common heart attack signs symptoms
Reading Time: 2 minutes

ಹೃದಯಾಘಾತದ ಲಕ್ಷಣಗಳು ಕಡಿಮೆ ತೀವ್ರತೆಯೊಂದಿಗೆ ಪ್ರಾರಂಭವಾಗಬಹುದು ಅಥವಾ ಆಗದೆ ಇರಬಹುದು. ಅನೇಕ ಬಾರಿ, ರೋಗಲಕ್ಷಣಗಳು ಸಣ್ಣ ಆರೋಗ್ಯ ಸಮಸ್ಯೆಗಳನ್ನು ಹೋಲುತ್ತವೆ, ಹಾಗಾಗಿ ಜನರು ಅವನ್ನು ಸುಲಭವಾಗಿ ಕಡೆಗಣಿಸಲು ಕಾರಣವಾಗಿದೆ. ಕೆಲವು ಸಂದರ್ಭಗಳಲ್ಲಿ, ಹೃದಯಾಘಾತ ಸಂಭವಿಸುವ ವಾರಗಳ ಮೊದಲು ಕೆಲವು ಚಿಹ್ನೆಗಳು ಕಂಡುಬರುತ್ತವೆ, ಇದು ಅದರ ಆರಂಭಿಕ ಡಯಾಗ್ನೋಸಿಸ್ ಮತ್ತು ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಆದರೆ ಇತರ ಸಂದರ್ಭಗಳಲ್ಲಿ, ಹೃದಯಾಘಾತಕ್ಕೆ ಎರಡು ಮೂರು ದಿನಗಳ ಮೊದಲು ಈ ಚಿಹ್ನೆಗಳು ಕಂಡುಬರುತ್ತವೆ, ಆಗ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಇರುವ ಅವಕಾಶ ಹಾಗು ಸಮಯ ಕಡಿಮೆ. ಇದಲ್ಲದೇ, ಅನಾರೋಗ್ಯ ವೇಗವಾಗಿ ಹೆಚ್ಚಾದರೆ, ಅದೊಂದು ಮಾರಕ ಪ್ರಕರಣವಾಗಿ ಬದಲಾಗಬಹುದು. ಇದರ ಸ್ವಭಾವ ಮೂಕ ಮತ್ತು ಅನಿರೀಕ್ಷಿತವಾಗಿರುವುದರಿಂದ, ಹೃದಯಾಘಾತದ ಎಚ್ಚರಿಕೆ ಚಿಹ್ನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.

1. ಎದೆ ನೋವು:

ಎದೆ ನೋವು, ಅಥವಾ ಆ್ಯಂಜಿನಾ ಪೆಕ್ಟೋರಿಸ್, ಹೃದಯಾಘಾತದ ಒಂದು ಪ್ರಮುಖ ಚಿಹ್ನೆ. ನೋವು ಹೆಚ್ಚಾಗಿ ಮಧ್ಯಭಾಗದಲ್ಲಿ ಅಥವಾ ಕಂಕುಳ ಹತ್ತಿರದಲ್ಲಿ ಉಂಟಾಗುತ್ತದೆ ಮತ್ತು ಅದನ್ನು ಸ್ನಾಯುವಿನ ಸೆಳೆತ ಎಂದು ಕಡೆಗಣಿಸುವ ಸಾಧ್ಯತೆ ಹೆಚ್ಚು. ಹೃದಯಾಘಾತದ ತೀವ್ರತೆಗೆ ಅನುಗುಣವಾಗಿ ನೋವಿನ ತೀವ್ರತೆ ಬದಲಾಗುತ್ತದೆ. ಕೆಲವು ರೋಗಿಗಳು ಕಡಿಮೆ ತೀವ್ರತೆಯ ಸುಡುವಂತಹ ನೋವನ್ನು ಅನುಭವಿಸಿದರೆ, ಇತರರು ಹೃದಯಾಘಾತದ ಸಮಯದಲ್ಲಿ ಆಳವಾದ, ಚುಚ್ಚುವಂತಹ ಅಥವಾ ಇರಿಯುವಂತಹ ನೋವು ಇದೆ ಎಂದು ದೂರುತ್ತಾರೆ. ಎದೆ ನೋವು ಹೃದಯಾಘಾತದ ಸಾಮಾನ್ಯ ಚಿಹ್ನೆಯಾಗಿದ್ದರೂ, ಇದು ಎಲ್ಲಾ ಸಂದರ್ಭಗಳಲ್ಲಿಯೂ ಸಂಭವಿಸುವುದಿಲ್ಲ. ಸುಮಾರು 10% ಮಹಿಳೆಯರು ಹೃದಯಾಘಾತದ ಮೊದಲು ಅಥವಾ ಹೃದಯಾಘಾತದ ಸಮಯದಲ್ಲಿ ಎದೆ ನೋವನ್ನು ಅನುಭವಿಸುವುದಿಲ್ಲ ಎಂದು ವೈದ್ಯರು ಗಮನಿಸಿದ್ದಾರೆ.

2. ದವಡೆ, ಕುತ್ತಿಗೆ, ಮೊಣಕೈ ಮತ್ತು ಬೆನ್ನಿನಲ್ಲಿ ನೋವು:

ಕೆಲವು ಸಂದರ್ಭಗಳಲ್ಲಿ, ನೋವಿನ ಸಂವೇದನೆಯು ಬೆನ್ನುಹುರಿಗೆ ಚಲಿಸುತ್ತದೆ, ಅಲ್ಲಿ ಅದು ನರಗಳ ದಾರಿಯೊಂದಿಗೆ ಸೇರಿಕೊಳ್ಳುತ್ತದೆ, ಇದರಿಂದಾಗಿ ಎದೆಯ ಸುತ್ತಲಿರುವ ಕೆಲವು ಭಾಗಗಳಿಗೆ ನೋವು ಹರಡಿಕೊಳ್ಳುತ್ತದೆ. ಇದು ಇಡೀ ತೋಳು, ಬೆನ್ನಿನ ಮೇಲ್ಭಾಗ ಮತ್ತು ದವಡೆಯ ಬಿಗಿತ, ಮರಗಟ್ಟುವಿಕೆ ಅಥವಾ ಭಾರದ ರೂಪದಲ್ಲಿ ಕಾಣಿಸಿಕೊಳ್ಳಬಹುದು.

3. ಉಸಿರಾಟದ ತೊಂದರೆ:

ಹೃದಯಾಘಾತದಿಂದ ಬಳಲುತ್ತಿರುವ ಜನರು ಉಸಿರಾಟದ ತೊಂದರೆ ಬಗ್ಗೆ ಸಹ ದೂರುತ್ತಾರೆ. ಹೃದಯಾಘಾತಕ್ಕೆ ಸ್ವಲ್ಪ ಮುಂಚಿತವಾಗಿ ಉಂಟಾಗುವ ಉಸಿರಾಟದ ತೊಂದರೆಯ ಜೊತೆ ಎದೆ ನೋವು ಕಾಣಿಸಿಕೊಳ್ಳಬಹುದು ಅಥವಾ ಕಾಣಿಸಿಕೊಳ್ಳದೆ ಇರಬಹುದು. 

4. ಆಯಾಸ:

ಹೃದಯಾಘಾತದ ಮೊದಲು ನಿಶ್ಶಕ್ತಿ, ದಣಿವು ಅಥವಾ ತಲೆಸುತ್ತುವುದು ಕೂಡ ಮತ್ತೊಂದು ಸಾಮಾನ್ಯವಾಗಿ ದಿಕ್ಕು ತಪ್ಪಿಸುವ ಚಿಹ್ನೆಯಾಗಿದೆ. ಹಲವು ಬಾರಿ ಜನರು ಇದನ್ನು ಒತ್ತಡ ಅಥವಾ ಶ್ರಮದಿಂದ ಆಗಿರುವ ಸಾಮಾನ್ಯ ಆಯಾಸ ಎಂದು ಭಾವಿಸುತ್ತಾರೆ. ಹೃದಯಾಘಾತದ ಮೊದಲು ಅತಿಯಾದ ಆಯಾಸ ಏಕೆ ಆಗುತ್ತದೆ ಎಂದರೆ ಆಗ ಹೃದಯದ ಸ್ನಾಯುಗಳಿಗೆ ಆಮ್ಲಜನಕ ಸಿಗದೆ ಹೋಗುವುದರಿಂದ, ಹಾಗಾಗಿ ದೇಹದ ಉಳಿದ ಭಾಗಗಳಿಗೆ ರಕ್ತದ ಪೂರೈಕೆ ಆಗುವುದಿಲ್ಲ.

5. ಶೀತ ಬೆವರು:

ಶೀತ ಬೆವರು ಹೃದಯಾಘಾತದ ಮತ್ತೊಂದು ಚಿಹ್ನೆಯಾಗಿದ್ದು ಅದರೊಂದಿಗೆ ಆಯಾಸವು ಇರುತ್ತದೆ. ಶ್ರಮದ ಮಟ್ಟ ಅಥವಾ ಹವಾಮಾನ ಏನೇ ಇರಲಿ, ಈ ಸಮಯದಲ್ಲಿ ಬೆವರು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ವಾಕಿಂಗ್‌ನಂತಹ ಸರಳ ಚಟುವಟಿಕೆ ಬೆವರಿನೊಂದಿಗೆ ನಿಶ್ಶಕ್ತಿಯನ್ನು ಕೂಡ ಉಂಟುಮಾಡುತ್ತದೆ. ಇದು ಹೃದಯಾಘಾತಕ್ಕೆ ಕೆಲವು ದಿನಗಳ ಮೊದಲು ಕಂಡುಬರುವ ಆರಂಭಿಕ ಲಕ್ಷಣವಾಗಿರಬಹುದು.

6. ನಿದ್ದೆಯಲ್ಲಿ ಅಡಚಣೆ:

ಹೆಚ್ಚಿನ ಸಂದರ್ಭಗಳಲ್ಲಿ, ನಿದ್ದೆ ಮಾಡುವಾಗ ಉಸಿರಾಟದ ತೊಂದರೆಯಿಂದಾಗಿ ನಿದ್ದೆಯಲ್ಲಿ ಅಡಚಣೆ ಉಂಟಾಗುತ್ತದೆ, ಇದರ ಪರಿಣಾಮವಾಗಿ ಉಂಟಾಗುವ ಉಸಿರುಗಟ್ಟಿಸುವಿಕೆಯು ಹೃದಯ ಸ್ನಾಯುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತದೆ. ಸ್ಲೀಪ್ ಆಪ್ನಿಯಾ ಅಂದರೆ ನಿದ್ದೆಯಲ್ಲಿ ಆಗುವಂತಹ ಉಸಿರಾಟದ ತೊಂದರೆ ಹೃದಯಾಘಾತ ಸಂಭವಿಸುವ ಹಲವಾರು ವಾರಗಳು ಅಥವಾ ತಿಂಗಳುಗಳ ಮೊದಲು ಸಂಭವಿಸಬಹುದು.

7. ವಾಕರಿಕೆ ಮತ್ತು ವಾಂತಿ:

ಹೃದಯಾಘಾತದಿಂದ ಬದುಕುಳಿದ ಅನೇಕರು ಹೃದಯಾಘಾತಕ್ಕೆ ಮುಂಚೆ ತಮ್ಮ ರೋಗಲಕ್ಷಣಗಳು ಅಜೀರ್ಣವನ್ನು ಹೋಲುತ್ತಿದ್ದವು ಎಂದು ವಿವರಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ, ಕನಿಷ್ಠ ಪರಿಶ್ರಮದ ನಂತರ ಉಸಿರಾಟದ ತೊಂದರೆ, ತದನಂತರ ವಾಕರಿಕೆ ಮತ್ತು ವಾಂತಿಯ ರೂಪದಲ್ಲಿ ಗ್ಯಾಸ್ಟ್ರೋಇಂಟೆಸ್ಟಿನಲ್ ಅಸ್ವಸ್ಥತೆಯ ಚಿಹ್ನೆಗಳು ಕಂಡುಬರುತ್ತವೆ.

ಮೇಲಿನ ಚಿಹ್ನೆಗಳು ಮಾತ್ರ ಹೃದಯಾಘಾತದ ಚಿಹ್ನೆಗಳಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಪ್ರತಿಯೊಬ್ಬ ರೋಗಿಯು ಈ ರೋಗಲಕ್ಷಣಗಳನ್ನು ಅವರ ವಯಸ್ಸು ಮತ್ತು ಹೃದಯಾಘಾತದ ತೀವ್ರತೆಗೆ ಅನುಗುಣವಾಗಿ ವಿಭಿನ್ನವಾಗಿ ಅನುಭವಿಸುತ್ತಾರೆ. ಇದಲ್ಲದೆ, ಗಂಡಸರು ಮತ್ತು ಹೆಂಗಸರಲ್ಲಿ ಹೃದಯಾಘಾತದ ಚಿಹ್ನೆಗಳು ಬದಲಾಗುತ್ತವೆ. ಹಾಗಾಗಿ, ಬರಿ ಈ ಚಿಹ್ನೆಗಳ ಮೇಲೆ ಮಾತ್ರ ಅವಲಂಬಿತರಾಗಬೇಡಿ. ನಿಮ್ಮ ದೇಹಸ್ಥಿತಿಯಲ್ಲಿ ಏಕಾಏಕಿಯಾಗಿ ಮತ್ತು ಹಠಾತ್ ಬದಲಾವಣೆಗಳು ಕಾಣಿಸಿಕೊಳ್ಳುವುದೆ ಅಂತಿಮವಾಗಿ ತುಂಬ ಮುಖ್ಯವಾದ ಮತ್ತು ಎಚ್ಚೆತ್ತುಕೊಳ್ಳಬೇಕಾದ ಚಿಹ್ನೆ. ನಿಮ್ಮ ಸ್ಥಿತಿಯಲ್ಲಿ ಏನಾದರು ಬದಲಾವಣೆಗಳನ್ನು ನೀವು ಗಮನಿಸಿದ್ದಲ್ಲಿ, ಅದಕ್ಕೆ ಸ್ವಯಂ-ಚಿಕಿತ್ಸೆ ಮಾಡಬೇಡಿ. ಬದಲಾಗಿ ತಕ್ಷಣವೆ ವೈದ್ಯಕೀಯ ಸಹಾಯವನ್ನು ಪಡೆಯಿರಿ!

রেফারেন্স:

  1. Joseph P. Ornato and Mary M. Hand Warning Signs of a Heart attack. Circulation 11Sept 2001.
  2. 100 Questions and answers about heart attack and related cardiac problems by Edward K. Chung
  3. A Woman’s Guide to Living with Heart Disease – By Carolyn Thomas

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.