ನಮ್ಮ ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳು ಸಿಕ್ಕಿದಾಗ ಮಾತ್ರ, ಅದು ಸರಿಯಾಗಿ ಕೆಲಸ ಮಾಡುತ್ತದೆ. ಅದರಲ್ಲೂ, ಆ ಎಲ್ಲ ಪೋಷಕಾಂಶಗಳು ಸರಿತೂಕದಲ್ಲಿ ಇದ್ದಾಗ ಮಾತ್ರ. ಆ ಸರಿತೂಕ ಎನ್ನುವುದು ಬಹಳ ನಾಜೂಕಾದ ಗೆರೆ. ಕೊಂಚ ಕಡಿಮೆಯಾದರೂ ಇಲ್ಲವೇ ಹೆಚ್ಚಿದರೂ, ಎರಡೂ ಆರೋಗ್ಯ ತೊಂದರೆಗಳನ್ನು ಉಂಟುಮಾಡಬಹುದು ಮತ್ತು ಉಂಟುಮಾಡುತ್ತವೆ ಕೂಡ.
ಈಗ ಪೊಟ್ಯಾಸಿಯಂ ಖನಿಜವನ್ನೇ ತೆಗೆದುಕೊಳ್ಳಿ. ಅದು ಕಡಿಮೆ ಇದ್ದಾಗ, ರಕ್ತದೊತ್ತಡ ಹೆಚ್ಚಿಸಬಹುದು, ಕ್ಯಾಲ್ಸಿಯಂ ಮಟ್ಟಗಳನ್ನು ಇಳಿಸಬಹುದು ಹಾಗೂ ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಗೆ ಕಾರಣವಾಗಬಹುದು[1]. ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಹಾನಿಕರವಾಗಿವೆ. ಆದರೆ ಅದೇ, ಹೃದಯ ವೈಫಲ್ಯ ಉಳ್ಳ 10 ರಲ್ಲಿ 4 ಮಂದಿಗೆ ಹೈಪರ್‌ಕಲೀಮಿಯಾ[2] ಆಗಬಹುದು. ಆ ಪದದ ಅರ್ಥ, ‘ಹೆಚ್ಚು ಪೊಟ್ಯಾಸಿಯಂ!’
ನಿಮ್ಮ ಹೃದಯ ಕೆಲಸ ಮಾಡುತ್ತಿರುವಂತೆ ನೋಡಿಕೊಳ್ಳುವ ರಾಸಾಯನಿಕಗಳಲ್ಲಿ ಪೊಟ್ಯಾಸಿಯಂ ಕೂಡ ಒಂದು; ನಿಮ್ಮ ದೇಹದಲ್ಲಿ ನೀರಿನ ಸರಿತೂಕವನ್ನು ಕಾಪಾಡಿಕೊಳ್ಳಲು ಅದು ಬೇಕೇ ಬೇಕು. ಪೊಟ್ಯಾಸಿಯಂ ಮಿತಿಮೀರಿದರೆ, ನಿಮ್ಮ ದೇಹ ಸರಿಯಾಗಿ ಕೆಲಸ ಮಾಡಲು ತೊಡಕುಂಟಾಗುತ್ತದೆ ಹಾಗೂ ನಿಮ್ಮ ಸ್ನಾಯು ಮತ್ತು ಮೂತ್ರಪಿಂಡಗಳ ಕೆಲಸಕ್ಕೂ ಅಡ್ಡಿಯಾಗುತ್ತದೆ. ಇದರಿಂದ ನಿಮ್ಮ ಕಸುವು ಕುಂದುತ್ತದೆ[3].
ಅಂತಹ ತೊಡಕಿನ ಆರೋಗ್ಯ ತೊಂದರೆಗೆ ಕಾರಣವಾದರೂ ಏನು?
ಹೃದಯ ಹಾಗೂ ಮೂತ್ರಪಿಂಡದ ನಡುವೆ ಒಂದು ಚುರುಕಾದ ಒಡನಾಟವಿದೆ. ಮೂತ್ರಪಿಂಡಗಳು, ಮೂತ್ರದ ಮೂಲಕ ಹೊರಹಾಕುವ ನೀರು ಮತ್ತು ಉಪ್ಪಿನ ಅಳವಿಯನ್ನು ಏರಿಸುವ ಇಲ್ಲವೇ ಇಳಿಸುವ ಮೂಲಕ ದೇಹದಲ್ಲಿನ ಎಲೆಕ್ಟ್ರೊಲೈಟ್ ಸರಿತೂಕವನ್ನು ಕಾಪಾಡುತ್ತವೆ. ತಾನು ಪಂಪ್ ಮಾಡಬೇಕಾದ ರಕ್ತದಲ್ಲಿರುವ ನೀರಿನ ಅಳವಿಯಿಂದ, ಹೃದಯದ ಮೇಲೆ ಪ್ರಭಾವ ಉಂಟಾಗುತ್ತದೆ. ಹೃದಯವು ಪಂಪ್ ಮಾಡಬೇಕಾದ ದ್ರವದ ಅಳವಿ ಹೆಚ್ಚಾದಂತೆ, ಅದರ ಮೇಲೆ ಬೀಳುವ ಒತ್ತಡವೂ ಹೆಚ್ಚುತ್ತದೆ. ವೈಫಲ್ಯದಲ್ಲಿರುವ ಹೃದಯವನ್ನು ನಿಭಾಯಿಸಲು, ಡಾಕ್ಟರ್ ‘ನೀರಿನ ಗುಳಿಗೆ’ಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಈ ಗುಳಿಗೆಗಳು, ಮೂತ್ರದ ಮೂಲಕ ಹೊರಹಾಕಲ್ಪಡುವ ನೀರಿನ ಅಳವಿಯನ್ನು ಹೆಚ್ಚಿಸುತ್ತವೆ. ಆದರೆ, ಇದರಿಂದ ರಕ್ತದಲ್ಲಿ ಪೊಟ್ಯಾಸಿಯಂ ಏರಿಕೆ ಆಗಬಹುದು. ಏರಿದ ಪೊಟ್ಯಾಸಿಯಂ ಬೇಗನೆ ಹೃದಯದ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಹದ ತಪ್ಪಿದ ಎದೆಬಡಿತ, ಪಾರ್ಶ್ವವಾಯು, ಓಕರಿಕೆ ಹಾಗೂ ಸ್ನಾಯುಗಳ ಬಳಲಿಕೆಯನ್ನು ಉಂಟುಮಾಡುತ್ತದೆ[2,3].
ಬಹುತೇಕ ಹಣ್ಣುಗಳು ಹಾಗೂ ತರಕಾರಿಗಳಲ್ಲಿ, ಆರೋಗ್ಯಕರ ಅಳತೆಯ ಪೊಟ್ಯಾಸಿಯಂ ಇರುತ್ತದೆ. ನಿಮ್ಮ ದೇಹದಲ್ಲಿ ಪೊಟ್ಯಾಸಿಯಂನ ಪರಿಪೂರ್ಣ ಸರಿತೂಕವನ್ನು ಸಾಧಿಸಲು, ಸರಿಯಾದ ಹಣ್ಣುಗಳು ಇಲ್ಲಿವೆ!
ನಿಮ್ಮ ಆಹಾರಕ್ರಮದಲ್ಲಿ ಸೇರಿಸಬಹುದಾದ ಹಣ್ಣುಗಳ ಪಟ್ಟಿ ಇಲ್ಲಿದೆ:
- ಕಲ್ಲಂಗಡಿ: ಒಂದು ಬಟ್ಟಲು ಕಲ್ಲಂಗಡಿ ಹಣ್ಣು, ನಿಮ್ಮ ಸಂಜೆಯ ತಿಂಡಿಗೆ ಹೊಸತನವನ್ನು ಕೊಡಬಹುದು
- ಅನಾನಸ್: ಸ್ವಲ್ಪ ಹುಳಿ ಸ್ವಲ್ಪ ಸಿಹಿಯಾಗಿ ಬಹಳ ಸವಿಯಾದ ಈ ಹಣ್ಣನ್ನು ಹಾಗೇ ತಿನ್ನಬಹುದು ಇಲ್ಲವೇ ಜ್ಯೂಸ್ ಮಾಡಿ ಕುಡಿಯಬಹುದು
- ಪರಂಗಿ ಹಣ್ಣು: ಸಲಾಡ್ ಇಲ್ಲವೇ ಆ್ಯಪಟೈಜರ್ ಆಗಿ ತಿನ್ನಲು ಇದಕ್ಕಿಂತ ಸವಿಯಾದ ಹಣ್ಣು ಬೇಕೇ
- ಪೇರ್: ನಿಮ್ಮ ಹೃದಯ ಹಾಗೂ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು, 1 ಸಣ್ಣ ಪೇರ್‌ನಲ್ಲಿರುವ ಪೋಷಕಾಂಶಗಳು ಸಾಕು
- ಬೆರಿಗಳು: ಸ್ಟ್ರಾಬೆರಿ ಹಾಗೂ ಚೆರಿಗಳನ್ನು, ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ನಡುವೆ ಸ್ನ್ಯಾಕ್‌ನಂತೆ ತಿನ್ನಿ
- ಸೇಬು: ದಿನಕ್ಕೊಂದು ಸೇಬು, ಇಡುವುದು ಡಾಕ್ಟರನ್ನು ದೂರ!
- ದ್ರಾಕ್ಷಿ: ಸಿಹಿತಿಂಡಿಯ ಬದಲು, ದ್ರಾಕ್ಷಿ ಗೊಂಚಲನ್ನು ತಿನ್ನಿ! ದ್ರಾಕ್ಷಿಯಲ್ಲಿ ಪೊಟ್ಯಾಸಿಯಂ ಕಡಿಮೆ ಇದ್ದು, ನಿಮಗೆ ಮೂತ್ರಪಿಂಡದ ತೊಂದರೆಗಳಿದ್ದರೂ, ಅವನ್ನು ಚಿಂತೆಯಿಲ್ಲದೆ ತಿನ್ನಬಹುದು.
- ಪ್ಲಮ್: 1 ಚಿಕ್ಕ ಪ್ಲಮ್‌ನಲ್ಲಿರುವ ಪೋಷಕಾಂಶಗಳಿಗೆ ಸಾಟಿಯೇ ಇಲ್ಲ!
ನೆನಪಿಡಿ, ಎಲ್ಲವೂ ಮಿತಿಯಲ್ಲಿರಲಿ! ನಿಮ್ಮ ಪೊಟ್ಯಾಸಿಯಂ ಮಟ್ಟಗಳನ್ನು ಕಾಪಾಡಿಕೊಳ್ಳಲು, ಇಲ್ಲಿರುವ ಯಾವುದೇ ಹಣ್ಣನ್ನು, ಬೇರೆ ಬಗೆಯಾಗಿ ಹೇಳದ ಹೊರತು, 1/2 ಬಟ್ಟಲಿನಷ್ಟು ಮಾತ್ರ ತಿನ್ನಿ. ನಿಮ್ಮ ಆಹಾರಕ್ರಮದಲ್ಲಿ ಬಣ್ಣಬಣ್ಣದ ಹಣ್ಣುಗಳನ್ನು ಸೇರಿಸುವ ಬಯಕೆಯಾದರೂ, ಅದನ್ನು ಮಿತಿಯೊಳಗೆ ಮಾಡಿ. ನಿಮಗೆ ಈಗಾಗಲೇ ಅಧಿಕ ಪೊಟ್ಯಾಸಿಯಂ ತೊಂದರೆಯಿದ್ದರೆ, ಈ ಹಣ್ಣುಗಳಲ್ಲಿ ಯಾವುದನ್ನಾದರೂ ಮಿತಿಮೀರಿ ತಿನ್ನುವುದರಿಂದ, ನಿಮ್ಮ ಪೊಟ್ಯಾಸಿಯಂ ಮಟ್ಟಗಳು ಮುಗಿಲು ಮುಟ್ಟಬಹುದು.
ನೀವು ಈ ಹಣ್ಣುಗಳಿಂದ ದೂರವಿರಬೇಕು:
- ಬಾಳೆಹಣ್ಣು
- ಏಪ್ರಿಕಾಟ್, ಪ್ರೂನ್, ಅಂಜೂರ ಹಾಗೂ ಒಣದ್ರಾಕ್ಷಿಯಂತಹ ಡ್ರೈಫ್ರೂಟ್‌ಗಳು
- ಬೆಣ್ಣೆಹಣ್ಣು
- ಮಾವಿನಹಣ್ಣು
ನೀವು ನಿಮ್ಮ ಪೊಟ್ಯಾಸಿಯಂ ಮಟ್ಟಗಳನ್ನು ನಿರ್ವಹಿಸಬಹುದಾದ ಇನ್ನೊಂದು ದಾರಿಯೆಂದರೆ, ಆಹಾರದಲ್ಲಿ ಉಪ್ಪಿನ ಸಬ್‌ಸ್ಟಿಟ್ಯೂಟ್‌ಗಳಿಗಾಗಿ ಹುಡುಕುವುದು. ಉಪ್ಪಿನ ಸಬ್‌ಸ್ಟಿಟ್ಯೂಟ್‌ಗಳು, ತಿನ್ನಲು ಸಿದ್ಧವಾಗಿರುವ, ಪ್ಯಾಕ್‌ನಲ್ಲಿ ಬರುವ ಆಹಾರಗಳಲ್ಲಿ ಸಾಮಾನ್ಯವಾಗಿ ಇರುವ ಪ್ರಿಸರ್ವೇಟಿವ್‌ಗಳಾಗಿವೆ. ಅವು ನಿಮ್ಮ ಪೊಟ್ಯಾಸಿಯಂ ಮಟ್ಟಗಳನ್ನು ಏರಿಸಬಹುದು. ಹಾಗಾಗಿ, ಪೋಷಕಾಂಶಗಳ ಮಾಹಿತಿಗಾಗಿ ಲೇಬಲ್ ನೋಡುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಬೇಯಿಸಿದ ಪಾಲಕ್, ಆಲೂಗೆಡ್ಡೆ ಹಾಗೂ ಟೊಮ್ಯಾಟೊಗಳಲ್ಲಿ ಪೊಟ್ಯಾಸಿಯಂ ಹೇರಳವಾಗಿದೆ. ಅವುಗಳಿಂದಲೂ ದೂರವಿರಿ. ನಿಮ್ಮ ಅಚ್ಚುಮೆಚ್ಚಿನ ಕೆಲವು ಹಣ್ಣು ತರಕಾರಿಗಳಲ್ಲಿ ಪೊಟ್ಯಾಸಿಯಂ ಹೆಚ್ಚಿನ ಅಳತೆಯಲ್ಲಿ ಇದ್ದರೆ, ಪೊಟ್ಯಾಸಿಯಂ ಅನ್ನು ಕಡಿಮೆ ಮಾಡಿ ಸುಲಭವಾಗಿ ತಿನ್ನಲು ನೆರವಾಗುವ ದಾರಿಯೆಂದರೆ, ಹಣ್ಣನ್ನು ಕತ್ತರಿಸಿ, ಸಿಪ್ಪೆ ತೆಗೆದು ನೀರಿನಲ್ಲಿ ನೆನೆಸಿ. ಆಗ ಪೊಟ್ಯಾಸಿಯಂ ಹೊರ ಬರುವುದು[5].
“ಬಗೆಬಗೆಯ ಬಣ್ಣಗಳಿದ್ದರೇನೆ ಬದುಕು ಬಂಗಾರ!” ಔಷಧಗಳ ಸರಿಯಾದ ಸಮತೋಲನದ ತಲೆನೋವು ಡಾಕ್ಟರಿಗೆ ಬಿಡಿ. ಆರೋಗ್ಯಕರ ಪೊಟ್ಯಾಸಿಯಂ ಮಟ್ಟಗಳನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು. ನೀವು ಬಗೆಬಗೆಯ ಹಣ್ಣುಗಳನ್ನು ಸವಿಯುವುದರ ಕಡೆ ಗಮನಹರಿಸಿ.
References:
- Office of Dietary Supplements – Potassium [Internet]. Nih.gov. 2016 [cited 2020 Apr 28]. Available from: https://ods.od.nih.gov/factsheets/Potassium-Consumer/
- Thomsen RW, Nicolaisen SK, Hasvold P, Garcia‐Sanchez R, Pedersen L, Adelborg K, Egfjord M, Egstrup K, Sørensen HT. Elevated potassium levels in patients with congestive heart failure: Occurrence, risk factors, and clinical outcomes. J Am Heart Assoc. 2018 May 22;7(11):pii:e008912. doi:10.1161/JAHA.118.008912.
- Mayo Clinic Staff. High potassium (hyperkalemia) [Internet]. 2018 Jan 11 [cited 2019 Jul 20]. Available from: https://www.mayoclinic.org/symptoms/hyperkalemia/basics/when-to-see-doctor/sym-20050776.
- Potassium and your CKD diet [Internet]. 2019 [cited 2019 Jul 20]. Available from: https://www.kidney.org/atoz/content/potassium.
- Heart failure diet: Potassium [Internet]. [updated 2019 May 01; cited 2019 Jul 20]. Available from: https://my.clevelandclinic.org/health/articles/17073-heart-failure-diet-potassium.