Reading Time: 3 minutes

ಮಗುವಿನ ಬದುಕಿನಲ್ಲಿ ಕುಟುಂಬ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ.1 ತಮ್ಮ ಮೊದಲ ಅಳುವಿನಿಂದ ಹಿಡಿದು ತಮ್ಮ ಕಾಲಿನ ಮೇಲೆ ತಾವು ನಿಂತು ಬದುಕನ್ನು ರೂಪಿಸಿಕೊಳ್ಳುವವರೆಗೂ, ಮಕ್ಕಳು ತಮ್ಮ ಅಗತ್ಯಗಳಿಗಾಗಿ ಹಾಗೂ ರಕ್ಷಣೆಗಾಗಿ ಕುಟುಂಬವನ್ನೇ ಆಶ್ರಯಿಸಿರುತ್ತಾರೆ. ಮಗುವಿನ ಪ್ರಮುಖ ಆರೈಕೆದಾರರಾಗಿ, ಮಗುವಿನ ಲಾಲನೆ ಪಾಲನೆ ಮಾಡುವುದು ಹೆತ್ತವರ ಆದ್ಯ ಕರ್ತವ್ಯವೆಂದು ಸುಲಭವಾಗಿ ಹೇಳಬಹುದು. ಮಕ್ಕಳು ತಮ್ಮ ಆರೋಗ್ಯವನ್ನು ಜೀವನದುದ್ದಕ್ಕೂ ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು, ಡಯಾಬಿಟಿಸ್‌ನಂತಹ ದೀರ್ಘಾಕಾಲಿಕ ಕಾಯಿಲೆಯಿಂದ ತಪ್ಪಿಸಿಕೊಳ್ಳಲು ನೆರವಾಗುವಂತಹ, ಆರೋಗ್ಯಕರ ಜೀವನಶೈಲಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಮಗುವಿದ್ದಾಗಿಂದಲೇ ಕಲಿಸುವುದು ಜವಬ್ದಾರಿಯುತ ಪೋಷಕರ ಕೆಲಸವಾಗಿದೆ.

ಟೈಪ್ 2 ಡಯಾಬಿಟಿಸ್ ಸಾಮಾನ್ಯವಾಗಿ 45 ವರ್ಷ ಮೇಲ್ಪಟ್ಟ ವಯಸ್ಕರಲ್ಲಿ ಕಂಡು ಬರುತ್ತದೆ.2 ಆದರೆ, ಇತ್ತೀಚೆಗೆ ಟೈಪ್ 2 ಡಯಾಬಿಟಿಸ್ ಮಕ್ಕಳಲ್ಲೂ ಸಹ ಹೆಚ್ಚು ಕಂಡು ಬರುತ್ತಿರುವುದು ನಿಮಗೆ ತಿಳಿದಿದೆಯೇ?3 ಟೈಪ್ 2 ಡಯಾಬಿಟಿಸ್ ಕಾಣಿಸಿಕೊಂಡ ಇತ್ತೀಚಿನ ಪ್ರಕರಣಗಳಲ್ಲಿ ಶೇಖಡ 8-45ರಷ್ಟು ಮಕ್ಕಳು ಮತ್ತು ಹದಿಹರೆಯದವರಿದ್ದಾರೆ. ಚಿಕ್ಕವಯಸ್ಸಿನ ಈ ಜನಸಮೂಹದ ಮೇಲೆ ಟೈಪ್ 2 ಡಯಾಬಿಟಿಸ್‌ನ ದಾಳಿಗೆ ಪ್ರಮುಖ ಕಾರಣವೇನೆಂದು ಹುಡುಕ ತೊಡಗಿದಾಗ, ಎಲ್ಲಾ ಅಂಶಗಳು ಅಧಿಕ ಬೊಜ್ಜಿನತ್ತ ಬೆರಳು ಮಾಡಿ ತೋರುತ್ತಿವೆ.4 ಸಾಮಾನ್ಯವಾಗಿ ಕ್ಯಾಲೊರಿ ಸೇವನೆಯ ಹೆಚ್ಚಳ ಮತ್ತು ಜಡ ಜೀವನಶೈಲಿಯಿಂದಾಗಿ ದೇಹದಲ್ಲಿ ಬೊಜ್ಜು ಹೆಚ್ಚುತ್ತಿದೆ.5 

ಒಳ್ಳೆ ಸುದ್ದಿ ಏನೆಂದರೆ ಟೈಪ್ 2 ಡಯಾಬಿಟಿಸನ್ನು ತಹಬದಿಗೆ ತರಬಹುದು. ಈ ವಿಶ್ವ ಮಧುಮೇಹ ದಿನದಂದು, ಪೋಷಕರು ಹೇಗೆ ತಮ್ಮ ಮಕ್ಕಳನ್ನು ಟೈಪ್ 2 ಡಯಾಬಿಟಿಸ್ ರಕ್ಕಸನಿಗೆ ಸಿಗದಂತೆ ಪಾರು ಮಾಡಬಹುದೆಂದು ನೋಡೋಣ. ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯ ಅಭ್ಯಾಸವನ್ನು ಪ್ರೋತ್ಸಾಹಿಸುವ ವಾತಾವರಣವನ್ನು ಸೃಷ್ಟಿಸಲು ಪೋಷಕರು ತಮ್ಮ ಮಗುವಿನ ದೈನಂದಿನ ಜೀವನದಲ್ಲಿ ಕೆಲವು ಚಿಕ್ಕ ಬದಲಾವಣೆಗಳನ್ನು ಮಾಡಬೇಕಾಗಿದೆ, ಇದು ತಮ್ಮ ಮಗುವು ಈ ಕಂಟಕಪ್ರಾಯ ಕಾಯಿಲೆಯ ದಾಳಿಗೆ ಸಿಲುಕದಂತೆ ಭದ್ರ ಕೋಟೆಯನ್ನು ನಿರ್ಮಿಸುತ್ತದೆ.

ನಿಮ್ಮ ಮಗು ಟಿವಿಗೆ ಅಂಟದಂತೆ ನೋಡಿಕೊಳ್ಳಿ.

ಆಹಾರ ಮತ್ತು ಪಾನೀಯಗಳ ಜಾಹೀರಾತುಗಳು ಮಕ್ಕಳ ಆಹಾರದ ಆಯ್ಕೆಗಳ ಮೇಲೆ, ಆದ್ಯತೆಯ ಮೇಲೆ ಹಾಗೂ ಪೋಷಕರನ್ನು ಪೀಡಿಸುವಂತೆ ಪ್ರಭಾವ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನಗಳಲ್ಲಿ ಕಂಡು ಬಂದಿದೆ. ಅನೇಕ ಸಂಶೋಧಕರು, ಇಂತಹ ಆಹಾರ ಮತ್ತು ಪಾನೀಯಗಳ ಪೌಷ್ಠಿಕಾಂಶದ ಗುಣಮಟ್ಟದ ಕುರಿತು  ಅಧ್ಯಯನ ಮಾಡಿದ್ದಾರೆ. ಈ ಆಹಾರಗಳಲ್ಲಿ ಒಟ್ಟು ಕೊಬ್ಬು, ಸಕ್ಕರೆ, ಕ್ಯಾಲೊರಿಗಳು, ಸ್ಯಾಚುರೇಟೆಡ್ ಕೊಬ್ಬು ಅಥವಾ ಸೋಡಿಯಂ ಇರುವುದು ಕಂಡುಬಂದಿದ್ದು, ಅವುಗಳು ಕಳಪೆ-ಪೌಷ್ಠಿಕಾಂಶಯುತ ಅಥವಾ “ಕುರುಕು” ತಿಂಡಿ ಪದಾರ್ಥಗಳಾಗಿವೆ, ಇದು ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಪ್ರಮುಖ ಕಾರಣವಾಗುತ್ತದೆ7

ಸಂಶೋಧಕರು ಮತ್ತೊಂದು ಆಸಕ್ತಿದಾಯಕ ವಿಷಯವನ್ನು ಪತ್ತೆಹಚ್ಚಿದ್ದು, ಯಾವ ಮಗುವು ಊಟದ ವೇಳೆ ಟಿವಿಯನ್ನು ನೋಡುವುದಿಲ್ಲವೋ ಆ ಮಗುವನ್ನು, ಊಟ ಮಾಡುವಾಗ ಟಿವಿ ನೋಡುವ ಮಗುವಿಗೆ ಹೋಲಿಸಿ ನೋಡಿದಾಗ ಅಧಿಕ ತೂಕವನ್ನು ಹೊಂದುವ ಸಾಧ್ಯತೆ ತೀರಾ ಕಡಿಮೆ ಎಂದು ಕಂಡುಬಂದಿದೆ.8 ಮತ್ತೊಂದು ಅಧ್ಯಯನ ಹೇಳುವುದೇನೆಂದರೆ, ಮಕ್ಕಳು ಬೇರೆ ಚಟುವಟಿಕೆಯಲ್ಲಿ ತೊಡಗಿದ್ದಾಗ ತಿನ್ನುವುದಕ್ಕಿಂತ ಹೆಚ್ಚು ಟಿವಿ ನೋಡುವಾಗ ಹೆಚ್ಚು ತಿನ್ನುತ್ತಾರೆ.6

ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಎರಡು ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಟಿವಿಯನ್ನು ನೋಡಬಾರದೆಂದು ಶಿಫಾರಸ್ಸು ಮಾಡುತ್ತದೆ.9 ಮಕ್ಕಳು ಟಿವಿಯ ಮುಂದೆ ಕುಳಿತು ಕಳೆಯುವ ಸಮಯವನ್ನು ಪೋಷಕರು ಮೇಲ್ವಿಚಾರಣೆ ಮಾಡಬೇಕು ಹಾಗೂ ಊಟದವೇಳೆ ಮಕ್ಕಳು ಟಿವಿಯತ್ತ ಆಕರ್ಷಿತರಾಗದಂತೆ ನೋಡಿಕೊಳ್ಳಬೇಕು.6

ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ

ಆಟದ ಮೈದಾನಕ್ಕೆ ಹೋಗುವ ಚಿಕ್ಕಮಕ್ಕಳು ಸಾಮಾನ್ಯವಾಗಿ ದೈಹಿಕವಾಗಿ ಚಟುವಟಿಕೆಯಿಂದ ಹಾಗೂ ಆರೋಗ್ಯದಿಂದಿರುವುದನ್ನು ನಾವು ನೋಡಿರುತ್ತೀವಿ. ಆದರೆ, ವರ್ಷಗಳು ಉರುಳುತ್ತಾ ಬಂದಂತೆ, ನಾನಾ ಕಾರಣಗಳಿಂದಾಗಿ ಅವರು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ಇರಬಹುದು, ಅವುಗಳೆಂದರೆ:

 • ಆಟಗಳಲ್ಲಿ ಅವರ ಗೆಳೆಯರಂತೆ ಚೂಟಿಯಾಗಿಲ್ಲವೆಂಬ ಭಾವನೆ
 • ನೆಚ್ಚಿನ ಕ್ರಿಡಾಪಟುವನ್ನಾಗಿ ಯಾರನ್ನು ಗುರುತಿಸಿಕೊಂಡಿಲ್ಲದಿರುವುದು
 • ಶಾಲೆ ಮತ್ತು ಮನೆಪಾಠಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಭಾರ
 • ಬಿಡುವಿಲ್ಲದ ಕುಟುಂಬ10

ಸಿಡಿಸಿ ಹೇಳುತ್ತದೆ, ಮಕ್ಕಳು ಪ್ರತಿದಿನ ಕನಿಷ್ಟ ಪಕ್ಷ 60 ನಿಮಿಷವಾದರು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೆಂದು ಎಂದು ಸಿಡಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಮಕ್ಕಳು ತಮ್ಮ ಹೆತ್ತವರನ್ನು ಅನುಕರಿಸಲು ಪ್ರಯತ್ನಿಸುವುದರಿಂದ, ನೀವು ನಿಮ್ಮ ದಿನಚರಿಗೆ ದೈಹಿಕ ಚಟುವಟಿಕೆಯನ್ನು ಅಳವಡಿಸಿಕೊಳ್ಳಬೇಕು ಹಾಗೂ ನಿಮ್ಮ ಮಕ್ಕಳು ಅದರಲ್ಲಿ ಬಂದು ಕೂಡಿಕೊಳ್ಳುವಂತೆ ಅವರನ್ನು ಹುರಿದುಂಬಿಸಬೇಕು. ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದಾದ ಕೆಲವು ಚಟುವಟಿಕೆಗಳು:

 • ಚುರುಕಾದ ವಾಕಿಂಗ್
 • ಫುಟ್ಬಾಲ್ ಆಡುವುದು
 • ಕುಣಿಯುವುದು
 • ಈಜುವುದು9

ಊಟದವೇಳೆಯ ಆರೋಗ್ಯಕರ ಅಭ್ಯಾಸಗಳನ್ನು ಪ್ರೋತ್ಸಾಹಿಸಿ

ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸುವುದು ಅವರು ಅಧಿಕ ತೂಕವನ್ನು ಹೊಂದದಂತೆ ತಡೆಯಲು ಅವಶ್ಯಕವಾಗಿದೆ. ಇದು ಮಗುವಿನ ಒಟ್ಟಾರೆ ಯೋಗಕ್ಷೇಮವನ್ನೂ ಸಹ ಹೆಚ್ಚಿಸುತ್ತದೆ. ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ಪೋಷಕರಿಗೆ ನಾವು ಕೆಲವು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ.

 • ಪ್ರತಿದಿನ ಉಪಾಹಾರ ಸೇವಿಸಿ. ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದರಿಂದ ಮಕ್ಕಳಲ್ಲಿ ಹಸಿವು ಉಂಟಾಗಿ ಅವರ ಗಮನವು ಅನಾರೋಗ್ಯಕರ ಆಹಾರದ ಆಯ್ಕೆಗಳತ್ತ ಹೊರಳಬಹುದು. 
 • ಕುಟುಂಬದೊಂದಿಗೆ ಒಟ್ಟಿಗೆ ತಿನ್ನುವುದರಿಂದ ಮಗುವು ನಾನಾ ಬಗೆಯ ಆಹಾರಗಳನ್ನು ಆನಂದಿಸಬಹುದು.
 • ಸಣ್ಣ ಪ್ರಮಾಣದಲ್ಲಿ ಆಹಾರವನ್ನು ಬಡಿಸಿ, ಇನ್ನು ಹಸಿವಿದೆಯೇ ಎಂಬುವ ತೀರ್ಮಾನವನ್ನು ಅವರಿಗೆ ಬಿಟ್ಟುಬಿಡಿ.
 • ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ ಮತ್ತು ತಂಪು ಪಾನೀಯಗಳನ್ನು ಖರೀದಿಸಿ.
 • ಊಟದವೇಳೆ ಹೆಚ್ಚು ತರಕಾರಿಗಳು ಮತ್ತು ಹಣ್ಣುಗಳನ್ನು ಬಡಿಸಿ.
 • ಕ್ಯಾಲೊರಿ ಅಧಿಕವಾಗಿರುವ ಹಣ್ಣಿನ ರಸಕ್ಕೆ ಬದಲಾಗಿ ಮಗುವಿಗೆ ಕಡಿಮೆ ಕೊಬ್ಬಿನ ಹಾಲು ಅಥವಾ ನೀರನ್ನು ಕುಡಿಸಿ.11

ಈ ಶಿಫಾರಸುಗಳನ್ನು ಯಾವುದೇ ಪೋಷಕರು ತಮ್ಮ ಮಗುವಿನ ಜೀವನದಲ್ಲಿ ಅಳವಡಿಸಬಹುದಾದ ಸರಳ ಉಪಾಯಗಳಾಗಿವೆ. ಪ್ರತಿಯೊಂದು ಸಣ್ಣ ಹೆಜ್ಜೆಯೂ ನಿಮ್ಮ ಮಗುವಿನ ಮುಂದಿನ ಭವಿಷ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಈ ವಿಶ್ವ ಮಧುಮೇಹ ದಿನದಂದು, ಎಲ್ಲ ಪೋಷಕರಿಗೆ ಕೂಗಿ ಹೇಳುವುದೇನೆಂದರೆ – ನಮ್ಮ ಮಕ್ಕಳನ್ನು ಆರೋಗ್ಯವಾಗಿರಿಸಲು ಒಂದು ಸಂಕಲ್ಪವನ್ನು ಮಾಡೋಣ, ಇದರಿಂದ ಅವರು ಪೂರ್ಣಪ್ರಮಾಣದಲ್ಲಿ, ಡಯಾಬಿಟಿಸ್ ಮುಕ್ತರಾಗಿ ಜೀವನವನ್ನು ನಡೆಸಬಹುದು.

ಉಲ್ಲೇಖಗಳು:

 1. Schor EL. The influence of families on child health. Family behaviors and child outcomes. Pediatr Clin North Am. 1995 Feb;42(1):89-102.
 2. Type 2 diabetes [Internet]. [updated 2019 May 30; cited 2019 Nov 08]. Available from:  https://www.cdc.gov/diabetes/basics/type2.html.
 3. Reinehr T. Type 2 diabetes mellitus in children and adolescents. World J Diabetes. 2013 Dec 15;4(6):270-81. doi: 10.4239/wjd.v4.i6.270.
 4. Temneanu OR, Trandafir LM, Purcarea MR. Type 2 diabetes mellitus in children and adolescents: a relatively new clinical problem within pediatric practice. J Med Life. 2016 Jul-Sep;9(3):235-239.
 5. Sahoo K, Sahoo B, Choudhury AK, Sofi NY, Kumar R, Bhadoria AS. Childhood obesity: causes and consequences. J Family Med Prim Care. 2015 Apr-Jun;4(2):187-92. doi: 10.4103/2249-4863.154628.
 6. Prevent type 2 diabetes in kids [Internet]. [updated 2017 Jun 29; cited 2019 Nov 08]. Available from: https://www.cdc.gov/features/prevent-diabetes-kids/index.html.
 7. Harris JL, Graff SK. Protecting young people from junk food advertising: implications of psychological research for First Amendment law. Am J Public Health. 2012 Feb;102(2):214-22. doi: 10.2105/AJPH.2011.300328.
 8. Vik FN, Bjørnarå HB, Overby NC, Lien N, Androutsos O, Maes L, et al. Associations between eating meals, watching TV while eating meals and weight status among children, ages 10-12 years in eight European countries: the ENERGY cross-sectional study. Int J Behav Nutr Phys Act. 2013 May 15;10:58. doi: 10.1186/1479-5868-10-58.
 9. Tips for parents–ideas to help children maintain a healthy weight [Internet]. [updated 2018 May 23; cited 2019 Nov 08]. Available from: https://www.cdc.gov/healthyweight/children/index.html.
 10. Motivating kids to be active [Internet]. [updated 2018 Jun; cited 2019 Nov 08]. Available from: https://kidshealth.org/en/parents/active-kids.html.
 11. Encourage healthy eating habits [Internet]. [updated 2018 Jul 16; cited 2019 Nov 08]. Available from: https://eclkc.ohs.acf.hhs.gov/nutrition/article/encourage-healthy-eating-habits.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.