Reading Time: 2 minutes

ಅಧಿಕ ರಕ್ತದೊತ್ತಡವು ನಮ್ಮ ದೇಹದಲ್ಲಿ ಅನೇಕ ಕಾಯಿಲೆಗಳನ್ನು ತಂದು ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡಬಹುದು. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಮೂತ್ರಪಿಂಡದ ವೈಫಲ್ಯ, ಪಾರ್ಶ್ವವಾಯು ಇವು ಕೆಲವೇ ಉದಾಹರಣೆಗಳಾಗಿವೆ. ಇನ್ನೊಂದು ಉದಾಹರಣೆ ಎಂದರೆ, ಅಧಿಕ ರಕ್ತದೊತ್ತಡದಿಂದ ನಿಮಿರುವಿಕೆಯ ಸಮಸ್ಯೆ ಕೂಡ ಎದುರಾಗುತ್ತದೆ ಎಂಬುದು ನಿಮಗೆ ಗೊತ್ತಿತ್ತೇ?

ಅಧಿಕ ರಕ್ತದೊತ್ತಡಕ್ಕಾಗಿ ನೀವು ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ರಕ್ತದೊತ್ತಡವನ್ನು ನಿಯಂತ್ರಿಸಲು ಕೆಲವು ನೈಸರ್ಗಿಕ ವಿಧಾನಗಳನ್ನು ಬಳಸಬಹುದು. ಹಾಗೆಯೇ ಧೂಮಪಾನ ಬಿಡುವುದು, ಆಹಾರದಲ್ಲಿ ಉಪ್ಪಿನ ಸೇವನೆ ಕಡಿಮೆ ಮಾಡುವುದು ಕೂಡ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. 

ನಿಮ್ಮ ಹೈಪರ್‌ಟೆನ್ಶನ್‌ ಸಮಸ್ಯೆಯನ್ನು ದೂರವಿಡಲು ಆಹಾರ ಕ್ರಮಮದಲ್ಲಿ  ಸೇರಿಸಬಹುದಾದ ಕೆಲವು ಗಿಡಮೂಲಿಕೆ ಹಾಗೂ ಮಸಾಲೆ ಪದಾರ್ಥಗಳು ಇಲ್ಲಿವೆ.

1. ಏಲಕ್ಕಿ 

ಒಂದು ಸಂಶೋಧನೆಯ ಪ್ರಕಾರ ಏಲಕ್ಕಿಯು[1] ಮೂತ್ರವರ್ಧಕ (ಡೈಯುರೆಟಿಕ್) ಗುಣಲಕ್ಷಣವನ್ನು ಹೊಂದಿದ್ದು, ಅದರಲ್ಲಿರುವ ಫೈಟೊನ್ಯೂಟ್ರಿಯೆಂಟ್‌ಗಳು ರಕ್ತದ ಹರಿವನ್ನು ಉತ್ತೇಜಿಸಲು ಸಹಾಯಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂದು ಹೇಳಲಾಗಿದೆ. ನೀವು ಪ್ರತಿನಿತ್ಯ ಕುಡಿಯುವ ಚಹಾದಲ್ಲಿ ಹಾಗೂ ಅಡುಗೆಯಲ್ಲಿ ಏಲಕ್ಕಿಯನ್ನು ಬಳಸಬಹುದು. ಹಾಗೆಯೇ ಬೀಜಗಳ ಸಹಿತ ಇಡೀ ಏಲಕ್ಕಿಯನ್ನು ಅಗಿದು ತಿನ್ನುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.

2. ಅಗಸೆ ಬೀಜ 

ಅಗಸೆ ಬೀಜದಲ್ಲಿರುವ ಒಮೇಗಾ 3 ಫ್ಯಾಟಿ ಆ್ಯಸಿಡ್‌ ಹೃದಯ ರಕ್ತನಾಳದ ಕಾಯಿಲೆ ಹಾಗೂ ಮೆಟಬಾಲಿಕ್‌ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿರುವ ಲಿಗ್ನಾನ್‌ಗಳು ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. ಹಾಗೆಯೇ ಉರಿಯೂತವನ್ನು ಕಡಿಮೆ ಮಾಡುತ್ತವೆ.[2] ರೊಟ್ಟಿ ಹಾಗೂ ಪರೋಟ ತಯಾರಿಸುವಾಗ ಗೋಧಿ ಹಿಟ್ಟಿಗೆ ಅಗಸೆ ಬೀಜದ ಪುಡಿಯನ್ನು ಸೇರಿಸಬಹುದು. ಹಾಗೆಯೇ ಸಲಾಡ್ ಹಾಗೂ ಸ್ಮೂತಿಗಳಿಗೂ ಸೇರಿಸಬಹುದು ಇಲ್ಲವೇ ಅವುಗಳಿಂದ ತಿಂಡಿಯನ್ನೂ ಮಾಡಬಹುದು.

3. ಓಮದ ಕಾಳು (ಅಜ್ವಾಯಿನ್‌) 

ನಿಮ್ಮ ಆಹಾರ ಕ್ರಮಕ್ಕೆ ಓಮದ ಕಾಳನ್ನು ಸೇರಿಸುವುದರಿಂದ ಇಲ್ಲವೇ ಓಮದ ಕಾಳಿನ ನೀರನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.[3] ಓಮದಕಾಳಿನಲ್ಲಿ ಥೈಮೋಲ್ ಅಂಶವಿದ್ದು, ಇದು ದೇಹದಲ್ಲಿ ಕ್ಯಾಲ್ಸಿಯಂ ಚಾನೆಲ್‌ನ್ನು ತಡೆಯುವ ಕೆಲಸಮಾಡಬಹುದು.[4] ಇದು ರಕ್ತನಾಳಗಳನ್ನು ಸಡಿಲಗೊಳಿಸಲು ನೆರವಾಗಿ, ಆ ಮೂಲಕ ರಕ್ತದೊತ್ತಡವನ್ನು ಕಡಿಮೆಮಾಡಲು ನೆರವಾಗುವುದು. 

 4. ಲ್ಯಾವೆಂಡರ್ 

ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಲ್ಯಾವೆಂಡರ್ ನೈಸರ್ಗಿಕ ಪರಿಹಾರವಾಗಿದೆ.[5] ಇದು ಮನಸ್ಸಿನ ಆತಂಕ ಕಡಿಮೆಮಾಡುವುದು ಹಾಗೂ ಆರ್ಟರಿಗಳನ್ನು ಹಿಗ್ಗಿಸುವುದು, ಹಾಗಾಗಿ ಅಧಿಕ ರಕ್ತದೊತ್ತಡ ಹೊಂದಿರುವ ಜನರಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು. ಇದರ ಅನುಕೂಲಗಳನ್ನು ಅನುಭವಿಸಲು ದಿನದ ಕೊನೆಯಲ್ಲಿ ಲ್ಯಾವೆಂಡರ್ ಚಹಾ ಕುಡಿಯಿರಿ. ಮಸಾಜ್‌ ಮಾಡಲು ಲ್ಯಾವೆಂಡರ್ ಎಣ್ಣೆಯನ್ನು ಬಳಸುವುದರಿಂದ ಒತ್ತಡವನ್ನು ನಿರ್ವಹಿಸಲು ಸಹಕಾರಿಯಾಗುವುದು. 

5. ಸೆಲರಿ 

ಹೇರಳವಾಗಿ ಪೊಟ್ಯಾಸಿಯಂ ಹೊಂದಿರುವ ಸೆಲರಿಯು ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಒಂದು ಪರಿಣಾಮಕಾರಿಯಾದ ಗಿಡಮೂಲಿಕೆಯಾಗಿರಬಹುದು.[5] ಸಂಶೋಧನೆಗಳ ಪ್ರಕಾರ, ಇದರಲ್ಲಿರುವ ಮೂತ್ರವರ್ಧಕ ಲಕ್ಷಣದಿಂದಾಗಿ ರಕ್ತದೊತ್ತಡ ಕಡಿಮೆಯಾಗುವುದಲ್ಲದೇ, ದೇಹದ ಅನಾರೋಗ್ಯಕಾರಿ ಕೊಬ್ಬಾದ ಎಲ್‌ಡಿಎಲ್‌ ಕೊಲೆಸ್ಟರಾಲನ್ನು ಕೂಡ ಕಡಿಮೆ ಮಾಡಲು ನೆರವಾಗಬಹುದು ಎಂದು ಸಂಶೋಧನೆಗಳು ತಿಳಿಸುತ್ತವೆ. ಇದನ್ನು ನಿಮ್ಮ ಸ್ಮೂತಿಗಳಲ್ಲಿ ಇಲ್ಲವೇ ಅಡುಗೆಯ ಅಲಂಕಾರದಲ್ಲಿ ಬಳಸಿನೋಡಿ.

6. ಗ್ರೀನ್ ಟೀ/ಒಲಾಂಗ್ ಟೀ

ಪ್ರತಿದಿನ ಒಲಾಂಗ್ ಟೀ [6] ಕುಡಿಯುವುದರಿಂದ, ಅಧಿಕ ರಕ್ತದೊತ್ತಡ ಉಂಟಾಗುವ ಅಪಾಯ ಕಡಿಮೆ ಮಾಡಲು ನೆರವಾಗುವುದು ಎಂದು ಕಂಡುಬಂದಿದೆ. ಗ್ರೀನ್ ಟೀ ಇಲ್ಲವೇ ಒಲಾಂಗ್ ಟೀ ಕುಡಿಯುವುದರಿಂದ ದೇಹಕ್ಕೆ ಉಲ್ಲಾಸ ಸಿಗುವುದು. ಹಾಗೆಯೇ ಇದರಲ್ಲಿರುವ ರೋಗನಿರೋಧಕ ಶಕ್ತಿಯು ಹಲವು ಕಾಯಿಲೆಗಳನ್ನು ದೂರವಿಡುವಲ್ಲಿ ಸಹಕಾರಿಯಾಗಿದೆ.


ಆಕರಗಳು:

  1.   Verma SK, Jain V, Katewa SS. Indian Journal of Biochemistry and Biophysics. 2009 Dec;46(6):503-6
  2.   Adolphe JL, Whiting SJ, Juurlink BH, Thorpe LU, Alcorn J. The British Journal of Nutrition. 2010 Apr;103(7):929-38. doi: 10.1017/S0007114509992753. Epub 2009 Dec 15.
  3.   Aftab K, Atta-Ur-Rahman, Usmanghani K. International Journal of Phytotherapy and phytopharmacology. 1995 Jul;2(1):35-40. doi: 10.1016/S0944-7113(11)80046-2.
  4.   Gilani AH, Jabeen Q, Ghayur MN, Janbaz KH, Akhtar MS. Journal of Ethnopharmacology. 2005 Apr 8;98(1-2):127-35.
  5.   Nahida Tabassum and Feroz Ahmad. Pharmacognosy Review. 2011 Jan-Jun; 5(9): 30–40. doi: 10.4103/0973-7847.79097
  6.   Yang YC, Lu FH, Wu JS, Wu CH, Chang CJ. Archives of Internal Medicine. 2004 Jul 26;164(14):1534-40.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.