Red meat and heart disease
Reading Time: 2 minutes

ಇಂದು ಪ್ರಪಂಚದಾದ್ಯಂತ ಸಂಭವಿಸುವ ಸಾವುಗಳಿಗೆ ಹೃದ್ರೋಗ ಪ್ರಮುಖ ಕಾರಣವಾಗಿ ಪರಿಣಮಿಸಿದೆ. ಹಲವು ಹೃದಯ ಸಂಬಂಧಿ ಕಾಯಿಲೆಗಳಲ್ಲಿ, ಐಎಚ್‌ಡಿಯ ಪಾಲು ಹಿರಿದಿದೆ.1

ಇಸ್ಕೀಮಿಯಾ ಹೃದ್ರೋಗ ಎಂದರೇನು?

ದೇಹದ ಇತರೆ ಅಂಗಗಳಿಗೆ ರಕ್ತವನ್ನು ಪೂರೈಸುವ ನಾಳಗಳಲ್ಲಿ ಅಡೆತಡೆಯುಂಟಾದಾಗ, ರಕ್ತದ ಪೂರೈಕೆಯಲ್ಲಿ ಕೊರತೆಯುಂಟಾಗಿ, ಇಸ್ಕೀಮಿಯಾ ತಲೆದೋರುತ್ತದೆ. ಅಂತಹ ಸಂದರ್ಭದಲ್ಲಿ, ಅಂಗವು ಕಡಿಮೆ ಆಮ್ಲಜನಕ ಮತ್ತು ರಕ್ತವನ್ನು ಪಡೆಯುತ್ತದೆ. ಈ ಐಎಚ್‌ಡಿಯನ್ನು ಸಿಎಚ್‌ಡಿ ಅಥವಾ ಕೊರೊನರಿ ಹೃದ್ರೋಗ ಎಂದು ಸಹ ಕರೆಯಲಾಗುತ್ತದೆ. ಹೃದಯಕ್ಕೆ ರಕ್ತವನ್ನು ಪೂರೈಸುವ ಆರ್ಟರಿಗಳು ಕಿರಿದಾಗುವುದು ಇದರ ಸಾಮಾನ್ಯ ಕುರುಹಾಗಿದೆ. ಇದು ರಕ್ತ ನಾಳಗಳ ಸೆಟೆತ ಅಥವಾ ರಕ್ತ ಹೆಪ್ಪುಗಟ್ಟುವಿಕೆಯಿಂದ ಸಂಭವಿಸಬಹುದಾದರೂ ಹೆಚ್ಚಾಗಿ ನಾಳಗಳಲ್ಲಿ ಪ್ಲಾಕ್ ಕಟ್ಟಿಕೊಳ್ಳುವುದರಿಂದ ಈ ಸಮಸ್ಯೆ ಮನೆ ಮಾಡುತ್ತದೆ.2

ಇಸ್ಕೀಮಿಯಾ ಹೃದ್ರೋಗ ತರಬಲ್ಲ ಅಪಾಯಕಾರಿ ಅಂಶಗಳು

ಐಎಚ್‌ಡಿಗೆ ಕಾರಣವಾಗುವ ಸಾಮಾನ್ಯ ಅಪಾಯಕಾರಿ ಅಂಶಗಳು:1

 • ಆಹಾರಕ್ರಮ
 • ಅಧಿಕ ರಕ್ತದೊತ್ತಡ
 • ಧೂಮಪಾನ
 • ಹೈಪರ್‌ಲಿಪಿಡೀಮಿಯ
 • ಆಲ್ಕೋಹಾಲ್
 • ಬೊಜ್ಜು
 • ಚಟುವಟಿಕೆಯಿಂದ ಇಲ್ಲದಿರುವುದು
 • ಡಯಾಬಿಟಿಸ್ ಮೆಲ್ಲಿಟಸ್
 • ಮಾನಸಿಕ ಅಂಶಗಳು

ಆಹಾರಕ್ರಮ ಮತ್ತು ಇಸ್ಕೀಮಿಯಾ

ಊಟ ಅರಗುವಾಗ, ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾವು ಟ್ರೈಮೆಥಲಾಮೀನ್ ಎನ್-ಆಕ್ಸೈಡ್ (ಟಿಎಂಎಒ) ಎಂಬ ವಸ್ತುವನ್ನು ಬಿಡುಗಡೆ ಮಾಡುತ್ತದೆ. ಟಿಎಂಎಒನ ಕೆಲವು ಭಾಗ ರೆಡ್‌ ಮೀಟ್‌ನಲ್ಲಿ ಕಂಡುಬರುವ ಪೋಷಕಾಂಶಗಳಿಂದ ಬರುತ್ತದೆ. ರೆಡ್ ಮೀಟ್‌ ಹೆಚ್ಚಿನ ಸ್ಯಾಚುರೇಟೆಡ್ ಕೊಬ್ಬಿನ ಮಟ್ಟವನ್ನು ಹೊಂದಿದ್ದು, ಹೃದ್ರೋಗಕ್ಕೆ ಎಡೆಮಾಡಿಕೊಡುತ್ತದೆ.3

ಟ್ರೈಮೆಥಲಾಮೀನ್ ಎನ್-ಆಕ್ಸೈಡ್ ಹೃದಯದ ಮೇಲೆ ಈ ರೀತಿಯಾಗಿ ಪರಿಣಾಮ ಬೀರುತ್ತದೆ:3

 • ಆರ್ಟರಿಗಳಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಹೆಚ್ಚಿಸುವುದು.
 • ಪ್ಲೇಟ್ಲೆಟ್‌ಗಳ ಜೊತೆ ಬೆರೆತು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಹೆಚ್ಚಿಸುವುದು. ಇದು ಪಾರ್ಶ್ವವಾಯು ಹಾಗೂ ಹೃದಯಾಘಾತವನ್ನು ಉಂಟುಮಾಡುತ್ತದೆ.

ಮಾಂಸ ಮತ್ತು ಇಸ್ಕೀಮಿಯಾ ಹೃದ್ರೋಗ

ಇಡೀ ಧಾನ್ಯ, ಹಣ್ಣು, ತರಕಾರಿ, ಸಸ್ಯ ಆಧಾರಿತ ಪ್ರೋಟೀನ್, ಮತ್ತು ಕೊಬ್ಬಿನಾಂಶ ಕಡಿಮೆ ಇರುವ ಡೈರಿ ಉತ್ಪನ್ನಗಳಂತಹ ಬಗೆಬಗೆಯ ಆಹಾರ ಪದಾರ್ಥಗಳನ್ನು ಒಳಗೊಂಡಿರುವ ಆಹಾರಕ್ರಮವನ್ನು ಅನುಸರಿಸುವಂತೆ ಹೆಚ್ಚಿನ ವೈದ್ಯರು ಶಿಫಾರಸು ಮಾಡುತ್ತಾರೆ. ಇಷ್ಟೇ ಅಲ್ಲದೆ, ರೆಡ್ ಮೀಟ್ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಒತ್ತಿ ಹೇಳುತ್ತಾರೆ. ಸಸ್ಯಾಹಾರ ಅಥವಾ ವೈಟ್ ಮೀಟ್‌ಗೆ ಸೀಮಿತರಾಗಿರುವವರು ಸೇವಿಸುವಷ್ಟೇ ಕ್ಯಾಲರಿಯನ್ನು ಪ್ರತಿದಿನ ರೆಡ್ ಮೀಟ್‌ ತಿನ್ನುವವರು ಸೇವಿಸಿದರೂ, ಟಿಎಂಎಒ ಮಟ್ಟವು ಅವರಿಗಿಂತ ಮೂರು ಪಟ್ಟು ಇವರಲ್ಲಿ ಹೆಚ್ಚಾಗಿರುವುದನ್ನು ಕಾಣಬಹುದು.3

ಟಿಎಂಎಒ ಮಟ್ಟವನ್ನು ಸುಲಭವಾಗಿ ಬದಲಾಯಿಸಬಹುದೆಂಬುದು ಒಂದು ಸಂತಸದ ವಿಚಾರವಾಗಿದೆ.  ರೆಡ್ ಮೀಟನ್ನು ತೆಗೆದುಹಾಕುವ ಮೂಲಕ, ಒಂದು ತಿಂಗಳ ಅವಧಿಯಲ್ಲಿ ಟಿಎಂಎಒ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದಾಗಿದೆ.3

ಕೆಂಪು ಮಾಂಸಕ್ಕೆ ಪರ್ಯಾಯಗಳು:

ಯಾವ ಆಹಾರವೂ ಹೃದಯದ ಆರೋಗ್ಯವನ್ನು ಸಂಪೂರ್ಣವಾಗಿ ಪುನಶ್ಚೇತನಗೊಳಿಸುವುದಿಲ್ಲ. ಅದಾಗ್ಯೂ, ಕೆಲ ಆಹಾರಗಳು ಹೃದಯದ ಸಾಮರ್ಥ್ಯವನ್ನು ಹೆಚ್ಚಿಸಿ ಮುಂದಿನ ಅನಾಹುತಗಳನ್ನು ತಪ್ಪಿಸುತ್ತವೆ. ಅಂತಹ ಆಹಾರಗಳೆಂದರೆ:4

 • ಎಣ್ಣೆಯಂಶ ಹೆಚ್ಚಿರುವ ಮೀನು – ರಕ್ತವನ್ನು ತೆಳುಗೊಳಿಸಲು ಸಹಾಯ ಮಾಡುತ್ತದೆ ಹಾಗೂ ರಕ್ತನಾಳಗಳನ್ನು ಸಡಿಲವಾಗಿಸುತ್ತದೆ
 • ಹಣ್ಣು ತರಕಾರಿ – ಫೋಲೇಟ್ ಮತ್ತು ಆ್ಯಂಟಿಆಕ್ಸಿಡಂಟ್‍ಗಳು ಸಮೃದ್ಧವಾಗಿವೆ
 • ಸಂಸ್ಕರಿಸದ ಕಾರ್ಬೋಹೈಡ್ರೇಟ್‌ಗಳು – ಸಕ್ಕರೆ ಮಟ್ಟವನ್ನು ಹಿಡಿತದಲ್ಲಿಡಲು ಸಹಾಯ ಮಾಡುತ್ತದೆ
 • ವಿಟಮಿನ್ ಇ ಇರುವ ಆಹಾರಗಳು – ಕೆಟ್ಟ ಕೊಲೆಸ್ಟರಾಲ್‌ನಿಂದ ಕಾಪಾಡುತ್ತದೆ
 • ಬೆಳ್ಳುಳ್ಳಿ – ಕೊಲೆಸ್ಟರಾಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
 • ಚಹಾ – ಚಹಾದಲ್ಲಿರುವ ಆ್ಯಂಟಿಆಕ್ಸಿಡಂಟ್‍ಗಳು ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತವೆ ಹಾಗೂ ನಾಳಗಳು ಬಂದ್ ಆಗದಂತೆ ತಡೆಯುತ್ತದೆ
 • ನಟ್ಸ್ ಮತ್ತು ಬೀಜಗಳು – ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು
 • ದ್ವಿದಳ ಧಾನ್ಯಗಳು ಮತ್ತು ಸೋಯಾ – ಕೊಲೆಸ್ಟ್ರಾಲ್ ಮಟ್ಟ ತುಂಬ ಹೆಚ್ಚಾಗಿದ್ದರೆ, ಅದನ್ನು ಕಡಿಮೆಗೊಳಿಸಬಹುದು

ಹಾಗೆಯೇ, ಉಪ್ಪಿನ ಸೇವನೆಯ ಮೇಲೂ ಮಿತಿ ಹೇರುವುದು ಮುಖ್ಯ, ಇದು ರಕ್ತದೊತ್ತಡ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಆದ್ದರಿಂದ ಮುಂದಿನ ಬಾರಿ ನೀವು ಹೊಸ ಬಗೆಯ ರೆಸ್ಟೋರೆಂಟ್‌ಗೆ ಹೋದಾಗ, ಮಟನ್ ಚಾಪ್ಸ್ ಬದಲಿಗೆ ಚಿಕನ್ ಸಲಾಡ್ ಅನ್ನು ಪ್ರಯತ್ನಿಸಿ!


ಉಲ್ಲೇಖಗಳು

 1. U.S. National Library of Medicine. Vegetarian diet in patients with ischemic heart disease (VERDI) [Internet]. [updated 2019 Sep 11; cited 2020 Jan 3]. Available from: https://clinicaltrials.gov/ct2/show/NCT02942628.
 2. NCBI Bookshelf. Cardiovascular disability: updating the social security listings [Internet]. [cited 2020 Jan 3]. Available from: https://www.ncbi.nlm.nih.gov/books/NBK209964/.
 3. National Institutes of Health. Eating red meat daily triples heart disease-related chemical [Internet]. [updated 2019 Jan 8; cited 2020 Jan 3]. Available from: https://www.nih.gov/news-events/nih-research-matters/eating-red-meat-daily-triples-heart-disease-related-chemical.
 4. Victoria State Government. Heart disease and food [Internet]. [updated 2012 Sep; cited 2020 Jan 3]. Available from: https://www.betterhealth.vic.gov.au/health/conditionsandtreatments/heart-disease-and-food.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.