Reading Time: 4 minutes

ತಜ್ಞರಿಂದ ವಿಮರ್ಶೆ – ಅಶ್ವಿನಿ ಎಸ್.ಕಾನಡೆ, ನೋಂದಾಯಿತ ಡಯಟಿಶಿಯನ್ ಮತ್ತು ಪ್ರಮಾಣೀಕೃತ ಡಯಾಬೀಟಿಸ್ ಶಿಕ್ಷಕರಾಗಿ 17 ವರ್ಷ ಅನುಭವವನ್ನು ಹೊಂದಿದ್ದಾರೆ

ಸತ್ಯಾಂಶ ಪರೀಕ್ಷಿಸಿದವರು – ಆದಿತ್ಯ ನಾರ್, ಬಿ.ಫಾರ್ಮ್, ಎಂ.ಎಸ್‌ಸಿ. ಸಾರ್ವಜನಿಕ ಆರೋಗ್ಯ ಮತ್ತು ಆರೋಗ್ಯ ಅರ್ಥಶಾಸ್ತ್ರ

ಡಯಾಬಿಟಿಸ್‌ ನಿಯಂತ್ರಣಕ್ಕಾಗಿ ಮೌಖಿಕ ಔಷಧಿಯನ್ನು ನೀವು ತೆಗೆದುಕೊಳ್ಳುತ್ತಿರುವವರಾಗಿದ್ದರೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ವಾಭಾವಿಕವಾಗಿ ಕಡಿಮೆ ಮಾಡುವಂತಹ ಹಾಗೂ ಔಷಧಿಗಳಂತೆ ಹೊಟ್ಟೆಯಲ್ಲಿ ಹಿಂಸೆ, ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳುವುದು, ಹೊಟ್ಟೆ ಉಬ್ಬುವುದು, ಭೇದಿ ಇಲ್ಲವೇ ತೂಕ ಹೆಚ್ಚುವುದು ಈ ತರದ ಯಾವುದೇ ಸಮಸ್ಯೆಗಳನ್ನು ಸೃಷ್ಟಿಸದೆ ಇರುವುದರಿಂದ ಆಯುರ್ವೇದ ಔಷಧಿಗಳನ್ನು ನೀವು ಅದಕ್ಕೆ ಪರ್ಯಾಯವಾಗಿ ತೆಗೆದುಕೊಳ್ಳಲು ಇಚ್ಛಿಸಬಹುದು.(1) 

ಸೂಕ್ತ ಆಹಾರಕ್ರಮದ ಯೋಜನೆ, ಮನೆ ಮದ್ದುಗಳು ಹಾಗೂ ಹಗುರವಾದ ವ್ಯಾಯಾಮ ಮಾಡುವ ಮೂಲಕ ಡಯಾಬಿಟಿಸ್‌ನ ಮೇಲೆ ಬಲವಾದ ಹತೋಟಿಯನ್ನು ಸಾಧಿಸಬಹುದು. ನಮ್ಮ ಪ್ರೋಗ್ರಾಮಿನ ಸಲಹೆಗಾರರೊಂದಿಗೆ ಉಚಿತವಾಗಿ ಸಮಾಲೋಚನೆ ನಡೆಸಲು, ಈಗಲೇ ನೋಂದಾಯಿಸಿ!

ಸಂಶೋಧನೆಯಿಂದ ಸಾಬೀತಾಗಿರುವ ಕೆಲವು ಸೂಕ್ತ ಮನೆಮದ್ದುಗಳು ಇಲ್ಲಿವೆ:    

ಮೆಂತ್ಯ (ಮೇಥಿ)

ಹೌದು, ಅಡುಗೆಗೆ ಬಳಸುವ ಮೆಂತ್ಯ ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ಕಡಿಮೆಯಾಗಿಸುವ ಆರೋಗ್ಯ ಕವಚವಾಗಬಹುದು. 

ಅದು ಹೇಗೆ ಸಹಾಯ ಮಾಡುತ್ತದೆ:

ಮೆಂತ್ಯದಲ್ಲಿ ನಾರಿನಾಂಶ ಹಾಗೂ ಸಪೋನಿನ್ ಹೇರಳವಾಗಿರುತ್ತವೆ; ಇವು ಜೀರ್ಣಕ್ರಿಯೆಯನ್ನು ನಿಧಾನವಾಗಿಸಲು ನೆರವಾಗುತ್ತವೆ ಹಾಗೂ ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ಗಳ ಹೀರುವಿಕೆಯ ಪ್ರಕ್ರಿಯೆಯನ್ನು ನಿಧಾನವಾಗಿಸುತ್ತದೆ.(2)

ಬಳಸುವ ವಿಧಾನ:

ಊಟ ಮಾಡುವ 20 ನಿಮಿಷಗಳ ಮೊದಲು 5 ಗ್ರಾಮಿನಷ್ಟು ಮೆಂತ್ಯ ಪುಡಿಯನ್ನು, ದಿನಕ್ಕೆ ನಾಲ್ಕು ಬಾರಿ ತೆಗೆದುಕೊಳ್ಳುವುದರಿಂದ, ರಕ್ತದಲ್ಲಿನ ಗ್ಲೂಕೋಸ್ ಪರಿಣಾಮಕಾರಿಯಾಗಿ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಲವು ಸಂಶೋಧನೆಗಳು ವರದಿ ಮಾಡಿವೆ. ಡಯಾಬಿಟಿಸ್‌ ನಿಯಂತ್ರಣಕ್ಕಾಗಿ ನೀವು ಮೌಖಿಕ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಅಡ್ಡಪರಿಣಾಮಗಳನ್ನು ತಪ್ಪಿಸಲು ಔಷಧಿ ತೆಗೆದುಕೊಂಡ 2 ಗಂಟೆಗಳ ನಂತರ ಮೆಂತ್ಯೆಯನ್ನು ತೆಗೆದುಕೊಳ್ಳುವಂತೆ ಇಲ್ಲವೇ ಮೆಂತ್ಯೆ ಸೇವಿಸಿದ 2 ಗಂಟೆಗಳ ನಂತರ ಔಷಧಿಯನ್ನು ತೆಗೆದುಕೊಳ್ಳುವಂತೆ ಯೋಜನೆಯನ್ನು ರೂಪಿಸಿಕೊಳ್ಳಿ.

ಎಚ್ಚರಿಕೆಯ ಮಾತು: ಡಯಾಬಿಟಿಸ್ ಇರುವ ಗರ್ಭಿಣಿಯರು ಮೆಂತ್ಯೆಯನ್ನು ತೆಗೆದುಕೊಳ್ಳುವಂತಿಲ್ಲ, ಏಕೆಂದರೆ ಅದು ಹೆರಿಗೆಯನ್ನು ಉತ್ತೇಜಿಸಬಹುದು.(3)

ಭಾರತದ ಜಾಮೂನು (ನೇರಳೆ ಹಣ್ಣು)

ನೇರಳೆ ಹಣ್ಣುಗಳನ್ನು ಡಯಾಬಿಟಸ್‌ ಇರುವವರು ಸಾಂಪ್ರದಾಯಿಕವಾಗಿ ಬಳಸಿಕೊಂಡು ಬಂದಿದ್ದಾರೆ.(4)

ಇದರಿಂದ ಲಾಭವೇನು: 

ಜಾಂಬೊಲೈನ್ ಮತ್ತು ಜಾಂಬೋಸೀನ್ ಎಂಬ ಎರಡು ಸಂಯುಕ್ತಗಳಿರುವ ನೇರಳೆ ಹಣ್ಣುಗಳನ್ನು ತಿನ್ನುವುದರಿಂದ, ದೇಹದೊಳಗಿನ ಪಿಷ್ಟ ಸಕ್ಕರೆಯ ಅಂಶವಾಗಿ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.(5) ಅಲ್ಲದೇ, ಈ ನೇರಳೆ ಹಣ್ಣುಗಳು ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಅಥವಾ ಇನ್ಸುಲಿನ್ ಅವನತಿಯನ್ನು ತಡೆಯುತ್ತವೆ ಎಂಬ ನಂಬಿಕೆಯೂ ಇದೆ. ಪ್ರತಿದಿನ 10 ಗ್ರಾಮಿನಷ್ಟು ನೇರಳೆ ಹಣ್ಣಿನ ಪುಡಿಯನ್ನು ಸೇವಿಸುವುದರ ಜೊತೆಗೆ ನಿಮ್ಮ ಆಹಾರಕ್ರಮ ಹಾಗೂ ವ್ಯಾಯಾಮವನ್ನು ಕ್ರಮವಾಗಿ ನಿಯಂತ್ರಿಸುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕುಗ್ಗಿಸಲು ಇದು ನೆರವಾಗುತ್ತದೆ.(6)

ಬಳಸುವ ವಿಧಾನ:

ವೈದ್ಯ ಜಗ್ಜಿತ್ ಸಿಂಗ್, ಬಿಎಎಮ್‌ಎಸ್, ಅವರು ಹೇಳುವಂತೆ, 250 ಗ್ರಾಮಿನಷ್ಟು ಹಣ್ಣಾಗಿರುವ ನೇರಳೆ ಹಣ್ಣುಗಳನ್ನು ಅರ್ಧ ಲೀಟರ್‌ ನೀರಿನಲ್ಲಿ ಹಾಕಿ ಕುದಿಸಿ, ನಂತರ ಆ ಹಣ್ಣುಗಳನ್ನು ನೀರಿನಲ್ಲೇ ಪುಡಿ ಮಾಡಿ, ಆ ನೀರನ್ನು ಶೋಧಿಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ.

ಎಚ್ಚರಿಕೆಯ ಮಾತು:

ನಿಮಗೆ ಕೆಮ್ಮಿದ್ದರೆ ಅಥವಾ ನೀವು ಗರ್ಭಿಣಿಯಾಗಿದ್ದರೆ, ಜಾಮೂನಿನ (ನೇರಳೆ ಹಣ್ಣು) ಸೇವನೆಯನ್ನು ತಪ್ಪಿಸಿ. 

ನೇರಳೆ ಹಣ್ಣಿನ ಪ್ರಯೋಜನಗಳ ಬಗ್ಗೆ ಇಲ್ಲಿ ಮತ್ತಷ್ಟು ಓದಿ. 

ಚಕ್ಕೆ (ದಾಲ್ಚೀನಿ)

ನಿಮಗೆ ಚಕ್ಕೆಯ ಪರಿಮಳ ಮತ್ತು ಸ್ವಾದ ಹಿತವೆನಿಸಿದರೆ, ನೀವು ಅದೃಷ್ಟಶಾಲಿಗಳು, ಏಕೆಂದರೆ ಈ ಚಕ್ಕೆ ಡಯಾಬಿಟಿಸ್‌ ನಿಯಂತ್ರಿಸಲು ನೆರವಾಗುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ.   

ಇವು ಹೇಗೆ ಸಹಾಯಕ:

ಚಕ್ಕೆಯು, ಗ್ಲೂಕೋಸನ್ನು ಕೊಂಡೊಯ್ಯುವ ಜೀವಕೋಶಗಳ ಸಾಮರ್ಥ್ಯವನ್ನು ಸುಧಾರಿಸುತ್ತದೆ, ಅಲ್ಲದೆ ಇನ್ಸುಲಿನ್ ಉತ್ಪತ್ತಿಯನ್ನು ಸಹ ಹೆಚ್ಚಿಸುತ್ತದೆ, ಜೊತೆಗೆ ಇನ್ಸುಲಿನ್ ಪಡೆಯುವ ಜೀವಕೋಶಗಳ ಚಟುವಟಿಕೆಯನ್ನು ಚುರುಕಾಗಿಸುತ್ತದೆ.(7) ದಾಲ್ಚಿನ್ನಿ ಒಂದೇ ಮತ್ತು ಅದರ ಸಾರವು ಟೈಪ್ 2 ಡಯಾಬಿಟಿಸ್‌ ಇರುವವರ ಖಾಲಿ ಹೊಟ್ಟೆಯ ರಕ್ತದಲ್ಲಿನ ಗ್ಲೂಕೋಸ್ ಅನ್ನು ಕುಗ್ಗಿಸುತ್ತದೆ ಎಂದು ತಿಳಿದು ಬಂದಿದೆ.(8)

ಬಳುಸುವುದು ಹೇಗೆ:

ಮೇಲಿನ ಪ್ರಯೋಜನವನ್ನು ಕಾಣಲು, ಅರ್ಧ ಟೀ ಸ್ಪೂನ್‌ನಿಂದ ಹಿಡಿದು 3 ಟೀ ಸ್ಪೂನ್‌ಗಳವರೆಗೆ ಪುಡಿ ಮಾಡಿದ ದಾಲ್ಚೀನಿಯನ್ನು ಸೇವಿಸಬಹುದು.(9) ಇದನ್ನು ನೀವು ಬರೀ ಹೊಟ್ಟೆಯಲ್ಲಿ ತೆಗೆದುಕೊಳ್ಳಬಹುದು ಇಲ್ಲವೇ ಟೀಯಂತಹ ಡಿಕಾಕ್ಷನ್ ಮಾಡಿ ದಿನವಿಡೀ ಕುಡಿಯಲು ಅದನ್ನು ನೀರಿನಲ್ಲಿ ಕುದಿಸಬಹುದು.

ಎಚ್ಚರಿಕೆಯ ಮಾತು: 

ಮುಟ್ಟು ನಿಂತಿರುವ ಮಹಿಳೆಯರಲ್ಲಿ ದಾಲ್ಚೀನಿಯ ಪರಿಣಾಮ ಹೆಚ್ಚಾಗಿ ಕಾಣುವುದಿಲ್ಲ.(10) ಅಲ್ಲದೇ, ದಾಲ್ಚಿನ್ನಿ ಲಿವರ್‌ ಸಮಸ್ಯೆಗಳನ್ನು ಸಹ ತೀವ್ರವಾಗಿಸಬಹುದು, ಹಾಗಾಗಿ ಅಂತಹ ಸಮಸ್ಯೆಗಳಿದ್ದಾಗ ತುಂಬಾ ಎಚ್ಚರದಿಂದಿರಿ.(9) ನೀವು ಸಿಲೋನ್ ದಾಲ್ಚೀನಿಯನ್ನು ಮಾತ್ರವೇ ಬಳಸಿ, ಕಾಸಿಯಾ ದಾಲ್ಚೀನಿಯನ್ನು ತಪ್ಪಿಸಿ; ಏಕೆಂದರೆ ಕಾಸಿಯಾದಲ್ಲಿ ಕೂಮರಿನ್ ಎಂಬ ಅಂಶ ಇರುತ್ತದೆ, ಇದರ ಪ್ರಮಾಣ ದೇಹದಲ್ಲಿ ಹೆಚ್ಚಾದಾಗ ಲಿವರ್‌ಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. 

ಡಯಾಬಿಟಿಸ್ ಇರುವವರು ದಾಲ್ಚೀನಿಯನ್ನು ಏಕೆ ತೆಗೆದುಕೊಳ್ಳಲೇಬೇಕು ಎಂಬುದರ ಬಗ್ಗೆ ಮತ್ತಷ್ಟು ವಿಚಾರಗಳನ್ನು ಇಲ್ಲಿ ಓದಿ ತಿಳಿದುಕೊಳ್ಳಿ.

ಹಾಗಲಕಾಯಿ

ಹಾಗಲಕಾಯಿ ಎಂದೊಡನೆ ನಿಮಗೆ ನೆನಪಾಗುವುದು ಅದರ ಕಹಿಯಾದ ಸ್ವಾದ, ಅಲ್ಲವೇ?  ಆದರೆ ಇದಕ್ಕೆ ಡಯಾಬಿಟಿಸ್‍ನ ಪರಿಣಾಮವನ್ನು ತಡೆಯುವ ಶಕ್ತಿ ಇದೆ ಎಂಬುದು ನಿಮಗೆ ಗೊತ್ತಿತ್ತೇ? ಹಾಗಲಕಾಯಿ ತಿರುಳಿನ ರಸವನ್ನು ಕುಡಿಯುವುದರಿಂದ ಖಾಲಿ ಹೊಟ್ಟೆಯ ಮತ್ತು ಊಟದ ನಂತರದ ರಕ್ತದಲ್ಲಿನ ಸಕ್ಕರೆಯ ಮಟ್ಟ ಗಮನಾರ್ಹವಾಗಿ ಕುಗ್ಗುತ್ತದೆ ಎಂಬುದು ತಿಳಿದು ಬಂದಿದೆ.(10)

ಇದು ಹೇಗೆ ಸಹಾಯಕ:

ಹಾಗಲಕಾಯಿಯಲ್ಲಿ ಪಾಲಿಪೆಪ್ಟೈಡ್-ಪಿ ಎಂಬ ಇನ್ಸುಲಿನ್ ತರಹದ ದ್ರವವಿರುತ್ತದೆ, ಜೊತೆಗೆ ಇದು ಅನಗತ್ಯವಾಗಿ ಆಗಾಗ ಆಗುವಂತಹ ಹಸಿವನ್ನು ಸಹ ಕುಗ್ಗಿಸಲು ಸಹಾಯ ಮಾಡುತ್ತದೆ, ಏಕೆಂದರೆ ಇದರಲ್ಲಿ ಹಸಿವನ್ನುಮರೆಮಾಚುವ ಶಕ್ತಿಯು ಕೂಡ ಇದೆ.(11)

ಬಳಸುವ ವಿಧಾನ:

ಪ್ರತಿದಿನ 50–100 ಮಿ.ಲೀ. ನಷ್ಟು ಹಾಗಲಕಾಯಿ ರಸವನ್ನು ನೀವು ಸುರಕ್ಷಿತವಾಗಿ ಕುಡಿಯಬಹುದು; ಇದಕ್ಕಿಂತ ಹೆಚ್ಚು ಕುಡಿದರೆ, ಅತಿಸಾರ ಅಥವಾ ಬೇಧಿಯ ಸಮಸ್ಯೆ ಎದುರಾಗಬಹುದು.

ಎಚ್ಚರಿಕೆಯ ಮಾತು:

ಗರ್ಭಿಣಿಯರು ಹಾಗಲಕಾಯಿಯನ್ನು ಸೇವಿಸುವಂತಿಲ್ಲ ಏಕೆಂದರೆ ಇದರಿಂದ ಅವರಿಗೆ ರಕ್ತಸ್ರಾವ ಮತ್ತು  ಗರ್ಭಪಾತವಾಗಬಹುದು.(12)

ಈ ಗಿಡಮೂಲಿಕೆಯ ಮನೆಮದ್ದುಗಳನ್ನು ಡಯಾಬಿಟಿಸ್‌ಗಾಗಿ ಬಳಸಲು ನಿಮ್ಮ ಮನಸ್ಸು ಹಾತೊರೆಯುತ್ತಿದ್ದರೆ – ದಯವಿಟ್ಟು ಅವುಗಳನ್ನು ಪ್ರಯತ್ನಿಸಿ! ಆದರೆ ಅದಕ್ಕೂ ಮೊದಲು,  ಒಂದೆರೆಡು ಎಚ್ಚರಿಕೆಯ ಮಾತುಗಳು.

ಅದ್ಬುತಗಳಾಗುತ್ತವೆ ಎಂಬ ನಿರೀಕ್ಷೆ ಬೇಡ

ಮೊದಲನೆಯದಾಗಿ, ಗಿಡಮೂಲಿಕೆಯ ಔಷಧಿಗಳನ್ನು ಬಳಸುತ್ತಿರುವುದರಿಂದ ಡಯಾಬಿಟಿಸ್ ಮೇಲೆ ಹೆಚ್ಚು ಹಿಡಿತ ಸಾಧಿಸಿರುವಿರಿ ಎಂದು ತೃಪ್ತಿ ಪಟ್ಟು ಡಯಾಬಿಟಿಸನ್ನು ನಿಯಂತ್ರಿಸಲು ನೆರವಾಗುವ ಇತರ ಪ್ರಮುಖ ಸಂಗತಿಗಳನ್ನು ಕಡೆಗಣಿಸದಿರಿ. ಇದರ ಬಗ್ಗೆ ಡಾ. ಕಲಾರಂಜನಿ, ಬಿಎಎಮ್‌ಎಸ್, ಅವರು ಹೀಗೆ ಹೇಳುತ್ತಾರೆ, ” ಆಹಾರಕ್ರಮ ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವಂತಹ ಸಾಮಾನ್ಯ ವಿಷಯಗಳ ಬಗ್ಗೆ ಗಮನಕೊಡದ ಡಯಾಬಿಟಿಸ್ ರೋಗಿಗಳಿಗೆ ಈ ಗಿಡಮೂಲಿಕೆಯ ಔಷಧಿಗಳು ಅದ್ಬುತಗಳನ್ನುಂಟು ಮಾಡುವ ಬಗ್ಗೆ ನನಗೆ ಸಂಶಯವಿದೆ. ಆಧುನಿಕ ಮದ್ದು ಅಥವಾ ಆರ್ಯುವೇದದ ಮನೆ ಮದ್ದುಗಳು ಅಸ್ತಿತ್ವದಲ್ಲಿರುವ ಡಯಾಬಿಟಿಸ್ ಔಷಧಿಗಳಿಗೆ ಪೂರಕವಾಗಿ ಮಾತ್ರವೇ ಕೆಲಸಮಾಡಬಲ್ಲವು. ಆದರೆ ಅವು ಎಂದಿಗೂ ಸಮಗ್ರ ಆರೋಗ್ಯಕರ ಜೀವನಶೈಲಿಯೊಂದಿಗೆ ಸಂಯೋಜಿಸಲ್ಪಟ್ಟ ಔಷಧಿಗಳ ಪರ್ಯಾಯವಾಗಲು ಸಾಧ್ಯವಾಗುವುದಿಲ್ಲ.”

ಎರಡನೆಯದಾಗಿ, ಗಿಡಮೂಲಿಕೆಗಳಲ್ಲಿರುವ ಹಲವಾರು ಪದಾರ್ಥಗಳು ನಿಮ್ಮ ಡಯಾಬಿಟಿಸ್‌ ಔಷಧಿಗಳೊಂದಿಗೆ ಸೇರಿದಾಗ ಅಡ್ಡಪರಿಣಾಮವನ್ನುಂಟು ಮಾಡಬಹುದು ಎಂಬುದು ನೆನಪಿರಲಿ. ಕೆಲವೊಮ್ಮೆ, ಈ ಗಿಡಮೂಲಿಕೆಗಳು ನಿಮ್ಮ ಔಷಧಿಯ ಪರಿಣಾಮವನ್ನು ಹೆಚ್ಚಿಸಬಹುದು ಹಾಗೂ ಮುಂದಿನ ದಿನಗಳಲ್ಲಿ, ಎಚ್ಚರಿಕೆಯಿಂದ ಮೇಲ್ವಿಚಾರಣೆಯನ್ನು ಮಾಡುವ ಮೂಲಕ, ನಿಮ್ಮ ಡಯಾಬಿಟಿಸ್ ಔಷಧಿಯ ಪ್ರಮಾಣವನ್ನು (ವೈದ್ಯಕೀಯ ಮೇಲ್ವಿಚಾರಣೆಯೊಂದಿಗೆ) ಕುಗ್ಗಿಸಬಹುದು. ಆದಾಗ್ಯೂ, ನೀವು ತೆಗೆದುಕೊಳ್ಳುವ ಔಷಧಿ ಹಾಗೂ ಮನೆಮದ್ದುಗಳ ನಡುವಿನ ಪರಸ್ಪರ ಕ್ರಿಯೆಗಳಿಂದ ಅಡ್ಡಪರಿಣಾಮಗಳು ಇಲ್ಲವೇ ವ್ಯತಿರಿಕ್ತ ಪರಿಣಾಮಗಳು ಎದುರಾಗುವ ಅಪಾಯವಿರುತ್ತದೆ. ದುರಾದೃಷ್ಟವಶಾತ್, ಅಂತಹ ಗಿಡಮೂಲಿಕೆ ಹಾಗೂ ಔಷಧಿಯ ಅಡ್ಡಪರಿಣಾಮಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಿಲ್ಲ, ಹಾಗಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.(13) ಆದ್ದರಿಂದ, ಡಯಾಬಿಟಿಸ್‌ಗಾಗಿ ಈ ಯಾವುದೇ ಮನೆಮದ್ದುಗಳನ್ನು ತೆಗೆದುಕೊಳ್ಳುವ ಮೊದಲು ಡಾಕ್ಟರ್‌ ಜೊತೆ ಚರ್ಚಿಸಿ. 

ಅಡಿ ಬರಹ

ವಿದ್ಯಾ ಜಗ್ಜಿತ್ ಸಿಂಗ್ ಅವರು ಚಂಡೀಘಡದಲ್ಲಿರುವ  ಆರ್ಯುವೇದ್ ಸೆಂಟರ್‌ನ ಮಾಲೀಕರು ಹಾಗೂ ಅಲ್ಲಿಯೇ ಆರ್ಯುವೇದದ  ವೈದ್ಯರಾಗಿ ಅಭ್ಯಾಸ ಮಾಡುತ್ತಿದ್ದಾರೆ. 

ಡಾ. ಎ. ಕಲಾರಂಜನಿ, ಬೆಂಗಳೂರಿನ ಕೆ ಆರ್ ಪುರಂನಲ್ಲಿರುವ ಸಂಜೀವನಿ ಆಯುರ್ ಕ್ಲಿನಿಕಿನ ಆರ್ಯುವೇದದ ವೈದ್ಯರು. 

ಉಲ್ಲೇಖಗಳು:

 

  • A.Y.Y. Cheng, I.G. Fantus. Oral antihyperglycemic therapy for type 2 diabetes mellitus.  CMAJ. 2005 Jan; 172(2); 213–226. ddoi: 10.1503/cmaj.1031414
  • N. Neelakantan, M. Narayanan, R.J. deSouza, R.M. van Dam. Effect of fenugreek (Trigonella foenum-graecumL.) intake on glycemia: a meta-analysis of clinical trials. Nutrition Journal 2014; 13:7; https://doi.org/10.1186/1475-2891-13-7
  • V.M. Jadhav. Herbal medicine : Syzygium cumini :A Review. Journal of Pharmacy Research 2009;  2(8); 1212-1219 available at http://jprsolutions.info/files/final-file-56b225bf628a11.26562478.pdf
  • S.I. Rizvi, N. Mishra. Traditional Indian Medicines Used for the Management of Diabetes Mellitus. J. Diabetes Res. 2013 June; 2013: 712092. doi:  10.1155/2013/712092
  • G. Shivaprakash, M.R.S.M. Pai, M. Nandini, K. Reshma, D.A. Sahana, K. Rajendran et al. Antioxidant potential of Eugenia jambolana seed; a randomized clinical trial in type 2diabetes mellitus. International Journal of Pharma and Bio Sciences. June 2011; 2(2)
  • P. Ransinghe, R.Jayawardana, P. Galappaththy, G.R. Constantine, G.N. de Vas, P. Katulanda. Efficacy and safety of ‘true’ cinnamon (Cinnamomum zeylanicum) as a pharmaceutical agent in diabetes: a systematic review and meta-analysis. Diabet Med. 2012 Dec; 29(12); 1480-92. doi: 10.1111/j.1464-5491.2012.03718.x.
  • P.A. Davis, W. Yokoyama. Cinnamon intake lowers fasting blood glucose: meta-analysis. J Med Food. 2011 Sep; 14(9); 884-9. doi: 10.1089/jmf.2010.0180.
  • R. Deng. A Review of the Hypoglycemic Effects of Five Commonly Used Herbal Food Supplements. Recent Pat Food Nutr Agric. 2012;  Apr 1; 4(1); 50–60. Available at https://www.ncbi.nlm.nih.gov/pmc/articles/PMC3626401/
  • R.C. Gupta, D. Chang, S. Nammi, A. Bensoussan, K. Bilinkski, B.D. Roufogalis. Interactions between antidiabetic drugs and herbs: an overview of mechanisms of action and clinical implications. Diabetol Metab Syndr. 2017; 9: 59;  doi:
  • 10.1186/s13098-017-0254-9

 

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.