ನೀವು ಡಯಾಬಿಟಿಸ್ ರೋಗಿಯಾಗಿದ್ದರೆ, “ನಾವು ವ್ಯಾಯಾಮಗಳನ್ನು ಮಾಡಬಹುದಾ ಅಥವಾ ಮಾಡಬಾರದಾ” ಎಂಬ ಪ್ರಶ್ನೆಯು ನಿಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ಅಲ್ಲದೇ, ಈ ಪ್ರಶ್ನೆ ನಿಮ್ಮನ್ನು ಕಾಡಲು ಕಾರಣವೂ ನಿಮ್ಮ ಬಳಿ ಇದೆ.
ಡಯಾಬಿಟಿಕ್‍ಗಳಿಗೆ ವ್ಯಾಯಾಮ ಏಕೆ ಒಳ್ಳೆಯದು ಎಂಬುದಕ್ಕೆ ಕಾರಣ ಇಲ್ಲಿದೆ
ನಿಯಮಿತವಾದ ವ್ಯಾಯಾಮವು ನಿಮ್ಮ ದೈಹಿಕ ಮತ್ತು ಬೌದ್ಧಿಕ ಆರೋಗ್ಯವನ್ನು ಸಾಕಷ್ಟು ಸುಧಾರಿಸುತ್ತದೆ, ಅಲ್ಲದೆ ಇದು ನಿಮ್ಮ ಡಯಾಬಿಟಿಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಒಳ್ಳೆಯ ಉಪಾಯವಾಗಿದೆ. ಅಲ್ಲದೆ, ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹವು ಉತ್ಪಾದಿಸುವ ಇನ್ಸುಲಿನ್‌ಗೆ ಅಥವಾ ನೀವು ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುವ ಇನ್ಸುಲಿನ್‌ಗೆ ನಿಮ್ಮ ದೇಹವು ಹೆಚ್ಚು ಸಂವೇದನಾಶೀಲವಾಗಿರುತ್ತದೆ. ನೀವು ವ್ಯಾಯಾಮ ಮಾಡಿದಾಗ, ದೇಹದಲ್ಲಿನ ಕೊಬ್ಬನಾಂಶವನ್ನು ಕಳೆದುಕೊಳ್ಳುತ್ತೀರಿ ಮತ್ತು ಇದು ನಿಮ್ಮ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.(1) ಇದು ಒಳ್ಳೆಯದು, ಏಕೆಂದರೆ ಇದು ಅಧಿಕ ರಕ್ತದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ನೈಸರ್ಗಿಕ ವಿಧಾನವಾಗಿದೆ, ಹೀಗಿರುವಾಗ ನಿಮಗೆ ಹೆಚ್ಚುವರಿ ಔಷಧಿಗಳ ಅಗತ್ಯವಿರುವುದಿಲ್ಲ.(2)
ಆದರೆ ನಿಮ್ಮ ಡಯಾಬಿಟಿಸ್ ನಿಮ್ಮನ್ನು ಹೆಚ್ಚು ದಣಿಯುವಂತೆ ಮಾಡುತ್ತಿದ್ದು, ನಿಮ್ಮ ನಿಮ್ಮನ್ನು ಕೆಲಸ ಮಾಡದಂತೆ ತಡೆಯುತ್ತಿದ್ದರೆ, ಅದರೊಂದಿಗೆ ಹೋರಾಡಲು ನಮ್ಮ ತಜ್ಞರ ಸಲಹೆಗಳನ್ನು ಓದಿ.
ವ್ಯಾಯಾಮಕ್ಕು ಮುನ್ನ
- ನಿಮ್ಮ ಗುರುತಿನ ಚೀಟಿಯನ್ನು ಕೊಂಡೊಯ್ಯಿರಿ: ನೀವು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರಿ, ಅಥವಾ ಜಾಗ್‌ಗೆ ಹೋಗುತ್ತಿರಿ ಅಥವಾ ಸಣ್ಣಪುಟ್ಟ ವ್ಯಾಯಾಮ ಮಾಡಲು ಹೊರಟಿರಿ ಎಂದಾದಾಗ,ಹೊರಡುವ ಮುನ್ನ ಮನೆಯಲ್ಲಿ ಅಥವಾ ಕಛೇರಿಯಲ್ಲಿ ಯಾರಿಗಾದರೂ ತಿಳಿಸಿ ಹೋಗುವುದು ಸೂಕ್ತ. ಮತ್ತು ಯಾವಾಗಲೂ ನಿಮ್ಮ ಚಾಲನಾ ಪರವಾನಗಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ನಂತಹ ಯಾವುದಾದರೂ ಗುರುತಿನ ಚೀಟಿ ನಿಮ್ಮೊಡನೆ ಇರಲಿ, ನಿಮ್ಮ ಮನೆ ಮತ್ತು ತುರ್ತು ಸಂಪರ್ಕ ಸಂಖ್ಯೆಯ ವಿವರಗಳನ್ನು ಸಹ ಕೊಂಡೊಯ್ಯಿರಿ. ಜೊತೆಗೆ, ನೀವು ಡಯಾಬಿಟಿಕ್ ಎಂದು ಬರೆದಿರುವ ಹಾಗೂ ನಿಮ್ಮ ಡಾಕ್ಟರ್‌ನ ಸಂಪರ್ಕ ಮಾಹಿತಿ ಇರುವ ಚೀಟಿಯೊಂದು ನಿಮ್ಮೊಡನೆ ಇರಲಿ. ನಿಮಗೆ ಮಾತನಾಡಲು ಸಾಧ್ಯವಾಗದೆ, ಅಗತ್ಯ ಮಾಹಿತಿಯನ್ನು ನೀಡಲು ಸಾಧ್ಯವಾಗದಿದ್ದರೂ ತಕ್ಷಣದ ಸಹಾಯ ಪಡೆಯಲು ಇದು ನಿಮಗೆ ಸಹಾಯಕವಾಗುತ್ತದೆ.
- ಬೇಗನೆ ಪರಿಣಾಮವನ್ನು ತೋರುವ ಗ್ಲೂಕೋಸ್ ಪದಾರ್ಥಗಳನ್ನು ಒಯ್ಯಿರಿ: ಚಿಕ್ಕ ಚಾಕೋಲೇಟ್, ಗ್ಲೂಕೋಸ್ ಮಾತ್ರೆಗಳು ಅಥವಾ ತ್ವರಿತವಾಗಿ ಕೆಲಸ ಮಾಡುವ ಸಕ್ಕರೆ-ಮಿಶ್ರಿತ ಪಾನೀಯವು ಯಾವಾಗಲೂ ನಿಮ್ಮ ಜೊತೆಯಿರಬೇಕು. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇಳಿಯದಂತೆ ನೋಡಿಕೊಳ್ಳಲು ಸಹಾಯಕವಾಗಿರುತ್ತದೆ. ವ್ಯಾಯಮಕ್ಕು ಮೊದಲು, ಮಾಡುತ್ತಾ, ಹಾಗೂ ನಂತರದಲ್ಲಿ ಅದನ್ನು ಚೂರುಚೂರಾಗಿ ಸೇವಿಸಿರಿ.(3)
ತ್ವರಿತ ಸಲಹೆ – 3 ಟೀಸ್ಪೂನ್ ಕ್ಯಾಸ್ಟರ್ ಸಕ್ಕರೆ ಹೈಪೊಗ್ಲಿಸಿಮಿಯಾಕ್ಕೆ ಉತ್ತಮ ಪರಿಹಾರವಾಗಿದೆ.
- ವ್ಯಾಯಾಮ ಒತ್ತಡ ಪರೀಕ್ಷೆಯನ್ನು ಮಾಡಿಸಿ: ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ವ್ಯಾಯಾಮ ಒತ್ತಡ ಪರೀಕ್ಷೆಯೊಂದನ್ನು ತೆಗೆದುಕೊಳ್ಳುವುದರ ಬಗ್ಗೆ ನಿಮ್ಮ ಡಾಕ್ಟರ್‌ರ ಬಳಿ ಮಾತನಾಡಿ. ಇದು ವ್ಯಾಯಾಮದ ಪರಿಶ್ರಮಕ್ಕೆ ನಿಮ್ಮ ಹೃದಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಿಮ್ಮ ಡಾಕ್ಟರಿಗೆ ತಿಳಿಸುವ ಪರೀಕ್ಷೆಯಾಗಿದೆ. ಅಸಹಜ ಲಯ ಅಥವಾ ಇಸ್ಕೀಮಿಯಾದ ಲಕ್ಷಣಗಳನ್ನು ತೋರುವವರೆಗೂ, ನಿಮ್ಮ ಹೃದಯವು ಎಷ್ಟು ಒತ್ತಡವನ್ನು ಸಹಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಲು ಇದು ಸಹಾಯ ಮಾಡುತ್ತದೆ, ಮತ್ತಿದು ನಿಮ್ಮ ಒಟ್ಟಾರೆ ಫಿಟ್‌ನೆಸ್ ಅನ್ನು ಪರೀಕ್ಷಿಸುತ್ತದೆ.
- ನಿಮ್ಮ ಕಾರ್ಬ್‌ಗಳನ್ನು ಪಡೆಯಿರಿ: ನಿಮ್ಮ ದೇಹಕ್ಕೆ ವ್ಯಾಯಾಮದ ಮೊದಲು ಮತ್ತು ನಂತರ ಕಾರ್ಬ್ ಅಗತ್ಯವಿರುತ್ತದೆ. ಇದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ಶಕ್ತಿಯ ನಷ್ಟವನ್ನು ತಡೆಗಟ್ಟಲು ನೀವು ವ್ಯಾಯಾಮ ಮಾಡುವ ಕನಿಷ್ಠ ಒಂದು ಅಥವಾ ಎರಡು ಗಂಟೆಯ ಮೊದಲು ಹಾಗೂ ವ್ಯಾಯಾಮ ಮಾಡಿದ ಎರಡು ಗಂಟೆಗಳ ಒಳಗೆ ಕಾರ್ಬೋಹೈಡ್ರೇಟ್ ಹೆಚ್ಚಿರುವ ತಿಂಡಿ ಅಥವಾ ಊಟವನ್ನು ಸೇವಿಸಲು ಪ್ರಯತ್ನಿಸಿ. ಹೆಸರು ಬೇಳೆ, ಬಟಾಣಿ, ಸೇಬು, ಕುಂಬಳಕಾಯಿ ಮತ್ತು ಸಿಹಿಗೆಣಸನ್ನು ನೀವು ಸೇವಿಸಬಹುದು.
ವ್ಯಾಯಾಮ ಮಾಡುವಾಗ
- ತೀವ್ರ ಹವಾಮಾನಗಳನ್ನು ತಪ್ಪಿಸಿ: ಹೆಚ್ಚು ಉಷ್ಣಾಂಶವಿರುವ ಅಥವಾ ಹೆಚ್ಚು ತಂಪಾಗಿರುವ ತಾಪಮಾನಗಳಲ್ಲಿ ವ್ಯಾಯಾಮ ಮಾಡಿದಾಗ, ಅದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಳಿತಕ್ಕೆ ಕಾರಣವಾಗಬಹುದು. ಏಕೆಂದರೆ ನೀವು ಸಾಮಾನ್ಯ ತಾಪಮಾನದಲ್ಲಿ ವ್ಯಾಯಾಮ ಮಾಡುವಾಗ ಬಳಸುವ ಶಕ್ತಿಗೆ ಹೋಲಿಸಿದರೆ ನಿಮ್ಮ ದೇಹವು, ಅದರ ನಿಯಮಿತ ತಾಪಮಾನವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಹೊರಗೆ ವ್ಯಾಯಾಮ ಮಾಡುವುದನ್ನು ತಪ್ಪಿಸಿ ಹಾಗೂ ಅದರ ಬದಲಿಗೆ ಒಳಾಂಗಣ ವ್ಯಾಯಾಮಗಳನ್ನು ಮಾಡಲು ಪ್ರಯತ್ನಿಸಿ.
- ಸಾಕಷ್ಟು ನೀರನ್ನು ಕುಡಿಯಿರಿ: ಇದು ಎಲ್ಲರಿಗೂ ಬಹಳ ಮುಖ್ಯ ಸಂಗತಿ ಆಗಿದೆ, ಆದರೆ ನೀವು ಡಯಾಬಿಟಿಕ್ ಆಗಿದ್ದರೆ ನಿಮಗಿದು ಹೆಚ್ಚು ಮುಖ್ಯ. ನೀವು ವ್ಯಾಯಾಮ ಮಾಡುವಾಗ, ನಿಮ್ಮ ದೇಹವು ನೀರಿನಾಂಶವನ್ನು ಬೆವರಿನ ರೂಪದಲ್ಲಿ ಕಳೆದುಕೊಳ್ಳುವುದು ಸಹಜ. ಇದರರ್ಥ ನಿಮ್ಮ ದೇಹವೂ ಹೆಚ್ಚೆಚ್ಚು ನೀರಿನಾಂಶವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆಯೆಂದು, ಇದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ವ್ಯಾಯಾಮವನ್ನು ಪ್ರಾರಂಭಿಸುವ ಮುನ್ನ, ಮಾಡುವ ಸಮಯದಲ್ಲಿ ಹಾಗೂ ವ್ಯಾಯಾಮವನ್ನು ಮುಗಿಸಿದ ನಂತರ ನೀರನ್ನು ಕುಡಿಯಲು ಮರೆಯದಿರಿ.
- ಆಯಾಸದಾಯಕ ಚಟುವಟಿಕೆಗಳನ್ನು ತಪ್ಪಿಸಿ: ನೀವು ಯಾವುದೇ ರೀತಿಯ ಕಣ್ಣಿನ ಕಾಯಿಲೆ, ಪಾದದ ತೊಂದರೆಗಳು, ಅಧಿಕ ರಕ್ತದೊತ್ತಡದ ಮಟ್ಟಗಳು, ಡಯಾಬಿಟಿಕ್ ನ್ಯೂರೋಪಥಿ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟವೂ 250-300 ಕ್ಕಿಂತ ಹೆಚ್ಚಿದ್ದರೆ, ಆಯಾಸದಾಯಕ ಚಟುವಟಿಕೆಗಳನ್ನು ತಪ್ಪಿಸುವುದೇ ಉತ್ತಮ ಮಾರ್ಗವಾಗಿದೆ. ವಾಕಿಂಗ್, ಜಾಗಿಂಗ್, ಸ್ಪಾಟ್ ಜಾಗಿಂಗ್, ಕೆಲವು ಸುತ್ತುಗಳ ಈಜು, ಹೀಗೇ ಮುಂತಾದ ಹಗುರವಾದ ವ್ಯಾಯಾಮಗಳನ್ನು ಮಾಡಲು ಪ್ರಯತ್ನಿಸಿ ಮತ್ತು ನಿಧಾನವಾಗಿ ಆರಂಭಿಸಿ. ನಿಮ್ಮ ರಕ್ತದೊತ್ತಡದ ಮಟ್ಟವು ತೀವ್ರವಾಗಿ ಕುಗ್ಗದಂತೆ ತಡೆಯಲು ಇದು ಸಹಾಯ ಮಾಡುತ್ತದೆ.
- ದೇಹಕ್ಕೆ ಹೊಂದಿಕೊಳ್ಳಲು ಸಮಯ ನೀಡಿ: ನೀವು ವ್ಯಾಯಾಮವನ್ನು ಪ್ರಾರಂಭಿಸಿದಾಗ, ನಿಮ್ಮ ದೇಹಕ್ಕೆ ಹೊಸ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ನಿಮ್ಮ ದೇಹವು ಉತ್ತಮವಾಗಿ ಹೊಂದಿಕೊಳ್ಳಬೇಕಾದರೆ, ವ್ಯಾಯಾಮಗಳನ್ನು ನಿಧಾನವಾಗಿ ಪ್ರಾರಂಭಿಸುವುದು ಮತ್ತು ಅದರ ಮಟ್ಟವನ್ನು ಕ್ರಮೇಣವಾಗಿ ಹೆಚ್ಚಿಸುವುದು ಯಾವಾಗಲೂ ಉತ್ತಮ ಉಪಾಯ. ನಿಮಗೆ ಯಾವುದು ಒಳಿತು ಎಂಬುದನ್ನು ತಿಳಿಯಲು ನಿಮ್ಮ ಡಾಕ್ಟರ್‌ರೊಂದಿಗೆ ಮಾತನಾಡಲು ಮರೆಯದಿರಿ.
- ಸಾಮರ್ಥ್ಯ ಚಟುವಟಿಕೆಗಳನ್ನು ಮಾಡುವಾಗ ಜಾಗರೂಕರಾಗಿರಿ: ಇದು ನೀವು ತೂಕವನ್ನು ಎತ್ತುವ, ತಳ್ಳುವ ಅಥವಾ ಎಳೆಯುವಂತಹ ವ್ಯಾಯಾಮವಾಗಿರಬಹುದು. ಅಂತಹ ವ್ಯಾಯಾಮಗಳಲ್ಲಿ, ನೀವು ಆಗಾಗ್ಗೆ ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಬೇಕು(2), ಮತ್ತು ನೀವು ರೆಟಿನೋಪತಿಯ(3,4) ಸಮಸ್ಯೆಯಿಂದ ಬಳಲುತ್ತಿದ್ದರೆ, ಇದು ಅಪಾಯಕಾರಿ. ನೀವು ಅಂತಹ ವ್ಯಾಯಾಮಗಳನ್ನು ಪ್ರಾರಂಭಿಸುವ ಮೊದಲು ನಿಮ್ಮ ಜನರಲ್ ಡಾಕ್ಟರ್ ಮತ್ತು ಕಣ್ಣಿನ ಡಾಕ್ಟರನ್ನು ಭೇಟಿ ಮಾಡಿ.
ವ್ಯಾಯಾಮದ ನಂತರ
- ನಿಮ್ಮ ದೇಹದ ಕೂಗನ್ನು ಆಲಿಸಿ: ಸದೃಢವಾಗಿರಲು, ನಿಮ್ಮ ದೇಹವು ನಿಮಗೆ ನೀಡುವ ಸೂಚನೆಗಳನ್ನು ಅರ್ಥ ಮಾಡಿಕೊಳ್ಳಲು ಮರೆಯದಿರಿ. ನೀವು ಯಾವುದೇ ನೋವು ಅಥವಾ ಅಸ್ವಸ್ಥತೆಯನ್ನು ಅನುಭವಿಸಿದರೆ, ಅಂತಹ ವ್ಯಾಯಾಮವನ್ನು ತಕ್ಷಣ ನಿಲ್ಲಿಸಿ. ವಿರಾಮ ತೆಗೆದುಕೊಳ್ಳಿ, ವಿಶ್ರಾಂತಿ ಪಡೆಯಿರಿ, ಸ್ವಲ್ಪ ನೀರು ಕುಡಿಯಿರಿ ಮತ್ತು ಆರಾಮಾಗಿ ಉಸಿರಾಡಿ.
ವಾರ್ಮ್ ಅಪ್ ಮತ್ತು ಕೂಲ್ ಡೌನ್ ಆಗಲು ಮರೆಯದಿರಿ
ಯಾವುದೇ ಕಾರಣಕ್ಕೂ ವಾರ್ಮ್ ಅಪ್ ಹಾಗೂ ಕೂಲ್ ಡೌನ್‌ಗಳನ್ನು ತಪ್ಪಿಸಬೇಡಿ. ಇದು ನಿಮ್ಮ ದೇಹವನ್ನು ವ್ಯಾಯಾಮ ಮಾಡಲು ತಯಾರಿರುವಂತೆ ಮಾಡಿ, ವ್ಯಾಯಾಮ ಮುಗಿದ ನಂತರ, ಅದನ್ನು ಸಹಜ ಸ್ಥಿತಿಗೆ ಮರಳಿಸಲು ನೆರವಾಗುತ್ತದೆ.(3)
ನೀವು ಡಯಾಬಿಟಿಸ್ ಹೊಂದಿರುವವರಾಗಿದ್ದರೆ, ನಿಯಮಿತ ವ್ಯಾಯಾಮವು ನಿಮಗೆ ಅತ್ಯಗತ್ಯವಾಗಿರುತ್ತದೆ. ಆದರೆ ಅದು ನಿಮ್ಮನ್ನು ಅಪಾಯಕ್ಕೆ ಸಿಲುಕಿಸದ ರೀತಿಯಲ್ಲಿ ಮಾಡುವುದು ಅತಿಮುಖ್ಯ. ಆದ್ದರಿಂದ, ಮುಂದಿನ ಬಾರಿ ನೀವು ಜಿಮ್‌ಗೆ ಹೋದಾಗ ಅಥವಾ ಹೊಸ ವ್ಯಾಯಮಗಳನ್ನು ಪ್ರಯತ್ನಿಸುವಾಗ ಈ ಅಮೂಲ್ಯ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಂಡಿರಿ.
ಉಲ್ಲೇಖಗಳು:
(1) T E Keshel, R H Coker. Exercise Training and Insulin Resistance: A Current Review. Journal of Obesity & Weight Loss Therapy. 2015 Jul; 5(0 5): S5-003.
(2) S R Colberg, R J Sigal, B Fernhall, J G Regensteiner, et al. Exercise and Type 2 Diabetes. Diabetes Care. 2010 Dec; 33(12): e147–e167. doi: 10.2337/dc10-9990. PMCID: PMC2992225
(3) EXERCISING SAFELY WITH DIABETES by Meg Thompson, available at https://nfb.org/images/nfb/publications/vodold/vfal9804.htm
(4) E Atchison and A Barkmeier. The Role of Systemic Risk Factors in Diabetic Retinopathy. Current Ophthalmology Reports. 2016; 4(2): 84–89. Published online 2016 Mar 25. doi: 10.1007/s40135-016-0098-8