಿಕೆಯ ಗುರುತುಗಳು ಹೆಚ್ಚಾಗಿ ಕಾಣಿಸುತ್ತದೆ.[4] ಹೃದಯದ ಮೇಲೆ ಹೆಚ್ಚಿದ ಕೆಲಸದ ಒತ್ತಡವನ್ನು ಸರಿದೂಗಿಸಲು ದೇಹವು ಪ್ರಯತ್ನಿಸುವುದರಿಂದ, ಕಟ್ಟಿಕೊಳ್ಳುವಿಕೆಯು ಇನ್ನಷ್ಟು ಗುರುತು, ಲಕ್ಷಣಗಳನ್ನು ಉಂಟುಮಾಡುತ್ತದೆ.

ಕಂಜೆಸ್ಟಿವ್ ಹೃದಯ ವೈಫಲ್ಯದ ಎಚ್ಚರಿಕೆ ಗುರುತುಗಳು ಯಾವುವು ಮತ್ತು ಅವು ಯಾಕೆ ಕಾಣಿಸಿಕೊಳ್ಳುತ್ತವೆ?

ಕಂಜೆಸ್ಟಿವ್ ಹೃದಯ ವೈಫಲ್ಯವು, ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಲ್ಲ ಹಲವು ಬಗೆಯ ಲಕ್ಷಣಗಳನ್ನು ಉಂಟುಮಾಡುತ್ತದೆ.[1] ಒಂದು ಬಾರಿ ಒಂದು ಲಕ್ಷಣ ಕಾಣಿಸಿಕೊಂಡರೆ, ಅದು ಅಷ್ಟಾಗಿ ಚಿಂತಿಸುವ ವಿಷಯವಾಗದಿರಬಹುದು. ಆದರೆ, ಒಮ್ಮೆಗೆ ಒಂದಕ್ಕಿಂತ ಹೆಚ್ಚು ಲಕ್ಷಣಗಳು ನಿಮ್ಮಲ್ಲಿ ಕಾಣಿಸಿದರೆ, ನೀವು ಕೂಡಲೇ ಡಾಕ್ಟರನ್ನು ಕಾಣಬೇಕು.[5] ಹೃದಯ ಒತ್ತಡವನ್ನು ಸರಿದೂಗಿಸಲು ದೇಹವು ಮಾಡುವ ಕೆಲಸಗಳಿಂದ, ಈ ಕೆಳಗಿನ ಲಕ್ಷಣಗಳು ಉಂಟಾಗುತ್ತವೆ:[5]

  • ವಿಶ್ರಾಂತಿಯಲ್ಲಿದ್ದಾಗ ಉಬ್ಬಸಗೊಳ್ಳುವುದು: ಎಂದಿನ ಸ್ಥಿತಿಯಲ್ಲಿ, ಉಸಿರುಚೀಲದ ಸೇರುಗೊಳವೆಗಳು (ಪಲ್ಮನರಿ ವೇಯ್ನ್) ಶ್ವಾಸಕೋಶಗಳಿಂದ ಹೃದಯಕ್ಕೆ ರಕ್ತವನ್ನು ಹಿಂತಿರುಗಿಸುತ್ತವೆ. ಆದರೆ, ದುರ್ಬಲ ಹೃದಯದ ವಿಷಯದಲ್ಲಿ, ರಕ್ತವು ಸೇರುಗೊಳವೆಗಳಲ್ಲೇ ಉಳಿದುಬಿಡುತ್ತದೆ. ಇದರಿಂದಾಗಿ, ರಕ್ತವು ಶ್ವಾಸಕೋಶಗಳ ಒಳಗೆ ಸೋರಿ, ಉಬ್ಬಸ ಉಂಟಾಗುತ್ತದೆ.
  • ನಿರಂತರ ಕೆಮ್ಮು ಇಲ್ಲವೇ ಏದುಸಿರು ಬಿಡುವುದು: ಶ್ವಾಸಕೋಶಗಳಲ್ಲಿ ದ್ರವ ತುಂಬಿಕೊಳ್ಳುವುದರಿಂದ, ಕೆಮ್ಮು ಇಲ್ಲವೇ ಏದುಸಿರು ನಿಲ್ಲುವುದೇ ಇಲ್ಲ.
  • ಕೈ, ಪಾದ ಮತ್ತು ಹಿಮ್ಮಡಿ ಗಂಟುಗಳ ಊತ: ಹೃದಯದಿಂದ ರಕ್ತವು ನಿಧಾನವಾಗಿ ಹೊರಗೆ ಹರಿಯುವುದರಿಂದ, ಹೃದಯಕ್ಕೆ ಹಿಂತಿರುಗುವ ರಕ್ತವು ಜೀವಕೋಶಗಳಲ್ಲಿ ಕಟ್ಟಿಕೊಳ್ಳುತ್ತದೆ. ಮೂತ್ರಪಿಂಡಗಳು, ದೇಹದಲ್ಲಿ ಹೆಚ್ಚಿದ ದ್ರವವನ್ನು ಹೊರಹಾಕಲು ಆಗದೆ ಕಷ್ಟಪಡುತ್ತವೆ. ಇದರಿಂದಾಗಿ, ಕೈ, ಪಾದ ಮತ್ತು ಹಿಮ್ಮಡಿ ಗಂಟುಗಳಲ್ಲಿ ದ್ರವ ಕಟ್ಟಿಕೊಂಡು ಊತವುಂಟಾಗುತ್ತದೆ.
  • ಬಳಲಿಕೆ: ದೇಹದ ರಕ್ತದ ಬೇಡಿಕೆಯನ್ನು ಪೂರೈಸಲು ಹೃದಯಕ್ಕೆ ಆಗುವುದಿಲ್ಲ. ಇದರಿಂದಾಗಿ, ಕೈಕಾಲುಗಳಿಗೆ ಬೇಕಾಗುವಷ್ಟು ರಕ್ತ ಸಿಗದೆ, ಬಳಲಿಕೆ ಉಂಟಾಗುತ್ತದೆ.
  • ಹಸಿವಿನ ಕೊರತೆ: ಹೃದಯದಿಂದ ಸರಿಯಾಗಿ ರಕ್ತದ ಪೂರೈಕೆ ಆಗದಿರುವುದರಿಂದ, ಜೀರ್ಣಕ್ರಿಯೆಯ ಮೇಲೆ ಪರಿಣಾಮ ಉಂಟಾಗಿ, ಹೊಟ್ಟೆ ತುಂಬಿದಂತೆ ಅನಿಸುತ್ತದೆ.
  • ಗೊಂದಲ: ರಕ್ತದಲ್ಲಿನ ಸೋಡಿಯಂ ಅಳತೆಯಲ್ಲಿ ಮಾರ್ಪಾಡುಗಳಾಗುವುದರಿಂದ, ಗಡಿಬಿಡಿ, ಮರೆವು ಇಲ್ಲವೇ ಗೊಂದಲ ಉಂಟಾಗುತ್ತದೆ.
  • ಹೆಚ್ಚಾದ ಎದೆಬಡಿತ: ತನ್ನ ಪಂಪಿಂಗ್ ಸಾಮರ್ಥ್ಯದಲ್ಲಾದ ಕೊರತೆಯನ್ನು ಸರಿದೂಗಿಸಲು ಹೃದಯವು ಜೋರಾಗಿ ಬಡಿಯುತ್ತದೆ.

ಮೇಲೆ ತಿಳಿಸಲಾದ ಲಕ್ಷಣಗಳನ್ನು ಕಡೆಗಣಿಸಬಾರದು. ಅವು ಕಂಜೆಸ್ಟಿವ್ ಹೃದಯ ವೈಫಲ್ಯವನ್ನು ಸೂಚಿಸುತ್ತಿರಬಹುದು. ಈ ಲಕ್ಷಣಗಳು ಕ್ರಮೇಣ ಹದಗೆಟ್ಟು, ಉಸಿರಾಟದ ತೊಂದರೆ ಮತ್ತು ಮೂತ್ರಪಿಂಡದ ವೈಫಲ್ಯಕ್ಕೂ ಕೂಡ ಕಾರಣವಾಗಬಹುದು. ಚಿಕಿತ್ಸೆ ಮಾಡುವುದರಿಂದ ಲಕ್ಷಣಗಳು ವಾಸಿಯಾಗುತ್ತವೆ ಮತ್ತು ಒಂದೊಳ್ಳೆ ಗುಣಮಟ್ಟದ ಜೀವನವನ್ನು ನಡೆಸಲು ನೆರವಾಗುತ್ತದೆ.[2,3]

ನಿಯಮಿತವಾಗಿ ಡಾಕ್ಟರನ್ನು ಭೇಟಿ ಮಾಡುವುದರ ಜೊತೆಗೆ ಔಷಧಿಗಳು ಮತ್ತು ಜೀವನಶೈಲಿಯ ಮಾರ್ಪಾಡುಗಳಿಂದ, ನಿಮ್ಮ ಲಕ್ಷಣಗಳು ಹಿಡಿತಕ್ಕೆ ಸಿಗುತ್ತವೆ. ನಿಮ್ಮ ಈಗಿನ ಲಕ್ಷಣಗಳ ಮೇಲೆ ನಿಗಾವಹಿಸಿ ಚಿಕಿತ್ಸೆ ಮಾಡಲು ಡಾಕ್ಟರ್ ನೆರವನ್ನು ಪಡೆಯುವುದರಿಂದ, ನಿಮ್ಮ ತೊಂದರೆ ಸುಧಾರಿಸಿ, ಅದು ಇನ್ನಷ್ಟು ಹದಗೆಡದಂತೆ ನೋಡಿಕೊಳ್ಳುತ್ತದೆ.[2,3]


ಉಲ್ಲೇಖಗಳು:

  1. American Heart Association. What is heart failure? [Internet]. [updated 2017 May 31; cited 2020 Jan 9]. Available from: https://www.heart.org/en/health-topics/heart-failure/what-is-heart-failure.
  2. American Heart Association. Types of heart failure [Internet]. [updated 2017 May 31; cited 2020 Jan 9]. Available from: https://www.heart.org/en/health-topics/heart-failure/what-is-heart-failure/types-of-heart-failure.
  3. Johns Hopkins Medicine. Congestive heart failure: prevention, treatment and research [Internet]. [cited 2020 Jan 9]. Available from: https://www.hopkinsmedicine.org/health/conditions-and-diseases/congestive-heart-failure-prevention-treatment-and-research 1/5.
  4. Johns Hopkins Diabetes Guide. Heart failure [Internet]. [updated 2013 May 22; cited 2020 Jan 9]. Available from: https://www.hopkinsguides.com/hopkins/view/Johns_Hopkins_Diabetes_Guide/547061/all/Heart_Failure.
  5. American Heart Association. Warning signs of heart failure [Internet]. [updated 2017 May 31; cited 2020 Jan 9]. Available from: https://www.heart.org/en/health-topics/heart-failure/warning-signs-of-heart-failure.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.